• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೆದ್ದವರೆಲ್ಲ ಸಂಪುಟ ರಚಿಸುವಾಗ ಎಡವಿ ಬಿದ್ದವರೇ!

By * ವಿಶ್ವೇಶ್ವರ ಭಟ್
|
ಪ್ರಾಯಶಃ ಸೋನಿಯಾಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಅವರು ಜವಾಹರಲಾಲ್ ನೆಹರು ಅವರ ಮಾತುಗಳನ್ನು ಕೇಳಿಸಿಕೊಂಡರೆ ಈ ಸಂದರ್ಭದಲ್ಲಿ ತುಸು ಸಮಾಧಾನ ಸಿಗಬಹುದು. ನೀವೆಷ್ಟೇ ಪ್ರಬಲ, ಸಮರ್ಥ ನಾಯಕರಿರಬಹುದು. ಅದು ನಿಜಕ್ಕೂ ಪರೀಕ್ಷೆಗೊಳಗಾಗುವುದು ಸಚಿವ ಸಂಪುಟವನ್ನು ರಚಿಸುವಾಗ ಹಾಗೂ ಅದನ್ನು ವಿಸ್ತರಿಸುವಾಗ. ಇವೆರಡರಲ್ಲಿ ನೀವು ಯಶಸ್ವಿಯಾದರೆ ನಿಮ್ಮ ಸರಕಾರಕ್ಕೆ ಸದ್ಯ ಯಾವುದೇ ಅಪಾಯವಿಲ್ಲ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಈ ಅಪಾಯ ಮತ್ತ್ಯಾರಿಂದಲೂ ಬರುವುದಿಲ್ಲ. ನಿಮ್ಮ ಜತೆ ಸಚಿವ ಸಂಪುಟದಲ್ಲಿ ಇದ್ದವರಿಂದ ಹಾಗೂ ಸಂಪುಟಕ್ಕೆ ಸೇರಲು ಆಗದವರಿಂದ."

ನೆಹರು ಅವರ ಈ ಮಾತು ಸರ್ವಕಾಲಕ್ಕೂ ಸತ್ಯ. ಇದು ಎಲ್ಲ ಪ್ರಧಾನಿ, ಮುಖ್ಯಮಂತ್ರಿ ಅಷ್ಟೇ ಅಲ್ಲ ಜಿಲ್ಲಾ ಪಂಚಾಯತಿ ಅಧ್ಯಕ್ಷ, ನಗರಸಭೆ ಅಧ್ಯಕ್ಷರಾಗುವವರಿಗೂ ಅನ್ವಯ. ಸೋನಿಯಾ ಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಅಕ್ಷರಶಃ ನೆಹರು ಹೇಳಿದಂತೆ ತಮ್ಮ ಸಾಮರ್ಥ್ಯ ಹಾಗೂ ಪ್ರಾಬಲ್ಯವನ್ನು ಸತ್ವಪರೀಕ್ಷೆಗೊಳಪಡಿಸಿದ್ದಾರೆ. ಆದರೂ ಸರಿಹೋಗುತ್ತಿಲ್ಲ. ಅವರಿಗೆ ಚುನಾವಣೆಯಲ್ಲಿ ಜಯಗಳಿಸಿದ ಸಂಭ್ರಮವಿಲ್ಲ. ಬರೀ ಚಿಂತೆ. ಪಕ್ಷದೊಳಗೆ ಹಾಗೂ ಮಿತ್ರಪಕ್ಷಗಳಲ್ಲಿ ಮಡುಗಟ್ಟಿದ ಅಸಮಾಧಾನ, ಚಿಂತೆ, ಬೇಸರ, ಆಕ್ರೋಶ, ನೋವನ್ನು ಶಮನಗೊಳಿಸುವುದು ಹೇಗೆ, ಎಲ್ಲರಿಗೂ ನ್ಯಾಯ ದೊರಕಿಸಿಕೊಡುವುದು ಹೇಗೆ ಹಾಗೂ ಐದು ವರ್ಷ ಬಾಳಿಕೆ, ತಾಳಿಕೆ ಬರುವಂಥ ಒಂದು ಒಳ್ಳೆಯ ಮಂತ್ರಿ ಮಂಡಲ ರಚಿಸುವುದು ಹೇಗೆ ಎಂಬ ಚಿಂತೆ, ಚಿಂತನೆಯಲ್ಲಿಯೇ ಅವರಿಬ್ಬರೂ ಮುಳುಗಿದ್ದಾರೆ. ಎಲ್ಲ ರಾಜ್ಯ, ಜಾತಿಗೆ ಪ್ರಾತಿನಿಧ್ಯ ಕೊಡಬೇಕು ಕೆಲವು ಮಹಿಳೆಯರನ್ನಾದರೂ ಸೇರಿಸಿಕೊಳ್ಳಬೇಕು, ಅಲ್ಪಸಂಖ್ಯಾತರಿಗೂ ಆದ್ಯತೆ ಕೊಡಬೇಕು, ಇವರೆಲ್ಲರನ್ನೂ ಸೇರಿಸಿಕೊಂಡ ಬಳಿಕ ಸಂಪುಟದೊಳಗೆ ಯೋಗ್ಯರನ್ನೂ ಸೇರಿಸಿಕೊಳ್ಳಬೇಕು, ಹಿರಿಯರು, ಕಿರಿಯರು, ಸ್ನೇಹಿತರು, ಬೇಕಾದವರು, ಬೇಡದವರಾದರೂ ಬೇರೆ ಕಾರಣಗಳಿಗಾಗಿ ಬೇಕಾಗಬಹುದಾದವರು, ಯೋಗ್ಯತೆ ಇಲ್ಲದವರೆಂಬುದು ಗೊತ್ತಿದ್ದರೂ ಹೊರಗಿಟ್ಟರೆ ಕಿರಿಕ್ ಮಾಡಬಹುದೆಂದು ಒಲ್ಲದ ಮನಸ್ಸಿನಿಂದ ಸೇರಿಸಿಕೊಳ್ಳಬೇಕಾದವರು, ಯೋಗ್ಯತೆ ಇಲ್ಲದವರೆಂಬುದು ಗೊತ್ತಿದ್ದರೂ ತಮಗೆ ಬೇಕಾದವರು, ಹತ್ತಿರದವರೆಂದು ಸೇರಿಸಿಕೊಳ್ಳಬೇಕಾದವರು, ಯಾರನ್ನೋ ಸಮಾಧಾನಗೊಳಿಸಲು, ಸಂಪ್ರೀತಗೊಳಿಸಲು ಹಾಗೂ ಇನ್ಯಾರಿಗೋ ಹೊಟ್ಟೆ ಉರಿ ತರಿಸಲು... ಹೀಗೆ ಅನೇಕಾನೇಕ ಕಾರಣಗಳಿಗಾಗಿ ಯಾರ್‍ಯಾರನ್ನೋ ಮಂತ್ರಿಗಳನ್ನಾಗಿ ಮಾಡಬೇಕಾ ಗುತ್ತದೆ. ಯಾರ್‍ಯಾರೋ ಯಾವ್ಯಾವುದೋ ಕಾರಣಗಳಿಂದಾಗಿ ಮಂತ್ರಿಗಳಾಗಿಬಿಡುತ್ತಾರೆ. ಆದರೆ ಇಷ್ಟೆಲ್ಲ ಕಸರತ್ತು ಮಾಡಿ ಮುಗಿಸುವ ಹೊತ್ತಿಗೆ ಪಕ್ಷದ ಹೈಕಮಾಂಡ್ ನಾಯಕರು ಚುನಾವಣೆಯಲ್ಲಿ ಗೆದ್ದ ಸಂತಸ, ಸಡಗರವನ್ನೆಲ್ಲ ಕಳೆದುಕೊಳ್ಳುವ ಸ್ಥಿತಿ ತಲುಪಿರುತ್ತಾರೆ. ಈಗ ಸೋನಿಯಾ ಹಾಗೂ ಡಾ. ಸಿಂಗ್ ಅಂಥದೇ ಸ್ಥಿತಿಯಲ್ಲಿದ್ದಾರೆ.

ಕಾಂಗ್ರೆಸ್ ಸಾಕಷ್ಟು ಸ್ಥಾನ ಗಳಿಸಿರುವುದರಿಂದ ಮಿತ್ರಪಕ್ಷಗಳ ಹಂಗು ಅಷ್ಟೆಲ್ಲ ಇಲ್ಲದಿರುವುದರಿಂದ ಸಚಿವಸಂಪುಟ ರಚನೆಗೆ ಏನೇನೂ ತೊಡಕು ಆಗುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪ್ರಧಾನಿಯವರನ್ನು ಪಕ್ಕದಲ್ಲಿಟ್ಟುಕೊಂಡು ಸೋನಿಯಾ ಹಾಗೂ ರಾಹುಲ್ ಮಂತ್ರಿಮಂಡಲ ರಚನೆಗೆ ಕುಳಿತರು ನೋಡಿ, ಹೊರಗೆ ಅಸಮಾಧಾನ ಬುದುಬುದುಗುಟ್ಟಲು ಶುರುವಾಯಿತು. ಡಿಎಂಕೆ ಮೊದಲು ಜಗಳಕ್ಕೆ ನಿಂತಿತು. ಬೆನ್ನಹಿಂದೆಯೇ ತೃಣಮೂಲದ ಮೂಲವ್ಯಾಧಿ. ನಿಧಾನವಾಗಿ ಪಕ್ಷದೊಳಗೂ ಹತಾಶೆ ಮೊಟ್ಟೆಯಿಡಲಾರಂಭಿಸಿತು. ನೋವಿನ ಮೊಟ್ಟೆ ಕಾವು ಪಡೆದು ಮರಿಹಾಕಿತು. ಮೊದಲ ಕಂತಿನಲ್ಲಿ ಸಚಿವರಾದವರ ಪೈಕಿ ಕೇವಲ ಐವರಿಗೆ ಖಾತೆ ಹಂಚಿ ಉಳಿದವರಿಗೆ ಖಾತೆ ನೀಡಲಾರದ ಸ್ಥಿತಿ ನಿರ್ಮಾಣವಾಯಿತು. ಎಲ್ಲರಿಗೂ ಕ್ಯಾಬಿನೆಟ್ ದರ್ಜೆಯೇ ಬೇಕು. ಅದಿಲ್ಲದಿದ್ದರೆ ಸ್ವತಂತ್ರ ಖಾತೆ. ಮಿನಿಸ್ಟರ್ ಆಫ್ ಸ್ಟೇಟ್ ಯಾರಿಗೂ ಬೇಡ. ಕ್ಯಾಬಿನೆಟ್ ದರ್ಜೆ ಸಿಕ್ಕಿತೆನ್ನಿ. ಆಗ ಇಂಥ ಖಾತೆಯೇ ಬೇಕು ಎಂಬ ಹಠ. ಒಂದೇ ಖಾತೆಗೆ ಹಲವರ ಪೈಪೋಟಿ. ಖಾತೆಯ ಮೂಲಕವೇ ಹಿರಿತನ, ಬುದ್ಧಿವಂತಿಕೆ, ಸಾಮರ್ಥ್ಯ ಅಳೆಯುವ ಕಾರಣಕ್ಕೆ ಬಯಸಿದ ಖಾತೆ ಸಿಗದಿದ್ದುದಕ್ಕೆ ಸಹಜ ಬೇಸರ. ಮಂತ್ರಿಯಾಗಿಯೂ ಸಮಾಧಾನವಿಲ್ಲ. ಎಲ್ಲರಿಗೂ ಏನೋ ವಿಚಿತ್ರ ಸಂಕಟ. ತನಗೆ ಅದು ಸಿಗಲಿಲ್ಲ ಎಂಬ ನೋವಿಗಿಂತ ಅವನಿಗೆ ಅದು ಸಿಕ್ಕಿತಲ್ಲ ಎಂಬ ಸಂಕಟದ ಉರಿ ಇನ್ನೂ ಹೆಚ್ಚು. ಅದೋ ಇದೋ ಒಟ್ಟಾರೆ ಮಂತ್ರಿಯಾದರೆ ಸಾಕು ಎಂದು ಕೆಲವರು ಅವಸರದಲ್ಲಿ ಕೊಟ್ಟ ದರ್ಜೆ, ಸಿಕ್ಕ ಖಾತೆಗೆ ಮಂತ್ರಿಯಾಗಿಬಿಡುತ್ತಾರೆ. ತನ್ನ ಮಂತ್ರಿಖಾತೆಯ ಕಿಮ್ಮತ್ತೇನೆಂಬುದು ಎರಡು ತಿಂಗಳ ನಂತರ ಗೊತ್ತಾಗುತ್ತದೆ. ಈ ಉರಿಯಿದೆಯಲ್ಲ, ಅದನ್ನು ಬೇರೆಯವರ ಮುಂದೆ ಹೇಳಿಕೊಳ್ಳಲಾಗುವುದಿಲ್ಲ, ಸ್ವತಃ ಅನುಭವಿಸಲಿಕ್ಕೂ ಆಗುವುದಿಲ್ಲ.

ಕೇಂದ್ರ ಸಂಪುಟದಲ್ಲಿ ಮಿನಿಸ್ಟರ್ ಆಫ್ ಸ್ಟೇಟ್ (ಎಂಒಎಸ್) ದರ್ಜೆ ಮಂತ್ರಿಯಾದರೆ ಕವಡೆ ಕಿಮ್ಮತ್ತಿಲ್ಲ. ಮಂತ್ರಿ ಎಂದು ಹುಬ್ಬುಹಾರಿಸಬಹುದು, ಭುಜಕುಣಿಸಬಹುದು, ಅಷ್ಟೆ. ಒಂದೇ ಒಂದು ಮಹತ್ವದ ಫೈಲು ಬರುವುದಿಲ್ಲ. ಕ್ಯಾಬಿನೆಟ್ ಮಿಟಿಂಗ್‌ಗೆ ಹೋಗುವಂತಿಲ್ಲ. ಅದೇ ಖಾತೆಯ ಕ್ಯಾಬಿನೆಟ್ ಮಂತ್ರಿ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡರೆ ಸರಿ, ತನ್ನ ಖಾತೆಗೆ ಸಂಬಂಧಿಸಿದ ಕೆಲವು ಸಣ್ಣಪುಟ್ಟ ಕೆಲಸ, ಟ್ರಾನ್ಸ್ ಫರ್‌ಗಳನ್ನು ಮಾಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅದೂ ಇಲ್ಲ. ಫೈಲ್‌ನ ವಿಚಾರ ಬಿಡಿ, ರಾಜ್ಯದರ್ಜೆ ಮಂತ್ರಿಯಾದರೆ ಆಪ್ತ ಕಾರ್ಯದರ್ಶಿಯೆಂದು ನೇಮಿಸಿಕೊಳ್ಳಲು ಐಎಎಸ್ ಅಧಿಕಾರಿಗಳೂ ಸಿಗುವುದಿಲ್ಲ. ಯಾರನ್ನು ಕರೆದರೂ ಒಲ್ಲೆ ಎಂದು ಮುಖತಿರುಗಿಸಿಕೊಂಡು ಹೋಗುತ್ತಾರೆ. ರಾಜ್ಯದರ್ಜೆ ಮಂತ್ರಿಯಾದವರಿಗೆ ಕಾರು, ಆಳುಕಾಳು, ಮನೆ, ಫೋನು, ವಿಮಾನ ಹಾರಾಟದ ಸುಖವನ್ನು ಅನುಭವಿಸಿಕೊಂಡು ಸುಮ್ಮನಿರಬೇಕು. ತನ್ನ ಕ್ಷೇತ್ರದ ಮತದಾರರ ಮುಂದೆ ತಾನೂ ಮಂತ್ರಿ ಎಂದು ಡೌಲು ಹಾರಿಸಬಹುದೇ ಹೊರತು ದಿಲ್ಲಿಯಲ್ಲಿ ಅವನಿಗೆ ಬಿಲ್ಲಿ ಮರ್ಯಾದೆಯಿಲ್ಲ.

ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಮಾನವ ಸಂಪನ್ಮೂಲ ಖಾತೆಗೆ ಡಾ. ಮುರಳಿಮನೋಹರ ಜೋಶಿಯವರು ಸಚಿವರಾಗಿದ್ದರು. ಆ ಖಾತೆಗೆ ಸಹಾಯಕ ಸಚಿವರಾಗಿ (ಎಂಒಎಸ್) ಸುಮಿತ್ರಾ ಮಹಾಜನ್ ಇದ್ದರು. ಮೊದಲಿನಿಂದಲು ಡಾ. ಜೋಶಿ ಹಾಗೂ ಸುಮಿತ್ರಾ ಅವರಿಗೆ ಎಣ್ಣೆ-ಸೀಗೇಕಾಯಿ ಸಂಬಂಧ. ಡಾ. ಜೋಶಿಯವರು ಒಂದೇ ಒಂದು ಫೈಲನ್ನೂ ಅವರಿಗೆ ಕಳುಹಿಸುತ್ತಿರಲಿಲ್ಲ. ಅವರು ಹೇಳಿದ ಒಂದು ಸಣ್ಣ ಕೆಲಸವನ್ನೂ ಮಾಡದಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಸುಮಿತ್ರಾ ಮಹಾಜನ್ ಆರಂಭದಲ್ಲಿ ಸಹಿಸಿಕೊಂಡರು. ಕ್ರಮೇಣ ಎಂಥ ಪರಿಸ್ಥಿತಿ ಬಂತೆಂದರೆ ಅವರ ಓಡಾಟ, ವಿದೇಶ ಪ್ರವಾಸಗಳಿಗೆಲ್ಲ ಡಾ. ಜೋಶಿಯವರು ಅಡ್ಡಿಪಡಿಸಲಾರಂಭಿಸಿದರು. ಆಗ ಸುಮಿತ್ರಾ ಮಹಾಜನ್ ಖುದ್ದು ಪ್ರಧಾನಿಯವರ ಮುಂದೆ ಹೋಗಿ ದುಃಖ ತೋಡಿಕೊಂಡರು. ಅಷ್ಟರೊಳಗೆ ನಾಲ್ಕು ವರ್ಷ ಮುಗಿದು ಹೋಗಿತ್ತು. ತಮ್ಮ ಅವಧಿ ಮುಗಿಯುವುದಕ್ಕೆ ಕೆಲ ದಿನಗಳ ಮೊದಲು ಸುಮಿತ್ರಾ ಮಹಾಜನ್ ಹೇಳಿದ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಯಾವ ಪುರುಷಾರ್ಥ ಸಾಧನೆಗೆ ನಾನು ಮಂತ್ರಿಯಾದೆ ಎಂಬುದು ನನಗೆ ಗೊತ್ತಾಗಲಿಲ್ಲ. ಐದು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಫೈಲು ನನಗೆ ಬರಲಿಲ್ಲ. ನನ್ನ ಖಾತೆಗೆ ಸಂಬಂಧಿಸಿದಂತೆ ನಾನು ಒಂದೇ ಒಂದು ಸಣ್ಣ ನಿರ್ಧಾರ ತೆಗೆದುಕೊಳ್ಳಲೂ ಅಶಕ್ತಳಾದೆ. ರಾಜ್ಯದರ್ಜೆಯಾದರೆ ನಾನು ನನ್ನ ಜನ್ಮದಲ್ಲಿ ಮಂತ್ರಿಯಾಗಲಾರೆ". ಅಂದು ಸುಮಿತ್ರಾ ಮಹಾಜನ್ ಇಡೀ ದೇಶಕ್ಕೇ ಗೊತ್ತಾಗುವಂತೆ ಗೋಳನ್ನು ತೋಡಿಕೊಂಡಿದ್ದರು.

ಮಿನಿಸ್ಟರ್ ಆಫ್ ಸ್ಟೇಟ್ ದರ್ಜೆಯ ಅಸಲಿ ಕಿಮ್ಮತ್ತೇನೆಂಬುದನ್ನು ಅದಕ್ಕೂ ಮೊದಲು ಚೆನ್ನಾಗಿ ಅರ್ಥಮಾಡಿಕೊಂಡವರೆಂದರೆ ನಮ್ಮ ಆರ್.ಎಲ್. ಜಾಲಪ್ಪನವರು. ದೇವೇಗೌಡರು ಪ್ರಧಾನಿಯಾದಾಗ ಜಾಲಪ್ಪನವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಪ್ರಮಾಣವಚನ ಸ್ವೀಕರಿಸುವವರೆಗೆ ಜಾಲಪ್ಪನವರು ತಾವು ಕ್ಯಾಬಿನೆಟ್ ಮಂತ್ರಿ ಎಂದೇ ಅಂದುಕೊಂಡರು. ಅಶೋಕಹಾಲ್‌ನಲ್ಲಿ ಪ್ರಮಾಣ ವಚನಕ್ಕೆ ಕರೆದಾಗ ಎಂಒಎಸ್ ಎಂದು ಗೊತ್ತಾಯಿತು. ಪ್ರತಿಜ್ಞಾವಿಧಿ ಸ್ವೀಕರಿಸಿದ ಜಾಲಪ್ಪ ಬೇಸರದಿಂದ ಹೊರನಡೆದರು. ರಾಜೀನಾಮೆ ಕೊಡಲು ಮುಂದಾದರು. ಅವರನ್ನು ಸಮಾಧಾನಪಡಿಸಲು ರಾತ್ರೋರಾತ್ರಿ ಅವರಿದ್ದಲ್ಲಿಗೇ ಸ್ವತಃ ದೇವೇಗೌಡರೇ ಬರಬೇಕಾಯಿತು. ಅದಾಗಿ ಒಂದು ವಾರದಲ್ಲಿ ಜಾಲಪ್ಪ ಕ್ಯಾಬಿನೆಟ್ ಸಚಿವರಾದರು!

ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿರಬಹುದು, ಅದು ಹಾಕಿದ ಗೆರೆಯನ್ನು ದಾಟುವ ಧೈರ್ಯ ಯಾರಿಗೂ ಇಲ್ಲದಿರಬಹುದು, ಆದರೆ ಅದು ಈ ಎಲ್ಲ ಯಾರ ಮುಂದೆಯೂ ಹೇಳಿಕೊಳ್ಳಲಾಗದ ಸಂಕಟಗಳನ್ನು ಈಗ ಅನುಭವಿಸುತ್ತಿದೆ. ಇವು ಒಂದೆರಡು ದಿನಗಳಲ್ಲಿ ಕೊನೆಗೊಳ್ಳಬಹುದು. ಆದರೆ ಕಳೆದ ಹತ್ತುದಿನ ಇದು ಬೃಹದಾಕಾರದಲ್ಲಿ ಕಾಡಿದ್ದು, ಕಾಂಗ್ರೆಸ್ ನಾಯಕತ್ವವನ್ನು ತಣ್ಣಗೆ ನಡುಗಿಸಿದ್ದು ಸುಳ್ಳೇನಲ್ಲ. ಸಚಿವ ಸಂಪುಟ ರಚನೆಯಲ್ಲಿ ತುಸು ಎಡವಿದರೆ ಮುಂಬರುವ ದಿನಗಳಲ್ಲಿ ಸರಕಾರವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆಂಬುದು ಎಂಥ ರಾಜಕಾರಣಿಯೂ ಬಲ್ಲ. ಹೀಗಾಗಿ ಎಲ್ಲರನ್ನೂ ಸಮಾಧಾನಪಡಿಸುವ ಕಸರತ್ತು ನಡೆಯುತ್ತದೆ. ನಿಜ ಸಂಗತಿಯೇನೆಂದರೆ ಯಾರೂ ಸಂಪೂರ್ಣ ಸಮಾಧಾನ ಹೊಂದಿರುವುದಿಲ್ಲ. ಅದು ಬೇರೆ ಮಾತು. ಇರಲಿ.

ಮೊದಲ ಪ್ರಧಾನಿಯಾದ ನೆಹರು ಹಾಗೇಕೆ ಹೇಳಿದರು? ಕಾಂಗ್ರೆಸ್‌ನಲ್ಲಿ ಅವರಿಗೆ ಎದುರು ನುಡಿಯುವವರು ಯಾರೂ ಇರಲಿಲ್ಲ. ಅವರು ಹೇಳಿದ್ದೇ ಕೊನೆ. ಆ ದೃಷ್ಟಿಯಲ್ಲಿ ಅವರು ಪ್ರಶ್ನಾತೀತರು. ಹೌದು. ಇಲ್ಲದಿದ್ದರೆ ಅವರು ಹಾಗೆ ಹೇಳುತ್ತಿರಲಿಲ್ಲ. ನೆಹರು ಅವರಿಗೆ ತಮ್ಮ ಸಚಿವಸಂಪುಟ ರಚಿಸಲು ಸಂಪೂರ್ಣ ಸ್ವಾತಂತ್ರ್ಯವಿತ್ತಾದರೂ ತಮ್ಮ ನಿರ್ಧಾರಕ್ಕೆ ಅಂತಿಮ ಅಂಗೀಕಾರವನ್ನು ಮಹತ್ಮಾಗಾಂಧಿಯವರಿಂದ ಪಡೆಯುವ ಅನಿವಾರ್ಯತೆಯೂ ಇತ್ತು. ಹೀಗಾಗಿ ತನಗೆ ಇಷ್ಟವಿಲ್ಲದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಯಿತು. ಅಲ್ಲದೇ ಇಷ್ಟವಿಲ್ಲದವರಿಗೇ ಪ್ರಮುಖ ಖಾತೆಯನ್ನೂ ನೀಡಬೇಕಾಗಿ ಬಂದಿತು. ನೆಹರು ಅವರ ಮೊದಲ ಸಂಪುಟದಲ್ಲಿ ಅವರನ್ನೂ ಸೇರಿಸಿ ಹದಿನಾಲ್ಕು ಮಂದಿ ಸದಸ್ಯರಿದ್ದರು. ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ.ರಾಜೇಂದ್ರ ಪ್ರಸಾದ್, ಡಾ. ಮೌಲಾನಾ ಅಬ್ದುಲ್ ಕಲಾಮ್ ಅಜಾದ್, ಡಾ. ಜಾನ್ ಮಥಾಯ್, ಆರ್. ಷಣ್ಮುಗಂ, ಡಾ.ಅಂಬೇಡ್ಕರ್, ಸರ್ದಾರ್ ಬಲದೇವ್ ಸಿಂಗ್, ರಾಜಕುಮಾರಿ ಅಮೃತಾ ಕೌರ್, ಸಿ.ಎಚ್. ಬಾಬರ್, ರಫಿ ಅಹಮದ್ ಕಿದ್ವಾಯಿ, ಡಾ. ಶಾಮ್‌ಪ್ರಸಾದ್ ಮುಖರ್ಜಿ ಹಾಗೂ ಪಿ.ಎನ್. ಗಾಡ್ಗೀಳ್ ಮಂತ್ರಿಯಾದರು.

ಡಾ. ಶಾಮ್‌ಪ್ರಸಾದ್ ಮುಖರ್ಜಿ ಹಾಗೂ ರಫಿ ಅಹಮದ್ ಕಿದ್ವಾಯಿ ಅವರ ಹೆಸರು ಪ್ರಸ್ತಾಪವಾದಾಗ ತುಸು ವಿರೋಧ ಬಂತು. ಎಲ್ಲ ಪ್ರಮುಖ ಕೋಮು, ಜಾತಿಯವರಿಗೆ ಪ್ರಾತಿನಿಧ್ಯ ನೀಡಲಾಗಿತ್ತು. ಅಲ್ಪಸಂಖ್ಯಾತ ಕೋಟಾದಡಿ ಡಾ. ಅಜಾದ್ ಹೆಸರು ಸೇರಿಸಲಾಗಿತ್ತು. ಹೀಗಿರುವಾಗ ರಫಿ ಅಹಮದ್ ಕಿದ್ವಾಯಿ ಏಕೆ? ಆದರೆ ಸ್ವತಃ ಗಾಂಧೀಜಿಯವರೇ ಅವರ ಹೆಸರಿಗೆ ಎದುರಾದ ತೊಡಕನ್ನು ನಿವಾರಿಸಿದರು. ಸೋಷಿಯಲಿಸ್ಟ್ ಸಿದ್ಧಾಂತದಲ್ಲಿ ನಂಬಿಕೆಯುಳ್ಳವರಾದ ಕಿದ್ವಾಯಿ, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ಹಿಂದೂ ರಾಷ್ಟ್ರೀಯವಾದದ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದ ಡಾ. ಶಾಮ್‌ಪ್ರಸಾದ್ ಮುಖರ್ಜಿ (ಅನಂತರ ಇವರು ಜನಸಂಘದ ಸಂಸ್ಥಾಪಕರಾದರು) ಸೇರ್ಪಡೆಗೂ ಅಪಸ್ವರ, ವಿರೋಧಗಳು ಕೇಳಿಬಂದವು. ಆಗ ಗೊಂದಲ ನಿವಾರಿಸಿದವರು ಕೂಡ ಗಾಂಧೀಜಿ. ಸರ್ದಾರ್ ಪಟೇಲ್‌ಗೆ ಗೃಹಖಾತೆ ನೀಡಲು ನೆಹರು ಅವರ ವಿರೋಧವಿರಲಿಲ್ಲ. ಆದರೆ ಹೆಚ್ಚುವರಿಯಾಗಿ ವಾರ್ತಾ ಹಾಗೂ ಪ್ರಸಾರ ಮತ್ತು ರಾಜ್ಯಾಡಳಿತ ಖಾತೆ ನೀಡಲು ಮನಸ್ಸಿರಲಿಲ್ಲ. ನೆಹರು ತಮ್ಮ ಬೇಸರ ನುಂಗಿಕೊಳ್ಳಬೇಕಾಯಿತು. ಹಣಕಾಸು ಖಾತೆಯನ್ನು ತಾವೇ ಇಟ್ಟುಕೊಳ್ಳಬೇಕೆಂದು ನೆಹರು ಬಯಸಿದ್ದರು. ಆಗಲೇ ಅವರು ಪ್ರಧಾನಮಂತ್ರಿಯ ಜತೆಗೆ ವಿದೇಶಾಂಗ ವ್ಯವಹಾರ, ಕಾಮನ್‌ವೆಲ್ತ್ ಸಂಬಂಧ, ವೈಜ್ಞಾನಿಕ ಸಂಶೋಧನೆ ಖಾತೆಗಳನ್ನು ಇರಿಸಿಕೊಂಡಿದ್ದರು. ಹಣಕಾಸು ವ್ಯವಹಾರದಲ್ಲಿ ಅನುಭವವಿರುವವರೇ ಆ ಖಾತೆಗೆ ಮಂತ್ರಿಯಾಗಬೇಕೆಂಬ ಒತ್ತಾಸೆ ಬಲವಾಗಿದ್ದರಿಂದ ನೆಹರು ತಮ್ಮ ಪಟ್ಟನ್ನು ಸಡಿಲಿಸಬೇಕಾಯಿತು. ಹೀಗಾಗಿ ಸ್ವತಃ ಅರ್ಥಶಾಸ್ತ್ರಜ್ಞರೂ ಹಾಗೂ ಕೊಚಿನ್‌ನ ದಿವಾನರೂ ಆಗಿದ್ದ ಆರ್.ಕೆ. ಷಣ್ಮುಗಂ ಚೆಟ್ಟಿಯವರನ್ನು ಆ ಖಾತೆಗೆ ಮಂತ್ರಿಯನ್ನಾಗಿ ಮಾಡಲಾಯಿತು. ಸರ್ದಾರ್ ಬಲದೇವ್ ಸಿಂಗ್ ಬದಲು ಡಾ. ರಾಜೇಂದ್ರ ಪ್ರಸಾದ್‌ಗೆ ರಕ್ಷಣಾಖಾತೆಯನ್ನು ನೀಡಲು ನಿರ್ಧರಿಸಲಾಗಿತ್ತು. ಆದರೆ ಕೊನೆ ಕ್ಷಣದ ಬದಲಾವಣೆಯಲ್ಲಿ ಡಾ. ರಾಜೇಂದ್ರ ಪ್ರಸಾದ್‌ಗೆ ಆಹಾರ ಹಾಗೂ ಕೃಷಿಕಾತೆ ನೀಡಲಾಯಿತು. ಮೌಲಾನ ಅಜಾದ್ ಅವರಿಗೆ ಶಿಕ್ಷಣದ ಜತೆ ಆರೋಗ್ಯ ಖಾತೆ ನೀಡಲಾಗಿತ್ತು. ಕೊನೆಗೆ ಆರೋಗ್ಯ ಖಾತೆ ರಾಜಕುಮಾರಿ ಅಮೃತ ಕೌರ್ ಪಾಲಾಯಿತು. ಅಂದರೆ ಮೊದಲ ಬಾರಿಗೆ ನೆಹರು ಕೂಡ ಸಾಕಷ್ಟು ಸಂಕಟ, ಪೇಚಾಟ ಅನುಭವಿಸಿರಲಿಕ್ಕೆ ಸಾಕು. ಎಲ್ಲವೂ ಅವರ ಆಸೆಯಂತೆ ಆಗಿರಲಿಲ್ಲ ಎಂದಾಯಿತು. ಅದಕ್ಕೆ ನೆಹರು ಹಾಗೆ ಹೇಳಿರಬಹುದು.

ಲಾಲಬಹಾದೂರ್ ಶಾಸ್ತ್ರಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ವಿದೇಶಾಂಗ ವ್ಯವಹಾರ ಖಾತೆಯನ್ನು ತಾವೇ ಇಟ್ಟುಕೊಂಡಿದ್ದರು. ಅಲ್ಲಿತನಕ ಆ ಖಾತೆಯನ್ನು ಪ್ರಧಾನಿಯವರೇ ಇಟ್ಟುಕೊಳ್ಳುವ ಸಂಪ್ರದಾಯವಿತ್ತು. ಆದರೆ ಭಾಷಾ ತೊಡಕಿನಿಂದ ಶಾಸ್ತ್ರಿಯವರು ಆ ಖಾತೆಯನ್ನು ಸರ್ದಾರ್ ಸ್ವರಣ್ ಸಿಂಗ್‌ರಿಗೆ ನೀಡಬೇಕಾಯಿತು. ಆಗಲೇ ಸ್ವರಣ್ ಸಿಂಗ್ ಕೈಗಾರಿಕೆ ಮಂತ್ರಿಯೂ ಆಗಿದ್ದರು. ಅವರಿಗೆ ವಿದೇಶಾಂಗ ಖಾತೆ ಹೆಚ್ಚುವರಿಯಾಗಿ ಬಂದಿತು. ಶಾಸ್ತ್ರಿಯವರ ಸಂಪುಟದಲ್ಲಿ ಗುಲ್ಜಾರಿಲಾಲ್ ನಂದಾ(ಗೃಹ), ಟಿ.ಟಿ. ಕೃಷ್ಣಮಾಚಾರಿ (ಹಣಕಾಸು), ಇಂದಿರಾಗಾಂಧಿ (ವಾರ್ತಾ, ಪ್ರಸಾರ), ಎಸ್.ಕೆ. ಪಾಟೀಲ್ (ರೈಲ್ವೆ), ಎ.ಕೆ. ಸೇನ್ (ಕಾನೂನು), ವೈ.ಬಿ. ಚವಾಣ್ (ರಕ್ಷಣೆ), ಸಂಜೀವರೆಡ್ಡಿ (ಉಕ್ಕು, ಗಣಿ), ಸಿ. ಸುಬ್ರಹ್ಮಣ್ಯಂ (ಆಹಾರ, ಕೃಷಿ), ಹುಮಾಯೂನ್ ಕಬೀರ್ (ಪೆಟ್ರೋಲಿಯಂ, ರಾಸಾಯನಿಕ), ಸತ್ಯನಾರಾಯಣ ಸಿನ್ಹಾ (ಸಂಸದೀಯ ವ್ಯವಹಾರ, ನಾಗರಿಕ ವಿಮಾನಯಾನ), ಎಚ್.ಸಿ. ದಾಸಪ್ಪ (ನೀರಾವರಿ, ಇಂಧನ), ಎಂ.ಸಿ. ಛಾಗ್ಲ (ಶಿಕ್ಷಣ), ಡಿ. ಸಂಜೀವಯ್ಯ (ಕಾರ್ಮಿಕ, ಉದ್ಯೋಗ) ಕ್ಯಾಬಿನೆಟ್ ಸಚಿವರಾದರು. ನಂದಾಗೆ ಗೃಹಖಾತೆ ನೀಡುವುದಕ್ಕೆ ಸಂಪೂರ್ಣ ಸಹಮತವಿರಲಿಲ್ಲ. ಆದರೆ ಹಿರಿತನದ ಕಾರಣಕ್ಕೆ ಅವರಿಗೆ ಆ ಖಾತೆ ನೀಡುವುದು ಅನಿವಾರ್ಯವಾಯಿತು.

ಇಂದಿರಾಗಾಂಧಿಯವರು ಮೊದಲ ಬಾರಿಗೆ ಜೂನ್ 24, 1966ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆಗ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ವಿಚಾರ ಬಂದಾಗ ತೆರೆಮರೆಯಲ್ಲಿ ಸಾಕಷ್ಟು ಕಸರತ್ತುಗಳಾಗಿದ್ದವು. ಇಂದಿರಾಗೆ ಗುಲ್ಜಾರಿಲಾಲ್ ನಂದಾ ತಲೆ ಕಂಡರೆ ಆಗುತ್ತಿರಲಿಲ್ಲ. ನೆಹರು ಹಾಗೂ ಶಾಸ್ತ್ರಿ ನಿಧನರಾದಾಗ ನಂದಾ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಶಾಸ್ತ್ರಿಯವರ ನಿಧನದ ತರುವಾಯ ಯಾರು ಪ್ರಧಾನಿಯಾಗಬೇಕೆಂಬ ಪ್ರಶ್ನೆ ಎದುರಾದಾಗ ನಂದಾ ಹೆಸರು ಪ್ರಬಲವಾಗಿ ಕೇಳಿಬಂದಿತು. ಹಿರಿತಲೆಗಳೆಲ್ಲ ನಂದಾ ಪರವಾಗಿಯೇ ನಿಂತಿದ್ದರು. ಆದರೆ ಕಾಮರಾಜ್ ಮಾತ್ರ ಇಂದಿರಾ ಬೆಂಬಲಕ್ಕೆ ನಿಂತಿದ್ದರು. ಕೊನೆಗೆ ಈ ಪೈಪೋಟಿಯಲ್ಲಿ ಇಂದಿರಾ ಅವರೇ ಗೆದ್ದರು. ಹೀಗಾಗಿ ತಮಗೆ ಪ್ರತಿಸ್ಪರ್ಧಿಯಾಗಿ ತೊಡರುಗಾಲಾದ ನಂದಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದೆಂದು ಇಂದಿರಾ ತೀರ್ಮಾನಿಸಿದ್ದರು. ಈ ಸಂಬಂಧ ಅವರು ಅಂತೂ ಇಂತೂ ಕಾಮರಾಜ್ ಅವರನ್ನೂ ಒಪ್ಪಿಸಿದ್ದರು. ಆದರೆ ಯಾವಾಗ ಇಂದಿರಾ ಯೋಚನೆ ಬಯಲಾಗುತ್ತಿದ್ದಂತೆ ಪಕ್ಷದಲ್ಲಿ ಪ್ರಬಲವಿರೋಧಗಳು ಕೇಳಿಬಂದವು. ಕೊನೆಯಲ್ಲಿ ಎಂಥ ಸ್ಥಿತಿಅನಿವಾರ್ಯವಾಯಿತೆಂದರೆ ನಂದಾ ಅವರನ್ನು ಕೈಬಿಡಲು ಸಾಧ್ಯವಿಲ್ಲ ಎಂಬಂತಾಯಿತು. ಬೇರೆ ದಾರಿಯಿಲ್ಲದೇ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾಯಿತು. ಯಾವ ಖಾತೆ ಕೊಡಬೇಕು ಎಂಬ ಪ್ರಶ್ನೆ ಬಂದಾಗ ಜಿಜ್ಞಾಸೆ ಶುರುವಾಯಿತು. ನಂದಾಗೆ ಸುತರಾಂ ಪ್ರಮುಖ ಖಾತೆ ನೀಡಲು ಇಂದಿರಾಗೆ ಇಷ್ಟವಿರಲಿಲ್ಲ. ಅದರಲ್ಲೂ ಗೃಹಖಾತೆ ಕೊಡಲು ಸಾಧ್ಯವೇ ಇಲ್ಲ ಎಂದುಬಿಟ್ಟರು!

ಆದರೆ ಸಂಪುಟ ರಚಿಸುವಾಗ ಪ್ರಧಾನಿಯವರ ಮಾತೇ ನಡೆಯುತ್ತದೆಂದು ಹೇಳಲಾಗುವುದಿಲ್ಲ. ಹಂಗಾಮಿ ಪ್ರಧಾನಿ ಹುದ್ದೆ ನಿಭಾಯಿಸಿದ್ದರೆಂಬ ಕಾರಣಕ್ಕೆ ಹಾಗೂ ಜ್ಯೇಷ್ಠತೆ ಆಧಾರದ ಮೇಲೆ ಅವರಿಗೆ 'ನಂಬರ್ ಟು' ಎಂದು ಪರಿಗಣಿಸಲಾದ ಗೃಹಖಾತೆ ನೀಡದೇ ಅನ್ಯ ಮಾರ್ಗವಿರಲಿಲ್ಲ. ಈ ಸಂದರ್ಭದಲ್ಲಿ ಪಕ್ಷದೊಳಗೆ ಅನೇಕ ಅನಪೇಕ್ಷಿತ ಘಟನೆಗಳಾದವು. ಆದರೆ ಇಂದಿರಾ ಎಲ್ಲವನ್ನೂ ಸುಮ್ಮನೆ ನುಂಗಿಕೊಳ್ಳಬೇಕಾಯಿತು. ಸಂಪುಟಸಭೆಯಲ್ಲಿ ಇಂದಿರಾ ಎಂದೂ ನಂದಾ ಅವರನ್ನುದ್ದೇಶಿಸಿ ಮಾತಾಡುತ್ತಿರಲಿಲ್ಲ. ಬೇರೆಯವರ ಮೂಲಕ ಅವರಿಗೆ ಹೇಳಬೇಕಾದ ಮಾತುಗಳನ್ನು ಹೇಳಿ ಕಳುಹಿಸುತ್ತಿದ್ದರು. ಅದಾಗಿ 6 ತಿಂಗಳ ಬಳಿಕ ಸಾಧು-ಸಂತರು ಸಂಸತ್ ಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಗದ್ದಲವಾಯಿತೆಂಬ ಕಾರಣಕ್ಕೆ ಗೃಹಸಚಿವ ನಂದಾ ಅವರನ್ನು ವಜಾ ಮಾಡಿ ಆ ಖಾತೆಯನ್ನು ಕೆಲದಿನ ತಾವೇ ಇಟ್ಟುಕೊಂಡಿದ್ದು ಇತಿಹಾಸ.

ಭಾರತದಲ್ಲಿ ಯಾರೇ ಪ್ರಧಾನಿಯಾಗಲಿ, ಎಲ್ಲರೂ ಸಂಪುಟ ರಚನೆ ಸಮಯ ಬಂದಾಗ ಅಗ್ನಿಪರೀಕ್ಷೆಗೊಳಗಾದವರೇ. ಚುನಾವಣೆಯಲ್ಲಿ ಗೆದ್ದು ಅಟ್ಟಹಾಸಗೈದವರಲ್ಲಿ ಸಂಪುಟರಚನೆಯ ಹೆಬ್ಬಾಗಿಲಿನಲ್ಲಿ ಕಾಲು ಎಡವಿ ಬಿದ್ದವರೇ. ಸರಕಾರ ನಡೆಸುವವರನಿಜ ಸಾಮರ್ಥ್ಯ ಪರೀಕ್ಷೆಗೊಳಗಾಗುವುದು ಇಲ್ಲಿಯೇ. ಅದರಲ್ಲೂ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸುವಾಗ ಕಂಟಕ, ಕಷ್ಟ ಒಂದೆರಡಲ್ಲ. ಎಂಥ ರಾಜಕಾರಣಿಯೂ ಇಲ್ಲಿ ಮುಗ್ಗರಿಸದೇ ಮುನ್ನಡೆಯುವುದು ಸಾಧ್ಯವಿಲ್ಲ. ಅಂಥ ಪರೀಕ್ಷೆ ಈಗಲೂ ಬರದೇ ಹೋಗಲಿಲ್ಲ ಎಂಬುದು ವಿಚಿತ್ರವಾದರೂ ಸತ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more