• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಥಕ್ಕೂ ನಿಲುಕದ ಅನರ್ಥಕ್ಕೂ ಸಿಲುಕದ ಕಮಲಾದಾಸ್

By * ವಿಶ್ವೇಶ್ವರ ಭಟ್
|
ಮಧ್ಯಮ ವರ್ಗದ ಕುಟುಂಬಗಳ ಹೆಣ್ಣುಮಕ್ಕಳದು ಗೋಳಿನ ಕತೆ. ಆ ಹೆಣ್ಣುಮಕ್ಕಳಿಗೆ ಹಾಸಿಗೆ ಮೇಲೆ ಸುಖವೆಂಬುದು ಹುಡುಕಿದರೂ ಸಿಗುವುದಿಲ್ಲ. ಹಾಗೆ ನೋಡಿದರೆ ಅವರ ಪಾಲಿಗೆ ಹಾಸಿಗೆಯೇ ಶಿಲುಬೆ. ಗಂಡಸರು ಅವಳ ಮೇಲೆ ಕಾಮದಾಹದಿಂದ ಬೀಳುತ್ತಾರೆ, ಹೊರತು ಪ್ರೀತಿಯಿಂದ ಅಲ್ಲ. ಕೊನೆಗೂ ಅವಳಿಗೆ ಪ್ರೀತಿ ಮರೀಚಿಕೆಯಾಗಿಯೇ ಉಳಿಯುತ್ತದೆ. ಈ ಪ್ರೀತಿ ಹುಡುಕಾಟದಲ್ಲಿ ಅವಳಿಗೆ ಜೀವನ ಮುಗಿದು ಹೋಗಿರುವುದು ಗೊತ್ತೇ ಆಗುವುದಿಲ್ಲ.'

ಮಧ್ಯಮ ವರ್ಗದ ಮಹಿಳೆ ಬಾಯಿ ಇದ್ದೂ ಮೂಕಿ. ಆಕೆಯ ಆರ್ತನಾದ ಯಾರಿಗೂ ಕೇಳಿಸುವುದಿಲ್ಲ. ಮದುವೆ ಎಂಬ ವ್ಯವಸ್ಥೆಯಲ್ಲಿ ಆಕೆ ಪ್ರತಿನಿತ್ಯ ಲೈಂಗಿಕ ಶೋಷಣೆಗೆ ಒಳಗಾಗುತ್ತಾಳೆ. ಬಹುತೇಕ ಸಂದರ್ಭದಲ್ಲಿ ಆಕೆಗೆ ಪ್ರೀತಿಯೂ ಸಿಗುವುದಿಲ್ಲ. ಕಾಮವೂ ತಣಿದಿರುವುದಿಲ್ಲ. ಅವಳ ಆಸೆಯ ಮಂಜುಗಡ್ಡೆ ಸದಾ ಹೆಪ್ಪುಗಟ್ಟಿರುತ್ತದೆ. ಇದರಿಂದ ಹೊರಬರಲಾಗದೇ ಆಕೆ ಕ್ಷಣಕ್ಷಣವೂ ಸಾಯುತ್ತಾಳೆ. ಈ ನಿತ್ಯಸಾವಿನಿಂದ ನಾನು ಹೊರ ಬರುವ ಸಣ್ಣ ಪ್ರಯತ್ನ ಮಾಡಿದ್ದೇನೆ.'

ಹೀಗೆಂದು ಬರೆಯುತ್ತಾರೆ ಮಲೆಯಾಳಂ ಹಾಗೂ ಇಂಗ್ಲಿಷ್ ಲೇಖಕಿ ಕಮಲಾದಾಸ್. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಆಗ ತಾನೆ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಿಂದ ಹೊರಬಿದ್ದ ಸಮಯದಲ್ಲಿ ಕಮಲಾದಾಸ್ ಅವರ ಆತ್ಮಕತೆ ಮೈ ಸ್ಟೋರಿ' ಓದಿ ಅಚ್ಚರಿ, ಆಘಾತ, ವಿಷಣ್ಣಭಾವ ಹಾಗೂ ತೀವ್ರ ವಿಷಾದಗಳೆಲ್ಲ ಒಂದೇ ಬಾರಿಗೆ ಆವರಿಸಿಕೊಂಡಿತ್ತು. ಆ ದಿನಗಳಲ್ಲಿ ಆ ಪುಸ್ತಕತೀವ್ರ ವಿವಾದ ಹಾಗೂ ಚರ್ಚೆಗೆ ಒಳಗಾದ ಕೃತಿಯಾಗಿತ್ತು. ಒಂದೆರಡು ದಿನ ಆ ಕೃತಿಯ ಓದಿನ ಸೆಳೆತದಿಂದ ಬಿಡಿಸಿಕೊಳ್ಳಲು ಆಗಿರಲಿಲ್ಲ. ಅಂದಿನಿಂದಲೂ ಆ ಕೃತಿಯ ಪುಟಗಳ ಹೆಜ್ಜೆಗುರುತು ಮನಸ್ಸಿನಲ್ಲಿ ಹಸಿಹಸಿಯಾಗಿಯೇ ಇದೆ. ನಮ್ಮ ಯು.ಆರ್. ಅನಂತಮೂರ್ತಿ ಹೇಳಿದಂತೆ ಮುಜುಗರ ಮೀರಿ ನಿಂತ ಈ ಮರ್ಯಾದಸ್ಥ ಹೆಂಗಸು' ನನ್ನ ಪಾಲಿಗೆ ಅರ್ಥವಾಗದ, ಅರ್ಥಕ್ಕೆ ನಿಲುಕದ, ಅನರ್ಥಕ್ಕೂ ಸಿಲುಕದ, ಪ್ರತಿ ಗ್ರಹಿಕೆಯಲ್ಲೂ ವಿಶೇಷ ಅರ್ಥವನ್ನೇ ಸೃಜಿಸುವ ಒಬ್ಬ ಅಪರೂಪದ, ಅದ್ಭುತ ವ್ಯಕ್ತಿಯಾಗಿ ನಿಲ್ಲುತ್ತಾರೆ.

ಇಂಥ ಧೀಮಂತೆಯನ್ನು ಒಮ್ಮೆಯಾದರೂ ಮುಖಾಮುಖಿಯಾಗಬೇಕು ಎಂದು ಅನೇಕ ಸಲ ಅಂದುಕೊಂಡಿದ್ದೆ. ಮೊನ್ನೆ ತಿರುವನಂತಪುರದಲ್ಲಿ ಅವರ ಪಾರ್ಥೀವ ಶರೀರದ ಮುಂದೆ ನಿಲ್ಲುವಾಗ ಅಂಥ ಕ್ಷಣ ಈ ರೂಪದಲ್ಲಿ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಕಮಲಾದಾಸ್ ತಣ್ಣಗೆ ಮಲಗಿದ್ದರು. ತನ್ನ ಸುತ್ತಲಿನ ಕ್ರೂರ ವ್ಯವಸ್ಥೆ ತನ್ನ ಬಗ್ಗೆ ಏನೇ ಅಂದುಕೊಂಡರೂ ಪರವಾಗಿಲ್ಲ, ತಾನು ಮಾತ್ರ ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ ಹಾಗೂ ಅದನ್ನು ಕಳೆದುಕೊಂಡು ಪದೇಪದೆ ಸಾಯುವುದಿಲ್ಲವೆಂಬದಿಟ್ಟತನವನ್ನು ಅವುಡುಗಚ್ಚಿಕೊಂಡಂತೆ ಅವರು ಮಲಗಿದ್ದರೆ, ಇಡೀ ಮಲೆಯಾಳಂ ಸಾರಸ್ವತಲೋಕ ಅವರಿಗೆ ಅಂತಿಮ ವಿದಾಯ ಹೇಳಲು ಸೇರಿತ್ತು. ಪುಣೆಯಿಂದ ಕೊಚ್ಚಿ ಮಾರ್ಗವಾಗಿ ತಿರುವನಂತಪುರಕ್ಕೆ ಅವರ ಪಾರ್ಥೀವ ಶರೀರವನ್ನು ತರುವಾಗ ಅಸಂಖ್ಯ ಮಂದಿ ಊರೂರುಗಳಲ್ಲಿ ಆ ಮಹಾಲೇಖಕಿಯ ಅಂತಿಮದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಒಬ್ಬ ನೇತಾರ, ಸಿನಿಮಾನಟ, ನಟಿ, ಮಂತ್ರಿಗಳ ನಿಧನದಲ್ಲಿ ಕಾಣಬಹುದಾದ ಜನಸಾಗರ, ಒಬ್ಬ ಲೇಖಕಿಯ ಮರಣದಲ್ಲೂ ಕಾಣುವಂತಾಗಿದ್ದು ಅವರ ಬದುಕು ಹಾಗೂ ಬರಹಕ್ಕೆ ಸಿಕ್ಕ ಗೌರವ. ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಇಬ್ಬರು ತಮ್ಮತಮ್ಮಲ್ಲಿಯೇ ಮಾತಾಡಿಕೊಳ್ಳುತ್ತಿದ್ದರು- ಸಾಹಿತ್ಯವೆಂದರೆ ಬರೀ ಆತ್ಮರತಿಯ ಬರಹ. ಎಲ್ಲ ಬರಹಗಾರರು ತಮ್ಮ ತೃಪ್ತಿಗಾಗಿ ಬರೆಯುತ್ತಾರೆ. ಆದರೆ ಕಮಲಾದಾಸ್ ಆತ್ಮಸಾಕ್ಷಿಗಾಗಿ ಬರೆದರು. ಅವರು ಬರಹದಂತೆ ಬದುಕಿದರು. ಅವರ ಬರಹ ಹಾಗೂ ಬದುಕನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.' ಅತ್ಯಂತ ವಸ್ತುನಿಷ್ಠ ಬದುಕು-ಬರಹದ ವಿಮರ್ಶೆಯೆನಿಸಿತು.

ಕಮಲಾದಾಸ್ ಕೇವಲ ಮಲೆಯಾಳಂ ಸಾಹಿತ್ಯಲೋಕವೊಂದೇ ಅಲ್ಲ, ಬರಹಗಾರರ ಸಂಕುಲದಲ್ಲಿಯೇ ಎದ್ದು ನಿಲ್ಲುವ ವ್ಯಕ್ತಿ. ಹೊಸ ಆಲೋಚನೆಯ ಕ್ರಮ ಹೇಳಿಕೊಟ್ಟ, ಸಂಪ್ರದಾಯದ ಮಗ್ಗುಲು ಬದಲಿಸಿ ಬರವಣಿಗೆಯ ಬದುವು ತೋರಿಸಿಕೊಟ್ಟ ಲೇಖಕಿ. ಅವರ ಬಂಡಾಯ ಮನೋಭಾವದ ಬಗ್ಗೆ ಯಾರು ಏನೇ ಹೇಳಲಿ, ಒಬ್ಬ ಬರಹಗಾರನಿಗಿರಬೇಕಾದ ನಿಜವಾದ ಅಂತಃಶಕ್ತಿ ಅವರ ವ್ಯಕ್ತಿತ್ವದಲ್ಲಿ ಅಡಗಿತ್ತು. ಹೀಗಾಗಿ ಅವರು ತಮಗೆ ತೋಚಿದಂತೆ, ತೋಚಿದ್ದೆಲ್ಲವನ್ನೂ ನೇರವಾಗಿ ಬರೆದರು. ಅವರೆಂದೂ ಲೇಖನಿಗೆ ಮುಖವಾಡ, ಕವಚ ತೊಡಿಸಲಿಲ್ಲ. ತನ್ನ ಬರಹಗಳಿಂದ ಗಂಡ, ಮಕ್ಕಳು, ನೆಂಟರಿಷ್ಟರಿಗೆ ಮುಜುಗರವಾಗಬಹುದೆಂದು ಆತ್ಮವಂಚನೆ ಮಾಡಿಕೊಂಡು ಬರೆಯಲಿಲ್ಲ. ತಮ್ಮ ಬದುಕಿನ ಕಠೋರ ಸತ್ಯಗಳಿಗೆ ವಿಮುಖವಾಗಿ ಬರಹಗಳನ್ನು ಹರಿಯಬಿಡಲಿಲ್ಲ. ಹೀಗಾಗಿ ಸಾಹಿತ್ಯದ ಚಮತ್ಕಾರ, ಸೊಗಡಿನ ಜತೆಗೆ ಬದುಕಿನ ಅನುಭವಗಳ ದಟ್ಟ ಅನುಭೂತಿ ಅವರ ಬರಹಗಳಲ್ಲಿ ಸಾಂದ್ರವಾಗಿದೆ. ಕಮಲಾದಾಸ್ ನಮಗೆ ಯಾಕೆ ಅಚ್ಚರಿಯಷ್ಟೇ ಅಲ್ಲ, ಮಹತ್ವದ ವ್ಯಕ್ತಿಯಾಗುತ್ತಾರೆಂದರೆ, ಜಗತ್ತು ಆಧುನಿಕವಾಗಿದೆ, ಮುಂದುವರಿದಿದೆ, ಹೊಸ ಆಲೋಚನೆಯ ಕ್ರಮಗಳು ಟಿಸಿಲೊಡೆದಿವೆ ಎಂದು ಈಗ ನಾವು ಹೇಳಿಕೊಳ್ಳುತ್ತಿದ್ದರೂ, ಮುವತ್ತು-ನಲವತ್ತು ವರ್ಷಗಳ ಹಿಂದೆಯೇ, ಈಗಲೂ ಧಿಗ್ಗೆನ್ನು ವಂಥ ಬೆಚ್ಚಗಿನ ಬೆಚ್ಚಿಬೀಳಿಸುವ ಸತ್ಯ ಹೇಳುವ, ಅವುಗಳಿಗೆ ಸಾಹಿತ್ಯಕ ಚೌಕಟ್ಟಿನೊಳಗೆ ಕಥನಕರಿಸುವ ಕಲಾವಂತಿಕೆಯನ್ನು ಅವರು ಆಗಲೇ ಕೊಟ್ಟಿದ್ದರೆಂಬ ಕಾರಣಕ್ಕೆ. ಸಾಹಿತ್ಯದ ಮಡಿವಂತಿಕೆ ಹಾಗೂ ಸಂಪ್ರದಾಯಕ್ಕೆ ನೇರವಂತಿಕೆಯ ಬರೆ ಎಳೆದರೆಂಬ ಕಾರಣಕ್ಕೆ. ಗಂಡ-ಹೆಂಡತಿ ನಡುವಿನ ಮಂಚದ ಮೇಲಿನ ಪಿಸುಮಾತು, ನಿರಾಸೆ, ಸೋಗಲಾಡಿತನ, ಪ್ರೀತಿ, ಕಾಮತೃಷೆ, ದೇಹದಾಹ, ಪದಗಳಲ್ಲಿ ಆವಿರ್ಭವಿಸದ, ಭಾವನೆಗಳಲ್ಲಿ ಸೋರಿಹೋಗುವ ಸತ್ಯಗಳೆಲ್ಲ ಸಾಹಿತ್ಯಕ ದೃಷ್ಟಿಯಿಂದಲೂ ಹೇಗೆ ಮಹತ್ವವಾಗುತ್ತವೆಂಬ ಕಾರಣಕ್ಕೆ. ಮನುಷ್ಯ ಸಂವೇದಿ ವಿಸ್ಮೃತಿಗಳನ್ನೇ ವಾಸ್ತವವೆಂದು ಭಾವಿಸುತ್ತಿದ್ದ ಸಂಪ್ರದಾಯಸ್ಥರ ಗೊಡ್ಡು ಆಚರಣೆಗಳನ್ನು ಪ್ರಶ್ನಿಸಿ, ಹುಸಿ ನೈತಿಕತೆ, ಆಷಾಢಭೂತಿತನದ ವಿರುದ್ಧ ದನಿಯೆತ್ತಿದ್ದಕ್ಕಾಗಿ.

ಕಮಲಾದಾಸ್ ಅವರದು ವಿಶಿಷ್ಟ ಬದುಕು. ಕೇರಳದ ತ್ರಿಶ್ಯೂರ್ ಜಿಲ್ಲೆಯ ಪುನ್ನಯೂರ್‌ಕ್ಕುಲಮ್‌ನಲ್ಲಿ ಹುಟ್ಟಿದ್ದು. ತಂದೆ ವಿ.ಎಂ. ನಾಯರ್. ಇವರು ಕೇರಳದ ಪ್ರಸಿದ್ಧ ದೈನಿಕ ಮಾತೃಭೂಮಿ'ಯ ವ್ಯವಸ್ಥಾಪಕ ಸಂಪಾದಕರಾಗಿದ್ದರು. ತಾಯಿ ನಲಪತ್ ಬಾಲಮಣಿಯಮ್ಮ. ಅವರೂ ಸಹ ಕವಯಿತ್ರಿ. ಮನೆಯಲ್ಲಿ ಸದಾ ಕತೆ, ಕವನ, ಲೇಖನ, ಸಾಹಿತ್ಯದ ಚರ್ಚೆ, ಮಾತುಕತೆ. ನಾಯರ್-ಬಾಲಮಣಿಯಮ್ಮ ಪ್ರೀತಿಮಾಡುವುದೂ ಸಹ ಸಾಹಿತ್ಯದ ಪರಿಭಾಷೆಯಲ್ಲಿ ಎಂಬಂಥ ಅಕ್ಷರ ಪರಿಸರದ ದಟ್ಟಣೆ. ಈ ವಾತಾವರಣ ಕಮಲಾ ಅವರ ಮೇಲೆ ಗಾಢ ಪ್ರಭಾವ ಬೀರಿರಬೇಕು. ಆದರೆ ನಾಯರ್ ಕುಟುಂಬದಲ್ಲಿ ಹೆಜ್ಜೆ ಹೆಜ್ಜೆಗೂ ಮಡಿ, ಮೈಲಿಗೆ, ಸಂಪ್ರದಾಯ. ಮುಟ್ಟಾದ ಹೆಣ್ಣುಮಕ್ಕಳನ್ನು ಯಾರೂ ನೋಡಬಾರದೆಂಬ ಕಟ್ಟಪ್ಪಣೆ. ಬೇರೆಯವರಿಗೆ ಕಾಣುವಂತೆ ಗಂಡ-ಹೆಂಡತಿ ಸಹ ಪರಸ್ಪರ ಮೈ ಮುಟ್ಟಿಕೊಳ್ಳಬಾರದು. ಇನ್ನು ಸೆಕ್ಸ್ ಬಗ್ಗೆ ಮಾತಾಡುವಂತೆಯೇ ಇಲ್ಲ. ಈ ಎಲ್ಲ ಸೂಕ್ಷ್ಮ ಸಂಗತಿಗಳು ಕಮಲಾ ಅವರ ಮೇಲೆ ತೀಕ್ಷ್ಣವಾಗಿ ಕಾಡಿರಲಿಕ್ಕೆ ಸಾಕು. ಒಂದೆಡೆ ಭಾವನೆಗಳು ಚಿಗುರೊಡೆಯಲು ಪ್ರೇರಕವೆನಿಸಿರುವ ಸಾಹಿತ್ಯಕ ಪರಿಸರ. ಇನ್ನೊಂದೆಡೆ ಭಾವನೆಗಳನ್ನು ಹೊಸಕಿಹಾಕಿ, ಆಸೆಗಳನ್ನು ಕಮರಿಸಬಲ್ಲ ಶುಷ್ಕ ಸಂಪ್ರದಾಯಸ್ಥರ ಮನೆ ವಾತಾವರಣ. ಈ ತಾಕಲಾಟ, ದ್ವಂದ್ವ ಕಮಲಾ ಅವರನ್ನು ಎಳೆವಯಸ್ಸಿನಲ್ಲಿಯೇ ತಟ್ಟಿರಬಹುದು. ತಾಯಿಯ ಚಿಕ್ಕಪ್ಪ ನಲಪತ್ ನಾರಾಯಣ ಮೆನನ್ ಸಹ ಪ್ರಸಿದ್ಧ ಕವಿ. ಈ ಎಲ್ಲ ಪ್ರಭಾವಗಳ ಒಳಸುಳಿಯಲ್ಲಿ ಸಿಲುಕಿದ ಕಮಲಾ ಬರೆಯಲಾರಂಭಿಸಿದರು. ಮಲೆಯಾಳಂನ ಪ್ರಸಿದ್ಧ ಸಾಹಿತಿಗಳ ಒಡನಾಟ, ಮನೆಗೆ ಬಂದು-ಹೋಗುವವರೂ ಹೆಚ್ಚಾಗಿ ಅವರೇ ಆಗಿದ್ದರಿಂದ ಅವರ ಸಾಮೀಪ್ಯ ಸಹ ಕಮಲಾಗೆ ವರದಾನವಾಯಿತು. ಕಮಲಾ ಬರೆಯಲು ಆರಂಭಿಸಿದ್ದು ಮದುವೆಯಾದ ಬಳಿಕ. ಹದಿಮೂರನೇ ವಯಸ್ಸಿನಲ್ಲಿದ್ದಾಗ ಮಾಧವದಾಸ್ ಎಂಬುವವರೊಂದಿಗೆ ವಿವಾಹವಾಯಿತು. ಆಗ ಕೇವಲ ಆರನೇ ತರಗತಿವರೆಗೆ ಮಾತ್ರ ಓದಿದ್ದ ಕಮಲಾಗೆ ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಆಗಲಿಲ್ಲ. ಮನೆಯಲ್ಲಿ ಸ್ವತಃ ಓದಿಯೇ ಇಂಗ್ಲಿಷ್ ಕಲಿತು ಆ ಭಾಷೆಯಲ್ಲಿಯೇ ಕತೆ, ಕವನ, ಆತ್ಮಕಥೆ ಬರೆದಿದ್ದು, ಪ್ರಸಿದ್ಧ ಇಂಗ್ಲಿಷ್ ಲೇಖಕಿ ಎಂದೂ ಕರೆಸಿಕೊಂಡಿದ್ದು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿ. ಆರನೆ ಕ್ಲಾಸಿನವರೆಗೆ ಓದಿದ ಕಮಲಾದಾಸ್‌ಗೆ ದೇಶ-ವಿದೇಶಗಳ ಆರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಸಣ್ಣ ಮಾತಲ್ಲ. ತನಗಿಂತ ಹತ್ತಾರು ವರ್ಷ ದೊಡ್ಡವನಾದ ಗಂಡನೊಂದಿಗೆ ಸಂಸಾರ ಮಾಡುತ್ತಾ ಮಕ್ಕಳನ್ನು ಹಡೆದು, ಪೋಷಿಸಿ ಅವರ ಶಾಲೆ, ವಿದ್ಯಾಭ್ಯಾಸಗಳ ನಡುವೆಯೇ ಮಲೆಯಾಳಂ ಹಾಗೂ ಇಂಗ್ಲಿಷ್ ಸಾಹಿತ್ಯ ಓದುತ್ತಾ ಓದುತ್ತಾ, ತಾವೂ ಬರೆಯಲಾರಂಭಿಸಿದ ಕಮಲಾ ಅವರ ಬರಹಗಾಥೆಯೂ ರೋಚಕವೆನಿಸುವಷ್ಟು ವಿಸ್ಮಯಕಾರಿ.

ಕಮಲಾ ಅವರು ಆರಂಭದಲ್ಲಿ ಬರೆಯಲಾರಂಭಿಸಿದಾಗ ತಾಯಿ ಬಾಲಮಣಿಯಮ್ಮ ಪ್ರೋತ್ಸಾಹಿಸಿದರೂ, ಅವರಿಗೆ ಬೆನ್ನೆಲುಬಾಗಿ ನಿಂತವರು ಪತಿ ಮಾಧವದಾಸ್. ಹೆಂಡತಿ ಬರವಣಿಗೆಯಲ್ಲಿ ತೊಡಗಿದಾಗ ಮನೆಕೆಲಸದಲ್ಲಿ ಅವರು ನೆರವಾಗುತ್ತಿದ್ದರು. ಪ್ರೀತಿ, ಮೋಸ ಹಾಗೂ ಅದರ ಪರಿಣಾಮಗಳನ್ನು ಬಿಂಬಿಸುವ ಸಮ್ಮರ್ ಇನ್ ಕೋಲ್ಕೊತಾ' ಬರೆದಾಗ ಕಮಲಾದಾಸ್ ಮೊದಲ ಬಾರಿಗೆ ದೇಶಾದ್ಯಂತ ಸಾಹಿತ್ಯಾಸಕ್ತರ ಗಮನಸೆಳೆದರು. ಅಲ್ಲಿಯ ತನಕ ಅವರು ಮಲೆಯಾಳಂನಲ್ಲಿ ಸಣ್ಣಕತೆ, ಕವನಗಳನ್ನು ಬರೆಯುತ್ತಿದ್ದರು. ಅವರ ಕಾದಂಬರಿಗಳೂ ಮಲೆಯಾಳಂ ಸಾಹಿತ್ಯದಲ್ಲಿ ಅವರಿಗೊಂದು ಸ್ಥಾನವನ್ನು ದೊರಕಿಸಿಕೊಟ್ಟಿದ್ದವು. ತಮ್ಮ ಆರಂಭಿಕ ಬರಹಗಳಲ್ಲಿ ವಿಭಿನ್ನ ಹೆಜ್ಜೆಗುರುತನ್ನು ಮೂಡಿಸಿದ್ದ ಅವರು, ಬರಬರುತ್ತಾ ಸಂಪ್ರದಾಯವಾದಿ ಆಚರಣೆ, ಸ್ಥಾಪಿತ ಸಿದ್ಧಾಂತಗಳನ್ನೆಲ್ಲ ಪ್ರಶ್ನಿಸಲಾರಂಭಿಸಿದರು. ಅವರ ಬರಹಗಳಲ್ಲಿ ಹೆಣ್ಣು ಸದಾ ಹಪಹಪಿಸುವ ಪ್ರೀತಿ, ಅದು ಸಿಗದಿದ್ದಾಗ ಇಣುಕುವ ಹತಾಶೆ, ನಿರಾಶೆಯೇ ಪ್ರಧಾನವಾಗಿ ವ್ಯಕ್ತವಾಗುತ್ತಿತ್ತು.

ಆದರೆ ಯಾವಾಗ ಕಮಲಾದಾಸ್ ತಮ್ಮ ಆತ್ಮಕಥೆ ಬರೆಯಲಾ ರಂಭಿಸಿದರೋ, ಅದು ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಲಾರಂಭಿಸಿತೋ, ದೇಶಾದ್ಯಂತ ವಿವಾದದ ಬಿರುಗಾಳಿಯೇ ಬೀಸಿತು. ಅವೆಲ್ಲವನ್ನೂ ಸಂಗ್ರಹಿಸಿ 'My story' ಎಂಬ ಪುಸ್ತಕ ಪ್ರಕಟಿಸಿದಾಗ ಅವರ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದಿತು. ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅದು ತರ್ಜುಮೆಗೊಂಡಿತು. ವಾಚಾಳಿ ಹೆಣ್ಣುಮಗಳೊಬ್ಬಳು ತನ್ನ ಕತೆಯನ್ನು ಬೀದಿಯಲ್ಲಿ ನಿಂತು ಬಣ್ಣಿಸುವಂತೆ ಸ್ವಲ್ಪವೂ ನಾಚಿಕೆಯಿಲ್ಲದೇ ಬರೆದುಕೊಂಡಿದ್ದಾಳೆಂದು ನಿಮಗೆ ಅನಿಸಬಹುದು. ಆದರೆ ಇದು ಆ ಎಲ್ಲ ಮೇಲ್ಮೈಗುಣಗಳನ್ನೂ ಮೀರಿ ಆಳದಲ್ಲಿ ಹರಿಯುವ ಶಾಂತ ಸಮುದ್ರದಂಥ ಕೃತಿ' ಎಂದು ನನ್ನ ಪುಸ್ತಕಪ್ರೇಮಿ ಮಿತ್ರ ಧಾರವಾಡದ ರಮೇಶ್ ಜಾವಡೇಕರ್ ಹೇಳಿ, ಆ ಪುಸ್ತಕವನ್ನು ಓದಲೇಬೇಕೆಂದು ಕೊಟ್ಟಿದ್ದರು. ಒಂದೇ ಕುಳಿತಕ್ಕೆ ಓದಿ ಮುಗಿಸದೇ ಮೇಲೇಳಲು ಆಗಲಿಲ್ಲ. ಅಷ್ಟೊಂದು ಗಾಢವಾಗಿ ತಟ್ಟುವ ಕೃತಿಯದು. ಹೆಣ್ಣುಮಗಳೊಬ್ಬಳು ಹೀಗೆಲ್ಲ ಬರೆಯಬಹುದಾ, ತನ್ನ ಅಂತರಂಗವನ್ನೆಲ್ಲ ಸ್ವಲ್ಪವೂ ಮುಜುಗರವಿಲ್ಲದೇ ಹೀಗೆಲ್ಲ ತೆರೆದಿಟ್ಟುಕೊಳ್ಳಬಹುದಾ, ತನ್ನ ತೀರದ ಬಯಕೆ, ವಾಂಛೆಗಳನ್ನು ಗಂಡ, ಮಕ್ಕಳು, ಬಂಧು ಬಾಂಧವರೆಲ್ಲ ಓದಿದರೆ ಏನಾಗಬಹುದು... ಈ ಯಾವ ಅಂಶಗಳಿಗೆಲ್ಲ ಸ್ವಲ್ಪವೂ ಅಳುಕದೇ, ದಿಟ್ಟವಾಗಿ ಬರೆದಿದ್ದಾರಲ್ಲ ಅಬ್ಬಾ' ಎಂದೆನಿಸಿತ್ತು.

ವಿಷಾದ, ಏನೋ ಒಂಥರ ಸಂಕಟ, ಡಿಪ್ರೆಶನ್. ಮನಸ್ಸಿನೊಳಗೆ ವಿನಾಕಾರಣ ನೂರಾರು ಪ್ರಶ್ನೆಗಳ ಧಾರಾಕಾರ ಸುರಿಮಳೆ, ಪ್ರವಾಹದ ಆರ್ಭಟ. ಕೊನೆಗೆ ಇದ್ದಕ್ಕಿದ್ದಂತೆ ಪ್ರವಾಹದ ನಂತರದ ನೀರವತೆ, ಒಂದು ರೀತಿಯ ಖಾಲಿಖಾಲಿತನ. ಕಮಲಾದಾಸ್ ನಮ್ಮನ್ನು ಅತೀವವಾಗಿ ಡಿಸ್ಟರ್ಬ್ ಮಾಡುತ್ತಾರೆ. ಒಂದೆಡೆ ಅವರು ಹೀಗೆ ಬರೆಯುತ್ತಾರೆ- ನಾನು ಕೋಲ್ಕೊತಾಕ್ಕೆ ಹೋದ ಮೊದಲ ವರ್ಷ ಮುಂಬಯಿಯಿಂದ ಆಗಮಿಸಿದ ಪರಿಚಿತರೊಬ್ಬರು ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ನನ್ನನ್ನು ಬೆಳಗಿನ ಉಪಾಹಾರಕ್ಕೆ ಕರೆದರು. ಅವರು ಸಾಕಷ್ಟು ಓದಿಕೊಂಡ ಬುದ್ಧಿವಂತ ವ್ಯಕ್ತಿ. ಪುಸ್ತಕದ ಕುರಿತು ಮಾತಾಡುವುದಕ್ಕಿಂತ ಹೆಚ್ಚಿನ ಖುಷಿ ನನಗೆ ಮತ್ಯಾವುದರಲ್ಲೂ ಸಿಗುವುದಿಲ್ಲ. ಅವರು ಪುಸ್ತಕದ ಕುರಿತು ಮಾತಾಡುತ್ತಿದ್ದರು. ನಾನು ಸಂತಸದಿಂದ ಅವರ ಬಳಿ ಹೋಗಿ ಕುಳಿತೆ. ನನಗೆ ಅವರ ಮಾತು ಇಷ್ಟವಾಯಿತು. ಆ ವ್ಯಕ್ತಿ ಇದ್ದಕ್ಕಿದ್ದಂತೆ ನನ್ನ ತೊಡೆಗೆ ಕೈಹಾಕಿದ. ಬಿಗಿಯಾಗಿ ಹಿಡಿದು ಅಮುಕಲಾರಂಭಿಸಿದ. ಇದೇನೋ ಆಕ್ಸಿಡೆಂಟ್ ಅಂದುಕೊಂಡೆ. ಆದರೆ ಅವನ ಕೈ ಇನ್ನಷ್ಟು ಆಳಕ್ಕೆ ಹೋಗುತ್ತಿತ್ತು. ಏನಾಗುತ್ತಿದೆ? ನನ್ನ ನೋಡಿ ಪ್ರೀತಿಸಲು ಅನೇಕ ಗಂಡಸರು ಮುಗಿಬಿದ್ದಿದ್ದರೂ, ಯಾರೂ ಈ ರೀತಿಯ ಕಾಮವಾಂಛೆ ಪ್ರಕಟಿಸಿರಲಿಲ್ಲ. ನನ್ನನ್ನು ಕೆಲವರು ತಮ್ಮ ತಂಗಿಯನ್ನು ಪ್ರೀತಿಸುವಂತೆ ಪ್ರೀತಿಸುತ್ತಿದ್ದರು. ಈ ವ್ಯಕ್ತಿಯ ವರ್ತನೆ ನನ್ನಲ್ಲಿ ಆಶ್ಚರ್ಯ ಹುಟ್ಟಿಸಿತು. ಆತ ನಿಧಾನವಾಗಿ ನನ್ನ ಕೂದಲಿನ ಜತೆ ಹಿತವಾಗಿ ಬೆರಳುಗಳನ್ನು ಆಡಿಸಲಾರಂಭಿಸಿದ. ನಾನು ಅವನ ಪ್ರೇಮಪಾಶದಲ್ಲಿ ಹೆಚ್ಚೂಕಮ್ಮಿ ಮುಳುಗಿಬಿಟ್ಟೆ. ಒಂದು ದಿನ ಆತ ನನ್ನನ್ನು ಬಿಗಿದಪ್ಪಿ ಚುಂಬಿಸಿದಾಗ ನಾನು ಮೌನವಾಗಿ ಸಮ್ಮತಿಸಿದೆ. ಅನಂತರವೇ ಆತ ನನ್ನನ್ನು ಬಿಟ್ಟ. ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳಿದೆ. ನಿನ್ನನ್ನು ಇಷ್ಟಪಡುತ್ತೇನೆಎಂದ. ಈ ಎಲ್ಲ ಘಟನೆಗಳನ್ನು ಮನೆಗೆ ಬಂದು ನನ್ನ ಗಂಡನಿಗೆ ಹೇಳಿದೆ. ಇಂಥ ವ್ಯಕ್ತಿಗಳನ್ನು ಪ್ರೀತಿಸುವುದರ ಅಪಾಯದ ಬಗ್ಗೆ ಅವರು ನನ್ನನ್ನು ಎಚ್ಚರಿಸಿದರು. ಆತ ತನ್ನನ್ನು ಹೊರತಾಗಿ ಬೇರೆಯವರನ್ನು ಪ್ರೀತಿಸದ ವ್ಯಕ್ತಿ ಎಂದು ಅವರು ಹೇಳಿದರು. ನೀನು ನನ್ನ ಕಣ್ಣಲ್ಲಿ ಸದಾ ಪುಟ್ಟ ಮಗು' ಎಂದರು. ನೀನು ಎಲ್ಲರ ಜತೆಗೆ ಪ್ರೇಮದಾಟಕ್ಕೆ ಇಳಿಯಬೇಡ. ಈ ವಿಷಯದಲ್ಲಿ ಚ್ಯೂಸಿ ಆಗಿರಬೇಕು. ನೀನು ನಿನ್ನ ಜೀವನದಲ್ಲಿ ನೋವಿನಿಂದ ನರಳುವುದನ್ನು ನನ್ನಿಂದ ನೋಡಲಾಗದು' ಎಂದರು.

ಕಮಲಾದಾಸ್ ಹೀಗೆ ಬರೆಯುತ್ತಾ ಹೋಗುತ್ತಾರೆ. ತಮ್ಮ ಬದುಕಿನ ಪುಟಗಳನ್ನು ಇಂಥ ಘಟನೆಗಳಲ್ಲಿ ಅದ್ದಿತೆಗೆದು ಸಾರ್ವಜನಿಕವಾಗಿ ನೇತುಹಾಕಿ ಒಣಗಲು ಹಾಕಿದರೆ ಏನಾಗಬೇಡ? ತೋಚಿದಂತೆಲ್ಲ ನಡೆದುಕೊಂಡು ಅವೆಲ್ಲವನ್ನೂ ಗೀಚಿಕೊಂಡರೆ ಏನಾಗಬೇಡ? ಕಮಲಾದಾಸ್ ಆತ್ಮಕಥೆ ಕಂತಿನಿಂದ ಕಂತಿಗೆ ಜನಪ್ರಿಯತೆ, ವಿವಾದ ಹುಟ್ಟುಹಾಕುತ್ತಿದ್ದರೆ, ಇನ್ನೊಂದೆಡೆ ಅದನ್ನು ನಿಲ್ಲಿಸಲು ಸಂಪ್ರದಾಯವಾದಿಗಳು ನಿರ್ಧರಿಸಿದರು. ಇಂಥ ಬರಹಗಳಿಂದ ಮರ್‍ಯಾದಸ್ಥ ಹೆಣ್ಣುಮಕ್ಕಳು ಹಾಳಾಗುತ್ತಾರೆಂದು ಅವರು ವಾದಿಸಿದರು. ಕಮಲಾದಾಸ್ ಸ್ವಲ್ಪವೂ ಜಗ್ಗಲಿಲ್ಲ. ನನ್ನ ಕತೆಯನ್ನು ಹೇಳಿಕೊಳ್ಳಲಾಗದಿದ್ದರೆ ನಾನೇಕೆ ಬರೆಯಬೇಕು. ಆತ್ಮಕಥೆಯೆಂದರೆ ಕಟ್ಟುಕತೆ ಅಲ್ಲ. ಅಲ್ಲಿಯೂ ಬೆತ್ತಲಾಗದಿದ್ದರೆ ನಾನು ಆತ್ಮವಂಚನೆ ಮಾಡಿಕೊಳ್ಳುತ್ತೇನೆ. ನನ್ನ ಸಂಕೋಲೆಗಳ ಬಿಡುಗಡೆಗೆ ನಾನು ಬರೆಯುತ್ತೇನೆ. ಇದರಿಂದ ನಿಮಗೆ ನೋವಾದರೆ ನನ್ನ ಬರಹ ಓದಬೇಡಿ' ಎಂದು ತಿರುಗೇಟು ನೀಡಿದರು.

ಮೈ ಸ್ಟೋರಿ'ಯ ಆರಂಭದಲ್ಲಿ ಅವರೇ ಹೇಳಿಕೊಂಡಿದ್ದಾರೆ- ನನ್ನ ಆತ್ಮಕಥೆಯಿಂದ ನನ್ನ ಸಂಬಂಧಿಕರಿಗೆಲ್ಲ ತೀವ್ರ ಮುಜುಗರವಾಗಿದೆ. ಕಾನೂನುಬದ್ಧವಾಗಿ ಮದುವೆಯಾಗಿ ಗಂಡನೊಂದಿಗೆ ಸಂಸಾರ ಮಾಡಿಯೂ ಬೇರೊಬ್ಬರೊಂದಿಗೆ ಸಂಬಂಧವಿರಿಸಿಕೊಂಡಿದ್ದನ್ನು ಓದುಗರಿಗೆ ಹೇಳಿ ನನ್ನ ಪ್ರತಿಷ್ಠಿತ ಕುಟುಂಬಕ್ಕೆ ಕಳಂಕ ತಂದಿರಬಹುದು. ಸುಂದರ ಹಾಗೂ ಆಕರ್ಷಕ ಗಂಡಸರ ಪ್ರೇಮಪಾಶದಲ್ಲಿ ನಾನೇಕೆ ಸಿಲುಕಿದೆ ಎಂಬುದನ್ನು ಬಹಿರಂಗಗೊಳಿಸಿದೆ. ಇದನ್ನು ಬರೆದ ಬಳಿಕ ನನ್ನ ಹುಟ್ಟೂರಿಗೆ ಹೋದಾಗ ಯಾರೂ ನನ್ನನ್ನು ಮಾತಾಡಿಸಲಿಲ್ಲ. ಹತ್ತಿರ ಸುಳಿಯಲಿಲ್ಲ. ನನಗೆ ಪ್ರಿಯರಾದವರೆಲ್ಲ ಈ ಪುಸ್ತಕದ ದೆಸೆಯಿಂದ ದೂರವಾದರು. ಆದರೆ ಈ ಕೃತಿ ಬರೆದಿದ್ದಕ್ಕೆ ನನಗೆ ಒಂದು ಕ್ಷಣ ಪಶ್ಚಾತ್ತಾಪವಾಗಿಲ್ಲ. ನನ್ನ ಜೀವಿತ ಅವಧಿಯಲ್ಲಿ ನಾನು ಹಲವಾರು ಪುಸ್ತಕ ಬರೆದಿದ್ದೇನೆ. ಆದರೆ ಆ ಎಲ್ಲ ಕೃತಿಗಳಿಗಿಂತ ಹೆಚ್ಚಿನ ಸುಖ, ಸಮಾಧಾನ ಮೈ ಸ್ಟೋರಿ' ಬರೆಯುವಾಗ ನನಗೆ ದೊರೆತಿದೆ. ಈ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ."

ತಮಗನಿಸಿದ್ದನ್ನು ಸಲೀಸಾಗಿ, ನೇರವಾಗಿ ಬರೆದ ಕಮಲಾದಾಸ್ ಜನ ಏನೆನ್ನಬಹುದು, ಸಮಾಜ ಹೇಗೆ ನಡೆಸಿಕೊಳ್ಳಬಹುದು, ಕಟ್ಟಿಕೊಂಡ ಗಂಡನ ಗತಿಯೇನು... ಇಂಥ ಯಾವ ಪ್ರಶ್ನೆಗಳೂ ಅವರನ್ನು ಬಾಧಿಸಲಿಲ್ಲ. ಅವರಿಗೆ ಎಲ್ಲವನ್ನೂ ಹೇಳಬೇಕಾಗಿತ್ತು, ಒಪ್ಪಿತವಾಗಲಿ ಬಿಡಲಿ ಎಲ್ಲವನ್ನೂ ಒಪ್ಪಿಸಬೇಕಾಗಿತ್ತು. ಸತ್ಯದ ಹೊರತಾಗಿ ಅವರಲ್ಲಿ ಹೇಳಿಕೊಳ್ಳಲು ಬೇರೇನೂ ಇರಲಿಲ್ಲ. ಗೊತ್ತಿರಲಿ, ಅವರು ಆತ್ಮಕಥೆ ಬರೆದಾಗ ಅವರಿಗೆ ಕೇವಲ ನಲವತ್ತೆರಡು ವರ್ಷ! ಇಂಥ ಕಮಲಾದಾಸ್ ಹತ್ತು ವರ್ಷಗಳ ಹಿಂದೆ (1999) ಇದ್ದಕ್ಕಿದ್ದಂತೆ ಒಂದು ದಿನ ಯಾರಿಗೂ ಹೇಳದೇ ಕೇಳದೆ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ಕಮಲಾ ಸುರೈಯಾ ಆಗಿಬಿಟ್ಟರು! ದೊಡ್ಡ ಕೋಲಾಹಲವೇ ಆಯಿತು. ಆರೆಸ್ಸೆಸ್ ಕಾರ್ಯಕರ್ತರು ಇದನ್ನು ಖಂಡಿಸಿದರು. ಅವರಿಗೆ ಕಿರುಕುಳ ಕೊಡುವಂಥ ಘಟನೆಗಳಿಂದ ಘಾಸಿಗೊಂಡರೂ ತಮ್ಮ ನಿರ್ಧಾರದಿಂದ ವಾಪಸ್ ಬರಲಿಲ್ಲ. ಸಾರ್ವಜನಿಕವಾಗಿ ಬುರ್ಖಾಧರಿಸಿ ಕಾಣಿಸಿಕೊಳ್ಳುತ್ತಿದ್ದರು. ಮನೆತುಂಬಾ ಕೃಷ್ಣನ ವಿಗ್ರಹಗಳನ್ನಿಟ್ಟು ತಾನು ಅವನ ರಾಧಾ ಎಂದು ಸಂಭ್ರಮಿಸುತ್ತಿದ್ದ ಕಮಲಾದಾಸ್ ಅವರ ಈ ನಡೆ ಅವರ ಮಕ್ಕಳಿಗೂ ನಿಗೂಢವಾಗಿತ್ತು. ನನ್ನ ಕೃಷ್ಣನನ್ನೂ ಇಸ್ಲಾಮ್‌ಗೆ ಮತಾಂತರಗೊಳಿಸಿದ್ದೇನೆ. ಅವನು ಈಗ ನನ್ನ ಪ್ರೀತಿಯ ಅಲ್ಲಾಹ್' ಎಂದು ಹೇಳಿದಾಗ ಪುನಃ ವಿವಾದವಾಗಿತ್ತು. ಆದರೆ ಅವರು ಸ್ವಲ್ಪವೂ ಜಗ್ಗಲಿಲ್ಲ. ಈ ವಿವಾದಗಳಿಂದ ಅವರು ಕೇರಳ ಬಿಟ್ಟು ಪುಣೆಗೆ ಹೋಗಿ ನೆಲೆಸಿದರು. ಕೊನೆಗಾಲದಲ್ಲಿ ಅವರಿಗೆ ತಮ್ಮ ಹುಟ್ಟೂರಿಗೆ ಬರಬೇಕೆಂದಿತ್ತು. ಆದರೆ ಆ ಆಸೆ ಅವರ ನಿಧನದ ನಂತರ ಈಡೇರಿದ್ದು ವಿಧಿಯ ಆಟ. ಮುಸ್ಲಿಂ ಸಂಪ್ರದಾಯದಂತೆ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಅದರಲ್ಲಿ ಎಲ್ಲ ಕೋಮಿನ ಜನರು ಭಾಗವಹಿಸಿದ್ದು ಅವರ ಜಾತ್ಯತೀತ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿತ್ತು. ತಮ್ಮ ಕೃತಿಗಳ ಮೂಲಕ ಚಿರಸ್ಥಾಯಿಭಾವ ಮೂಡಿಸಿದ ಕಮಲಾದಾಸ್ ನಿಧನರಾಗಿದ್ದಾರೆಂದರೆ ನಂಬುವುದಾದರೂ ಹೇಗೆ? ಸುಲಭಕ್ಕೆ ಅರ್ಥವಾಗದ, ಅರ್ಥಕ್ಕೂ ನಿಲುಕದ, ಅನರ್ಥಕ್ಕೂ ಸಿಲುಕದ ಕಮಲಾದಾಸ್!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more