ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಹುತ ಆಗದೇ ಇದ್ದರೆ ನಮಗೆ ಯಾವುದೂ ಸಮಸ್ಯೆ ಅನಿಸುವುದೇ ಇಲ್ಲ!

By Staff
|
Google Oneindia Kannada News


ಮೊನ್ನೆ ಪುಟ್ಟ ಬಾಲಕಿಯಾಬ್ಬಳು ನಾಯಿಗೆ ತುತ್ತಾದಳೆಂದು ಈ ಸಮಸ್ಯೆ ಗಮನಕ್ಕೆ ಬಂತು. ಇಲ್ಲದಿದ್ದರೆ? ಅಂದರೆ ಏನೂ ಅನಾಹುತವಾಗದಿದ್ದರೆ ನಮಗೆ ಯಾವುದೂ ಸಮಸ್ಯೆಯೇ ಅಲ್ಲ. ನಾವು ತಣ್ಣಗೆ, ಸುಮ್ಮನೆ ಕುಳಿತಿರುತ್ತೇವೆ.

We will not wake up until something happens to usಇಲ್ಲೊಂದು ಪ್ರಸಂಗ ಹೇಳಬೇಕು. ಸುಮಾರು ಹನ್ನೆರಡು-ಹದಿಮೂರು ವರ್ಷಗಳ ಹಿಂದೆ ನಡೆದಿದ್ದು. ನಾನು ಆಗ ಕನ್ನಡಪ್ರಭ ಪತ್ರಿಕೆಯಲ್ಲಿ ಉಪಸಂಪಾದಕನಾಗಿದ್ದೆ. ಕೆಲ ದಿನಗಳ ಕಾಲ ಸಂಪಾದಕರಿಗೆ ಬರುವ ಪತ್ರ ವಿಭಾಗವನ್ನು ನೋಡಿಕೊಳ್ಳುತ್ತಿದ್ದೆ. ದಿನಕ್ಕೆ ನೂರಾರು ಪತ್ರಗಳು ಬರುತ್ತಿದ್ದವು. ಬದಾಮಿಯಿಂದ ಹಿರಿಯರೊಬ್ಬರು ಹದಿನೈದು ದಿನಗಳಿಗೊಮ್ಮೆ ಆ ಊರಿನಲ್ಲಿ ಮಿತಿಮೀರಿದ ಮಂಗಗಳ ಉಪಟಳದ ಬಗ್ಗೆ ಅಂಚೆಕಾರ್ಡ್‌ನಲ್ಲಿ ಬರೆಯುತ್ತಿದ್ದರು. ನಾನು ಅದನ್ನು ಎಡಿಟ್‌ ಮಾಡಿ ಪತ್ರ ವಿಭಾಗದಲ್ಲಿ ಪ್ರಕಟಿಸುತ್ತಿದ್ದೆ. ಹಾಗೆಂದು ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಆ ಯಜಮಾನರು ಬರೆಯುವುದನ್ನು ಮಾತ್ರ ನಿಲ್ಲಿ,ಸಲಿಲ್ಲ. ತಪ್ಪದೇ ಬರೆಯುತ್ತಿದ್ದರು. ವಿಷಯ ಒಂದೇ -ಕೋತಿಗಳ ಕಾಟ. ಇದೊಂದು ಗಂಭೀರ ಸಮಸ್ಯೆಯೇ ಇರಬೇಕು ಅನಿಸಿತು.

ಈ ವಿಷಯವನ್ನು ಸಂಪಾದಕ ವೈಎನ್‌ಕೆ ಅವರಿಗೆ ಹೇಳಿದೆ. ‘ ಸಾರ್‌, ನೀವು ಹೂಂ ಅಂದ್ರೆ ಒಂದು ಸಲ ಬದಾಮಿಗೆ ಹೋಗಿ ಬರುತ್ತೇನೆ ’ ಅಂದೆ. ಅವರು ಹೂಂ ಅಂದರು. ರಾತ್ರಿ ಬಸ್ಸನ್ನೇರಿ ಬೆಳಗ್ಗೆ ಬದಾಮಿ ಬಸ್‌ ನಿಲ್ದಾಣ ತಲುಪಿದೆ. ಕಣ್ಣುಜ್ಜುತ್ತಾ ಬಸ್ಸಿಳಿಯುತ್ತಿದ್ದಂತೆ -ಮಂಗಗಳಿವೆ ಎಚ್ಚರಿಕೆ ಎಂಬ ಬೋರ್ಡ್‌ ಕಣ್ಣಿಗೆ ಬಿತ್ತು. ಬ್ಯಾಗಿನ ಮೇಲೆ ನನಗರಿವಿಲ್ಲದಂತೆ ಹಿಡಿತ ಬಿಗಿಯಾಯಿತು. ಅದೆಲ್ಲಿ ಕುಳಿತಿತ್ತೋ ಆ ಮಂಗ, ಛಂಗನೆ ನನ್ನ ಮೇಲೆ ಎಗರಿತು. ಆ ಹೊಡೆತಕ್ಕೆ ಕೈಯಲ್ಲಿದ್ದ ಬ್ಯಾಗ್‌ ಕೆಳಗೆ ಬಿತ್ತು. ಅದರ ಉದ್ದೇಶವೇ ಅದಿರಬೇಕು, ಬ್ಯಾಗನ್ನು ಎತ್ತಿ ಪರಾರಿಯಾಗಬೇಕು. ಆದರೆ ಬ್ಯಾಗ್‌ ತುಸು ಭಾರವಾಗಿದ್ದರಿಂದ ಎತ್ತಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗೆ ಏಳೆಂಟು ಮಂದಿ ಕೂಗಿ ಗಲಾಟೆ ಮಾಡಿದ್ದರಿಂದ ಮಂಗ ಹಿಂದಕ್ಕೋಡಿತು. ಹಾಗೆ ಹೋಗುವಾಗಲೂ ಅದರ ಮುಖದಲ್ಲೊಂದು ಆಕ್ರೋಶವಿತ್ತು. ಲಾಡ್ಜ್‌ ಸೇರಿಕೊಂಡರೆ ಸಾಕಾಗಿತ್ತು. ಬರುವಾಗ ನೂರು ಮೀಟರ್‌ ದೂರದಲ್ಲಿ ಎಚ್ಚರಿಕೆ ಬೋರ್ಡ್‌ ಪರಿಸ್ಥಿತಿ ತೀವ್ರತೆ ಹೇಳುತ್ತಿತ್ತು.

ಕೋತಿಗಳ ಕತೆ ಕೇಳೋಣವೆಂದು ಊರಿನಲ್ಲಿ ನಡೆದರೆ, ಒಂದೊಂದೇ ಪ್ರಸಂಗ ಬಿಚ್ಚಿಕೊಳ್ಳತೊಡಗಿದವು. ಬದಾಮಿಯಲ್ಲಿ ಯಾರನ್ನು ಕೇಳಿದರೂ ಅವರವರ ಅನುಭವಗಳನ್ನು ಹೇಳುತ್ತಿದ್ದರು. ಎಲ್ಲರದೂ ಒಂದೇ ಗೋಳು. ‘ನಮ್ಮ ಮನಿ ಟೀವಿ ತಗೊಂಡು ಹೋಗಿತ್ರಿ. ನಮ್ಮ ಸೊಸಿ ಮಂಗಳಸೂತ್ರ ಎಗರಿಸಿಕೊಂಡು ಹೋಗಿತ್ರಿ. ಚೈನು, ಸರ, ಕನ್ನಡಕ ಕಿತ್ತುಕೊಂಡು ಹೋತ್ರಿ. ಮನೆಯಾಳಗೆ ದಾಳಿ ಮಾಡಿ ಪಾತ್ರಿ ಪಗಡಿ, ಕೈಗೆ ಸಿಕ್ಕಿದ ಸಾಮಾನುಗಳನ್ನು ಹೊತ್ತು ವಯ್ದಾವ್ರಿ. ನಮಗೆ ಕಳ್ಳಕಾಕರ ಭಯ ಇಲ್ರಿ. ಮಂಗಗಳನು ನೆನಪಿಸಿಕೊಂಡ್ರೆ ಭಯಾ ’ ಎಂದು ಹೆಂಗಸೊಬ್ಬಳು ಎಲ್ಲರ ಗೋಳು ತನ್ನದೇ ಎಂಬಂತೆ ಬಣ್ಣಿಸಿದ್ದಳು.

ಈ ಸಮಸ್ಯೆಯನ್ನು ಯಾರ ಹತ್ತಿರ ಅಂತ ಹೇಳೋದು?

ನಂದು ಅದು ಹೋತು, ಇದು ಹೋತು ಎಂದು ಜನ ಊರಿನ ಪೊಲೀಸ್‌ ಠಾಣೆಗೆ ಕಂಪ್ಲೆಂಟ್‌ ಕೊಟ್ಟಿದ್ದಾರೆ. ಮುಂದೆ ಠಾಣೆಗೆ ಹೋಗಿ ಪಿಎಸ್‌ಐ ಜತೆ ಕುಳಿತರೆ, ಆತ ತನ್ನ ಅಸಹಾಯ‘ಕತೆ’ಯನ್ನು ಹೇಳಿದ -‘ನಾನಾದರೂ ಏನ್‌ ಮಾಡ್ಲಿ? ದಿನಾ ಒಂದಿಲ್ಲೊಂದು ಕಂಪ್ಲೇಂಟು ಬರ್ತಾವ್ರಿ. ಕಂಪ್ಲೇಂಟು ಬರ್ಕೋತೀವಿ. ಆದ್ರ ಸಾಹೇಬ್ರ ಯಾರ ವಿರುದ್ಧ ಕ್ರಮ ಕೈಗೊಳ್ಳಲಿ ಹೇಳಿ? ಮಂಗ್ಯಾನ ವಿರುದ್ಧ ದೂರನ್ನು ಬರೆದುಕೊಲ್ಳಲಾ’

ಅಚ್ಚರಿಯಾಗಬಹುದು, ಬದಾಮಿ ಪೊಲೀಸ್‌ ಠಾಣೆಯಲ್ಲಿ ಅಲ್ಲಿನ ಮಂಗಗಳ ವಿರುದ್ಧ ನೂರಾರು ಕೇಸುಗಳು ದಾಖಲಾಗಿವೆ. ‘ಅಷ್ಟೇ ಅಲ್ಲ ಸಾರ್‌, ಎರಡು ಮರ್ಡರ್‌ ಕೇಸುಗಳೂ ಬುಕ್‌ ಆಗ್ಯಾವ’ ಎಂದ ಪಿಎಸ್‌ಐ.

ಬದಾಮಿಯ ಪುಷ್ಕರಣಿಗೆ ಹೊಂದಿಕೊಂಡಂತೆ ಎರಡು ದೊಡ್ಡ ಕಲ್ಲಿನ ಗುಡ್ಡ, ಬಂಡೆಗಳಿವೆ. ಒಮ್ಮೆ ವಿದೇಶಿ ಮಹಿಳೆಯಾಬ್ಬಳು ಗುಡ್ಡವನ್ನೇರಿ ಫೋಟೊ ತೆಗೆಯುವಾಗ ಮಂಗವೊಂದು ಆಕೆಯ ಮೇಲೆ ಹಾರಿದೆ. ಹಾರಿದ ಹೊಡೆತಕ್ಕೆ ಭಯದಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಸತ್ತು ಹೋಗಿದ್ದಾಳೆ. ಮತ್ತೊಂದು ಸಂದರ್ಭದಲ್ಲಿ ಸಕ್ಷ್ಕಿೂಟರ್‌ ಹಿಂಬದಿ ಕುಳಿತ ಮಹಿಳೆ ಮೇಲೆ ಕೋತಿ ಜಂಪ್‌ ಮಾಡಿದೆ. ಆಕೆಯೂ ಕಂಗಾಲಾಗಿ ಆಯತಪ್ಪಿ ಕೆಳಕ್ಕೆ ಸತ್ತು ಬಿದ್ದು ಸತ್ತು ಹೋಗಿದ್ದಾಳೆ.

ಹಾಗಂತ ಮಂಗಗಳನ್ನು ಸಾಯಿಸುವಂತಿಲ್ಲ. ಉತ್ತರ ಕರ್ನಾಟಕದಲ್ಲಿ ಮಂಗಗಳನ್ನು ಸಾಯಿಸುವುದು ಮಹಾಪರಾಧ. ಸಾಕ್ಷಾತ್‌ ಹನುಮಂತನ ಅವತಾರವೆಂದೇ ಭಾವಿಸುವ ಅಲ್ಲಿನ ಜನರ ಸ್ವಾಭಾವಿಕವಾಗಿ ಕೋತಿಯಾಂದು ಸತ್ತರೂ, ಊರ ತುಂಬಾ ಮೆರವಣಿಗೆಯಲ್ಲಿ ಹೊತ್ತೊಯ್ತು ‘ಶಾಸ್ತ್ರೋಕ್ತ’ವಾಗಿ ಅಂತ್ಯಸಂಸ್ಕಾರ ಮಾಡುತ್ತಾರೆ. ಇಂಥ ನಂಬಿಕೆಯಿಟ್ಟಿರುವ ಜನ ಕಷ್ಟಗಳನ್ನೆಲ್ಲ ನುಂಗಿಕೊಳ್ಳಬಲ್ಲರೇ ಹೊರತು ಸಾಯಿಸಲಾರರು. ಹೀಗಾಗಿ ಅಲ್ಲಿನ ನಗರಸಭೆ ಮಂಗಗಳನ್ನು ಹಿಡಿಯುವವರನ್ನು ನೇಮಿಸಿದೆ. ಅವರು ಮಂಗಗಳನ್ನು ಉಪಾಯವಾಗಿ ಹಿಡಿದು, ಗೋಣಿ ಚೀಲದೊಳಗೆ ತುಂಬಿ ಬೆಂಗಳೂರು, ಹುಬ್ಬಳ್ಳಿ, ಮುಂಬೈಗೆ ಹೋಗುವ ಬಸ್ಸುಗಳ ಟಾಪ್‌ಗೆ ಹಾಕಿ ಕಳಿಸುತ್ತಾರೆ. ಮೊದಲೇ ಈ ಮಂಗ್ಯಾಗಳು ಭಲೇ ಕಿಲಾಡಿ. ಲೋಕಾಪುರ, ಬಂಕಾಪುರ, ಇಳಕಲ್‌ ಬರುತ್ತಿದ್ದಂತೆಯೇ ಗೋಣಿ ಚೀಲವ್ನು ಕಚ್ಚಿ ಕಚ್ಚಿ ಹರಿದು ಹೊರ ಬಂದು ತಪ್ಪಿಸಿಕೊಂಡು ಪುನಃ ಬದಾಮಿಗೆ ಬಂದು ಬಿಡುತ್ತವೆ.

ಎಲ್ಲೂ ಈ ರೀತಿ ವರ್ತಿಸದ ಮಂಗ ಬದಾಮಿಯಲ್ಲಿ ಮಾತ್ರ ಹೀಗೇಕೆ ವರ್ತಿಸುತ್ತದೆ? ಆ ಊರಿನ ಹಿರಿಯರೊಬ್ಬರು ಹೇಳಿದರು -ಬದಾಮಿ ಅರಸರು ಮಂಗಗಳಿಗಾಗಿ ಅರಮನೆ ಕಟ್ಟಿಸಿದ್ದರಂತೆ. ಊರು ಬೆಳೆದಂತೆ ಅದು ನೆಲಸಮವಾಯಿತು. ಕಟ್ಟಡ ಶಿಥಿಲಗೊಂಡು ಧ್ವಂಸವಾಯಿತು. ಅಂದಿನಿಂದ ಈ ಮಂಗ ಉಗ್ರಗಾಮಿಯಂತೆ ವರ್ತಿಸಲಾರಂಭಿಸಿರಬಹುದು. ಈ ವಿಷಯವನ್ನೆಲ್ಲ ಸೇರಿಸಿ ಪತ್ರಿಕೆಯಲ್ಲಿ ಬರೆದಾಗ ವಿಧಾನಸಭೆಯಲ್ಲಿ ಎರಡು ದಿನ ಬಿಸಿಬಿಸಿ ಚರ್ಚೆಯಾಯಿತು. ಆದರೆ ಸಮಸ್ಯೆ ಮಾತ್ರ ಹಾಗೇ ಉಳಿಯಿತು.

ಮೊನ್ನೆ ನಮ್ಮ ಬದಾಮಿ ವರದಿಗಾರರನ್ನು ಸಂಪರ್ಕಿಸಿ ‘ಹೇಗಿದೆ ಮಂಗ?’ ಎಂದು ವಿಚಾರಿಸಿದೆ. ‘ಅವು ಸುಧಾರಿಸುವುದುಂಟಾ? ಸಮಸ್ಯೆ ಹಾಗೇ ಇದೆ’ ಎಂದು ಇತ್ತೀಚಿನ ಅವಾಂತರಗಳ ಪಟ್ಟಿ ಸಲ್ಲಿಸಿದರು. ಮುಂದೊಂದು ದಿನ ಮಂಗಗಳೆಲ್ಲ ದೊಡ್ಡ ಕಿತಾಪತಿ ಮಾಡಿ ಯಾರದೋ ಸಾವಿಗೆ ಕಾರಣವಾದರೆ ಮತ್ತೆ ಎಲ್ಲರೂ ಎದ್ದು ನಿಲ್ಲುತ್ತಾರೆ. ಬೊಬ್ಬೆ ಹಾಕುತ್ತಾರೆ.

ನೋಡ್ತಾ ಇರಿ, ಒಂದು ತಿಂಗಳ ನಂತರ ಈ ಬೀಡಾಡಿ ನಾಯಿ ಸಮಸ್ಯೆಯನ್ನು ನಾವು ಹೇಗೆ ಮರೆತಿರುತ್ತೇವೆಂದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X