• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗಳವಾಡಲು ಬೆಳಗಾವಿಗೇ ಹೋಗಬೇಕಿತ್ತಾ?

By Staff
|
Vishweshwar Bhat ವಿಶ್ವೇಶ್ವರ ಭಟ್‌

ನಮ್ಮ ರಾಜಕಾರಣಿಗಳು ಯಾವುದನ್ನೂ ಸುಮ್ಮನೆ ಬಿಟ್ಟವರಲ್ಲ, ರಾಜಕಾರಣ ಮಾಡದೇ. ಪ್ರತಿ ಕ್ಷೇತ್ರ, ಪ್ರತಿ ವಿಷಯದಲ್ಲೂ ರಾಜಕೀಯ ಮಾಡದಿದ್ದರೆ ಅವರಿಗೆ ತಿಂದಿದ್ದು ಮೈಗೆ ಹತ್ತುವುದಿಲ್ಲ. ರಾಜಕಾರಣಿಗಳ ಬಗ್ಗೆ ಎಷ್ಟೇ ಬರೆದರೂ ಅಷ್ಟೆ, ಏನೇ ಬರೆದರೂ ಅಷ್ಟೆ, ಒಟ್ಟಾರೆ ಅಷ್ಟಕ್ಕಷ್ಟೆ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದೇವೆ. ಅವರು ರಾಜಕಾರಣ ಮಾಡುವುದನ್ನಂತೂ ಬಿಟ್ಟಿಲ್ಲ, ಬಿಡುವುದೂ ಇಲ್ಲ.

ಮೊನ್ನೆ ಬೆಂಗಳೂರಿನಿಂದ ಬೆಳಗಾವಿಗೆ ಕಾರಿನಲ್ಲಿ ಹೋಗುತ್ತಿದ್ದೆ. ಸುಮಾರು ಐನೂರು ಕಿಲೋಮೀಟರ್‌ ದೂರದ ಪ್ರಯಾಣಕ್ಕೆ ಏನಿಲ್ಲವೆಂದರೂ ಒಂಬತ್ತು-ಹತ್ತು ತಾಸಾದರೂ ಬೇಕಾಗಬಹುದೆಂದು ಅಂದುಕೊಂಡಿದ್ದೆ. ಆದರೆ ಬೇಕಾಗಿದ್ದು ಬರೋಬ್ಬರಿ ಹದಿಮೂರು ತಾಸು. ವಾಜಪೇಯಿ ಸರ್ಕಾರವಿದ್ದಾಗ ಸುವರ್ಣ ಚತುಷ್ಪಥ ಯೋಜನೆಯನ್ವಯ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಸ್ತೆ ನಿರ್ಮಿಸಲು ತೀರ್ಮಾನಿಸಲಾಯಿತು. ಯೋಜನೆ ಅನುಷ್ಠಾನವೂ ಆಯಿತು. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನೇ ಈ ಯೋಜನೆಗೆ ಸೇರಿಸಿ ರಸ್ತೆಯನ್ನು ಅಗಲಗೊಳಿಸಲಾಯಿತು. ಈ ರಸ್ತೆ ಅಂತರಾಷ್ಟ್ರೀಯ ಸ್ವರೂಪದಲ್ಲಿತ್ತು. ಇಕ್ಕೆಲಗಳಲ್ಲಿ ಕಬ್ಬಿಣದ ಬೇಲಿಗಳುಳ್ಳ ವಿಶಾಲ ರಸ್ತೆಯಲ್ಲಿ ಸಂಚರಿಸುವುದೇ ಒಂದು ಅನುಭವ. ಯಾವ ಅಡೆತಡೆಗಳಿಲ್ಲದ, ಉಬ್ಬು ತಗ್ಗುಗಳಿಲ್ಲದ ಈ ರಸ್ತೆ ಇಡೀ ದೇಶವನ್ನು ಒಂದು ಗೂಡಿಸುವ ಮಹಾನ್‌ ಉದ್ದೇಶ ಹೊಂದಿತ್ತು. ಇಡೀ ಯೋಜನೆ ಸುಮಾರು ಎಪ್ಪತ್ತರಷ್ಟು ಮುಗಿದಿತ್ತು. ಇನ್ನೇನು ರಸ್ತೆ ಕಾಮಗಾರಿ ಮುಗಿಯಬೇಕೆನ್ನುವಷ್ಟರಲ್ಲಿ ವಾಜಪೇಯಿ ಸರ್ಕಾರ ಹೊರಟು ಹೋಯಿತು. ಅಲ್ಲಿಗೆ ಆ ರಸ್ತೆಯ ಕತೆಯೂ ಮುಗಿದು ಹೋಯಿತು.

ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶದಲ್ಲಿ ಇಂಥ ರಸ್ತೆಯನ್ನು ಯಾರೂ ನಿರ್ಮಿಸಿಲ್ಲ, ರಸ್ತೆಯೆಂದರೆ ಹೀಗಿರಬೇಕು, ಗಂಟೆಗೆ ನೂರು ಕಿಲೋಮೀಟರ್‌ ವೇಗದಲ್ಲಿ ಚಲಿಸುವ ಕಾಲ ನಮ್ಮಲ್ಲೂ ಬಂತಲ್ಲ ಎಂದು ಜನ ಈ ರಸ್ತೆ ಬಗ್ಗೆ ಹೊಗಳಲಾರಂಭಿಸಿದರು. ಇವರೆಲ್ಲರ ಬಾಯಲ್ಲಿ ಇದು ವಾಜಪೇಯಿ ರಸ್ತೆ ಎಂದೇ ಕರೆಸಿಕೊಳ್ಳುತ್ತಿತ್ತು. ಇಷ್ಟೇ ಸಾಕಾಯಿತು. ಇದೇ ಮುಳುವಾಯಿತು. ಈ ರಸ್ತೆಯೇನಾದರೂ ಪೂರ್ತಿಯಾದರೆ ವಾಜಪೇಯಿಗೆ ಕ್ರೆಡಿಟ್‌ ಸಿಗುತ್ತದೆಂದು ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಮುಂದುವರಿಸಲೇ ಇಲ್ಲ. ರಸ್ತೆಯಲ್ಲಿ ಅಲ್ಲಲ್ಲಿ ಹಾಕಿದ್ದ ವಾಜಪೇಯಿ ಫೋಟೋ, ಕಮಾನುಗಳನ್ನು ತೆಗೆಸಿಹಾಕಿತು. ಅದಕ್ಕೆ ತಕರಾರಿಲ್ಲ. ಆದರೆ ವಾಜಪೇಯಿಗೆ ಇದರಿಂದ ಹೆಸರು ಬಂದುಬಿಡುವುದೆಂಬ ಏಕೈಕ ಉದ್ದೇಶಕ್ಕೆ ಈ ಯೋಜನೆಯನ್ನೇ ನಿಲ್ಲಿಸಿಬಿಡುವುದಾ? ವಾಜಪೇಯಿ ಸರ್ಕಾರವೇನಾದರೂ ಇದ್ದಿದ್ದರೆ, ಈ ಯೋಜನೆ ಇಷ್ಟೊತ್ತಿಗೆ ಪೂರ್ತಿಯಾಗುತ್ತಿತ್ತು.

ಆದರೆ ಕಾಂಗ್ರೆಸ್‌ ಸರ್ಕಾರ ಈ ಯೋಜನೆ ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದ ಕೆಲಸ ನಡೆಯುತ್ತಿದೆ. ಅದ್ಯಾವಾಗ ಮುಗಿಯುವುದೋ ಆ ದೇವನೇ ಬಲ್ಲ. ಈ ಅವಧಿಯಲ್ಲಿ ಅರ್ಧಂಬರ್ಧ ಕೆಲಸದಿಂದ ಪ್ರಯಾಣಿಕರಿಗೆ ತೀವ್ರ ಅನಾನುಕೂಲವಾಗುತ್ತಿದೆ. ಏಕಾಏಕಿ ಬಂದುಬಿಡುವ ತಿರುವುಗಳು, ಅಡ್ಡದಾರಿ, ರಸ್ತೆ ವಿಭಜಕಗಳಿಂದ ಪ್ರಯಾಣ ದುಸ್ತರವಾಗಿ ಪರಿಣಮಿಸಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ರಸ್ತೆಗಾಗಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ವಿದೇಶಿ ಸಾಲ ತಂದು ಸುರಿಯಲಾಗಿದೆ. ಆದರೆ ರಸ್ತೆ ಮಾತ್ರ ಪೂರ್ಣವಾಗಿಲ್ಲ. ಮಾದರಿಯೆನಿಸಬಹುದಾದ ರಸ್ತೆ, ರಾಜಕೀಯದ ಕೊಂಪೆಗೆ ಬಿದ್ದು ತೊಳಲಾಡುತ್ತಿದೆ.

ಇಷ್ಟಕ್ಕೂ ತೊಂದರೆಯಾಗುತ್ತಿರುವುದು ಜನರಿಗೆ ತಾನೆ? ಖರ್ಚಾಗಿದ್ದು ಜನರ ದುಡ್ಡು ತಾನೆ? ಒಂದು ಕ್ಷುಲ್ಲಕ ಕಾರಣಕ್ಕೆ ಒಂದು ಅದ್ಭುತ ಯೋಜನೆಯನ್ನು ಹೀಗೆ ಕೊಂದುಬಿಡುವುದಾ? ಹೀಗೆ ಮಾಡಿದ್ದರಿಂದ ಏನು ಸಾಧಿಸಿದಂತಾಯಿತು? ಇದರಿಂದ ಯಾರಿಗೆ ಪ್ರಯೋಜನವಾಯಿತು? ಈ ಮಧ್ಯೆ ರಸ್ತೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದರಿಂದ ಡಾಂಬರು ಕಿತ್ತುಹೋಗುತ್ತಿದೆ. ರಸ್ತೆಯ ತುದಿ ಮುಕ್ಕಾಗುತ್ತಿದೆ. ಇಕ್ಕೆಲಗಳಲ್ಲಿ ಹಾಕಿದ ಕಬ್ಬಿಣದ ಬೇಲಿ ಗುಜರಿ ಅಂಗಡಿಯ ತೂಕದಲ್ಲಿ ಪ್ರತ್ಯಕ್ಷವಾಗುತ್ತಿದೆ. ಕೆಲವೆಡೆ ರಸ್ತೆಯ ಮಧ್ಯದಲ್ಲಿ ಕಾಮಗಾರಿಗಾಗಿ ತಂದು ಹಾಕಿದ ಮಣ್ಣುರಾಶಿ ರಸ್ತೆಯ ಮೇಲೆಲ್ಲ ಹರಡಿ ಟಾರು ರಸ್ತೆಯನ್ನೇ ನುಂಗಿ ಹಾಕಿದೆ. ಇವೆಲ್ಲವುಗಳಿಂದ ಅಪಘಾತಗಳಿಗೆ ರಹದಾರಿಯಾಗಿದೆ. ಏನು ಮಾಡೋಣ ಹೇಳಿ? ಯಾರೂ ಏನೂ ಮಾಡದ ಸ್ಥಿತಿ.

ಇದೇ ಯೋಚನೆಯಲ್ಲಿ ಬೆಳಗಾವಿ ತಲುಪಿದ್ದಾಯಿತು. ಮನಸ್ಸು ಮಾಡಿದರೆ ನಮ್ಮ ರಾಜಕಾರಣಿಗಳು ಎಷ್ಟು ಸುಲಭವಾಗಿ ಹೇಗೆ ಅಡೆತಡೆಯಾಡ್ಡಿ ಜನರಿಗೆ ತೊಂದರೆ ಕೊಡಬಲ್ಲರು ಎನಿಸಿತು. ಉದ್ದೇಶ ಸ್ಪಷ್ಟ. ಬೇರೆಯವರಿಗೆ ಕ್ರೆಡಿಟ್‌ ಹೋಗಬಾರದು ಅಥವಾ ಎಲ್ಲವೂ ತನಗೇ ಸಿಗಬೇಕು. ಇದರಿಂದ ಜನರಿಗೆ ತೊಂದರೆಯಾದರೆ ಆಗಲಿ, ಅಷ್ಟೆ.

ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಐತಿಹಾಸಿಕ ವಿಶೇಷ ಅಧಿವೇಶನವಾದರೂ ಉಳಿದ ಅಧಿವೇಶನಗಳಂತಾಗದೇ ವಿಶೇಷವಾಗಿರಬಹುದು ಎಂದು ಭಾವಿಸಿ ಸದನದಲ್ಲಿ ಹೋಗಿ ಕುಳಿತರೆ ಅಲ್ಲೂ ಅದೇ ರಾಜಕೀಯ. ಕ್ಷುಲ್ಲಕ ರಾಜಕಾರಣ. ಮೊದಲ ಬಾರಿಗೆ ಇಂಥ ಅಧಿವೇಶನವನ್ನು ಬೆಂಗಳೂರಿನ ಹೊರಗೆ ಕರೆಯಲಾಗಿದೆ, ಕನ್ನಡ, ಗಡಿ ಇನ್ನಿತರ ಪ್ರಮುಖ ವಿಷಯಗಳನ್ನು ಚರ್ಚಿಸಬೇಕು, ಎಂಇಎಸ್‌ನವರು ನಮಗೆ ತಿರುಗೇಟು ನೀಡಲು ಅವರೂ ಸಮಾವೇಶ ಮಾಡುತ್ತಿದ್ದಾರೆ, ಆದ್ದರಿಂದ ಐದು ದಿನ ಪಟ್ಟಾಗಿ ಕುಳಿತು ಒಂದಷ್ಟು ಪ್ರಮುಖ ವಿಷಯಗಳನ್ನು ಚರ್ಚಿಸೋಣ, ರಾಜ್ಯದ ಜನತೆ ನಮ್ಮ ಮೇಲೆ ಸಾಕಷ್ಟು ನಿರೀಕ್ಷೆಯಿರಿಸಿಕೊಂಡಿದ್ದಾರೆ, ಪಕ್ಕದ ಮಹಾರಾಷ್ಟ್ರದವರೂ ಇಲ್ಲೇನಾಗುತ್ತಿದೆಯೆಂದು ಕುತೂಹಲದಿಂದ ನೋಡುತ್ತಿದ್ದಾರೆ, ಈ ಯಾವ ಸಂಗತಿಗಳನ್ನೂ ಲೆಕ್ಕಿಸದೇ ನಮ್ಮ ಶಾಸಕರು, ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದರು. ಇವರನ್ನು ನೋಡಿದ ಯಾರಿಗಾದರೂ ಇವರಿಗೆ ಸ್ವಲ್ಪವಾದರೂ ಹೊಣೆಗಾರಿಕೆ, ನಾಚಿಕೆ ಇದೆಯಾ ಎಂದು ಪದೇ ಪದೆ ಪ್ರಶ್ನಿಸಿಕೊಳ್ಳುವಂತಿತ್ತು ಇವರ ವರ್ತನೆ ಹಾಗೂ ಸಭಾ ನಡವಳಿಕೆ. ಹೆಜ್ಜೆ ಹೆಜ್ಜೆಗೂ ಆಡಳಿತ ಪಕ್ಷದ ಮೂದಲಿಕೆ, ಮಾತಿನ ಭರ್ಚಿ. ಕಲಾಪಕ್ಕೆ ಅಡ್ಡಿಪಡಿಸಲು ಶತಾಯಗತಾಯ ಯತ್ನ. ನಿರಾತಂಕವಾಗಿ ಕಲಾಪ ನಡೆಸಲು ಬಿಟ್ಟರೆ ಈ ಐತಿಹಾಸಿಕ ಅಧಿವೇಶನ ನಡೆಸಿದ ಎಲ್ಲ ಕ್ರೆಡಿಟ್ಟು ಆಡಳಿತ ಪಕ್ಷಗಳಿಗೆ ಸಿಕ್ಕಿಬಿಟ್ಟರೆ? ಇದೆಂಥ ಮೆಂಟಾಲಿಟಿ? ಇಲ್ಲಿ ಯಾವ ಒಂದು ಪಕ್ಷವನ್ನೂ ಟಾರ್ಗೆಟ್‌ ಮಾಡುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್‌ ಸರ್ಕಾರ ಈ ಅಧಿವೇಶನ ಏರ್ಪಡಿಸಿತ್ತೆಂದು ಭಾವಿಸಿ, ಜೆಡಿ(ಎಸ್‌), ಬಿಜೆಪಿಯವರು ಅಡ್ಡಿಪಡಿಸುವ ಕೈಂಕರ್ಯಕ್ಕೆ ಮುಂದಾಗುತ್ತಿದ್ದರು. ಇಲ್ಲಿ ಯಾರೂ ಸುಬಗರಲ್ಲ. ಬುದ್ಧಿ ಮೊಣಕಾಲ ಕೆಳಗೇ. ಪ್ರಜಾಪ್ರಭುತ್ವದಲ್ಲಿ ಚರ್ಚೆ, ಸಂವಾದದಿಂದಲೇ ಎಲ್ಲವೂ ಬಗೆಹರಿಯಬೇಕು, ಇದರಿಂದಲೇ ನಿರ್ಧಾರಕ್ಕೆ ಬರಬೇಕು ಖರೆ. ಹಾಗೆಂದು ಪ್ರತಿಯಾಂದಕ್ಕೂ ರಾಜಕಾರಣದ ಕ್ಯಾತೆ ತೆಗೆಯುತ್ತಾ ಕುಳಿತರೆ ಹೇಗೆ? ಸದನದ ಕಲಾಪದಲ್ಲಿ ಯಾರಿಗೂ ಆಸಕ್ತಿಯಿಲ್ಲ. ಕಲಾಪಕ್ಕೆ ಅಡ್ಡಿಪಡಿಸುವುದು, ಸದನದಲ್ಲಿ ಕೂಗುವುದು, ಸಭಾತ್ಯಾಗ ಮಾಡುವುದನ್ನೇ ಕೆಲವರು ಚಾಳಿ ಮಾಡಿಕೊಂಡಿದ್ದಾರೆ. ಈವರೆಗೆ ನಡೆದ ಮೂರು ದಿನಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಯಲೇ ಇಲ್ಲ. ಯಾಕೆ ನಮ್ಮ ಜನಪ್ರತಿನಿಧಿಗಳೆನಿಸಿಕೊಂಡವರಿಗೆ ಈ ದುರ್ಬುದ್ಧಿ? ಇಂಥ ನಡೆ-ನುಡಿಗಳಿಂದ ಇವರ್ಯಾವ ಸಾರ್ಥಕ್ಯ ಸಾಧಿಸುತ್ತಾರೆ?

ನೋಡಿ, ಕುಮಾರಸ್ವಾಮಿಯವರು ಕೇವಲ ಹತ್ತು ದಿನಗಳೊಳಗೆ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ಕರೆಯಬೇಕೆಂದು ನಿರ್ಧರಿಸುತ್ತಾರೆ. ಕೇವಲ ಆರು ದಿನಗಳೊಳಗೆ ಪೂರ್ಣ ತಯಾರಿ ಮಾಡುತ್ತಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್ತು ಯಥಾವತ್ತು ತಲೆಯೆತ್ತಿ ನಿಲ್ಲುತ್ತದೆ. ಅಂದರೆ ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದಂತಾಯಿತು. ಹಾಗೆಯೇ ಇಲ್ಲಿಯವರೆಗೆ ಏನು ಬೇಕಾದರೂ ಮಾಡಲು ಮನಸ್ಸು ಮಾಡಿಲ್ಲ ಎಂದಂತೆಯೂ ಆಯಿತು.

ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುವ ಸರ್ಕಾರಕ್ಕೆ ಕನ್ನಡವನ್ನು ಇನ್ನೂ ಆಡಳಿತ ಭಾಷೆಯಾಗಿ ಮಾಡಲು ಏಕೆ ಸಾಧ್ಯವಾಗಿಲ್ಲ? ಹಾಗೆಯೇ ಸರೋಜಿನಿ ಮಹಿಷಿ ವರದಿಯನ್ನು ಸಂಪೂರ್ಣ ಅನುಷ್ಠಾನಗೊಲಿಸಲು ಏಕೆ ಆಗಿಲ್ಲ? ಕನ್ನಡವನ್ನೇ ಬಳಸುವುದಿಲ್ಲ ಎಂದು ಧಾರ್ಷ್ಟ್ಯದಿಂದ ಹೇಳಿಕೊಳ್ಳುವ ಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಏಕೆ ಆಗಿಲ್ಲ? ಒಂದು ನೀರಾವರಿ ಯೋಜನೆ ಪೂರ್ಣಗೊಳಿಸಲು ಇಪ್ಪತ್ತೆೈದು-ಮೂವತ್ತು ವರ್ಷಗಳನ್ನೇಕೆ ತೆಗೆದುಕೊಳ್ಳುತ್ತದೆ? ರಸ್ತೆ, ಮೋರಿ, ಚರಂಡಿಗಳೆಲ್ಲ ವರ್ಷವಾದರೂ ಏಕೆ ಮುಗಿಯುವುದಿಲ್ಲ? ಸರ್ಕಾರಿ ಕಚೇರಿಗಳಲ್ಲಿ ಫೈಲು ಆರು ತಿಂಗಳಾದರೂ ಮುಂದಕ್ಕೇಕೆ ಹೋಗುವುದಿಲ್ಲ? ಯಾಕೆ ಸರ್ಕಾರವೆಂದರೆ ವಿಳಂಬ, ದುರವಸ್ಥೆ, ಅವ್ಯವಸ್ಥೆ, ಹೊಲಸು, ಅವ್ಯವಹಾರ, ಅಶಿಸ್ತು, ಅಶ್ರದ್ಧೆ, ಅನಾಸಕ್ತಿ?? ಅಂದರೆ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಎಂದಂತಾಯಿತು. ತಾನು ಗಂಡಾಂತರಕ್ಕೆ, ಮುಜುಗರಕ್ಕೆ ಸಿಲುಕಿದಾಗ ಅದರಿಂದ ಪಾರಾಗಲು ಏಕಾಏಕಿ ಏನು ಬೇಕಾದರೂ ಮಾಡುವ ಸರ್ಕಾರ, ಉಳಿದ ಸಂದರ್ಭದಲ್ಲಿ ಏನೂ ಮಾಡುವುದಿಲ್ಲ, ರಾಜಕೀಯ ಮಾಡುವುದನ್ನು ಬಿಟ್ಟು. ಹಾಗೆಯೇ ಸರ್ಕಾರ ಏನೂ ಮಾಡದಾಗ ಸುಮ್ಮನಿರುವ ಪ್ರತಿಪಕ್ಷ, ಏನೋ ಮಾಡಲು ಹೊರಟಾಗ, ಕಾಲಿಗೆ ಅಡ್ಡ ಹಾಕಿ ಕೆಡವಲು ಪ್ರಯತ್ನಿಸುತ್ತದೆ. ಹೇಗಿದೆ ಈ ದರಿದ್ರ ರಾಜಕಾರಣ?

ಅಧಿವೇಶನ ನಡೆಸಿದ್ದೊಂದೇ ಸಾಧನೆಯಾಗಬಾರದು. ಈ ಸಾಧನೆಯ ಕೀರ್ತಿಯನ್ನು ಬೇಕಾದರೆ ಜಿಲ್ಲಾಧಿಕಾರಿ ಶಾಲಿನಿ ರಜನೀಶ್‌ ಅಥವಾ ಅಧಿವೇಶನಕ್ಕೆ ಜಾಗ ಕೊಟ್ಟ ಪ್ರಭಾಕರ ಕೋರೆ ತೆಗೆದುಕೊಳ್ಳಲಿ. ಆದರೆ ಅಧಿವೇಶನದಲ್ಲಿ ಒಂದಷ್ಟು ಜನಪರ ನಿರ್ಧಾರ ತೆಗೆದುಕೊಂಡಿದ್ದರ ಕ್ರೆಡಿಟ್ಟನ್ನು ಸರ್ಕಾರವೊಂದೇ ಅಲ್ಲ ಎಲ್ಲ ಶಾಸಕರು ತೆಗೆದುಕೊಳ್ಳಲಿ. ಆದರೆ ಈ ಅಧಿವೇಶನ ಹಾಗೆ ಆಗಲೇ ಇಲ್ಲ. ‘ಎಲ್ಲ ಬಿಟ್ಟ ಬಂಗಿ ನೆಟ್ಟ’ ಎಂಬಂತೆ ಎಲ್ಲ ಬಿಟ್ಟು ಬೆಳಗಾವಿಗೆ ಹೋದರೂ ನಮ್ಮ ಜನಪ್ರತಿನಿಧಿಗಳು, ಕಾಲು ಕೆದರಿ ಜಗಳ ತೆಗೆಯುವುದು, ಕಲಾಪಕ್ಕೆ ಅಡ್ಡಿಪಡಿಸುವುದು, ಗೂಳಿ, ಹುಚ್ಚುನಾಯಿ ಎಂದೆಲ್ಲ ಹಳಿಯುವುದು, ಸಭಾತ್ಯಾಗ ಮಾಡುವುದು, ಸದನದಲ್ಲಿ ಅಸಭ್ಯವಾಗಿ ವರ್ತಿಸುವುದು ಮುಂತಾದ ಅನಪೇಕ್ಷಿತ, ಅಸಹ್ಯ ಕಾರ್ಯಗಳನ್ನು ಮಾಡದೇ ಬಿಡಲಿಲ್ಲ. ‘ಹುಟ್ಟುಗುಣ ಘಟ್ಟ ಹತ್ತಿದರೂ ಬಿಡೊಲ್ಲ’ ಎಂಬಂತೆ ಅಲ್ಲಿ ಹೋಗಿಯೂ ತಮ್ಮ ನಿಜ ಬಣ್ಣವನ್ನು ತೋರಿದರು. ಅಧಿವೇಶನದ ಮೂಲ ಆಶಯಕ್ಕೇ ತಿಲಾಂಜಲಿಯಿಟ್ಟರು. ಇವರನ್ನೆಲ್ಲ ನಮ್ಮ ನಾಯಕರು ಎಂದು ಒಪ್ಪಿಕೊಲ್ಲಬೇಕಾಗಿ ಬಂದಿರುವುದೇ ದುರಂತ. ಇವರು ನಮಗೆ ಯಾವ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೋ ಅರ್ಥವಾಗುತ್ತಿಲ್ಲ. ಯಾವ ಕಾರಣಕ್ಕೆ ನಾಯಕರೆನ್ನಬೇಕೋ ತಿಳಿಯುತ್ತಿಲ್ಲ.

ಬೆಳಗಾವಿಯಲ್ಲಿ ಅಧಿವೇಶನ ನಡೆದ ಮಾತ್ರಕ್ಕೆ ಅಲ್ಲೊಂದು ಕ್ರಾಂತಿಯುಂಟಾಗುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. ನಾಳೆಯಿಂದಲೇ ಹೊಸ ವಾತಾವರಣ ಸೃಷ್ಟಿಯಾಗುತ್ತದೆ ಎಂಬ ಭ್ರಮೆಯೂ ಯಾರಿಗೂ ಇರಲಿಲ್ಲ. ಆದರೆ ರಾಜ್ಯದ ಜನತೆ ಒಂದು ಸಣ್ಣ ನಿರೀಕ್ಷೆ, ಪುಟ್ಟ ಆಶಯವನ್ನಿಟ್ಟುಕೊಂಡಿದ್ದರು. ಅಧಿವೇಶನವನ್ನು ಯಾವ ಉದ್ದೇಶಕ್ಕೆ ಕರೆದಿದ್ದಾರೋ ಅದು ನೆರವೇರಲಿ. ಒಂದಷ್ಟು ಅರ್ಥಪೂರ್ಣ ಚರ್ಚೆ ಆಗಲಿ. ಜಗಳ, ರಂಪ, ರಾಜಕಾರಣ, ಸಭಾತ್ಯಾಗ ಆಗದಿರಲಿ, ಅಷ್ಟೆ.

ಈಗ ಇಡೀ ರಾಜ್ಯದ ಜನತೆ ಕೇಳುತ್ತಿರುವುದೇನೆಂದರೆ- ಜಗಳ ಮಾಡಲು ಇವರೆಲ್ಲ ಬೆಳಗಾವಿಗೆ ಹೋಗಬೇಕಿತ್ತಾ? ವಿಧಾನಸೌಧ ಹೇಗೂ ಇತ್ತಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more