ಬಿಸಿಲಿನ ಬೇಗೆಯಿಂದ ಪಾರಾಗಲು ಮಂಜಿನ ನಗರಿಗೆ ಹಾರಲು ಸಿದ್ಧರಾಗಿ: ಲಡಾಖ್ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದ IRCTC
ಬೇಸಿಗೆಯ ಈ ಸುಡು ಬಿಸಿಲಿನಿಂದ ಪಾರಾಗಲು ತಂಪಾದ ವಾತವರಣ ಇರುವ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗಲು ಯೋಚಿಸುತ್ತಿದ್ದೀರಾ? ಸುಂದರವಾದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಆಸೆ ನಿಮಗಿದ್ದರೆ, ನಿಮಗೊಂದು ಖುಷಿಕೊಡುವ ಸುದ್ದಿ ಇಲ್ಲಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ 'ಲಡಾಖ್' (Ladakh) ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ( ಐಆರ್‌ಸಿಟಿಸಿ) ಆಕರ್ಷಕ ಟೂರ್ ಪ್ಯಾಕೇಜ್ ಪರಿಚಯಿಸಿದೆ.
ಐಆರ್‌ಸಿಟಿಸಿ ಲಡಾಖ್ ಟೂರ್ ಪ್ಯಾಕೇಜ್
ಪ್ಯಾಕೇಜ್ ಕೋಡ್: NDA12 ಅಡಿಯಲ್ಲಿ ಪ್ರವಾಸಿಗರು ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ಯಾವುದೇ ತಲೆಬಿಸಿಯಿಲ್ಲದೆ ಲಡಾಖ್‌ನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಬಹುದಾಗಿದೆ. 6 ರಾತ್ರಿ ಮತ್ತು 7 ಹಗಲಿನ ಈ ಸುದೀರ್ಘ ಪ್ರವಾಸದಲ್ಲಿ ಲೇಹ್, ನುಬ್ರಾ ವ್ಯಾಲಿ, ಪ್ಯಾಂಗಾಂಗ್ ಸರೋವರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿರುತ್ತದೆ.

ಪ್ರವಾಸದ ದಿನಚರಿ ಹೇಗಿರುತ್ತದೆ?
ದಿನ 1: ವಿಮಾನದ ಮೂಲಕ ಲೇಹ್ ವಿಮಾನ ನಿಲ್ದಾಣಕ್ಕೆ ಆಗಮನ. ಅಲ್ಲಿಂದ ಹೋಟೆಲ್‌ಗೆ ತೆರಳಿ ವಿಶ್ರಾಂತಿ. ಸಂಜೆ ಶಾಂತಿ ಸ್ತೂಪ ಮತ್ತು ಲೇಹ್ ಪ್ಯಾಲೇಸ್‌ಗೆ ಭೇಟಿ.
ದಿನ 2: ಲೇಹ್‌ನಿಂದ ಶಾಮ್ ವ್ಯಾಲಿ ಪ್ರವಾಸ. ಮ್ಯಾಗ್ನೆಟಿಕ್ ಹಿಲ್, ಸಿಂಧು ನದಿ ಸಂಗಮ, ಗುರುದ್ವಾರ ಪತ್ತರ್ ಸಾಹಿಬ್ ಹಾಗೂ ಹಾಲ್ ಆಫ್ ಫೇಮ್ ಮ್ಯೂಸಿಯಂ ವೀಕ್ಷಣೆ.
ದಿನ 3: ಲೇಹ್‌ನಿಂದ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ 'ಖಾರ್ದುಂಗ್ ಲಾ ಪಾಸ್' (Khardung La Pass) ಮೂಲಕ ನುಬ್ರಾ ವ್ಯಾಲಿಗೆ (Nubra Valley) ಪ್ರಯಾಣ. ಹುಂಡರ್‌ನಲ್ಲಿ (Hunder) ಒಂಟೆ ಸವಾರಿ ಮಾಡಬಹುದು. ರಾತ್ರಿ ನುಬ್ರಾದಲ್ಲೇ ಉಳಿದುಕೊಳ್ಳುವುದು.
ದಿನ 4: ನುಬ್ರಾ ವ್ಯಾಲಿಯಿಂದ ಐತಿಹಾಸಿಕ 'ತುರ್ತುಕ್' ಗ್ರಾಮಕ್ಕೆ ಭೇಟಿ ನೀಡಿ, ಬಳಿಕ ಮತ್ತೆ ನುಬ್ರಾಗೆ ವಾಪಸಾತಿ.
ದಿನ 5: ನುಬ್ರಾ ವ್ಯಾಲಿಯಿಂದ ಶ್ಯೋಕ್ ನದಿ (Shyok River) ಮಾರ್ಗವಾಗಿ ಪ್ರಸಿದ್ಧ 'ಪ್ಯಾಂಗಾಂಗ್ ಸರೋವರ'ಕ್ಕೆ ಪ್ರಯಾಣ. ತ್ರೀ ಈಡಿಯಟ್ಸ್ ಸಿನಿಮಾ ಖ್ಯಾತಿಯ ಈ ಸರೋವರದ ಸೌಂದರ್ಯ ಸವಿದು ಅಲ್ಲಿನ ಕ್ಯಾಂಪ್‌ನಲ್ಲಿ ರಾತ್ರಿ ಉಳಿದುಕೊಳ್ಳುವುದು.
ದಿನ 6: ಪ್ಯಾಂಗಾಂಗ್‌ನಿಂದ ಚಾಂಗ್ ಲಾ ಪಾಸ್ (Chang La pass) ಮೂಲಕ ಲೇಹ್‌ಗೆ ಮರಳುವ ಪ್ರಯಾಣ. ದಾರಿಯಲ್ಲಿ ಥಿಕ್ಸೆ ಮೊನಾಸ್ಟರಿ ಮತ್ತು ರಾಂಚೋ ಸ್ಕೂಲ್ ವೀಕ್ಷಣೆ.
ದಿನ 7: ಬೆಳಗಿನ ಉಪಹಾರದ ನಂತರ ಲೇಹ್ ವಿಮಾನ ನಿಲ್ದಾಣಕ್ಕೆ ಡ್ರಾಪ್. ಅಲ್ಲಿಂದ ವಿಮಾನದ ಮೂಲಕ ವಾಪಾಸ್ ಆಗುವುದು.
ಪ್ಯಾಕೇಜ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿರುತ್ತದೆ?
ಈ ಟೂರ್ ಪ್ಯಾಕೇಜ್‌ನಲ್ಲಿ ಪ್ರಯಾಣಿಕರ ಹೋಗುವ ಮತ್ತು ಬರುವ ವಿಮಾನ ಟಿಕೆಟ್‌ಗಳು (Economy Class) ಸೇರಿವೆ. ಲೇಹ್, ನುಬ್ರಾ ಮತ್ತು ಪ್ಯಾಂಗಾಂಗ್‌ನಲ್ಲಿ ಉತ್ತಮ ಗುಣಮಟ್ಟದ ಹೋಟೆಲ್ ಅಥವಾ ಕ್ಯಾಂಪ್‌ಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಇರಲಿದೆ. ಪ್ರತಿದಿನದ ಉಪಹಾರ ಮತ್ತು ರಾತ್ರಿ ಊಟ ಪ್ಯಾಕೇಜ್‌ನಲ್ಲಿಯೇ ಸೇರಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಮತ್ತು ವಿಮಾನ ನಿಲ್ದಾಣದ ಪಿಕ್-ಅಪ್/ಡ್ರಾಪ್‌ಗಾಗಿ ನಾನ್-ಎಸಿ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ. ಇದಲ್ಲದೆ, ಲಡಾಖ್‌ನಲ್ಲಿ ಓಡಾಡಲು ಅಗತ್ಯವಿರುವ ಇನ್ನರ್ ಲೈನ್ ಪರ್ಮಿಟ್, ಟೋಲ್, ಪಾರ್ಕಿಂಗ್ ಶುಲ್ಕ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಕೂಡ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.
ಟಿಕೆಟ್ ಬೆಲೆ ಎಷ್ಟು?
ಟಿಕೆಟ್ ದರವು ನೀವು ಆಯ್ಕೆ ಮಾಡುವ ಆಕ್ಯುಪೆನ್ಸಿ (Occupancy) ಮತ್ತು ಪ್ರಯಾಣದ ದಿನಾಂಕದ ಆಧಾರದ ಮೇಲೆ ಸ್ವಲ್ಪಮಟ್ಟಿಗೆ ಬದಲಾಗುತ್ತದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ ಅಂದಾಜು ದರಗಳು ಹೀಗಿವೆ:
ಒಬ್ಬರಿಗೆ ಪ್ರತ್ಯೇಕ ಕೊಠಡಿ: ಅಂದಾಜು 54,000 ರೂ. ನಿಂದ 58,000 ರೂ.
ಇಬ್ಬರು ಕೊಠಡಿ ಹಂಚಿಕೊಳ್ಳುವುದು: ಒಬ್ಬರಿಗೆ ಅಂದಾಜು 48,000 ರೂ.
ಮೂವರು ಕೊಠಡಿ ಹಂಚಿಕೊಳ್ಳುವುದು: ಒಬ್ಬರಿಗೆ ಅಂದಾಜು 47,000 ರೂ. ಮಕ್ಕಳಿಗಾಗಿ ಪ್ರತ್ಯೇಕ ದರಗಳಿದ್ದು, ಹಾಸಿಗೆ ಬೇಕಾದಲ್ಲಿ ಮತ್ತು ಬೇಡವಾದಲ್ಲಿ ದರಗಳಲ್ಲಿ ವ್ಯತ್ಯಾಸವಿರುತ್ತದೆ.
ಬುಕಿಂಗ್ ಮಾಡುವುದು ಹೇಗೆ?
ಈ ಪ್ಯಾಕೇಜ್ ಅನ್ನು ಬುಕ್ ಮಾಡಲು ಇಚ್ಛಿಸುವ ಪ್ರವಾಸಿಗರು ಐಆರ್‌ಸಿಟಿಸಿ ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್ (www.irctctourism.com) ಗೆ ಭೇಟಿ ನೀಡಿ, 'NDA12' ಪ್ಯಾಕೇಜ್ ಕೋಡ್ ಅನ್ನು ಸರ್ಚ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು. ಆನ್‌ಲೈನ್ ಬುಕಿಂಗ್ ಸಾಧ್ಯವಾಗದವರು ಐಆರ್‌ಸಿಟಿಸಿ ಕಚೇರಿಗಳನ್ನು ಸಂಪರ್ಕಿಸಿ ಕೂಡ ಬುಕಿಂಗ್ ಮಾಡಿಕೊಳ್ಳಬಹುದು.














Click it and Unblock the Notifications