• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ

By * ವಿಶ್ವೇಶ್ವರ ಭಟ್
|
ಸರಕಾರ ಅಂದ್ರೆ ದಪ್ಪ ಚರ್ಮದ ಕಿವುಡ ಕತ್ತೆ ಇದ್ದಂತೆ! ಎಷ್ಟೇ ಹೊಡೆಯಿರಿ, ಬಡಿಯಿರಿ, ಲಬೋ ಅಂತ ಬಾಯಿಬಡಿದುಕೊಳ್ಳಿ ಉಹುಂ ಅದಕ್ಕೇನೂ ಆಗುವುದಿಲ್ಲ. ಹೋಗಲಿ, ಅದರ ಮುಂದೆ ಅಂಗಾತವೋ, ಬೋರಲೋ ಬಿದ್ದು ಸಾಯಿರಿ, ಅದು ಜಪ್ಪಯ್ಯ ಎನ್ನುವುದಿಲ್ಲ. ಅದು ಅದರ ಪಾಡಿಗೆ ಹಾಯಾಗಿ ಏನೂ ನಡೆದೇ ಇಲ್ಲ ಎಂಬಂತೆ ಸುಮ್ಮನಿದ್ದುಬಿಡುತ್ತದೆ. ಹೊಸ ಮುಖ್ಯಮಂತ್ರಿ, ಮಂತ್ರಿಗಳು ಬರಲಿ, ಹೋಗಲಿ, ಸರಕಾರ ಎಂಬ ಕತ್ತೆ ಮಾತ್ರ ಪಟ್ಟಾಗಿ ಕುಳಿತಿರುತ್ತದೆ. ಸರಕಾರಕ್ಕೆ ಆ ಭಗವಂತ ಕಣ್ಣನ್ನು ಕೊಟ್ಟು ಕುರುಡನನ್ನಾಗಿ ಮಾಡಿದ, ಮಾಡಲಿ. ಕಿವಿ ಕೊಟ್ಟು ಕಿವುಡನನ್ನಾಗಿ ಮಾಡಿದ, ಮಾಡಲಿ. ಹೃದಯವನ್ನು ಕೊಟ್ಟು ಭಾವನೆಯನ್ನೂ ಕಿತ್ತುಕೊಂಡ.

ಹೀಗಾಗಿ ಯಾರೇ ಬರಲಿ, ಹೋಗಲಿ, ಸರಕಾರವೆಂಬುದು ಬದಲಾಗುವುದಿಲ್ಲ ಬಂಡೆಗಲ್ಲಿನಂತೆ. ಅದು ಹಾಗೇ ಇರುತ್ತದೆ. ಈ ಕಾರಣದಿಂದ ಸರಕಾರವೆಂಬ ಕತ್ತೆಗೆ ಹೇಗೆ ವರ್ತಿಸಬೇಕೆಂದು ಗೊತ್ತಾಗಿಬಿಟ್ಟಿದೆ. ಅದು ತನ್ನ ಪಾಡಿಗೆ ತಾನು ಸುಮ್ಮನಿದ್ದುಬಿಡುತ್ತದೆ. ಯಾರೋ ಹೊಸ ಮುಖ್ಯಮಂತ್ರಿ, ಹೊಸ ಪ್ರಧಾನಿ ಅಧಿಕಾರಕ್ಕೆ ಬರುತ್ತಿದ್ದಂತೆ ಹಾಗೆ ಮಾಡ್ತೇನೆ, ಹೀಗೆ ಮಾಡ್ತೇನೆ ಎಂದು ಬಡಬಡಾಯಿಸುವಾಗ ನಾವೆಲ್ಲ ಹೌದೇನೋ ಎಂಬಂತೆ ತಲೆದೂಗುತ್ತಿದ್ದರೆ, ಈ ಕತ್ತೆ ಮಾತ್ರ ಗಹಗಹಿಸಿ ನಗುತ್ತಿರುತ್ತದೆ. ಅಧಿಕಾರ ಮುಗಿಸಿ ಕೆಳಗಿಳಿದು ಹೋಗುವಾಗ ಕತ್ತೆಯ ನಗು ಮಾತ್ರ ಪ್ರತಿಧ್ವನಿಯಂತೆ ಮೊಳಗುತ್ತಿರುತ್ತದೆ.

ಕೇಂದ್ರವಿರಬಹುದು, ರಾಜ್ಯವಿರಬಹುದು ಸರಕಾರವೆಂಬ ಕತ್ತೆ ಇರುವುದೇ ಹಾಗೆ. ಒಂದು ವೇಳೆ ಅದು ಹಾಗಿಲ್ಲದಿದ್ದರೆ ಅದು ಕುದುರೆಯಾಗುತ್ತಿತ್ತು. 1969ರಲ್ಲಿಯೇ ಈ ಕತ್ತೆಯ ಬಗ್ಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಕಿಡಿಕಾರಿದ್ದರು. ದಿಲ್ಲಿಯಲ್ಲಿ ಪ್ರಧಾನಿ ಕಾರ್ಯಾಲಯದಿಂದ ಗೃಹಮಂತ್ರಿಗಳ ಕಚೇರಿಗೆ ಕೂಗಳತೆ ದೂರ. ಆದರೂ ಗೃಹಸಚಿವಾಲಯದ ಸಿಬ್ಬಂದಿ ಅಂಚೆಮೂಲಕ ಮಹತ್ವದ ಕಾಗದವನ್ನು ಪ್ರಧಾನಿ ಕಚೇರಿಗೆ ಕಳಿಸಿದ್ದರು. ಯಾಕೆಂದರೆ ಮಹತ್ವದ ಕಾಗದ ಪತ್ರಗಳನ್ನು ರಜಿಸ್ಟರ್‍ಡ್ ಪೋಸ್ಟ್ ಮೂಲಕವೇ ಕಳಿಸಬೇಕೆಂದು ಯಾವನೋ ಹಲಗಣ್ಣ ಒಂದು ರೂಲು ಮಾಡಿ ಹೋಗಿದ್ದಾನೆ. ಅದನ್ನು ಪಾಲಿಸಲೇಬೇಕಲ್ಲ. ಹೀಗಾಗಿ ಪಕ್ಕದ ಕಟ್ಟಡಕ್ಕೂ ಅಂಚೆಮೂಲಕವೇ ಕಳಿಸಿದ್ದ. ಆ ಪತ್ರ ಪ್ರಧಾನಿ ಕಾರ್ಯಾಲಯ ತಲುಪಲು ಹದಿಮೂರು ದಿನಗಳನ್ನು ತೆಗೆದುಕೊಂಡಿತ್ತು. ಗೃಹಸಚಿವಾಲಯದಿಂದ ಬಸವನಹುಳದ ಬೆನ್ನಿಗೆ ಹೇರಿ ಕಳಿಸಿದ್ದರೂ ನಾಲ್ಕು ತಾಸಿನೊಳಗೆ ತಲುಪುತ್ತಿತ್ತೇನೋ? ಸರಕಾರಿ ಕತ್ತೆ ಕೆಲಸ ಮಾಡುವುದೇ ಹಾಗೇ! ಬಂದವರೆಲ್ಲ ಅದನ್ನು ಕುದುರೆ ಮಾಡುತ್ತೇನೆಂಬ ಪೊಗರಿನಿಂದಲೇ ಬರುತ್ತಾರೆ. ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ ಅನ್ನಿ. ಆದರೆ ಕತ್ತೆ ಮಾತ್ರ ತನ್ನ ಹುಟ್ಟು ಗುಣವನ್ನು ಘಟ್ಟ ಹತ್ತಿದರೂ ಕಳೆದುಕೊಳ್ಳುವುದಿಲ್ಲ' ಎಂಬಂತೆ ಹಾಗೇ ಇರುತ್ತದೆ.

ಕೆಲ ವರ್ಷಗಳ ಹಿಂದಿನ ಮಾತು. ಬೆಂಗಳೂರಿನಲ್ಲಿ ಪ್ರಿಂಟಾದ ಪತ್ರಿಕೆ ಬೀದರ್‌ಗೆ ಹೋಗುತ್ತಿತ್ತು. ಬೀದರ್‌ದಿಂದ ಹುಮ್ನಾಬಾದ್, ಬಸವಕಲ್ಯಾಣ ಹಾಗೂ ಗಡಿಭಾಗದ ಹಳ್ಳಿಗಳಿಗೂ ಹೋಗುತ್ತಿತ್ತು. ರಾತ್ರಿ ಎಂಟಕ್ಕೆ ಬೆಂಗಳೂರು ಬಿಟ್ಟು ಮರುದಿನ ಸಾಯಂಕಾಲ ಐದರೊಳಗೆ ಬೀದರ್‌ನ ಎಲ್ಲೆಡೆ ಬಟವಾಡೆಯಾಗುತ್ತಿತ್ತು. ಇದು ಒಂದಲ್ಲ, ಎರಡಲ್ಲ ವರ್ಷದಲ್ಲಿ ನಾಲ್ಕು ರಜಾದಿನ ಬಿಟ್ಟು ಮುನ್ನೂರ ಅರವತ್ತು ದಿನ ಗಾಡಿ ಹೀಗೇ ಓಡಬೇಕು. ಸಾಯಂಕಾಲ ಐದಕ್ಕೆ ತಲುಪಬೇಕಾದ ಪೇಪರ್ ಬಂಡಲ್ ಅರ್ಧಗಂಟೆ ತಡವಾದರೆ ಓದುಗರ ಹಾಹಾಕಾರ. ಹೀಗಾಗಿ ಮಳೆ, ಗಾಳಿ, ಬಿಸಿಲಿರಲಿ ಪೇಪರ್ ವಾಹನ ಮಾತ್ರ ಅಗ್ದಿ ಕರೆಕ್ಟ್ ಟೈಮ್‌ಗೆ ತಲುಪುತ್ತಿತ್ತು. ಒಂದು ವೇಳೆ ಸರಕಾರವೇನಾದರೂ ಪತ್ರಿಕೆ ನಡೆಸಿದ್ದರೆ, ಬೆಂಗಳೂರಿನಿಂದ ಪ್ರಿಂಟ್ ಆದ ಪತ್ರಿಕೆಯನ್ನು ಬೀದರ್‌ಗೆ ಕಳಿಸಲು ಅದಕ್ಕೆ ಕನಿಷ್ಠ ಹತ್ತು ದಿನಗಳಾದರೂ ಬೇಕಾಗುತ್ತದೆ. ಏಕೆಂದರೆ ವಿಧಾನಸೌಧದಿಂದ ಕಳಿಸುವ ಫೈಲು ಬೀದರ್ ಜಿಲ್ಲಾಧಿಕಾರಿ ಟೇಬಲ್ ಮುಂದೆ ಅಂಗಾತವಾಗಲು ಏನಿಲ್ಲವೆಂದರೂ ಎರಡು ವಾರಗಳಾದರೂ ಬೇಕು!

ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಒಮ್ಮೆ ಹೇಳಿದ್ದರು-ಕರ್ನಾಟಕ ಸರಕಾರವೇನಾದರೂ ಒಂದು ಫೈಲನ್ನು ಪ್ರಧಾನಿಯವರಿಗೆ ಕಳಿಸಿದರೆ, ಅದೇನಾದರೂ ತೀರ ಮಹತ್ವದ್ದಾಗಿರದಿದ್ದರೆ, ಪ್ರಧಾನಿಯವರ ಟೇಬಲ್ಲಿಗೆ ಬರಲು ಕನಿಷ್ಠ ಒಂದು ವರ್ಷವಾದರೂ ಬೇಕು. ಒಂದು ವೇಳೆ ಬಂದಿತೆನ್ನಿ. ಅವರು ಸಂಬಂಧಪಟ್ಟ ಕೇಂದ್ರ ಸರಕಾರದ ಮಂತ್ರಿಗಳಿಗೆ ಕಳಿಸಿ ವಾಪಸ್ ತರಿಸಿಕೊಳ್ಳುವ ಹೊತ್ತಿಗೆ ಒಂದೋ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಮಠಸೇರಿ ಮಗ್ಗುಲು ಬದಲಾಯಿಸಿರುತ್ತದೆ. ಮುಂದೆ ಅಧಿಕಾರಕ್ಕೆ ಬರುವವರಿಗೆ ಆ ಫೈಲಿನ ಬಗ್ಗೆ ಗೊತ್ತೇ ಇರುವುದಿಲ್ಲ. ಸಿಂಧುವಿನಲ್ಲಿ ಒಂದು ಬಿಂದುವನ್ನು ಹುಡುಕುವುದಾದರೂ ಹೇಗೆ? ಏನಿಲ್ಲವೆಂದರೂ ಕೇಂದ್ರದ ಮುಂದೆ ಬರೀ ಕರ್ನಾಟಕ ಸರಕಾರ ಕಳಿಸಿದ ಇಂಥ ಹತ್ತಾರು ಸಾವಿರ ಬಿಂದು'ಗಳಿರಬಹುದು! ಕತ್ತೆ ಬದುಕೋದೇ ಹೀಗೆ, ಏನ್ಮಾಡ್ತೀರ?" ಯಾರೇ ಬಂದರೂ ಏನೂ ಮಾಡದ ಸ್ಥಿತಿಯಿದೆ. ಉತ್ತರ ಕನ್ನಡದ ಕುಮಟಾದ ತಹಸೀಲ್ದಾರನೊಬ್ಬ ಒಂದು ಫೈಲನ್ನು ವಿಧಾನಸೌಧದಲ್ಲಿ ಕುಳಿತ ಮುಖ್ಯಮಂತ್ರಿಗೆ ಕಳಿಸಿದನೆನ್ನಿ. ಅದು ಕನಿಷ್ಠ ಇಪ್ಪತ್ತೈದು ಮಂದಿ ಅಧಿಕಾರಿಗಳನ್ನು ಎಡತಾಕಿ ಬರಬೇಕು. ಒಬ್ಬೊಬ್ಬ ಅಧಿಕಾರಿ ಒಂದೇ ವಾರ ತನ್ನ ಟೇಬಲ್ ಮೇಲಿಟ್ಟುಕೊಂಡು ಕಾವು ಕೊಟ್ಟರೂ ಸಾಕು, ಮುಖ್ಯಮಂತ್ರಿಗಳ ಕೈಸೇರುವ ಹೊತ್ತಿಗೆ ಅರ್ಧವಾರ್ಷಿಕ! ಆಗಲೇ ಧೂಳು ತಿಂದು, ಬೆವರು ಕುಡಿದು, ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿರುವ ಪಳೆಯುಳಿಕೆಗಳಂತಾಗಿರುತ್ತವೆ.

ಇವೆಲ್ಲ ಕಾಗದ ಪತ್ರ, ಫೈಲ್‌ಗಳ ಕತೆಯಾಯಿತು. ಆದರೆ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಈ ಸರಕಾರಿ ಕತ್ತೆ ಹೇಗೆ ವರ್ತಿಸುತ್ತದೆಂಬುದನ್ನು ಗಮನಿಸಿದರೆ ಶಾಕ್ ಆಗುತ್ತದೆ. ಅಧಿಕಾರಿಗಳು ಫೈಲ್‌ಗಳ ಮೇಲೆ ಕೆಂಪು ಶಾಯಿಯಿಂದ ಸಹಿ ಹಾಕಬೇಕಾ, ಕಪ್ಪು ಶಾಯಿಯಲ್ಲಾ ಎಂಬ ತೀರಾತೀರ ಕ್ಷುಲ್ಲಕ ಸಂಗತಿ ಬಗ್ಗೆ ಭಾರತ ಸರಕಾರದ ಸುಮಾರು ನೂರಕ್ಕೂ ಹೆಚ್ಚು ಅಧಿಕಾರಿಗಳು ಒಂದೂವರೆ ವರ್ಷಗಳ ಕಾಲ ಸಭೆ, ಸಮಾಲೋಚನೆ, ಫೈಲ್‌ನೋಟ್ಸ್ ಮಾಡಿದ್ದನ್ನು ಇದೇ ಅಂಕಣದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಬರೆದಿದ್ದು ನೆನಪಿರಬಹುದು. ಖ್ಯಾತ ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ್‌ಶೌರಿ Governance and the sclerosis that has set in ಎಂಬ ಪುಸ್ತಕದಲ್ಲಿ ಶಾಯಿಗಾಗಿ ವರ್ಷಗಟ್ಟಲೆ ತಲೆಕೆಡಿಸಿಕೊಂಡ ಅಧಿಕಾರಶಾಹಿ' ಬಗ್ಗೆ ರಸವತ್ತಾಗಿ ಬಣ್ಣಿಸಿದ್ದಾರೆ. ಈ ಘಟನೆಯನ್ನು ಸಂಕ್ಷಿಪ್ತವಾಗಿ, recap ಮಾಡುವುದಾದರೆ...

1999ರ ಜನವರಿಯಲ್ಲಿ ಕೇಂದ್ರ ಸರಕಾರದ ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಅಧಿಕೃತ ಫೈಲಿನ ಮೇಲೆ ಷರಾ ಬರೆದಿದ್ದರು. ಆ ಫೈಲು ಮತ್ತೊಂದು ಟೇಬಲ್‌ಗೆ ಹೋಯಿತು. ಅಲ್ಲಿದ್ದ ಅಧಿಕಾರಿಗೆ ಒಂದು ಯೋಚನೆ ಹೊಳೆಯಿತು- ಒಬ್ಬರು ಕೆಂಪು, ಮತ್ತೊಬ್ಬರು ನೀಲಿ ಇಂಕ್‌ನಲ್ಲಿ ಸಹಿ ಮಾಡಿದ್ದಾರಲ್ಲ ಹಾಗೆ ಮಾಡಬಹುದಾ? ಆತ ಆಡಳಿತಾತ್ಮಕ ಸುಧಾರಣಾ ಇಲಾಖೆ ಹಾಗೂ ಸಾರ್ವಜನಿಕ ಕುಂದುಕೊರತೆ ಇಲಾಖೆಗೆ ನೀಲಿ ಹಾಗೂ ಕಪ್ಪು ಇಂಕ್ ಹೊರತಾಗಿ ಬೇರೆ ಇಂಕನ್ನು ಅಧಿಕಾರಿಗಳು ಸಹಿ ಮಾಡಲು ಬಳಸಬಹುದಾ ಎಂದು ಸಚಿವಾಲಯ ತಿಳಿಯಬಯಸುತ್ತದೆ" ಎಂದು ಅಧಿಕೃತ ಪತ್ರ ಬರೆದ. ಈ ಎರಡು ಇಲಾಖೆಗಳ ಕಟ್ಟಡ ಉಕ್ಕು ಸಚಿವಾಲಯದ ಅಕ್ಕಪಕ್ಕದಲ್ಲಿಯೇ ಇದ್ದರೂ ಪತ್ರ ಆರು ದಿನಗಳ ನಂತರ ತಲುಪಿತು. ಪತ್ರ ಸಿಕ್ಕ ತಕ್ಷಣ ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಮೀಟಿಂಗ್ ಕರೆದರು. ಇಂಥದೇ ಮೀಟಿಂಗ್ ಕುಂದುಕೊರತೆ ಇಲಾಖೆಯಲ್ಲೂ ಏರ್ಪಾಡಾಯಿತು. ಯಾವುದೇ ನಿರ್ಧಾರಕ್ಕೆ ಬರಲಾಗದೇ ಮುಂದಿನ ವಾರಕ್ಕೆ ಸಭೆಯನ್ನು ಮುಂದೂಡಲಾಯಿತು. ಮುಂದಿನ ವಾರ ಸೇರಿದ ಸಭೆಯಲ್ಲಿ, ಇದು ಇಂಕ್‌ಗೆ ಸಂಬಂಧಿಸಿದ ವಿಷಯವಾದ್ದರಿಂದ ಮುದ್ರಣ ನಿರ್ದೇಶನಾಲಯದ ಸಲಹೆ, ಮಾರ್ಗದರ್ಶನ ಪಡೆಯಬೇಕು" ಎಂದು ಆಡಳಿತ ಸುಧಾರಣಾ ಇಲಾಖೆ ನಿರ್ಣಯ ಅಂಗೀಕರಿಸಿತು!

ಮೇ 3, 1999ರಂದು ಆಡಳಿತ ಸುಧಾರಣಾ ಇಲಾಖೆ ಬರೆದ ಅಧಿಕೃತ ಪತ್ರ ಮುದ್ರಣ ನಿರ್ದೇಶನಾಲಯ ತಲುಪಿತು. ನಿರ್ದೇಶನಾಲಯದ ಮುಖ್ಯಸ್ಥರು ಹಿರಿಯ ಅಧಿಕಾರಿಗಳ ಸಭೆ ಕರೆದು ಪತ್ರದ ವಿಷಯ ಪ್ರಸ್ತಾಪಿಸಿದರು. ಅವರೆಲ್ಲ ರೂಲ್‌ಬುಕ್ ಗಳನ್ನು ತಡಕಾಡಿದರು. ಪುನಃ ಮೂರು ಬಾರಿ ಸಭೆ ಸೇರಿದರು. ಇಷ್ಟಕ್ಕೆ ಮೂರು ವಾರಗಳ ಕಾಲಕ್ಷೇಪ ಮಾಡಿ ಯಾವ ಇಂಕ್‌ನಲ್ಲಿ ಸಹಿ ಮಾಡಬೇಕೆಂಬ ಬಗ್ಗೆ ನಿರ್ದೇಶನಾಲಯದಲ್ಲಿ ನಿಶ್ಚಿತ ನಿಯಮ ಇಲ್ಲದ್ದರಿಂದ ಈ ಅಂಶದ ಬಗ್ಗೆ ಹೆಚ್ಚಿನ ಮಾರ್ಗದರ್ಶನ ಕೋರಿ ಗೃಹ ಸಚಿವಾಲಯದ ಸಿಬ್ಬಂದಿ, ತರಬೇತಿ ಇಲಾಖೆಗೆ ಪತ್ರ ಬರೆಯಲು ಮುದ್ರಣ ನಿರ್ದೇಶನಾಲಯ ನಿರ್ಧರಿಸಿತು. ಜುಲೈ 6, 1999ರಂದು ಸಿಬ್ಬಂದಿ, ತರಬೇತಿ ಇಲಾಖೆ ಅಧಿಕಾರಿಗಳು ಸಭೆ ಸೇರಿ ಈ ವಿಷಯವನ್ನು ಆಡಳಿತ ಸುಧಾರಣಾ ಇಲಾಖೆಗೆ ಕಳಿಸಲು ನಿರ್ಧರಿಸಿದರು. ಯಾವ ಇಲಾಖೆ ಸಲಹೆ ಕೇಳಿತ್ತೋ, ಅಲ್ಲಿಗೇ ಪುನಃ ತಿರುಗಿ ಬಂದಿತ್ತು! ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಪುನಃ ಸಭೆ ಸೇರಿದರು. ಅಲ್ಲಿ ಅವರೊಂದು ನಿರ್ಧಾರ ಅಂಗೀಕರಿಸಿದರು- ಯಾವ ಇಂಕ್‌ನಲ್ಲಿ ಸಹಿ ಮಾಡಬೇಕೆಂಬುದು ವಿಷಯವನ್ನು ಆಧರಿಸಿರುತ್ತದೆ. ಕೆಲವು ಫೈಲ್ ಗಳನ್ನು ಶಾಶ್ವತವಾಗಿ ರಕ್ಷಿಸಿಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಸಹಿ ಮಾಡಿದ ಇಂಕ್ ಅಳಿಸಿ ಹೋಗಬಾರದು. ಆದ್ದರಿಂದ ಈ ವಿಷಯದ ಬಗ್ಗೆ ಇನ್ನಷ್ಟು ಚರ್ಚೆ ಅಗತ್ಯ."

ಮುಂದಿನವಾರ ಆಡಳಿತ ಸುಧಾರಣಾ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆಯಿತು. ಕೆಲವು ಪರಿಣತರನ್ನು ಆ ಸಭೆಗೆ ಕರೆಯಲಾಗಿತ್ತು. ಅಲ್ಲೊಂದು ನಿರ್ಣಯ ಸ್ವೀಕರಿಸಲಾಯಿತು- ಫೈಲಿನ ಮಹತ್ವ ನೋಡಿ ಬಾಲ್‌ಪೆನ್‌ನಿಂದ ಸಹಿ ಮಾಡಬೇಕೋ, ಇಂಕ್‌ಪೆನ್‌ನಿಂದ ಸಹಿ ಮಾಡಬೇಕೋ ಎಂಬುದನ್ನು ನಿರ್ಧರಿಸಬೇಕು. ಇದನ್ನು ಪರಿಗಣಿಸಿ ಇಂಕಿನ ಬಣ್ಣ ತೀರ್ಮಾನಿಸಬೇಕು. ಫೈಲಿನ ಸಂರಕ್ಷಣೆ ಅಂಶ ಪ್ರಮುಖವಾಗಿರುವುದರಿಂದ ಸರಕಾರಿ ದಾಖಲೆಗಳನ್ನು ಕಾಪಾಡುವ ರಾಷ್ಟ್ರೀಯ ಪತ್ರಾಗಾರ(ಆರ್‌ಕೈವ್ಸ್)ದ ಸಲಹೆ ಪಡೆಯಬೇಕು. ಸರಿ, 12 ಆಗಸ್ಟ್ 1999ರಂದು ರಾಷ್ಟ್ರೀಯ ಪತ್ರಾಗಾರದ ಮಹಾನಿರ್ದೇಶಕರಿಗೆ ಆಡಳಿತ ಸುಧಾರಣಾ ಇಲಾಖೆ ಮುಖ್ಯಸ್ಥರು ಪತ್ರ ಬರೆದರು. ಅವರು ಸಹ ಸಭೆ ಕರೆದು ತಮ್ಮ ಅಭಿಪ್ರಾಯವನ್ನು ಆಗಸ್ಟ್ 29, 1999ರಂದು ಕಳಿಸಿದರು. ಅದರಲ್ಲಿ ಪತ್ರಾಗಾರ ಮಹಾನಿರ್ದೇಶಕರು ಹೀಗೆ ಬರೆದಿದ್ದರು- ಬಾಲ್‌ಪಾಯಿಂಟ್ ಅಥವಾ ಇಂಕ್‌ಪೆನ್ ಬಳಸಿ ಫೈಲುಗಳನ್ನು ಶಾಶ್ವತವಾಗಿಡಬಹುದು. ಆದರೆ ಬಳಸಿದ ಇಂಕ್ ಐಎಸ್‌ಐ ಗುಣಮಟ್ಟ ಹೊಂದಿರಬೇಕು." ಇಷ್ಟೆಲ್ಲ ಬರೆದ ಬಳಿಕ ಮಹಾನಿರ್ದೇಶಕರು ಕೊನೆಯಲ್ಲೊಂದು ವಾಕ್ಯ ಬರೆದಿದ್ದರು- ಫೈಲುಗಳ ಶಾಶ್ವತತೆಗೂ ಇಂಕಿನ ಬಣ್ಣಕ್ಕೂ ಯಾವುದೇ ಸಂಬಂಧ ಇಲ್ಲ."

ಈ ಪತ್ರ ಆಡಳಿತ ಸುಧಾರಣಾ ಇಲಾಖೆಗೆ ಬಂತು. ಇಲಾಖೆಯ ಮುಖ್ಯಸ್ಥರು ಪುನಃ ಸಭೆ ಕರೆದರು. ಅಲ್ಲಿ ರಾಷ್ಟ್ರೀಯ ಪತ್ರಾಗಾರದಿಂದ ಬಂದ ಪತ್ರದ ಬಗ್ಗೆ ಚರ್ಚೆ ನಡೆಯಿತು. ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಭಾರತೀಯ ಸೇನೆಯ ಬೇರೆ ಬೇರೆ ಗ್ರೇಡ್‌ನ ಅಧಿಕಾರಿಗಳು ಬೇರೆ ಬೇರೆ ಬಣ್ಣದ ಇಂಕನ್ನು ಬಳಸುವುದರಿಂದ ಅವರ ಸಲಹೆ ಕೋರಿ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಆಡಳಿತ ಸುಧಾರಣಾ ಇಲಾಖೆ ಪತ್ರ ಬರೆಯಿತು. ಜಂಟಿ ಕಾರ್ಯದರ್ಶಿ ಉತ್ತರ ಬರೆದರು- ಸೇನೆಯಲ್ಲಿ ಮಹಾದಂಡನಾಯಕರು ಕೆಂಪು, ಹಿರಿಯ ಅಧಿಕಾರಿಗಳು ಹಸಿರು ಹಾಗೂ ಇತರ ಅಧಿಕಾರಿಗಳು ಕಪ್ಪು ಇಂಕ್‌ನಲ್ಲಿ ಸಹಿ ಮಾಡುತ್ತಾರೆ. ಆದರೂ ಈ ವಿಷಯದ ಬಗ್ಗೆ ಸಿಬ್ಬಂದಿ, ತರಬೇತಿ ಇಲಾಖೆ ಸಲಹೆ ಪಡೆಯುವುದು ಉತ್ತಮ."ಅಷ್ಟಕ್ಕೆ ಸುಮ್ಮನಾಗದ ಅವರು ಒಂದು ಪ್ರತಿಯನ್ನು ಸಿಬ್ಬಂದಿ, ತರಬೇತಿ ಇಲಾಖೆಗೂ ಕಳುಹಿಸಿದರು. ಅಷ್ಟರೊಳಗೆ ಈ ಇಲಾಖೆಗೆ ಇದೇ ವಿಷಯ ಕುರಿತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕುಂದುಕೊರತೆ ಇಲಾಖೆ ಕನಿಷ್ಠ ಹದಿನೈದು ಬಾರಿ ಸಭೆ ಕರೆದು ಚರ್ಚಿಸಿದ್ದವು.

ಕಟ್ಟಕಡೆಗೆ ಆಡಳಿತ ಸುಧಾರಣಾ ಇಲಾಖೆ ಏಪ್ರಿಲ್ 5, 2000ರಂದು ಉಕ್ಕು ಸಚಿವಾಲಯಕ್ಕೆ ಪತ್ರ ಬರೆಯಿತು- ಕಪ್ಪು ಅಥವಾ ನೀಲಿ ಇಂಕನ್ನು ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳು ಬಳಸಬಹುದು. ಅಪರೂಪದ ಸಂದರ್ಭಗಳಲ್ಲಿ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಹಾಗೂ ಮೇಲಿನ ಅಧಿಕಾರಿಗಳು ಹಸಿರು ಅಥವಾ ಕೆಂಪು ಇಂಕ್‌ನಲ್ಲಿ ಸಹಿ ಮಾಡಬಹುದು. ಕರಡು ಪ್ರತಿ ಕಪ್ಪು ಅಥವಾ ನೀಲಿ ಇಂಕಿನಲ್ಲಿರಬಹುದು. ಯಾವುದೇ ತಿದ್ದುಪಡಿ ಮಾಡಬೇಕೆನಿಸಿದಾಗ ಹಸಿರು ಅಥವಾ ಕೆಂಪು ಇಂಕ್ ಬಳಸಬಹುದು. ಇದರಿಂದ ತಿದ್ದುಪಡಿ ಮಾಡಿದ್ದು ಗೊತ್ತಾಗುತ್ತದೆ." ಸುಮಾರು ನೂರಕ್ಕೂ ಹೆಚ್ಚು ಅಧಿಕಾರಿಗಳು (ಐಎಎಸ್ ಅಧಿಕಾರಿಗಳೂ ಸೇರಿ) ಒಂದೂವರೆ ವರ್ಷಗಳ ಕಾಲ ಸಭೆ, ಸಮಾಲೋಚನೆ ಮಾಡಿ ಯಾವ ಬಣ್ಣದ ಇಂಕಿನಲ್ಲಿ ಸಹಿ ಮಾಡ ಬೇಕೆಂಬ ಬಗ್ಗೆ ಅಂತಿಮವಾಗಿ ತೆಗೆದುಕೊಂಡ ನಿರ್ಧಾರವಿದು!

ಇಲ್ಲಿ ನಿಮಗೆ ಕಾಲ್ಪನಿಕ ಕತೆಯೊಂದನ್ನು ಹೇಳಬೇಕು. ಬಹಳ ಸೊಗಸಾಗಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾದ ಮುಖ್ಯಸ್ಥರಾಗಿ ನೇಮಕಗೊಂಡಿರುವ ಇನ್ಫೋಸಿಸ್‌ನ ನಂದನ್ ನಿಲೇಕಣಿಯವರನ್ನು ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಂಸತ್ತಿಗೆ ಆಹ್ವಾನಿಸಿದರಂತೆ. ಅಂದು ಪ್ರಧಾನಿಯವರು ಸದನದ ಸದಸ್ಯರನ್ನುದ್ದೇಶಿಸಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿಯನ್ನು ಸ್ಥಾಪಿಸಿದ್ದೇಕೆ, ಅದಕ್ಕೆ ನಂದನ್ ನಿಲೇಕಣಿಯವರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದೇಕೆ, ಇನ್ಫೋಸಿಸ್‌ನಲ್ಲಿ ಅವರು ಮಾಡಿದ ಮಹತ್ವದ ಕೆಲಸಗಳೇನು ಮುಂತಾದ ಸಂಗತಿಗಳನ್ನು ವಿವರಿಸಿದರಂತೆ. ಇಡೀ ಸದನ ಕುತೂಹಲದಿಂದ ಕೇಳಿತಂತೆ. ಅನಂತರ ಪ್ರಧಾನಿಯವರು ನಂದನ್‌ಗೆ ಮಾತಾಡಲು ಹೇಳಿದರಂತೆ. ನಂದನ್ ಎದ್ದು ನಿಂತು ಪ್ರಧಾನಿಯವರು ತಮ್ಮ ಮೇಲೆ ವಿಶ್ವಾಸವಿಟ್ಟು ಈ ಮಹತ್ವದ ಜವಾಬ್ದಾರಿಯನ್ನು ತಮಗೆ ವಹಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರಂತೆ. ಅಲ್ಲದೇ ತಮಗೆ ವಹಿಸಿದ ಹೊಣೆಗಾರಿಕೆಯನ್ನು ಆದಷ್ಟು ಬೇಗ ಯಶಸ್ವಿಯಾಗಿ ಮುಗಿಸುವುದಾಗಿ ಅವರು ಸದನಕ್ಕೆ ಭರವಸೆ ನೀಡಿದರಂತೆ. ಮಧ್ಯೆಮಧ್ಯೆ ಸದಸ್ಯರ ಮಧ್ಯಪ್ರವೇಶ, ಅನಗತ್ಯ ಅಡ್ಡಿ, ಚರ್ಚೆ. ಭೋಜನ ವಿರಾಮದ ಬಳಿಕ ಯುನಿಕ್ ಐಡೆಂಟಿಫಿಕೇಶನ್ ಪ್ರೋಗ್ರಾಂ ಬಗ್ಗೆ ಸಮಗ್ರವಾಗಿ ವಿವರಿಸುವಂತೆ ಪ್ರಧಾನಿಯವರು ನಂದನ್‌ಗೆ ಸೂಚಿಸಿದರಂತೆ.

ಭೋಜನ ವಿರಾಮ ಸರಿಯಿತು. ಪುನಃ ನಂದನ್ ಸರದಿ. ಅಷ್ಟರೊಳಗೆ ನಂದನ್ ಅವರ ಲ್ಯಾಪ್‌ಟಾಪ್‌ನಲ್ಲಿದ್ದ ಬ್ಯಾಟರಿ ಸಾಕಷ್ಟು ಖಾಲಿಯಾಗಿತ್ತಂತೆ. ನಂದನ್‌ಗೆ ಡುಕುಡುಕು. ಲ್ಯಾಪ್‌ಟಾಪ್ ಮಧ್ಯೆ ಕೈಕೊಟ್ಟರೆ? ನಂದನ್ ಸಣ್ಣಗೆ ಬೆವರಲಾರಂಭಿಸಿದರಂತೆ. ಪ್ರಧಾನಿಯವರ ಸನಿಹ ಹೋಗಿ ತಮ್ಮ ಸಂಕಟ ತೋಡಿಕೊಂಡರಂತೆ. ಪರವಾಗಿಲ್ಲ, ಸುಧಾರಿಸಿಕೊಳ್ಳಿ ಅಂಥದ್ದೇನೂ ಆಗಲಾರದೆಂದು ಪ್ರಧಾನಿ ಸಮಾಧಾನ ಹೇಳಿದರಂತೆ. ಅಷ್ಟರೊಳಗೆ ಸ್ಪೀಕರ್ ನಂದನ್‌ಗೆ ಯುನಿಕ್ ಐಡೆಂಟಿಫಿಕೇಶನ್ ಪ್ರೋಗ್ರಾಂ ಕುರಿತು ಸದನಕ್ಕೆ ವಿವರಿಸುವಂತೆ ಹೇಳಿದರಂತೆ. ನಂದನ್ ಎದ್ದುನಿಂತು, ನಾನು 30-60-90-120 ದಿನಗಳಲ್ಲಿ ಏನೇನು ಮಾಡಬೇಕೆಂಬ ಬಗ್ಗೆ ಈಗಾಗಲೇ ನೀಲನಕ್ಷೆ ತಯಾರಿಸಿದ್ದೇನೆ. ಈ ಬಗ್ಗೆ ಸಚಿತ್ರ, ಸಮಗ್ರ ವಿವರ ತಿಳಿಸುವ ಪವರ್‌ಪಾಯಿಂಟ್ ಪ್ರಸೆಂಟೇಶನ್ ಸಿದ್ಧಪಡಿಸಿದ್ದೇನೆ. ಆದರೆ ನನ್ನ ಲ್ಯಾಪ್‌ಟಾಪ್‌ನಲ್ಲಿ ಬ್ಯಾಟರಿ ಖಾಲಿಯಾಗುತ್ತಿರುವುದರಿಂದ ನನಗೆ ತುರ್ತಾಗಿ ಪವರ್‌ಸಾಕೆಟ್ ಬೇಕಾಗಿದೆ. ಅಲ್ಲದೇ ಒಂದು ಪ್ರೊಜೆಕ್ಟರ್ ಹಾಗೂ ಸ್ಕ್ರೀನ್ ಸಹ ಬೇಕಾಗಿದೆ' ಎಂದು ಹೇಳಿದರಂತೆ. ಸ್ಪೀಕರ್‌ಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ತಮ್ಮ ಕೋರಿಕೆಯನ್ನು ಯಾರು ಈಡೇರಿಸುತ್ತಾರೆಂಬುದು ನಂದನ್‌ಗೆ ಗೊತ್ತಾಗಲಿಲ್ಲ. ಎರಡು ನಿಮಿಷ ಇಡೀ ಸದನದಲ್ಲಿ ದಿವ್ಯಮೌನ.

ಮುಂದೇನಾಯಿತೆಂಬುದನ್ನು ಕೇಳಿ. ನಂದನ್ ನಿಲೇಕಣಿ ಮಂಡಿಸಿದ ಬೇಡಿಕೆ ಈಡೇರಿಸುವ ಸಾಧ್ಯತೆ ಬಗ್ಗೆ ಚರ್ಚಿಸಲು ಜಂಟಿ ಕ್ಯಾಬಿನೆಟ್ ಸೆಕ್ರೆಟರಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತಂತೆ. ಲ್ಯಾಪ್‌ಟಾಪ್, ಸಾಕೆಟ್, ಪ್ರೊಜೆಕ್ಟರ್ ಹಾಗೂ ಸ್ಕ್ರೀನನ್ನು ಸಂಸತ್ತಿನ ಒಳಗೆ ತರುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ತರಬಹುದೇ ಎಂಬುದನ್ನು ಚರ್ಚಿಸಲು ಪವರ್, ಐಟಿ ಹಾಗೂ ಪ್ರಸಾರ ಖಾತೆ ಅಧೀನ ಕಾರ್ಯದರ್ಶಿಗಳಿಗೆ feasibility ರಿಪೋರ್ಟ್ ಸಿದ್ಧಪಡಿಸಲು ಜಂಟಿ ಕ್ಯಾಬಿನೆಟ್ ಸೆಕ್ರೆಟರಿ ಸಮಿತಿ ಸೂಚಿಸಿತಂತೆ. ಯಾಕೆಂದರೆ ಪವರ್ ಸಾಕೆಟ್ ಬಗ್ಗೆ ಪವರ್ ಮಿನಿಸ್ಟ್ರಿ, ಪ್ರೊಜೆಕ್ಟರ್ ಬಗ್ಗೆ ಐಟಿ ಮಿನಿಸ್ಟ್ರಿ ಮತ್ತು ಸ್ಕ್ರೀನ್ ಬಗ್ಗೆ ಪ್ರಸಾರ ಖಾತೆಯ ಸಚಿವರುಗಳು ನಿರ್ಧಾರ ತೆಗೆದುಕೊಳ್ಳಬೇಕಲ್ಲ. ಸಾಕೆಟ್, ಪ್ರೊಜೆಕ್ಟರ್ ಹಾಗೂ ಸ್ಕ್ರೀನ್ ಖರೀದಿಸಲು ಆಯಾ ಖಾತೆಯ ಸಂಬಂಧಪಟ್ಟ ಅಧಿಕಾರಿಗಳು ಟೆಂಡರ್ ಕರೆಯಬೇಕು. ಟೆಂಡರ್ ರಿವ್ಯೂ ಕಮಿಟಿ, ಟೆಂಡರ್ ಓಪನ್ ಕಮಿಟಿ, ಟೆಂಡರ್ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳುವ ಕಮಿಟಿ ರಚಿಸಲು ಸೂಚಿಸಲಾಯಿತಂತೆ. ಅನಂತರ ಇವುಗಳನ್ನು ಪೂರೈಸಲು ಟೆಂಡರ್ ಪಡೆದವರಿಗೆ ಹೇಳಿದಾಗ ಅವರು ತೊಂಬತ್ತು ದಿನ ಕಾಲಾವಕಾಶ ಕೋರಿದರಂತೆ. ಒಂದು ಜುಜುಬಿ ಸಾಕೆಟ್, ಪ್ರೊಜೆಕ್ಟರ್, ಸ್ಕ್ರೀನ್ ಪೂರೈಸಲು ಕೇಂದ್ರ ಸರಕಾರದಲ್ಲಿ ಇಷ್ಟೆಲ್ಲ ಸರ್ಕಸ್ ಮಾಡಬೇಕಾಗಿರುವಾಗ, ದೇಶದ 115 ಕೋಟಿ ಜನರಿಗೆ ಯುನಿಕ್ ಐಡೆಂಟಿಫಿಕೇಶನ್ ಕಾರ್ಡ್ ಕೊಡುವುದಾದರೂ ಹೇಗೆ ಎಂಬ ಯೋಚನೆ ನಂದನ್‌ಗೆ ಕಾಡಲಾರಂಭಿಸಿತಂತೆ. ಅಷ್ಟೊತ್ತಿಗೆ ನಂದನ್‌ಗೆ 30-60-90-120 ದಿನಗಳ ಟೈಮ್‌ಲೈನ್ ಬದಲು ವರ್ಷ' ಎಂದು ಬದಲಿಸಿಕೊಳ್ಳುವಂತೆ ಯಾರೋ ಸೂಚಿಸಿದರಂತೆ.

ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ ಆರು ತಿಂಗಳ ನಂತರ ಪವರ್‌ಪಾಯಿಂಟ್ ಪ್ರಸೆಂಟೇಶನ್ ಮಾಡಲು ನಂದನ್‌ಗೆ ಸ್ಪೀಕರ್ ಸೂಚಿಸಿ ಕಲಾಪ ಮುಂದೂಡಿದರಂತೆ. ನಂದನ್‌ಗೆ ಹೇಗಾಗಿರಬೇಡ?

ಗೊತ್ತಿರಲಿ, ಅಕ್ಷರಶಃ ಸರಕಾರವೆಂಬ ಕತ್ತೆ ವರ್ತಿಸುವುದೇ ಹೀಗೆ. ಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more