ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇನಜೀರ್ ಅಪ್ಪನ ರಸಿ'ಕತೆ'ಗಳು

By ವಿಶ್ವೇಶ್ವರ ಭಟ್
|
Google Oneindia Kannada News


Benazir's bindas father Zulfikar Ali Bhutto ಯಾಕೋ ಅಂದು ಅವನ ಜೀವನಗಾಥೆ ಒಂದು ನಿಮಿಷದ ಟ್ರೇಲರ್‌ನಂತೆ ಸರಿದುಹೋಯಿತು.

ಆ ಸಾಯಂಕಾಲ ನನ್ನ ಸಹೋದ್ಯೋಗಿ ಉದ್ವೇಗದಿಂದ ಬೇನಜೀರ್ ಭುಟ್ಟೊ ಉಗ್ರರ ಗುಂಡಿಗೆ ಹತ್ಯೆಯಾದಳು' ಎಂದು ಹೇಳಿದಾಗ ತಕ್ಷಣ ನೆನಪಿಗೆ ಬಂದಿದ್ದು ಅವಳ ತಂದೆ ಜುಲ್ಫಿಕರ್ ಅಲಿ ಭುಟ್ಟೊ! ತಂದೆಯಂತೆ ಮಗಳೂ ಸಹ ದುರಂತವಾಗಿ ಸತ್ತುಹೋದಳಲ್ಲ ಎಂದು ತೀವ್ರ ದುಃಖವಾಯಿತು. ಒಂದು ರೀತಿಯಲ್ಲಿ ತಂದೆಗೆ ತಕ್ಕ ಮಗಳು, ತಂದೆಯಂತೆ ಮಗಳು. ತಮ್ಮ ರಾಜಕೀಯ ಜೀವನದ ಉತ್ತುಂಗದಲ್ಲಿ ಇಬ್ಬರೂ ಪಾಕಿಸ್ತಾನವೆಂಬ ನತದೃಷ್ಟ ದೇಶವನ್ನು ತಮ್ಮ ಮುಷ್ಟಿಯೊಳಗೆ ಮಡಚಿ ಗಟ್ಟಿಯಾಗಿ ಅಡಚಿಟ್ಟುಕೊಂಡವರು. ತಂದೆ-ಮಗಳ ಬಗ್ಗೆ ದೇಶದಲ್ಲಿ ಅದೆಂಥ ಭಾವನೆಯಿತ್ತೆಂದರೆ ಅಲ್ಲಿನ ಜನ ಅವರನ್ನು ತಲೆಮೇಲಿಟ್ಟು ಆರಾಧಿಸುತ್ತಿದ್ದರು. ಮನಸ್ಸಿಡೀ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಹಾಗೆಂದು ಅವರೇನು ಮಹಾ ಸುಬಗ-ಸುಬ್ಬುಲಕ್ಷ್ಮಿ ಆಗಿರಲಿಲ್ಲ. ಆದರೂ ಅವರೆಡೆಗಿನ ಪ್ರೀತಿ ಕಮ್ಮಿಯಾಗಿರಲಿಲ್ಲ. ಅವರಿಬ್ಬರಿಗೂ ಅವರದ್ದೇ ಆದ charm ಇತ್ತು. Charisma ಇತ್ತು. ನಮ್ಮ ದೇಶದಲ್ಲಿ ಗಾಂಧಿ ಕುಟುಂಬ ಹೇಗೊ, ಪಾಕ್‌ನಲ್ಲಿ ಭುಟ್ಟೊ. ಇಬ್ಬರೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದವರು.

ಆದರೆ ವಿಧಿಯಾಟ ವಿಚಿತ್ರ. ಜುಲ್ಫಿಕರ್ ಅಲಿ ಭುಟ್ಟೋನನ್ನು ಕೊಲೆಗಾರನೆಂದು ನೇಣಿಗೆ ಏರಿಸಿ ಕೊಂದರು. ಮಗಳು ಬೇನಜೀರ್ ಬೀದಿ ಹೆಣವಾಗಿ ಸತ್ತು ಹೋದಳು. ತಂದೆ-ಮಗಳಿಬ್ಬರೂ ತಮ್ಮ ಯೌವನದಲ್ಲಿಯೇ ರಾಜಕೀಯ ಪ್ರವೇಶಿಸಿ, ಬಹುಬೇಗ ಜನಪ್ರಿಯತೆ ಗಳಿಸಿ, ದೇಶದ ಅತ್ಯುನ್ನತ ಅಧಿಕಾರಸ್ಥಾನಕ್ಕೇರಿ, ಮಾಡಬಾರದ ಅನ್ಯಾಯ, ಅನಾಚಾರಗೈದು ಹೆಸರು ಕೆಡಿಸಿಕೊಂಡು ಅಧಿಕಾರಭ್ರಷ್ಟರಾಗಿ ಕೊನೆಗೆ ಹೀನಾತಿಹೀನವಾಗಿ ಸತ್ತು ಹೋದುದು ಮಾತ್ರ ದುರಂತ ಅಂದ್ರೆ ದುರಂತ. ಬೇನಜೀರ್‌ಗೂ ತಂದೆ ಜುಲ್ಫಿಕರ್‌ಗೂ ಅನೇಕ ವಿಷಯಗಳಲ್ಲಿ ಹತ್ತಿರ ಹತ್ತಿರದ ಸಾಮ್ಯ. ಆದರೆ ಸಾವಿನಲ್ಲೂ ಅದೇ ಸಾಮ್ಯ ಒಂದಾಗಿದ್ದು ವಿಪರ್ಯಾಸ.

ಜುಲ್ಫಿಕರ್ ಭುಟ್ಟೋನದು ವರ್ಣರಂಜಿತ ವ್ಯಕ್ತಿತ್ವ. ಪ್ರಾಯಶಃ ಪಾಕಿಸ್ತಾನದ ಇತಿಹಾಸದಲ್ಲಿ ಮಹಮದ್ ಅಲಿ ಜಿನ್ನಾನನ್ನು ಬಿಟ್ಟರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೇರಿದವರಲ್ಲಿ ಭುಟ್ಟೋನೇ ಮೊದಲಿಗ. ಜಗತ್ತಿನ ಯಾವುದೇ ದೇಶದ ನಾಯಕನ ಜತೆ ಕುಳಿತು ಮಾತಾಡುವ, ಅವನಲ್ಲಿ ಗೆಳೆತನದ ಬೀಜ ಬಿತ್ತಿ ಸಂಬಂಧದ ಫಸಲು ಪಡೆಯುವ ಕಲೆಗಾರಿಕೆಯಿತ್ತು. ಅದಕ್ಕೆ ಸಹಾಯಕವಾಗುವಂತೆ ಭುಟ್ಟೊ ಸ್ಫುರದ್ರೂಪಿಯಾಗಿದ್ದ. ಚೆನ್ನಾಗಿ ಇಂಗ್ಲಿಷ್ ಮಾತಾಡುತ್ತಿದ್ದ. ನಾಲ್ಕು-ಹತ್ತು ಜನ ಸೇರಿದಾಗ ಎಲ್ಲರ ಗಮನ ತನ್ನೆಡೆಗೆ ಸೆಳೆಯುವ ಆಕರ್ಷಕ ಮಾತುಗಾರಿಕೆ ಅವನಿಗೆ ಸಿದ್ಧಿಸಿತ್ತು. ಲಕ್ಷಾಂತರ ಜನ ಸೇರಿದ ಬೃಹತ್ ಸಭೆಯಲ್ಲೂ ಸೂಜಿಗಲ್ಲಿನಂತೆ ಜನರನ್ನು ಸೆಳೆಯುವ, ಅವರನ್ನು ಮೋಡಿ ಮಾಡುವುದು ಅವನಿಗೆ ರಕ್ತಗತವಾಗಿ ಬಂದುಬಿಟ್ಟಿತ್ತು. ರಾಜತಾಂತ್ರಿಕ ಸಭೆಗಳಲ್ಲಿ ಕುಳಿತಾಗ ಭುಟ್ಟೊ ಪರಮ ವಾಚಾಳಿಯಂತೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದ. ಪೋಲಿ ಜೋಕ್‌ಗಳನ್ನು ಹೇಳಿ ನಗಿಸುತ್ತಿದ್ದ. ತಾನೊಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷ ಎಂಬುದನ್ನೂ ಗಮನಿಸದೇ ಹೆಗಲ ಮೇಲೆ ಕೈಹಾಕಿ ಅವರೊಂದಿಗೆ ಸಲ್ಲಾಪಕ್ಕೆ ತೊಡಗುತ್ತಿದ್ದ. ಭುಟ್ಟೋನ ಈ ಸ್ನೇಹಪರತೆ ಎಲ್ಲರಿಗೂ ಇಷ್ಟವಾಗುತ್ತಿತ್ತು. ಜಿನ್ನಾನನ್ನು ಖೈದ್-ಇ-ಅಜಾಮ್ (ಮಹಾನ್ ನಾಯಕ) ಎಂದು ಕರೆಯುವ ಜನ, ಭುಟ್ಟೋನನ್ನು ಖೈದ್-ಇ-ಅವಾಮ್' (ಜನ ನಾಯಕ) ಎಂದು ಕರೆಯುತ್ತಿದ್ದರು. ಭುಟ್ಟೊ ವಿರೋಧಿಗಳು ಪಾಕಿಸ್ತಾನಕ್ಕೆ ಗೆದ್ದಲು ಹಿಡಿಯಲು ಅವನೇ ಕಾರಣ ಎಂದು ಬೊಬ್ಬೆ ಹಾಕುತ್ತಿದ್ದರು. ಬಲುಚಿಸ್ತಾನ ಹಾಗೂ ವಾಯುವ್ಯ ಪ್ರಾಂತ್ಯದ ವ್ಯವಹಾರಗಳಲ್ಲಿ ಭುಟ್ಟೋನ ಅಸಾಮರ್ಥ್ಯವೇ ಸಮಸ್ಯೆ ಉಲ್ಬಣಕ್ಕೆ ಮೂಲವಾಯಿತೆಂದು ಟೀಕಿಸುತ್ತಿದ್ದರು. ಆದರೆ ಭುಟ್ಟೊ ಜನಪ್ರಿಯತೆ ಇದರಿಂದ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. 1971ರ ಡಿಸೆಂಬರ್‌ನಲ್ಲಿ ಭಾರತದ ವಿರುದ್ಧ ಸೋತರೂ, ಭುಟ್ಟೊ ಹೇಗೆ ಪಾಕ್ ರಕ್ಷಿಸಿದ ಎಂದು ಭುಟ್ಟೊ ಬೆಂಬಲಿಗರು ಶ್ಲಾಘಿಸುತ್ತಿದ್ದರು. ಯುದ್ಧದಲ್ಲಿ ಭಾರತ ಗೆದ್ದರೂ ಶಿಮ್ಲಾ ಒಪಂದದಲ್ಲಿ ಸೋತ ತನ್ನ ದೇಶದ ವಾದವನ್ನು ಎತ್ತಿಹಿಡಿಯುವಲ್ಲಿ ಭುಟ್ಟೊ ಯಶಸ್ವಿಯಾಗಿದ್ದ. ಅಲ್ಲದೇ ತನ್ನ ದೇಶದ 93 ಸಾವಿರ ಯುದ್ಧಕೈದಿಗಳನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಭುಟ್ಟೋಗೊಂದು ವಿಚಿತ್ರ ಶಕ್ತಿಯಿತ್ತು. ಆತ ಯಾರನ್ನಾದರೂ ತನ್ನ ಹಾವಭಾವ, ಮಾತುಗಳಿಂದ ಮರುಳು ಮಾಡುತ್ತಿದ್ದ. ಮಾತುಕತೆಗೆ ಕುಳಿತರೆ ಅವನ ಮಾತನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿರಲಿಲ್ಲ. ಅವನ ಬಿಂದಾಸ್ ನಡವಳಿಕೆ ಯಾರಿಗಾದರೂ ಇಷ್ಟವಾಗುತ್ತಿತ್ತು. ಅದೇ ಅವನ ದೌರ್ಬಲ್ಯವೂ ಆಗಿತ್ತೆಂಬುದು ಬೇರೆ ಮಾತು. ಇಂಥ ಮಾತುಕತೆಯಲ್ಲಿ ಆತನ ವರ್ತನೆ ಕೆಲವು ಸಲ ಸಂಯಮ ಮೀರುತ್ತಿತ್ತು.

ಭುಟ್ಟೊ ಬಾಲ್ಯದಿಂದಲೂ ದಿಲ್‌ದಾರಿಕೆಯಲ್ಲಿಯೇ ಬೆಳೆದವ. ಅವನ ಅಪ್ಪ ಸರ್ ಶಹನವಾಜ್ ಜುನಾಗಢದ ಅರಮನೆಯಲ್ಲಿ ದಿವಾನ್ ಆಗಿದ್ದ. ಮಗನನ್ನು ಬಹಳ ಶ್ರೀಮಂತಿಕೆ ಪರಿಸರದಲ್ಲಿಯೇ ಬೆಳೆಸಿದ್ದ. ಭುಟ್ಟೊ ಅಮೆರಿಕದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ರಾಜಕೀಯಶಾಸ್ತ್ರ ಅಧ್ಯಯನ ಮಾಡಿದ. ಅನಂತರ ಆಕ್ಸ್‌ಫರ್ಡ್‌ನ ಕ್ರೈಸ್ಟ್ ಚರ್ಚ್ ಕಾಲೇಜಿನಲ್ಲಿ ಕಾನೂನನ್ನು ವ್ಯಾಸಂಗ ಮಾಡಿದ. ವಿದೇಶ ವಾಸ, ಇಂಗ್ಲಿಷ್ ಕಲಿಕೆ, ಪಾಶ್ಚಾತ್ಯ ಜೀವನ ಶೈಲಿಯನ್ನು ಅವನು ಇಷ್ಟಪಟ್ಟು ರೂಢಿಸಿಕೊಂಡಿದ್ದ. ಇದು ಅವನನ್ನು ಇತರರಿಗಿಂತ ಭಿನ್ನವಾಗಿ ಪ್ರಸ್ತುತಪಡಿಸಿಕೊಳ್ಳುವುದಕ್ಕೆ ನೆರವಾಯಿತು. ತನ್ನ ಅಸ್ಖಲಿತ ಉರ್ದು ಹಾಗೂ ಇಂಗ್ಲಿಷ್‌ನಿಂದ ಜನರ ಗಮನ ಸೆಳೆಯುತ್ತಿದ್ದ. ಅಂದಿನ ರಾಜಕೀಯ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಸಿಂಧ್ ಮುಸ್ಲಿಂ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದವ ರಾಜಕೀಯ ಪ್ರವೇಶಿಸಿದ. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಗೆದ್ದೂ ಬಂದ. ಅಂದಿನ ಅಧ್ಯಕ್ಷ ಮಹಮ್ಮದ್ ಅಯೂಬ್ ಖಾನ್ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ಸಚಿವನಾದ. ಆಗ ಅವನಿಗೆ ಕೇವಲ ಮೂವತ್ತು ವರ್ಷ. ಇಂಧನ ಸಚಿವನಾಗಿ ಭುಟ್ಟೊ ಮಾಡಿದ ಸಾಧನೆ ಕಂಡು ಖಾನ್, ಹೆಚ್ಚಿನ ಜವಾಬ್ದಾರಿ ವಹಿಸಿದರು. ಆತ ವಾಣಿಜ್ಯ, ಕೈಗಾರಿಕೆ ಹಾಗೂ ಮಾಹಿತಿ ಮತ್ತು ಸಮಾಚಾರ ಸಚಿವನಾದ. ಅದಾಗಿ ಒಂದೆರಡು ವರ್ಷಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವನೂ ಆದ. ಭುಟ್ಟೊ ಅದೆಷ್ಟು ಶೀಘ್ರ ರಾಜಕೀಯದಲ್ಲಿ ಮೇಲಕ್ಕೆ ಬಂದನೆಂದರೆ ಅಧ್ಯಕ್ಷ ಖಾನ್ ಪ್ರತಿಯೊಂದಕ್ಕೂ ಅವನೆಡೆಗೆ ನೋಡುತ್ತಿದ್ದ. ಭುಟ್ಟೋನನ್ನು ಕಂಡರೆ ಅಂಥ ವಿಶ್ವಾಸ.

ಅದೇನಾಯಿತೋ ಏನೋ, ಖಾನ್ ಹಾಗೂ ಭುಟ್ಟೊ ಮಧ್ಯೆ ತಾಷ್ಕೆಂಟ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮನಸ್ತಾಪವುಂಟಾಯಿತು. ಮುಂದೆ ಅದೆಲ್ಲಿಗೆ ಹೋಯಿತೆಂದರೆ ಭುಟ್ಟೊ, ಖಾನ್ ಸಂಪುಟದಿಂದ ಹೊರಬಿದ್ದ. ಖಾನ್ ವಿರುದ್ಧ ಬಹಿರಂಗ ಸಮರಕ್ಕೆ ಇಳಿದ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸ್ಥಾಪನೆಯಾಗಿದ್ದು ಆಗಲೇ. ಅನಂತರ ತನ್ನ ಪಕ್ಷವನ್ನು ಗೆಲ್ಲಿಸಿ ಪ್ರಧಾನಿಯಾದ. ಭುಟ್ಟೋನನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುವುದು ಸಾಧ್ಯವೇ ಇರಲಿಲ್ಲ. ಅವನ ವಿರುದ್ಧ ಮಾತಾಡುವವರನ್ನು ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತಿತ್ತು. ಅಧಿಕಾರವೆಂಬುದು ಅವನ ನೆತ್ತಿಗೇರಿ ಆಕಾಶಕ್ಕೆ ಏಣಿ ಹಾಕಿ ಕುಳಿತಿತ್ತು. ಅಧಿಕಾರದ ಜತೆಗೇ ಉಚಿತವಾಗಿ ಬರುವ ಭ್ರಷ್ಟಾಚಾರ ಹಾಗೂ ಸ್ತ್ರೀವ್ಯಾಮೋಹ ಭುಟ್ಟೊನನ್ನು ಹುಡುಕಿಕೊಂಡು ಬಂದಿತು. ಮೊದಲೇ ಪರಮ ವಿಲಾಸಿ. ಈಗ ಅಧಿಕಾರ, ಜನಪ್ರಿಯತೆ ಬೇರೆ. ಕೋತಿಗೆ ಸಾರಾಯಿ ಕುಡಿಸಿದಂತಾಯಿತು ಅಂತಾರಲ್ಲ ಹಾಗಾಯಿತು. ರಾತ್ರಿ ಪಾರ್ಟಿ, ಕುಡಿತ, ಮೋಜು ಅವನನ್ನು ಸಂಪೂರ್ಣವಾಗಿ ವಾಸ್ತವದಿಂದ ದೂರವಾಗಿಸುತ್ತಾ ಹೋದವು. ಮೊದಲೇ ಪ್ಲೇಬಾಯ್ ಸ್ವಭಾವದವ. ಈಗ ಅಧಿಕಾರ ಬೇರೆ. ಕೇಳಬೇಕೇ? ಜನರ ಹಣದಲ್ಲಿ ಮೋಜು, ಮಜಾ ಮಾಡುವುದು ಅವನಿಗೆ ಅಭ್ಯಾಸವಾಗಿ ಹೋಯಿತು. ಆ ದಿನಗಳಲ್ಲಿ ಆತ ಶಾಪಿಂಗ್‌ಗೆ ಪ್ಯಾರಿಸ್, ಲಂಡನ್, ನ್ಯೂಯಾರ್ಕಿಗೆ ಹೋಗುತ್ತಿದ್ದ. ಸ್ವಿಜರ್‌ಲೆಂಡ್‌ನಲ್ಲಿ ಸಾಹೇಬರು ಹದಿನೈದು ದಿನಗಟ್ಟಲೆ ವಿಹಾರ ಹೋಗುತ್ತಿದ್ದರು!

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಧಿಕಾರದ ಮದವನ್ನು ತಲೆಗೇರಿಸಿಕೊಂಡವರು ಹೀಗೆ ಹುಚ್ಚುಚ್ಚಾಗಿ ಆಡುವುದು ಹೆಚ್ಚೇನಲ್ಲ. ಆದರೆ ಭುಟ್ಟೊ ಮಹಾಲಂಪಟನಂತೆ, ಕಾಮುಕನಂತೆ ವರ್ತಿಸಲಾರಂಭಿಸಿದ. ಆ ದಿನಗಳಲ್ಲಿ ಪಾಕಿಸ್ತಾನದಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು - ಭುಟ್ಟೊ ಕರೆದ ಪಾರ್ಟಿಗೆ ಹೆಂಡತಿಯನ್ನು ಕರೆದುಕೊಂಡು ಹೋಗಬೇಡಿ. ಹೆಂಡತಿಯನ್ನು ಕರೆದುಕೊಂಡು ಹೋದರೂ ಪರವಾಗಿಲ್ಲ ಮಗಳನ್ನು ಮಾತ್ರ ಕರೆದುಕೊಂಡು ಹೋಗಲೇಬೇಡಿ." ಕ್ಯಾಬಿನೆಟ್ ಸಚಿವನಾಗಿದ್ದಾಗಲೇ ಭುಟ್ಟೋನ ಇಂಥ ರಸಿಕತೆ'ಗಳು ಹುಟ್ಟಿಕೊಂಡಿದ್ದವು. ಆತ ಅದೆಂಥ ಕಚ್ಚೆಹರುಕನಾಗಿದ್ದನೆಂದರೆ ವಿದೇಶಿ ಗಣ್ಯನೊಬ್ಬ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಾಗ ಔತಣಕೂಟದಲ್ಲಿ ಅವನ ಹೆಂಡತಿಯನ್ನೇ ಲಪಟಾಯಿಸಲು' ಪ್ರಯತ್ನಿಸಿ ಸಿಕ್ಕಿಬಿದ್ದಿದ್ದ. ಜನರಲ್ ಅಯೂಬ್ ಖಾನ್ ಭುಟ್ಟೊನನ್ನು ಕರೆದು ಬೈಯ್ದಿದ್ದರು. ಆದರೆ ಸಚಿವಸ್ಥಾನದಿಂದ ವಜಾ ಮಾಡದೇ ಉಳಿಸಿಕೊಂಡಿದ್ದರು.

ಭುಟ್ಟೋನ ಅಧಿಕೃತ ಹೆಂಡತಿಯರೆಲ್ಲ ಪಾರ್ಟಿಯಲ್ಲಿ ಸಿಕ್ಕವರೇ. ಅವರೆಲ್ಲ ಬೇರೆಯವರ ಹೆಂಡತಿಯರೇ. ಭುಟ್ಟೊ ಮೂರು ಮದುವೆಯಾಗಿದ್ದ. ಮೊದಲನೆಯವಳು ಬೇಗಮ್ ಅಮೀರ್. ಅವಳು ಮಾತ್ರ ಅವನ ಹತ್ತಿರದ ಸಂಬಂಧಿ. ಆದರೆ ಆಕೆ ಭುಟ್ಟೊನಿಗಿಂತ ಹದಿನೈದು ವರ್ಷ ದೊಡ್ಡವಳು!! ಎರಡನೆಯವಳು ನುಸ್ರತ್. ಇವಳು ಮೂಲತಃ ಇರಾನ್‌ದವಳು. ನುಸ್ರತ್‌ಗೆ ಭುಟ್ಟೊ ಪರಿಚಯವಾಗುವಾಗ ಮದುವೆಯಾಗಿತ್ತು. ವಿಚ್ಛೇದನ ಪಡೆದಿದ್ದಳು. ಆಕೆಗೆ ನಾಲ್ವರು ಮಕ್ಕಳು. ಅವಳ ಪೈಕಿ ಬೇನಜೀರ್ ಕೂಡ ಒಬ್ಬಳು. ಮೂರನೆಯವಳು ಬಿಹಾರಿ ಸೆಕ್ಸ್‌ಬಾಂಬ್. ಅವಳು ಬೆಂಗಾಲಿಯವನೊಬ್ಬನನ್ನು ಮದುವೆಯಾಗಿದ್ದಳು. ಅನಂತರ ಗಂಡನಿಗೆ ವಿಚ್ಛೇದನ ನೀಡಿ ಭುಟ್ಟೊನನ್ನು ಮದುವೆಯಾದಳು. ಆಕೆಯನ್ನು ಭುಟ್ಟೊ ಲಂಡನ್‌ನಲ್ಲಿ ಇಟ್ಟಿದ್ದ. ಆತ ಯಾವುದೇ ದೇಶಕ್ಕೆ ಹೋಗಲಿ, ಊರಿಗೆ ಹೋಗಲಿ ಅವನಿಗೆ ನೀರಿಗೆ ತೊಂದರೆಯಾದರೂ ನೀರೆಯರಿಗೆ ಕೊರತೆಯಿರಲಿಲ್ಲ.

ಭುಟ್ಟೊ ಮಹಾ ಸ್ಯಾಡಿಸ್ಟ್ ಆಗಿದ್ದ. ಸುಂದರ ಹೆಂಗಸರ ಮುಂದೆ ಹೆಂಡತಿಯರನ್ನು ಅವಮಾನಿಸುತ್ತಿದ್ದ, ಹೊಡೆಯುತ್ತಿದ್ದ. ನುಸ್ರತ್‌ಗೆ ಸದಾ ಉದ್ದ ತೋಳಿನ ಬ್ಲೌಸ್ ತೊಡುವಂತೆ ಒತ್ತಾಯಿಸುತ್ತಿದ್ದ, ಕೈ ಮೇಲಿನ ಗೀರುಗಳು, ಬಾಸುಂಡೆಗಳು ಕಾಣಬಾರದೆಂದು. ನುಸ್ರತ್ ಕೆಲವು ಸಲ ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಸಾವಿನ ಮನೆ ಕದ ಬಡಿದು ಬಂದಿದ್ದಳು.

ಭುಟ್ಟೊ ಎಂಥ ಮನುಷ್ಯ ಅಂದ್ರೆ- ಖ್ಯಾತ ಪತ್ರಕರ್ತ ಖುಷವಂತ್ ಸಿಂಗ್ ಹೇಳುತ್ತಾರೆ- ನೋಡಿದರೆ ಮಹಾ ಜಮೀನುದಾರನ ಗೆಟಪ್ಪಿನಲ್ಲಿರುವ, ಸದಾ ಮಿರಿಮಿರಿ ಮಿಂಚುವ ಸ್ಫುರದ್ರೂಪಿ. ಯುರೋಪಿಯನ್ ವಾತಾವರಣದಲ್ಲಿ ಬೆಳೆದಂತೆ ವರ್ತಿಸುವ ಜಂಟಲ್‌ಮ್ಯಾನ್. ಪ್ರಧಾನಿಯಾಗಿ ಎಲ್ಲರನ್ನೂ ಸೆಳೆಯುವ ವ್ಯಕ್ತಿತ್ವ. ಕುಡಿದಾಗ, ಸಿಟ್ಟು ಬಂದಾಗ ಬಾಯಿ ತೆರೆದರೆ ಮಹಾ ಕೊಳಕ. ತಾನು ಪ್ರಧಾನಿ, ಅಧ್ಯಕ್ಷ ಎಂಬುದನ್ನೂ ಮರೆತು ಸುವ್ವರ್ ಕಾ ಬಚ್ಚಾ, ಹರಾಮ್‌ಜಾದೆ, ಮಾದರ್‌ಛೋತ್ ಎಂದೆಲ್ಲ ಬೈಯುತ್ತಿದ್ದ. ಎಂಥ ದೊಡ್ಡ ಮನುಷ್ಯ ಎಂದು ಜನ ಅಂದುಕೊಳ್ಳುತ್ತಿದ್ದರೆ ಕ್ಷುಲ್ಲಕನಂತೆ ವರ್ತಿಸುತ್ತಿದ್ದ."

ಅಧಿಕಾರ ಎಂಬುದು ಭುಟ್ಟೋನನ್ನು ಸಂಪೂರ್ಣ ಹಾಳು ಮಾಡಿ ಹಾಕಿತ್ತು. ಆತ ಮನುಷ್ಯತ್ವ ಕಳೆದುಕೊಂಡವನಂತೆ ವರ್ತಿಸುತ್ತಿದ್ದ. ಇದನ್ನು ಯಾರಾದರೂ ಪ್ರಶ್ನಿಸಿದರೆ ಅವರನ್ನು ಕೊಲೆ ಮಾಡಲೂ ಹೇಸುತ್ತಿರಲಿಲ್ಲ. ತನ್ನ ಕಾರ್ಯವೈಖರಿಯನ್ನು ವಿರೋಧಿಸಿದನೆಂಬ ಕಾರಣಕ್ಕೆ ತನ್ನ ಪಕ್ಷದ ಅಹಮದ್ ರಾಜಾ ಎಂಬುವವನ ಕೊಲೆಗೆ ಹದಿನೆಂಟು ಬಾರಿ ವಿಫಲ ಪ್ರಯತ್ನ ನಡೆಸಿದ್ದ. ಕೊನೆಗೆ ನವಾಬ್ ಕಸುರಿ ಎಂಬುವವನ ಕೊಲೆ ಪ್ರಕರಣದಲ್ಲಿ ಭುಟ್ಟೊ ಸಿಕ್ಕಿಬಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನನ್ನು ಗಲ್ಲಿಗೇರಿಸಲಾಯಿತು.

ಗಲ್ಲಿಗೇರಿಸುವ ಮೊದಲು ಅವನನ್ನು ಕಜ್ಜಿನಾಯಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಯಿತು. ಕೈ ಬೆರಳಿಗೆಲ್ಲ ವಜ್ರದ ಉಂಗುರ, ರತ್ನಖಚಿತ ವಾಚುಗಳನ್ನು ಧರಿಸಿರುತ್ತಿದ್ದ ಭುಟ್ಟೊ, ನೇಣುಗಂಬ ಏರುವಾಗ ಭಿಕಾರಿಗಿಂತ ಕಡೆಯಾಗಿ ಹೋಗಿದ್ದ. ಅವನ ಪಾಪಗಳೇ ಅವನನ್ನು ಸಮಾಧಿ ಮಾಡಿತು.

ಬೇನಜೀರ್ ಸತ್ತಾಗ ಭುಟ್ಟೊ ನೆನಪು ಉಮ್ಮಳಿಸಿ ಬಂದಿತು. ಇಂಥದೇ ಗಂಡನನ್ನು ಕಟ್ಟಿಕೊಂಡು ಆ ನತದೃಷ್ಟ ದೇಶದಲ್ಲಿ ಬಾಳಿದ ಬೇನಜೀರ್ ಬದುಕು ಅದೆಷ್ಟು ಕ್ರೂರವಾಗಿತ್ತು ಗೊತ್ತಾ? ಅದೊಂದು ದೊಡ್ಡ ಕತೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X