• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರ ಪರ್ಸನಲ್ ವಿಷಯ ನಮಗ್ಯಾಕೆ

By Staff
|

'ಇದು ಸರೀನಾ? ಒಬ್ಬರವೈಯಕ್ತಿಕ ವಿಷಯಗಳನ್ನು ಪತ್ರಿಕೆಯಲ್ಲಿ ಬರೆಯುವುದು ಎಷ್ಟು ಸರಿ? ಪರ್ಸನಲ್ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸಮಂಜಸವಾ? ಇದನ್ನೇ ಟ್ಯಾಬ್ಲಾಯಿಡ್ ಪತ್ರಿಕೆಯೊಂದು 'ಅನಿತಕ್ಕ ಮಧುಗಿರಿಗೆ, ಕುಮಾರಣ್ಣ ಮಧುಚಂದ್ರಕ್ಕೆ' ಎಂದು ಲೇವಡಿ ಮಾಡಿತು. ಪರ್ಸನಲ್ ವಿಷಯವನ್ನು ಈ ಪರಿ ಬಹಿರಂಗಗೊಳಿಸುವುದು ಖಂಡಿತ ಖಂಡನೀಯ'

*ವಿಶ್ವೇಶ್ವರ ಭಟ್

ಜನರು ಹೀಗೆ ಹೇಳುವುದನ್ನು ಮೇಲಿಂದ ಮೇಲೆ ಕೇಳುತ್ತಿರುತ್ತೇವೆ . "ಅದು ಅವರ ಪರ್ಸನಲ್ ವಿಷಯ, ಬಿಟ್ಟುಬಿಡಿ. ಅವರ ಖಾಸಗಿ ಜೀವನ ಹೇಗಿದ್ದರೆ ಏನಂತೆ? ಅವನ್ನೆಲ್ಲ ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಮಗ್ಯಾಕೆ ಅದರ ಉಸಾಬರಿ, ಯಾಕೆಂದ್ರೆ ಅದು ಅವರ ಪರ್ಸನಲ್ ವಿಷಯ ತಾನೆ? ಅವರ ವೈಯಕ್ತಿಕ ವಿಷಯ ತಗೊಂಡು ನಾವೇನು ಮಾಡಬೇಕು?"

ಈ ರೀತಿಯ ಉದ್ಗಾರಗಳು ಪದೇಪದೆ ನಮ್ಮ ಕಿವಿ ಮೇಲೆ ಬೀಳುತ್ತಿರುತ್ತವೆ. ನಮ್ಮ ನಾಯಕರು, ರಾಜಕೀಯ ಮುಖಂಡರು, ಅಧಿಕಾರದಲ್ಲಿರುವವರು ಅನೈತಿಕ ವ್ಯವಹಾರಗಳಲ್ಲಿ ಸಿಲುಕಿದರೆ, ಪರಸ್ತ್ರೀ ಸಂಗ ಮಾಡಿದರೆ, ಬೇರೊಬ್ಬಳನ್ನು ಇಟ್ಟುಕೊಂಡರೆ ಅದನ್ನು ನಾವು ತೀರಾ ಸ್ವಾಭಾವಿಕವೆಂಬಂತೆ ಸ್ವೀಕರಿಸಲಾರಂಭಿಸಿದ್ದೇವೆ. ಈ ಸಂಗತಿಗಳ ಬಗ್ಗೆ ನಮ್ಮ ದೃಷ್ಟಿಕೋನವೇ ಬದಲಾಗುತ್ತಿದೆ.

"ಅದು ಅವರ ಪರ್ಸನಲ್ ವಿಚಾರ. ಅವರ ವೈಯ ಕ್ತಿಕ ಜೀವನ ಹೇಗೇ ಇರಲಿ, ಅದರ ಗೊಡವೆ ನಮಗ್ಯಾಕೆ?" ಎಂದು ಸುಮ್ಮನಾಗಿಬಿಡುತ್ತೇವೆ. ಹೀಗೆ ಸುಮ್ಮನಾಗುವುದರಲ್ಲಿ ಹಾದರ ಮಾಡಿದರೆ ಮಾಡಿಕೊಳ್ಳಲಿ, ಬೇರೊಬ್ಬಳನ್ನು ಇಟ್ಟುಕೊಂಡರೆ ಇಟ್ಟುಕೊಳ್ಳಲಿ ಬಿಡಿ ಎಂಬ ಸಮ್ಮತಿಯೂ ಇರುವಂತಿದೆ. ಅಲ್ಲದೇ ಈ ಸಮ್ಮತಿಗೆ ಸಾರ್ವಜನಿಕ ಒಪ್ಪಿಗೆಯೂ ಸಿಗುತ್ತಿದೆ. ಹೀಗಾಗಿ ಸಾರ್ವಜನಿಕರ ಬದುಕಿನಲ್ಲಿರುವವರ ಖಾಸಗಿಜೀವನ ಎಷ್ಟೇ ಕೊಳಕಾಗಿದ್ದರೂ ಪರವಾಗಿಲ್ಲ, ವೈಯಕ್ತಿಕ ಬದುಕೆಂಬುದು ಎಷ್ಟೇ ಹೊಲಸಾಗಿ ನಾರುತ್ತಿದ್ದರೂ ಪರವಾಗಿಲ್ಲ, ಅದು ಅವರ ಪರ್ಸನಲ್ ವಿಚಾರ, ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ ಎಂದು ನಾವೇ ಷರಾ ಎಳೆದು ಸುಮ್ಮನಾಗಿಬಿಡುತ್ತೇವೆ.

ಅಂದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ರಂಗದಲ್ಲಿರುವವರ ವೈಯಕ್ತಿಕ ಜೀವನ ಎಷ್ಟೇ ಅಧಃಪತನಕ್ಕಿಳಿದರೂ ಇಳಿಯಲಿ ಬಿಡಿ, ಅದರಿಂದ ಸಾರ್ವಜನಿಕ ಬದುಕಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬ ಭಾವನೆ ಮೊಳೆಯುತ್ತಿದೆ. ಹೀಗಾಗಿ ಸಾರ್ವಜನಿಕವಾಗಿ ಎತ್ತರ ಸ್ಥಾನದಲ್ಲಿರುವವರು ಹಾದರ ಮಾಡಲಿ,ಅಧಿಕೃತ ಹೆಂಡತಿಯಿದ್ದರೂ ಮತ್ತೊಬ್ಬ ಹೆಂಗಸಿನಸಂಗ ಮಾಡಲಿ ಅವೆಲ್ಲ ಮಾಫ್! ಯಾರೂ ಮಾತಾಡುವುದಿಲ್ಲ. ಮಾತಾಡಿದರೂ ಹೇಳುವುದೇನೆಂದ್ರೆ 'ಎಷ್ಟೆಂದರೂ ಅದು ಅವರ ಪರ್ಸನಲ್ ವಿಷಯ. ನಮಗ್ಯಾಕೆ ಅದರ ಚಿಂತೆ?'

ಇತ್ತೀಚೆಗೆ ನಾನು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಗಣ್ಯರೊಬ್ಬರು ಮಾತಾಡುತ್ತಾ "ಪತ್ರಿಕೆಗಳು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿರುವವರ ಖಾಸಗಿ ವಿಷಯಗಳ ಕುರಿತು ಲಂಗು ಲಗಾಮಿಲ್ಲದೇ ಬರೆಯುತ್ತಿವೆ. ಹೀಗಾದರೆ ಸಾರ್ವಜನಿಕ ಕ್ಷೇತ್ರದಲ್ಲಿರುವವರು ತಲೆಯೆತ್ತಿ ಕೆಲಸ ಮಾಡಲು ಆಗುವುದಿಲ್ಲ" ಎಂದು ಎತ್ತರದ ದನಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆ ಸಭೆಯಲ್ಲಿ ನಾನಿದ್ದುದು ಅವರ ಕೋಪಕ್ಕೆ ತುಸು ತುಪ್ಪ ಸುರಿದಂತಾಗಿತ್ತು. ಹೇಳುವಷ್ಟು ಹೇಳಿದರು, ನಾನು ಸುಮ್ಮನಿದ್ದೆ. ಅವರು ಯಾರ ಕುರಿತು, ಯಾವ ಪತ್ರಿಕೆ ಕುರಿತು, ಯಾವ ಪ್ರಸಂಗ ಕುರಿತು ಹೇಳುತ್ತಿದ್ದಾರೆಂಬುದು ಗೊತ್ತಾಗಲಿಲ್ಲ. ಹೀಗಾಗಿ ಅವರಿಗೆ ದಯವಿಟ್ಟು ಯಾವುದಾದರೂ ಪ್ರಸಂಗದ ಮೂಲಕ, ನಿದರ್ಶನ ಕೊಟ್ಟು ಹೇಳಿ' ಅಂದೆ. ಅದಕ್ಕೆ ಆ ಮಹಾಶಯರು ಹೇಳಿದರು..

ನೋಡಿ ಸ್ವಾಮಿ, ಮೊನ್ನೆ (ಜನವರಿ 5) ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಿನಿಮಾ ನಟಿರಾಧಿಕಾ ಜತೆ ಮಾಲ್ಡೀವ್ಸ್‌ಗೆ ವಿಮಾನದಲ್ಲಿ ಅಕ್ಕ ಪಕ್ಕ ಕುಳಿತು ಹೋದರು. ಅವರಿಬ್ಬರು ಮಾಲ್ಡೀವ್ಸ್‌ಗೆ ಹೋಗಬಾರದಾ?ಹೋದರೇನಂತೆ? ಅಷ್ಟೂ ಸಾಲದೆಂಬಂತೆ ಒಂದು ಪತ್ರಿಕೆಯಂತೂ ಕುಮಾರಸ್ವಾಮಿ-ರಾಧಿಕಾ ಅಕ್ಕಪಕ್ಕ ಕುಳಿತೇಪಯಣಿಸಿರುವುದನ್ನು ಪಕ್ಕಾ ಮಾಡಲು ಬೋರ್ಡಿಂಗ್ ಪಾಸ್‌ನ್ನು ಯಥಾವತ್ತು ಪ್ರಕಟಿಸಿತು. ಅದೇನು ರಾಷ್ಟ್ರೀಯ ಮಹತ್ವದ ಸುದ್ದಿಯೆ? ರಾಜ್ಯದ ಅತ್ಯಧಿಕ ಪ್ರಸಾರದ ನಂಬರ್ ಒನ್ ಎಂದು ಕರೆದುಕೊಳ್ಳುವ ಪತ್ರಿಕೆಯೊಂದು (ವಿಜಯ ಕರ್ನಾಟಕ) 'ಕುಮಾರ-ರಾಧಿಕಾ ಅಕ್ಕಪಕ್ಕ, ವದಂತಿಗಳಿಗೆ ರೆಕ್ಕೆಪುಕ್ಕ' ಎಂಬ ಹೆಡಿಂಗ್‌ನಲ್ಲಿ ಅವರಿಬ್ಬರೂ ಮಾಲ್ಡೀವ್ಸ್‌ಗೆ ಹೋದದ್ದು ಗೊತ್ತಾಗಿದ್ದು ಹೇಗೆ ಎಂಬುದನ್ನೇ ದೊಡ್ಡದಾಗಿ ಬರೆಯಿತು.

ಇದು ಸರೀನಾ? ಒಬ್ಬರವೈಯಕ್ತಿಕ ವಿಷಯಗಳನ್ನು ಪತ್ರಿಕೆಯಲ್ಲಿ ಬರೆಯುವುದು ಎಷ್ಟು ಸರಿ? ಪರ್ಸನಲ್ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸಮಂಜಸವಾ? ಇದನ್ನೇ ಟ್ಯಾಬ್ಲಾಯಿಡ್ ಪತ್ರಿಕೆಯೊಂದು 'ಅನಿತಕ್ಕ ಮಧುಗಿರಿಗೆ, ಕುಮಾರಣ್ಣ ಮಧುಚಂದ್ರಕ್ಕೆ' ಎಂದು ಲೇವಡಿ ಮಾಡಿತು. ಪರ್ಸನಲ್ ವಿಷಯವನ್ನು ಈ ಪರಿ ಬಹಿರಂಗಗೊಳಿಸುವುದು ಖಂಡಿತ ಖಂಡನೀಯ".

ಇದನ್ನೇ ದುರಂತ ಅನ್ನೋದು: ನಮ್ಮ ನಾಯಕರಾದವರು ಯಾವುದೇ ಅನೈತಿಕ, ತಲೆತಗ್ಗಿಸುವ ಕೆಲಸ ಮಾಡಿದರೆ ಅದನ್ನು ಟೀಕಿಸಬಾರದು, ಚರ್ಚಿಸಲೂ ಬಾರದು ಎಂದು ನಮಗೆ ನಾವೇ ನಿರ್ಬಂಧ ಹೇರಿರುವುದು. ಯಾಕೆಂದರೆ ಅದು ಅವರವರ ಪರ್ಸನಲ್ ವಿಷಯ. ನಿಜ, ಪತ್ರಿಕೆಗಳು ಖಾಸಗಿ ಜೀವನದಲ್ಲಿ ಮೂಗು ತೂರಿಸಬಾರದು. ಒಪ್ಪತಕ್ಕ ಮಾತೇ ಸರಿ. ಆದರೆ ಇದನ್ನು ಇನ್ನೊಂದು ರೀತಿಯಲ್ಲಿ ನೋಡಿ. ಅಲ್ಲಾ ಸ್ವಾಮಿ, ತನ್ನ ಮನೆಯಲ್ಲೇ ನೀತಿಗೆಟ್ಟವನು ಹೊರಗೆ ನೀತಿವಂತನಾಗಿ ಹೇಗೆ ಬಾಳುತ್ತಾನೆ? ತನ್ನ ಹೆಂಡತಿಗೆ, ಮಕ್ಕಳಿಗೆ ಮೋಸ ಮಾಡುವವನು ಬೇರೆಯವರಿಗೆ ಮೋಸ ಮಾಡದೇ ಬಿಡುತ್ತಾನಾ?

ವೈಯಕ್ತಿಕ ಬದುಕೇ ಮೂರಾಬಟ್ಟೆಯಾದರೆ, ಸಾರ್ವಜನಿಕವಾಗಿ ಸ್ವಚ್ಛವಾಗಿರಲು ಹೇಗೆ ಸಾಧ್ಯ? ಅಷ್ಟಕ್ಕೂ ಖಾಸಗಿ ಬದುಕೇ ಬೇರೆ, ಸಾರ್ವಜನಿಕ ಬದುಕೇ ಬೇರೆ ಎಂದು ನಾವ್ಯಾಕೆ ಪರಿಗಣಿಸಬೇಕು? ಖಾಸಗಿ ಬದುಕಿನಲ್ಲಿ ಹಲ್ಕಾ ಕೆಲಸ ಮಾಡಿದವನು ಸಾರ್ವಜನಿಕ

ಬದುಕಿನಲ್ಲಿ ಸುಬಗನಾಗಿರುವುದು ಸಾಧ್ಯವಿದೆಯಾ? ಹೊಲಸು ಹೊಲಸೇ, ಅದು ಖಾಸಗಿಯಾದರೇನು, ಬಹಿರಂಗವಾದರೇನು? ಗಂಗಾನದಿ ತನ್ನ ಉಗಮಸ್ಥಾನವಾದ ಗಂಗೋತ್ರಿಯಲ್ಲೇ ಹೊಲಸಾದರೆ ಕೆಳಗೆ ಹರಿದು ಬಂದಾಗ ಅದನ್ನು ಸ್ವಚ್ಛಗೊಳಿಸಲು ಸಾಧ್ಯವಾ?ಮನೆಯಲ್ಲೇ ಮರ್ಯಾದೆ ಯಿಲ್ಲದವನು ಸಮಾಜದ ಮರ್ಯಾದೆ ಹೇಗೆ ಕಾಪಾಡುತ್ತಾನೆ? ತನ್ನ ಮೈಮೇಲೆ ಕೆಸರನ್ನು ಎರಚಿಕೊಂಡವನು ಬೇರೆಯವರು ಶುಭ್ರವಾಗಿರಬೇಕು ಎಂದು ಹೇಗೆ ಹೇಳುತ್ತಾನೆ? ವೈಯಕ್ತಿಕವೇ ಕಳಂಕವಾದರೆ ಸಾರ್ವಜನಿಕ ಶುಭ್ರವಾಗಿರೋದಾದರೂ ಹೇಗೆ? ಸಚ್ಚಾರಿತ್ರ್ಯ ಮನೆಯಿಂದಲೇ ಆರಂಭವಾಗಬೇಕು ತಾನೆ? ಅಲ್ಲೇ ಹೊಲಸು ಮೆತ್ತಿಕೊಂಡರೆ ಹೊರಗೂ ಅದೇ ವಾಸನೆ ಹೊಡೆಯದಿರುತ್ತಾ?

ಈ ವಿಷಯದಲ್ಲಿ ನಮ್ಮ ವಾದ ಹೇಗಿದೆಯೆಂದರೆ ಕಳ್ಳ ಎಲ್ಲಿದ್ದರೂ ಕಳ್ಳ ಅಂದ್ರೆ ನಾವು ಒಪ್ಪುವುದಿಲ್ಲ. ಸಿಕ್ಕಿಬಿದ್ದರೆ ಮಾತ್ರ ಕಳ್ಳ, ಜೈಲಿನಲ್ಲಿಟ್ಟರೆ ಮಾತ್ರ ಕಳ್ಳ. ಹೊರಗಿದ್ದಾನೆಂದರೆ ಕಳ್ಳ ಅಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಮನೆಯಲ್ಲಿ ಕಳ್ಳನಾಗಿದ್ದರೆ ಇರಲಿ, ಅದು ಎಷ್ಟು ಜನರಿಗೆ ಗೊತ್ತಾಗುತ್ತದೆ, ಅಷ್ಟಕ್ಕೂ ಅದು ಅವರ 'pure personal' ವಿಷಯ ಅಲ್ವಾ, ಅದನ್ನೆಲ್ಲ ಯಾಕೆ ಪಬ್ಲಿಕ್‌ನಲ್ಲಿ ಚರ್ಚಿಸ್ತೀರಾ ಎಂದು ದಬಾಯಿಸುವ, ಮನೆಯಲ್ಲೇ ಭ್ರಷ್ಟನಾದವನ ಪರ ವಕಾಲತ್ತು ವಹಿಸುವ ಪರಿಪಾಠ ಬೆಳೆಯುತ್ತಿರುವುದು ಗಾಬರಿ ಹುಟ್ಟಿಸುತ್ತದೆ.

ಅಂದರೆ ಖಾಸಗಿ ಜೀವನದಲ್ಲಿ ಏನು ಬೇಕಾದರೂ ಮಾಡಬಹುದು, ಪರವಾಗಿಲ್ಲ, ಆದರೆ ಸಾರ್ವಜನಿಕವಾಗಿ ಶುಭ್ರವಾಗಿ ಕಂಗೊಳಿಸಬೇಕು ಎಂದಂತಾಯಿತು. ಅಂದರೆ ಖಾಸಗಿ ಜೀವನದಲ್ಲಿ ಪರಸ್ತ್ರೀ ಸಂಗ ಮಾಡಬಹುದು,ಯಾರನ್ನಾದರೂ ಇಟ್ಟುಕೊಳ್ಳಬಹುದು, extra marital affairs ಇಟ್ಟುಕೊಳ್ಳುವುದು ಎಂದಂತಾಯಿತು. ಇದನ್ನು ಯಾರಾದರೂ ಪ್ರಶ್ನಿಸಿದರೆ, ಅದನ್ನೇಕೆ ಪ್ರಶ್ನಿಸುತ್ತೀರಿ, ಅದು ಅವರ ಪರ್ಸನಲ್ ವಿಷಯ ಅಂತ ಹೇಳಬಹುದು ಎಂದಂತಾಯಿತು. ಹಾಗಾದರೆ ವ್ಯಕ್ತಿಯ ಚಾರಿತ್ರ್ಯ,

ಸುಸಂಸ್ಕೃತ ನಡೆ, ಪ್ರಾಮಾಣಿಕತೆಗೆ ಏನು ಬೆಲೆ?

ಹೀಗೆ ಹೇಳುವಾಗ 'ನವಜೀವನ' ಪತ್ರಿಕೆಯಲ್ಲಿ ಗಾಂಧೀಜಿ ಬರೆದ ಸಂಪಾದಕೀಯದತ್ತ ನಿಮ್ಮ ಗಮನ ಸೆಳೆಯಬೇಕು: "ಅವರು ಯಾರೇ ಇರಬಹುದು, ಅವರಿಗಿರುವುದು ಒಂದೇ ಮುಖ. ಸಾರ್ವಜನಿಕ ಹಾಗೂ ಖಾಸಗಿ ಎಂಬ ಎರಡೆರಡು ಮುಖಗಳಿರುವುದು ಸಾಧ್ಯವೇ ಇಲ್ಲ. ಮನೆಯಲ್ಲಿ ಭ್ರಷ್ಟನಾದವನು ಹೊರಗೂ ಭ್ರಷ್ಟನೇ. ಹೊರಗೆ ಪ್ರಾಮಾಣಿಕನಾಗಿರಲು ಸಾಧ್ಯವೇ ಇಲ್ಲ. ಮನೆಯಲ್ಲಿ ಭ್ರಷ್ಟನಾದವನು ಮನೆಯನ್ನು ಮಾತ್ರ ಭ್ರಷ್ಟಗೆಡವುತ್ತಾನೆ. ಅದೇ ಮನುಷ್ಯ ಸಮಾಜದಲ್ಲಿ ತಲೆಯೆತ್ತಿದರೆ ಇಡೀ ಸಮಾಜದ ಅವನತಿಗೆ ಕಾರಣನಾಗುತ್ತಾನೆ. ಹೀಗಾಗಿ ವೈಯಕ್ತಿಕ ಬದುಕು ಸಾರ್ವಜನಿಕ ಬದುಕಿಗಿಂತ ಮಹತ್ವವಾದುದು. ಖಾಸಗಿ ಜೀವನವನ್ನು ಚೆಂದವಾಗಿಟ್ಟುಕೊಂಡವನು ಹೊರಜಗತ್ತನ್ನೂ ಚೆಂದವಾಗಿಟ್ಟುಕೊಳ್ಳುತ್ತಾನೆ. ಮನೆಯಲ್ಲಿ ಸುಳ್ಳು ಹೇಳುವವನು ಹೊರಗೆ ಸತ್ಯ ಹೇಳಲಾರ. ಮಕ್ಕಳಿಗೆ ಸಿಹಿ ತಿನ್ನಬೇಡ ಎಂದು ಹೇಳುವವರು ಮೊದಲು ತಾವು ಸಕ್ಕರೆ ತಿನ್ನುವುದನ್ನು ಬಿಡಬೇಕು."

ಅದಕ್ಕಾಗಿ ಗಾಂಧೀಜಿ ಮಹಾತ್ಮರಾದರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಲಾಲ ಬಹಾದ್ದೂರ್ ಶಾಸ್ತ್ರಿ ಅವರಿಂದ ಹಿಡಿದು ಈಗ ನಮ್ಮ ಡುವೆಯೇ ಇರುವ ಡಾ. ಅಬ್ದುಲ್ ಕಲಾಂ, ಸಿದ್ಧಗಂಗಾ ಸ್ವಾಮೀಜಿ, ಪೇಜಾವರ ಶ್ರೀ, ಸಿದ್ಧೇಶ್ವರ ಸ್ವಾಮೀಜಿ, ಡಾ. ವೀರೇಂದ್ರ ಹೆಗ್ಗಡೆ.... ಇಂಥವರು ಖಾಸಗಿಯಾಗಿ ಹೇಗಿದ್ದಾರೋ, ಸಾರ್ವಜನಿಕವಾಗಿಯೂ ಹಾಗೇ ಇದ್ದಾರೆ. ಖಾಸಗಿ ಬದುಕಿನ ಅಂದ ಕೆಡಿಸಿಕೊಂಡರೆ ಅವರ ಮಾತಿಗೆ ಯಾರು ಬೆಲೆ ಕೊಡುತ್ತಿದ್ದರು? ಖಾಸಗಿ ಜೀವನದಲ್ಲಿ ಐಷಾರಾಮಿತನ ಮೆರೆದಿದ್ದರೆ ಸಾರ್ವಜನಿಕವಾಗಿ ಲಾಲ ಬಹಾದ್ದೂರ್ ಶಾಸ್ತ್ರಿಯವರ ಸರಳ ಜೀವನ ಆಚರಣೆಗೆ ಯಾವ ಬೆಲೆ ಸಿಗುತ್ತಿತ್ತು? ಇಂದಿಗೂ ಡಾ. ಅಬ್ದುಲ್ ಕಲಾಂ ನಮಗೆ ರೋಲ್ ಮಾಡೆಲ್ ಆಗಿ ಯಾಕೆ ಕಾಣುತ್ತಾರೆಂದರೆ, ಅವರು ಹೊರಗೆ ಕಾಣುವಂತೆ ಒಳಗೂ ಹಾಗೇ ಇದ್ದಾರೆ. ಅವರ ಸಾರ್ವಜನಿಕ ಹಾಗೂ ಖಾಸಗಿ ಎರಡೂ ಏಕ. ಅವರ ಪರ್ಸನಲ್ಲೇ ಪಬ್ಲಿಕ್. ಪಬ್ಲಿಕ್ಕೇ ಪರ್ಸನಲ್ಲು. ಮುಂದೊಂದು ಹಿಂದೊಂದು ಇಲ್ಲ. ಇಂಥವರು ನಡೆ, ನುಡಿಗಳಿಂದ ಮಾದರಿ ವ್ಯಕ್ತಿಗಳೆನಿಸಿಕೊಳ್ಳುತ್ತಾರೆ.

ನಮ್ಮ ಸಾರ್ವಜನಿಕ ಜೀವನ ಇಷ್ಟೊಂದು ಕಲುಷಿತವಾಗಲು, ಮಲಿನವಾಗಲು ಮುಖ್ಯ ಕಾರಣವೇ ಇದು. ವೈಯಕ್ತಿಕ (personal) ಅಥವಾ ಖಾಸಗಿ (private) ಜೀವನದಲ್ಲಿ ಭ್ರಷ್ಟರಾದವರು, ನೈತಿಕತೆ ಕಳೆದುಕೊಂಡವರು ಆಯಕಟ್ಟಿನ ಜಾಗದಲ್ಲಿರುವುದು, ಅವರೇ ನಮ್ಮನ್ನು ಆಳುತ್ತಿರುವುದು, ದುರಂತವೆಂದರೆ ಅವರೇ ನಮ್ಮ ನಾಯಕರಾಗಿರುವುದು, ಅವರು ಹೇಳಿದಂತೆ ಇಡೀ ಸಮಾಜ, ರಾಜ್ಯ ಕೇಳಬೇಕಾಗಿ ಬಂದಿರುವುದು, ಅವರೇ ನಮ್ಮ ಕಾನೂನು ರೂಪಿಸುವವರಾಗಿರುವುದು. ಭೂತವೇ ಭಗವದ್ಗೀತೆ ಬೋಧಿಸಲಾರಂಭಿಸಿರುವುದು.ಈಗ ಆಗುತ್ತಿರುವುದೂ ಅದೇ ತಾನೇ? ಕೋತಿ ತಾನು ಕೆಡುವುದಲ್ಲದೇ ಇಡೀ ವನವನ್ನೂ ಕೆಡಿಸಿತು ಎಂಬಂತೆ ಸಮಾಜದ ಮೇಲೆ ಇದರ ಪರಿಣಾಮ ಆಗದಿರುತ್ತದಾ?

ಪಾಶ್ಚಾತ್ಯ ದೇಶಗಳಲ್ಲಿ ಖಾಸಗಿ ಬದುಕನ್ನು ಕೆಡಿಸಿಕೊಂಡವನು ಹೊರ ಜಗತ್ತಿನಲ್ಲಿ ತಲೆಯೆತ್ತುವುದು, ಅಕಾರದ ಉನ್ನತ ಹುದ್ದೆಯಲ್ಲಿ ಕಂಗೊಳಿಸುವುದೆಲ್ಲ ಸಾಧ್ಯವೇ ಇಲ್ಲ. 'ಸೀಸರ್‌ನ ಹೆಂಡತಿ ಸಂದೇಹಗಳಿಂದ ಮುಕ್ತಳಾಗಿರಬೇಕು' ಎಂಬ ಮಾತಿದೆ. ಖಾಸಗಿ ಬದುಕಿನ ಮೇಲೆ ಕಳಂಕದ ಒಂದು ಸಣ್ಣ ಚುಕ್ಕೆ ಬಿದ್ದರೂ ಆತನಿಗೆ ಸಾರ್ವಜನಿಕ ರಂಗವೆನ್ನುವುದು ನಿಷೇಧಿತ ಪ್ರದೇಶ. ತಮ್ಮನ್ನು ಆಳುವವರು, ತಮಗೆ ಬೋಧಿಸುವವರು ಪ್ರಾಮಾಣಿಕರು, ಸಚ್ಚಾರಿತ್ರ್ಯವಂತರು, ಶುಭ್ರರಾಗಿರಬೇಕೆಂದು ಬಯಸುತ್ತಾರೆ. ಅದೆಷ್ಟೇ ಮುಕ್ತ ಸಮಾಜವಾಗಿರಬಹುದು, ಕಚ್ಚೆ ಹರುಕತನವನ್ನು ಅವರೆಂದೂ ಸ್ವೀಕೃತಿಯೆಂದು ಒಪ್ಪಿಕೊಳ್ಳುವುದಿಲ್ಲ. ಹೆಂಗಸರ ವಿಷಯದಲ್ಲಿ ಸಣ್ಣ ಗುಸುಗುಸು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಕುರ್ಚಿಗೆ ಸಂಚಕಾರ ತರುತ್ತದೆ.

ಕ್ಲಿಂಟನ್ ಲೀಲೆಗಳು : ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‌ಗೆ ಎಂಥ ಸ್ಥಿತಿ ಒದಗಿ ಬಂತೆಂಬುದು ನಮ್ಮ ಕಣ್ಣಲ್ಲಿ ಹಸಿಹಸಿಯಾಗಿದೆ. ಒಂದು ವೇಳೆ ಕ್ಲಿಂಟನ್ ಭಾರತದ ಪ್ರಧಾನಿಯಾಗಿದ್ದರೆ, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರೆ ಅದು ಚರ್ಚೆಯ ವಸ್ತುವೂ ಆಗುತ್ತಿರಲಿಲ್ಲ. ಆತ ಕೆಟ್ಟ ಮುಶುಡಿ ಇಟ್ಟುಕೊಂಡು I am Sorry ಎಂದು ದೇಶವಾಸಿಗಳ ಕ್ಷಮೆಯಾಚಿಸಬೇಕಿರಲಿಲ್ಲ. ಅಷ್ಟಕ್ಕೂ ಅದು ಸುದ್ದಿಯೂ ಆಗುತ್ತಿರಲಿಲ್ಲ, ಚರ್ಚೆಯ ವಸ್ತುವೂ ಆಗುತ್ತಿರಲಿಲ್ಲ. ಪತ್ರಿಕೆಯ ಗಾಸಿಪ್ ಅಂಕಣದಲ್ಲಿ ಪ್ರಕಟವಾಗಿದ್ದರೆ ಅಬ್ಬಬ್ಬಾ . ಎಲ್ಲೋ ಹತ್ತಾರು ಮಂದಿ ಬಾಯಿಚಟಕಾರರು ಚಪ್ಪರಿಸಿಕೊಂಡು ಹರಟೆ ಹೊಡೆದು ಸುಮ್ಮನಾಗುತ್ತಿದ್ದರು. ಅವರ ಮಧ್ಯದಲ್ಲೇ ಯಾರೋ ಒಬ್ಬ ಗಟ್ಟಿಯಾಗಿ ಇಂಥ activity ವಿರುದ್ಧ ಮಾತಾಡಿದ್ದರೆ ಉಳಿದವರು "ಸುಮ್ನಿರು', ಅದು ಅವರ ಪರ್ಸನಲ್ ವಿಷಯ. ಖಾಸಗಿ ಜೀವನದಲ್ಲಿ ಹೇಗಿದ್ದರೇನಂತೆ? ಅವರು ಎಷ್ಟು ಜನರ ಜತೆ ಬೇಕಾದರೂ ಸಂಪರ್ಕ ಇಟ್ಟುಕೊಳ್ಳುತ್ತಾರೆ.ಅಥವಾ ಯಾರನ್ನಾದರೂ ಇಟ್ಟುಕೊಳ್ಳುತ್ತಾರೆ. ತಾಕತ್ತಿದೆ, ಇಟ್ಟುಕೊಳ್ಳುತ್ತಾರೆ. ನೀನಗೇಕೆ ಚಿಂತೆ?" ಎಂದು ಗೇಲಿ ಮಾಡಿ ದಬಾಯಿಸುತ್ತಿದ್ದರು. Sure.

ಆದರೆ ಅಮೆರಿಕದಲ್ಲಿ ಏನಾಯಿತು? ಕ್ಲಿಂಟನ್ ಏನಂದ? ಆತನ ಮುಂದೆ ಎರಡೇ ಆಯ್ಕೆಗಳಿದ್ದವು. ಪರಸ್ತ್ರೀ ಸಂಗ ಮಾಡಿದ್ದಕ್ಕೆ ಒಂದೋ ಕ್ಷಮೆ ಯಾಚಿಸಬೇಕಿತ್ತು, ಇಲ್ಲವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ ಕ್ಲಿಂಟನ್ Sorry ಎಂದ. ಅಷ್ಟರೊಳಗೆ ಆತ ಹಣ್ಣುಗಾಯಿ ನೀರುಗಾಯಿ ಆಗಿದ್ದ. ಹಾಗೇ ನೋಡಿದರೆ ಇಡೀ ಪ್ರಕರಣ ದಲ್ಲಿ ಗೆದ್ದಿದ್ದು ಅಮೆರಿಕದ ಸಾರ್ವಜನಿಕ ಜೀವನದ ಶುಭ್ರತೆ ! ಅಧ್ಯಕ್ಷನಾದವನ ಒಂದೇ ಒಂದು ಗಲತ್ತನ್ನು ನಾವು ಸಹಿಸುವುದಿಲ್ಲ ಎಂದು ಅಲ್ಲಿನ ಜನ ಮನವರಿಕೆ ಮಾಡಿ ಕೊಟ್ಟರು.

ಆ ದಿನಗಳಲ್ಲಿ ಪ್ರಚಲಿತದಲ್ಲಿದ್ದ ಒಂದು ಜೋಕು ಪೋಲಿಯಾಗಿದ್ದರೂ ನೆನೆಯುವುದಾದರೆ-ಕ್ಲಿಂಟನ್‌ಗೂ ಬಡಗಿ (ಕಾರ್ಪೆಂಟರ್)ಗೂ ಇರುವ ಸಾಮ್ಯವೇನು?(One Wrong 'screw' turns the chair down) ಸಾರ್ವಜನಿಕ ಜೀವನದಲ್ಲಿ ಇಂಥ high morality ಇರುವವರು ಮಾತ್ರ ಪ್ರಾಮಾಣಿಕ,ಸದೃಢ ಸಮಾಜ ಕಟ್ಟಲು ಸಾಧ್ಯ. ಅಮೆರಿಕದಂಥ ದೇಶದಲ್ಲಿ ಸಾರ್ವಜನಿಕ ಬದುಕು ಹಸನಾಗಿರುವುದು ಇಂಥ ಚಿಂತನೆಯ ಫಲದಿಂದ. ತುಪ್ಪ ತಿನ್ನಬಾರದು ಎಂದು ಹೇಳುವವರು ತುಪ್ಪವನ್ನಂತೂ ತಿನ್ನ ಲೇಬಾರದು, ಬೆಣ್ಣೆ ವ್ಯಾಪಾರವನ್ನೂ ಮಾಡಬಾರದು ಎಂಬುದು ಅಲ್ಲಿನ ನೀತಿ.

ಖಾಸಗಿ ಜೀವನ ಕೆಡಿಸಿಕೊಂಡವರು ಸಾರ್ವಜನಿಕವಾಗಿ ದಕ್ಕಿಸಿಕೊಳ್ಳುತ್ತೇನೆಂಬುದು ಕನಸಿನ ಮಾತು. ಕೃಷ್ಣ ಲೀಲೆ ಮಾಡಬೇಕೆನಿಸಿದರೆ ಮೊದಲು ಕೃಷ್ಣನಾಗಬೇಕು. ಆದರೆ ಯಾರಿಗೂ ಕೃಷ್ಣನಾಗುವುದು ಬೇಡ. ಅವನ ಲೀಲೆಯಷ್ಟೇ ಬೇಕು. ಈಗ ಹೇಳಿ, ಇವನ್ನೆಲ್ಲ ಪರ್ಸನಲ್ ವಿಷಯ ಅಂತಮರೆತು ಬಿಡೋಣವಾ?

(ಸ್ನೇಹಸೇತು: ವಿಜಯಕರ್ನಾಟಕ)

ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more