ಅನಾಹುತ ಆಗದೇ ಇದ್ದರೆ ನಮಗೆ ಯಾವುದೂ ಸಮಸ್ಯೆ ಅನಿಸುವುದೇ ಇಲ್ಲ!
ಈಗ ಬೆಂಕಿ ಆರಿಸಲು ನೀರಿಗಾಗಿ ಬಾವಿ ತೋಡುತ್ತಿದ್ದಾರೆ. ಹಾಗೆಂದು ಬೆಂಕಿ ಆರಿಸುತ್ತಾರೆಂದು ಭಾವಿಸುವುದು ಮೂರ್ಖತನ.
- ವಿಶ್ವೇಶ್ವರ ಭಟ್
ಎಂಟ್ಹತ್ತು ಬೀಡಾಡಿ ನಾಯಿಗಳು ಸೇರಿ ಎಂಟು ವರ್ಷದ ಬಾಲೆಯನ್ನು ಕಚ್ಚಿ ಕಚ್ಚಿ ಸಾಯಿಸಿದ ದೃಶ್ಯ ಮನಕಲಕುವಂಥದು. ಚಿರನಿದ್ರೆಯಲ್ಲಿ ಮಲಗಿದ ಆ ಪುಟ್ಟ ಕಂದಮ್ಮನ ಮುಖವನ್ನೊಮ್ಮೆ ದಿಟ್ಟಿಸಿದರೆ ಕರುಳು ಚಿವುಟಿದಂತಾಗುತ್ತದೆ. ಎಂಟ್ಹತ್ತು ನಾಯಿಗಳು ಹಠಾತ್ತನೆ ಆಕೆ ಮೇಲೆ ಎಗರಿ ಬಿದ್ದು ಕಚ್ಚಿ ಎಳೆದಾಡುತ್ತಿದ್ದರೆ ಆ ಬಾಲೆ ಅದೆಷ್ಚು ಭಯಪಟ್ಟಿತೋ? ಅದೆಷ್ಟು ಹಿಂಸೆ,ಯಾತನೆ ಅನುಭವಿಸಿತೋ ಏನೋ? ಹೆತ್ತ ಮಗು ಕಣ್ಣ ಮುಂದೆ ನಾಯಿಪಾಲಾಗಿದ್ದನ್ನು ಕಂಡು ಹೆತ್ತವರು ಅದೆಷ್ಟು ಮಮ್ಮಲ ಮರುಗಿದರೋ ಏನೋ? ಊಹಿಸಿಕೊಂಡರೇನೆ ಭಯಂಕರ ಸಂಕಟವಾಗುತ್ತದೆ.
ಆ ಹೊತ್ತಿನಲ್ಲಿ ಸ್ವಾಭಾವಿಕವಾಗಿ ನಮ್ಮ ಸಿಟ್ಟು, ಆಕ್ರೋಶ ಬೀಡಾಡಿ ನಾಯಿಗಳ ಮೇಲೆ, ಇವುಗಳನ್ನು ನಿಯಂತ್ರಿಸಲಾಗದ ಮಹಾನಗರಪಾಲಿಕೆ ಅಧಿಕಾರಿಗಳ ಮೇಲೆ, ರೇಬಿಸ್ ಲಸಿಕೆಯಿಲ್ಲದ ಆಸ್ಪತ್ರೆಗಳ ಮೇಲೆ, ಪ್ರಾಣಿಗಳ ಮೇಲೆ, ಈ ಸಂಘಗಳಿಗೆ ಪ್ರೇರಕಶಕ್ತಿಯಾದ ಮಾಜಿ ಮಂತ್ರಿ ಮೇನಕಾ ಗಾಂಧಿ ಮೇಲೆ ತಿರುಗಿದೆ. ತಪ್ಪಿಲ್ಲ ಬಿಡಿ. ಈ ಸಂದರ್ಭದಲ್ಲಿ ಯಾರೇ ಅಡ್ಡ ಬಾಯಿ ಹಾಕಿದರೂ ಯಾರೂ ಸಹಿಸುವುದಿಲ್ಲ. ನಮ್ಮೆಲ್ಲರ ಕೋಪ ತಾಪ ಆ ಮಟ್ಟದಲ್ಲಿದೆ. ಈ ಘಟನೆಗೆ ಸರಕಾರವೂ ಪ್ರತಿಕ್ರಿಯಿಸಿದೆ. ಕಚ್ಚುವ ನಾಯಿಗಳನ್ನು ಕೊಲ್ಲುವ, ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಘಟನೆಯಾಗದಿದ್ದರೆ ಈ ಬಗ್ಗೆ ಯಾರೂ ಚಕರಾವೆತ್ತುತ್ತಿರಲಿಲ್ಲ. ಬೀಡಾಡಿ ನಾಯಿಗಳು ಎಂಥ ಸಮಸ್ಯೆ ಹುಟ್ಟುಹಾಕಿವೆಯೆಂಬುದು ಸಹ ಅರ್ಥವಾಗುತ್ತಿರಲಿಲ್ಲ. ಒಂದು ಮಗುವನ್ನು ಬಲಿ ಕೊಟ್ಟ ನಂತರವೇ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಪರಿಸ್ಥಿತಿ ತೀವ್ರತೆ ಅರ್ಥವಾಗುತ್ತಿದೆ.
ಬೀಡಾಡಿ ನಾಯಿಗಳು ಇಂದು ನಿನ್ನೆಯ ಸಮಸ್ಯೆಯಲ್ಲ. ಪತ್ರಿಕೆಗಳಲ್ಲಿ ಕಾಲಕಾಲಕ್ಕೆ ಇದರ ಬಗ್ಗೆ ವಿಸ್ತುತ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಪಾಲಿಕೆ ಕಮಿಷನರ್ ಬೆಳಗ್ಗೆ ವಾಕಿಂಗ್ ಹೊರಟಾಗ ಹುಚ್ಚುನಾಯಿಯಾಂದು ಕಾಲಿಗೆ ಬಾಯಿ ಹಾಕಿದ್ದು ಸುದ್ದಿಯಾಗಿತ್ತು. ಎಲ್ಲ ಪತ್ರಿಕೆಗಳು ಬರೆದಿದ್ದೆ ಬರೆದಿದ್ದು. ಆದರೆ ಬೆಂಗಳೂರಿನಂಥ ನಗರದಲ್ಲಿ ನಾಯಿ ಕಡಿತಕ್ಕೆ ಪ್ರತಿದಿನ ಏನಿಲ್ಲವೆಂದರೂ ಐವತ್ತು ಮಂದಿ ತುತ್ತಾಗುತ್ತಾರೆಂಬುದು ಗೊತ್ತಿರಲಿಲ್ಲ.
ನಾಯಿ ಕಡಿತಕ್ಕೆ ಬೇಕಾದ ಲಸಿಕೆ, ಸರಕಾರಿ ಆಸ್ಪತ್ರೆಗಳಲ್ಲಿಲ್ಲವೆಂಬ ಸಂಗತಿ ಗೊತ್ತಾಗುವುದೂ ಆಗಲೇ. ಅಂದರೆ ಒಂದು ದೊಡ್ಡ ಅನಾಹುತವಾಗುವವರೆಗೆ ನೀವೆಷ್ಟೇ ಬಂದು ಸಮಸ್ಯೆ ಬಗ್ಗೆ ಹೇಳಿದರೂ ಯಾರೂ ಕೇಳಿಸಿಕೊಳ್ಳುವುದಿಲ್ಲ. ಕೇಳಿಸಿಕೊಂಡರೂ ಏನೂ ಮಾಡುವುದಿಲ್ಲ. ಹಾಗಾದರೆ ಈ ಸರಕಾರಕ್ಕೆ, ಪಾಲಿಕೆಗೆ ಬೀಡಾಡಿ ನಾಯಿ ಸಮಸ್ಯೆ ಗೊತ್ತಿರಲಿಲ್ಲವಾ? ಖಂಡಿತಾ ಗೊತ್ತಿತ್ತು. ಆದರೆ ಯಾರೂ ಏನನ್ನೂ ಮಾಡಲಿಲ್ಲ . ಒಂದು ಮಗು ಬಲಿ ಬೀಳುವುದನ್ನೇ ಕಾಯುತ್ತಿದ್ದರೆನಿಸುತ್ತದೆ.
ಈಗ ಬೆಂಕಿ ಆರಿಸಲು ನೀರಿಗಾಗಿ ಬಾವಿ ತೋಡುತ್ತಿದ್ದಾರೆ. ಹಾಗೆಂದು ಬೆಂಕಿ ಆರಿಸುತ್ತಾರೆಂದು ಭಾವಿಸುವುದು ಮೂರ್ಖತನ. ಒಂದು ತಿಂಗಳ ನಂತರ ನಾಯಿಗಳನ್ನು ಹಿಡಿಯುವ, ಕೊಲ್ಲುವ ಕೆಲಸ ಮುಂದುವರೆಯುತ್ತದೆ. ಹಿಡಿದ, ಕೊಂದ ನಾಯಿಗಳ ಸಂಖ್ಯೆ, ತಗುಲಿದ ಖರ್ಚು, ಆದ ಶ್ರಮ, ಪಟ್ಟ ಪಾಡು ಎಲ್ಲವನ್ನೂ ಅಧಿಕಾರಿಗಳು ಒಪ್ಪವಾಗಿ ಒಪ್ಪಿಸುತ್ತಾರೆ. ಹೌದೌದು ಸಮಸ್ಯೆ ಪರಿಹಾರ ಕಂಡಿತೆಂದು ಸುಮ್ಮನಾಗುತ್ತೇವೆ ಅಥವಾ ನಮ್ಮನ್ನು ನಂಬಿಸಿಕೊಳ್ಳುತ್ತೇವೆ, ಮುಂದೊಂದು ದಿನ ಪುನಃ ಈ ಸಮಸ್ಯೆ ಎದುರಾಗುವ ತನಕ. ಬಹುತೇಕ ಸಂದರ್ಭಗಳಲ್ಲಿ ಒಂದು ವಾರಕ್ಕೆ ಮರೆತು ಸುಮ್ಮನಾಗುವುದು ನಮ್ಮ ಜಾಯಮಾನ. ಪ್ರತಿ ಸಮಸ್ಯೆಯನ್ನು ನಾವು tackle ಮಾಡುವ ರೀತಿ ಇದು.
ಬೆಂಗಳೂರಿನಂಥ ನಗರದಲ್ಲಿ ಬೀಡಾಡಿ ನಾಯಿಗಳು ಎಷ್ಟಿವೆ, ಗಣತಿ ಮಾಡಿ ಎಷ್ಟು ವರ್ಷಗಳಾದವು, ಹಿಡಿದ ನಾಯಿಗಳನ್ನು ಕೊಲ್ಲದೇ rehabilitate ಮಾಡುವುದು ಹೇಗೆ, ಜನನನಿಯಂತ್ರಿಸುವುದು ಹೇಗೆ, ನಾಯಿ ಸಾಕಾಣಿಕೆ ಸಂಸ್ಕೃತಿಯನ್ನು ಬದಲಿಸುವುದು ಎಂತು, ನಾಯಿ ಮಾಲೀಕರಿಗೊಂದು ಸಂಹಿತೆ ಇದೆಯಾ, ನಾಯಿಗಳಿಗೂ ಬದುಕುವ ಹಕ್ಕು ಇಲ್ಲವಾ, ಕೊಲ್ಲುವುದೊಂದೇ ಪರಿಹಾರವಾ, ಅಂತೂ ಈ ಸಮಸ್ಯೆಯ ಮೂಲಬಿಂದು ಯಾವುದು ಹಾಗೂ ಅವುಗಳಿಗೆಲ್ಲ ಅನ್ವಯವಾಗುವ ಸೂತ್ರವೇನು ಎಂಬುದನ್ನು ತಿಳಿಯದೇ ಎಂಥ ತುರ್ತುಕ್ರಮ ಕೈಗೊಂಡರೂ ಅವೆಲ್ಲ ಕ್ಷಣಿಕ. ಮುಂದೊಂದು ದಿನ ಸಮಸ್ಯೆ ಬೃಹದಾಕಾರದಲ್ಲಿ ಕಾಣಿಸಿಕೊಳ್ಳುತ್ತದೆ.
ಐದು ಲಕ್ಷ ಬೀದಿನಾಯಿಗಳಿರುವ ಮುಂಬೈ ನಗರದಲ್ಲಿ ನಾಯಿ ಹಿಡಿಯುವುದೊಂದು ದೊಡ್ಡ ಇಂಡಸ್ಟ್ರಿ. ಅಲ್ಲಿನ ಪಾಲಿಕೆ ಬೀಡಾಡಿ ನಾಯಿಗಳಿಗಾಗಿ ಏನಿಲ್ಲವೆಂದರೂ ಐವತ್ತು ಕೋಟಿ ರೂ. ವ್ಯಯಿಸುತ್ತದೆ. ನಾಯಿ ಹಿಡಿಯುವ ಟೆಂಡರ್ ನಿಯಂತ್ರಿಸಲು ಅಂಡರ್‌ವರ್ಲ್ಡ್ ಇದೆ. ಡಾಗ್ ಮಾಫಿಯಾ ಇದೆ. ರಾಜಕಾರಣಿಗಳು, ಅಧಿಕಾರಿಗಳು ಇದರಲ್ಲಿ ಷಾಮೀಲಾಗುತ್ತಾರೆ. ಈ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಮನಸ್ತಾಪವಾಗಿ ಒಂದೆರಡು ಕೊಲೆಗಳಾಗುತ್ತವೆ. ನಮ್ಮಲ್ಲಿ ಇದು ಆ ಪ್ರಮಾಣದಲ್ಲಿ ಬೆಳೆದಿಲ್ಲ.












Click it and Unblock the Notifications