ಆ ವಿನಿವಿಂಕ್‌ನಲ್ಲಿ ಸಿ.ವಿ.ರಾಮನ್‌ ಕೂಡ ಹಣ ಕಳಕೊಂಡಿದ್ರು!

Vishweshwar Bhat ವಿಶ್ವೇಶ್ವರ ಭಟ್‌

ಅಲ್ಲಾರಿ, ವಿನಿವಿಂಕ್‌ ಏನು ಮಹಾ ಕಣ್ರಿ? ಆ ಶ್ರೀನಿವಾಸ ಶಾಸ್ತ್ರಿ ಏನು ಮಹಾ? ಆತನ ಮುಂದೆ ವಿನಿವಿಂಕು ಏನೂ ಅಲ್ಲ, ಶ್ರೀನಿವಾಸ ಶಾಸ್ತ್ರಿ ಯಂತೂ ಏನೇನೂ ಅಲ್ಲ. ಅವೆಲ್ಲ ಪುಟಗೋಸಿ ಪುಟಸಾದೆ. ಈಗ ಶಾಸ್ತ್ರಿ ಮಾಡಿದ್ದನ್ನು ಆತ 60ವರ್ಷಗಳ ಹಿಂದೆಯೇ ಮಾಡಿದ್ದ. ಈಗ ವಿನಿವಿಂಕ್‌ಎಂಬ ಬ್ಲೇಡ್‌ ಕಂಪನಿ ಸಾವಿರಾರು ಮಂದಿಗೆ ಪಂಗನಾಮ ಹಾಕಿದ್ದರೆ, ಆತ ಅರ್ಧಶತಮಾನದ ಹಿಂದೆಯೇ ಸಾವಿರಾರು ಮಂದಿಗೆ‘ಮೂರುನಾಮ’ ಹಾಕಿದ್ದ !

ಆತನ ಹೆಸರು ಧರ್ಮರತ್ನಾಕರ ಬಿ. ಎನ್‌.ಗೋಪಾಲ ರಾವ್‌!

ಅರವತ್ತು ವರ್ಷಗಳ ಹಿಂದೆ ಸಾವಿರಾರು ಮಂದಿಯ ಮುಂಡ ಮೋಚಿದ ಗೋಪಾಲರಾಯನಿಗೂ, ವಿನಿವಿಂಕ್‌ ಶಾಸ್ತ್ರಿಗೂ ಏನೇನೂ ವ್ಯತ್ಯಾಸವಿಲ್ಲ. ಇಬ್ಬರದೂ ಒಂದೇ ಕತೆ. ಇಷ್ಟು ವರ್ಷಗಳ ನಂತರ ಗೋಪಾಲರಾಯನ ರೂಪದಲ್ಲಿ ಶಾಸ್ತ್ರಿ ಕಾಣಿಸಿಕೊಂಡಿದ್ದಾನೆಂಬುದನ್ನು ಬಿಟ್ಟರೆ, ಆ ಪ್ರಕರಣಕ್ಕೂ ವಿನಿವಿಂಕ್‌ ವಂಚನೆಗೂ ಎಳ್ಳಷ್ಟೂ ವ್ಯತ್ಯಾಸವಿಲ್ಲ. ಕಾರಣ ಗೋಪಾಲರಾಯನ ಬ್ಲೇಡ್‌ ಕಂಪನಿಯಲ್ಲಿ ಹಣ ತೊಡಗಿಸಿ ಮೋಸ ಹೋದವರಲ್ಲಿ ಸಮಾಜದ ಪ್ರತಿಷ್ಠಿತರಿದ್ದರು, ಹೈಕೋರ್ಟ್‌ ನ್ಯಾಯಾಧೀಶರಿದ್ದರು, ಪೊಲೀಸು ಅಧಿಕಾರಿಗಳಿದ್ದರು, ಗಣ್ಯರಿದ್ದರು. ಅವರೆಲ್ಲರಿಗೂ ಆ ಗೋಪಾಲರಾಯ ಮೂರ್ನಾಮ ಹಾಕಿದ್ದ.

1940ರಲ್ಲಿ ನಡೆದ ಗೋಪಾಲರಾಯನ ವಿನಿವಿಂಕ್‌ ಪ್ರಕರಣದ ಬಗ್ಗೆ ಹೇಳಬೇಕು. ಗೋಪಾಲರಾಯ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ( 8ಜನವರಿ 1895) ಹುಟ್ಟಿದವ. ಇವನ ಕುಟುಂಬದ ಮೂಲ ಮಹಾರಾಷ್ಟ್ರ. ಈತನ ಕುಟುಂಬದ ನಾಲ್ಕೈದು ತಲೆಮಾರಿನ ಹಿಂದಿನವರ ಪೈಕಿ ಪ್ರಮುಖರಾಗಿದ್ದ ಗೋವಿಂದರಾವ್‌ ಜಿವಜಿ ಬೆಂಗಳೂರಿಗೆ ಸನಿಹದ ಹೊಸಕೋಟೆಯಲ್ಲಿ ಬಂದು ನೆಲೆಸಿದರು. ಗೋಪಾಲರಾಯರ ತಂದೆ ನಾಗೇಶ ರಾವ್‌ ಬೆಂಗಳೂರಿನ ಜಿಲ್ಲಾ ಕೋರ್ಟಿನಲ್ಲಿ ಕ್ಲರ್ಕ್‌ ಆಗಿದ್ದರು. ಅವರಿಗೆ ಒಂಬತ್ತು ಮಕ್ಕಳು-ಐವರು ಗಂಡು, ನಾಲ್ವರು ಹೆಣ್ಣುಮಕ್ಕಳು. ನಾಗೇಶರಾಯ ತಮ್ಮ 42ನೇ ವಯಸ್ಸಿಗೇ ತೀರಿಹೋದ.

ಮನೆಯಲ್ಲಿ ಕಾಡುವ ಬಡತನ. ಗೋಪಾಲರಾಯ ವಿದ್ಯಾಭ್ಯಾಸದಲ್ಲಿ ದಡ್ಡ. ಸೆಂಟ್ರಲ್‌ ಕಾಲೇಜಿನಲ್ಲಿ ಎರಡು ವರ್ಷ ಓದಿ ಅರ್ಧಕ್ಕೆ ಬಿಟ್ಟ. ಅನಂತರ ಎಂಜಿನಿಯರಿಂಗ್‌ ಸೇರಿಕೊಂಡ. ಅದನ್ನೂ ಮುಗಿಸಲಿಲ್ಲ. ಕೆಲಸಕ್ಕೆ ಸೇರಿಕೊಳ್ಳಲೇಬೇಕ್ತಿತು. ಮಿನರ್ವ ಮಿಲ್‌ನಲ್ಲಿ ತಿಂಗಳಿಗೆ 18ರೂ.ಗೆ ಸೇರಿಕೊಂಡ. ಆ ಕೆಲಸವನ್ನೂ ಬಿಟ್ಟ. ಅನಂತರ ಕರ್ನೂಲ್‌ ಜಿಲ್ಲೆಯ ನಂದ್ಯಾಲ್‌ಗೆ ಹೋದ. ಅಲ್ಲಿನ ರೆವಿನ್ಯೂ ಇನ್ಸ್‌ಪೆಕ್ಟರ್‌ ಮಗಳನ್ನು ಪ್ರೀತಿಸಿ ಮದುವೆಯಾದ. ಮಾವನ ಕೃಪೆಯಿಂದ ನಂದ್ಯಾಲದ ಇಂಪಿರಿಯಲ್‌ ಬ್ಯಾಂಕಿನಲ್ಲಿ ಕ್ಲರ್ಕ್‌ ಕೆಲಸ ಗಿಟ್ಟಿಸಿದ. ಮೂರು ವರ್ಷಗಳ ಬಳಿಕ ಹೆಂಡತಿ ಸತ್ತಳು. ಪುನಃ ಮಾವನ ಕೃಪೆಯಿಂದ ಅದೇ ಬ್ಯಾಂಕಿನ ಬೆಂಗಳೂರು ಶಾಖೆಗೆ ವರ್ಗ ಮಾಡಿಸಿಕೊಂಡ.

ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ ಪ್ರಮುಖ ಬ್ಯಾಂಕ್‌ಗಳ ಪೈಕಿ ಒಂದಾಗಿದ್ದ ಇಂಪಿರಿಯಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಒಬ್ಬ ಸಾಮಾನ್ಯ ಕ್ಲರ್ಕ್‌ ಆಗಿದ್ದ, ತಿಂಗಳಿಗೆ ಮೂವತ್ತು ರೂ. ಪಡೆಯುತ್ತಿದ್ದ ನೌಕರನೊಬ್ಬ ಕೇವಲ ಎಂಟು ವರ್ಷಗಳಲ್ಲಿ ಕೋಟಿ ಕೋಟಿ ಸಂಪಾದಿಸಿದ್ದು, ಸಾವಿರಾರು ಮಂದಿಗೆ ಟೋಪಿ ಹಾಕಿದ್ದು ರೋಚಕ ಕತೆ.

ಮೂಲತಃ ಗೋಪಾಲರಾಯ ಭಲೇ ವಿಲಾಸಿ ಮನುಷ್ಯ. ಮೈತುಂಬಾ ಆಸೆಗಳು. ಜೀವನದಲ್ಲಿ ಬಹುಬೇಗ ಸ್ವಲ್ಪವೂ ಕಷ್ಟಪಡದೇ ಶ್ರೀಮಂತನಾಗಿ ಸಕಲ ವೈಭೋಗಗಳನ್ನು ಅನುಭವಿಸಬೇಕೆಂದು ಆಸೆ ಪಡುತ್ತಿದ್ದ. ಮೂವತ್ತು ರೂ.ನೌಕರಿಯಿಂದ ತನ್ನೆಲ್ಲ ಆಸೆಗಳನ್ನು ತೀರಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಬಹುಬೇಗ ಅರಿತುಕೊಂಡ ಚತುರ. ಮಂದಿ ದುಡ್ಡಿನಿಂದಲೇ ಶ್ರೀಮಂತನಾಗುವ ಬಗ್ಗೆ ತಲಾಶ್‌ ಮಾಡತೊಡಗಿದ. ಆಗ ಆತನ ಮನಸ್ಸಿನಲ್ಲಿ ಮೂಡಿದ್ದು ಬ್ಲೇಡ್‌ ಕಂಪನಿ ಐಡಿಯಾ! ಬ್ಯಾಂಕ್‌ ಕ್ಲರ್ಕ್‌ ಕೆಲಸಕ್ಕೆ ರಾಜೀನಾಮೆ ಬಿಸಾಕಿ‘ಇಂಪಿರಿಯಲ್‌ ಇನ್‌ವೆಸ್ಟರ್‌ ಫೈನಾನ್ಸ್‌ ಕಂಪನಿ’ಎಂಬ ಅಂಗಡಿ ತೆರೆದ. ಬೆಂಗಳೂರಿನ ಶೇಷಾದ್ರಿ ಪುರಮ್‌ನಲ್ಲಿರುವ ಲಿಂಕ್‌ರಸ್ತೆಯಲ್ಲಿ 1939ರಲ್ಲಿ ಈ ಹಣಕಾಸು ಸಂಸ್ಥೆ ತೆರೆದಾಗ ಅದು ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಉದುರಿಸುವ ಕಲ್ಪವೃಕ್ಷವಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ.

ಗೋಪಾಲರಾಯ ಅನುಸರಿಸಿದ್ದು ತೀರಾ ಸರಳ ಮಾರ್ಗ. ಅತಿ ಹೆಚ್ಚಿನ ಬಡ್ಡಿ ಕೊಡುವುದಾಗಿ ಆಸೆ ತೋರಿಸಿ ಹಣ ಸಂಗ್ರಹಿಸಿದ. ಬೇರೆಯವರಿಂದ ಕಡಿಮೆ ಬಡ್ಡಿಗೆ ಹಣ ಪಡೆದು ಹೆಚ್ಚಿನ ಬಡ್ಡಿಗೆ ಸಾಲ ಕೊಡತೊಡಗಿದ. ಬೇರೆಯವರಿಂದ ಸಂಗ್ರಹಿಸಿದ ಹಣಕ್ಕೆ ಶೇ.40ರಷ್ಟು ಬಡ್ಡಿ ಕೊಡಲಾರಂಭಿಸಿದ. ಹಾಗೇ ಶೇ. 20-25ಕ್ಕೆ ಬಡ್ಡಿಗೆ ಹಣ ಪಡೆದು ಶೇ. 30-35ಬಡ್ಡಿಗೆ ಸಾಲ ಕೊಡುತ್ತಿದ್ದ. ಇಲ್ಲಿ ಆತನಿಗೆ ಬ್ಯಾಂಕಿಂಗ್‌ ಅನುಭವ ಪ್ರಯೋಜನಕ್ಕೆ ಬಂದಿತು. ಶೀಘ್ರ ಹಣ ಸಂಗ್ರಹಿಸಲು ಬ್ಯಾಂಕಿನಲ್ಲಿದ್ದ ತನ್ನ ಸ್ನೇಹಿತರನ್ನು ಬಳಸಿಕೊಂಡ. ಬ್ಯಾಂಕಿನಲ್ಲಿ ಠೇವಣಿ ಇಡಲು ಬರುವ ಗ್ರಾಹಕರನ್ನು ‘ ಸ್ವಾಮಿ ಇಲ್ಯಾಕೆ ಹಣ ಹೊಡುತ್ತೀರಿ, ಗೋಪಾಲರಾಯರ ಸಂಸ್ಥೆಯಲ್ಲಿಡಿ. ಇನ್ನೂ ಹೆಚ್ಚಿನ ಬಡ್ಡಿ ಸಿಗುತ್ತದೆ’ಎಂದು ಇಂಪೀರಿಯಲ್‌ ಬ್ಯಾಂಕಿನ ಅಧಿಕಾರಿಗಳು ಹೇಳುತ್ತಿದ್ದರು. ಆಯಕಟ್ಟಿನ ಜಾಗದಲ್ಲಿರುವ ಬ್ಯಾಂಕ್‌ ಅಧಿಕಾರಿಗಳು ಗೋಪಾಲರಾಯನ ಪ್ರಚಾರಕರಂತೆ ಕೆಲಸ ಮಾಡುತ್ತಿದ್ದರು. ಅವರಿಗೆ ತಿಂಗಳ ಕೊನೆಯಲ್ಲಿ ಕಮಿಶನ್‌ ಕೊಡುತ್ತಿದ್ದ.

ಇಂಪೀರಿಯಲ್‌ ಬ್ಯಾಂಕಿನಲ್ಲಿ ಕೆಲಸ ಮಾಡುವಾಗ ಗೋಪಾಲರಾಯನ ಜತೆಯಲ್ಲಿ ಡಾಮಿನಿಕ್‌ ಎಂಬುವವನೂ ಕ್ಲಾರ್ಕ್‌ ಆಗಿದ್ದ. ಇಬ್ಬರಿಗೂ ದೋಸ್ತಿಯಿತ್ತು. ಗೋಪಾಲರಾಯನಂತೆ ಆತ ಕೂಡ ಚಪಲಚೆನ್ನಿಗರಾಯನೇ. ಯಾವಾಗ ತನ್ನ ಸ್ನೇಹಿತ ಬ್ಯಾಂಕಿನಿಂದ ಹೊರಬಿದ್ದು ಸ್ವಂತ ಫೈನಾನ್ಸ್‌ ಕಂಪನಿ ಶುರು ಮಾಡಿದನೋ ಡಾಮಿನಿಕ್‌ನ ಆಸೆ ಚಿಗುರತೊಡಗಿತು. ಆತ ಕೂಡ ಗೋಪಾಲರಾಯನ್ನು ಸೇರಿಕೊಂಡ. ಗೋಪಾಲರಾಯನ ವ್ಯವಹಾರ ಕಟ್ಟುನಿಟ್ಟು. ಪ್ರತಿ ತಿಂಗಳ ಒಂದನೇ ತಾರೀಖು ಬಂದರೆ ಎಲ್ಲರಿಗೂ ಬಡ್ಡಿ ಸಂದಾಯವಾಗುತ್ತಿತ್ತು. ಸದಾ ದೇವರ ಸ್ಮರಣೆ, ಮೆದು ಮಾತು, ಸಜ್ಜನಿಕೆ, ಧರ್ಮಕಾರ್ಯ, ದಾನ ಧರ್ಮಗಳಿಂದ ಗೋಪಾಲರಾಯನ ಬಗ್ಗೆ ಉತ್ತಮ ಭಾವನೆ ಜನರಲ್ಲಿ ಮೂಡಿತ್ತು. ಶಾಲಾ, ಕಾಲೇಜು, ಗುಡಿ, ಗೋಪುರಗಳ ನಿರ್ಮಾಣಕ್ಕೆ ಧಾರಾಳ ದೇಣಿಗೆ ನೀಡುತ್ತಿದ್ದ. ಮಹಾರಾಜ ಜಯಚಾಮರಾಜ ಒಡೆಯರ್‌ರ ತಂದೆಯ ಸ್ಮಾರಕ ನಿಧಿಗೆ ಆ ಕಾಲದಲ್ಲಿ ಲಕ್ಷ ರೂ. ದಾನ ನೀಡಿದ್ದ. ಇದರಿಂದ ಗೋಪಾಲರಾಯನಿಗೆ ‘ ದಾನ ಚಿಂತಾಮಣಿ’ಎಂಬ ಬಿರುದು ಸಿಕ್ಕಿತ್ತು. ಈ ಬಿರುದಿಗಾಗಿಯೇ ಆತ ದಾನ ನೀಡಿದ್ದ.

ಗೋಪಾಲರಾಯನ ಪಾಲುದಾರ ಡಾಮಿನಿಕ್‌ಗೆ ಫ್ರಾನ್ಸಿಸ್‌ ಕಾಂತರಾಜು ಎಂಬ ಸ್ನೇಹಿತನಿದ್ದ. ಈತ ಮೈಸೂರು ಮಹಾರಾಜರ ಆಪ್ತ ಕಾರ್ಯದರ್ಶಿ ತಂಬೂ ಚೆಟ್ಟಿಯವರ ಏಕಮಾತ್ರ ಪುತ್ರಿ ಫಿಲೋಮಿನಾಳ ಗಂಡ. ತಂಬೂ ಚೆಟ್ಟಿಗೆ ಗಂಡುಮಕ್ಕಳಿರಲಿಲ್ಲ. ಹೀಗಾಗಿ ತನ್ನ ಹೆಸರನ್ನು ಫ್ರಾನ್ಸಿಸ್‌ ಚೆಟ್ಟಿ ಎಂದು ಬದಲಿಸಿಕೊಂಡಿದ್ದ. ಫಿಲೋಮಿನಾ, ಗಂಡನ ಅಂಕೆಗೆ ಸಿಗುತ್ತಿರಲಿಲ್ಲ. ಕಾರಣ ಆತನಲ್ಲಿ ಅಷ್ಟೇನೂ ಹಣವಿಲ್ಲವೆಂಬುದು ಆಕೆಗೆ ಗೊತ್ತಾಗಿತ್ತು. ತಾನು ಶ್ರೀಮಂತನಲ್ಲದ್ದರಿಂದ ಹೆಂಡತಿ ತನ್ನ ಮಾತು ಕೇಳುತ್ತಿಲ್ಲವೆಂದು ಫ್ರಾನ್ಸಿಸ್‌, ಹೇಗಾದರೂ ಮಾಡಿ ಹಣಗಳಿಸುವ ತರಾತುರಿಯಲ್ಲಿದ್ದ. ಮಾವನ ಪ್ರಭಾವ ಬಳಸಿ ಹಣಗಳಿಸುವುದು ಕಷ್ಟವಲ್ಲವೆಂದು ಗೊತ್ತಿತ್ತು. ಇದೇ ಸರಿಯಾದ ಸಮಯವಾಗಿತ್ತು. ಡಾಮಿನಿಕ್‌ ತನ್ನ ಸ್ನೇಹಿತ ಫ್ರಾನ್ಸಿಸ್‌ನನ್ನು ಗೋಪಾಲರಾಯನಿಗೆ ಪರಿಚಯಿಸಿದ. ಮೂವರ ರೊಟ್ಟಿ ಚೂರುಗಳು ತುಪ್ಪದಲ್ಲಿ ಬಿದ್ದಿದ್ದವು!

ಯಾವಾಗ ಫ್ರಾನ್ಸಿಸ್‌ನ ಪರಿಚಯವಾಯಿತೋ, ತಂಬೂ ಚೆಟ್ಟಿಯ ದಿವಾನಕೋಣೆಗೆ ಗೋಪಾಲರಾಯನಿಗೆ ಮುಕ್ತ ಪರವಾನಗಿ ಸಿಕ್ಕಂತಾಗಿತ್ತು. ತಂಬೂ ಚೆಟ್ಟಿ ಮಹಾರಾಜರಿಗೆ ಪದನಿಮಿತ್ತದಿಂದಷ್ಟೇ ಅಲ್ಲ ಅಂತರಂಗದಿಂದಲೂ ಆಪ್ತನಾಗಿದ್ದ. ಮಹಾರಾಜರು ತಂಬೂ ಚೆಟ್ಟಿ ಹೇಳಿದಂತೆ ಕೇಳುತ್ತಿದ್ದರು. ಆತ ಅಷ್ಟೊಂದು ಪ್ರಭಾವಿಯಾಗಿದ್ದ.

ಈ ವಿಷಯ ಎಲ್ಲರಿಗೂ ಗೊತ್ತಿತ್ತು. ತಂಬೂ ಚೆಟ್ಟಿಯ ಅಳಿಯನನ್ನು ಸೆಳೆದರೆ ಮಾವನ ಮೂಲಕ ತನ್ನ ಕೆಲಸ ಸಾಧಿಸಿಕೊಳ್ಳಬಹುದೆಂದು ಗೋಪಾಲರಾಯ ಭಾವಿಸಿದ. ಅಷ್ಟೇ ಅಲ್ಲ, ಹಣಕಾಸು ಸಂಸ್ಥೆಯಲ್ಲಿ ಏನಾದರೂ ಭಾನಗಡಿಯಾದರೆ ತಂಬೂ ಚೆಟ್ಟಿಯ ಶ್ರೀರಕ್ಷೆ ಸಿಗುವುದೆಂದು ಗೋಪಾಲರಾಯನಿಗೆ ಅನಿಸಿತು. ನಿಧಾನವಾಗಿ ಗೋಪಾಲರಾಯನ ವ್ಯವಹಾರ ಚಿಗುರತೊಡಗಿತು. ಜನ ಕ್ಯೂದಲ್ಲಿ ನಿಂತು ಹಣ ಕಟ್ಟಿ ಹೋಗುತ್ತಿದ್ದರು. ಸರಕಾರದಿಂದ ಕ್ಷಣಾರ್ಧದಲ್ಲಿ ಕೆಲಸ ಮಾಡಿಸಿಕೊಳ್ಳುವ ಪ್ರಭಾವ ಬೆಳೆಸಿಕೊಂಡ ಗೋಪಾಲರಾಯನನ್ನು ಹಿಡಿದರೆ ಎಂಥ ಕೆಲಸ ಬೇಕಾದರೂ ಈಡೇರುತ್ತದೆಂಬ ಮಾತು ಚಾಲ್ತಿಗೆ ಬರಲಾರಂಭಿಸಿದಾಗ ಆತ ಅದನ್ನೂ ತನ್ನ ಲಾಭಕ್ಕೆ ಬಳಸಿಕೊಂಡ. ಇಡೀ ವ್ಯವಹಾರದಲ್ಲಿ ಎಲ್ಲೂ ಸಂಶಯ ಬರದಷ್ಟು ಎಚ್ಚರವಹಿಸುತ್ತಿದ್ದ. ಸಾಕ್ಷಾತ್‌ ತಂಬೂ ಚೆಟ್ಟಿಯೇ ಗೋಪಾಲರಾಯನಲ್ಲಿ ಹಣ ಬಿಟ್ಟಿದ್ದ. ಮಹಾರಾಜ ಆಪ್ತರು, ಸ್ನೇಹಿತರು, ವೈದ್ಯರು, ಸಲಹೆಗಾರರು, ಮಂತ್ರಿಗಳು ಗೋಪಾಲರಾಯನಲ್ಲಿ ಹೆಚ್ಚಿನ ಬಡ್ಡಿಗೆ ಹಣ ಬಿಟ್ಟಿದ್ದರು.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ತನ್ನ ವ್ಯವಹಾರವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಮಹಾರಾಜನಿಂದ ‘ಧರ್ಮರತ್ನಾಕರ’ (ವಿನಿವಿಂಕ್‌ ಶಾಸ್ತ್ರಿ ಧರ್ಮಶ್ರೀ ಬಿರುದು ಪಡೆದಿದ್ದನ್ನು ನೆನಪಿಸಿಕೊಳ್ಳಿ) ಬಿರುದು ಪಡೆಯಲು ಗೋಪಾಲರಾಯ ತಂಬೂ ಚೆಟ್ಟಿಯ ಸಹಾಯ ಕೋರಿದ. ಚೆಟ್ಟಿ ಮಾತು ಕೇಳಿ ಮಹಾರಾಜರು ಗೋಪಾಲರಾಯನನ್ನು ಸನ್ಮಾನಿಸಿ ಧರ್ಮರತ್ನಾಕರ ಬಿರುದನ್ನು ದಯಪಾಲಿಸಿದರು. ಅಂದಿನಿಂದ ಆತನ ಖದರೇ ಬದಲಾಯಿತು. ದೆಸೆ ತಿರುಗಿತು. ಗೋಪಾಲರಾಯ ಬರುತ್ತಿದ್ದರೆ ಮಹಾರಾಜರ ಆಸ್ಥಾನ ಎದ್ದು ನಿಲ್ಲುತ್ತಿತ್ತು!

ಧರ್ಮರತ್ನಾಕರ ಬಿರುದು ಎಂಥ ಮ್ಯಾಜಿಕ್‌ಮಾಡಿತೆಂದರೆ ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್‌. ಸಿ.ವಿ. ರಾಮನ್‌ ಗೋಪಾಲರಾಯನಲ್ಲಿ ಬಡ್ಡಿಗೆ ಹಣ ತಂದು ಸುರಿದರು. ನೊಬೆಲ್‌ ಪ್ರಶಸ್ತಿ ಜತೆಯಲ್ಲಿ ಕೊಟ್ಟ ಸ್ವಲ್ಪ ಹಣವನ್ನು ಬಡ್ಡಿಗೆಂದು ಬಿಟ್ಟರು. ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯನವರು ಗುಟ್ಟಾಗಿ ಹಣ ಹೂಡಿದರು. ಮೈಸೂರು ಸರಕಾರದ ಹಣಕಾಸು ಕಾರ್ಯದರ್ಶಿ ಎಂ. ವೀರರಾಜ ಅರಸು, ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ರಣಜೋಧ ಸಿಂಗ್‌, ಮುಂಬೈ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಪಿ.ಎಚ್‌. ಕೃಷ್ಣರಾವ್‌, ಆತ್ಮಜೀವನರಾವ್‌ ಮುಂತಾದವರು ಬಡ್ಡಿ ಆಸೆಗೆ ಹಣ ಬಿಟ್ಟರು. ಮೈಸೂರು ಸರಕಾರದಲ್ಲಿನ ಪ್ರಮುಖ ಅಧಿಕಾರಿಗಳು, ಹೈಕೋರ್ಟ್‌ ನ್ಯಾಯಾಧೀಶರು ಗೋಪಾಲರಾಯನ ಸಂಸ್ಥೆಯಲ್ಲಿ ಲಕ್ಷಾಂತರ ರೂ. ತೊಡಗಿಸಿದ್ದರು. ಈತನ ಮನೆಯ ಮುಂದೆ ಮೈಸೂರು ಸರಕಾರದ ‘ಗಂಡಭೇರುಂಡ’ ಲಾಂಛನವಿರುವ ಹತ್ತಾರು ಕಾರುಗಳು ಸದಾ ನಿಂತಿರುತ್ತಿದ್ದವು. ಫ್ರಾನ್ಸಿಸ್‌,ಡಾಮಿನಿಕ್‌ ಒಂದೆರಡು ವರ್ಷಗಳಲ್ಲಿ ಅಪಾರ ಆಸ್ತಿ-ಪಾಸ್ತಿ ಮಾಡಿಕೊಂಡರು. ಇವರಿಬ್ಬರ ಮೂಲಕ ಹೇರಳ ಹಣ ಹರಿದುಬರುತ್ತಿದ್ದರೆ ಗೋಪಾಲರಾಯ ಅವರಿಗೆ ಕಮಿಶನ್‌ ಚೆಲ್ಲುತ್ತಿದ್ದ.

ಎಲ್ಲವೂ ಸುಸೂತ್ರವಾಗಿದ್ದಾಗ ಹಣಕಾಸಿನ ವಿಚಾರದಲ್ಲಿ ಫ್ರಾನ್ಸಿಸ್‌-ಡಾಮಿನಿಕ್‌ ಮಧ್ಯೆ ಮನಸ್ತಾಪ ಬಂದಿತು. ಈ ಮಧ್ಯೆ ತಂಬೂ ಚೆಟ್ಟಿ ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿ ಆಸ್ತಿ ಖರೀದಿಸಲೆಂದು ತಾನು ಹೂಡಿದ 60ಲಕ್ಷ ರೂ.ಬೇಕೆಂದಾಗ ಗೋಪಾಲರಾಯನಿಗೆ ತಕ್ಷಣ ಹಣ ಕೊಡಲು ಕಷ್ಟವಾಯಿತು. ತಂಬೂ ಚೆಟ್ಟಿ ಹಠ ಮಾಡಿದ. ಬೇರೆ ದಾರಿಯೇ ಇರಲಿಲ್ಲ. ಹಣ ವಾಪಸ್‌ ನೀಡಲೇಬೇಕಾಯಿತು. ಆದರೆ ಅದೇ ದೊಡ್ಡ ಸುದ್ದಿಯಾಯಿತು. ಗೋಪಾಲರಾಯನ ಕಂಪನಿಯಲ್ಲಿ ಹಣ ಹೂಡಿದವರೆಲ್ಲ ವಾಪಸ್‌ ಪಡೆಯುತ್ತಿದ್ದಾರಂತೆ ಎಂಬ ಗಾಳಿ ಸುದ್ದಿ ಹರಡಿತು. ರಾತ್ರೋರಾತ್ರಿ ಆತನ ಮನೆ, ಆಫೀಸು ಮುಂದೆ ಜನಸಾಗರ.

ಆ ಕಾಲದಲ್ಲಿ ಆತ ಜನರಿಂದ ಸುಮಾರು 4ಕೋಟಿ ರೂ. ಎತ್ತಿದ್ದ(ಈಗಿನ 400 ಕೋಟಿಗೆ ಸಮ) ಜನರೆಲ್ಲ ಒಂದೇ ಸಲ ಹಣಕ್ಕೆ ಒತ್ತಾಯಿಸಿದಾಗ ಕೊಡಲಾಗಲಿಲ್ಲ. ಸರಕಾರ ಆಸ್ತಿಯನ್ನು ಮುಟ್ಟುಗೋಲು ಹಾಕಿ ತನಿಖೆಗೆ ಆದೇಶಿಸಿತು. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಮ್ಮುಖದಲ್ಲಿ ವಿಚಾರಣೆಯಾಯಿತು. ಪ್ರಕರಣ ಇತ್ಯರ್ಥವಾಗಲು ಆರೇಳು ವರ್ಷಗಳೇ ಹಿಡಿದವು. ಗೋಪಾಲರಾಯನ ಮನೆ, ಕಾರು, ಆಸ್ತಿ ಪಾಸ್ತಿಗಳೆಲ್ಲವನ್ನೂ ವಶಪಡಿಸಿಕೊಳ್ಳಲಾಯಿತು. ಆತನ ಬಳಿ ಇದ್ದ 60ಲಕ್ಷ ರೂ. ನಗದನ್ನು ಸಹ ಕಿತ್ತುಕೊಳ್ಳಲಾಯಿತು. ಗೋಪಾಲರಾಯ ಕೆಲದಿನ ತನ್ನ ಪ್ರಭಾವ ಬಳಸಿ ತಲೆಮರೆಸಿಕೊಂಡಿದ್ದ. ಅನಂತರ ಹೊರಬರಲೇಬೇಕಾಯಿತು. ಆತನದೆನ್ನುವುದೇನೂ ಇರಲಿಲ್ಲ. ಆತ ಬಡತನ, ಅವಮಾನದಿಂದ ಜರ್ಜರಿತನಾದ. ಮನೋವ್ಯಾಕುಲದಿಂದ ನರಳತೊಡಗಿದ. ಈ ಪ್ರಕರಣದ ವಿಚಾರಣೆಯೇ ಮತ್ತೊಂದು ದೊಡ್ಡ ಕತೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ವಿನಿವಿಂಕ್‌ ಹಗರಣವನ್ನಿಟ್ಟು ನೋಡಿ. ಕತೆ ಒಂದೇ, ಪಾತ್ರಧಾರಿಗಳು ಮಾತ್ರ ಬೇರೆ ಬೇರೆ. 60ವರ್ಷಗಳ ಹಿಂದೆಯೇ ಶಾಸ್ತ್ರಿಯ ಪಾತ್ರವನ್ನು ಗೋಪಾಲರಾಯ ಮಾಡಿ ಮುಗಿಸಿದ್ದ.

‘ಅವರನ್ನು ನಂಬಿದೆವು. ದುಡಿದದ್ದನ್ನೆಲ್ಲ ಅವನ ಜೇಬಿಗೆ ಸುರಿದ್ವಿ. ಮೋಸ ಮಾಡ್ತಾನೆ ಅಂದುಕೊಂಡಿರಲಿಲ್ಲ’ ಎಂದು ಹಣ ಕಳೆದು ಕೊಂಡವರು ಗೋಳಾಡುತ್ತಾರೆ. ಅಲ್ಲಾ ಸ್ವಾಮಿ ನಂಬದಿದ್ದರೆ ಮೋಸ ಮಾಡಲಿಕ್ಕೆ ಆಗುತ್ತಾ? ನಿನ್ನೆ ಗೋಪಾಲರಾಯ, ಇಂದು ಶಾಸ್ತ್ರಿ, ನಾಳೆ ಯಾರೋ?ಹುಷಾರು!

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+