ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಂತರಾಳ’ ಪಿಶಾಚಿಗಳ ತಲ್ಲಣದ ಜಗತ್ತಿನಲ್ಲಿ ...

By Staff
|
Google Oneindia Kannada News

ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯ

ಸ್ವಾತಂತ್ರ ಬಂದು ಹತ್ತಿಪ್ಪತ್ತು ವರ್ಷಗಳನ್ನು ಕಳೆದ ಭಾರತದ ಪರಿಸ್ಥಿತಿ. ಅಲ್ಲೊಬ್ಬ ಮಾಸ್ತರರು. ಊರಿಗೆಲ್ಲ ಅವರು ಪೂಜಾರ ಮಾಸ್ತರರು ಎಂದೇ ಪ್ರಿಯ. ಮಹಾ ಗಾಂಧೀವಾದಿಗಳು. ಸ್ವಲ್ಪ ಹೆಚ್ಚೇ ಎನ್ನಿಸುವಷ್ಟು. ದೇಶದ ಬಿಡುಗಡೆಗಾಗಿ ಹೋರಾಡಿದವರೂ ಕೂಡ. ಇಂತಹ ಮಾಸ್ತರರಿಗೆ ಕೆಲವು ಸಂದಿಗ್ಧಗಳು ಬರುತ್ತವೆ. ಒಂದು, ಮನೆ ಪಾಠ ಮಾಡಬೇಕೇ, ಬೇಡವೇ ಎಂದು. ಮನೆಯಲ್ಲಿ ಕಾಹಿಲೆ ಬಿದ್ದ ಹೆಂಡತಿ; ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದಿಂದ ಪುಣೆಗೆ ಕರೆದೊಯ್ಯಬೇಕಾಗಿದೆ. ಐ. ಎ. ಎಸ್‌ ಓದುವ ಆಕಾಂಕ್ಷೆಯಲ್ಲಿ ಓದಿನೆಡೆಗೆ ಮಗ್ನನಾಗಿರುವ ಮಗನ ಖರ್ಚು ವೆಚ್ಚಗಳು, ವಿಧವೆಯಾಗಿ ಮನೆ ಸೇರಿದ ಮಗಳು. ಗಾಂಧೀಜಿಯವರನ್ನು ಮನೆ ಪಾಠ ಮಾಡಬಹುದೋ ಬೇಡವೋ ಎಂದು ಕೇಳಿದ್ದರೆ ಏನು ಹೇಳುತ್ತಿದ್ದರು ಎಂದು ಯೋಚಿಸುತ್ತಾರೆ. ಪಾಲಿಸುತ್ತಾ ಬಂದ ಆತ್ಮಶಕ್ತಿಯ ನಿರ್ಘಾತ ಒಂದು ಕಡೆ. ಮನೆಯ ಅನಿವಾರ್ಯತೆ ಮತ್ತೊಂದೆಡೆ. ಕೊನೆಗೆ ಸಂದರ್ಭಕ್ಕೆ ಶರಣಾಗಿ ಬಡಮಕ್ಕಳಿಂದ ಹಣ ತೆಗೆದುಕೊಳ್ಳುವುದಿಲ್ಲ ಎನ್ನುವ ಎಕ್ಸೆಪ್ಷನ್‌ನೊಂದಿಗೆ ಮನೆ ಪಾಠ ಶುರುಮಾಡುತ್ತಾರೆ.

ಮತ್ತೊಂದು, ಮಾಸ್ತರರ ಆತ್ಮೀಯ ಶಿಷ್ಯ ಮರಾಠಾ ಕ್ಷತ್ರಿಯ ಹುಡುಗ ವಿಕ್ರಮ್‌ ಒಬ್ಬ ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿ ಎಂತಹ ಉತ್ಕೃಮಣಕ್ಕೆ ಹೋಗುತ್ತದೆ ಎಂದರೆ ಈ ಅಂತರಜಾತೀಯ ವಿವಾಹವನ್ನು ವಿರೋಧಿಸಿ ಹುಡುಗನ ರಾಣೇ ಕುಟುಂಬವೇ ಒಡೆದುಹೋಗುತ್ತದೆ. ಹುಡುಗ ಮಾಸ್ತರರ ಬಳಿ ಬರುತ್ತಾನೆ, ಆಶೀರ್ವಾದಕ್ಕೆ.

'ತಮ್ಮಾ, ಈ ಪ್ರೀತಿ; ನಾಟಕ ಸಿನೆಮಾಗಳಿಂದ ಬಂದ ಈ ಪ್ರೀತಿ ಭಾಳ ದಿನ ನಡೆಯೋದಿಲ್ಲ. ಕೊನೆಗೆ ಈ ದೈನಂದಿನ ವ್ಯವಹಾರಗಳೇ ಮುಖ್ಯವಾಗುತ್ತವೆ. ಬ್ರಾಹ್ಮಣ ಸಂಸ್ಕೃತಿ ಎಲ್ಲಿ, ನಿಮ್ಮ ಕ್ಷತ್ರಿಯ ಸಂಸ್ಕೃತಿ ಎಲ್ಲಿ....? ತಾತ್ವಿಕವಾಗಿ ಎಲ್ಲಾ ಬರೋಬರಿ, ಆದರೆ ನಿನ್ನ ವೈಯುಕ್ತಿಕ ಪ್ರಶ್ನೆ ತಗೊಂಡರ- ಇಡೀ ಜೀವನದ ಪ್ರಶ್ನೆ ತಗೊಂಡರ, ಎರಡು ಸಂಸ್ಕೃತಿಗಳ ಪ್ರಶ್ನೆ ತಗೊಂಡರ, ನಿಮಗಾಗೋ ಮಕ್ಕಳ ಪ್ರಶ್ನೆ ತಗೊಂಡರ....."

ಆದರೆ ಮದುವೆ ನಡೆದುಹೋಗುತ್ತದೆ.

ಇನ್ನೊಂದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂತವರಿಗಾಗಿ ಸರಕಾರ 'ಪೊಲಿಟಿಕಲ್‌ ಸಫರರ್‌" ಅರ್ಥದಲ್ಲಿ ತಿಂಗಳಿಗೆ ರೂ.150 ಪೆನ್ಷನ್‌ ಕೊಡಲು ಮುಂದಾದಾಗ ಮಾಸ್ತರರು ಮೊದಲು ನಿರಾಕರಿಸುತ್ತಾರೆ. 'ಈ ಪೆನ್ಷನ್‌ ಕೊಟ್ಟು ನಾವು ನಮ್ಮ ಸ್ವಾಂತಸುಖಾಯ ಮಾಡಿದ ತ್ಯಾಗಕ್ಕೆ ಅರ್ಥವಿಲ್ಲದೇ ಇರೋಹಾಗೆ ಮಾಡ್ತಾ ಇದ್ದಾರೆ. ಈಗ ನಮ್ಮ ಆ ತ್ಯಾಗ ಮಾರ್ಕೆಟ್‌ನಲ್ಲಿ ಮಾರುವ ವಸ್ತುವಾಗಿದೆ. ಆತ ಬರೇ ಆರು ತಿಂಗಳು ಜೈಲಿನಲ್ಲಿದ್ದ, ನಾನು ಎರಡು ವರ್ಷ ಜೈಲಿನಲ್ಲಿದ್ದೆ, ನನಗೇ ಹೆಚ್ಚಿನ ಪೆನ್‌ಶನ್‌ ಸಿಗಬೇಕು ಎಂದು ಪೈಪೋಟಿ ಶುರುವಾಗಿದೆ. ಆಮೇಲೆ, ಮಾರ್ಕೆಟ್‌ ಅಂತ ಆದಮೇಲೆ ಬನಾವಟ ಸರಕುಗಳಿಗೇನು ಕಡಿಮೆ?".

ಕೊನೆಗೆ ಪೆನ್ಷನ್‌ ತೆಗೆದುಕೊಳ್ಳುತ್ತಾರೆ.

ಶಾಂತಿನಾಥ ದೇಸಾಯಿಯವರ 'ಅಂತರಾಳ" ಕಾದಂಬರಿಯ ಒಂದು ಪಾತ್ರದ ತಲ್ಲಣವಿದು. ಇಡೀ ಕಾದಂಬರಿಯೇ ಈ ತರಹದ ತಲ್ಲಣಗಳಿಂದ ತುಂಬಿಹೋಗಿದೆ. ಬದಲಾದ ಯುಗದಲ್ಲಿ ಬದಲಾಗದವರ ಕಥೆಯಿದು. ಬದಲಾದ ಯುಗದಲ್ಲಿ ಲೋಕದ ಗತಿಗಿಂತಲೂ ವೇಗದಲ್ಲಿ ಬದಲಾದವರ ಕಥೆಯಿದು. ಬದಲಾದ ಯುಗದಲ್ಲಿ ಯುಗಕ್ಕಿಂತಾ ಭಿನ್ನರೀತಿಯಲ್ಲಿ ಬದಲಾದವರ ಕಥೆಯಿದು.

ಬದಲಾದ ಕಾಲದೊಂದಿಗೆ ಹೊಂದಿಕೊಳ್ಳಲಾಗದ ಸಮಸ್ಯೆ ವ್ಯಕ್ತಿಗೇ ಸೀಮಿತವಾಗುವುದಿಲ್ಲ. ಸಮಾಜ ದೇಶಕ್ಕೂ ಅನ್ವಯವಾಗುತ್ತದೆ. 'ಅಂತರಾಳ" ದೇಶದ ಅಂತರಾಳವನ್ನೂ ಕೆದಕುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದು ನಿಂತ ಕವಲುದಾರಿಗಳನ್ನು ಹಾಗೂ ಆ ಕವಲುದಾರಿಗಳು ತಲುಪಿಸಬಹುದಾಗಿದ್ದ ಮಹೋತ್ತರಗಳನ್ನು ಸ್ವೋಪಜ್ಞತೆಯಿಂದ ವಿಶ್ಲೇಷಿಸುತ್ತದೆ. ಒಂದು ಕಡೆ, ಯಂತ್ರ ನಾಗರೀಕತೆಗೆ ಅದರ ಮಾಯಾಜಾಲಗಳಿಗೆ ಯಾವ ರೀತಿಯಲ್ಲೂ ಶರಣಾಗದಂತೆ ಪ್ರಜೆಗಳನ್ನು ಸ್ವಾವಲಂಬಿಗಳನ್ನಾಗಿಸಿ ದೇಶವನ್ನು ಆ ಮೂಲಕ ತನ್ನಂತೆಯೇ ಯೋಗಿಯನ್ನಾಗಿಸುತ್ತೇನೆ ಎಂಬ ದೃಢ ಪ್ರಜ್ಞೆಯ ಮಹಾತ್ಮಗಾಂಧಿ, ಇನ್ನೊಂದೆಡೆ, ಯಂತ್ರನಾಗರೀಕತೆಯೇ ಸರ್ವಸ್ವವಾಗಿ ಅದರಿಂದ ವಿನಾಶದ ಮಹಾಯುದ್ಧಗಳಾದರೂ ಮತ್ಯಾವ ಹಾದಿಯೂ ತಿಳಿಯದು ಎನ್ನುವಂತೆ ಅದೇ ಹಾದಿಯಲ್ಲಿ ನಾಗಾಲೋಟದ ಪಶ್ಚಿಮ; ರಾಮ-ರಹೀಮ ಒಂದೇ ಎಂದು ಜನರನ್ನು ನಂಬಿಸುವ ಪ್ರವರ್ತಕರೂಪಿ ಗಾಂಧೀಜಿ, ರಹೀಮ ಮಾತ್ರ ಎಂದು ಪಶ್ಚಿಮ ಗಡಿಯಲ್ಲಿ ಹಿಂಸಾಚಾರಕ್ಕಿಳಿದ ಪಾಕಿಸ್ತಾನ, ಭಾಷೆ ಸಾವಿರ, ದೇಶ ಸಾವಿರ, ರಾಷ್ಟ್ರ ಕಲ್ಪನೆ ಸಾವಿರದ ಜನಸಾಗರವನ್ನು ಹೊತ್ತು ನೆಹರು ಏನು ಮಾಡಬೇಕಿತ್ತು ? ನಿರಕ್ಷರಿಗಳು ತುಂಬಿ ತುಳುಕಾಡುತ್ತಿದ್ದ ನಾಡಿನಲ್ಲಿ ಡೆಮಾಕ್ರಸಿ ಹೇಗೆ ಸಾಧ್ಯ? ಕಮ್ಯುನಿಸ್ಟರಿದ್ದರೂ ಅವರದೂ ಅದೇ ಕತೆ. ಯಾವ ಜವಾಬ್ದಾರಿಯೂ ಇಲ್ಲದೆ ರಸ್ತೆಯ ಮೇಲೆ ಆಡಿಕೊಂಡಿದ್ದ ಹುಡುಗನಿಗೆ ಇದ್ದಕ್ಕಿದ್ದಂತೆ ಮನೆಯ ಯಜಮಾನಿಕೆಯನ್ನು ಕೊಟ್ಟಂತೆ ದೇಶದ ಸ್ಥಿತಿ.

ಹೀಗೆ, ದಿಢೀರನೆ ಬಂದ ಸ್ವಾತಂತ್ರ್ಯವನ್ನು ಗಾಂಧೀ ಮಂದಿ ಹೇಗೆ ಸ್ವೀಕರಿಸಿದರು, ನೆಹರೂ ಕುಟುಂಬ ಹೇಗೆ ತಿರುಚಿಕೊಂಡಿತು ಮುಂತಾದ ರಾಜಕೀಯ ಅಸ್ಥಿರ ನೆಲೆಯಿಂದ ಹಿಡಿದು ದೇಶದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಜಾತೀಯತೆಯಿಂದಾದ ಸಮಾಜದ ವಿಘಟನೆಯವರೆಗಿನ ಒಂದು ಕಾಲ ಘಟ್ಟದ ಸಂಪೂರ್ಣ ಚಿತ್ರಣ ನಮಗೆ 'ಅಂತರಾಳ"ದಲ್ಲಿ ಸಿಗುತ್ತದೆ.

ಸ್ಥಿತ್ಯಂತರ ಕಾಲದಲ್ಲಿನ ವೇದನೆ ಬಲು ದಟ್ಟವಾದರೂ ಬಹುಪಾಲು ಮೂಕವಾದುದು. ಅಲ್ಲೆಲ್ಲೋ ಭೈರಪ್ಪನವರ ವಂಶವೃಕ್ಷ, ಮತ್ತೆಲ್ಲೋ ಕಾರಂತರ ಆತ್ಮಚರಿತ್ರೆ ಇನ್ನೆಲ್ಲೋ ದೇಸಾಯಿಯವರ 'ಅಂತರಾಳ"ಗಳನ್ನು ಬಿಟ್ಟರೆ ಬದಲಾದ ಕಾಲದ ಹೊಸಿಲಿನ ಮೇಲೆ ನಿಂತು ಸಮಚಿತ್ತದಿಂದ ಎರಡೂ ಕಡೆ ನೋಡಿದವರು ಕಡಿಮೆ. ಒಂದು ಕಡೆ, ನೆಹರೂ ಆಡಳಿತದಿಂದ ಬೇಸತ್ತ ಕಮ್ಯೂನಿಸ್ಟರು ಕ್ರಾಂತಿ ಮಾಡುತ್ತೇವೆಂದು ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಭಯಂಕರವಾಗಿ 'ಜನ ಸೇರಿಸೋ" ಕೆಲಸ ಮಾಡುತ್ತಿರುವಾಗ, ಆ ತರಹದ ಕಮ್ಯೂನಿಸ್ಟ್‌ ತತ್ವಗಳಿಗೆ ಮಾರು ಹೋಗಿ ಮನೆಬಿಟ್ಟು ಹೋದ ಮಗನನ್ನು ಕುರಿತು ತಂದೆಯಾಬ್ಬ ಹೀಗೆ ಹೇಳುತ್ತಾನೆ: 'ನಮ್ಮ ಗೋವಿಂದ ಕಮ್ಯೂನಿಸ್ಟ್‌-ಪಮ್ಯೂನಿಸ್ಟ್‌ ಆದದ್ದರ ಬಗ್ಗೆ ನನಗೇನೂ ಅನ್ನಿಸೋದಿಲ್ಲ. ಆದರೆ ಆತ ಮನೀ ಬಗ್ಗೆ ಇಷ್ಟೊಂದು ತಿರಸ್ಕಾರ ತೋರಿಸಿದರೆ ಏನುಪಯೋಗ ಈ ಕಮ್ಯೂನಿಸಮ್ಮದ್ದು? ಸಮಾಜಕ್ಕೆ ಫ್ಯಾಮಿಲಿನೇ ಯೂನಿಟ್ಟಲ್ಲವೇ? ಅವರೇನು ಈ ಕುಟುಂಬದ ಘಟಕವನ್ನೇ ಮುರಿದು ಮೂರಾಬಟ್ಟೆ ಮಾಡಬೇಕೆನ್ನುತ್ತಾರೇನು ಸೂಳೆಮಕ್ಕಳು? ಎಲ್ಲರೂ ದೇಶದ ಸರಕಾರದ ಮಕ್ಕಳು. ಅಪ್ಪ-ಅವ್ವ ಅಂದರೆ ಬರೇ ಮಕ್ಕಳನ್ನು ಹುಟ್ಟಿಸುವ ಯಂತ್ರಗಳೇನು?"

ದೇಶ ಮತ್ತು ಸಮಾಜವನ್ನು ಪ್ರಶ್ನಿಸುತ್ತಲೇ ದೇಸಾಯಿಯವರು ವ್ಯಕ್ತಿಯ ಅಂತರಾಳಕ್ಕೆ ಇಳಿದುಬಿಡುತ್ತಾರೆ. ಹೊರಗಿನ ಸಮಸ್ಯೆಯಾಂದನ್ನು ಹೇಳುತ್ತಲೇ ಒಳಗೆಲ್ಲೋ ಕಡಗೋಲಿನಲ್ಲಿ ಕಡೆದಿರುತ್ತಾರೆ. ವ್ಯಕ್ತಿಗತವಾದ ಆತ್ಮಶ್ರೇಷ್ಟತೆಯ ನಿಲುವುಗಳು, ದಿಟ್ಟತೆಗಳು ತಾತ್ವಿಕ ಪಾತಳಿಯನ್ನು ದಾಟಿ ಬಾಳಿನ ನಮ್ಮ ಪರಿಕಲ್ಪನೆಯ ಎಳೆ ಎಳೆಗಳನ್ನು ಶೋಧಿಸುತ್ತವೆ. ಫ್ರಾಯ್ಡ್‌, ಮಾರ್ಕ್ಸ್‌, ಗಾಂಧಿ, ವಿನೋಬಾ, ಲೋಹಿಯಾ, ಎಂ.ಎನ್‌.ರಾಯ್‌ ಹೀಗೆ ಸಮಾಜಕ್ಕೆ ದಿಕ್ಕುತೋರಿದವರ ಬೆಳಕಲ್ಲೇ ವ್ಯಕ್ತಿಗತ ಬದುಕಿನ ವಿಹ್ವಲತೆಯನ್ನೂ ಶಾಂತಿನಾಥ ದೇಸಾಯಿಯವರು ಹಿಡಿಯಲು ನೋಡುತ್ತಾರೆ. ಜೀವನ ನಮ್ಮ ಕಲ್ಪನೆಗಿಂತಲೂ ಬಲು ವಿಸ್ತಾರವಾದುದು ಮತ್ತು ತೀರಾ ನಿಗೂಢವಾದುದು. ಆದರ್ಶ ಯಾವ ಮಜಲಲ್ಲಿ ಪ್ರಾರಂಭವಾದರೂ ಎಷ್ಟೇ ದೃಢತೆಯ ದೇಹವನ್ನು ಹೊಂದಿದ್ದರೂ ಅದು, ವ್ಯಕ್ತಿಗತವಾದ ದುಃಖ ದುಮ್ಮಾನಗಳು ಮತ್ತು ದಿನನಿತ್ಯದ ಆಗುಹೋಗುಗಳ ಮೇಲಿನ ಅದರ ಪರಿಣಾಮಗಳಿಂದ ತನ್ನ ಆಯಸ್ಸನ್ನು ನಿರ್ಧರಿಸಿಕೊಳ್ಳುತ್ತದೆ.

ಮಾಸ್ತರರ, ಸ್ನೇಹಿತರ, ಕುಟುಂಬದ ಮಾತನ್ನು ಮೀರಿ ದಾಂಡೇಲಿಯ ಮರಾಠಾ ಹುಡುಗ ವಿಕ್ರಮ ಧಾರಾವಾಡದ ಕನ್ನಡ ಬ್ರಾಹ್ಮಣ ಹುಡುಗಿ ಯಶೋಧರೆಯನ್ನು ಮದುವೆಯಾಗುತ್ತಾನೆ. ಎದುರಿಸಿದ ದಿಟ್ಟತನವಾಗಲಿ, ಆದರ್ಶದ ಪ್ರಣಾಳಿಕೆಗಳಾಗಲೀ, ಕಲಿತ ವಿದ್ಯೆಯಾಗಲೀ ಆ ಮದುವೆಯನ್ನು, ಅದಕ್ಕಂಟಿಕೊಂಡ ಎರಡು ಜೀವಗಳನ್ನು ಉಳಿಸಲು ಮುಂದೆ ಬರುವುದಿಲ್ಲ. ರಾಣೆ ಕುಟುಂಬ ಹೇಳಿ ಕೇಳಿ ಕ್ಷತ್ರಿಯ ಕುಟುಂಬ. ಶಿವಾಜಿ ದಕ್ಷಿಣ ದೇಶಗಳನ್ನು ಗೆದ್ದಾಗ ಅವುಗಳ ಉಸ್ತುವಾರಿಗೆ ಬಿಟ್ಟುಹೋದ ಕುಟುಂಬಗಳಲ್ಲಿ ಒಂದು ಇದು. ಒಂದು ಗಂಡು ಒಂದು ಹೆಣ್ಣಿಗೇ ಸೀಮಿತವಾಗಿರಬೇಕಿಲ್ಲ ಅಲ್ಲಿ. ಆ ಕುಟುಂಬದ ಹೆಣ್ಣೂ ಇದನ್ನು ಸಹಜವಾಗಿ ತೆಗೆದುಕೊಳ್ಳುತ್ತಾಳೆ. ಆದರೆ ಯಶೋಧರೆ? ಹೆಂಡತಿಗೆ ತಿಳಿಯದಂತೆ ವಿಕ್ರಮ ಬೇರೆ ಹೆಣ್ಣಿನ ಸಹವಾಸ ಮಾಡುತ್ತಾನೆ. ಅಶ್ವಿನಿ ಎನ್ನುವ ಆರ್ಕಿಟೆಕ್ಚರ್‌ ಓದಿಕೊಂಡ ಒರಿಯಾದ ಹುಡುಗಿಯ ಜೊತೆಗೂಡಿ ಅತಿ ಕಡಿಮೆ ಬೆಲೆಯಲ್ಲಿ ಬಡವರಿಗೆ ನಿವೇಶನಗಳನ್ನು ಕಟ್ಟುವ ಕನಸುಕಾಣುತ್ತಾರೆ. ಗಾಂಧೀವಾದದ ಅನುಷ್ಠಾನದೆಡೆಗೆ ದಿಟ್ಟ ಹೆಜ್ಜೆಯಂತೆ ಕಾಣುತ್ತದೆ ಅದು. ಆದರೆ ಕಟ್ಟಿದ ಮನೆಗಳನ್ನು ಊರಿನ ಪಟೇಲರು ತಮ್ಮ ನೆಂಟರಿಷ್ಟರಿಗೆ ಹಂಚುತ್ತಾರೆ! ಮನೆಕಟ್ಟುವ ಆದರ್ಶದ ತಂಡ ಒಡೆದುಹೋಗಿ ತಂಡದ ಚೇತನದಂತಿದ್ದ ವಸಂತ ಎನ್ನುವ ಆರ್ಕಿಟೆಕ್ಟ್‌ ಅಮೆರಿಕಾಕ್ಕೋ, ಪ್ಯಾರಿಸ್ಸಿಗೋ ಹೊರಟು ನಿಲ್ಲುತ್ತಾನೆ. ಅಶ್ವಿನಿ ತನ್ನ ಊರಿಗೆ ಮರಳುತ್ತಾಳೆ. ಅಶ್ವಿನಿಯಾಂದಿಗೆ ಪಟ್ಟ ಲೈಂಗಿಕಸುಖವಷ್ಟೇ ವಿಕ್ರಮನಿಗೆ ಉಳಿಯುತ್ತದೆ. ಆದರ್ಶ ಎನ್ನುವುದು ದೇಹಸುಖದ ನೆನಪಲ್ಲಿ ಕೊನೆಗೊಳ್ಳುತ್ತದೆ. ವಿಕ್ರಮ ರಾಣೆಯಲ್ಲಿ ತಲೆತಲಾಂತರದಿಂದ ಹರಿದುಬಂದ ರಕ್ತವೇ ಆದರ್ಶದ ನೆಪದಲ್ಲಿ ತನ್ನ ತೀಟೆಯನ್ನು ತೀರಿಸಿಕೊಳ್ಳುತ್ತದೆ. ದೇಸಾಯಿಗಳ ಒಂದು ಪ್ಯಾರಾ ಇವೆಲ್ಲವನ್ನೂ ಬಲು ಚೆನ್ನಾಗಿ ಸಂಕ್ಷೇಪಿಸಿ ಹೇಳುತ್ತದೆ: '...........ಆದರೆ ನಮಗೆ ತಿಳಿಯದ ಶಕ್ತಿಗಳು ನಮ್ಮ ಹೊರಗೆ, ನಮ್ಮ ಒಳಗೆ, ನಮ್ಮ ರಕ್ತದಲ್ಲಿ, ನಮ್ಮ ಮನಸ್ಸಿನಲ್ಲಿ, ನಮ್ಮ ಅಂತರಾಳದಲ್ಲಿ ಕೆಲಸ ಮಾಡುತ್ತಿರುತ್ತವೆ. ನಾವು ಆ ಶಕ್ತಿಗಳ ಸಂಪೂರ್ಣ ಸೇವಕರಲ್ಲ ನಿಜ, ಆದರೆ ಆ ಶಕ್ತಿಗಳ ಯಜಮಾನರೂ ನಾವಲ್ಲ. ನಾವು ದೇವರೂ ಅಲ್ಲ, ಪ್ರಾಣಿಗಳೂ ಅಲ್ಲ-ನಾವು ಅಂತರಾಳ ಪಿಶಾಚಿಗಳು".

***

ಶಾಂತಿನಾಥ ದೇಸಾಯಿಯವರು ಈ ಕಾದಂಬರಿಯಲ್ಲಿ ಬಲು ವಿನೂತನವಾದ ರಚನಾತಂತ್ರವನ್ನು ಉಪಯೋಗಿಸಿದ್ದಾರೆ. ವಿಕ್ರಮ ಬರೆಯುವ ಆತ್ಮಕತೆಯಂತೆ ಪ್ರಾರಂಭವಾಗುವ ಇಡೀ ಕತೆ ಭೂತ, ಭವಿಷ್ಯ ಮತ್ತು ವರ್ತಮಾನಗಳ ನಡುವೆ ಹೊಯ್ದಾಡುತ್ತದೆ. ಆ ಹೊಯ್ದಾಟ ಎಷ್ಟಿದೆ ಅಂದರೆ ಒಬ್ಬ ನುರಿತ ನಾವಿಕನಷ್ಟೇ ಆ ನೌಕೆಯನ್ನು ನಿಯಂತ್ರಿಸಲು ಸಾಧ್ಯ. ದೇಸಾಯಿಯಂತಹ ನುರಿತ ಕೈಗೆ ಮಾತ್ರವೇ ಇಂತಹದನ್ನು ಬರೆಯಲು ಸಾಧ್ಯ.

ಟಿಪಿಕಲ್‌ ಆದ ನವ್ಯ ಲೇಖಕರಂತೆಯೇ ದೇಸಾಯಿಯವರು ಕಥೆ ಓದುಗನಿಗೆ ಅಮಲೇರಿಸುವ ಮುನ್ನವೇ, ಕಥನ ಶಕ್ತಿ ಕಾದಂಬರಿಯಲ್ಲಿನ ಆಲೋಚನೆ, ಪ್ರತಿಪಾದನೆಗಳನ್ನು ಮೀರಿ ಬೆಳೆಯುವ ಸೂಚನೆಗಳ ಮುನ್ನವೇ ಕಥೆಯನ್ನು ನಮ್ಮಿಂದ ಕಿತ್ತುಕೊಂಡುಬಿಟ್ಟಿದ್ದಾರೆ. ಶಾಂತಿನಾಥ ದೇಸಾಯಿಯವರಿಗೂ, ಎಸ್‌. ಎಲ್‌. ಭೈರಪ್ಪನವರಿಗೂ ಕಾದಂಬರಿಯ ತಂತ್ರದಲ್ಲಿ, ಶೈಲಿಯಲ್ಲಿ ಇಲ್ಲೇ ಮಹತ್ತರವಾದ ವ್ಯತ್ಯಯವು ಕಂಡುಬರುವುದು. ಅಷ್ಟೇಕೆ, ನವ್ಯದ ದಿಗ್ಗಜರೆಲ್ಲಾ ಭೈರಪ್ಪನವರನ್ನು ದೂರವಿಡುವುದು, ದ್ವೇಷಿಸುವುದು ಈ ಕಾರಣಕ್ಕೇನೇ. ವಿಲೋಮವಾಗಿ, ಭೈರಪ್ಪನವರು ಎಲ್ಲಾ ಸ್ತರಗಳ ಓದುಗರನ್ನು ಆಕರ್ಷಿಸುವುದೂ ಇದೇ ಕಾರಣಕ್ಕೆ. ಶಾಂತಿನಾಥ ದೇಸಾಯಿಯವರ 'ಅಂತರಾಳ" ಕಾದಂಬರಿ ಗಾಢನಿದ್ರೆಯಲ್ಲಿದ್ದವನನ್ನು ಯಾರೋ ಬಡಿದೆಬ್ಬಿಸಿದಂತೆ ತಟಕ್ಕನೆ ನಿಂತುಹೋಗುತ್ತದೆ, ಕೊನೆಯಲ್ಲದ ಕೊನೆಯಲ್ಲಿ. ಭೈರಪ್ಪನವರಾದರೋ ಪ್ರಜ್ಞಾಪೂರ್ವಕವಾಗಿ ಒಂದು ಕೊನೆಯನ್ನು ತಲುಪಿಸಿ ತೆರೆ ಎಳೆಯುತ್ತಾರೆ. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಚರ್ಚೆಗೆ ಇಳಿಯುತ್ತಿಲ್ಲ ನಾನು. ಯೂನಿವರ್ಸಿಟಿಗಳಲ್ಲಿ ಕನ್ನಡ ಸಾಹಿತ್ಯವನ್ನು ಗುತ್ತಿಗೆ ಹಿಡಿದ ಮಹಾನುಭಾವರಿಗೆ ಭೈರಪ್ಪನವರು 'ಚಿಲ್ಲರೆ" ಲೇಖಕರಾಗಿ ಕಾಣುತ್ತಾರೆ. ಜನಸಾಮಾನ್ಯರಿಗೆ ನವ್ಯದ ಓದು ಅರ್ಥವಾಗದೇ ಉಳಿಯುತ್ತದೆ.

ವಿಮರ್ಶಕರು? ಅದೊಂದು ತಮಾಷೆ.

ಕನ್ನಡದ ವಿಮರ್ಶಕರ ಮಂದ ದೃಷ್ಟಿಗೆ ಭೈರಪ್ಪನವರೂ ಕಾಣುವುದಿಲ್ಲ, ಶಾಂತಿನಾಥ ದೇಸಾಯಿಗಳೂ ದೊರೆಯುವುದಿಲ್ಲ . ಇನ್ನು ಟಿ.ಕೆ. ರಾಮರಾವ್‌, ಎಂ.ಕೆ. ಇಂದಿರಾ, ಕೆ.ಟಿ. ಗಟ್ಟಿ, ವೈದೇಹಿ, ಶಾಂತಾರಾಮ ಸೋಮಯಾಜಿಯರೆಲ್ಲಾ ಎಲ್ಲಿ ಕಂಡಾರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X