• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ 7

By Staff
|

*ಡಾ.‘ಜೀವಿ’ ಕುಲಕರ್ಣಿ

ನಾನು ಸ್ಪಂದಿಸಿದ ‘ಸ್ಪಂದನ’ದಲ್ಲಿಯ ಕೆಲವು ಲೇಖನಗಳು

Gurukula‘ಸ್ಪಂದನ’ ಸ್ಮರಣ ಸಂಚಿಕೆಯಲ್ಲಿಯನ ನಾಗರಾಜ ಪಾಟೀಲ್‌ (ಕ್ಯಾಲಿಫೋರ್ನಿಯಾ) ಇವರು ಬರೆದ ‘ಮಲೆನಾಡ ಮಡಿಲಲ್ಲಿ ಗುರುಕುಲ ಪದ್ಧತಿಯ ಎರಡು ಪ್ರಯೋಗಗಳು’ ಎಂಬ ಲೇಖನ ಕುತೂಹಲಕಾರಿಯಾಗಿದೆ. ಹಿಂದು ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಬಾಲಕ ಬಾಲಕಿಯರ ಪ್ರತ್ಯೇಕ ಗುರುಕುಲ(ಪ್ರಬೋಧಿನಿ ಗುರುಕುಲ, ಮೈತ್ರೇಯಿ ಗುರುಕುಲ)ಗಳಿಗೆ ಭೇಟಿ ನೀಡಿ, ಪ್ರಭಾವಿತರಾಗಿ ಈ ಲೇಖನ ಬರೆದಿದ್ದಾರೆ.

ಇವನ್ನು ಕಂಡರೆ ‘ನಿಮಗೆ ಅಚ್ಚರಿಯಾಗಬಹುದು. ಈ ಗುರುಕುಲಗಳು ಮೆಕಾಲೆ ಸ್ಕೂಲುಗಳಂತಲ್ಲ. ಇಲ್ಲಿಯ ಶಿಕ್ಷಕರ ಕೈಯಲ್ಲಿ ಕೋಲಿಲ್ಲ. ಮಕ್ಕಳಿಗೆ ಪಠ್ಯಪುಸ್ತಕಗಳಿಲ್ಲ, ಡೋನೇಶನ್‌ ಇಲ್ಲ, ಫೀಜ್‌ ಇಲ್ಲ, ‘ಕ್ಲಾಸ್‌ ಸಿಸ್ಟಂ’ ಇಲ್ಲ, ಪರೀಕ್ಷೆಗಳ ಗೋಳಿಲ್ಲ, ರ್ಯಾಂಕ್‌ನ ಗುದ್ದಾಟವಿಲ್ಲ, ಸರ್ಟಿಫಿಕೇಟ್‌ನ ಗೊಂದಲವಿಲ್ಲ, ಬೆನ್ನು ಮುರಿಯುವ ಬ್ಯಾಗುಗಳಿಲ್ಲ, ಟ್ಯೂಶನ್‌ ರಂಪಾಟವಿಲ್ಲ, ಹೋಂಮ್‌ವರ್ಕ್‌ನ ತಲೆಬಿಸಿಯಿಲ್ಲ’ ಎಂದು ಊಟ, ವಸತಿ, ಶಿಕ್ಷಣ ಉಚಿತವಾಗಿರುವ ಗುರುಕುಲಗಳನ್ನು ಮೆಚ್ಚುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹರಿಹರಪುರದಲ್ಲಿ, ತುಂಗಾತೀರದ ಅಡಿಯಲ್ಲಿ ‘ಚಿತ್ರಕೂಟ’ದಲ್ಲಿ ಪ್ರಬೋಧಿನಿ ಟ್ರಸ್ಟ್‌ ನಡೆಸುವ ‘ಪ್ರಬೋಧಿನಿ ಗುರುಕುಲ’ದ ವಿವರವಾದ ಪರಿಚಯ ಮಾಡಿಸುತ್ತಾರೆ. ಇಲ್ಲಿ ಪೀರಿಯಡ್‌ಗಳು ಶಂಖಧ್ವನಿಯಾಂದಿಗೆ ಆರಂಭಗೊಳ್ಳುತ್ತವೆ. 107 ವಿದ್ಯಾರ್ಥಿಗಳು ಇಲ್ಲಿ ವಾಸವಾಗಿದ್ದಾರೆ. ಇವರ ಮೇಲ್ವಿಚಾರಕರಾಗಿ 13 ಮಂದಿ ಆಚಾರ್ಯರು, ಮಾತೃಶ್ರೀಯರೂ ವಾಸಿಸುತ್ತಾರೆ. ಕೆಲವು ಅತಿಥಿ ಶಿಕ್ಷಕರು ಕಲಿಸಲು ಬರುತ್ತಾರೆ. ಆರು ವರ್ಷಗಳ ‘ಪಂಚಮುಖಿ’ ಶಿಕ್ಷಣ ಸೂತ್ರದಡಿ ವೇದ, ವಿಜ್ಞಾನ, ಯೋಗ, ಗೃಹವೈದ್ಯ, ಕೃಷಿ, ಗಣಿತ, ಇತಿಹಾಸ ಕಲಿಸಲಾಗುತ್ತದೆ. ಶಿಕ್ಷಣದ ಮಾಧ್ಯಮ ಕನ್ನಡ. ವ್ಯವಹಾರದ ಭಾಷೆ ಸಂಸ್ಕೃತ. ಜೊತೆಗೆ ಇಂಗ್ಲಿಷ್‌, ಹಿಂದಿ ಕೂಡ ಕಲಿಸಲಾಗುತ್ತದೆ. ಇಲ್ಲಿ ಪರೀಕ್ಷೆಗಳಿಲ್ಲ, ಪಾಸು-ಫೇಲುಗಳಿಲ್ಲ. ಪ್ರಾಚೀನ ಶಿಕ್ಷಣ ಪದ್ಧತಿಯಾಂದಿಗೆ ಆಧುನಿಕತೆಯನ್ನು ಮಿಳಿತಗೊಳಿಸಿದ್ದರಿಂದ ಇಲ್ಲಿ ಒಂದು ರೀತಿಯ ಸಮನ್ವಯವಿದೆ. ಆರು ವರ್ಷಗಳ ಶಿಕ್ಷಣಕ್ರಮದಲ್ಲಿ ಆರು ಗಣಗಳಿವೆ.(ಶ್ರದ್ಧಾ, ಮೇಧಾ, ಪ್ರಜ್ಞಾ, ಪ್ರತಿಭಾ, ಧೃತಿ, ಧೀ).

ಬಿಡುವು ಎನ್ನುವ ಶಬ್ದಕ್ಕೆ ಇಲ್ಲಿ ಆಸ್ಪದವಿಲ್ಲ. ಮುಂಜಾನೆ ಐದರಿಂದ ರಾತ್ರಿ ಹತ್ತು ಗಂಟೆಯ ವರೆಗೆ ಮಕ್ಕಳ ಚಟುವಟಿಕೆ ಕಲಿಕೆಯ ಕಾರ್ಯ ಅವ್ಯಾಹತವಾಗಿ ಸಾಗಿರುತ್ತದೆ. ಭಾನುವಾರ ರಜೆಯಿಲ್ಲ. ಚತುರ್ದಶಿ, ಹುಣ್ಣಿಮೆ, ಅಮಾವಾಸ್ಯೆ, ಪಾಡ್ಯ ಇವು ಅನಧ್ಯಯನದ ದಿನಗಳು. ಆಗ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗುತ್ತದೆ. ತ್ರಯೋದಶಿಯ ದಿನ ‘ಸರಸ್ವತಿ ವಂದನಾ’ ಕಾರ್ಯಕ್ರಮ ಇರುತ್ತದೆ. ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ (ನಾಟಕ, ಹಾಡು, ಭಾಷಣ, ವಾದ-ವಿವಾದ).

ಇಲ್ಲಿ ಜಾತಿ ಅಂತಸ್ತುಗಳ ಭೇದವಿಲ್ಲ. ವಿದ್ಯಾರ್ಥಿಗಳು ವೇದಾಧ್ಯಯನ ಮಾಡುವಾಗ ಮಾತ್ರ ಬಿಳಿಯ ಲುಂಗಿ, ಉತ್ತರೀಯ ಧರಿಸುತ್ತಾರೆ. ಉಳಿದ ವೇಳೆ ಚಡ್ಡಿ-ಶರ್ಟ್‌ ತೊಡುತ್ತಾರೆ. ಆರು ವರ್ಷ ಶಿಕ್ಷಣ ಪೂರೈಸಿದ ಮೇಲೆ ಸಮಗ್ರ ವೇದಾಧ್ಯಯನ ಮಾಡಲು ಆಸಕ್ತಿ ಇದ್ದವರು ಬೆಂಗಳೂರು ಬಳಿಯ ಚನ್ನೇಹಳ್ಳಿಯ ‘ವೇದ ವಿಜ್ಞಾನ’ ಕೇಂದ್ರ ಸೇರಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರ್‌ ಮೂಕರ್ಜೆಯಲ್ಲಿ ‘ಮೈತ್ರೇಯಿ ಗುರುಕುಲ’ವಿದೆ. ಪ್ರಕೃತಿ ಸೌಂದರ್ಯದ ಮಡಿಲಲ್ಲಿ ನೆಲಸಿದ ಕರ್ನಾಟಕದ ಏಕೈಕ ಕನ್ಯಾ ಗುರುಕುಲವಿದು. 69 ಬಾಲಿಕೆಯರು ಇಲ್ಲಿ ಕಲಿಯುತ್ತಿದ್ದಾರೆ. 13 ಜನ ಮಾತೃಶ್ರೀಯರು ಇಲ್ಲಿ ವಾಸಿಸಿದ್ದು ಶಿಕ್ಷಣ ನೀಡುತ್ತಾರೆ. ಈ ಗುರುಕುಲದ ಸೇರ್ಪಡೆ, ದೀಕ್ಷೆ, ಪಾಠಕ್ರಮ ನಿಯಮಾವಳಿಗಳು ಪ್ರಬೋಧಿನಿ ಗುರುಕುಲದ ಮಾದರಿಯಲ್ಲಿದ್ದು ಅನಧ್ಯಯನದ ದಿನಗಳಲ್ಲಿ ಚಟವಟಿಕೆಗಳು ಕೊಂಚ ಭಿನ್ನವಾಗಿರುತ್ತವೆ. ಬಾಲಕಿಯರು ವೇದ ಪಠನ ಮಾಡುತ್ತಾರೆ, ಗಾಯತ್ರಿ ಮಂತ್ರ ಹೇಳುತ್ತಾರೆ. ಅಗ್ನಿಹೋತ್ರ ಮಾಡುತ್ತಾರೆ. ಅನೇಕರಿಗೆ ಇಡೀ ಭಗವದ್ಗೀತೆ ಕಂಠಪಾಠ ಬರುತ್ತದೆ.

ಅಧ್ಯಯನ ಜೊತೆಗೆ ಕಸೂತಿ, ಭರತನಾಟ್ಯಂ, ಸಂಗೀತ, ಚಿತ್ರಕಲೆಯಲ್ಲಿ ಆಸಕ್ತಿ ಬೆಳಸಿಕೊಂಡಿರುತ್ತಾರೆ. ಅಡುಗೆ ಮಾಡಲು ಮಾತೃಶ್ರೀಯವರಿಗೆ ಸಹಾಯ ಮಾಡುತ್ತಾರೆ. ಇವರು ವೇಣಿಬಂಧನ ವಿನ್ಯಾಸದಲ್ಲೂ ಪರಿಣಿತರು. ಈ ಗುರುಕುಲ ನಡೆಸಲು ಅನೇಕ ದಾನಿಗಳು ಮುಂದೆ ಬಂದಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಆರು ವರ್ಷ ಸಾಕಾಗುವದಿಲ್ಲ. ‘ಅರ್ಥ ಮೂಲೌ ಧರ್ಮ ಕಾಮೌ’ ಎನ್ನಲಾಗುತ್ತದೆ. ಹಣವನ್ನು ಗಳಿಸುವುದು ಯಾವುದೇ ವೃತ್ತಿ ಜೀವನಕ್ಕೆ ಅವಶ್ಯಕವಾದ ಒಂದು ಚಟುವಟಿಕೆ. ಇಲ್ಲಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಜೀವನದಲ್ಲಿ ಸ್ವತಂತ್ರವಾಗಿ ಹೇಗೆ ಬಾಳುತ್ತಿದ್ದಾರೆಂಬ ಬಗ್ಗೆ ಬರೆದಿದ್ದರೆ, ಮಾಹಿತಿ ನೀಡಿದ್ದರೆ ಒಳ್ಳೆಯದಾಗುತ್ತಿತ್ತು.

ಡಾ. ಅಶ್ವತ್ಥ ಎನ್‌ ರಾವ್‌ (ಮಿಸ್ಸೌರಿ) ಬರೆದ ಲೇಖನ ‘ನಾ ಕಂಡ ದೇವರು’ ಚೆನ್ನಾಗಿದೆ. ಲೇಖಕರು ಮೂರು ಘಟನೆಗಳನ್ನು ನೆನೆಯುತ್ತಾರೆ.

Ashwath N. Rao1) ಚಳಿಗಾಲದ ಪ್ರಾರಂಭದಲ್ಲಿ, ಜನೇವರಿಯಲ್ಲಿ, ಚಿಕಾಗೊದಲ್ಲಿ ನಡೆದ ಎರಡು ದಿನಗಳ ವೈದ್ಯಕೀಯ ಸಮ್ಮೇಳನವನ್ನು ಮುಗಿಸಿ ಮಡದಿ ಶಕುಂತಲೆಯಾಂದಿಗೆ ಸೇಂಟ್‌ಲೂಯಿಸ್‌ಗೆ ಮರಳುವ ಸಮಯದಲ್ಲಿ ಕಾರು ನಿಂತಿತು. ಒಳಗೆ ಚಳಿ ಕೊರೆಯುತ್ತಿತ್ತು, ಹೊರಗೆ ಹಿಮ ಬೀಳುತ್ತಿತ್ತು. ಗಾಢ ಅಂಧಕಾರದಲ್ಲಿ ‘ಕಿಂ ಕರ್ತವ್ಯ ಮೂಢರಾಗಿ’ ನಿಂತಿರುವಾಗ ಯಾವನೋ ಮಧ್ಯ ವಯಸ್ಸಿನ ವ್ಯಕ್ತಿ ಅಲ್ಲಿಗೆ ಬರುತ್ತಾನೆ. ಹರಕಲು ಡೆನಿಂ ವಸ್ತ್ರ ಧರಿಸಿದ್ದಾನೆ, ತಲೆ-ಕಿವಿ ಮುಚ್ಚಿದ ಟೋಪಿ ತೊಟ್ಟಿದ್ದಾನೆ. ಅವನೊಬ್ಬ ಪಿಕ್‌-ಅಪ್‌ ಟ್ರಕ್‌ ಡ್ರೈವರ್‌ ಆಗಿದ್ದ. ಇವರನ್ನು ಏನಾಗಿದೆ ಎಂದು ವಿಚಾರಿಸಿ, ತನ್ನ ಜೇಬಿನಿಂದ ಫ್ಲ್ಯಾಶ್‌ ಲೈಟ್‌ ತೆಗೆದು, ಇಂಜಿನ್‌ ಪರೀಕ್ಷಿಸಿ, ಕಾರಿನ ಭಾಗಗಳನ್ನು ಗುದ್ದಿ, ‘ಇಂಜಿನ್‌ ಸ್ಟಾರ್ಟ್‌ ಮಾಡಿ’ ಅನ್ನುತ್ತಾನೆ. ಇಂಜಿನ್‌ ಸಿಂಹ ಧ್ವನಿ ತೆಗೆಯುತ್ತದೆ. ‘ ಮನೆ ತಲುಪುವ ವರೆಗೆ ಇದನ್ನು ನಿಲ್ಲಿಸಬೇಡಿ. ಗುಡ್‌-ನೈಟ್‌’ ಎಂದು ಹೇಳಿ ಹೊರಟು ಹೋಗುತ್ತಾನೆ. ಅವನಿಗೆ ‘ಥ್ಯಾಂಕ್ಸ್‌’ ಹೇಳುವ ಮೊದಲೇ ಹಿಮದ ಪರದೆಯ ಹಿಂದೆ ಅವನು ಮರೆಯಾಗಿದ್ದ.

2) ವಾರ್ತಾ ಪತ್ರಿಕೆಯಾಂದರಲ್ಲಿ ನ Dear Abby ಕಾಲಂನಲ್ಲಿ ಓದುಗರ ಒಂದು ಪತ್ರ ಪ್ರಕಟವಾಗಿತ್ತು. ಒಬ್ಬ ಮಹಿಳೆ ಆ ಪತ್ರ ಬರೆದಿದ್ದಳು. ಅವಳು ತನ್ನ ಪತಿಯಾಂದಿಗೆ 40 ನೆಯ ವಿವಾಹ-ವರ್ಷ ಆಚರಿಸಲು ಯುರೋಪ್‌ ಪ್ರವಾಸ ಕೈಗೊಂಡಿದ್ದಳು. ಪತಿ ಕೆಲಸದಿಂದ ನಿವೃತ್ತನಾಗಿದ್ದುದರಿಂದ ಸಾಕಷ್ಟು ವಿರಾಮವಿತ್ತಂತೆ. ಫ್ರಾನ್ಸ್‌, ಸ್ವಿಡ್ಝರ್‌ಲಂಡ್‌, ಜರ್ಮನಿ ದೇಶಗಳನ್ನು ಬಹು ಸಂತಸದಿಂದ ಸುತ್ತಿದರು.

ಮ್ಯೂನಿಚ್‌ನ ಒಂದು ಹೊಟೇಲಿನಲ್ಲಿ ತಂಗಿದಾಗ ಅಕಸ್ಮಾತ್ತಾಗಿ ಇವಳ ಪತಿಗೆ ತಲೆ ನೋವು, ವಾಂತಿ ಶುರುವಾಯಿತಂತೆ. ಸಮೀಪದಲ್ಲಿದ್ದ ಕ್ಲಿನಿಕ್‌ಗೆ ಹೋಗಿ ರಕ್ತ ತಪಾಸಣೆ ಮಾಡಿಸಿ, ಎಕ್ಸ್‌-ರೇ, ಎಂಆರ್‌ಐ ತೆಗೆಸಿದರೂ ಅಲ್ಲಿಯ ಡಾಕ್ಟರರಿಗೆ ಇವರ ಕಾಯಿಲೆಯ ಕಾರಣ ತಿಳಿಯಲಿಲ್ಲವಂತೆ. ‘ಆದಷ್ಟು ಬೇಗ ಇವರನ್ನು ಅಮೇರಿಕೆಗೆ ಒಯ್ದರೆ ಒಳ್ಳೆಯದು’ ಎಂಬ ಅಭಿಪ್ರಾಯ ಡಾಕ್ಟರರು ತಳೆದರಂತೆ.

ಡಾಕ್ಟರರಿಂದ ಸರ್ಟಿಫಿಕೇಟ್‌ ಪಡೆದು ಅಂಬುಲೆನ್ಸ್‌ ತರಿಸಿ ವಿಮಾನ ನಿಲ್ದಾಣಕ್ಕೆ ಹೊರಟರು. ಅಲ್ಲಿ ವಿಮಾನವನ್ನೇರಲು ಪ್ರಥಮ ದರ್ಜೆಯಲ್ಲಿ ಮಾತ್ರ ಸೀಟು ಖಾಲಿ ಇದ್ದವಂತೆ. ಇವಳ ಗಂಡನಿಗೆ ಎರಡು, ಇವಳಿಗೆ ಒಂದು, ಒಟ್ಟು ಮೂರು ಟಿಕೆಟ್‌ ಪಡೆಯಲು ಬಳಿಯಲ್ಲಿ ಸಾಕಷ್ಟು ಕ್ಯಾಶ್‌ ಇಲ್ಲದ್ದರಿಂದ ಅವಳು ಕ್ರೆಡಿಟ್‌ ಕಾರ್ಡ್‌ ಮುಂದೆ ಚಾಚಿದಳಂತೆ. ಕೌಂಟರಿನ ಹೆಂಗಸು ‘ಈ ಕಂಪನಿಯ ಕ್ರೆಡಿಟ್‌ ಕಾರ್ಡ್‌ ನಾವು ಸ್ವೀಕರಿಸುವುದಿಲ್ಲ, ನೀವು ಕ್ಯಾಶ್‌ ಕೊಡಿ’ ಅಂದಳಂತೆ. ದೊಡ್ಡ ಗೊಂದಲ ಶುರುವಾಯಿತು. ಟಿಕೆಟ್‌ ಕೊಡದಿದ್ದರೆ ಅಲ್ಲಿಂದ ಕದಲುವುದಿಲ್ಲವೆಂದು ಅವಳು ಸತ್ಯಾಗ್ರಹ ಹೂಡಿದಳು.

ಅವಳನ್ನು ಕದಲಿಸಲು ಸೆಕ್ಯುರಿಟಿ ಕರೆಯುವ ಪ್ರಸಂಗ ಬಂದಾಗ, ಅಲ್ಲಿ ನಿಂತಿದ್ದ 40 ವರ್ಷದ ಗೋಧಿ ಬಣ್ಣದ ಭಾರತೀಯನಂತೆ ಕಾಣುವ ಒಬ್ಬ ವ್ಯಕ್ತಿ ಮುಂದೆ ಬಂದು ‘ಈ ಮಹಿಳೆ ಎಷ್ಟು ಹಣ ಕೊಡಬೇಕಾಗುವುದು?’ ಎಂದು ಕೌಂಟರಿನ ಮಹಿಳೆಗೆ ಕೇಳಿದನಂತೆ. ಅವಳು ಒಂದು ಕಾಗದದ ಮೇಲೆ ಹಣದ ಮೊತ್ತ ಬರೆದು ಮುಂದೆ ಹಿಡಿದಳಂತೆ. ಅವನು ತನ್ನ ಬ್ರೀಫ್‌ಕೇಸ್‌ನಿಂದ ಹಣ ಹೊರ ತೆಗೆದು ಎಣಿಸಿ ಕೊಟ್ಟನಂತೆ. ಆ ವ್ಯಕ್ತಿಯ ಹೆಸರು ವಿಳಾಸ ಪಡೆಯಬೇಕೆಂಬುದರೊಳಗಾಗಿ ಅವನು ಅಲ್ಲಿಂದ ಮರೆಯಾಗಿದ್ದನಂತೆ. ಅವನೂ ಅದೇ ವಿಮಾನದಲ್ಲಿ ಪ್ರವಾಸ ಮಾಡುತ್ತಿದ್ದ. ಆದ್ದರಿಂದ ವಿಮಾನದ ಒಳಗೆ ಹುಡುಕಿದರು. ಅಲ್ಲಿಯೂ ದೊರೆಯಲಿಲ್ಲವಂತೆ. ಆ ವ್ಯಕ್ತಿ ಈ ಪತ್ರವನ್ನು ಓದಿದರೆ, ತನ್ನ ಹೆಸರು ವಿಳಾಸ ತಿಳಿಸಬೇಕು ಎಂದು ಆ ಪತ್ರದ ಮುಖಾಂತರ ಬಿನ್ನಹಿಸಿದ್ದಳು. ಅಲ್ಲದೆ ಆ ಅನಾಮಿಕನ ಉಪಕಾರವನ್ನು ತಾನೆಂದೂ ಮರೆಯೆ ಎಂದು ಹೇಳಿದ್ದಳು.

3) ಭಾರತೀಯನೊಬ್ಬ ತನ್ನ ಸ್ನಾತಕೋತರ ವ್ಯಾಸಂಗ ಮುಗಿಸಿ ತನ್ನ ಮಡದಿ ದೀಪಿಕೆಯಾಂದಿಗೆ, ತಮ್ಮ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ನಲ್ಲಿರುವ ದಂಪತಿ ಮಿತ್ರರೊಂದಿಗೆ ಮೂರುವಾರ ಪ್ರವಾಸ ಯೋಜಿಸಿದ್ದನಂತೆ. ಒಹಾಯಾ ಸಂಸ್ಥಾನದಿಂದ ಹೊರಟು ಕ್ಯಾಲಿಫೋರ್ನಿಯಾಕ್ಕೆ ತಲುಪಿ ಮರಳಿ ಬರುವುದು. ದಾರಿಯಲ್ಲಿ ಹಲವಾರು ಸಂಸ್ಥಾನ ಸಂದರ್ಶಿಸುವುದು. ಒಟ್ಟು 4,500 ಮೈಲು ಪ್ರಯಾಣ. ದಿನಕ್ಕೆ 300 ಮೈಲು ಕಾರು ನಡೆಸುವುದು.

ದೀಪಿಕಾ 4 ತಿಂಗಳ ಗರ್ಭಿಣಿ ಬೇರೆ. Grand Canyon ಬಿಟ್ಟು 4-5 ಗಂಟೆ ಚಲಿಸಿದಾಗ ಗ್ಯಾಸ್‌(ಪೆಟ್ರೋಲ್‌)ಟ್ಯಾಂಕ್‌ ಖಾಲಿಯಾದದ್ದು ತಿಳಿಯಿತು. ಸಮೀಪ ಹತ್ತು ಮೈಲು ಸರ್ವಿಸ್‌ ಸ್ಟೇಶನ್‌ ಇರಲಿಲ್ಲ. ಎ/ಸಿ ಚಲಿಸುತ್ತಿರಲಿಲ್ಲ ವಾದ್ದರಿಂದ ವಿಪರೀತ ಸೆಕೆಯಿತ್ತು. ಬೂತ್‌ಗೆ ಹೋಗಿ ಫೋನ್‌ ಮಾಡಬೇಕೆಂದರೆ ಅಲ್ಲಿ ವಯರ್‌ ತುಂಡಾಗಿತ್ತು. ದೀಪಿಕಾಗೆ ರಕ್ತಸ್ರಾವ ಪ್ರಾರಂಭವಾಗಿ ಆಸ್ಪತ್ರೆ ಸೇರಿಸುವ ಪ್ರಸಂಗ ಬಂತು. ಆಗ ಒಬ್ಬ ಸಮವಸ್ತ್ರಧಾರಿ ಪಾರ್ಕ್‌ ರೇಂಜರ್‌ ಬಂದು ಇವರನ್ನು ವಿಚಾರಿಸಿದ. ತನ್ನ ವಾಹನದಲ್ಲಿ ಇವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ. ಅವರ ಕಾರ್‌ನ್ನು ಟೋವ್‌ ಮಾಡಿಸಿ ಸರ್ವಿಸ್‌ ಸ್ಟೇಶನ್ನಿಗೆ ಸಾಗಿಸುವುದಾಗಿ ಹೇಳಿ ಹೊರಟು ಹೋದ.

ದೀಪಿಕಾಳಿಗೆ ಒಂದು ಎಮರ್ಜನ್ಸಿ ಆಪರೇಶನ್‌ ಆಯಿತು. ಅಲ್ಲಿಯ ನರ್ಸ್‌ ಒಬ್ಬಳು ಇವರಿಗೆ ತನ್ನ ಮನೆಯಲ್ಲಿರಲು ಆಶ್ರಯ ಕೊಟ್ಟಳು. ಈ ಗಡಬಡಿಯಲ್ಲಿ ಸದ್ದಿಲ್ಲದೆ ಸಹಾಯ ಮಾಡಿದ ‘ಪಾರ್ಕ ರೇಂಜರ್‌’ಗೆ ಕೃತಜ್ಞತೆ ಸಲ್ಲಿಸುವುದೇ ಆಗಿರಲಿಲ್ಲ. ಈ ಮೂರು ಘಟನೆಗಳ ಬಗ್ಗೆ ವಿವರವಾಗಿ ರೋಚಕವಾಗಿ ಬರೆದು ಲೇಖಕರು ಕೊನೆಗೆ ಬರೆಯುತ್ತಾರೆ: ‘ಈ ಮೇಲಿನ ಅನುಭವ ಕಥನದಲ್ಲಿ ತಿಳಿಸಿದಂತೆ ‘ನನ್ನ ಚಿಕಾಗೊ ಯಾತ್ರೆ’ಯ, ‘ಯುರೋಪ್‌ ಪ್ರವಾಸದ ದಂಪತಿಗಳ’, ಮತ್ತು ‘ಯುರೋಪ್‌ ಪ್ರವಾಸ ಮಾಡಿದ ಇಬ್ಬರು ದಂಪತಿಗಳ’ ಅಭಿಪ್ರಾಯದಲ್ಲಿ ‘ಹಳೇ ಟ್ರಕ್ಕಿನಲ್ಲಿ ಬಂದ ರೈತ’, ‘ಮೆದುವಾಗಿ ಮಾತಾಡಿದ ಭಾರತೀಯ’, ಮತ್ತು ‘ಕರ್ತವ್ಯಶೀಲ ಪಾರ್ಕ್‌ ರೇಂಜರ್‌’ ಇವರುಗಳೇ ದೇವರು ಅಥವಾ ದೇವರ ಪ್ರತಿನಿಧಿಗಳು!’ ಎಂಬ ಉದ್ಗಾರ ತೆಗೆಯುತ್ತಾರೆ.

ಸುಭದ್ರಾ ರಾಮಚಂದ್ರ(ಇಲಿನಾಯ್‌) ಅವರ ‘ಕೈಲಾಸ’ ಎಂಬ ಒಂದೇ ನಾಟಕ (ಪ್ರಹಸನ) ಇಲ್ಲಿ ಪ್ರಕಟಗೊಂಡಿದೆ. ನವಿರು ಹಾಸ್ಯದಿಂದ ಕೂಡಿದ ಈ ನಾಟಕ ಅಮೇರಿಕೆಯಲ್ಲಿರುವ ಕನ್ನಡಿಗರ ಜೀವನದ ಬಗ್ಗೆ ವಿಶೇಷ ಬೆಳಕು ಚೆಲ್ಲುತ್ತದೆ. ಗೌರಿ ಗಣೇಶರು ಅಮೇರಿಕೆಯ ಭಕ್ತರಮನೆಯಲ್ಲಿ ಪೂಜೆ ಮಾಡಿಸಿಕೊಂಡು, ತಮ್ಮ ಅನುಭವಗಳನ್ನು ಕೈಲಾಸದಲ್ಲಿಯ ಈಶ್ವರನೊಂದಿಗೆ ಹಂಚಿಕೊಳ್ಳುತ್ತಾರೆ. ಅದರ ಸ್ಯಾಂಪಲ್‌ ನೋಡಿ.

ಈಶ್ವರ: ಯಾಕೆ? ಭಾರತದಲ್ಲಿ ಹೋದರೆ ಅಲ್ಲಿ ಎಂತೆಂತಹ ವಿದ್ಯಾವಂತ ವಧು ವರಗಳು ಸಿಗುತ್ತಾರೆ. ಬೇರೆ ಮತದವರನ್ನು ಹೋಗಿ ಏಕೆ ಮದುವೆ ಮಾಡಿಕೊಳ್ಳಬೇಕು?

ಪಾರ್ವತಿ: ಈಗ ಕಾಲ ಬದಲಾಗಿದೆರೀ. ನಾನೇ ನಿಮ್ಮನ್ನು ವರಿಸಬೇಕೆಂದು ನಿಮ್ಮನ್ನು ಸತತವಾಗಿ ಧ್ಯಾನಿಸಿ ವರಿಸಿಕೊಳ್ಳಲಿಲ್ಲವೇ? ಅದೇ ತರಹ. ಭಾರತದಲ್ಲಿ ಬೆಳೆದಿರುವ ಹುಡುಗರ ಮನೋಧರ್ಮವೇ ಬೇರೆ, ಅಮೇರಿಕಾದಲ್ಲಿ ಬೆಳೆದಿರುವವರ ಮನೋಧರ್ಮವೇ ಬೇರೆ. ಒಬ್ಬರಿಗೊಬ್ಬರಿಗೆ ಹೊಂದಾಣಿಕೆ ಬರುವುದಿಲ್ಲ.

ಈಶ್ವರ: ಸಾಕು ಸುಮ್ಮನಿರು. ಷಣ್ಮುಖನಿಗೆ ನಾನೇ ನೋಡಿ ಹೆಣ್ಣು ತರಬೇಕು.

ಪಾರ್ವತಿ: ಅದು ನೀವೇನಾದರೂ ಮಾಡಿ. ಈಗ ನನ್ನ ಪೂಜೆಯನ್ನು ಅಮೇರಿಕಾದಲ್ಲಿ ಹೇಗೆ ಮದುವೆಗಳಲ್ಲಿ ಆಚರಿಸುತ್ತಾರೆ ಎನ್ನುವುದನ್ನು ಕೇಳಿ.

ಈಶ್ವರ: ಸರಿ, ಪ್ರಾರಂಭಿಸು ದೇವಿ.

ಪಾರ್ವತಿ: ಭಾರತದಲ್ಲಿ ಮದುವೆಯ ದಿನದ ಗೌರಿ ಪೂಜೆಯನ್ನು ಯಾರೋ ಹೆಂಗಸರೇ ಸೇರಿ ಹುಡುಗಿಯ ಹತ್ತಿರ ಮಾಡಿಸುತ್ತಾರೆ. ಅಮೇರಿಕಾದಲ್ಲಿ ಹಾಗಲ್ಲ. ಮದುವೆ ಮಾಡಿಸುವ ಪುರೋಹಿತರೇ ಮಾಡಿಸುತ್ತಾರೆ. ಹುಡುಗಿಯ ಅಮ್ಮಂದಿರು, ಹುಡುಗ ಭಾರತದವನಾಗಿರಲಿ ಅಥವಾ ಅಮೇರಿಕಾದ ಬಿಳಿಯವನಾಗಿರಲೀ ಒಂದೇ ತರಹದ ಆಸಕ್ತಿ ವಹಿಸಿ ಪೂಜೆಗೆ ಅಣಿ ಮಾಡಿರುತ್ತಾರೆ. ಎಲ್ಲೆಲ್ಲೋ ಅಂಗಡಿಯಲ್ಲಿ ಅಲೆದು, ಮರದ ಜೊತೆಗೆ ಬೇಕಾಗುವ ಸಾಮಾನುಗಳನ್ನೆಲ್ಲಾ ತಂದಿಟ್ಟಿರುತ್ತಾರೆ. ಹುಡುಗನ ಅಥವಾ ಹುಡುಗಿಯ ತಾಯಿಯು ಅಮೇರಿಕನ್‌ ಆಗಿದ್ದರೂ ಸಹ ಅವರಿಗೂ ಮರದ ಜೊತೆ ಕೊಡಿಸುತ್ತಾರೆ. ಅವರುಗಳು ಅದೆಷ್ಟು ಆಸಕ್ತಿಯಿಂದ ಸೀರೆಗಳನ್ನು ಉಟ್ಟಿರುತ್ತಾರೆ ಅಂತ.

ಈಶ್ವರ: ಗೌರಿ ಪೂಜೆಯನ್ನೇನೊ ಮಾಡಿಸುತ್ತಾರೆ ನಮ್ಮ ಧರ್ಮದ ಪ್ರಕಾರ. ಆದರೆ ಅವರುಗಳು ಮದುವೆಗೆ ಹಿಂದು ಧರ್ಮದ ಪ್ರಕಾರ ಒಪ್ಪಿಕೊಳ್ಳುತ್ತಾರೆಯೇ?

ಪಾರ್ವತಿ: ಖಂಡಿತವಾಗಿ. ಒಂದು ಮದುವೆಯನ್ನು ನೋಡಿಕೊಂಡೇ ಹೋಗಬೇಕೆಂದು ನಿಂತೆ. ಆ ದಿನ ನೀವು, ಏಕೆ ಬರಲು ತಡವಾಯಿತೆಂದು ಆತಂಕಪಟ್ಟಿರಲ್ಲವೇ? ಗೌರಿ ಪೂಜೆಯ ನಂತರ, ಹುಡುಗನಿಗೆ ಕಾಶೀಯಾತ್ರೆ ನಡೆಯಿತು. ಭಾರತದಿಂದ ಬಂದ ಅರ್ಚಕರು ಹುಡುಗಿಯ ತಂದೆಯ ಹತ್ತಿರ (ವರನ)ಕಾಲುಗಳನ್ನೂ ತೊಳೆಸಿದರು. ಹುಡುಗ ಮಂಟಪಕ್ಕೆ ಬಂದಾಗ ಜನಿವಾರ ಸಹಿತ ಹಾಕಿದರು. ವರ ಬೇರೆಯ ಮತದವನಾದರೂ ಅದೆಷ್ಟು ಆಸಕ್ತಿಯಿಂದ ಮಾಡಿಸಿಕೊಂಡ ಅಂತೀರ. ಭಾರತದಲ್ಲೇ ಹುಡುಗರಿಗೆ ಅಂಥಾ ಶ್ರದ್ಧೆ ಇಲ್ಲ. ಲಾಜಾ ಹೋಮ ಸಹ ಮಾಡಿದ.

(ಮುಂದುವರಿಯುವುದು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X