ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ 5

By Staff
|
Google Oneindia Kannada News

*ಡಾ.‘ಜೀವಿ’ ಕುಲಕರ್ಣಿ

ವಿಶ್ವ ಕನ್ನಡ ಸಮ್ಮೇಳನ- ಮೂರನೆ ದಿನದ ಕಾರ್ಯಕ್ರಮ

Dr. G.V. with his grand daughters Rtusha and Aksharaರವಿವಾರ (2-8-2002) ಮುಂಜಾನೆ ನಾಗರಾಜರಾವ ಹವಾಲ್ದಾರ್‌ ಅವರ ಹಿಂದುಸ್ತಾನೀ ಶಾಸ್ತೀಯ ಸಂಗೀತದ ತರುವಾಯ ಸಾಹಿತ್ಯಿಕ ಕಾರ್ಯಕ್ರಮಗಳಿದ್ದವು. ‘ಓಕ್‌ಲ್ಯಾಂಡ್‌ ಸಭಾಗೃಹದಲ್ಲಿ ಹೊರನಾಡಿನಲ್ಲಿ ಕನ್ನಡದ ಮುನ್ನಡೆ’ ಎಂಬ ವಿಚಾರ ಸಂಕಿರಣ ನಡೆಯಿತು.

*

ನ್ಯೂಯಾರ್ಕ್‌ ಸ್ಟೇಟ್‌ ಯುನಿವರ್ಸಿಟಿಯಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ. ಎಸ್‌.ಎನ್‌.ಶ್ರೀಧರ್‌( ಡೈರೆಕ್ಟರ್‌, ಸೆಂಟರ್‌ ಫಾರ್‌ ಇಂಡಿಯನ್‌ ಸ್ಟಡೀಜ್‌ ಹಾಗೂ ಚೇರ್‌ಮನ್‌, ಡಿಪಾರ್ಟ್‌ಮೆಂಟ್‌ ಆಫ್‌ ಏಶಿಯನ್‌-ಅಮೇರಿಕನ್‌ ಸ್ಟಡೀಸ್‌) ಕೆಲವು ಸ್ಲೈಡ್‌ಗಳನ್ನು ತೋರಿಸಿದರು. ಸಮಯಾಭಾವದಿಂದ ಅದನ್ನು ಪೂರ್ತಿಗೋಳಿಸಲಾಗಲಿಲ್ಲ.

*

ಸಾಹಿತ್ಯಿಕ ಕಾರ್ಯಕ್ರಮಗಳ ಪ್ರಧಾನ ಸಂಘಟಕರಾದ ಎಂ.ಕೃಷ್ಣಪ್ಪ ಅವರು ಈ ಕಾರ್ಯಕ್ರಮಗಳ ಸೂತ್ರಧಾರರಾಗಿದ್ದರು. ಅಮೇರಿಕೆಯಲ್ಲಿ ಪ್ರಾರಂಭಗೊಂಡ ಪ್ರಥಮ ಕನ್ನಡ ಸಂಘವಾದ ಡೆಟ್ರಾಯಿಟ್‌ನ ಪಂಪ ಕನ್ನಡ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು. 1990 ರಲ್ಲಿ ‘ಕನ್ನಡ ಇನ್‌ಸ್ಟಿಟ್ಯೂಟ್‌ ಆಫ್‌ ಅಮೇರಿಕಾ’ ಪ್ರಾರಂಭಿಸಿದರು. ಅದರ ಅಧ್ಯಕ್ಷರಾದರು. ‘ಅಖಂಡ ಕನ್ನಡ’ ಎಂಬ ಅನಿಯತಕಾಲಿಕವನ್ನು ಪ್ರಾರಂಭಿಸಿದರು. 1996 ರಲ್ಲಿ ಅದರ ವಿಶೇಷ ಸಂಚಿಕೆಯನ್ನು ಹೊರತಂದರು. ಅಮೇರಿಕೆಯಲ್ಲೆಲ್ಲ ಕನ್ನಡ ಸಂಘಗಳನ್ನು ರೋಟರಿ ಮಾದರಿಯಲ್ಲಿ ಪ್ರಾರಂಭಿಸುವ ಕನಸು ಕಂಡು ಅದರ ಪ್ರಥಮ ಅಧ್ಯಾಯ(ಚಾಪ್ಟರ್‌) ಆದಿ ಕವಿ ಪಂಪನ ನೆನಪಿನಿಂದ ‘ಪಂಪ ಅಧ್ಯಾಯ’ವೆಂದು ಕರೆದರು. ಅವರು ವಿಚಾರ ಗೋಷ್ಠಿಯ ಪ್ರಾರಂಭದಲ್ಲಿ ಈ ವಿಚಾರಗಳನ್ನು ಪೀಠಿಕೆಯ ರೂಪದಲ್ಲಿ ಮಂಡಿಸುವವರಿದ್ದರು. ಆದರೆ ಸಮಯಾಭಾವದ ಮೂಲಕ ತಮ್ಮ ಮಾತು ಮೊಟಕುಗೊಳಿಸಿದರು.

*

‘ಹೊರನಾಡಿನಲ್ಲಿ ಕನ್ನಡದ ಮುನ್ನಡೆ’ ಎಂಬುದು ಮಹತ್ವದ ವಿಷಯ. ಮಂಡಿಸಿದವರು ಪ್ರೊ. ಎಸ್‌.ಎನ್‌.ಶ್ರೀಧರ್‌. ಚರ್ಚೆಯಲ್ಲಿ ಭಾಗವಹಿಸಿದವರು-
1) ಟಿ.ಎನ್‌.ಸೀತಾರಾಮ (ಟಿ.ವಿ. ಹಾಗೂ ಚಲನಚಿತ್ರ ಮಾಧ್ಯಮದಲ್ಲಿ ಹೆಸರುಮಾಡಿದವರು),
2) ರಮಾಕಾಂತ ಜೋಶಿ( ಪುಸ್ತಕ ಪ್ರಕಾಶಕರು),
3) ಎಸ್‌. ಕೆ .ಹರಿಹರೇಶ್ವರ ( ಅಮೇರಿಕನ್ನಡ ಪತ್ರಿಕೆಯ ಸಂಪಾದಕರು),
4) ವಿಜಯಕುಮಾರ (ಕೆನಡಾದ ಪ್ರತಿನಿಧಿಗಳು),
5) ಎಸ್‌.ಕೆ.ಶಾಮಸುಂದರ (ದಟ್ಸ್‌ಕನ್ನಡ.ಕಾಂ ಸಂಪಾದಕರು),
6) ಸಿ.ಸೋಮಶೇಖರ್‌ (ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು).

ಇವರಿಗೆಲ್ಲ ಭಾಷಣಕ್ಕೆ ಸಮಯ ಸಿಕ್ಕದ್ದು ಕೇವಲ ಮೂರು ನಿಮಿಷ. ಇದರಲ್ಲಿ ಹತ್ತು ಪುಸ್ತಕ/ಸಿಡಿಗಳ ಬಿಡುಗಡೆ ಕೂಡ ಸೇರಿತ್ತು.

*

ಈ ಸಭೆಯ ತರುವಾಯ ಒಂದು ಚಿಕ್ಕ ರೂಮಿನಲ್ಲಿ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮವಿತ್ತು. ಕೆಲವು ಲೇಖಕರು ಈ ಬಿಡುಗಡೆ ಪ್ರಧಾನ ಸಭಾಗೃಹದಲ್ಲಿ ಸಹಸ್ರಾರು ಜನರ ಮುಂದೆ ಆಗಬೇಕೆಂದು ಪಟ್ಟು ಹಿಡಿದರು. ಹೀಗಾಗಿ ಪುಸ್ತಕದ ಬಿಡುಗಡೆ ಎರಡು ಸಲ ಆಯಿತು. ಎರಡನೆಯ ಸಲ ಅವುಗಳ ಬಗ್ಗೆ ಪರಿಚಯಿಸಲು ಸ್ವಲ್ಪ ಅವಕಾಶವಿತ್ತು. ಮುಖ್ಯ ಸಭಾಗೃಹದಲ್ಲಿ ಹರಿಹರೇಶ್ವರರು ಪುಸ್ತಕ ಹಾಗೂ ಸಿ.ಡಿ.ಗಳ ಬಿಡುಗಡೆಯ ಕೆಲಸ ಬಹಳೇ ಚುರುಕಾಗಿ ನಿರ್ವಹಿಸಿದರು. ಅವುಗಳ ವಿವರ ಹೀಗಿದೆ.

1) ಕೃಷ್ಣಶಾಸ್ತ್ರಿ ಅವರ ‘ನೆನಪಿನ ದೃಶ್ಯಗಳು’
2) ಪಿ.ಎಸ್‌.ಬಾಲಕೃಷ್ಣನ್‌ ಅವರ ‘ಅಡುಗೆ ಮನೆಯಲ್ಲಿ ವಿಜ್ಞಾನ’
3) ಡಾ. ನಂಜುಂಡಸ್ವಾಮಿಯವರ ‘ಕಾನನದ ಮಲ್ಲಿಗೆ’ ವ್ಯಕ್ತಿಚಿತ್ರಗಳು
4) ಅದೇ ಲೇಖಕರ ‘ಸೈಲೆಂಟ್‌ ಮ್ಯುಸಿಕ್‌’
5) ರಾಶಿ ಮತ್ತು ಸಂಪತ್‌ ಅವರ ಮಂಕುತಿಮ್ಮನ ಕಗ್ಗದ ಆಂಗ್ಲ ಅನುವಾದ ’Dim Tims muses’
6) ಡಾ.ಚಂದ್ರಶೇಖರ ಅವರ ‘ಭಾರತದ ಬೃಹತ್‌ ಬೇಲಿ’
7) ಡಾ. ‘ಜೀವಿ’ ಕುಲಕರ್ಣಿ(ಮುಂಬಯಿ) ಅವರ ‘ಜೀವಿ ಕಂಡ ಅಮೇರಿಕಾ’
8) ಡಾ.ಎಂ.ಎಸ್‌.ನಟರಾಜ್‌ ಅವರ ‘ಮಧುಚಂದ್ರ, ಸಿರಿಕೇಂದ್ರ’
9) ಎಂ.ವಿ.ನಾಗರಾಜರಾವ್‌ ಅವರ ಸಿ.ಡಿ. ‘ಡಾ. ಶಿವರಾಮ ಕಾರಂತರ ಸಿರಿಗನ್ನಡ ಅರ್ಥಕೋಶ’
10) ವಿಮಲಾ ರಾಜಗೋಪಾಲ ಮತ್ತು ಎಲ್‌.ಜಿ.ಸೋದರಿಯರ ‘ನಾಡಪದಗಳು ಭಾಗ-1’ ಸಿ.ಡಿ.

*

ಇದೇ ಸಭೆಯಲ್ಲಿ ಕವಿ ನಿಸಾರ್‌ ಅಹಮದ್‌ ಅವರ ಭಾಷಣವೂ ಇತ್ತು. ‘ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವ’ ಎಂಬ ವಿಷಯವನ್ನು ಕುರಿತು ಅವರು ಮಾತಾಡಿದರು. ರೋಚಕ ಉದಾಹರಣೆಗಳಿಂದ ಪ್ರೇಕ್ಷಕರಲ್ಲಿ ನಗೆಯ ಬುಗ್ಗೆಯನ್ನು ಉಕ್ಕಿಸಿದರು.*

ಮನರಂಜನೆಯ ಕಾರ್ಯಕ್ರಮದಲ್ಲಿ ಹಲವು ಕಿರಿಯ ನಾಟಕಗಳು ಪ್ರಯೋಗಗೊಂಡವು. (ಪುಟ್ಟಯ್ಯ ಅವರ ‘ಹಾಸ್ಯ ಬೇಕರಿ’, ಪೂರ್ಣಿಮಾ ಮಲ್ಲಿಕಾರ್ಜುನರ ‘ಶಿವಕುಮಾರ ವಿಜಯ’, ಭವಾನಿ ರಾವ್‌ ಅವರ ‘ಅಮೇರಿಕೆಯಲ್ಲಿ ಹುಟ್ಟಿದ ಕನ್ನಡಿಗ’, ಶಾರದಾ ಅವರ ‘ನಮ್ಮ ಮೊಮ್ಮಗನ ಹೈಸ್ಕೂಲ್‌ ಪ್ರಾಜೆಕ್ಟು’, ಪ್ರಭಾಕರ ರಾವ್‌ ಅವರ ‘ಸಮಯಕ್ಕೆ ಒಂದು ಸಲಹೆ’ ಮುಂತಾದವು.) ಆದರೆ ಮಹತ್ವದ ಹಾಗೂ ಮಹತ್ವಾಕಾಂಕ್ಷಿ ನಾಟಕವೆಂದರೆ ಮೇರಿಲ್ಯಾಂಡ್‌ನ ಕಾವೇರಿ ಕನ್ನಡ ಬಳಗದವರು ಪ್ರಯೋಗಿಸಿದ, ಗಿರೀಶ ಕಾರ್ನಾಡರ ‘ಯಯಾತಿ’ ನಾಟಕ.

A still from Yayathi playಈ ನಾಟಕ ಗಂಭೀರವಾಗಿದ್ದರೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲು ಸಮರ್ಥವಾಗಿತ್ತು, ಇದು ಕಾರ್ನಾಡರ ಪ್ರಥಮ ನಾಟಕವಾಗಿದ್ದರೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡು ದೇಶ ವಿದೇಶಗಳಲ್ಲಿ ಪ್ರಯೋಗಗೊಂಡ ಪ್ರಸಿದ್ಧ ನಾಟಕ. ಇದನ್ನು ಸಮಯದ ಅಭಾವದ ಮೂಲಕ ಅರ್ಧಕ್ಕೇ ನಿಲ್ಲಿಸಲಾಯಿತು. ಪ್ರೇಕ್ಷಕರಿಂದ ಒತ್ತಾಯ ಬಂದಾಗ ಮತ್ತೆ ಹತ್ತು ನಿಮಿಷ ಹೆಚ್ಚಿಸಲಾಯಿತು. ದುರ್ದೈವದಿಂದ ನಾಟಕದ ‘ಕ್ಲೈಮ್ಯಾಕ್ಸ್‌’ ತಲುಪುವ ಮೊದಲೇ ನಾಟಕದ ಪರದೆ ಎಳೆಯಲಾಯಿತು.

ಅಸಂಖ್ಯ ಕಳಪೆ ಕಾರ್ಯಕ್ರಮಗಳಿಗೆ ಆಸ್ಪದ ಕೊಡುವ ಬದಲು ಇಂತಹ ಮಹತ್ವದ ನಾಟಕಕ್ಕೆ ಆಸ್ಪದ ಕೊಡಬೇಕೆಂಬ ಔಚಿತ್ಯ ಅಥವಾ ತಾರತಮ್ಯ ಜ್ಞಾನ ಸಂಯೋಜಕರಲ್ಲಿ ಇರಲಿಲ್ಲ ಎಂಬುದು ವಿಷಾದದ ಸಂಗತಿ. ಈ ನಾಟಕವನ್ನು ಸಮರ್ಥವಾಗಿ ದಿಗ್ದರ್ಶಿಸಿದವರು ಕಾರ್ನಡರ ಗರಡಿಯಲ್ಲಿ ಪಳಗಿದ ಮನೋಹರ ಕುಲಕರ್ಣಿಯವರು. ಪ್ರಮುಖ ಪಾತ್ರಗಳಲ್ಲಿ ಸಂಜಯ ರಾವ್‌(ಯಯಾತಿ), ಸುಮಾ ಮುರಲೀಧರ್‌ (ದೇವಯಾನಿ), ಭಾರತಿ ತ್ಯಾಗರಾಜ ( ಶರ್ಮಿಷ್ಠೆ), ಹಾಗೂ ಡಾ. ರವಿ ಹರಪನಹಳ್ಳಿ(ಪುರು) ಉತ್ತಮ ಅಭಿನಯ ನೀಡಿದರು.

*

ನೃತ್ಯ ಕಾರ್ಯಕ್ರಮಗಳಲ್ಲಿ ಅರಿಜೋನ ಕನ್ನಡ ವೃಂದದ ಆಶಾ ಗೋಪಾಲರ (ಆರತಿ ಸ್ಕೂಲಿನ) ‘ಚಿತ್ರಹಾರ’, ಭಾವನಾ ಮೂರ್ತಿಯವರ ‘ನವಿಲು ನೃತ್ಯ’ ಹಾಗೂ ‘ಕೊರವಂಜಿ ನೃತ್ಯ’, ಯಶೋದಾ ತಿಮ್ಮಯ್ಯ ಅವರ ‘ಭರತನಾಟ್ಯ’, ರಘುರಾಮ ಶೆಟ್ಟಿಯವರ ‘ಯಕ್ಷಗಾನ’, ಇಂದಿರಾ ಶಾಸ್ತಿಯವರ ‘ಜಾನಪದ ನೃತ್ಯ’, ಶ್ರೀಧರ್‌ ಹಾಗೂ ಅನುರಾಧಾ ಅವರ ‘ಶಾಸ್ತ್ರೀಯ ನೃತ್ಯ’ ಪ್ರಯೋಗಗೊಂಡವು. ಕೆಲವು ನೃತ್ಯಗಳು ಅವಿಸ್ಮರಣೀಯವಾಗಿದ್ದವು. ವಲ್ಲೀಶ ಶಾಸ್ತ್ರಿಗಳು ನಿರ್ದೇಶಿಸಿದ ದಕ್ಷಿಣ ಕ್ಯಾಲಿಫೋರ್ನಿಯಾದ ‘ಜಡೆ ಕೋಲಾಟ’ ಚೆನ್ನಾಗಿತ್ತು. ಇದರಲ್ಲಿ ಒಂಭತ್ತು ನರ್ತಕಿಯರು ಕೋಲಾಟವಾಡುತ್ತ ಒಂಭತ್ತು ಸೀರೆಗಳನ್ನು ಜಡೆಯಂತೆ ಹೆಣೆಯುತ್ತಾರೆ. ಇನ್ನೊಂದು ಹಾಡಿಗೆ ಜಡೆಯನ್ನು ಬಿಡಿಸುತ್ತಾರೆ. ಇದೊಂದು ಜಾನಪದದ ವೈಶಿಷ್ಟ್ಯವಾಗಿತ್ತು.

*

ಹ್ಯೂಸ್ಟನ್‌ ಕನ್ನಡ ಕೂಟದ ಸದಸ್ಯರು ಪ್ರಯೋಗಿಸಿದ ‘ಜಾನಪದ ಸೊಬಗು’ ಎಂಬ ನೃತ್ಯ ಸೊಗಸಾಗಿತ್ತು. ಅದರಲ್ಲಿ ಸೋಲಿಗರ ಕಂಸಾಳೆ, ಸುಗ್ಗಿ ಕುಣಿತ, ಕಂಸಾಳೆ ನೃತ್ಯ ಸೇರಿತ್ತು. ಇದರಲ್ಲಿ ವಯೋವೃದ್ಧರೂ ಸಂಘದ ಅಧ್ಯಕ್ಷರೂ ಆದ ಜಯರಾಮ ನಾಡಿಗರೂ ಯುವಕರ ಉತ್ಸಾಹ ಪ್ರದರ್ಶಿಸುತ್ತ ಭಾಗವಹಿಸಿದ್ದರು. ಇದರ ದಿಗ್ದರ್ಶನವನ್ನು ನಾಟ್ಯವಿಶಾರದೆ ಯಮುನಾ ಕೃಷ್ಣೇಗೌಡ ಅವರು ಸಮರ್ಥವಾಗಿ ಮಾಡಿದ್ದರಲ್ಲದೇ ತಾವೂ ಭಾಗವಹಿಸಿದ್ದರು.

*

ಬೆಂಗಳೂರಿನ ಪ್ರಸಿದ್ಧ ಕಲಾವಿದೆಯರಾದ ಪದ್ಮಿನಿ ರವಿ ಹಾಗೂ ನಂದಿನಿ ಆಳ್ವ ಅವರು ‘ಪಟ್ಟದಕಲ್ಲು’ ಎಂಬ ಆಕರ್ಷಕ ನೃತ್ಯರೂಪಕ ಪ್ರಯೋಗಿಸಿದರು. ಚಾಲುಕ್ಯ ಶಿಲ್ಪದ ಶಿಖರ ಸಾಧನೆ ಪಟ್ಟದಕಲ್ಲಿನ ದೇವಾಲಯಗಳಲ್ಲಿ ದೊರೆಯುತ್ತದೆ. ಹರಿ-ಹರ ಒಂದೆಂಬುದನ್ನು ಅಲ್ಲಿಯ ಶಿಲ್ಪ ತೋರುತ್ತದೆ. ಅದೇ ಭಾವನೆಯನ್ನು ಪ್ರತಿಬಿಂಬಿಸುವ ನೃತ್ಯ ರೂಪಕವಿದು.

*

ಅಮೇರಿಕೆಯಲ್ಲಿದ್ದೂ ಭರತನಾಟ್ಯ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದವರು ಇಟ್ಟಗಿ ಪರಿವಾರದವರು. ಉಮಾ ಅವರ ಹಿರಿತನದಲ್ಲಿ ಸರಿಣಿ ಹಾಗೂ ರಂಜನಿ ಅವರು ಪಡೆದ ನೃತ್ಯದ ತರಬೇತಿಯ ಸಾಫಲ್ಯವನ್ನು ‘ನಾದಪ್ರಿಯ ಶಿವನೆಂಬರು’ ಎಂಬ ಬಸವೇಶ್ವರರ ವಚನಕ್ಕೆ ಅಳವಡಿಸಿದ ನೃತ್ಯ ರೂಪಕ ತೋರಿಸಿತ್ತು, ಇದು ಆಕರ್ಷಕವಾಗಿತ್ತು.

*

ಇನ್ನು ಸಂಗೀತದಲ್ಲಿ ಕ್ಯಾಲಿಫೋರ್ನಿಯಾದ ನಚಿಕೇತ ಶರ್ಮಾ, ಪೂನಂ, ಗಾರ್ಗಿ ಹಾಗೂ ಸಂಗಡಿಗರು ಕನ್ನಡ ಭಾವಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಬೆಂಗಳೂರಿನ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ನಿಖಿಲ್‌ ಜೋಶಿ ಪಾಶ್ಚಾತ್ಯ ಸಂಗೀತದ ವಾದ್ಯವಾದ ಗಿಟಾರ್‌ ನುಡಿಸಿ ಕರ್ನಾಟಕ ಸಂಗೀತದ ಸುಧೆಯನ್ನು ಹರಿಸಿದ. ದೇಶವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ ನಿಖಿಲ ಬಾಲ್ಯದಲ್ಲಿಯೇ ತನ್ನ ಪ್ರತಿಭೆ ತೋರಿದ ಸಂಗೀತಪಟು. ಈಗಾಗಲೇ ಅವನ ಹಲವು ಕ್ಯಾಸೆಟ್‌ ಹೊರಬಂದಿವೆ.

*

ಮುಖ್ಯ ಸಭಾಗೃಹದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಒಂದನೆಯ ಹಾಗೂ ಎರಡನೆಯ ಮಾಳಿಗೆಯ ಮೇಲೆ ಇದ್ದ ಕೋಣೆಗಳಲ್ಲಿ ‘ಸಮಾಂತರ ಕಾರ್ಯಕ್ರಮ’ ನಡೆಯುತ್ತಲೇ ಇದ್ದವು. ಆಸಕ್ತರು ಮಾತ್ರ ಆ ಕಡೆ ಹೋಗುತ್ತಿದ್ದರು. ಬೆಳಿಗ್ಗೆ ಪ್ರತಿನಿಧಿಗಳು ಇಳಿದುಕೊಂಡ ಹೊಟೇಲಿನಲ್ಲಿಯೇ ಯೋಗಾಭ್ಯಾಸ ಪ್ರಾರಂಭವಾಗುತ್ತಿತ್ತು. ಮಹಿಳೆಯರ ಕಾರ್ಯಕ್ರಮ, ಬಾಲಕರ ಲೇಖನ, ಭಾಷಣ ಸ್ಪರ್ಧೆಗಳು, ಹಳೆಯ ವಿದ್ಯಾರ್ಥಿಗಳ ಬಳಗದ ಸಭೆ (ಆರ್‌ವಿಸಿಇ ಕಾಲೇಜು, ಮೈಸೂರು ವೆಟರಿನರಿ ಕಾಲೇಜು ಮುಂ.), ಧಾರ್ಮಿಕ ಹಾಗೂ ವೈದಿಕ ಚರ್ಚೆ, ‘ಆರ್ಟ್‌ ಆಫ್‌ ಲಿವಿಂಗ್‌’, ವಧೂವರರ ನೋಂದಣಿ (ನೂರಾರು ವಧುಗಳ ಲಿಸ್ಟ್‌ ತಯಾರಿತ್ತು. ಆದರೆ ಹತ್ತಾರು ವರಗಳು ಮಾತ್ರ ಮದುವೆಗೆ ಸಿದ್ಧರಿದ್ದರು; ‘ಸ್ವಯಂವರ’ದ ಬದಲು ‘ಸ್ವಯಂವಧು’ ಶುರುಮಾಡಬೇಕಾದೀತೆಂಬ ಭಯ ಆಯೋಜಕರನ್ನು ಕಾಡಿತ್ತು.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X