• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ 6

By Staff
|

*ಡಾ.‘ಜೀವಿ’ ಕುಲಕರ್ಣಿ

ಅನಿವಾಸಿಗಳ ಕನ್ನಡ ‘ಸ್ಪಂದನ’, ಅಮೆರಿಕದಲ್ಲೇ ಮುದ್ರಣ !

Amarnatha Gowda, Akka presidentಡೆಟ್ರಾಯಿಟ್‌ನಲ್ಲಿ ನಡೆದ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸೆಪ್ಟೆಂಬರ್‌ ಒಂದರಂದು ರಾತ್ರಿ ಮುಗಿಯಿತು. ಯಾಕೆ ಇಷ್ಟು ಬೇಗ ಮುಗಿಯಿತು ಅನಿಸಲೇ ಇಲ್ಲ. ಎರಡು ವರ್ಷಗಳ ಹಿಂದೆ ಹೂಸ್ಟನ್‌ನಲ್ಲಿ ನಡೆದ ಪ್ರಥಮ ವಿಶ್ವ ಸಮ್ಮೇಳನದ ನೆನಪು ಬಂತು. ಎಂತಹ ಭೂರಿ ಭೋಜನ(ಬ್ಯಾಂಕ್ವೆಟ್‌), ಎಂತಹ ಕಾರ್ಯಕ್ರಮ! ಸ್ಟೇಜಿನ ಮೇಲೆ ಎರಡು ನೂರು ಜನ ಒಕ್ಕೊರಲಿನಿಂದ ‘ಭಾರತ ಮಾತೆಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಹಾಡು ಹಾಡಿದರು. ಮಧ್ಯದಲ್ಲಿ ಸಂಗೀತ ಸಂಯೋಜಕ ಅಶ್ವತ್ಥ್‌ ಮೈಕ್‌ ಹಿಡಿದು ಹಾಡಿ ನಲಿಯುತ್ತಿದ್ದರು. ಜನರೆಲ್ಲ ಕುಣಿಯುತ್ತಿದ್ದರು. ಆ ದೃಶ್ಯ ಅವಿಸ್ಮರಣೀಯ. ಈ ಸಲದ ಸಮ್ಮೇಳನವನ್ನು ಹಿಂದಿನದರೊಂದಿಗೆ ಹೋಲಿಸಬಾರದು ಆದರೆ ಅಂದು ಆ ದೃಶ್ಯ ಕಂಡ ‘ತಪ್ಪಿಗೆ’ ಇಂದು ನೆನೆಯಬೇಕಾಗುತ್ತದೆ, ಬರೆಯುವುದು ಅನಿವಾರ್ಯವಾಗುತ್ತದೆ. ಅಂಥ ಭೋಜನ ಕೂಟ ಈ ಸಲ ಇರಲಿಲ್ಲ , ವಿಶೇಷ ಆಕರ್ಷಣೆಯೂ ಇರಲಿಲ್ಲ.

ಈ ಸಲದ ಸಮ್ಮೇಳನದ ಸೂತ್ರಧಾರರಾಗಿರುವ ಅಮರನಾಥ ಗೌಡ ಅವರು ಸಾಕಷ್ಟು ದುಡಿದಿದ್ದಾರೆ. ಅಮೇರಿಕೆಯ ಅರ್ಥವ್ಯವಸ್ಥೆ ಕುಸಿದಿರುವ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡ ಸಮ್ಮೇಳನವನ್ನು ಆಯೋಜಿಸಿದ್ದು ಸಾಹಸದ ಮಾತೇ ಆಗಿದೆ. ಎಲ್ಲ ಅಡೆತಡೆಗಳನ್ನು ಎದುರಿಸಿ ಮುನ್ನಡೆದರು, ಪ್ರೆಸಿಡೆಂಟ್‌ ಬುಶ್‌ ಅವರ ‘the show must go on’ ಎಂಬ ಸೂತ್ರವನ್ನು ಪಾಲಿಸಿದರು.

ಈ ಸಲದ ಸಮ್ಮೇಳನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿದ ‘ಅಕ್ಕ’ ಬಳಗದವರು, ಮಿಚಿಗನ್‌ ಪಂಪ ಕನ್ನಡ ಸಂಘದವರು, ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿರುವ ಈ ಪ್ರದೇಶದ ಕನ್ನಡಿಗರು ಅಭಿನಂದನಾರ್ಹರಾಗಿದ್ದಾರೆ. ಹಿಂದಿನ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಎಂಟು ಕನ್ನಡಿಗರನ್ನು ಸತ್ಕರಿಸಲಾಗಿತ್ತು. ಈ ಸಲ, ಕ್ರಿಕೆಟ್‌ ಆಟದ ಮೋಡಿಗಾರ ಗೂಗ್ಲಿ ಬೌಲರ್‌ ಚಂದ್ರಶೇಖರ್‌ ಅವರನ್ನು ಸತ್ಕರಿಸಲಾಯಿತು. ಅಕ್ಕ ಸಂಸ್ಥೆಯ ಅಧಕ್ಷ ಅಮರನಾಥ ಗೌಡ, ಸ್ಪಂದನ ಸ್ಮರಣ ಸಂಚಿಕೆಯ ಸಂಪಾದಕ, ಫೈನಾನ್ಸ್‌ ಕಮೀಟಿಯಲ್ಲಿ ದುಡಿದ ಉದ್ಯಮಿ ಬಿ.ಎನ್‌.ಬಹಾದೂರ ಅವರನ್ನೂ ಸತ್ಕರಿಸಲಾಯಿತು.

ಮೂರನೆಯದಿನದ ಮನರಂಜನೆಯ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟಿ ಉಮಾಶ್ರೀ ಅವರು ಪ್ರದರ್ಶಿಸಿದ ಏಕಪಾತ್ರಾಭಿನಯ (‘ಒಡಲಾಳ’ದ ಸಾಕವ್ವನ ಪಾತ್ರ) ಎಲ್ಲರ ಮನ ಸೂರೆಗೊಂಡಿತು. ಕನ್ನಡ ರಂಗಕ್ಕೆ ವಿಶ್ವ ಮಾನ್ಯತೆಯನ್ನು ತಂದು ಕೊಟ್ಟ ದಿಗ್ದರ್ಶಕ ಬಿ.ವಿ.ಕಾರಂತರ ನಿಧನದ ಸುದ್ದಿ ಬಂದಾಗ ಇಡೀ ಸಭೆ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿತು.

ಸಮ್ಮೇಳನದ ಸ್ಮರಣ ಸಂಚಿಕೆ ‘ಸ್ಪಂದನ’ದ ಬಗ್ಗೆ ನಾಲ್ಕು ಮಾತು ಬರೆಯುವುದು ಉಚಿತವೆನಿಸುತ್ತದೆ. ಇದರ ಸಂಪಾದಕರಾದ ಕುಂಭಾಸಿ ಶ್ರೀನಿವಾಸ ಭಟ್ಟರು ಬಹಳ ಪರಿಶ್ರಮ ಪಟ್ಟಿದ್ದಾರೆ. ಮೊದಲನೆಯ ವಿಶ್ವ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬೆಂಗಳೂರಲ್ಲಿ ಮುದ್ರಿಸಿ ತಂದಿದ್ದರು. ಅದಕ್ಕೆ 22 ತಿಂಗಳು ತಾಗಿದ್ದವಂತೆ. ಈ ಸಲದ ಸಂಚಿಕೆಯನ್ನು ಅಮೇರಿಕೆಯಲ್ಲಿಯೇ ಮುದ್ರಿಸಿದ ಅಭಿಮಾನ ಸಂಪಾದಕರಿಗಿದೆ. ಕೇವಲ ಎಂಟು ತಿಂಗಳಲ್ಲಿ ಅದು ಸಿದ್ಧವಾಯಿತಂತೆ. ಇದಕ್ಕೆ ಕಾರಣ ‘ಅಕ್ಕ’ ದ ಬೆಂಬಲ ಹಾಗೂ ‘ಬರಹ’ ಸಾಫ್ಟ್‌ವೇರಿನ ಬಳಕೆಯ ಸೌಲಭ್ಯ ಎನ್ನುತ್ತಾರೆ ಸಂಪಾದಕರು. ಈ ಸಂಚಿಕೆಯಲ್ಲಿ ಸುಮಾರು 150 ಕನ್ನಡ ಲೇಖನಗಳು, 19 ಇಂಗ್ಲಿಷ್‌ ಬರಹಗಳಿವೆ.

ಹೆಚ್ಚಿನ ಲೇಖನಗಳನ್ನು ಅಮೇರಿಕೆಯಲ್ಲಿ ನೆಲಸಿದವರೇ ಬರೆದಿದ್ದಾರೆ. ಕರ್ನಾಟಕದಿಂದ(24), ಕೆನಡಾ(2), ಸಿಂಗಾಪೂರ್‌(11), ಆಸ್ಟ್ರೇಲಿಯಾ(2), ನೈಜೀರಿಯಾ(2), ಯು.ಕೆ.(3)ದಿಂದ ಕೂಡ ಲೇಖನ ತರಿಸಿದ್ದಾರೆ. ಈ ಲೇಖನಗಳು 1) ಅಭಿಮಾನ, 2) ಐಕ್ಯತೆ, 3) ಅಳವಡಿಕೆ, ಎಂಬುದಾಗಿ ವಿಭಾಗಗೊಂಡಿವೆ. ಅದಕ್ಕೆ ಬದಲು ವಿಷಯಕ್ಕೆ ಅನುಸಾರವಾಗಿ ವಿಭಾಗಿಸಿದ್ದರೆ ಹೆಚ್ಚು ಔಚಿತ್ಯಪೂರ್ಣವಾಗುತ್ತಿತು. ಹೆಚ್ಚಿನ ಲೇಖನಗಳು ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಸಂಗ್ರಹಿತವಾಗಿವೆ. ಅಂತರ್‌ಜಾಲದ ಅನುಕೂಲತೆ ಇರುವ ಈ ದಿನಗಳಲ್ಲಿ ಉತ್ತಮ ಮಟ್ಟದ ಹೆಚ್ಚು ಲೇಖನಗಳನ್ನು ಸಂಗ್ರಹಿಸಿದ್ದರೆ ಒಳ್ಳೆಯದಾಗುತ್ತಿತ್ತು.

‘ಸ್ಪಂದನ’ದಲ್ಲಿ ಕೆಲವು ಲೇಖನಗಳು ಉತ್ತಮವಾಗಿವೆ. ಹೆಚ್ಚಿನವು ಪ್ರಬಂಧಗಳು. ಕವಿತೆಗಳು ಕಡಿಮೆ ಇವೆ. ಮೂರು ನಾಲ್ಕು ಕತೆಗಳಿವೆ, ಎರಡು ಪರಿಚಯ ಲೇಖನಗಳಿವೆ, ಒಂದು ಚಿಕ್ಕ ನಾಟಕವಿದೆ, ಒಂದೆರಡು ಪುಸ್ತಕ ಪರಿಚಯಗಳು, ಎರಡು ವ್ಯಕ್ತಿ ಪರಿಚಯಗಳು. ಕೆಲವು ಪ್ರಕಾರಗಳಲ್ಲಿ ಇನ್ನೂ ಹೆಚ್ಚಿನ ಬರಹ ಬೇಕಾಗಿತ್ತು ಎನಿಸುತ್ತದೆ. ಕೆಲವು ಲೇಖನಗಳು ನನ್ನ ಲಕ್ಷ್ಯ ಸೆಳೆದಿವೆ.

Spandana Cover pageಸಂಪಾದಕರಿಗೊಂದು ಸೂಚನೆ. ಇಂಥ ನೆನಪಿನ ಹೊತ್ತಿಗೆಗಳನ್ನು ಪ್ರಕಟಿಸುವಾಗ ಲೇಖಕರ ವಿಳಾಸಗಳನ್ನು ಪರಿಶಿಷ್ಟದಲ್ಲಿ ಕೊಟ್ಟಿದ್ದರೆ ಒಳ್ಳೆಯದಾಗುತ್ತಿತ್ತು. ಹೆಸರಿನೊಂದಿಗೆ ಅವರ ‘ಇ-ಮೇಲ್‌ ಐಡಿ’ ತಿಳಿಸಿದ್ದರೂ ಚೆನ್ನಾಗಿರುತ್ತಿತ್ತು. ಕೆಲವು ಉತ್ತಮ ಲೇಖನಗಳಿಗೆ ವಾಚಕರ ‘ಫೀಡ್‌-ಬ್ಯಾಕ್‌’ ದೊರೆಯುತ್ತಿತ್ತು.

ಮೊದಲನೆಯ ಲೇಖನ ಅಮೇರಿಕೆಯಲ್ಲಿ ಹಾಗೂ ಕನ್ನಡ ನಾಡಿನಲ್ಲಿ ಹೆಸರು ಗಳಿಸಿದ, ಅಮೆರಿಕನ್ನಡ ಪತ್ರಿಕೆಯ ಅಂದಿನ ಸಂಪಾದಕರಾದ, ಕನ್ನಡ ಭಾಷೆ ಸಂಸ್ಕೃತಿಯ ಪ್ರಚಾರಕರಾದ ಎಸ್‌.ಕೆ.ಹರಿಹರೇಶ್ವರರ ‘ಅಭಿಮಾನ’. ನಾವೆಲ್ಲ ಅಭಿಮಾನದಿಂದ ಹೇಳುವ ಮಾತು ‘ಜನನಿ ಹಾಗೂ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು’ ಎಂದು. ಅದು ರಾಮಯಣದಲ್ಲಿಯದು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಅದನ್ನು ಹರಿಹರೇಶ್ವರರು ನೆನಪಿಸುತ್ತಾರೆ. ಲಂಕೆಯನ್ನು ಶ್ರೀ ರಾಮಚಂದ್ರ ಗೆದ್ದ ಮೇಲೆ ಲಕ್ಷ್ಮಣನಿಗೆ ಹೇಳುತ್ತಾನೆ, ‘ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ/ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು.

(ಅಮೇರಿಕೆಯೆಂಬ ಸ್ವರ್ಣ ನಗರಿಯನ್ನು ಗೆದ್ದ ಕನ್ನಡಿಗರು ಕರ್ನಾಟಕಕ್ಕೆ ಹಿಂದಿರುಗಿ ಬರುತ್ತಿಲ್ಲ. ಇಲ್ಲಿ ಹುಟ್ಟಿದ ಮಕ್ಕಳಿಗೆ ಅಮೇರಿಕೆಯು ಅವರ ಜನ್ಮಭೂಮಿ. ಆದರೆ ಹಿರಿಯರು ವಾನಪ್ರಸ್ಥಾಶ್ರಮ ಕಳೆಯಲು ಕರ್ನಾಟಕಕ್ಕೆ ಬರಬಹುದಲ್ಲ. ಹರಿಹರೇಶ್ವರರು ಮರಳಲು ನಿಶ್ಚಯಿಸಿದ್ದಾರೆ. ಇದು ಅವರ ‘ಅಭಿಮಾನ’ದ ಸಂಕೇತ- ಇದು ಲೇಖಕನ ಸ್ವಗತ.)

ಹರಿಹರೇಶ್ವರರು ತಮ್ಮ ಲೇಖನದ ಕೊನೆಯಲ್ಲಿ, ತಮ್ಮ ಪೀಳಿಗೆಯ ನಂತರ ಅಮೇರಿಕೆಯಲ್ಲಿ, ಕನ್ನಡ ಎಲ್ಲಿ ಮರೆಯಾಗಿ ಹೋಗುವುದೋ ಎಂಬ ಕಾರ್ಮೋಡ ಕವಿದಾಗ ಅದನ್ನು ಚದುರಿಸಲು ಆರು ಸೂತ್ರಗಳನ್ನು ನೀಡುತ್ತಾರೆ.

1) ನಿಮಗೆ ಇಬ್ಬರಿಗೆ ಕನ್ನಡ ಗೊತ್ತಿದ್ದರೆ, ಕನ್ನಡದಲ್ಲೇ ಮಾತಾಡಿರಿ.
2) ಕನ್ನಡ ಪುಸ್ತಕಗಳನ್ನು ಓದಿರಿ.
3) ಕನ್ನಡ ಬರಹದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಬರೆಯಿರಿ( ಓದುಗರ ಓಲೆ, ಪ್ರತಿಕ್ರಿಯೆ ಕಾಲಂನಲ್ಲಿ).
4) ಪುಸ್ತಕ ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಿರಿ, ಉಡುಗೊರೆ ಕೊಡುವಾಗ ಕನ್ನಡ ಪುಸ್ತಕ ಕೊಡಿರಿ.
5) ಸಾಧ್ಯವಾದಾಗಲೆಲ್ಲ ಕನ್ನಡದಲ್ಲೇ ಬರೆಯುತ್ತಿರಿ.
6) ಕನ್ನಡದ ಖ್ಯಾತ ಲೇಖಕರನ್ನು ಬರಮಾಡಿಕೊಳ್ಳಿರಿ, ಉಪನ್ಯಾಸ ಇಡಿಸಿರಿ, ಗೌರವಿಸಿರಿ, ನಿಮ್ಮನ್ನೇ ಗೌರವಿಸಿಕೊಳ್ಳಿ.

Kumbhasi Shreenivas Bhatಇದರಲ್ಲಿಯ ಹೆಚ್ಚಿನ ಸೂತ್ರಗಳು ಕರ್ನಾಟಕದ ರಾಜಧಾನಿ, ಹಾಗೂ ಪ್ರಮುಖ ನಗರಗಳಿಗೂ ಅನ್ವಯಿಸುತ್ತದೆ.

‘ಸಂಸ್ಕೃತವೆಂಬ ಭಾಷೆ ಮತ್ತು ಸಾಹಿತ್ಯ’ ಎಂಬ ಲೇಖನವನ್ನು ಲಂಡನ್‌ವಾಸಿ ಕೇಶವ ಅವರು ಬರೆದಿದ್ದಾರೆ. ಸಂಸ್ಕೃತವನ್ನು ನಮ್ಮ ಶಾಲಾ ಹಾಗೂ ಕಾಲೇಜಿನ ಪಾಠಕ್ರಮದಿಂದ ಕಿತ್ತುಹಾಕುತ್ತಿರುವ ಈ ದಿನಗಳಲ್ಲಿ ಸಂಸ್ಕೃತವನ್ನು ಉಳಿಸಿರಿ, ಬೆಳೆಸಿರಿ ಎಂಬ ಮಾತುಗಳು ಅರಣ್ಯರೋದನದಂತಿವೆ. ಈ ಲೇಖನದಲ್ಲಿರುವ ವಿಚಾರಗಳು ಹೀಗಿವೆ :

1. ಸಂಸ್ಕೃತವನ್ನು ಕುರಿತಂತೆ ಕೆಲವು ನಂಬಿಕೆಗಳು
2. ಸಂಸ್ಕೃತವನ್ನು ಕಲಿಯುವುದರ ಲಾಭಗಳು
3. ಸಂಸ್ಕೃತ ಭಾಷೆಯನ್ನು ಕಲಿಯಲು ಇರುವ ಸೌಲಭ್ಯಗಳು
4. ಸಂಸ್ಕೃತ ಭಾಷೆಯ ವೈಶಿಷ್ಟ್ಯಗಳು
5. ಸಂಸ್ಕೃತ ಸಾಹಿತ್ಯವೆಂಬ ಸಂಪತ್ತು
6. ಸಂಸ್ಕೃತ ಕ್ಷೇತ್ರದಲ್ಲಿನ ಇತ್ತೀಚಿನ ಸಾಧನೆಗಳು

ಸಂಸ್ಕೃತವನ್ನು ಕಲಿಯಲು ಅಪಾರ ಸ್ಮರಣೆಬೇಕು, ಉರುಹೊಡೆಯಬೇಕು ಎಂಬ ನಂಬಿಕೆಯನ್ನು ಅಲ್ಲಗಳೆದು ಲಂಡನ್ನಿನಲ್ಲಿ ಭಾರತೀಯ ವಿದ್ಯಾ ಭವನದವರು ನಡೆಸಿದ ಸಂಸ್ಕೃತ ಸಂಭಾಷಣೆಯ ಶಿಬಿರದ ಬಗ್ಗೆ ಬರೆಯುತ್ತಾರೆ. ಚಿಕ್ಕ ಮಕ್ಕಳು ಕೂಡ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತಾಡಿದರಂತೆ. ಸಂಸ್ಕೃತ ಗ್ರಾಮವೆಂದೇ ಹೆಸರು ಗಳಿಸಿರುವ ಕರ್ನಾಟಕದ ಮತ್ತೂರು ಗ್ರಾಮದ ಉದಾಹರಣೆ ಕೊಡುತ್ತಾರೆ. ಸಂಸ್ಕೃತ ಮಾತು ಕಲಿಯಲು ವ್ಯಾಕರಣದ ಜ್ಞಾನದ ಅವಶ್ಯಕತೆ ಇಲ್ಲ ಅನ್ನುತ್ತಾರೆ.

ಮಕ್ಕಳು ಮೊದಲು ಮಾತಾಡುತ್ತಾರೆ, ನಂತರ ವ್ಯಾಕರಣ ಕಲಿಯುತ್ತಾರೆ. ಸಂಸ್ಕೃತ ಕಲಿಯುವುದರಿಂದಾಗುವ ಲಾಭಗಳ ಬಗ್ಗೆ ಹೇಳುತ್ತಾರೆ. ಕನ್ನಡದಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿವೆ (ಧಾರವಾಡ, ಮೈಸೂರು, ಮಂಗಳೂರು, ಬಳ್ಳಾರಿ ಮುಂ.) ಎಷ್ಟೋ ಸಲ ಅವು ಅರ್ಥವಾಗುವುದಿಲ್ಲ ಎಂದು ಉದಾಹರಣೆ ಕೊಟ್ಟು, ಸಂಸ್ಕೃತದಲ್ಲಿ ಈ ತೊಂದರೆ ಇಲ್ಲ ಎಂದು ವಾದಿಸುತ್ತಾರೆ. ಅವರು ಕೊನೆಗೆ ಇತ್ತೀಚಿನ ಸಾಧನೆಯ ಬಗ್ಗೆ ಬರೆಯುತ್ತಾರೆ:

‘ಸಾವಿರಾರು ವರ್ಷಗಳಿಂದ ಸಂಸ್ಕೃತದ ವೈಶಿಷ್ಟ್ಯವನ್ನು ಕುರಿತಂತೆ ಗ್ರಂಥಗಳೇ ರಚಿತವಾಗಿವೆ. ಅವುಗಳಲ್ಲಿಲ್ಲದ ಕೆಲವು ಆಧುನಿಕ ಸಾಧನೆಗಳನ್ನು ಗಮನಿಸೋಣ.

* ಸಂಸ್ಕೃತ ಗ್ರಾಮ- ಮತ್ತೂರು (ಶಿವಮೊಗ್ಗಾ ಜಿಲ್ಲೆ) ಕರ್ನಾಟಕ,ಭಾರತ, ಸಂಸ್ಕೃತ ಮನೆಗಳು.

* ಹೈಕೋರ್ಟ್‌ನಲ್ಲಿ ಸಂಸ್ಕೃತದಲ್ಲಿ ವಾದ ಹಾಗೂ ತೀರ್ಪು ಕೂಡ ಸಂಸ್ಕೃತದಲ್ಲಿ.

* ಹತ್ತೇ ದಿನಗಳಲ್ಲಿ ಯಾರು ಬೇಕಾದರೂ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತಾಡಲು ಕಲಿಯಬಹುದಾದ ಶಿಬಿರಗಳ ಏರ್ಪಾಡು; ಸಂಸತ್ತಿನಲ್ಲಿ ಕೂಡ ಸಂಸ್ಕೃತದಲ್ಲಿ ವಾರ್ತಾಲಾಪ.

* ಸಂಸ್ಕೃತ ವಾರ್ತೆಗಳು, ಸುದ್ದಿಪ್ರಸಾರ ಹಾಗೂ ಸ್ವಾರಸ್ಯದ ಕಾರ್ಯಕ್ರಮಗಳು. ನಮ್ಮ ಬಾನುಲಿ ಹಾಗೂ ದೂರದರ್ಶನಗಳಲ್ಲಿ ಸಂಸ್ಕೃತ ನಿಯತಕಾಲಿಕೆಗಳು.

* ಕಂಪ್ಯೂಟರ್‌ನಲ್ಲಿ ಸಂಸ್ಕೃತ ಪ್ರೋಗ್ರಾಮ್‌. ಐ.ಐ.ಟಿ.ಯಂತಹ ವಿದ್ಯಾ ಕೇಂದ್ರಗಳು ಸಂಸ್ಕೃತ ಹೇಳಿಕೊಡಲು ಪ್ರಾರಂಭಿಸಿದ್ದಾರೆ ಎಂಬ ಸುದ್ದಿ.

* ಇತ್ತೀಚೆಗೆ NASA ಕೂಡ (ಸಂಸ್ಕೃತದಲ್ಲಿರುವ ಹಲವು ವಿಮಾನಶಾಸ್ತ್ರ ಮತ್ತು ಇತರ ಗ್ರಂಥಗಳನ್ನು ಉಪಯೋಗಿಸಲು) ಸಂಸ್ಕೃತದೆಡೆ ದೃಷ್ಟಿ ಹಾಕಿದೆ ಎಂಬ ಶುಭ ಸಮಾಚಾರ.

* ಸಂಸೃತ ಕಲಿಯಲು ನೆರವಾಗಲು C.D.ROM ಗಳು ಮತ್ತು ಕಂಪ್ಯೂಟರ್‌ ಪ್ರೋಗ್ರಾಮ್‌ ಇವೆ. ಅತ್ಯಾಧುನಿಕವಾಗಿಯೂ ಸಂಸ್ಕೃತವು ಸುಸಜ್ಜಿತವಾಗಿದೆ.’

(ಮುಂದುವರಿಯುವುದು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more