• search
  • Live TV
keyboard_backspace

ಆಡಿ ಕಾರು ಅಪಘಾತ: Oneindia Kannada ತನಿಖೆಯಲ್ಲಿ ಹೊರಬಿದ್ದ ನಿಗೂಢ ಸತ್ಯ

Google Oneindia Kannada News

ಬೆಂಗಳೂರು, ಸೆ. 06: ಏಳು ಮಂದಿಯ ಸಾವಿಗೆ ಕಾರಣವಾದ "ಆಡಿ(Audi) ಕಾರು ಅಪಘಾತ" ಪ್ರಕರಣದ ನಿಗೂಢ ಸತ್ಯಗಳು ಒಂದೊಂದಾಗಿ ಹೊರ ಬಿದ್ದಿವೆ. ಕಾರಿನ ಅಪಘಾತದಲ್ಲಿ ಗಾಯಗೊಂಡಿದ್ದೇ ಆರು ಮಂದಿಯ ಸಾವಿಗೆ ಕಾರಣವಾಯಿತೇ? ಯಾವಾಗಲೂ ಇದ್ದ ಆ ಬ್ಯಾರಿಕೇಡ್ ಇದ್ದಿದ್ದರೆ ಎಲ್ಲರ ಜೀವ ಉಳಿಯುತ್ತಿತ್ತಾ? ಕೇವಲ ಮೂರು ಜನರಿಗೆ ಗಂಭೀರ ಗಾಯವಾಗಿದ್ದು, ಉಳಿದ ನಾಲ್ವರು ಸಾಯುವ ಪ್ರಮೇಯವೇ ಇರಲಿಲ್ಲ. ಹಾಗಾದರೆ ನಿಜಕ್ಕೂ ಏಳು ಮಂದಿಯ ಉಸಿರು ನಿಲ್ಲಿಸಿದ ಆ ವಸ್ತ ಯಾವುದು ? ಒನ್ಇಂಡಿಯಾ ಕನ್ನಡದ " ಘಟನಾ ಸ್ಥಳದ ಪ್ರಾಥಮಿಕ ತನಿಖಾ ವರದಿಯಲ್ಲಿ ಅಪಘಾತದ ನಿಗೂಢ ಸತ್ಯ ಇಲ್ಲಿ ನೀಡಲಾಗಿದೆ. ಮುಂದೆ ಓದಿ.

ಆರು ದಿನದ ಹಿಂದೆ ಬೆಳಗಿನ ಜಾವ 2. 00 ಕ್ಕೆ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಸಂಭವಿಸಿದ ಆಡಿ ಕಾರು ಅಪಘಾತದಲ್ಲಿ ಹೊಸೂರು ಶಾಸಕ ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್ ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದರು. ಕರುಣಾಸಾಗರ್, ಆತನ ಗೆಳತಿ ಬಿಂದು, ಮಹಾರಾಷ್ಟ್ರ ಮೂಲದ ಎಂಎನ್‌ಸಿ ಕಂಪನಿ ಉದ್ಯೋಗಿ ಇಷಿತಾ ಬಿಶ್ವಾಸ್, ಕೇರಳ ಮೂಲದ ಡೆಂಟಿಸ್ಟ್ ಧನುಶಾ, ಕೇರಳ ಮೂಲದ ಅಕ್ಷಯ್ ಗೋಯಲ್, ಹರಿಯಾಣ ಮೂಲದ ಉತ್ಸವ್, ರೋಹಿತ್ , ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದರು.

ಏಳು ಮಂದಿಯ ಸಾವಿಗೆ ಕಾರಣವಾದ ಮರಣೋತ್ತರ ಪರೀಕ್ಷಾ ವರದಿ ಹಾಗೂ ಘಟನಾ ಸ್ಥಳದ ವಾಸ್ತವ, ಅಫಘಾತ ಪ್ರಕರಣದ ತನಿಖೆಯ ಎಕ್ಸಪರ್ಟ್‌ಗಳು, ಪ್ರತ್ಯಕ್ಷದರ್ಶಿಗಳು ನೀಡಿದ ನಿಖರ ಮಾಹಿತಿ ಸಂಗ್ರಹಿಸಿದ ಒನ್ಇಂಡಿಯಾ ಕನ್ನಡಕ್ಕೆ ಲಭ್ಯವಾದ ಸತ್ಯಗಳೇ ಬೇರೆ. ಏಳು ಮಂದಿಯೂ ಸಾವನ್ನಪ್ಪಲು ಕಾರಣ ಬ್ರೇಕ್ ಫೇಲ್ ಕಾರಣವಲ್ಲ, ಏರ್ ಬ್ಯಾಗ್‌ಗಳು ಯಾಕೆ ಓಪನ್ ಅಗಿಲ್ಲ ಎಂಬುದರ ನಿಗೂಢ ಸತ್ಯಗಳು ಅನಾವರಣಗೊಂಡಿವೆ. ಅದರ ಪ್ರಕಾರ ಏಳು ಮಂದಿಯ ಸಾವಿಗೆ ಕಾರಣವೇ ಬೇರೆಯದ್ದು ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕಾರ್ಬನ್ ಮೋನಾಕ್ಸೈಡ್ ಕಾರಣ!

ಕಾರ್ಬನ್ ಮೋನಾಕ್ಸೈಡ್ ಕಾರಣ!

ಅಡಿ ಕಾರು ಅಪಘಾತದಲ್ಲಿ ಏಳು ಮಂದಿಯ ಸಾವಿಗೆ ಕಾರಣವಾಗಿದ್ದು ಕಾರ್ಬನ್ ಮೋನಾಕ್ಸೈಡ್ ಕಾರಣವಾಗಿದೆ. ಎಸ್‌ಜಿವಿ ಕಡೆಯಿಂದ ಕೋರಮಂಗಲ ಮೂಲಕ ಹೊಸೂರು ರಸ್ತೆಗೆ ತೆರಳಲು ಕರುಣಾ ಸಾಗರ್ ಆಡಿ ಕಾರ್ ಚಾಲನೆ ಮಾಡುತ್ತಿದ್ದ. ಸುಮಾರು 120 ರಿಂದ 150 ವೇಗದಲ್ಲಿದ್ದ ಕಾರನ್ನು ಒಂದು ನೂಲಷ್ಟು ತಿರುಗಿಸಿದ್ದರೂ ಅಪಘಾತ ಸಂಭವಿಸುತ್ತಿರಲಿಲ್ಲ. ಕಾರು ಅಪಘಾತಕ್ಕೆ ಈಡಾಗುತ್ತಿದ್ದಂತೆ ಅದರಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಅಪಘಾತದಿಂದ ಗಾಯಗೊಂಡು ನಿತ್ರಾಣಗೊಂಡಿದ್ದ ಏಳು ಮಂದಿಯಲ್ಲಿ ಬಹುತೇಕರು ಕಾರ್ಬನ್ ಮೋನಾಕ್ಸೈಡ್‌ನಿಂದ ಉಸಿರು ಗಟ್ಟಿಸಿ ಸಾವನ್ನಪ್ಪಿರುವ ದಟ್ಟ ಸಾಧ್ಯತೆಗಳು ಕಂಡು ಬರುತ್ತಿವೆ. ಯಾಕೆಂದರೆ ಮರಣೋತ್ತರ ಪರೀಕ್ಷಾ ವರದಿ ಪ್ರಕಾರ ಕೇವಲ ಒಬ್ಬರು ಮಾತ್ರ ಎದೆ, ತಲೆ ಸೇರಿದಂತೆ ಗಂಭೀರವಾಗಿ ಗಾಯಗೊಂಡಿದ್ದರು. ಇನ್ನಿಬ್ಬರಿಗೆ ಎದೆ ಮತ್ತು ತಲೆಗೆ ಪೆಟ್ಟಾಗಿವೆ. ಉಳಿದವರಿಗೆ ಸಣ್ಣ ಪಟ್ಟ ಗಾಯಗಳಾಗಿದ್ದರೂ ಎಲ್ಲರೂ ಕೆಲವೇ ಕ್ಷಣಗಳಲ್ಲಿ ಸಾವಿಗೀಡಾಗಿರುವುದನ್ನು ನೋಡಿದರೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಉಂಟಾದ ಕಾರ್ಬನ್ ಮೋನಾಕ್ಸೈಡ್ ಸಾವಿಗೆ ಕಾರಣವಾಗಿರುವ ದಟ್ಟ ಸಾಧ್ಯತೆ ಕಂಡು ಬರುತ್ತಿದೆ. ಇದನ್ನು ಪುಷ್ಟೀಕರಿಸುವ ನೈಜ ಕಾರಣಗಳು ಇಲ್ಲಿವೆ ನೋಡಿ.

ಉಸಿರಾಡಲು ಆಗದೇ ಕೆಮ್ಮುತ್ತಿದ್ದವರ ಜೀವ ರಕ್ಷಣೆ ಪ್ರಯತ್ನ

ಉಸಿರಾಡಲು ಆಗದೇ ಕೆಮ್ಮುತ್ತಿದ್ದವರ ಜೀವ ರಕ್ಷಣೆ ಪ್ರಯತ್ನ

ಬೆಳಗಿನ ಜಾವ ಆಡಿ ಕಾರು ಅಪಘಾತದ ಸದ್ದು ಕೇಳಿ ಅದೇ ಬಿಲ್ಡಿಂಗ್‌ನಲ್ಲಿ ಆಫೀಸ್ ಬಾಯ್ ಅಗಿ ಕೆಲಸ ಮಾಡುತ್ತಿದ್ದ ಯುವಕ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ. ಕಾರಿನ ಸಮೀಪ ಹೋಗುತ್ತಿದ್ದಂತೆ ಕಾಣಿಸಿದ್ದು ದಟ್ಟ ಹೊಗೆ "ಸದ್ದು ಕೇಳಿದ ಕೂಡಲೇ ಹೊರಗೆ ಬಂದೆ. ನೋಡಿದರೆ ಒಬ್ಬರು ಕಾರಿನ ಅರ್ಧ ಭಾಗದಲ್ಲಿ ಕಾಣಿಸುತ್ತಿದ್ದರು. ಸಂಪೂರ್ಣ ದಟ್ಟ ಹೊಗೆ ಆವರಿಸಿತ್ತು. ಮನೆಯಲ್ಲಿದ್ದ ನೀರನ್ನು ಸುರಿದೆವು. ಕೂಡಲೇ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದೆವು. ಅಗ್ನಿ ಶಾಮಕ ವಾಹನ ಸ್ಥಳಕ್ಕೆ ಬರಲು 30 ನಿಮಿಷ ಆಯಿತು. ಕಾರಿನಲ್ಲಿದ್ದವರು ಕೆಮ್ಮುತ್ತಿದ್ದ ಸದ್ದು ಕೇಳಿಸುತ್ತಿತ್ತು. ಆನಂತರ ಸ್ಥಳಕ್ಕೆ ಬಂದ ಪೊಲೀಸರು ಎಲ್ಲಾ ಮೃತ ದೇಹಗಳನ್ನು ಆಂಬ್ಯೂಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು" ಎಂಬುದು ಪ್ರತ್ಯಕ್ಷದರ್ಶಿ ಮಾತು.

ವಿಶೇಷವೆಂದರೆ ಅಪಘಾತಕ್ಕೆ ಒಳಗಾಗಿರುವ ಕಟ್ಟಡದಲ್ಲಿಯೇ ಆಫೀಸ್ ಬಾಯ್ ಅಗಿದ್ದ ಯುವಕ, ಈತನೇ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಮೊದಲ ವ್ಯಕ್ತಿ ಕೂಡ. ಪ್ರತ್ಯಕ್ಷ ದರ್ಶಿಯ ಹೇಳುವ ಪ್ರಕಾರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅದರಿಂದ ಉಂಟಾದ ಕಾರ್ಬನ್ ಮೋನಾಕ್ಸೈಡ್ ಎಲ್ಲರ ಸಾವಿಗೆ ಕಾರಣವಾಯಿತೇ ಎಂಬ ಅನುಮಾನ ಇದೀಗ ಕಾಡಲು ಶುರುವಾಗಿದೆ.

ಏಳು ಮಂದಿಯಲ್ಲಿ ಎಷ್ಟು ಮಂದಿಗೆ ಗಂಭೀರ ಗಾಯ?

ಏಳು ಮಂದಿಯಲ್ಲಿ ಎಷ್ಟು ಮಂದಿಗೆ ಗಂಭೀರ ಗಾಯ?

ಅಪಘಾತಕ್ಕೀಡಾದ ಏಳು ಮಂದಿಯಲ್ಲಿ ಒಬ್ಬರಿಗೆ ತಲೆ ಹಾಗೂ ಎದೆಗೆ ಸೇರಿ ಗಂಭೀರ ಗಾಯಗಳಾಗಿವೆ. ಉಳಿದ ಇಬ್ಬರ ಎದೆಗೆ ಪೆಟ್ಟಾಗಿದೆ. ಉಳಿದ ಇನ್ನಿಬ್ಬರಿಗೆ ತಲೆಗೆ ಹಾಗೂ ಸಣ್ಣ ಪುಟ್ಟ ಪೆಟ್ಟಾಗಿವೆ. ಉಳಿದ ಮೂವರಿಗೆ ಯಾವುದೇ ರೀತಿಯ ಗಾಯಗಳು ಕಾಣಿಸಿಕೊಂಡಿಲ್ಲ. ವಿಶೇಷ ವೆಂದರೆ ಏಳು ಮಂದಿಯನ್ನು ಆಸ್ಪತ್ರೆಯಲ್ಲಿ ಸಾಗಿಸುವ ವೇಳೆ ಒಬ್ಬ ಕೆಮ್ಮುತ್ತಿದ್ದ ಎಂಬುದನ್ನು ಪೊಲೀಸರೇ ವೈದ್ಯರಿಗೆ ದೃಢಪಡಿಸಿದ್ದಾರೆ. ಹೀಗಾಗಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಪರಿಣಾಮ, ಹೊರ ಬರಲಾರದೇ ಉಸಿರು ಗಟ್ಟಿಸಿ ಸಾವನ್ನಪ್ಪಲು ಕಾರಣವಾಯಿತೇ ಎಂಬ ಅನುಮಾನಕ್ಕೆ ಈ ಘಟನೆ ಕೂಡ ಪುಷ್ಟೀಕರಿಸುತ್ತದೆ.

ಸಾಮಾನ್ಯವಾಗಿ ಕೊಲೆ, ಮಾರಕ ದಾಳಿ ಪ್ರಕರಣಗಳಲ್ಲಿ ಗಂಭೀರ ಗಾಯಗೊಳ್ಳುವ ವ್ಯಕ್ತಿ ನರಳಾಡಿದವರ ಜೀವಗಳೇ ಉಳಿದುಕೊಂಡಿರುವ ಉದಾಹರಣೆಗಳು ಇವೆ. ಇಂತಹದಲ್ಲಿ ಅತಿ ಸುರಕ್ಷಿತ ಕಾರುಗಳಲ್ಲಿ ಒಂದಾಗಿರುವ ಅಡಿ ಕಾರು ಅಪಘಾತದಲ್ಲಿ ಏಳು ಮಂದಿಯ ಸಾವಿಗೆ ಕಾರಣವಾಗಿದ್ದು ಗಾಯಗಳಲ್ಲ, ಕಾರಿನ ಅಪಘಾತದ ವೇಳೆ ಉಂಟಾದ ಕಾರ್ಬನ್ ಮೋನಾಕ್ಸೈಡ್‌ನಿಂದ ಉಸಿರುಗಟ್ಟಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಆಮ್ಲಜನಕ ಕೊರತೆಯಿಂದ ಸಾವು ಸಾಧ್ಯತೆ

ಆಮ್ಲಜನಕ ಕೊರತೆಯಿಂದ ಸಾವು ಸಾಧ್ಯತೆ

ಆಡಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಸಿದಂತೆ ಮರಣೋತ್ತರ ಪರೀಕ್ಷೆಯನ್ನು ಪೊಲೀಸರಿಗೆ ಸಲ್ಲಿಸಲಾಗಿದೆ. ಆದರಲ್ಲಿ ಒಬ್ಬರಿಗೆ ತೀವ್ರ ಪೆಟ್ಟಾಗಿದ್ದು, ಉಳಿದ ಇಬ್ಬರ ಎದೆ ಮತ್ತು ತಲೆಗೆ ಪೆಟ್ಟಾಗಿವೆ. ಆದರೆ ಎಲ್ಲರೂ ಗಾಯಗಳಿಂದ ಸಾವನ್ನಪ್ಪಿರುವ ಬಗ್ಗೆ ನಮಗೂ ಅನುಮಾನ ವ್ಯಕ್ತವಾಗಿದೆ. ಕಾರಿನ ಅಪಘಾತದ ವೇಳೆ ಬೆಂಕಿ ಕಾಣಿಸಿಕೊಂಡು ಕಾರ್ಬನ್ ಮೋನಾಕ್ಸೈಡ್‌ನಿಂದ ಉಸಿರು ಗಟ್ಟಿಸಿ ಸಾವನ್ನಪ್ಪಿರುವ ಸಾಧ್ಯತೆಯಿದೆ.

ಗಾಯಗಳಿಂದ ಎಲ್ಲರೂ ಸಾವನ್ನಪ್ಪುತ್ತಾರೆ ಎಂಬ ಸಂಗತಿ ನಮ್ಮನ್ನೂ ಕಾಡುತ್ತಿದೆ. ಹೀಗಾಗಿ ಮೃತರ ರಕ್ತದ ಮಾದರಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಕಾರ್ಬನ್ ಮೋನಾಕ್ಸೈಡ್‌ನಿಂದ ಸಾವನ್ನಪ್ಪಿದ್ದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಗೊತ್ತಾಗಲಿದೆ. ಮೃತರ ಪರಿಸ್ಥಿತಿ ನೋಡಿದಾಗ ಕಾರ್ಬನ್ ಮೋನಾಕ್ಸೈಡ್‌ನಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಏಳು ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಸೇಂಟ್ ಜಾನ್ಸ್ ಆಸ್ಪತ್ರೆಯ ವೈದ್ಯ ಡಾ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಎರಡು ವಾಹನ ಡಿಕ್ಕಿ ಹೊಡೆದರೂ ಈ ಪರಿಯ ಸಾವು ಅಸಾಧ್ಯ

ಎರಡು ವಾಹನ ಡಿಕ್ಕಿ ಹೊಡೆದರೂ ಈ ಪರಿಯ ಸಾವು ಅಸಾಧ್ಯ

ಆಡಿ ಕಾರು ಅಪಘಾತದ ಸ್ಥಳಕ್ಕೆ ಪ್ರತಿ ನಿತ್ಯ ಕನಿಷ್ಠ ಹತ್ತರಿಂದ 20 ಚಾಲಕರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಯಾವ ಕಾರಣಕ್ಕೆ ಅಪಘಾತ ಆಯಿತು ಎಂಬುದಕ್ಕೆ ಸ್ವತಃ ಅವರೇ ವಿಶ್ಲೇಷಣೆ ಮಾಡುತ್ತಿದ್ದಾರೆ. ನೂರು ಸ್ಪೀಡ್‌ನಲ್ಲಿ ಓಡಿಸಿದರೂ ಅಪಘಾತ ಆಗುವ ರಸ್ತೆಯೇ ಇದಲ್ಲ. ಒಂದು ನೂಲಷ್ಟು ಸ್ಟೇರಿಂಗ್ ತಿರುಗಿಸಿದ್ದರೂ ಅಪಘಾತ ತಪ್ಪಿಸಬಹುದಿತ್ತು. ಎದುರುನಿಂದ ಮತ್ತೊಂದು ದೊಡ್ಡ ವಾಹನ ಬಂದು ಡಿಕ್ಕಿ ಹೊಡೆದಿಲ್ಲ. ಎರಡು ವಾಹನ ನೂರು ಸ್ಪೀಡ್‌ನಲ್ಲಿ ಎದುರು ಡಿಕ್ಕಿ ಹೊಡೆದರೆ ಇಂತಹ ಅವಘಡ ಆಗಲಿಕ್ಕೆ ಸಾಧ್ಯ. ಒಂದು ವಾಹನ ಹೋಗಿ ಡಿಕ್ಕಿ ಹೊಡೆದಿರುವುದರಿಂದ ಇಷ್ಟು ಮಂದಿ ಕ್ಷಣಾರ್ಧದಲ್ಲಿ ಸಾವನ್ನಪ್ಪಿರುವುದನ್ನು ನಂಬಲು ಸಾಧ್ಯವಿಲ್ಲ ಎನ್ನುತ್ತಾರೆ ಐಷಾರಾಮಿ ಕಾರುಗಳ ರೇಸಿಂಗ್ ಮಾಡುವ ಚಾಲಕ. ಎಲ್ಲಾ ಆಯಾಮದಲ್ಲಿ ನೋಡಿದರೆ, ಅಡಿ ಕ್ಯೂ 03 ಕಾರಿನ ಅಪಘಾತದಲ್ಲಿ ಬೆಂಕಿ ಕಾಣಿಸಿಕೊಂಡು ಆಮ್ಲಜನಕ ಕೊರತೆ ಎದುರಾಗಿ ಸಾವನ್ನಪ್ಪಿರುವ ನಿಶ್ಚಳತೆ ಎದ್ದು ಕಾಣುತ್ತಿದೆ.

ಒಂದು ಬ್ಯಾರಿಕೇಡ್ ತಪ್ಪಿಸಬಹುದಿತ್ತೇ?

ಒಂದು ಬ್ಯಾರಿಕೇಡ್ ತಪ್ಪಿಸಬಹುದಿತ್ತೇ?

ಸಾಮಾನ್ಯವಾಗಿ ರಾತ್ರಿ ವೇಳೆ ಅತಿ ವೇಗವಾಗಿ ಚಾಲನೆ ಮಾಡುವ ವಾಹನಗಳಿಗೆ ಕಡಿವಾಣ ಹಾಕಲೆಂದು ಪೊಲೀಸರು ಬ್ಯಾರಿಕೇಡ್ ಹಾಕಿರುತ್ತಾರೆ. ಅದರಲ್ಲೂ ಮೇಲ್ಸೇತುವೆಗಳಲ್ಲಿ ಕಡ್ಡಾಯವಾಗಿ ಬ್ಯಾರಿಕೇಡ್ ಹಾಕಲಾಗಿರುತ್ತದೆ. ಅದರಂತೆ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಸಮೀಪ ಕೂಡ ಯಾವಾಗಲೂ ಪೊಲೀಸರು ಬ್ಯಾರಿಕೇಡ್ ಹಾಕುತ್ತಿದ್ದರು. ಆದರೆ, ವಿಧಿಯಾಟಕ್ಕೆ ಅವತ್ತೇ ಬ್ಯಾರಿ ಕೇಡ್ ಹಾಕಿರಲಿಲ್ಲ. ಇನ್ನೊ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ , ಬಿಂಧು ಹಾಗೂ ಕರುಣಾಸಾಗರ್ ನಡುವೆ ಮಾತುಕತೆ ವೇಳೆ ಮನಸ್ತಾಪ ಉಂಟಾಗಿ ಉದ್ದೇಶ ಪೂರ್ವಕವಾಗಿ ವಾಹನ ಅಪಘಾತಕ್ಕೆ ಎಡೆ ಮಾಡಿಕೊಟ್ಟನೇ? ಇಲ್ಲವೇ ಮದ್ಯಪಾನದಿಂದ ನಿಯಂತ್ರಣ ತಪ್ಪಿ ಕಾರು ಚಲಾವಣೆ ಮಾಡಿದ್ದರಿಂದ ಅಪಘಾತ ಸಂಭವಿಸಿತೇ ಎನ್ನುವ ಪ್ರಶ್ನೆಗಳಿಗೆ ಪೊಲೀಸರ ತನಿಖೆಯೇ ಉತ್ತರಿಸಬೇಕಿದೆ. ಆದರೆ, ಒನ್ಇಂಡಿಯಾ ಕನ್ನಡಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಕಾರು ಅಪಘಾತದ ವೇಳೆ ಕಾರ್ಬನ್ ಮೋನಾಕ್ಸೈಡ್ ಸೇವಿಸಿ ಬಹುತೇಕರು ಉಸಿರು ಗಟ್ಟಿಸಿ ಸಾವನ್ನಪ್ಪಿರುವ ಸಾಧ್ಯತೆ ಕಾಣುತ್ತಿದೆ.

ಪ್ರಕರಣದ ತನಿಖಾ ಪ್ರಗತಿ

ಪ್ರಕರಣದ ತನಿಖಾ ಪ್ರಗತಿ

ಹೊಸೂರು ಶಾಸಕ ಪ್ರಕಾಶ್ ಅವರ ಪುತ್ರ ಕರುಣಾಸಾಗರ್ ಮತ್ತು ಆತನ ಸಹೋದ್ಯೋಗಿಗಳ ಸಾವಿಗೀಡಾದ ಅಪಘಾತ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಲಾಗಿದೆ. ಎಸಿಪಿ ದರ್ಜೆಯ ಅಧಿಕಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆಡಿ ಕಾರಿನ ಸುರಕ್ಷತೆ ಬಗ್ಗೆಯೂ ಅವರು ಕಾರಿನ ಉತ್ಪಾದಕರಿಂದ ಮಾಹಿತಿ ಕೋರಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಸಂಗ್ರಹಿಸಿದ್ದಾರೆ. ಇದರ ನಡುವೆ ಮೃತರ ರಕ್ತದ ಮಾದರಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಏಳು ಮಂದಿಯ ಜೀವ ಬಲಿ ಪಡೆದ ಕಾರಣ ಗೊತ್ತಾಗಲಿದೆ.

English summary
Bengaluru Audi Car Accident Case: Oneindia Kannada Team conduct Primary Investigation on Accident Spot. Here is the detailed report. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X