Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ - ಐಎಂಡಿ ಮುನ್ಸೂಚನೆ, ಮಳೆ ವಿವರ
Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಸಿಲು ಹೆಚ್ಚಾಗಿದ್ದು, ಜನ ಹೈರಾಣಾಗಿದ್ದರು. ಇದೀಗ ಬೆಂಗಳೂರಿಗರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಯ ಜನರು ಸಂತೋಷಪಡುವಂತಹ ಸುದ್ದಿಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.
ಪೂರ್ವ ವಿದರ್ಭದಿಂದ ತಲಂಗಾಣ, ಕರ್ನಾಟಕದ ಒಳನಾಡು ಮತ್ತು ತಮಿಳುನಾಡಿನಾದ್ಯಂತ ಕೊಮೊರಿನ್ ಪ್ರದೇಶದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಟ್ರಫ್ ಮುಂದುವರಿದಿದೆ. ದಕ್ಷಿಣ ಕರಾವಳಿ ತಮಿಳುನಾಡಿನಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಮೇಲಿನ ವಾಯು ಪರಿಚಲನೆ ಮುಂದುವರಿದಿದೆ. ಇನ್ನು ಮಹಾರಾಷ್ಟ್ರ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ಎತ್ತರದಲ್ಲಿ ಅಪಭ್ರಮಣ (ಅಪ್ರದಕ್ಷಿಣಾಕಾರ ಅಥವಾ ಹಿಮ್ಮುಖ ಚಂಡಮಾರುತ) ಮಾರುತ ಪರಿಚಲನೆ ಇದೆ.

ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ
ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಿಂಚು - ಗುಡುಗು ಸಹಿತ ಹಾಗೂ ವಿವಿಧ ಭಾಗದಲ್ಲಿ ಸಾಧಾರಣ ಮಳೆಯೂ ಆಗಲಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬಿರುಗಾಳಿಯೊಂದಿಗೆ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಇರಲಿದೆ. ಮುಂದುವರಿದು ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಇರಲಿದೆ. ಅಲ್ಲದೆ ಮಿಂಚು ಗುಡುಗು ಸಹಿತ ಮಳೆ ಆಗಲಿದೆ. ಇನ್ನು ಬೆಂಗಳೂರಿನಲ್ಲೂ ಸಾಧಾರಣ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ವರದಿಗಳ ಪ್ರಕಾರ, ನೈಜ ಸಮಯದ ದತ್ತಾಂಶದ ಆಧಾರದ ಮೇಲೆ, ರಾಜ್ಯದಾದ್ಯಂತ ಗರಿಷ್ಠ ತಾಪಮಾನವು 33.8 ಡಿಗ್ರಿ ಸೆಲ್ಸಿಯಸ್‌ನಿಂದ 41.3 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿತ್ತು. ನೈಜ ಸಮಯದ ದತ್ತಾಂಶದ ಆಧಾರದ ಮೇಲೆ, ದಕ್ಷಿಣ ಒಳನಾಡಿನ ಮೈಸೂರಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಕರಾವಳಿ ಕರ್ನಾಟಕದ ಕಾರವಾರ; ಉತ್ತರ ಒಳನಾಡಿನ ಬೀದರ್, ಧಾರವಾಡ, ಕೊಪ್ಪಳ, ಹಾವೇರಿ ಮತ್ತು ಬೆಂಗಳೂರು ನಗರ, ಬೆಂಗಳೂರು ಎಚ್‌ಎಎಲ್, ಬೆಂಗಳೂರು ಕೆಐಎಎಲ್, ಚಿತ್ರದುರ್ಗ, ದಾವಣಗೆರೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಉಳಿದ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯವಾಗಿತ್ತು.
ದಕ್ಷಿಣ ಒಳನಾಡಿನ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಕರ್ನಾಟಕದ ಒಂದು ಅಥವಾ ಎರಡು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3.1 ಡಿಗ್ರಿ ಸೆಲ್ಸಿಯಸ್‌ನಿಂದ 5 ಡಿಗ್ರಿ ಸೆಲ್ಸಿಯಸ್‌ನ ವರೆಗೆ ಗಮನಾರ್ಹವಾಗಿ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3.01 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗಿದೆ. ಉಳಿದ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ. ಉಳಿದಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಕಂಡುಬಂದಿಲ್ಲ ಎಂದು ಐಎಂಡಿ ವರದಿ ತಿಳಿಸಿದೆ.
ಉಳಿದಂತೆ ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ ಗರಿಷ್ಠ 41.3°C ತಾಪಮಾನ ದಾಖಲಾಗಿದೆ. ಮುಂದಿನ ಎರಡು ದಿನಗಳ ವರೆಗೆ ಕರಾವಳಿ ಕರ್ನಾಟಕದಾದ್ಯಂತ ಬಿಸಿ ಮತ್ತು ತೇವಾಂಶದ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.











Click it and Unblock the Notifications