• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪನವರೆ ಗೌಡ್ರನ್ನ ಅದ್ಯಾವ ಬಾಯಲ್ಲಿ ಬೈತೀರಾ?

By Staff
|

ಸೋನಿಯಾ ಗಾಂಧಿ ಕಾಂಗ್ರೆಸ್ಸು ಅವ್ವ ಮಕ್ಕಳ ಪಕ್ಷ, ದೇವೇಗೌಡ ಅವರ ಜೆಡಿಎಸ್ಸು ಅಪ್ಪ ಮಕ್ಕಳ ಪಕ್ಷ ಅಂತ ಗೇಲಿ ಮಾಡಿ, ಟೀಕಿಸಿ, ಹಂಗಿಸಿ, ಮೂದಲಿಸಿ, ಜರಿದು, ಸ್ವಾಟೆಯನ್ನೂ ತಿವಿದಿದ್ದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 'ಆಚಾರ ಹೇಳುವುದಕ್ಕೆ ಬದನೆಕಾಯಿ ತಿನ್ನುವುದಕ್ಕೆ' ಎಂಬಂತೆ ತಮ್ಮ ಮಗ ರಾಘವೇಂದ್ರನನ್ನೇ ಲೋಕಸಭೆ ಚುನಾವಣೆಗೆ ನಿಲ್ಲಿಸಲು ನಿರ್ಧರಿದ್ದಾರೆ. ಈ ರಾಜಕೀಯ ನಡೆ ಅವರಿಗೆ ಲಾಭ ತರುವುದೋ, ನಷ್ಟ ತರುವುದೋ ಕಾಲವೇ ನಿರ್ಧರಿಸಲಿದೆ.

* ವಿಶ್ವೇಶ್ವರ ಭಟ್

ಅ ಕೆಲವು ಮಾತುಗಳನ್ನು ಸುಮ್ಮನೆ ಓದಿ.

* ಜೆಡಿ(ಎಸ್) ಅಂದ್ರೆ ತಂದೆ-ಮಕ್ಕಳ ಪಕ್ಷ. ಅಲ್ಲಿ ಅವರದೇ ದರಬಾರು. ಬೇರೆಯವರ ಮಾತುಗಳಿಗೆ ಕವಡೆ ಕಿಮ್ಮತ್ತಿಲ್ಲ. ಸ್ವಾಭಿಮಾನ, ಸ್ವಯಂ ಗೌರವ ಇದ್ದವರು ಆ ಪಕ್ಷದಲ್ಲಿ ಇರಲಾರರು. ರಾಜ್ಯದ ಜನತೆ ಈ ತಂದೆ-ಮಕ್ಕಳ ಪಕ್ಷಕ್ಕೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು.

* ದೇವೇಗೌಡರು ತಮ್ಮ ಪಕ್ಷವನ್ನು ತಂದೆ-ಮಕ್ಕಳ ಪಕ್ಷವನ್ನಾಗಿ ಮಾಡಲು ಹೊರಟಿದ್ದಾರೆ. ಪುತ್ರವಾತ್ಸಲ್ಯದಿಂದ ಧೃತರಾಷ್ಟ್ರನಂತೆ ವರ್ತಿಸುತ್ತಿರುವ ದೇವೇಗೌಡರು ಹಾಗೂ ಅವರ ಶನಿಸಂತಾನವನ್ನು ರಾಜ್ಯದ ಜನತೆ ಹೊಸಕಿ ಹಾಕಬೇಕು.

* ದೇವೇಗೌಡರಿಗೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ಹೊರತಾಗಿ ಮತ್ತ್ಯಾವ ಚಿಂತೆಯಾಗಲಿ, ಚಿಂತನೆಯಾಗಲಿ ಇಲ್ಲ. ಅಧಿಕಾರವೆಂಬುದು ತಮ್ಮ ಕುಟುಂಬದ ಸ್ವತ್ತು ಎಂದು ಭಾವಿಸಿದ್ದಾರೆ. ಕರ್ನಾಟಕ ರಾಜ್ಯ ದೇವೇಗೌಡರ ಆಡೊಂಬಲವಲ್ಲ. ಪುತ್ರ ವ್ಯಾಮೋಹದಿಂದ ಕುರುಡಾಗಿರುವ ಗೌಡರಿಗೆ ಈ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.

* ದೇವೇಗೌಡರ ಪಕ್ಷ ಅಂದ್ರೆ ಅದು ಟಿಎಂಪಿ. ಅಂದ್ರೆ ತಂದೆ-ಮಕ್ಕಳ ಪಕ್ಷ' ಅಂತ. ಒಬ್ಬ ಮಗನನ್ನು ಮುಖ್ಯಮಂತ್ರಿ ಮಾಡಿದ ಗೌಡರು, ಮತ್ತೊಬ್ಬನನ್ನೂ ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಆದರೆ ಈ ರಾಜ್ಯದ ಜನತೆ ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ.

* ದೇವೇಗೌಡರಿಗೆ ಮೈತುಂಬಾ ಅಧಿಕಾರದ ಆಸೆ. ತಾವು ಮಂತ್ರಿಯಾದರು, ಮುಖ್ಯಮಂತ್ರಿಯಾದರು, ಪ್ರಧಾನಮಂತ್ರಿಯಾದರು. ತಮ್ಮ ಒಬ್ಬ ಮಗನನ್ನು ಮಂತ್ರಿಯಾಗಿಯೂ, ಮತ್ತೊಬ್ಬನನ್ನು ಮುಖ್ಯಮಂತ್ರಿಯಾಗಿಯೂ ಮಾಡಿದರು. ಈಗ ಸೊಸೆಯನ್ನು ಶಾಸಕಿಯಾಗಿ ಮಾಡಲು ಹೊರಟಿದ್ದಾರೆ. ಇದು ನಾಚಿಕೆಗೇಡು. ಇದು ಕುಟುಂಬ ರಾಜಕಾರಣದ ಅಸಹ್ಯದ ಉತ್ತುಂಗ.

* ಜೆಡಿ(ಎಸ್) ಅಂದ್ರೆ ತಂದೆ-ಮಕ್ಕಳ ಪಕ್ಷ. ಕಾಂಗ್ರೆಸ್ ಅಂದ್ರೆ ಅವ್ವ-ಮಕ್ಕಳ ಪಕ್ಷ. ವಂಶಪಾರಂಪರ್ಯ ರಾಜಕಾರಣವನ್ನು ಬಿಜೆಪಿ ವಿರೋಧಿಸುತ್ತದೆ. ಈ ಪಕ್ಷಗಳ ನಾಯಕರಿಗೆ ಬಡವರು, ದೀನದಲಿತರ ಬಗ್ಗೆ ಕಾಳಜಿ ಇಲ್ಲ. ತಮ್ಮ ಮಕ್ಕಳು ಉದ್ಧಾರವಾದರೆ ಸಾಕು ಎಂಬುದಷ್ಟೇ ಇವರ ಕಳಕಳಿ. ಈ ತಂದೆ-ಮಕ್ಕಳಿಗೆ ಹಾಗೂ ಅವ್ವ-ಮಕ್ಕಳಿಗೆ ತಕ್ಕ ಶಾಸ್ತಿ ಮಾಡಿ.

* ಈ ದೇಶವೇನು ಗಾಂಧಿ ಮನೆತನದ ಸ್ವಂತ ಆಸ್ತಿಯಾ? ನಾವೇನು ಇವರಿಗೆ ಈ ದೇಶವನ್ನು ಬರೆದುಕೊಟ್ಟಿದ್ದೇವಾ? ವಂಶಪಾರಂಪರ್ಯ ಆಡಳಿತವನ್ನೇ ಈ ದೇಶದ ಮೇಲೆ ಹೇರುತ್ತಿರುವ ಕಾಂಗ್ರೆಸ್, ಐವತ್ತು ವರ್ಷ ಒಂದು ಕುಟುಂಬದ ಕಪಿಮುಷ್ಟಿಯಲ್ಲಿ ಸಿಲುಕಿರುವುದು ದುರ್ದೈವ. ಈ ಅವ್ವ-ಮಕ್ಕಳ ಪಕ್ಷವನ್ನೂ ರಾಜ್ಯದ ಜನತೆ ಈ ಚುನಾವಣೆಯಲ್ಲಿ ನೋಡಿಕೊಳ್ಳುತ್ತಾರೆ.

ಇವುಗಳು ಕ್ವಿಜ್ಜೂ ಅಲ್ಲ, ಇವುಗಳಲ್ಲಿ ಯಾವ ಸಸ್ಪೆನ್ಸೂ ಇಲ್ಲ. ಈ ಮಾತುಗಳನ್ನು ಯಾರು, ಯಾವಾಗ, ಯಾವ ಸಂದರ್ಭಗಳಲ್ಲಿ ಹೇಳಿದರೆಂಬುದು ಮಹಾಜನತೆಗೆ ಗೊತ್ತಿದೆ. ಕೇವಲ ಹತ್ತು ತಿಂಗಳ ಹಿಂದೆ, repeat ಹೌದು, ಕೇವಲ ಹತ್ತು ತಿಂಗಳ ಹಿಂದೆ, ಬಿ.ಎಸ್. ಯಡಿಯೂರಪ್ಪ repeat ಹೌದು, ಬಿ.ಎಸ್. ಯಡಿಯೂರಪ್ಪನವರು ಹೇಳಿದ ಮಾತುಗಳಿವು! ಈ ಮಾತುಗಳನ್ನು ಹೇಳಿದ ಯಡಿಯೂರಪ್ಪನವರ ಗಂಟಲು ಇನ್ನೂ ಹಸಿ ಹಸಿಯಾಗಿದೆ. ಮಹಾಜನತೆಯ ನೆನಪು ಇನ್ನೂ ಹಸುರು ಹಸುರಾಗಿಯೇ ಇದೆ. ವಂಶಪಾರಂಪರ್ಯ ರಾಜಕಾರಣವನ್ನು ಅವರು ವಿರೋಧಿಸಿದ ರೀತಿ ಅಂಥದು. ರಾಜಕಾರಣದಲ್ಲಿ ಕುಟುಂಬದ ಪಾಳೇಗಾರಿಕೆಯನ್ನು ಟೀಕಿಸಿದ ಪರಿ ಅಂಥದು. ಯಡಿಯೂರಪ್ಪನವರ ಕಳೆದ ಮೂರೂವರೆ ದಶಕಗಳ ಮಾತು, ಹೇಳಿಕೆ, ಭಾಷಣ ಕೇಳಿದವರಿಗೆ ಅವರು ವಂಶಪಾರಂಪರ್ಯ ಆಡಳಿತದ ಪರಮ ವಿರೋಧಿ, ಕಡುಶತ್ರು ಎಂಬ ಅಭಿಪ್ರಾಯ ಮೂಡದಿರದು. ಅಲ್ಲದೇ ಅದು ಬಿಜೆಪಿಯ ಬಹುದೊಡ್ಡ ವರಸೆಯೂ ಹೌದು.

ಈ ಸಂಗತಿಗಳು ಇಲ್ಲೇ ಇರಲಿ. ಒಮ್ಮೆ ಬೇರೆ ರೌಂಡು ಹೊಡೆದು ಬರೋಣ. ಸ್ವಾತಂತ್ರ್ಯಾನಂತರದಿಂದ ಆಗಿನ ಜನಸಂಘವಾಗಲಿ, ಈಗಿನ ಬಿಜೆಪಿಯಾಗಲಿ ಅಷ್ಟು ವರ್ಷಗಳಿಂದ ಕಾಂಗ್ರೆಸನ್ನು ಕೂರಂಬುಗಳಿಂದ ಚುಚ್ಚಿದ್ದರೆ ಅದು ಇದೊಂದೇ ವಿಷಯದ ಮೇಲೆ. ಪಂಡಿತ ದೀನದಯಾಳ್ ಉಪಾಧ್ಯಾಯರಿಂದ ಹಿಡಿದು ಈಗಿನ ರಾಜ್‌ನಾಥ ಸಿಂಗ್ ಅವರ ತನಕ ಎಲ್ಲರೂ ಕಾಂಗ್ರೆಸ್‌ನ dynasty rule ಅನ್ನು ಕಟುವಾಗಿ ಟೀಕಿಸಿದವರೇ. 1989ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ಲಖನೌದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಹೇಳಿದ್ದರು "ಈ ದೇಶವನ್ನು ನೈತಿಕವಾಗಿ ದಿವಾಳಿ ತೆಗೆದ ಪಕ್ಷವೆಂದರೆ ಕಾಂಗ್ರೆಸ್. ಈ ಪಕ್ಷ ಸೇರಬೇಕೆಂದರೆ ನಿಮಗಿರಬೇಕಾದ ಅರ್ಹತೆಯೆಂದರೆ ನೀವು ಗಾಂಧಿ ಕುಟುಂಬದ ವಿರುದ್ಧ ಮಾತಾಡಬಾರದು. ದೇಶವನ್ನು ವಿರೋಧಿಸಿ ಮಾತಾಡಿದರೂ ಪರವಾಗಿಲ್ಲ. ಗಾಂಧಿ ಕುಟುಂಬದವಿರುದ್ಧ ಮಾತಾಡಿದರೆ ದೇಶವಿರೋಧಿಯೇ. ಗಾಂಧಿ ಕುಟುಂಬನಿಷ್ಠೆಯೇ ದೇಶನಿಷ್ಠೆ. ಈ ದೇಶವನ್ನು ತನ್ನ ಕಿರುಬೆರಳಲ್ಲಿ ಎಳೆದುಕೊಂಡು ಕಾಲಡಿಗೆ ಹಾಕಿರುವ ಪಕ್ಷದ ಅಧಿಕಾರವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ."

ಬಿಜೆಪಿಯ ಯಾವುದೇ ನಾಯಕನ ಮಾತುಗಳನ್ನು ಕೇಳಿ, ಅವೇಶನಗಳ ನಿರ್ಣಯಗಳನ್ನು ಓದಿ, ಮೊದಲಿನಿಂದಲೂ ವಂಶಪಾರಂಪರ್ಯ ಆಡಳಿತವಿರೋಧ ಆ ಪಕ್ಷದ ಪ್ರಬಲ ಅಸ್ತ್ರ. ಕಾಂಗ್ರೆಸ್ ಅನ್ನು ಬಿಜೆಪಿ ವಿರೋಧಿಸಲು ಈ ಅಂಶವೂ ಒಂದು ಪ್ರಬಲ ಕಾರಣ. ಎಲ್ಲ ರಾಜಕೀಯ ಪಕ್ಷಗಳೂ ಒಂದೇ ಆಗಿರುವ ಈ ದಿನಗಳಲ್ಲಿ, ಯಾವ ಪಕ್ಷಗಳ ಮಧ್ಯೆಯೂ ಯಾವುದೇ ವ್ಯತ್ಯಾಸವಿಲ್ಲದಿರುವ ಈ ದಿನಗಳಲ್ಲಿ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಏನಾದರೂ ಅಲ್ಪಸ್ವಲ್ಪ ತೆಳು ಗೆರೆ ಉಳಿದಿದ್ದರೆ ಬಿಜೆಪಿ ಕಾಂಗ್ರೆಸ್‌ನಂತೆ ವಂಶಪಾರಂಪರ್ಯ ಆಡಳಿತವನ್ನು ಬೆಂಬಲಿಸುತ್ತಿಲ್ಲ ಎಂಬ ಕಾರಣಕ್ಕೆ ಮತ್ತು ಅದೊಂದೇ ಕಾರಣಕ್ಕೆ. ಮಿಕ್ಕಂತೆ ಆ ಎರಡೂ ಪಕ್ಷಗಳ ಮಧ್ಯೆ ಯಾವ ವ್ಯತ್ಯಾಸವಿದೆ? ಬೇರೆ ಯಾವ ಕಾರಣದಿಂದ ಬಿಜೆಪಿ Party with a difference ಆಗಿ ಉಳಿದಿದೆ? ಯಾವ ಸಿದ್ಧಾಂತ, ಯಾವ ಮೌಲ್ಯ, ನೀತಿ ಬಿಜೆಪಿಯ ಬತ್ತಳಿಕೆಯಲ್ಲಿ ಉಳಿದಿದೆ?

ಉಹುಂ.. ಇಲ್ಲವೇ ಇಲ್ಲ. ಬಿಜೆಪಿಗೆ ಬಂಗಾರಪ್ಪ ಸೇರಿದಾಗ ಆಗ ಪಕ್ಷದ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ತಮಾಷೆಯಿಂದ ಮಾರ್ಮಿಕವಾಗಿ ಹೇಳಿದ್ದರು- "ಕಾಂಗ್ರೆಸ್ ಅಮ್ಮ-ಮಕ್ಕಳ ಪಕ್ಷ. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ. ಆದರೆ ಬಿಜೆಪಿ ಮಾತ್ರ ಅಪ್ಪಂದಿರ ಪಕ್ಷ. ನಮ್ಮ ಪಕ್ಷದಲ್ಲಿರುವವರು ಯಾರೆಂದ್ರೆ ಬಿ.ಬಿ. ಶಿವಪ್ಪ, ಯಡಿಯೂರಪ್ಪ, ಈಶ್ವರಪ್ಪ ಹಾಗೂ ಈಗ ಬಂಗಾರಪ್ಪ."ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಪ್ರಚಾರ ಭಾಷಣ ಮಾಡುತ್ತಾ ಬಿಜೆಪಿಯ ಶತ್ರುಘ್ನ ಸಿನ್ಹಾ ಅಷ್ಟೇನೂ ಉತ್ತಮ ಅಭಿರುಚಿಯ ಮಾತುಗಳಲ್ಲದಿದ್ದರೂ ತೀಕ್ಷ್ಣವಾಗಿ ಹೇಳಿದ್ದರು-"ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಎಲ್ಲ ಪ್ರಧಾನಿಯಾದರು. ಸೋನಿಯಾ, ಪ್ರಿಯಾಂಕಾ, ರಾಹುಲ್ ಎಲ್ಲರೂ ಪ್ರಧಾನಿ ಆಕಾಂಕ್ಷಿಗಳೇ. ಇವರಿಗೆ ಪ್ರಧಾನಿಯಾಗುವ ಅರ್ಹತೆಗಳಿವೆಯಾ ಎಂಬುದು ಮುಖ್ಯ ಅಲ್ಲ. ಇವರಲ್ಲಿರುವ ಏಕೈಕ ಅರ್ಹತೆಯೆಂದರೆ ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದಾರೆಂಬುದು. ಆ ಕುಟುಂಬದಲ್ಲಿ ನಾಳೆ ನಾಯಿ ಮರಿ ಹಾಕಿತೆನ್ನಿ. ಅದು ಗಾಂಧಿ ಕುಟುಂಬದಲ್ಲಿದೆಯೆಂಬ ಕಾರಣಕ್ಕೆ ಕುತ್ತಾ ಕೂಡ ನೇತಾ (ನಾಯಿ ಕೂಡ ನಾಯಕ) ಆಗುತ್ತದೆ. ಎಲ್ಲ ಕಾಂಗ್ರೆಸ್ ನಾಯಕರು ಆ ನಾಯಿಯ ಬಾಲಬಡುಕರಾಗುತ್ತಾರೆ, ಕಾವಲುನಾಯಿಗಳಾಗುತ್ತಾರೆ."

ಶತ್ರುಘ್ನ ಸಿನ್ಹಾ ಮಾತುಗಳಲ್ಲಿ ಧ್ವನಿಸಿದ್ದೂ ವಂಶಪಾರಂಪರ್ಯ ಆಡಳಿತಕ್ಕೆ ವಿರೋಧವೇ. ಕರ್ನಾಟಕಕ್ಕೆ ಬಂದ ಬಿಜೆಪಿ ರಾಷ್ಟ್ರ ನಾಯಕರೆಲ್ಲ ದೇವೇಗೌಡ ಹಾಗೂ ಅವರ ಕುಟುಂಬ ರಾಜಕಾರಣವನ್ನು ಹಿಗ್ಗಾಮುಗ್ಗಾ ಟೀಕಿಸಿದವರೇ. ಪ್ರಧಾನಿಯಾಗಿ ದಿಲ್ಲಿಗೆ ದೇವೇಗೌಡರು ಹೋಗುತ್ತಿದ್ದಂತೆ, ಜೆ.ಎಚ್. ಪಟೇಲ್ ಸಂಪುಟದಲ್ಲಿ ಎಚ್.ಡಿ. ರೇವಣ್ಣ ಮಂತ್ರಿಯಾದಾಗ, ಕುಮಾರಸ್ವಾಮಿ ಸಂಸದರಾದಾಗ, ವಾಜಪೇಯಿಯಿಂದ ಹಿಡಿದು ಬಿಜೆಪಿಯ ಸಿಂಹಾಲಯ' ಕಾರ್ಯಾಲಯದಲ್ಲಿ ಬೈಠಕ್‌ಗೆ ಜಮಖಾನ ಹಾಸುತ್ತಿದ್ದವರವರೆಗೆ ಎಲ್ಲರೂ ಅಪ್ಪ-ಮಕ್ಕಳನ್ನು' ಗೇಲಿ ಮಾಡಿದ್ದೇ ಮಾಡಿದ್ದು. ಗೌಡರು ಮಾಡಿದ್ದೂ ಅದೇ. ಆದರೆ ಅವರು ಮಾಡಿದ್ದಕ್ಕಿಂತ ನೂರುಪಟ್ಟು ಘನಘೋರವಾಗಿ ಅವರನ್ನು ಬಿಜೆಪಿಗಳು ಟೀಕಿಸಿದರು, ಹಂಗಿಸಿದರು, ಮೂದಲಿಸಿದರು, ಜರಿದರು, ಸ್ವಾಟೆ ತಿವಿದರು. ಅನಂತಕುಮಾರ್ ಅವರಂತೂ ಕರ್ನಾಟಕ ವೀರಗಲ್ಲು, ಮಾಸ್ತಿಗಲ್ಲು, ಬೀರಗಲ್ಲುಗಳಿಗೆ ಪ್ರಸಿದ್ಧವಾಗಿತ್ತು. ಆದರೆ ನೀವು ಹಾಸನ, ಹೊಳೆನರಸೀಪುರಕ್ಕೆ ಹೋಗಿ, ಅಲ್ಲಿ ಕಣ್ಣಿಗೆ ಕಾಣುವುದು ಬರೀ ದೇವುಗಲ್ಲು ಹಾಗೂ ರೇವುಗಲ್ಲು" ಎಂದು ವ್ಯಂಗ್ಯವಾಡಿ ಕುಟುಕಿದರು. ಕುಮಾರಸ್ವಾಮಿ ಜತೆ ಸೇರಿ ಸರಕಾರ ಮಾಡಿ, ಕರಾರಿನಂತೆ ಇಪ್ಪತ್ತು ತಿಂಗಳ ಬಳಿಕ ಅಕಾರ ಹಸ್ತಾಂತರ ಮಾಡದೇ ವಿಶ್ವಾಸದ್ರೋಹ ಮಾಡಿದಾಗಂತೂ, ಬಿಜೆಪಿ ನಾಯಕರು ಹಾಕಿದ ಶಾಪವೇನಾದರೂ ತಟ್ಟಿದ್ದರೆ ಅಪ್ಪ-ಮಕ್ಕಳು' ಸರ್ವನಾಶವಾಗಿ ಹೋಗಬೇಕಿತ್ತು. ಆ ಪರಿ ಬೈದರು, ಕಟಕಿಯಾಡಿದರು. ವಂಶಪಾರಂಪರ್ಯ ಆಡಳಿತ ಅಂದ್ರೆ ಅದೇಕೋ ಬಿಜೆಪಿಗೆ ಯಡಿಯೂರಪ್ಪನವರ ಕೆಂಡಕೋಪ. ಇನ್ನು ಯಡಿಯೂರಪ್ಪನವರಂತೂ ಉಗ್ರಪ್ರತಾಪಿ! ಅದನ್ನು ಸಹಿಸೋದುಂಟಾ? ವದ್ದು, ವದ್ದು.

ಆದರೆ ಈ ಕಾಲನದು ಅದೆಂಥ ಮಹಿಮೆಯೋ? ಸೋನಿಯಾ-ಪ್ರಿಯಾಂಕಾ-ರಾಹುಲ್‌ರ ಕಾಂಗ್ರೆಸ್‌ನ್ನು ಅವ್ವ-ಮಕ್ಕಳ ಪಕ್ಷ ಎಂದು ನಿಂದಿಸಿದ ಯಡಿಯೂರಪ್ಪ, ದೇವೇಗೌಡ-ರೇವಣ್ಣ-ಕುಮಾರಸ್ವಾಮಿ ಜೆಡಿ(ಎಸ್)ನ್ನು ಅಪ್ಪ-ಮಕ್ಕಳ ಪಕ್ಷ ಎಂದು ನೆತ್ತಿಮೇಲೆ ಕಲ್ಲು ಎತ್ತಿಹಾಕುವವರಂತೆ ಅಬ್ಬರಿಸಿದ ಯಡಿಯೂರಪ್ಪ, ಮುಖ್ಯಮಂತ್ರಿಯಾಗುತ್ತಿದ್ದಂತೆ ಹತ್ತು ತಿಂಗಳ ಹಿಂದೆ ತಾವು ಆಡಿದ ಮಾತುಗಳನ್ನು ಮರೆತುಬಿಟ್ಟರಾ? ನಿಜಕ್ಕೂ ತೀವ್ರ ಅಚ್ಚರಿಯಾಗುತ್ತದೆ. ಹೇಂಗಿದ್ದ ಯಡಿಯೂರಪ್ಪನವರು ಹೇಗಾದರು? ಹೀಗೇಕಾದರು?

ಹೋಗಿ ಹೋಗಿ, ತಮ್ಮ ಸುಪುತ್ರನನ್ನೇ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿ ನಿಲ್ಲಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರಲ್ಲ? ಪಕ್ಷದಲ್ಲಿ, ಸಂಘಪರಿವಾರದಲ್ಲಿ ಇಷ್ಟೆಲ್ಲ ವಿರೋಧಗಳಿದ್ದರೂ ಹಠಕ್ಕೆ ಬಿದ್ದು ಮಗನನ್ನು ಕಣಕ್ಕಿಳಿಸಿಯೇ ಸಿದ್ಧ ಎನ್ನುತ್ತಿದ್ದಾರಲ್ಲ? ಯಡಿಯೂರಪ್ಪನವರಿಗೆ ತಮ್ಮ ಮಾತು ಮರೆತುಹೋಯಿತಾ? ಇನ್ನು ತಮ್ಮ ಪಕ್ಷ ಪ್ರತಿಪಾದಿಸಿಕೊಂಡು ಬಂದ ತತ್ತ್ವ, ಸಿದ್ಧಾಂತ ಮರೆತುಹೋಯಿತಾ? ಪುತ್ರವಾತ್ಸಲ್ಯದ ಮುಂದೆ ದುರ್ಬಲರಾಗುವ ಧೃತರಾಷ್ಟ್ರ ಕುರುಡು ಇವರಿಗೂ ತಟ್ಟಿತಾ? ಯಡಿಯೂರಪ್ಪನವರಿಗೆ ತಮ್ಮ ಮಾತನ್ನು ತಾವೇ ನುಂಗಬೇಕಾದ ಅನಿವಾರ್ಯವೇನು ಬಂತು? ಹಾಗಾದರೆ ಇಲ್ಲಿವರೆಗೆ ಅವರು ಪ್ರತಿಪಾದಿಸಿಕೊಂಡು ಬಂದಿದ್ದು ಬರೀ ಸುಳ್ಳಾ? ದೇವೇಗೌಡರಿಗೂ ಅವರಿಗೂ ಏನು ವ್ಯತ್ಯಾಸ? ಕಾಂಗ್ರೆಸ್‌ನ ವಂಶಪಾರಂಪರ್ಯ ರಾಜಕಾರಣವನ್ನು ಇನ್ನು ಮುಂದೆ ಅವರು ಹೇಗೆ ವಿರೋಧಿಸುತ್ತಾರೆ? ಅಥವಾ ಮಗನಿಗಾಗಿ ಇವೆಲ್ಲಕ್ಕೂ ಎಳ್ಳು-ನೀರು ಬಿಡಲು ಅವರು ನಿರ್ಧರಿಸಿದ್ದಾರಾ? ಬಿಜೆಪಿ ಬತ್ತಳಿಕೆಯಲ್ಲಿದ್ದ ರಾಮಬಾಣ ಹೊರಟುಹೋಗುತ್ತದೆಂದು ಅವರಿಗೆ ಅನಿಸುವುದಿಲ್ಲವಾ? ಕೊನೆಗಾಲದಲ್ಲಿ ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಕಾ? ಇನ್ನು ಮುಂದೆ ದೇವೇಗೌಡರನ್ನು ಟೀಕಿಸಲು ಯಡಿಯೂರಪ್ಪನವರಿಗೆ ಯಾವ ನೈತಿಕತೆ ಉಳಿಯುತ್ತದೆ? ಅಷ್ಟಕ್ಕೂ ರಾಘವೇಂದ್ರನ ರಾಜಕೀಯ ಪ್ರವೇಶ ಅನಿವಾರ್ಯವಾ? ಸಹಜವಾಗಿ ಬಂದಿದ್ದರೆ ಬೇರೆ ಮಾತು. ಆದರೆ ಅದಕ್ಕಾಗಿ ಇಷ್ಟೆಲ್ಲ ನಾಟಕ ಆಡಬೇಕಾದ, ಸರ್ಕಸ್ ಮಾಡಬೇಕಾದ ಪ್ರಮೇಯವೇನಿದೆ? ಒಂದೆಡೆ, ಸ್ವತಃ ಆಡ್ವಾಣಿಯವರೇ ತಮ್ಮ ಮಗ ಚುನಾವಣೆಗೆ ಸ್ಪರ್ಧಿಸಲಿ ಎಂದು ಹೇಳಿದರೂ ನಾನು ಅದನ್ನು ಸಮ್ಮತಿಸುವುದಿಲ್ಲ ಎಂದು ಹೇಳುತ್ತಾ, ಇನ್ನೊಂದೆಡೆ ಮಗನನ್ನು ಕಣಕ್ಕೆ ಇಳಿಸಲು ತೆರೆಮರೆಯಲ್ಲಿ ಕಂಡ ಕಂಡ ಮಠಾಧೀಶರಿಗೆ ದುಂಬಾಲು ಬಿದ್ದು ಅವರಿಂದ ಪಕ್ಷದ ದಿಲ್ಲಿ ನಾಯಕರಿಗೆ ಫೋನ್ ಮಾಡಿಸಿ ಕಸರತ್ತು ಮಾಡುವ ಅಗತ್ಯವೇನಿದೆ? ಯಡಿಯೂರಪ್ಪನವರು ಯೋಚಿಸಲಿ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಒಂಬತ್ತು ತಿಂಗಳಾದವು. ಈ ಅವಯಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳಾಗಿವೆ. ಕೆಲವು ಅಪಸವ್ಯಗಳ ನಡುವೆಯೂ, ಹಲವು ಒಳ್ಳೆಯ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಹೋರಾಟ, ಸಂಘರ್ಷದಿಂದಲೇ ರಾಜಕೀಯದ ಬದುಕಿನಲ್ಲಿ ಮೇಲಮೆಲಕ್ಕೇರುತ್ತಾ ಬಂದ ಅವರು, ಬಹಳ ಪ್ರಯಾಸಪಟ್ಟು ಈಗ ಮುಖ್ಯಮಂತ್ರಿಯಾಗಿದ್ದಾರೆ. ಹೇಳಿದ್ದನ್ನು ಮಾಡುವ, ಅನಿಸಿದ್ದನ್ನು ಛಲದಿಂದ ಈಡೇರಿಸುವ, ಪಟ್ಟು ಹಿಡಿದು ಸಾಧಿಸುವ ಕೆಲವು ಅಪರೂಪದ ಗುಣಗಳು ಅವರಲ್ಲಿವೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ, ಪಕ್ಷವನ್ನು ಅಕಾರಕ್ಕೆ ತರುವಲ್ಲಿ ಅವರದು ಸಿಂಹಪಾಲು. ಸದ್ಯದ ಮಟ್ಟಿಗೆ ಯಡಿಯೂರಪ್ಪನವರು ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರು. ಸರಕಾರದಲ್ಲೂ ಅವರ ಮಾತೇ ಹೈ ಸೈ!

ರಾಜಕಾರಣಿಯಾಗಿ ಅಕಾರಕ್ಕೆ ಆಸೆಪಡುವುದು ತಪ್ಪಲ್ಲ. ಆದರೆ ಅಕಾರ ಸಿಕ್ಕ ಬಳಿಕ ಹೆಬ್ಬಾಸೆ ಬೆಳೆಸಿಕೊಳ್ಳುವುದು ಸರಿಯೂ ಅಲ್ಲ. ಮುಖ್ಯಮಂತ್ರಿಯಾಗಿ ಏನು ಮಾಡಿದರು, ರಾಜ್ಯಕ್ಕೇನಾಯಿತು, ಯಾವ ಅಭಿವೃದ್ಧಿ ಕೆಲಸಗಳಾದವು ಎಂದು ಯೋಚಿಸುವಂತೆ, ಅಧಿಕಾರದಲ್ಲಿದ್ದವರು ಯಾವ ಆದರ್ಶಗಳನ್ನು ಬಿಟ್ಟುಹೋದರು ಎಂಬುದೂ ಅಷ್ಟೇ ಮುಖ್ಯ. ಈ ವಿಷಯದಲ್ಲಿ ರಾಮಕೃಷ್ಣ ಹೆಗಡೆಯವರನ್ನು ಸ್ಮರಿಸಲೇಬೇಕು. ತಮ್ಮ ಕೊನೆ ಉಸಿರು ಇರುವತನಕ ಹೆಂಡತಿ, ಮಗ, ಮಗಳನ್ನು ರಾಜಕಾರಣದ ಹೊಸ್ತಿಲು ದಾಟಲೂ ಬಿಡಲಿಲ್ಲ. ವಂಶಪಾರಂಪರ್ಯ ಆಡಳಿತವನ್ನು ವಿರೋಧಿಸಿಕೊಂಡೇ ಬಂದ ಅವರು, ಮಗನನ್ನೋ ಮಗಳನ್ನೋ ಎಮ್ಮೆಲ್ಲೆ, ಎಂಪಿ ಅಥವಾ ಮಂತ್ರಿಯನ್ನಾಗಿ ಮಾಡಬಹುದಿತ್ತು. ಆದರೆ ಹೆಗಡೆ ಅಂಥ ಪ್ರಯತ್ನಕ್ಕೆ ಕೈಹಾಕಲೇ ಇಲ್ಲ. ಹಾಗೇ ಎಸ್ಸೆಮ್ ಕೃಷ್ಣ ಕೂಡ.

ಜೆ.ಎಚ್. ಪಟೇಲರು ಸಹ ಈ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿ ಇದ್ದರು. ಪಟೇಲರು ತೀರಿಕೊಂಡ ಬಳಿಕವೇ ಅವರ ಮಗ ಮಹಿಮಾ ರಾಜಕೀಯಕ್ಕೆ ಬಂದಿದ್ದು. ಒಮ್ಮೆ ಪಟೇಲರ ಬಳಿ ಅವರ ಊರಿನಿಂದ ಬಂದ ಕೆಲ ಮರಿನಾಯಕರು, ನಿಮ್ಮ ಮಗ ತ್ರಿಶೂಲಪಾಣಿ ಇದ್ದಾನಲ್ಲ, ಬಹಳ ಉತ್ತಮ ಸಂಘಟಕ, ಒಳ್ಳೆಯ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳಿವೆ. ಅವರನ್ನು ಎಮ್ಮೆಲ್ಸಿ ಮಾಡಿ" ಎಂದರಂತೆ. ಅದಕ್ಕೆ ಪಟೇಲರು ಅವನಿಗೆ ಒಳ್ಳೆಯ ರಾಜಕಾರಣಿಯಾಗುವ ಲಕ್ಷಣಗಳಿವೆಯಾ? ನನಗೆ ಗೊತ್ತೇ ಇರಲಿಲ್ಲ. ಅವನು ಮೊದಲು ಒಳ್ಳೆಯ ರಾಜಕಾರಣಿಯಾಗಲಿ, ಅನಂತರ ನೋಡೋಣ" ಎಂದು ಹೇಳಿದರಂತೆ. ಅಷ್ಟಕ್ಕೂ ಮರಿಪುಢಾರಿಗಳು ಸುಮ್ಮನಾಗದೇ ಪುನಃ ಒತ್ತಾಯಿಸಿದಾಗ ಪಟೇಲರು ಗದರಿ ಹೇಳಿದರಂತೆ-ನೋಡ್ರಯ್ಯಾ ನಾನು ಎಮ್ಮೆಲ್ಲೆ, ಎಂಪಿ, ಮಂತ್ರಿಯಾಗಿ ಮುಖ್ಯಮಂತ್ರಿಯಾಗಿದ್ದೇನೆ. ಅನೇಕ ಹೋರಾಟ ಮಾಡಿದ್ದೇನೆ. ಜೈಲು ಸೇರಿದ್ದೇನೆ. ನನ್ನ ಮಗನಿಗೆ ಇಂಥ ಯಾವ ಅನುಭವವಿದೆ ಅಂತ ಎಮ್ಮೆಲ್ಸಿ ಮಾಡಲಿ? ಸುಮ್ನೆ ಹೋಗಿ ಮುಚ್ಕೊಂಡು, ನನ್ನ ಮಗ ಯಾರು ಅಂತ ನನಗೆ ಹೇಳ್ತೀರಾ? ಆತನ ಯೋಗ್ಯತೆಯೇನೆಂಬುದನ್ನು ನನಗೆ ಹೇಳ್ತೀರಾ? ಇನ್ನೊಂದ್ಸಲ ಈ ವಿಷಯ ತಗೊಂಡು ಬಂದ್ರೆ... ನಿಮ್ಮ... ಹೋಗ್ರೋ ಆಚೆ." ಪಟೇಲರು ಕೊನೆತನಕ ಮಕ್ಕಳನ್ನು ರಾಜಕೀಯದ ಪಡಶಾಲೆಗೆ ಬಿಟ್ಟುಕೊಳ್ಳಲಿಲ್ಲ.

ಅಟಲ್ ಬಿಹಾರಿ ವಾಜಪೇಯಿ ತಮ್ಮ ಸಾಕುಮಗಳ ಗಂಡ ರಂಜನ್ ಭಟ್ಟಾಚಾರ್ಯನ ಹೆಸರು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದಾಗ ತೀವ್ರ ಅಸಮಾಧಾನ ಹೊಂದಿದ್ದರು. ಆತನಿಗೆ ಮೂಗುದಾರ ಹಾಕಿಟ್ಟಿದ್ದರು. ಎಲ್.ಕೆ. ಆಡ್ವಾಣಿಯವರೂ ತಮ್ಮ ಏಕಮಾತ್ರ ಪುತ್ರನಿಗೆ ಇನ್ನೂ ರಾಜಕೀಯ ದೀಕ್ಷೆ ನೀಡಿಲ್ಲ. ಯಾಕೆಂದರೆ ಇವರೆಲ್ಲ ಕಾಂಗ್ರೆಸ್‌ನ ವಂಶಪಾರಂಪರ್ಯ ಆಡಳಿತ ವಿರೋಸುತ್ತಾ ಬಂದವರು. ಪಂಡಿತ್ ದೀನದಯಾಳ್ ಉಪಾಧ್ಯಾಯರಂತೂ ಇಂದಿರಾಗಾಂಧಿ ಮೊದಲ ಬಾರಿಗೆ ಪ್ರಧಾನಿಯಾದಾಗ (1966) ಪಾಂಚಜನ್ಯ' ಪತ್ರಿಕೆಯಲ್ಲಿ ವಂಶ ಪಾರಂಪರ್ಯ ಆಡಳಿತವನ್ನು ವಿರೋಧಿಸಿ ಉಗ್ರ ಲೇಖನ ಬರೆದಿದ್ದರು.

ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಶ್ರಮಿಸುವುದರಿಂದ ಯಡಿಯೂರಪ್ಪನವರಿಗೆ ವ್ಯಕ್ತಿಗತವಾಗಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಅವರ ಈ ನಿರ್ಧಾರವನ್ನು ಪಕ್ಷದಲ್ಲಾಗಲಿ, ಹೊರಗಾಗಲಿ ಯಾರೂ ಮೆಚ್ಚಲಿಕ್ಕಿಲ್ಲ, ಕೆಲವು ಭಟ್ಟಂಗಿಗಳ ಹೊರತಾಗಿ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ತನಕ ದೇವೇಗೌಡ ಆಂಡ್ ಕಂಪನಿ ಹಾಗೂ ಸೋನಿಯಾ ಮತ್ತು ಮಕ್ಕಳ ವಿರುದ್ಧ ಝಳಪಿಸುತ್ತಿದ್ದ ವಂಶಪಾರಂಪರ್ಯ ವಿರೋಧಿ ಖಡ್ಗವನ್ನು ಇನ್ನು ಮುಂದೆ ಹೊರತೆಗೆಯಲೂ ಆಗುವುದಿಲ್ಲ. ಇವೆಲ್ಲ ಬಿಟ್ಟು ಇನ್ನೊಂದು ರೀತಿಯಿಂದ ಯೋಚಿಸಿದರೂ ಮುಖ್ಯಮಂತ್ರಿಯವರ ಪ್ರಯತ್ನವನ್ನು ಒಪ್ಪಲಾಗುವುದಿಲ್ಲ. ಅದೇನೆಂದರೆ ಅಷ್ಟಕ್ಕೂ ರಾಘವೇಂದ್ರ ಯಾರು? ಪಕ್ಷಕ್ಕಾಗಲಿ, ಸಮಾಜಕ್ಕಾಗಲಿ ಅವರ ಕೊಡುಗೆಯೇನು? ಅವರ ಸಾಧನೆಯೇನು? ಶಿಕಾರಿಪುರ ಪುರಸಭೆ ಹಾಲಿ ಸದಸ್ಯರಾಗಿರುವ ರಾಘವೇಂದ್ರನಿಗೆ ಯಡಿಯೂರಪ್ಪನವರ ಮಗ ಎಂಬುದಕ್ಕಿಂತ ಬೇರೇನೂ ಅರ್ಹತೆ ಇಲ್ಲ. ಇದ್ದರೆ ಅವರೇ ಸಾರ್ವಜನಿಕವಾಗಿ ಹೇಳಬೇಕು. ಇಲ್ಲಿ ಯಡಿಯೂರಪ್ಪನವರು ಪಟೇಲರನ್ನು ನೆನಪಿಸಿಕೊಳ್ಳಬೇಕು.

ಇಷ್ಟಾಗಿಯೂ ರಾಘವೇಂದ್ರನ ಸ್ಪರ್ಧೆಗೆ ಯಡಿಯೂರಪ್ಪನವರು ಪಟ್ಟು ಹಿಡಿದರೆ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಯಾವ ವ್ಯತ್ಯಾಸ ಉಳಿದೀತು? ಯಾವ ಮುಖವಿಟ್ಟುಕೊಂಡು ಅವರು ದೇವೇಗೌಡರ ಕುಟುಂಬ ರಾಜಕಾರಣವನ್ನು ಟೀಕಿಸುತ್ತಾರೆ? ಆಗಲೇ ಈ ಕುರಿತು ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನ ನಮ್ಮನ್ನು ಅಪ್ಪ-ಮಕ್ಕಳ ಪಕ್ಷ ಅಂತ ಟೀಕಿಸುತ್ತಿದ್ದವರ ನಿಜಬಣ್ಣ ಸದ್ಯದಲ್ಲೇ ಬಯಲಾಗಲಿದೆ" ಎಂದು ಹೂಂಕರಿಸಿದ್ದಾರೆ. ಮುಖ್ಯಮಂತ್ರಿಯಾಗಿ ಹಲವಾರು ಕನಸುಗಳನ್ನು ಇಟ್ಟುಕೊಂಡಿರುವ, ಕರ್ನಾಟಕದಲ್ಲಿ ಬಿಜೆಪಿಯ ಮೊದಲ ಸರಕಾರದ ನೇತೃತ್ವ ವಹಿಸಿರುವ ಯಡಿಯೂರಪ್ಪನವರ ಬಗ್ಗೆ ಒಂದಷ್ಟು ಕಾಳಜಿಯಿಂದಲೇ ಇಷ್ಟನ್ನು ಹೇಳಬೇಕಾಯಿತು. ಇನ್ನು ನಿರ್ಧಾರ ಅವರಿಗೆ ಬಿಟ್ಟದ್ದು. ಗುಡ್‌ಲಕ್!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more