ಎಲ್ಲರಿಗೂ ಬೇಕು ಮಿತಾಕ್ಷರ, ಯಾರಿಗೂ ಬೇಡ ವಿಜ್ಞಾನೇಶ್ವರ
ಅದ್ಯಾಕೋ ಏನೋ, ಅದು ಅವರ ರಕ್ತದಲ್ಲೇ ಬಂದಿದೆ. ಪ್ರತಿಯಾಂದನ್ನು ಹೊರಜಗತ್ತಿಗೆ ತೋರಿಸುವ ರೀತಿಯಲ್ಲಿಯೇ ಮಜುಕೂರಿದೆ. ಪ್ರಾಚೀನವಾದ ನಾಲ್ಕು ಕಲ್ಲು ಸಿಕ್ಕರೂ, ಅವನ್ನು ಸಂರಕ್ಷಿಸಿ, ಸುತ್ತಲೂ ಹುಲ್ಲುಗಾವಲು ಬೆಳೆಸಿ, ಮಾಹಿತಿ ಕೇಂದ್ರ ಸ್ಥಾಪಿಸಿ, ಟೀಶರ್ಟ್, ಹ್ಯಾಟ್, ಕೀಚೈನ್ನ ಮೇಲೆಲ್ಲ ಆ ನಾಲ್ಕು ಕಲ್ಲಿನ ಚಿತ್ರ ಪ್ರಿಂಟ್ ಮಾಡಿಸಿ, ಅಲ್ಲೊಂದು ಶುಭ್ರ ರೆಸ್ಟ್ ರೂಂ(ಶೌಚಾಲಯ) ನಿರ್ಮಿಸಿ, ಆ ಸ್ಥಳದ ಬಗ್ಗೆ ಹತ್ತಾರು ವೆಬ್‌ಸೈಟ್ ಮಾಡಿ ಅಗ್ದೀ ಚೆಂದವಾಗಿ ಇಡೀ ಜಗತ್ತಿಗೆ ಷೋಕೇಸ್ ಮಾಡುತ್ತಾರೆ. ‘ಅವರಿಂದ ಕಲಿಯಬೇಕು ಕಣ್ರೀ’ ಎಂದು ನಾವು ಪದೇ ಪದೆ ಅಂದುಕೊಳ್ಳುವಂತೆ ಮಾಡುತ್ತಾರೆ.
ಸಾಮಾನ್ಯ ತಾಣವನ್ನೂ ಅದ್ಭುತವಾಗಿ ನಿರ್ಮಿಸಿದ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸುವಂತೆ, ಇದಕ್ಕೂ ಪ್ರಮುಖವಾದ ತಾಣಗಳನ್ನು ನಾವು ಕೆಟ್ಟದಾಗಿಇಟ್ಟುಕೊಂಡಿರುವ ಬಗ್ಗೆ ನಮ್ಮಲ್ಲಿ ಪಶ್ಚಾತ್ತಾಪ ಹಾಗೂ ಅಪರಾಧ ಪ್ರಜ್ಞೆಯನ್ನು ಏಕಕಾಲದಲ್ಲಿ ಮೂಡಿಸುತ್ತಾರೆ. ಬೆಂಜಮಿನ್ ಫ್ರಾಂಕ್ಲಿನ್‌ನ ಮನೆಗೆ ಹೋಗಬೇಕು. ಏನಿಲ್ಲವೆಂದರೂ ಎರಡು ದಿನ ಬೇಕು. ಆದರೂ ಮುಗಿಯದು.
ಇಂಗ್ಲೆಂಡ್‌ನಲ್ಲಿ ಷೇಕ್ಸ್‌ಪಿಯರ್‌ನ ಮನೆಗೆ ಹೋದರೆ ಮೈಮನಗಳ ತುಂಬೆಲ್ಲ ಅವನೇ. ವಾಪಸು ಬರಲು ಮನಸ್ಸೇ ಆಗುವುದಿಲ್ಲ. ಸ್ವಿಜರ್‌ಲೆಂಡಿನ ಬರ್ನ್‌ನಲ್ಲಿ ವಿಜ್ಞಾನಿ ಐನ್‌ಸ್ಟೈನ್ ಉಳಿದ ಪುಟ್ಟ ಮನೆಯನ್ನು ರಾಷ್ಟ್ರೀಯ ಸಂಪತ್ತು ಎಂಬಂತೆ ಜೋಪಾನವಾಗಿ ಕಾಪಾಡಿದ್ದಾರೆ. ಉದ್ದ ಅಗಲ ಹಾಸಿದರೆ ಎಂಟು ಚದರದಷ್ಟಿರಬಹುದು. ಆದರೆ ಐನ್‌ಸ್ಟೈನ್ ಮನೆಯನ್ನು ಸಂರಕ್ಷಿಸಿದ ರೀತಿ ಮಾತ್ರ ಅದ್ಭುತ. ಅದು ಇದು ಎಂದಲ್ಲ. ಪ್ರತಿಯಾಂದನ್ನೂ ಅಷ್ಟೊಂದು ಸೊಗಸಾಗಿ ಅವರು ಕಾಪಾಡುತ್ತಾರೆ. ರಾಷ್ಟ್ರೀಯ ಪ್ರತೀಕಗಳೆಂಬಂತೆ ರಕ್ಷಿಸಿಬಿಡುತ್ತಾರೆ. ಆದರೆ ನಮ್ಮಲ್ಲಿ ಆ ಪ್ರಜ್ಞೆಯೇ ಬೆಳೆದಿಲ್ಲವಲ್ಲ?
ಕೆಲ ವರ್ಷಗಳ ಹಿಂದೆ ಹಿರೇಕೆರೂರಿನ ಮಾಸೂರು ಗ್ರಾಮಕ್ಕೆ ಹೋಗಿದ್ದೆ. ಅದು ಕನ್ನಡದ ಹೆಮ್ಮೆಯ ಕವಿ ಸರ್ವಜ್ಞನ ಜನ್ಮಸ್ಥಳ. ದುರ್ದೈವದ ಸಂಗತಿಯೆಂದರೆ ಸರ್ವಜ್ಞನ ಬಗ್ಗೆ ಅಲ್ಲಿ ಯಾವ ಮಾಹಿತಿಯೂ ಸಿಗಲಿಲ್ಲ. ಆತನ ನೆನಪನ್ನು ಹಸಿರಾಗಿಸಿಡುವ ಚಿಕ್ಕ ಪ್ರಯತ್ನ ನಡೆದ ಬಗ್ಗೆ ಅಲ್ಲಿ ಸಾಕ್ಷ್ಯವಿಲ್ಲ. ಹೌದು ಇದು ಸರ್ವಜ್ಞ ಹುಟ್ಟಿದ ಊರು, ಏನಾಯ್ತೀಗ? ಏನಾಗಬೇಕಿತ್ತು ಎಂಬ ಧೋರಣೆ ಅಲ್ಲಿನ ಕೆಲವರಲ್ಲಿತ್ತು.
ಕೆಲ ದಿನಗಳ ಹಿಂದೆ ನಮ್ಮ ಮುಖ್ಯಮಂತ್ರಿಗಳು ಮಾಸೂರಿಗೆ ಹೋಗಿ ಸರ್ವಜ್ಞನ ಪ್ರತಿಮೆಯನ್ನು ಮಾಸೂರಿನಲ್ಲಿ ಅನಾವರಣಗೊಳಿಸಿದರು. ಆ ಕಾರ್ಯಕ್ರಮಕ್ಕೆ ಮೊದಲು ಸರ್ವಜ್ಞನ ಬಗ್ಗೆ ಮಾಹಿತಿ ಇರುವ ಪುಸ್ತಕಗಳೇನಾದರೂ ಇವೆಯಾ ಎಂದು ಮುಖ್ಯಮಂತ್ರಿ ವಿಚಾರಿಸಿದಾಗ ಅಲ್ಲೇನೂ ಸಿಗಲಿಲ್ಲ. ಈ ತರಾತುರಿಯಲ್ಲಿ ಉದ್ಘಾಟನೆ ನೆರವೇರಿತು. ಈಗ ಸರ್ವಜ್ಞನ ಪ್ರತಿಮೆ ಹಕ್ಕಿಗಳಿಗೆ ಹಿಕ್ಕೆ ಹಾಕುವ ಜಾಗವಾಗಿದೆಯೆಂಬುದನ್ನು ಬಿಟ್ಟರೆ ಆ ಮಹಾಕವಿಯ ನೆನಪು, ಬರಹ, ಸಾಧನೆಗಳನ್ನು ಶಾಸ್ವತವಾಗಿ ತೋರಿಸುವ ಕೆಲಸವಾಗಿಯೇ ಇಲ್ಲ. ಯಾವುದೇ ಊರಿಗೆ ಹೋದರೂ ಇಂಥ ಒಂದಲ್ಲ ಒಂದು ನಿದರ್ಶನ ಕಣ್ಣಿಗೆ ಢಾಳಾಗಿ ಹೊಡೆಯುತ್ತದೆ.
Prehistoric ಯುಗಕ್ಕೆ ಸೇರಿದ್ದೆಂದು ಹೇಳುತ್ತಾ ನಾಲ್ಕು ಕಲ್ಲುಗಳನ್ನಿಟ್ಟು ವರ್ಷಕ್ಕೆ ಲಕ್ಷ ಲಕ್ಷ ಪ್ರವಾಸಿಗರನ್ನು ಸೆಳೆಯುವ ಲಂಡನ್‌ಗೆ ಸಮೀಪವಿರುವ ಸಾಲಿಸ್ ಬರಿಗೆ ಹತ್ತಿರದ ಸ್ಟೋನ್‌ಹೆಂಜ್ ಇದೆಯಲ್ಲ ನಮ್ಮ ಹಂಪಿ ಮುಂದೆ ಏನೇನೂ ಅಲ್ಲ. ಹಂಪಿಯ ಒಂದೊಂದು ಕಲ್ಲು ಹೇಳುವ ಇತಿಹಾಸದ ಮುಂದೆ ಸ್ಟೋನ್‌ಹೆಂಜ್‌ನ ಕತೆ ಕಾಗಕ್ಕ, ಗುಬ್ಬಕ್ಕ. ಆದರೆ ಸ್ಟೋನ್‌ಹೆಂಜ್‌ಗೆ ಸಿಗುತ್ತಿರುವ ಪ್ರಚಾರ, ಅದನ್ನು ಉತ್ತೇಜಿಸುತ್ತಿರುವ ರೀತಿಯ ಮುಂದೆ ಹಂಪಿ ಲೆಕ್ಕಕ್ಕೆ ಇಲ್ಲ. ಸ್ಟೋನ್‌ಹೆಂಜ್‌ನ್ನು ಯಾವ ರೀತಿ ಷೋಕೇಸ್ ಮಾಡುತ್ತಿದ್ದಾರೆಂದರೆ ಇಂದು ನೀವು ಯಾವುದೇ ಕಂಪ್ಯೂಟರ್ ಪರದೆಯ ಮೇಲೆ ಅದನ್ನು ಕಾಣಬಹುದು. ಎಲ್ಲ ಕಂಪ್ಯೂಟರ್‌ನ ಸ್ಕಿೃೕನ್‌ಸೇವರ್‌ನಲ್ಲಿ ಸ್ಟೋನ್‌ಹೆಂಜ್ ಚಿತ್ರ ರಾರಾಜಿಸುತ್ತದೆ.
ನಮಗೇನಾಗಿದೆ ದಾಢಿ? ನಾವ್ಯಾಕೆ ಈ ವಿಷಯದಲ್ಲಿ ಹಿಂದೆ? ಇಂಥ ಸಂಗತಿಗಳ ಮಹತ್ವ ನಮ್ಮಲ್ಯಾಕೆ ಇನ್ನೂ ಮಾಡುತ್ತಿಲ್ಲ? ಸ್ಮಾರಕಗಳನ್ನೆಲ್ಲ ನಾವ್ಯಾಕೆ ಬಲಿಕೊಡುತ್ತಿದ್ದೇವೆ?
ಈ ಎಲ್ಲ ಸಂಗತಿಗಳು ಮನಸ್ಸಿನಲ್ಲಿ ಮತ್ತೊಮ್ಮೆ ಹಾದು ಹೋಗಿದ್ದು ಮೊನ್ನೆ ಗುಲ್ಬರ್ಗದಿಂದ ಹದಿನೈದು ಕಿ.ಮೀ ದೂರದಲ್ಲಿರುವ ಮರತೂರು ಎಂಬ ಕುಗ್ರಾಮದ ವಿಜ್ಞಾನೇಶ್ವರ ಭವನದಲ್ಲಿ ನಿಂತಾಗ. ಇಂದಿಗೂ ಕನ್ನಡಿಗರಿಗೆ ವಿಜ್ಞಾನೇಶ್ವರ ಅಷ್ಟಕ್ಕಷ್ಟೆ. ಆತನ ಹೆಸರು ಕೇಳಿದವರು ಕೆಲವೇ ಮಂದಿ. ಭಾರತೀಯ ನ್ಯಾಯಶಾಸ್ತ್ರದ ಆಧಾರ ಸ್ತಂಭ ಎಂದೇ ಪರಿಗಣಿಸಲಾಗುವ ‘ಮಿತಾಕ್ಷರ’ ಎಂಬ ಅಮೂಲ್ಯ ಗ್ರಂಥ ಬರೆದ ವಿಜ್ಞಾನೇಶ್ವರ ಕರ್ನಾಟಕದವ ಹಾಗೂ ಅಪ್ಪಟ ಕನ್ನಡದವ ಎಂಬುದು ಬಹುಮಂದಿಗೆ ಗೊತ್ತಿಲ್ಲ.











Click it and Unblock the Notifications