ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯಾ ಉಲ್ ಹಕ್ : ನಿಗೂಢ ಸಾವು, ಬಯಲಾಗದ ರಹಸ್ಯ

By Staff
|
Google Oneindia Kannada News

ಅಬ್ಬೇಪಾರಿಯ ಸಾವು ಸತ್ತ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜಿಯಾ ಉಲ್ ಹಕ್ ಇದ್ದದ್ದಾದರೂ ಹೇಗೆ? ಧೀರನಾಗಿದ್ದನಾ? ಪುಕ್ಕಲನಾಗಿದ್ದನಾ? ಒಳ್ಳೆಯವನಾಗಿದ್ದರೂ ಕ್ರೂರ ಅಧಿಕಾರಿಯೆನಿಸಿಕೊಂಡ ಜಿಯಾ ಕುರಿತು ಬಿಬಿಸಿ ಉರ್ದು ಸೇವೆ ಮುಖ್ಯಸ್ಥ ಮಹಮ್ಮದ್ ಹನೀಫ್ ರೋಚಕವಾಗಿ ಬರೆದ ಪುಸ್ತಕ ಮತ್ತು ಜಿಯಾ ವಿಕ್ಷಿಪ್ತ ಜೀವನದ ಬಗ್ಗೆ ನೂರೆಂಟು ಮಾತು.

ಅಂಕಣಕಾರ : ವಿಶ್ವೇಶ್ವರ ಭಟ್

Pakistan former General Muhammad Zia Ul Haqಭಾರತೀಯ ವಿದೇಶಾಂಗ ಸೇವೆಯಲ್ಲಿರುವ ಸ್ನೇಹಿತ ನವೀನ್ ಗುಪ್ತಾ ಕಳೆದ ವಾರ ಕಳಿಸಿದ ಮೂರು ಪುಸ್ತಕಗಳಲ್ಲಿ ತಟ್ಟನೆ ಗಮನ ಸೆಳೆದಿದ್ದು ಆ ಪುಸ್ತಕ. A Case of Exploding Mangoes ಅಂತ ಆ ಪುಸ್ತಕದ ಹೆಸರು. ಶೀರ್ಷಿಕೆ ಕೆಳಗಡೆ A Novel ಎಂದು ಬರೆದಿತ್ತು. ಪಟಪಟನೆ ಪುಸ್ತಕದ ಮೈ ಸವರಿ ಪುಟಗಳೊಳಗೆ ಇಣುಕಿದರೆ ಅದೊಂದು ಆಸಕ್ತಿದಾಯಕ ಪುಸ್ತಕವಿದ್ದಿರಬಹುದೆಂದು ಅನಿಸಿತು. ಅದರ ಬೆನ್ನ ಹಿಂದೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಜಿಯಾ-ಉಲ್-ಹಕ್ ಹತ್ಯೆಯ ಸೂಕ್ಷ್ಮ ವಿವರಗಳನ್ನೊಳಗೊಂಡ ಸತ್ಯ ಹಾಗೂ ಕಾಲ್ಪನಿಕ ಕಾದಂಬರಿ ಎಂದು ಬರೆದಿದ್ದು ನೋಡಿ ಕುತೂಹಲವೆನಿಸಿತು. ಒಂದೊಂದೇ ಪುಟಗಳನ್ನು ಜೀಕುತ್ತಿದ್ದರೆ ಪತ್ತೇದಾರಿ ಕಾದಂಬರಿ ಓದುತ್ತಿರುವ ಅನುಭವ. ಪಕ್ಕದ ದೇಶವನ್ನು ಹನ್ನೊಂದು ವರ್ಷ ಆಳಿದವನ ಬಾಳಪುಟಗಳನ್ನು ಮಗುಚುತ್ತಾ ಹೋದಂತೆ ಕಂಡಿದ್ದೇ ಬೇರೆ.

ಜಿಯಾ ಸತ್ತು ಇಪ್ಪತ್ತು ವರ್ಷಗಳಾದವು. ಆದರೂ ಇಲ್ಲಿ ತನಕ ಆಸಾಮಿ ಹೇಗೆ ಸತ್ತ ಎಂಬುದು ನಿಗೂಢ ರಹಸ್ಯವಾಗಿಯೇ ಉಳಿದಿದೆ. ಒಂದು ರಾಷ್ಟ್ರದ ಮುಖ್ಯಸ್ಥನ ಸಾವಿಗೆ ಕಾರಣಗಳೇನು, ಮೃತ್ಯು ಹೇಗೆ ಬಂತು ಮುಂತಾದ ಯಾವ ಕುರುಹುಗಳನ್ನೂ ವಿಧಿ ಉಳಿಸಿಲ್ಲ. ಜಿಯಾ ಅಂಥ ಘನಘೋರ ಸಾವನ್ನು ಅನುಭವಿಸಿದ. ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿ ತಾನು ಪ್ರಯಾಣಿಸುತ್ತಿದ್ದ ಹರ್ಕ್ಯುಲಸ್ ಸಿ-130 ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಸತ್ತನಾ, ಪೈಲಟ್ ಎಡಬಿಡಂಗಿತನದಿಂದ ಸತ್ತನಾ, ಕುರುಡಿಯ ಶಾಪ ಅವನಿಗೆ ಮುಳುವಾಯಿತಾ, ವಿಮಾನದಲ್ಲಿ ಮಾವಿನ ಹಣ್ಣಿನ ಬುಟ್ಟಿಯೊಳಗಿಟ್ಟ ಬಾಂಬ್ ಸ್ಫೋಟಿಸಿತಾ.... ಒಂದೂ ಗೊತ್ತಾಗುತ್ತಿಲ್ಲ. ಇಂದಿಗೂ ಅದು ಕಗ್ಗಂಟಾಗಿಯೇ ಉಳಿದಿದೆ. ಪಾಕಿಸ್ತಾನದಂಥ ದೇಶವನ್ನು ತನ್ನ ಮುಷ್ಟಿಯೊಳಗಿಟ್ಟುಕೊಂಡು ಮನಬಂದಂತೆ ಮೆರೆದ ಜಿಯಾ, ಯಕಃಶ್ಚಿತನೊಬ್ಬ ಹೇಳಹೆಸರಿಲ್ಲದೇ ಅಬ್ಬೇಪಾರಿಯಂತೆ ಸಾಯುತ್ತಾನಲ್ಲ ಹಾಗೆ ಸತ್ತು ಹೋದ! ಸರ್ವಾಧಿಕಾರಿಯಂಥ ವ್ಯಕ್ತಿ ಹೋರಾಡುತ್ತಲೇ ವೀರ ಮರಣವನ್ನಪ್ಪಬೇಕು. ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ಸತ್ತು ಹೋಗಬಾರದು. ಜಿಯಾಗೆ ಅವನ ವ್ಯಕ್ತಿತ್ವಕ್ಕೆ ಒಪ್ಪುವಂಥ ಮರಣ ಅದಾಗಿರಲಿಲ್ಲ. ಆದರೆ ವಿಧಿ ಹಾಗೆ ಬರೆದಿದ್ದರೆ ಅವನಾದರೂ ಏನು ಮಾಡಿಯಾನು?

1988ರ ಆಗಸ್ಟ್ 17ರಂದು ಜಿಯಾ ಜತೆ ಪಾಕಿಸ್ತಾನದಲ್ಲಿನ ಅಮೆರಿಕ ರಾಯಭಾರಿ, ಎಂಟು ಮಂದಿ ಜನರಲ್‌ಗಳು ಸಹ ಇದ್ದರು. ಬಹಲ್ಪುರದಲ್ಲಿ ನಡೆದ ಟ್ಯಾಂಕ್ ಪರೇಡ್‌ನಲ್ಲಿ ಭಾಗವಹಿಸಿದ ಜಿಯಾ, ಪಂಜಾಬ್ ಪ್ರಾಂತ್ಯಕ್ಕೆ ಹೋಗಬೇಕಾಗಿತ್ತು. ವಿಮಾನ ಆಕಾಶಕ್ಕೆ ನೆಗೆದ ಸ್ವಲ್ಪ ಹೊತ್ತಿನಲ್ಲಿ ಕಂಟ್ರೋಲ್ ರೂಮ್ ಸಂಪರ್ಕ ಕಡಿದುಹೋಯಿತು. ಆಕಾಶದಲ್ಲಿ ವಿಮಾನ ಯದ್ವಾತದ್ವಾ ಹಾರಾಡುತ್ತಿತ್ತು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳುವುದನ್ನು ಬಿಟ್ಟರೆ ಮುಂದೇನಾಯಿತೆಂಬುದು ಯಾರಿಗೂ ಗೊತ್ತಿಲ್ಲ. ವಿಮಾನದಲ್ಲಿದ್ದವರೆಲ್ಲ ಸ್ಥಳದಲ್ಲೇ ಅಸುನೀಗಿದರು. ಈ ಎಲ್ಲ ಸಂಗತಿಗಳ ಜತೆಗೆ ಜಿಯಾ ವ್ಯಕ್ತಿತ್ವ, ಆಡಳಿತ, ಆಸಾಮಿಯ ಗುಣಸ್ವಭಾವಗಳನ್ನೆಲ್ಲ ಇಟ್ಟುಕೊಂಡು ಪಾಕಿಸ್ತಾನದ ವಾಯುಪಡೆಯಲ್ಲಿನ ನಿವೃತ್ತ ಅಧಿಕಾರಿ ಹಾಗೂ ಈಗ ಬಿಬಿಸಿ ಉರ್ದು ಸೇವೆ ಮುಖ್ಯಸ್ಥ ಮಹಮ್ಮದ್ ಹನೀಫ್ ಬಹಳ ರೋಚಕವಾಗಿ ಬರೆದಿದ್ದಾರೆ.

ಆ ಮಿಲಿಟರಿ ದಿರಿಸಿನಲ್ಲಿ ಜಿಯಾನನ್ನು ನೋಡಿದ ಯಾರೇ ಆದರೂ ಅವನ ಬಗ್ಗೆ ಕಲ್ಪಿಸಿಕೊಳ್ಳುವುದೇ ಬೇರೆ. ಮಹಾ ಕಠೋರ, ಸಿಡುಕ, ಹಠಮಾರಿ, ನಿರ್ದಯಿ, ನಿರ್ಭಾವುಕ, ಒರಟ... ಹೀಗೆ ಏನು ಬೇಕಾದರೂ ತಿಳಿದುಕೊಳ್ಳಬಹುದು. ಅಲ್ಲದೇ ಇವೆಲ್ಲ ನಿಜವೆಂದು ಭಾವಿಸಬಹುದು. ಜಿಯಾ ತನ್ನನ್ನು ನೋಡಿದ ಎಲ್ಲರಿಗೂ ಅಂಥ ಸಂದೇಶ ಕಳಿಸುತ್ತಿದ್ದ. ಆತನ ಮೀಸೆ, ಮಿಲಿಟರಿ ದಿರಿಸು, ಎದೆ ತುಂಬಾ ಇಳಿಬಿಟ್ಟ ಬಣ್ಣ ಬಣ್ಣದ ಬ್ಯಾಡ್ಜು, ಫಲಕ, ಪದಕಗಳು, ಜನಿವಾರದಂತೆ ಹಾಕಿಕೊಂಡ ಚರ್ಮದ ಅಗಲ ಬೆಲ್ಟು, ಅದರ ಮೇಲೆ ಏನೇನೋ ಚೈನುಗಳು... ಪುಟ್ಟ ಮಕ್ಕಳೇನಾದರೂ ಜಿಯಾನನ್ನು ನೋಡಿದರೆ ಚಡ್ಡಿಯಲ್ಲಿ ಒಂದಕ್ಕೆ.

ಆದರೆ ಮೂಲತಃ ಜಿಯಾ ಹಾಗಿರಲಿಲ್ಲ. ಮೇಲ್ನೋಟಕ್ಕೆ ಕಾಣುವಷ್ಟು ಕಠೋರನಾಗಿರಲಿಲ್ಲ. ಪುಟ್ಟ ಮಗುವಿನಂಥ ಮನಸ್ಸು. ಸಣ್ಣಪುಟ್ಟ ಘಟನೆಗಳಿಗೂ ತಲ್ಲಣಗೊಳ್ಳುತ್ತಿದ್ದ ಆತ, ಹೊರಗೆ ಬೇಕೆಂದೇ ಬೇರೆ ರೀತಿಯ ಪೋಸು ನೀಡುತ್ತಿದ್ದ. ಮಿಲಿಟರಿ ಉಡುಪಿನಲ್ಲಿದ್ದರೆ ಜನ ಹೆದರುತ್ತಾರೆಂದು ಸದಾ ಅದೇ ಡ್ರೆಸ್ಸಿನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದ. ಜಿಯಾನ ಗಡಸುತನಕ್ಕೆ ತಕ್ಕದಾದ ಎತ್ತರ, ಮೈಕಟ್ಟಿತ್ತು. ಮುಖದ ಗುಹೆಯೊಳಗೆ ಸದಾ ಕೆಂಡದಂಥ ಕಣ್ಣುಗಳು. ಜಿಯಾನ ಬಗ್ಗೆ ಪಾಕಿಸ್ತಾನದ ತುಂಬೆಲ್ಲ ವಿಚಿತ್ರ ಕತೆಗಳಿದ್ದವು. ಸದಾ ಕುಡಿದಿರುತ್ತಾನಂತೆ, ರಾತ್ರಿಯಾಗುತ್ತಿದ್ದಂತೆ ವಿಲಾಸಿ, ಷೋಕಿದಾರನಂತೆ ವರ್ತಿಸುತ್ತಾನಂತೆ, ತನ್ನ ವೈರಿಯೆನಿಸಿದವರನ್ನು ಮುಗಿಸದೇ ಬಿಡುವುದಿಲ್ಲವಂತೆ, ಫಾರಿನ್ ಕಾರುಗಳ ಹುಚ್ಚನಂತೆ, ಫ್ರಾನ್ಸ್‌ನಿಂದ ತಂದ ಅತ್ತರುಗಳನ್ನೇ ಸದಾ ಮೈಗೆಲ್ಲ ಸುರಿದುಕೊಳ್ತಾನಂತೆ, ವಜ್ರ ಖಚಿತ ಉಂಗುರ, ವಾಚುಗಳನ್ನೇ ಧರಿಸುತ್ತಾನಂತೆ... ಹೀಗೆ ಏನೇನೋ.ತನ್ನ ಸ್ನಾನಗೃಹಗಳನ್ನು ಬಂಗಾರ ವರ್ಣದಿಂದ ಸಿದ್ಧಪಡಿಸಿಕೊಂಡಿದ್ದಾನೆಂದು, ಬಾತ್‌ಟಬ್, ಕಮೋಡ್‌ಗಳೆಲ್ಲ ಬಂಗಾರದ್ದಂತೆ ಎಂದೂ ಸಹ ಪಾಕಿಗಳು ಮಾತಾಡಿಕೊಳ್ಳುತ್ತಿದ್ದರು.

ಇವುಗಳಿಗೆಲ್ಲ ಕಾರಣವೂ ಇತ್ತು. ಜಿಯಾನಿಗಿಂತ ಮೊದಲು ಅಧಿಕಾರದಲ್ಲಿದ್ದ ಜುಲ್ಫಿಕರ್ ಅಲಿಭುಟ್ಟೊ ಈ ಎಲ್ಲ ವಿಲಾಸಿ ಜೀವನಕ್ಕೆ ಮೂರ್ತಿವೆತ್ತಂತಿದ್ದ. ಊಟದ ಬಟ್ಟಲು, ಲೋಟ, ಚಮಚಗಳೆಲ್ಲ ಅವನಿಗೆ ಬಂಗಾರದ್ದೇ ಆಗಿರಬೇಕಿತ್ತು. ಕಿವಿಯೊಳಗಿನ ಗುಗ್ಗೆ (wax) ತೆಗೆಯಲು ಅವನಿಗೆ ಬಂಗಾರದ ಚಿಮಟಗಳಿದ್ದವು. ಪ್ಯಾಂಟಿಗೆ ಬಟನ್, ಬಕಲ್‌ಗಳು ಚಿನ್ನದ್ದೇ. ಭುಟ್ಟೋನಿಗೆ ಬಟ್ಟೆಗಳೆಲ್ಲ ಲಂಡನ್, ಫ್ರಾನ್ಸ್‌ಗಳಿಂದ ಬರುತ್ತಿದ್ದವು. ಆತ ದಾಡಿ ಮಾಡಿಕೊಳ್ಳಲು ಬಳಸುವ ರೇಜರ್ ಸೆಟ್‌ಗಳೂ ಸಹ ಬಂಗಾರದ್ದೇ. ಕೊಲೆ ಕೇಸಿನಲ್ಲಿ ಭುಟ್ಟೋನನ್ನು ಸಿಕ್ಕಿ ಹಾಕಿಸಿ, ಗಲ್ಲು ಶಿಕ್ಷೆ ಕೊಟ್ಟ ಜಿಯಾ ಕೂಡ ಹಾಗೇ ಇದ್ದಿರಬಹುದೆಂದು ಜನ ಅಂದುಕೊಂಡಿದ್ದರು. ಅಂದಿನ ಪರಿಸ್ಥಿತಿ, ಸಂದರ್ಭಗಳೂ ಹಾಗೇ ಇದ್ದವು. ಅಷ್ಟಕ್ಕೂ ಪಾಕಿಸ್ತಾನ ಅದೆಂಥ ದೇಶವೆಂದರೆ ತಮ್ಮನ್ನು ಆಳುತ್ತಿರುವ ಅಧ್ಯಕ್ಷ ಅಥವಾ ಪ್ರಧಾನಿ ಹಾಗಿದ್ದಿರಬಹುದೆಂದು ಹೇಳಿದರೆ ನಂಬುತ್ತಿರಲಿಲ್ಲ. ಒಂದು ವೇಳೆ ನಿಜವಿದ್ದಿರಬಹುದೆಂದು ನಂಬಿದರೆ ಅದನ್ನು ಅಭಿಮಾನದಿಂದ ಹೇಳಿಕೊಳ್ಳುತ್ತಾ ಇಷ್ಟಪಡುತ್ತಿದ್ದರು.

ಅದಿರಲಿ, ಆದರೆ ಜನರಲ್ ಜಿಯಾ ಜನ ಅಂದುಕೊಂಡಂತಿರಲಿಲ್ಲ. ಆತ ಪರಮ ಪುಕ್ಕಲನಾಗಿದ್ದ. ಜಿರಲೆ, ಹಲ್ಲಿಯನ್ನು ಕಂಡರೆ ಕಿಟಾರನೆ ಕಿರುಚುತ್ತಿದ್ದ. ಆತನಿಗೆ ನೆರಳನ್ನು ಕಂಡರೆ ಭಯ. ನೆರಳಿನಲ್ಲಿ ಸಹ ಭೂತ ಅಡಗಿರಬಹುದೆಂಬ ಬಾಲ್ಯದಲ್ಲಿ ಕೇಳಿದ ಕತೆ ಅವನನ್ನು ಕಾಡುತ್ತಿತ್ತು. ಕತ್ತಲೆಯಲ್ಲಿ ತನ್ನ ನೆರಳು ಹಿಂಬಾಲಿಸುತ್ತಿರಬಹುದೇ ಎಂಬ ಆತಂಕ ಅವನಲ್ಲಿ ಮನೆ ಮಾಡಿತ್ತು. ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಜಿಯಾ ಕುರಾನ್ ಓದುತ್ತಿದ್ದ. ಪ್ರತಿ ಸಲ ಅದನ್ನು ಓದುವಾಗಲೂ ಅವನಿಗೆ ಬೇರೆ ಬೇರೆ ಅರ್ಥ, ಹೊಳಹುಗಳು ಸಿಗುತ್ತಿದ್ದವಂತೆ. ತನ್ನ ಹತ್ಯೆಗೆ ಸಂಚು, ತನ್ನನ್ನ ಅಧಿಕಾರದಿಂದ ಉರುಳಿಸಲು ಷಡ್ಯಂತ್ರ ನಡೆಯುತ್ತಿರಬಹುದಾ ಎಂಬ ಸಂದೇಹ ಜಿಯಾನನ್ನು ಕಾಡುತ್ತಿತ್ತು. ಮಧ್ಯರಾತ್ರಿ ಎದ್ದು ಕುಳಿತು ರೂಮಿನ ಕಿಟಕಿಯಿಂದ ಇಣುಕಿ ನೋಡುತ್ತಿದ್ದ. ತನ್ನ ವಿರುದ್ಧ ಯಾರಾದರೂ ಸಂಚು ರೂಪಿಸುವ ಸುಳಿವು ಸಿಕ್ಕರೆ ಅಂಥವರನ್ನು ಅಮಾನುಷವಾಗಿ ಹಿಂಸಿಸುತ್ತಿದ್ದ. ಬಗೆಬಗೆಯ ಶಿಕ್ಷೆ ವಿಧಿಸಿ ಕೊಲ್ಲಿಸುತ್ತಿದ್ದ. ಪಾಕಿಸ್ತಾನದಲ್ಲಿರುವ ಹಾವುಗಳಿಗೆ ವಿಷವಿಲ್ಲ' ಎಂಬ ಮಾತು ಆಗ ಚಾಲ್ತಿಯಲ್ಲಿತ್ತು. ಕಾರಣ ಆತ ತನ್ನ ವಿರೋಧಿಗಳನ್ನು ಕೋಣೆಯಲ್ಲಿ ಕೂಡಿಹಾಕಿ ಅವರ ಮೇಲೆ ವಿಷಸರ್ಪ ಎಸೆಯುತ್ತಿದ್ದ. ಆತನಿಗೆ ಅಂಧರನ್ನು ಕಂಡರೆ ವಿಚಿತ್ರ ಅನುಮಾನ. ಬೇಕಂತಲೇ ಕಣ್ಣು ಮುಚ್ಚಿಕೊಂಡು ನಾಟಕವಾಡುತ್ತಿರಬಹುದಾ ಎಂಬ ಗುಮಾನಿ.

ಪತ್ರಕರ್ತ ಖುಷವಂತ್ ಸಿಂಗ್ ಜಿಯಾ ಬಗ್ಗೆ ಬರೆದಿದ್ದು ನೆನಪಾಗುತ್ತಿದೆ. ಭುಟ್ಟೋನನ್ನು ಗಲ್ಲಿಗೇರಿಸಿದ ಕೆಲ ದಿನಗಳ ಅನಂತರ, ಖುಷವಂತ್ ಸಿಂಗ್, ಜಿಯಾ ಸಂದರ್ಶನ ಮಾಡಲೆಂದು ಅವರ ನಿವಾಸಕ್ಕೆ ತೆರಳಿದ್ದರು. ಕುಳಿತುಕೊಳ್ಳುತ್ತಿದ್ದಂತೆ ಖುಷವಂತ್‌ಗೆ ಅಚ್ಚರಿ. ಮೇಜಿನ ಮೇಲೆ ಅವರ ಎಲ್ಲ ಪುಸ್ತಕಗಳಿದ್ದವು. ಜಿಯಾ ಬರುತ್ತಿದ್ದಂತೆ ಸರ್ದಾರ್ ಸಾಬ್, ಪ್ರಶ್ನೆ ಕೇಳುವ ಮೊದಲು ನಿಮ್ಮೆಲ್ಲ ಪುಸ್ತಕಗಳಿಗೂ ಹಸ್ತಾಕ್ಷರ ಹಾಕಿ' ಎಂದರು. ಅನಂತರ ಎಲ್ಲ ಪುಸ್ತಕಗಳನ್ನು ಜೋಪಾನವಾಗಿ ಎತ್ತಿಟ್ಟುಕೊಂಡರು. ಸಂದರ್ಶನ ಮುಗಿದ ಬಳಿಕ ಟೀ ಕುಡಿಯುವಾಗ ಹೆಂಡತಿ ಹಾಗೂ ಮಗಳನ್ನು ಜಿಯಾ ಕರೆದರು. ಕಾರಿನ ತನಕ ಬಂದು ಬೀಳ್ಕೊಟ್ಟ ಅವರು, ಖುಷವಂತ್‌ಗಾಗಿ ಕಾರಿನ ಬಾಗಿಲನ್ನು ತೆರೆದರು. ಇಂಥ ಆತಿಥ್ಯ, ಸಜ್ಜನಿಕೆ, ನಯ, ನಡವಳಿಕೆಯನ್ನು ಯಾವುದೇ ರಾಷ್ಟ್ರದ ಮುಖ್ಯಸ್ಥನಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ. ಹಾಗಂತ ಖುಷವಂತ್ ಸಿಂಗ್ ಬರೆದಿದ್ದಾರೆ.

ಇಂಥದೇ ಮತ್ತೊಂದು ಪ್ರಸಂಗ. ಅಂದಿನ ವಿದೇಶಾಂಗ ಸಚಿವ ಸ್ವರ್ಣ್‌ಸಿಂಗ್, ಜಿಯಾ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಔತಣಕೂಟದ ನಂತರ ಸ್ವರ್ಣ್‌ಸಿಂಗ್, ಪಾಕ್ ಅಧ್ಯಕ್ಷರ ಕಾರಿನಲ್ಲಿ ತಾವು ಉಳಿದುಕೊಂಡ ಹೋಟೆಲ್‌ಗೆ ಹೋದರು. ಖುಷವಂತ್ ಸಿಂಗ್ ಹಾಗೂ ಇನ್ನಿತರ ಡಿಪ್ಲೊಮ್ಯಾಟ್‌ಗಳು ಅಂಬಾಸಿಡರ್ ಕಾರನ್ನೇರಿದರು. ಆದರೆ ಕಾರು ಸ್ಟಾರ್ಟ್ ಆಗಲಿಲ್ಲ. ಹೊರಗಡೆ ನಿಂತಿದ್ದ ಜಿಯಾ, ಕಾರನ್ನು ತಳ್ಳಲಾರಂಭಿಸಿದಾಗ ಒಳಗೆ ಕುಳಿತಿದ್ದವರಿಗೆ, ಹೊರಗಿದ್ದವರಿಗೆ ದಿಗ್ಭ್ರಮೆ! ಕಾರು ಚಾಲು ಆಗುವ ತನಕ ಪಾಕ್ ಅಧ್ಯಕ್ಷ ಜಿಯಾ ತಳ್ಳಿದರು.

ಜಿಯಾಗೆ ಒಬ್ಬ ಮಗಳಿದ್ದಳು. ಮಾನಸಿಕ ಅಸ್ವಸ್ಥಳು. ಅರೆಹುಚ್ಚಿಯಂತೆ ವರ್ತಿಸುತ್ತಿದ್ದಳು. ಕೈಗೆ ಸಿಕ್ಕಿದ ಗಾಜಿನ ವಸ್ತುಗಳನ್ನು ಎಸೆದು ಪುಡಿಪುಡಿ ಮಾಡುವುದೆಂದರೆ ಆಕೆಗೆ ವಿಕಟ ಆನಂದ. ವಿದೇಶಿ ಗಣ್ಯರು ಆಗಮಿಸಿದಾಗ ಅವರ ಗೌರವಾರ್ಥ ಏರ್ಪಡಿಸಿದ ಔತಣಕೂಟಗಳಲ್ಲಿ ಆಕೆ ವಿಚಿತ್ರವಾಗಿ ವರ್ತಿಸಿದಾಗಲೂ ಜಿಯಾ ಸಂಯಮ ಕಳೆದುಕೊಳ್ಳುತ್ತಿರಲಿಲ್ಲ. ಅವಳು ಹಾಗೆ ವರ್ತಿಸುತ್ತಾಳೆಂಬುದು ಗೊತ್ತಿದ್ದರೂ, ಆಕೆಯನ್ನು ಕರೆಯದೇ ಬಿಡುತ್ತಿರಲಿಲ್ಲ. ಇಲ್ಲಿ ತಾನೊಬ್ಬ ರಾಷ್ಟ್ರಾಧ್ಯಕ್ಷ ಎಂಬುದಕ್ಕಿಂತಲೂ ಸಾಮಾನ್ಯ ತಂದೆಯಂತೆಯೇ ವರ್ತಿಸುತ್ತಿದ್ದ. ಗಣ್ಯರು ಇಲ್ಲದಾಗ ಜಿಯಾ ಮಗಳಿಗೆ ಕೈ ತುತ್ತು ತಿನಿಸುತ್ತಿದ್ದ. ಮಗಳ ಜತೆ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದ ಆತ, ತನ್ನದಲ್ಲದ ತಪ್ಪಿಗೆ ಮಾನಸಿಕ ಅಸ್ವಾಸ್ಥ್ಯದಿಂದ ನರಳುತ್ತಿರುವ ಆಕೆಯ ಸಂಕಟ ಕಂಡು ಏಕಾಂತದಲ್ಲಿ ಅಳುತ್ತಿದ್ದ. ಅನೇಕರಿಗೆ ಗೊತ್ತಿಲ್ಲದಿರಬಹುದು, ಜಿಯಾ ಕನಿಷ್ಠ ಹತ್ತು ನಿಮಿಷವಾದರೂ ದೇವರನ್ನು ಪ್ರಾರ್ಥಿಸದೇ ರಾತ್ರಿ ಊಟದ ತಾಟಿಗೆ ಕೈಯಿಡುತ್ತಿರಲಿಲ್ಲ. ಸದಾ ಕಣ್ಣು ಕೆಂಪಗಾಗಿದ್ದರೇನಂತೆ, ಆತ ಮದ್ಯವನ್ನು ಮುಟ್ಟಲಿಲ್ಲ. ಧೂಮಪಾನ ಮಾಡಲಿಲ್ಲ. ಹೆಂಗಸರ ವಿಷಯದಲ್ಲೂ ಕಟ್ಟುನಿಟ್ಟಾಗಿಯೇ ವರ್ತಿಸಿದ. ತನಗಿರುವ ಕ್ರೋಧಗಳನ್ನೆಲ್ಲ ಹೊರ ಹಾಕಿದ್ದು ಭುಟ್ಟೋ ವಿಷಯದಲ್ಲಿ ಮಾತ್ರ.

ಸಾಕಷ್ಟು ಒಳ್ಳೆಯ ಗುಣಗಳನ್ನು ಹೊಂದಿಯೂ ಜಿಯಾ ಕೆಟ್ಟವನೆನಿಸಿಕೊಂಡ. ಹನ್ನೊಂದು ವರ್ಷಗಳ ಅಧಿಕಾರ ಅವಧಿಯಲ್ಲಿ ಅಮೆರಿಕದ ಕೈಗೊಂಬೆಯಾದ. ವಾಯುವ್ಯ ಪಾಕಿಸ್ತಾನದಲ್ಲಿ ತಾಲಿಬಾನ್‌ಗಳನ್ನು ಬಿಟ್ಟುಕೊಂಡ. ಅತ್ಯಂತ ಕರಾಳವೆನಿಸಿದ ಷರಿಯಾ ಕಾನೂನನ್ನು ದೇಶಾದ್ಯಂತ ವಿಧಿಸಿದ. ಧಾರ್ಮಿಕ ಮೂಲಭೂತವಾದಿಗಳಿಗೆ ಅನಗತ್ಯ ಪ್ರಾಮುಖ್ಯ ನೀಡಿದ. ಈ ಎಲ್ಲ ಹೊಡೆತ'ಗಳಿಂದ ದೇಶದ ಅಭಿವೃದ್ಧಿ ಸತ್ಯಾನಾಶವಾಯಿತು. ಅಂದು ಒಳಸೇರಿದ ತಾಲಿಬಾನ್‌ಗಳು, ಧಾರ್ಮಿಕ ಭಯೋತ್ಪಾದಕರು ಉಗ್ರವಾದಿತ್ವದ ಕಾರ್ಖಾನೆಗಳಾಗಬಹುದು, ದ್ವೇಷ ಹಾಗೂ ಹಿಂಸೆಯ ವಹಿವಾಟುದಾರರಾಗಬಹುದೆಂದು ಜಿಯಾ ಸ್ವಲ್ಪವೂ ಯೋಚಿಸಲಿಲ್ಲ. ಅಫಘಾನಿಸ್ತಾನದಿಂದ ರಷ್ಯನ್‌ರನ್ನು ಹೊರಹಾಕಿಸಲು ತಾಲಿಬಾನ್‌ಗಳಿಗೆ ಕುಮ್ಮಕ್ಕು ನೀಡುವಂತೆ ಅಮೆರಿಕ ಹೇಳಿದ್ದಕ್ಕೆಲ್ಲ ಜಿಯಾ ತಲೆಯಾಡಿಸಿದ. ತನ್ನ ದೇಶವನ್ನೇ ಉಗ್ರಗ್ರಾಮಿಗಳನ್ನು ಉತ್ಪಾದಿಸುವ ತಾಣವನ್ನಾಗಿ ಮಾಡಿದ.

ಒಮ್ಮೊಮ್ಮೆ ನಮ್ಮನ್ನು ಆಳುವವರು ಒಳ್ಳೆಯವರಾಗಿರುತ್ತಾರೆ. ಆದರೆ ಜನರ ಮನಸ್ಸಿನಲ್ಲಿ ಬೇರೆ ರೀತಿಯಾಗಿಯೇ ಕಾಣುತ್ತಾರೆ. ಒಳ್ಳೆಯ ಉದ್ದೇಶಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಅಂದುಕೊಂಡಿದ್ದನ್ನು ಜಾರಿಗೊಳಿಸಲು ಆಗುವುದೇ ಇಲ್ಲ. ಇಡೀ ಲೋಕದ ಕಣ್ಣಿನಲ್ಲಿ ನಿಂದಿತರಾಗುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ಸತ್ತ ಪಕ್ಕದ ದೇಶದ ಮುಖ್ಯಸ್ಥನ ಬಾಳಪುಟದಲ್ಲಿ ಹುಡುಕಿದರೆ ನಮಗೂ ಕೆಲವು ಪ್ರತಿಬಿಂಬಗಳು ಸಿಗಬಹುದು.

(ಸ್ನೇಹಸೇತು :ವಿಜಯಕರ್ನಾಟಕ)

ಇದನ್ನೂ ಓದಿ

ಬೇನಜೀರ್ ಅಪ್ಪನ ರಸಿ'ಕತೆ'ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X