ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವತ್ತು ಕಿಟ್ಟಲ್ ಇಲ್ಲದೇ ಇದ್ರೂ ವಿಟ್ಠಲ್ ಇದಾರಲ್ಲ?

By Staff
|
Google Oneindia Kannada News


ಇವತ್ತು ಕಿಟ್ಟಲ್ ಇಲ್ಲದೇ ಇದ್ರೂ ವಿಟ್ಠಲ್ ಇದಾರಲ್ಲ?-Image courtesy : Wikipedia 1832ರಿಂದ 1903ರವರೆಗೆ ಬದುಕಿದ್ದ ಜರ್ಮನ್ ಮೂಲದ ಡಾ. ರೆವರೆಂಡ್ ಫರ್ಡಿನೆಂಡ್ ಕಿಟ್ಟಲ್ ರಚಿಸಿದ ಕನ್ನಡ-ಇಂಗ್ಲೀಷ್ ಪದಕೋಶದ ಇತ್ತೀಚೆಗೆ ವಿ.ಕ.ವರದಿ ಮಾಡಿದೆ. ಜರ್ಮನಿ ಕಿಟ್ಟಲ್ಲು ಮತ್ತೆ ಕನ್ನಡದ ವಿಟ್ಠಲ್ಲು - ಇವರಿಬ್ಬರ ಬಗ್ಗೆ ಇವತ್ತು ಗಮನ ಹರಿಸೋಣ.

ಬೇರೆಬೇರೆ ಪ್ರದೇಶಗಳಲ್ಲಿದ್ದ ಕನ್ನಡಿಗರು ಬಳಸೋ ಪದಗಳ್ನೆಲ್ಲಾ ಒಗ್ಗೂಡಿಸಿ ಒಂದೇ ನಿಘಂಟು ಬರೆದ ಕಿಟ್ಟಲ್ ಒಂದು ರೀತಿಯ ಕನ್ನಡ ಪದಗಳ ಏಕೀಕರಣದ ಹರಿಕಾರ ಅಂದ್ರೆ ತಪ್ಪಾಗಲಾರದೋ ಏನೋ. ಕ್ರಿ.ಶ. 900ರಿಂದ 1894ರವರೆಗೆ 11ಶತಮಾನಗಳ ಕಾಲ ಬಳಕೆಯಲ್ಲಿದ್ದ ಕನ್ನಡದ ಮಾಹಿತಿಗಳನ್ನು, ಯಾವುದೇ ಸರಿಯಾದ ಸೌಕರ್ಯಗಳಿರದಿದ್ದ ಆ ಸಮಯದಲ್ಲಿ, ಹರಿದು-ಹಂಚಿ ಹೋಗಿದ್ದ ಅಂದಿನ ಕರ್ನಾಟಕದ ಹಳ್ಳಿ-ಹಳ್ಳಿಗೆ ಎಡತಾಕಿ, ಕೆದಕಿ, ಪದಗಳನ್ನು ಹೆಕ್ಕಿ-ಒಂದು ಗೂಡಿಸಿ ಮಂದಿನ ಕನ್ನಡದ ಪೀಳಿಗೆಗೆ ಬಿಟ್ಟು ಹೋದ ಆ ಆಸ್ತಿ ದೊಡ್ಡದು ಗುರು! ಅಂದಿನ ಬ್ರಿಟೀಷ್ ದಿನಗಳಲ್ಲಿ ಪರೋಕ್ಷವಾಗಿ ಇದು ಹಲವರಿಗೆ ಕನ್ನಡ ಕಲಿಯುವ-ಕಲಿಸುವ ಸಾಧನವಾಗಿತ್ತು.

ಕಿಟ್ಟಲ್ ಆದಮೇಲೆ ಹೊಸ ಕನ್ನಡದ ಪದಕೋಶಗಳು ಹಲವು ಬಂದಿವೆ. ಆದರೆ ಅವುಗಳಿಗೆ ಕನ್ನಡಿಗರ ಬಾಯಲ್ಲಿ ಓಡಾಡುತ್ತಿರೋ ಎಷ್ಟೋಂದು ಎರವಲು ಪದಗಳ್ನ ದೂರ ಇಡಬೇಕು ಅನ್ನೋ ಮಡಿವಂತಿಕೆ , ಇಲ್ಲವೇ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಬಳಕೆಯಲ್ಲಿರೋ ಪದಗಳನ್ನೂ (ಮತ್ತು ಅವುಗಳಿಗೆ ಇರಬೋದಾದ ಬೇರೆಬೇರೆ ಅರ್ಥಗಳನ್ನು) ಸೇರಿಸಿಕೊಳ್ಳದಿರುವಿಕೆ, ಮತ್ತು ಸಂಸ್ಕೃತದ ಹಂಗು ಸ್ವಲ್ಪ ಹೆಚ್ಚಾಗಿರೋದು - ಈ ಮೂರು ದೋಷಗಳಿವೆ. ಬಸ್ಸು, ಕಾರು, ಇಂಕು, ಬಾಲು, ಬೆಲ್ಟು, ಮೊಬೈಲು, ಲವ್ - ಹೀಗೆ ಇಂದು ಪ್ರಚಲಿತದಲ್ಲಿರುವ ಪದಗಳನ್ನು ಕನ್ನಡ ಪದಗಳು ಅಂತ ಕರಿಯಕ್ಕೆ ಯಾಕೋ ನಮ್ಮೋರಿಗೆ ಮುಜುಗರ!

ಧರ್ಮ, ಪ್ರದೇಶ ಮತ್ತು ಮಡಿವಂತಿಕೆಗಳೆಂಬ ಮೂರು ಗೋಡೆಗಳನ್ನು ಒಡೆದು ಕನ್ನಡ ಪದಗಳ ಏಕೀಕರಣ ಒಂದು ನಿಜವಾದ ಕನ್ನಡದ ನಿಘಂಟಲ್ಲಿ ಆಗಬೇಕಿದೆ ಗುರು! ಇದನ್ನ ಮಾಡಕ್ಕೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿರೋ ವಿಟ್ಠಲ್ಗಳು ಜರ್ಮನಿಯಿಂದ ಕಿಟ್ಟಲ್ಲಂಥಾ ಮಹಾನುಭಾವ ಇನ್ನೂ ಬಂದಿಲ್ಲ ಅಂತ ಕೈಮೇಲೆ ಕೈಯಿಟ್ಟುಕೊಂಡು ಕೂತ್ಕೋಬೇಕಾಗಿಲ್ಲ ಗುರು!

ಕೊನೆ ಹನಿ : ಇಲ್ಲಿ ಸೂಚಿಸಿರೋ ವಿಟ್ಠಲ್ ಅನ್ನೋ ಹೆಸ್ರು ಸುಮ್ನೆ ಪ್ರಾಸಕಿತಾಪತಿಗೆ ಮಾತ್ರ. ಆ ಹೆಸರಿನ ಯಾರಾದರೂ ನಮ್ಮ ವಿ.ವಿ.ಗಳಲ್ಲಿದ್ದರೆ ಆಕಸ್ಮಿಕ.

(ಸ್ನೇಹಸೇತು :ಏನ್ ಗುರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X