ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪ್ರಜಾಪ್ರಭುತ್ವ ಪ್ರಹಸನ 2008

By Staff
|
Google Oneindia Kannada News

Ticket aspirants and the hope of Karnatakaಈ ಸಲದ ಚುನಾವಣೆಯಲ್ಲಿ ಎಂಥೆಂಥವರು ಸ್ಪರ್ಧಿಸಲು ಹಾತೊರೆಯುತ್ತಿದ್ದಾರೆಂಬುದನ್ನು ಗಮನಿಸಿದರೆ ಭಯವಾಗುತ್ತದೆ

ವಿಶ್ವೇಶ್ವರ ಭಟ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಬರಾಕ್ ಒಬಾಮಾ ಒಂದು ಪುಸ್ತಕ ಬರೆದಿದ್ದಾರೆ. The Audacity of Hope ಅಂತ ಅದರ ಹೆಸರು. Audacity ಅಂದರೆ ಎದೆಗಾರಿಕೆ, ದಿಟ್ಟತನ, ಛಾತಿ, ಕೆಚ್ಚು ಎಂದೆಲ್ಲ ಅರ್ಥಗಳಿವೆ. ಈ ಪದಕ್ಕೆ ಇನ್ನೊಂದು ಅರ್ಥವೂ ಇದೆ. ಅದೇನೆಂದರೆ ಮಾತು. ಸಕಾರಾತ್ಮಕವಾಗಿ ಈ ಪದ ಬಳಸಿದಾಗ ಮಾತಿಗೆ ವಿಶೇಷ ಅರ್ಥ ಬರುತ್ತದೆ. ಘನ ವಿದ್ವಾಂಸನೊಬ್ಬ ತನ್ನ ಪಾಂಡಿತ್ಯಕ್ಕಾಗಿ ವಿನಯದಿಂದ ಮಾತು ಪ್ರದರ್ಶಿಸುವುದನ್ನು ಮೆಚ್ಚಬಹುದು. ಕೆಲವರು ಈ ಗುಣದಿಂದಲೇ ಗಮನಸೆಳೆಯುತ್ತಾರೆ.

ಕೋಟ ಶಿವರಾಮ ಕಾರಂತರಿಗೆ ಈ ರೀತಿಯ ಮಾಕು (Audacity) ಇತ್ತು. ಒಮ್ಮೆ ನನ್ನ ಸ್ನೇಹಿತರೊಬ್ಬರು ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಆಹ್ವಾನಿಸುತ್ತಾ ಸಾಹಿತ್ಯ ರಚನೆಯಲ್ಲಿ ಪರಿಸರದ ಪ್ರಭಾವ' ಎಂಬ ವಿಷಯದ ಬಗ್ಗೆ ಮಾತಾಡಬೇಕು ಹಾಗೂ ಆ ಉಪನ್ಯಾಸದಲ್ಲಿ ಯಾವ ಯಾವ ಸಂಗತಿಗಳನ್ನು ಪ್ರಸ್ತಾಪಿಸಬೇಕೆಂಬುದನ್ನು ಕಾರಂತರಿಗೆ ಹೇಳಿದರು. ಕಾರಂತರಿಗೆ ವಿಪರೀತ ಕಿರಿಕಿರಿಯಾಗಿರಬೇಕು. "ನೀವು ನನ್ನನ್ನು ಕರೆದಿದ್ದೀರಲ್ಲ, ಬರುತ್ತೇನೆ. ನಾನೇನು ಮಾತಾಡಬೇಕು, ಹೇಗೆ ಹೇಳಬೇಕು ಎಂಬುದನ್ನೆಲ್ಲ ನನಗೆ ಹೇಳಬೇಡಿ. ಏನು ಮಾತಾಡಬೇಕೆಂಬುದು ನನಗೆ ಗೊತ್ತಿದೆ. ನಾನು ಮಾತಾಡುವುದನ್ನು ಸುಮ್ಮನೆ ಕುಳಿತು ಕೇಳಿ. ಇನ್ನು ನೀವು ಹೊರಡಬಹುದು" ಎಂದು ಗುಂಡು ಹೊಡೆದಂತೆ ಹೇಳಿದ್ದರು. ಅವರಲ್ಲೊಂದು ಜ್ಞಾನದ ಮಾತಿನ ಝರಿ ಆ ಕ್ಷಣದಲ್ಲಿ ಹರಿಯುತ್ತಿರುವಂತೆ ಭಾಸವಾಗಿತ್ತು.

ಬರ್ನಾರ್ಡ್ ಷಾ ಅವರಿಗೂ ಇಂಥದೇ ಒಂದು ಮಾಕಿತ್ತು. ಒಮ್ಮೆ ಇಂಗ್ಲೆಂಡ್‌ನಲ್ಲಿ ಒಂದು ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ವಿಷಯ: The Future of English Language. ಅನೇಕ ಗಣ್ಯರು ಮಾತಾಡಿದರು. ಕೊನೆಯಲ್ಲಿ ಷಾ ಸರದಿ. ಮಾತಾಡುತ್ತಾ ಅವರು ಕೊನೆಯಲ್ಲಿ ಹೇಳಿದರು-"ಷೇಕ್ಸ್‌ಪಿಯರ್ ನಿಧನರಾಗಿ ಅನೇಕ ವರ್ಷಗಳಾದವು. ಮಿಲ್ಟನ್ ಸಹ ನಮ್ಮ ಮಧ್ಯದಲ್ಲಿ ಇಲ್ಲ. ಇತ್ತೀಚೆಗೆ ನನ್ನ ಆರೋಗ್ಯ ಹದಗೆಡುತ್ತಿದೆ. ಮುಂದಿನ ದಿನಗಳಲ್ಲಿ ಇಂಗ್ಲಿಷ್ ಹೇಗಿರಬಹುದೆಂಬುದನ್ನು ಯೋಚಿಸಿದರೆ ಭಯವಾಗುತ್ತದೆ." ಈ ರೀತಿ ಮಾತು ಸುಮ್ಮನೆ ಬರುವುದಿಲ್ಲ. ಅದಕ್ಕೆ Audacity ಬೇಕು. ಬರಾಕ್ ಒಬಾಮಾ ಕೂಡ ಇಂಥದೇ ಒಂದು ವಿನಮ್ರ ಮಾತಿನಿಂದ ಈ ಪುಸ್ತಕ ಬರೆದಿದ್ದಾರೆ. Thoughts on Reclaiming The American Dream ಎಂಬುದು ಈ ಕೃತಿಯ ಉಪಶೀರ್ಷಿಕೆ. ನಾಯಕನಾದವನಿಗೆ ಇಂಥದೊಂದು ಮಾಕು ಇಲ್ಲದಿದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲ. ಅಷ್ಟಕ್ಕೂ ಒಬಾಮಾಗೆ ಈ ಮಾತು ಹುಟ್ಟಿರುವುದಾದರೂ ಒಣಜಂಭ, ಖಾಲಿತನದ ಬುಡಬುಡಿಕೆಯಿಂದಲ್ಲ. ಸಾಧನೆ, ಪರಿಶ್ರಮ, ಛಲ, ಅನುಭವ ಹಾಗೂ ಇನ್ನೂ ಸಾಧಿಸಬೇಕೆಂಬ ಅಪರಿಮಿತ ಆಸೆಯಿಂದ.

ಅದಕ್ಕಿಂತ ಮುಖ್ಯವಾಗಿ ಅವರು ಈ audacityಯನ್ನು ತೋರುತ್ತಿರುವುದು Hopeಗಾಗಿ. ಅಮೆರಿಕದ ಕನಸನ್ನು ನನಸು ಮಾಡುವುದಕ್ಕಾಗಿ. ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗುವ ಮುನ್ನ ಇಡೀ ದೇಶದ ಮುಂದೆ, ಅಧ್ಯಕ್ಷನಾಗಿ ನಾನೇನು ಮಾಡಬಹುದು, ನನ್ನ ಕನಸು, ಆಸೆ, ವಾಂಛೆಗಳೇನೆಂಬುದನ್ನು ಒಬಾಮಾ ಈ ಕೃತಿಯಲ್ಲಿ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ. ಸಾರ್ವಜನಿಕ ಜೀವನ ಹಾಗೂ ಖಾಸಗಿ ಬದುಕಿನಲ್ಲಿ ಮೌಲ್ಯಗಳ ಮಹತ್ವ, ಮೌಲ್ಯಗಳ ನೆಲೆಗಟ್ಟಿನಲ್ಲಿ ದೇಶವನ್ನು ಕಟ್ಟುವ ಅಗತ್ಯ, ಆಡಳಿತದಲ್ಲಿ ಮೌಲ್ಯಗಳ ಪರಿಣಾಮ, ಮೌಲ್ಯರಹಿತ ಸರಕಾರ, ದೇಶದ ದುರ್ಗತಿ, ರಾಜಕಾರಣ, ಅದ್ಭುತ ಸದವಕಾಶ, ನಂಬಿಕೆ, ಅಮೆರಿಕ ದಾಟಿದ ಹೊರಜಗತ್ತು ಹಾಗೂ ಅವರ ಕುಟುಂಬದ ಬಗ್ಗೆ ಒಬಾಮಾ ಮನೋಜ್ಞವಾಗಿ ಬರೆದಿದ್ದಾರೆ.

ಅಮೆರಿಕ ಅಧ್ಯಕ್ಷ ಸ್ಥಾನ ಅಲಂಕರಿಸುವ ವ್ಯಕ್ತಿಯ ಮನಸ್ಸಿನೊಳಗೆ ಎಂಥ ವಿಚಾರಗಳು ಹರಿದಾಡುತ್ತಿವೆ ಎಂಬುದನ್ನು ಆ ಪುಸ್ತಕ ಓದಿದರೆ ಗೊತ್ತಾಗುತ್ತದೆ. ಅಮೆರಿಕದಂಥ ವಿಶಾಲ ದೇಶದ ಅಧ್ಯಕ್ಷನಾಗುವ ವ್ಯಕ್ತಿ ತನ್ನ ಪಕ್ಷದ ಅಜೆಂಡಾದ ಮೂಲಕ ಜನರ ಬಳಿ ಹೋಗುವ ಮೊದಲು ತಾನೆಂಥವನು, ದೇಶದ ಸಂವಿಧಾನ ತನಗೆಷ್ಟು ಗೊತ್ತು, ರಾಷ್ಟ್ರವನ್ನು ಕಾಡುವ ಸಮಸ್ಯೆಗಳ ಬಗ್ಗೆ ತನ್ನ ನಿಲುವೇನು, ದೇಶದ ಪ್ರಮುಖ ನೀತಿಗಳ ಬಗ್ಗೆ ತಾನು ಹೇಳುವುದೇನು ಮುಂತಾದ ಅನೇಕ ಸಂಗತಿಗಳನ್ನು ಸ್ಪಷ್ಟಪಡಿಸಬೇಕೆಂದು ಜನ ಅಪೇಕ್ಷಿಸುತ್ತಾರೆ. ಜನರ ನಿರೀಕ್ಷೆಗಳನ್ನು ಬಹುಮಟ್ಟಿಗೆ ತಣಿಸುವ ಕೆಲಸವನ್ನು ಒಬಾಮಾ ಮಾಡಿದ್ದಾರೆ. ಆ ಕೃತಿಯನ್ನು ಓದುವಾಗ ಒಬಾಮಾ ಬಗ್ಗೆ ಅಭಿಮಾನ ಮೂಡುತ್ತದೆ.

The Audacity of Hope ಓದಿ ಕೆಳಗಿಟ್ಟಾಗ ಅನಿಸಿದ್ದೇನೆಂದರೆ, ನಮ್ಮಲ್ಲೂ ಚುನಾವಣೆ ಬಂದಿದೆ, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಪಾರ್ಟಿಯಿಂದ ಕನಿಷ್ಠ ಡಜನ್‌ಗಟ್ಟಲೆ ಅಭ್ಯರ್ಥಿಗಳು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಲು ಕನಿಷ್ಠ ಅರ್ಧಡಜನ್ ನಾಯಕರು ಒಂದೊಂದು ಪಕ್ಷದಿಂದ ಮಸಲತ್ತು ನಡೆಸುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬನೂ ತಾನ್ಯಾರು, ತನ್ನ ಅರ್ಹತೆಯೇನು, ತನ್ನ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಆದ್ಯತೆಗಳೇನೆಂಬುದನ್ನು ಹೇಳದಿರುವುದು.

ಅವರು ಹೇಗೆಲ್ಲ ಹೇಳುವುದು, ಅವರು ಹೇಳಬಹುದೆಂದು ನಿರೀಕ್ಷಿಸುವುದು ದೂರವೇ ಉಳಿಯಿತು. ಈ ಸಲದ ಚುನಾವಣೆಯಲ್ಲಿ ಎಂಥೆಂಥವರು ಸ್ಪರ್ಧಿಸಲು ಹಾತೊರೆಯುತ್ತಿದ್ದಾರೆಂಬುದನ್ನು ಗಮನಿಸಿದರೆ ಭಯವಾಗುತ್ತದೆ. ಯಾವುದೇ ರೀತಿಯಿಂದ ನೋಡಿದರೂ ಇವರು ನಮ್ಮ ಪ್ರತಿನಿಧಿಗಳು ಆಗಲು ಲಾಯಕ್ಕಿಲ್ಲ. ಇವರೆಲ್ಲ ನಮ್ಮ ಹಿತ ಕಾಯಬಹುದೆಂಬ ಸಣ್ಣ ಆಸೆಯೂ ಮೂಡುವುದಿಲ್ಲ. ಇಂಥವರು ವಿಧಾನ ಮಂಡಲದಲ್ಲಿ ಕುಳಿತು ಎಂಥ ಶಾಸನ ಮಾಡಬಹುದು? ಅಷ್ಟಕ್ಕೂ ಅವರಿಗೆ ಶಾಸನ, ಸಂವಿಧಾನವೆಂಬುದು ಗೊತ್ತಾ? ಈ ಅಕ್ಷರಶತ್ರು'ಗಳಿಗೆ ಅವೆಲ್ಲ ಹೇಗೆ ಅರ್ಥವಾದೀತು? ಇಂಥವರೆಲ್ಲ ಶಾಸಕರಾಗಿ ಏನು ಮಾಡಬಹುದು? ರಾಜ್ಯ ಏನಾಗಬಹುದು? ಎಲ್ಲ ರಾಜಕೀಯ ಪಕ್ಷಗಳೂ ಕಳ್ಳಕಾಕರು, ರೌಡಿಗಳು, ಪೋಕರಿಗಳಿಗೆಲ್ಲ ಟಿಕೆಟ್ ನೀಡಿದರೆ ಯಾರಿಗೆ ಅಂತ ವೋಟು ಹಾಕಬೇಕು? ಹಾಗಾದರೆ ಹೊಸ ಚುನಾವಣೆ ಮಾಡಿ ನಾವು ಸಾಧಿಸುವುದಾದರೂ ಏನು?

ನಿಜಕ್ಕೂ ಭಯವಾಗುತ್ತದೆ, ದಿಗಿಲು ಆವರಿಸಿಕೊಳ್ಳುತ್ತದೆ. ಯಾರ್‍ಯಾರೋ ಚುನಾವಣೆಯಲ್ಲಿ ರ್ಸ್ಪಸಲು ರಾಜಕೀಯ ಪಕ್ಷಗಳ ಅಂಗಳದಲ್ಲಿ ಟಿಕೆಟ್‌ಗಾಗಿ ನಿಂತಿದ್ದಾರೆ. ಬಹುತೇಕ ಮಂದಿ ಎಲ್ಲ ಪಕ್ಷಗಳ ಬಾಗಿಲುಗಳನ್ನೂ ಬಡಿದು ಬಂದಿದ್ದಾರೆ. ಅವರಿಗೆ ಪಕ್ಷ ಯಾವುದಾದರೂ ಆಗಬಹುದು. ಅಂತೂ ಟಿಕೆಟ್ ಬೇಕು. ರಾಜಕೀಯ ಪಕ್ಷಗಳಿಗೆ ನಿಷ್ಠಾವಂತರು, ಪಕ್ಷಕ್ಕಾಗಿ ದುಡಿದವರು, ಯೋಗ್ಯರು, ಸಭ್ಯರು ಬೇಕಾಗಿಲ್ಲ. ದುಡ್ಡು ಚೆಲ್ಲುವವರು, ಹೇಗಾದರೂ ಮಾಡಿ ಗೆಲ್ಲಬಲ್ಲವರು ಬೇಕು. ಅವರು ಯಾವುದೇ ಪಾರ್ಟಿಯಿಂದಲೇ ಬರಲಿ, ಯಾವುದೇ ಹಿನ್ನೆಲೆಯಿಂದಲೇ ಬರಲಿ, ಅವರ ಪೂರ್ವಾಪರಗಳೇನೇ ಇರಲಿ ಪರವಾಗಿಲ್ಲ. ಅಂತೂ ಅವರು Winnable ಕ್ಯಾಂಡಿಡೇಟ್ ಆಗಿರಬೇಕು ಅಥವಾ ಅವರು ಮೇಲ್ನೋಟಕ್ಕೆ ಹಾಗೆ ಅನಿಸಬೇಕು. ಇದರ ಹೊರತಾಗಿ ಮತ್ತ್ಯಾವುದೂ ಪ್ರಮುಖ ಅಲ್ಲ. ಪಕ್ಷಕ್ಕಾಗಿ 40-50 ವರ್ಷ ದುಡಿದಿರಬಹುದು. ಆದರೇನಂತೆ? ಆತ Winnable ಅಂತ ಅನಿಸಬೇಕು. ಅದಿಲ್ಲದಿದ್ದರೆ ಅವನಿಗೆ ಟಿಕೆಟ್ ಸಿಗುವುದಿಲ್ಲ. ಅವನ ಬದಲು ಆಗತಾನೇ ಬೇರೆ ಪಕ್ಷದಿಂದ ಬಂದವನಿಗೆ ಟಿಕೆಟ್ ಗ್ಯಾರಂಟಿ ಬೇರೆ ಪಕ್ಷದಿಂದ ಹೀಗೆ ಬರುವ ಅಭ್ಯರ್ಥಿಯ ಟ್ರಂಪ್‌ಕಾರ್ಡ್ ಏನೆಂದರೆ ಹಣ ಹಾಗೂ ಹೆಚ್ಚು ಹಣ. ಆತ ಉಳಿದೆಲ್ಲ ಟಿಕೆಟ್ ಆಕಾಂಕ್ಷಿಗಳಿಗಿಂತ ಹೆಚ್ಚು ಹಣ ಖರ್ಚು ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಅಷ್ಟೆ. ಹೀಗಿರುವಾಗ ಪಕ್ಷಕ್ಕೆ ನಿಷ್ಠರಾಗಿರುವವರಿಗೆ, ಅರ್ಹರಿಗೆ ಬೆಲೆಯೆಲ್ಲಿದೆ?

ರಿಯಲ್ ಎಸ್ಟೇಟ್, ಗಣಿ ವ್ಯಾಪಾರಿಗಳು, ಗುತ್ತಿಗೆದಾರರು ಮೊದಲ ಬಾರಿಗೆ ಚುನಾವಣೆಯ ಲೆಕ್ಕಾಚಾರ, ಪಟ್ಟುಗಳನ್ನು ಬದಲಿಸಿಬಿಟ್ಟಿದ್ದಾರೆ. ಹಾಗೆ ನೋಡಿದರೆ ಈ ಸಲದ ಚುನಾವಣೆ ನಡೆಯುತ್ತಿರುವುದು ರಾಜಕೀಯ ಪಕ್ಷಗಳ ನಡುವೆ ಅಲ್ಲವೇ ಅಲ್ಲ. ರಾಜಕೀಯ ಪಕ್ಷಗಳ ಹೆಸರನ್ನು ಮಾತ್ರ ಬಳಸಿಕೊಳ್ಳುವ ರಿಯಲ್ ಎಸ್ಟೇಟ್ ಕುಳಗಳ ನಡುವಿನ ಹಣಾಹಣಿ ಇದು. ಎಲ್ಲ ಕ್ಷೇತ್ರಗಳಲ್ಲೂ ಹೀಗೇ ಇರಲಿಕ್ಕಿಲ್ಲವೆಂದು ವಾದಿಸಬಹುದು. ಆದರೆ ರಿಯಲ್ ಎಸ್ಟೇಟ್ ಧಣಿಯ ಹಣ ಎಲ್ಲ 224 ಕ್ಷೇತ್ರಗಳಿಗೂ ಹರಿದು ಹೋಗಲಿದೆ. ಏನಿಲ್ಲವೆಂದರೂ ಒಬ್ಬೊಬ್ಬ ಭೂಗಳ್ಳ ಕನಿಷ್ಠ ಹತ್ತು ಕ್ಷೇತ್ರಗಳನ್ನಾದರೂ ಸಾಕಬಲ್ಲ, ಸಲಹಬಲ್ಲ. ಚುನಾವಣೆಗೆ ರ್ಸ್ಪಸಬಯಸುವ ಭೂಗಳ್ಳರು, ನಾವು ಪಕ್ಕದ ಕ್ಷೇತ್ರಗಳನ್ನೂ ನೋಡಿಕೊಳ್ಳುತ್ತೇವೆ ಅಥವಾ ನೀವು ಹೇಳುವಷ್ಟು ಕ್ಷೇತ್ರಗಳ ಖರ್ಚನ್ನು ನಾವು ನಿಭಾಯಿಸುತ್ತೇವೆ. ನಮಗೆ ಟಿಕೆಟ್ ಕೊಡಿ" ಎಂದು ಡೀಲ್ ಮಾಡಿಕೊಳ್ಳುತ್ತಿದ್ದಾರೆ.

ನಮ್ಮ ವರದಿಗಾರರೊಬ್ಬರು ಹೇಳುತ್ತಿದ್ದರು. ಭೂಗಳ್ಳನೊಬ್ಬ ರಾಜಕೀಯ ಪಕ್ಷವೊಂದರ ನಾಯಕನನ್ನು ಭೇಟಿ ಮಾಡಿ, ಹಿಂದಿನ ವರ್ಷ ಇಡೀ ಚುನಾವಣೆಗೆ ನಿಮ್ಮ ಪಕ್ಷದಿಂದ ಎಷ್ಟು ಹಣ ಖರ್ಚು ಮಾಡಿದ್ದೀರಿ?' ಎಂದು ಕೇಳಿದನಂತೆ. ಅದಕ್ಕೆ ಆ ಧುರೀಣರು ಸುಮಾರು 80 ಕೋಟಿ ರೂ. ಆಗಿರಬಹುದು ಎಂದರಂತೆ. ಆ ಭೂಗಳ್ಳ ಅಷ್ಟೇನಾ ಸ್ವಾಮಿ? ಹಾಗಾದರೆ ಈ ಸಲದ ಚುನಾವಣೆಯ ಖರ್ಚನ್ನು ಇಡಿಯಾಗಿ ನಾನೇ ಸ್ಪಾನ್ಸರ್ ಮಾಡ್ತೇನೆ. ಆದರೆ ಒಂದು ಷರತ್ತು- ನನಗೆ ಟಿಕೆಟ್ ಕೊಡಬೇಕು ಹಾಗೂ ಮಂತ್ರಿ ಮಾಡಬೇಕು" ಎಂದನಂತೆ.

ಇದರಲ್ಲಿ ನನಗೆ ಅಚ್ಚರಿಯೇನೂ ಅನಿಸುವುದಿಲ್ಲ. ಯಾಕೆಂದರೆ ಸಾವಿರಾರು ಕೋಟಿ ರೂ. ಹೊಂದಿರುವ ಅವನಿಗೆ ಎಂಬತ್ತು-ನೂರು ಕೋಟಿ ರೂ. ಯಾವ ಲೆಕ್ಕ? ಎಲ್ಲವೂ ಅಂದುಕೊಂಡಂತೆ ಆದರೆ ಮಂತ್ರಿಗಿರಿ! ತಮಾಷೆಯೆಂದರೆ ಎಲ್ಲರ ತಲೆಯೊಳಗೂ ಇದೇ ಗುಂಗಿಹುಳ ಹೊಕ್ಕಿದಂತಿದೆ. ಹಿಂದಿನ ಯಾವ ಚುನಾವಣೆಯೂ ಕಂಡಿರದಷ್ಟು ಹಣ, ಕ್ರೌರ್ಯ, ಲೆಕ್ಕಾಚಾರ, ಹಪಾಹಪಿತನ, ಅಕಾರಲಾಲಸೆ, ವಂಚನೆ, ಸುಳ್ಳು, ಮೋಸ, ಹಾಕಾಪತಿತನ, ಬೆನ್ನಿಗೆ ಚೂರಿ ಇಕ್ಕುವಿಕೆ, ದ್ವೇಷ ಹೊಳೆಯಾಗಿ ಹರಿಯಲಿದೆ. ನಮಗೆ ಗೊತ್ತಿದ್ದೂ ಗೊತ್ತಿದ್ದು ಒಂದು ಶತಭ್ರಷ್ಟ ವ್ಯವಸ್ಥೆಯನ್ನು ಪುನಃ ಸ್ಥಾಪಿಸಲು ಹೊರಟಿದ್ದೇವೆ. ಇಲ್ಲಿ ಯಾವ ಪಕ್ಷವನ್ನೂ ದೂಷಿಸುವಂತಿಲ್ಲ. ಎಲ್ಲವೂ ಒಂದೇ. ಹಣ ಯಾವುದೇ ಬಣ್ಣದಲ್ಲಿದ್ದರೂ ಅದನ್ನು ಎಲ್ಲರೂ ಇಷ್ಟಪಡುತ್ತಾರೆ!

ಛೆ! ಎಲ್ಲಿಗೆ ಬಂತು ಪ್ರಜಾಪ್ರಭುತ್ವ? 1957ರಲ್ಲಿ ಮೊದಲಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜನಸಂಘದ ಅಭ್ಯರ್ಥಿ ಅಟಲ್ ಬಿಹಾರಿ ವಾಜಪೇಯಿಗೆ ಠೇವಣಿ ಕಟ್ಟಲು ಹಣವಿರಲಿಲ್ಲ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಹಣ ಸಂಗ್ರಹಿಸಿದ್ದರು. ಆ ಚುನಾವಣೆಯಲ್ಲಿ ವಂತಿಗೆ ಹಣದಿಂದಲೇ ಅವರು ರ್ಸ್ಪಸಿ ಗೆದ್ದರು. ಆಗ ಚುನಾವಣೆಗೆ ರ್ಸ್ಪಸುವ ಅಭ್ಯರ್ಥಿಗಳ ಬಳಿ ಹಣವೇ ಇರುತ್ತಿರಲಿಲ್ಲ. ಜಗನ್ನಾಥರಾವ್ ಜೋಶಿಯವರು ಖಾಲಿ ಕಿಸೆಯಲ್ಲಿಯೇ ಭೋಪಾಲ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 1972ರ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ವಾಜಪೇಯಿ ಬೆಂಗಳೂರಿಗೆ ಬಂದಾಗ ವಿಮಾನ ನಿಲ್ದಾಣದಿಂದ ಅವರನ್ನು ಸ್ಕೂಟರ್‌ನಲ್ಲಿ ಕರೆತರಲಾಗಿತ್ತು. ಅವರು ಉಳಿದುಕೊಳ್ಳುತ್ತಿದ್ದುದು ಕಾರ್ಯಕರ್ತರ ಮನೆಗಳಲ್ಲೇ. ಅದಕ್ಕಿಂತ ಮೊದಲು ಅವರು ಬೆಂಗಳೂರಿಗೆ ಬರುತ್ತಿದ್ದುದೇ ರೈಲಿನಲ್ಲಿ. ಆದರೆ ಈಗ ನೋಡಿ, ಎಲ್ಲ ನಾಯಕರೂ ಚುನಾವಣೆ ಪ್ರಚಾರಕ್ಕೆ ಹೆಲಿಕಾಪ್ಟರ್‌ನಲ್ಲಿ ಸುತ್ತುತ್ತಾರೆ. ಜಗನ್ನಾಥರಾಯರ ಆತ್ಮ ಏನು ಅಂದುಕೊಳ್ಳುತ್ತಿರಬಹುದು?

ಸಹಕಾರಿ ಧುರೀಣ ಜಿ.ಎಸ್. ಹೆಗಡೆ ಅಜ್ಜೀಬಾಳ್ ಕೆನರಾ ಲೋಕಸಭೆ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಎಲ್ಲ ಪಕ್ಷಗಳಿಂದ ಬರುವಂತೆ ಅವರಿಗೂ ಹಣ ಬಂದಿತ್ತು. ಅವರು ಚುನಾವಣೆಯಲ್ಲಿ ಸೋತುಹೋದರು. ಭರಾಟೆಯೆಲ್ಲ ಮುಗಿದು ಹದಿನೈದು ದಿನಗಳ ಬಳಿಕ ಅಜ್ಜೀಬಾಳರು ರಾಮಕೃಷ್ಣ ಹೆಗಡೆಯವರ ಮನೆಗೆ ಬಂದು ನಲವತ್ತೆಂಟು ಸಾವಿರದ ಐನೂರು ರೂ. ಚಿಲ್ಲರೆಯನ್ನು ಕೊಟ್ಟರು. ಹೆಗಡೆಯವರಿಗೆ ಕುತೂಹಲ. ಚುನಾವಣೆ ಖರ್ಚಿಗಾಗಿ ಪಕ್ಷ ನೀಡಿದ ಹಣದಲ್ಲಿ ಮಿಕ್ಕು ಉಳಿದದ್ದು ವಾಪಸ್ ಕೊಡುತ್ತಿದ್ದೇನೆ. ಇದು ಪಕ್ಷ ಕೊಟ್ಟ ಹಣಕ್ಕೆ ಲೆಕ್ಕ" ಎಂದರು ಅಜ್ಜೀಬಾಳರು.

ಅಂಥವರೂ ಇದ್ದರು. ಈಗಿನ ಚುನಾವಣೆಯಲ್ಲಿ ಈ ಎಲ್ಲ ಆದರ್ಶಗಳಿಗೆ ಬೆಲೆ ಇಲ್ಲ. ಅಷ್ಟಕ್ಕೂ ಇದು ಆದರ್ಶವಾಗಿ ಉಳಿದೂ ಇಲ್ಲ. ಇದು ಮೂರ್ಖತನದ ಪರಾಕಾಷ್ಠೆ ಅಷ್ಟೆ.

ಈ ಸಲದ ಚುನಾವಣೆಯಲ್ಲಿ ಹಣದ ಮಾತಿನ ಮುಂದೆ audacityಗೇನು ಬೆಲೆ? ನಮ್ಮಲ್ಲಿ ಒಬಾಮಾನೂ ಇಲ್ಲ ಸತ್ಯಭಾಮಾನೂ ಇಲ್ಲ.

(ಸ್ನೇಹ ಸೇತು: ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X