Devdutt Padikkal: ವಿರಾಟ್ ಕೊಹ್ಲಿ, ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಕನ್ನಡಿಗ ದೇವದತ್ ಪಡಿಕ್ಕಲ್
RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ (ಏಪ್ರಿಲ್ 24) ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದ ಬಳಿಕ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ವಿರಾಟ್ ಕೊಹ್ಲಿ ಬಗ್ಗೆ ಮಹತ್ವದ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ.
ಗುಜರಾತ್ ಟೈಟಾನ್ಸ್ ನೀಡಿದ 206 ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಜಯದ ನಗೆ ಬೀರಿದೆ. ವಿರಾಟ್ ಕೊಹ್ಲಿ (44 ಎಸೆತಗಳಲ್ಲಿ 81 ರನ್) ಮತ್ತು ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ 55 ರನ್) ಕೇವಲ 59 ಎಸೆತಗಳಲ್ಲಿ 115 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಈ ಜೊತೆಯಾಟವು ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಆರ್‌ಸಿಬಿ ಪರವಾಗಿ ಬದಲಿಸಿತು. ಅಲ್ಲದೆಮ ಪಂದ್ಯದ ಅಂತ್ಯದಲ್ಲಿ ಕ್ರುನಾಲ್ ಪಾಂಡ್ಯ ಕೇವಲ 12 ಎಸೆತಗಳಲ್ಲಿ ವೇಗವಾಗಿ 23 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

'ಎರಡು ಅಂಕಗಳನ್ನು ಪಡೆಯುವುದೇ ದೊಡ್ಡ ಸಂಭ್ರಮ'
ಗೆಲುವಿನ ನಂತರ ಮಾತನಾಡಿದ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 200ಕ್ಕೂ ಅಧಿಕ ರನ್‌ಗಳ ಗುರಿ ಯಾವಾಗಲೂ ಕಷ್ಟಕರವಾಗಿರುತ್ತದೆ. ಏಕೆಂದರೆ ನೀವು ಪ್ರತಿ ಓವರ್‌ಗೆ ಸರಾಸರಿ 10 ರನ್ ಗಳಿಸುತ್ತಲೇ ಇರಬೇಕಾಗುತ್ತದೆ. ವಿರಾಟ್ ಮತ್ತು ದೇವ್‌ದತ್ ಪಡಿಕ್ಕಲ್ ಬ್ಯಾಟ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರು ಹೊಡೆದ ಕೆಲವು ಶಾಟ್‌ಗಳು ನಂಬಲಾಗದಂತಿದ್ದವು. ನಾನು ಕೂಡ ತಂಡದ ಗೆಲುವಿಗೆ ಕೊಡುಗೆ ನೀಡಿ ಪಂದ್ಯವನ್ನು ಮುಕ್ತಾಯಗೊಳಿಸಿದ್ದಕ್ಕೆ ಸಂತೋಷವಾಗಿದೆ. ಆ ಎರಡು ಅಂಕಗಳನ್ನು ಪಡೆಯುವುದಕ್ಕಿಂತ ದೊಡ್ಡ ಸಂಭ್ರಮ ಬೇರೊಂದಿಲ್ಲ," ಎಂದು ಹೇಳಿದರು.
ಬ್ಯಾಟಿಂಗ್ ಮಾಡಲು ಇದು ನಿಜಕ್ಕೂ ಉತ್ತಮವಾದ ಪಿಚ್ ಆಗಿತ್ತು. ಆದರೆ ಗುಜರಾತ್ ಟೈಟಾನ್ಸ್ ತಂಡವು 1 ಅಥವಾ 2 ವಿಕೆಟ್ ನಷ್ಟಕ್ಕೆ ಸುಮಾರು 170 ರನ್ ಗಳಿಸಿ ಬಲಿಷ್ಠವಾಗಿದ್ದ ಹಂತದಿಂದ ಅವರನ್ನು 205 ರನ್‌ಗಳಿಗೆ ನಿಯಂತ್ರಿಸಿದ್ದು ಬಹಳ ಶ್ಲಾಘನೀಯ ಪ್ರಯತ್ನ. ಈ ಯಶಸ್ಸಿನ ಶ್ರೇಯಸ್ಸು ತಂಡದ ಎಲ್ಲಾ ಬೌಲರ್‌ಗಳಿಗೆ ಸಲ್ಲಬೇಕು.
ದೇವದತ್ ಪಡಿಕ್ಕಲ್ ಹೇಳಿದ್ದೇನು?
"ನಾವು ಒಂದು ದೊಡ್ಡ ಜೊತೆಯಾಟವನ್ನು ಆಟಬೇಕು ಮತ್ತು ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿ ನಿಲ್ಲಿಸಬೇಕು ಎಂಬುದು ನಮಗೆ ತಿಳಿದಿತ್ತು. ನಮಗೆ ಒಮ್ಮೆ ಉತ್ತಮ ಆರಂಭ ಸಿಕ್ಕ ಮೇಲೆ, ಅದನ್ನು ಸಾಧ್ಯವಾದಷ್ಟು ಕೊಂಡೊಯ್ಯುವುದು ಮತ್ತು ಎದುರಾಳಿ ತಂಡದ ಮೇಲೆ ಸತತವಾಗಿ ಒತ್ತಡ ಹೇರುವುದೇ ನಮ್ಮ ಗುರಿಯಾಗಿತ್ತು," ಎಂದು ದೇವದತ್ ಪಡಿಕ್ಕಲ್ ಹೇಳಿದರು.
ಅಭಿಮಾನಿಗಳಿಗೆ ಪಡಿಕ್ಕಲ್ ವಿಶೇಷ ಸಂದೇಶ
ಇದೇ ಸಂದರ್ಭದಲ್ಲಿ ದೇವದತ್ ಪಡಿಕ್ಕಲ್ ಅವರು ಅಭಿಮಾನಿಗಳು ನೀಡಿದ ಅದ್ಭುತ ಬೆಂಬಲವನ್ನು ಶ್ಲಾಘಿಸಿದರು. ಅಭಿಮಾನಿಗಳ ಪ್ರೋತ್ಸಾಹದ ಬಗ್ಗೆ ಮಾತನಾಡಿದ ಪಡಿಕ್ಕಲ್, ಚಿನ್ನಸ್ವಾಮಿ ಮೈದಾನದ ಬೆಂಬಲವು ತಂಡಕ್ಕೆ ಯಾವಾಗಲೂ ವಿಶೇಷ ಶಕ್ತಿಯನ್ನು ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. "ಅಭಿಮಾನಿಗಳೇ, ನಿಮಗೆ ತುಂಬಾ ಧನ್ಯವಾದಗಳು. ನೀವು ನಿಜವಾಗಿಯೂ ನಮಗೆ ಬಹಳ ವಿಶೇಷವಾದವರು. ಫಲಿತಾಂಶ ಏನೇ ಇರಲಿ, ಪ್ರತಿಯೊಂದು ಪಂದ್ಯಕ್ಕೂ ನೀವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಂಡದ ಬೆನ್ನಿಗೆ ನಿಲ್ಲುತ್ತೀರಿ," ಎಂದು ಹೇಳಿದರು.
ವಿರಾಟ್ ಕೊಹ್ಲಿ ಸಾಧನೆಗಳು
ಈ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದರು. ಅವರು ಐಪಿಎಲ್ ಇತಿಹಾಸದಲ್ಲಿ 800 ಬೌಂಡರಿ ಮತ್ತು 300ಕ್ಕೂ ಅಧಿಕ ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಬರೆದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ ಎಂಬ ದಾಖಲೆ ಈಗ ಕೊಹ್ಲಿ ಹೆಸರಿನಲ್ಲಿದೆ.
ಅಲ್ಲದೆ, ಸಾರ್ವಕಾಲಿಕ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ನಂತರ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮತ್ತು ಅವರು ಐಪಿಎಲ್‌ನಲ್ಲಿ ಒಟ್ಟು 9,000 ರನ್‌ಗಳನ್ನು ಪೂರೈಸುವ ಸಮೀಪದಲ್ಲಿದ್ದಾರೆ. ಈಗ ಸದ್ಯ 8,989 ರನ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.












Click it and Unblock the Notifications