keyboard_backspace

ಸ್ಟೋರಿ ಆಫ್ ಭಕ್ಷಿಗಾರ್ಡನ್ vs ರಾಜಕೀಯ ಹತ್ಯೆ: ಗಾರ್ಡನ್ ಮಣಿ ಯಿಂದ ರೇಖಾ ತನಕ

Google Oneindia Kannada News

ಬೆಂಗಳೂರು, ಜೂನ್. 24: ಭಕ್ಷಿಗಾರ್ಡನ್, ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಕೂಗಳತೆ ದೂರದಲ್ಲಿರುವ ಪುಟ್ಟ ಪ್ರದೇಶ. ಬೆಂಗಳೂರಿನ ಕೇಂದ್ರ ವಿಭಾಗದಲ್ಲಿ ನಡೆಯುವ ಕೊಲೆ, ದರೋಡೆ, ಸುಲಿಗೆ ಪ್ರಕರಣ ವರದಿಯಾದರೆ ಪೊಲೀಸರು ಮೊದಲು ಕಾಲಿಡುವುದು ಇದೇ ಭಕ್ಷಿಗಾರ್ಡನ್‌ಗೆ. ಛಲವಾದಿಪಾಳ್ಯ ಬಿಬಿಎಂಪಿ ವಾರ್ಡ್‌ಗೆ ಸೇರಿರುವ ಈ ಭಕ್ಷಿಗಾರ್ಡನ್‌ನಲ್ಲಿ ಮಿನಿ ಡಾನ್ ಗಳದ್ದೇ ಕಾರುಬಾರು.

ಬಿಬಿಎಂಪಿ ಸದಸ್ಯ ಸ್ಥಾನಕ್ಕಾಗಿ ದಶಕಗಳಿಂದಲೂ ಭಕ್ಷಿಗಾರ್ಡನ್‌ನಲ್ಲಿ ನೆತ್ತರು ಹರಿಯುತ್ತಲೇ ಇದೆ. ಒಂದು ಕಾಲದಲ್ಲಿ ರೌಡಿಯಾಗಿದ್ದ ಕದಿರೇಶ್ ಕೂಡ ಅಪರಾಧ ಕೃತ್ಯಗಳ ಮೂಲಕವೇ ಸಾರ್ವಜನಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದ. ಆತ ಮಾಡಿದ್ದ ಅಪರಾಧ ಕೃತ್ಯಗಳು ಆತನನ್ನು ಬಲಿ ಪಡೆಯಿತು. ಇದೀಗ ಅತನ ಪತ್ನಿಯನ್ನೂ ಬಲಿ ಪಡೆದಿದೆ. ಭಕ್ಷಿಗಾರ್ಡನ್‌ನಲ್ಲಿ ದಶಕಗಳಿಂದಲೂ ಆಗುತ್ತಿರುವ ಹತ್ಯೆಗಳ ರಕ್ತ ಚರಿತ್ರೆಯ ವಿವರ ಇಲ್ಲಿದೆ ನೋಡಿ.

ಭಕ್ಷಿಗಾರ್ಡನ್ ದಾದಗಿರಿ ಹಾಗೂ ಕಾರ್ಪೋರೇಟರ್‌ಗಳ ಸಾವು !ಭಕ್ಷಿಗಾರ್ಡನ್ ದಾದಗಿರಿ ಹಾಗೂ ಕಾರ್ಪೋರೇಟರ್‌ಗಳ ಸಾವು !

ಭಕ್ಷಿಗಾರ್ಡನ್‌ ನೋಡೋಕೆ ಬಡವರೇ ವಾಸಿಸುವ ಪ್ರದೇಶ. ದರೋಡೆ, ಸುಲಿಗೆ ಮಾಡುವ ಅಪರಾಧಿಗಳು ಅಲ್ಲಿದ್ದಾರೆ. ಗಾಂಜಾ ಡ್ರಗ್ ಜಾಲಕ್ಕೂ ಭಕ್ಷಿಗಾರ್ಡನ್‌ಗೂ ದೊಡ್ಡ ಮಟ್ಟದ ಲಿಂಕ್ ಇರುವುದು ಈ ಹಿಂದೆ ಪೊಲೀಸರು ದಾಖಲಿಸಿರುವ ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಭಕ್ಷಿಗಾರ್ಡನ್‌ನಲ್ಲಿ ಡಾನ್ ಎನಿಸಿಕೊಳ್ಳಲು ಮಚ್ಚು ಹಿಡಿದವರೆಲ್ಲರೂ ನೆತ್ತರು ಹರಿಸಿ ಮಸಣ ಸೇರಿದ್ದಾರೆ. ಹಾಗೆ ನೋಡುವುದೇ ಆದರೆ ಇಲ್ಲಿನ ಬಿಬಿಎಂಪಿ ಸದಸ್ಯ ಕುರ್ಚಿ ಅಲಂಕರಿಸಲು ಅನೇಕರು ಹತರಾಗಿದ್ದಾರೆ. ಅದರಲ್ಲಿ ಮೊದಲು ಕೊಲೆಯಾಗಿದ್ದು ಗಾರ್ಡನ್ ಮಣಿ. ಮುಂದೆ ಓದಿ...

 ಗಾರ್ಡನ್ ಮಣಿ ಹತ್ಯೆ

ಗಾರ್ಡನ್ ಮಣಿ ಹತ್ಯೆ

ಅಪರಾಧ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಗಾರ್ಡನ್ ಮಣಿ ಹೆಸರು ಹೇಳಿದರೆ ಇಡೀ ಭಕ್ಷಿಗಾರ್ಡನ್ ಹೆದರುತ್ತಿತ್ತು. ಹೀಗೆ ಪ್ರಭಾವ ಬೀರಿದ್ದ ಗಾರ್ಡನ್ ಮಣಿಯ ಬೆಳವಣಿಗೆ ಕಾರ್ಪೋರೇಟರ್ ಆಗಿದ್ದ ವ್ಯಕ್ತಿಯೊಬ್ಬರಿಗೆ ತೊಂದರೆ ಆಗಿತ್ತು. ಈ ವೇಳೆ ಸುಪಾರಿ ನೀಡಿ ಗಾರ್ಡನ್ ಮಣಿಯನ್ನು ಸಿನಿಮಾ ಚಿತ್ರಮಂದಿರ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಮಾಜಿ ಕಾರ್ಪೋರೇಟರ್ ಕೂಡ ಜೈಲಿಗೆ ಹೋಗಿದ್ದ. ಹತ್ಯೆ ಮಾಡಿದ ಚಾಮರಾಜ್ ಮತ್ತು ಗ್ಯಾಂಗ್ ಭಕ್ಷಿಗಾರ್ಡನ್‌ ತೊರೆದಿತ್ತು.

ಜೋಪಡಿ ರಾಜೇಂದ್ರನನ್ನು ಮುಗಿಸಿದ ಕದಿರೇಶ

ಜೋಪಡಿ ರಾಜೇಂದ್ರನನ್ನು ಮುಗಿಸಿದ ಕದಿರೇಶ

ಗಾರ್ಡನ್ ಮಣಿ ಹತ್ಯೆಯ ಬಳಿಕ ಮುನ್ನೆಲೆಗೆ ಬಂದಿದ್ದು ಜೋಪಡಿ ರಾಜೇಂದ್ರ. ಕೂಲಿಗಳ ನಾಯಕನಾಗಿ ಗುರುತಿಸಿಕೊಂಡಿದ್ದ ಜೋಪಡಿ ರಾಜೇಂದ್ರ ಭಕ್ಷಿಗಾರ್ಡನ್‌ನಲ್ಲಿ ಪ್ರಭಾವ ಬೆಳೆಸಿಕೊಂಡಿದ್ದ. ಜೋಪಡಿ ರಾಜೇಂದ್ರನನ್ನು ಮೆಜೆಸ್ಟಿಕ್ ಬಳಿ ಅಟ್ಟಾಡಿಸಿ ಹತ್ಯೆ ಮಾಡಿದ್ದು ಇದೇ ಕದಿರೇಶ್ ಅಂಡ್ ಟೀಂ. ಜೋಪಡಿ ರಾಜೇಂದ್ರನ ಕೊಲೆ ಮೂಲಕ ಮುನ್ನೆಲೆಗೆ ಬಂದಿದ್ದ ಕದಿರೇಶ್ ತನ್ನ ಪ್ರಭಾವ ಹೆಚ್ಚಿಸಿಕೊಂಡ. ಆನಂತರದಲ್ಲಿ ಪ್ರಭಾವ ಬೀರಿದ್ದ ಗಣೇಶನ್ ಎಂಬಾತ ಕೂಡ ಕೊಲೆಯಾಗಿ ಹೋದ. ಇದೇ ಅವಧಿಯಲ್ಲಿ ಭಕ್ಷಿಗಾರ್ಡನ್‌ನಲ್ಲಿ ರೌಡಿಗಳ ದರ್ಬಾರ್ ಆರಂಭವಾಗಿತ್ತು. ಗುಪ್ಪ ಎಂಬಾತನ ಹವಾ ಜಾಸ್ತಿಯಾಗಿತ್ತು. ಗುಪ್ಪನನ್ನು ಸೂರ್ಯ ಅಂಡ್ ಟೀಮ್ ಮುಗಿಸಿತ್ತು. ಗುಪ್ಪನನ್ನು ಕೊಲೆ ಮಾಡಿದ ಹಳೇ ದ್ವೇಷಕ್ಕೆ ಸುರೇಶ್ ಎಂಬಾತ ಕೂಡ ಕೊಲೆಯಾಗಿ ಮಸಣ ಸೇರಿದ. ಈ ಸರಣಿ ಕೊಲೆಗಳ ನಡುವೆ ತನ್ನ ಪ್ರಭಾವ ಹೆಚ್ಚಿಸಿಕೊಂಡಿದ್ದ ಕದಿರೇಶ ರಾಜಕೀಯ ಪ್ರವೇಶ ಮಾಡಿದ್ದ. ಪತ್ನಿ ರೇಖಾ ರನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದ. ಆನಂತರ ಕಾಮಗಾರಿ ಮಾಡುವ ಮೂಲಕ ಅಪರಾಧ ಲೋಕದಿಂದ ಸ್ವಲ್ಪ ದೂರವಿದ್ದ. ಇದೇ ವೇಳೆ ಸುನೀಲ್ ಮತ್ತು ಇತರರು ಭಕ್ಷಿ ಗಾರ್ಡನ್‌ಗೆ ಕಾಲಿಡದಂತೆ ಕದಿರೇಶ್ ತನ್ನ ಹವಾ ನಿರ್ವಹಣೆ ಮಾಡಲು ಶುರುಮಾಡಿದ.

ಕದಿರೇಶಗೆ ಮುಹೂರ್ತ ಇಟ್ಟು ಮರ್ಡರ್

ಕದಿರೇಶಗೆ ಮುಹೂರ್ತ ಇಟ್ಟು ಮರ್ಡರ್

ಕದಿರೇಶ್ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರೂ, ಪಾತಕ ಲೋಕದಿಂದ ದೂರ ಹೋಗಿರಲಿಲ್ಲ. ಹೀಗಾಗಿ 2018 ರಲ್ಲಿ ಸುನೀಲ್ ಮತ್ತು ಸಹಚರರು ಸೇರಿ ಮುನೇಶ್ವರ ದೇವಸ್ಥಾನ ಬಳಿ ಕದಿರೇಶ್‌ನನ್ನು ಹತ್ಯೆ ಮಾಡಿ ನ್ಯಾಯಾಲಯಕ್ಕೆ ಶರಣಾದರು. ಮೂರು ವರ್ಷದ ಹಿಂದೆ ಜೈಲು ಸೇರಿದ್ದ ಪೀಟರ್ ಮತ್ತು ಆತನ ಸಹಚರರು ಕದಿರೇಶ್ ಪತ್ನಿ ರೇಖಾ ಅವರನ್ನು ಹೊಂಚು ಹಾಕಿ ಹತ್ಯೆ ಮಾಡಿದ್ದಾರೆ. ಅಂತೂ ಭಕ್ಷಿ ಗಾರ್ಡನ್ ರಾಜಕೀಯ ಇತಿಹಾಸ ತಿರುವಿ ಹಾಕಿದರೆ, ಅಲ್ಲಿ ರಾಜಕೀಯ ಲಾಭಕ್ಕಾಗಿ ಕೊಲೆಗಳೇ ನಡೆದಿರುವುದು ಕಂಡು ಬರುತ್ತದೆ. ಇದೀಗ ರೇಖಾ ಕದಿರೇಶ್ ಹತ್ಯೆ ಹಿಂದೆಯೂ ರಾಜಕೀಯ ಲೆಕ್ಕಾಚಾರದ ಮಾತು ಕೇಳಿ ಬರುತ್ತಿದೆ.

ಕದಿರೇಶ್ ಅಕ್ಕನ ಮಗಳು ಎಲೆಕ್ಸನ್ ಪ್ಲಾನ್

ಕದಿರೇಶ್ ಅಕ್ಕನ ಮಗಳು ಎಲೆಕ್ಸನ್ ಪ್ಲಾನ್

ಮುಂಬರುವ ಬಿಬಿಎಂಪಿ ಚುನಾವಣೆಗಾಗಿ ಕದಿರೇಶನ ಅಕ್ಕ ಮಾಲಾ ಅವರ ಮಗಳನ್ನು ನಿಲ್ಲಿಸಲು ಪ್ಲಾನ್ ಮಾಡಿದ್ದರು. ಬಿಜೆಪಿಯ ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಅವರನ್ನು ಭೇಟಿ ಮಾಡಿ ಈ ಬಾರಿ ಟಿಕೆಟ್ ನೀಡುವಂತೆ ಮಾಲಾ ಕೇಳಿದ್ದರು ಎನ್ನಲಾಗಿದೆ. ಇದಕ್ಕೆ ಸ್ಪಷ್ಟವಾಗಿ ಪಿ.ಸಿ. ಮೋಹನ್ ನಿರಾಕರಿಸಿದ್ದರು ಎನ್ನಲಾಗಿದೆ. ಈ ನಂತರ ಜೆಡಿಎಸ್ ಮೂಲಕ ಸೀಟು ಗಿಟ್ಟಿಸಲು ಮಾಲಾ ಶಾಸಕ ಜಮೀರ್ ಅವರನ್ನು ಭೇಟಿ ಮಾಡಿದ್ದರಂತೆ. ರೇಖಾ ಕದಿರೇಶ್ ಇರುವವರೆಗೂ ಯಾರೂ ಸಹ ಸೀಟು ಕೇಳಬೇಡಿ. ಒಂದು ಮನೆಗೆ ಎರಡು ಪಾರ್ಟಿಯ ಟಿಕೆಟ್ ಕೊಡಲಿಕ್ಕೆ ಸಾಧ್ಯವಿಲ್ಲ. ಅವರು ಇರುವವರೆಗೂ ಅಡ್ಡಿ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿ ಕಳಿಸಿದ್ದರಂತೆ. ಹೀಗಾಗಿ ಬಿಬಿಎಂಪಿ ಸದಸ್ಯ ಸ್ಥಾನಕ್ಕೆ ತನ್ನ ಮಗಳನ್ನು ನಿಲ್ಲಿಸಲು ಪ್ಲಾನ್ ರೂಪಿಸಿದ್ದ ಮಾಲಾ ಅವರೇ ಪಾತಕಿಗಳ ಜತೆಗೆ ಕೈ ಜೋಡಿಸಿದರೇ ಎಂಬ ಮಾತು ಕೇಳಿ ಬರುತ್ತಿವೆ.

ಜಮೀರ್ ಶಿಷ್ಯ ಕೂಡ ತಯಾರಿ

ಜಮೀರ್ ಶಿಷ್ಯ ಕೂಡ ತಯಾರಿ

ಛಲವಾದಿ ಪಾಳ್ಯ ಬಿಬಿಎಂಪಿ ವಾರ್ಡ್ ಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ರೇಖಾ ಸುರೇಶ್ ಸ್ಪರ್ಧಿಸಿದ್ದರು. ಎದುರಾಳಿಯಾಗಿ ಶಾಸಕ ಜಮೀರ್ ಅವರ ಪರಮಾಪ್ತ ಎನ್ನಲಾದ ಅತುಷ್ ಸ್ಪರ್ಧಿಸಿದ್ದರು. ಕೇವಲ 200 ವೋಟಿನಿಂದ ಅತುಷ್ ಸೋತಿದ್ದರು. ಅನೇಕ ಅಪರಾಧ ಹಿನ್ನೆಲೆಯುಳ್ಳ ಅತುಷ್ ಮನೆಗೆ ಸುಮಾರು 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆಯಂತೆ. ರೇಖಾ ಸುರೇಶ್ ಇದ್ದರೆ, ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಅಸಾಧ್ಯ ಎಂದು ತೀರ್ಮಾನಿಸಿಯೇ ಅವರ ಹತ್ಯೆಗೆ ಸಂಚು ರೂಪಿಸಿದರೇ ಎಂಬ ಆರೋಪ ಕೇಳಿ ಬರುತ್ತಿದೆ. ಭಕ್ಷಿಗಾರ್ಡನ್ ಅಪರಾಧ ಲೋಕದ ಇತಿಹಾಸ ಪುಟದಲ್ಲಿ ಇನ್ನೂ ಯಾರ್ಯಾರ ಹೆಸರು ಬರೆದಿದೆಯೋ ಕಾದು ನೋಡಬೇಕು.

ಪೊಲೀಸ್ ಮತ್ತು ಪೊಲಿಟಿಕಲ್

ಪೊಲೀಸ್ ಮತ್ತು ಪೊಲಿಟಿಕಲ್

ಭಕ್ಷಿಗಾರ್ಡನ್‌ನಲ್ಲಿ ಮೊದಲಿನಿಂದಲೂ ಕೊಲೆಗಳು ನಡೆಯುತ್ತಲೇ ಇವೆ. ಯಾರೋ ಪದವಿ ಮಾಡಿಕೊಂಡು ನಾನು ನಿಮ್ಮ ಜನ ಪ್ರತಿನಿಧಿಯಾಗುತ್ತೇನೆ ಎಂದರೆ ಛಲವಾದಿ ಪಾಳ್ಯದಲ್ಲಿ ಒಂದು ವೋಟು ಸಹ ಬೀಳಲ್ಲ. ಅಪರಾಧ ಹಿನ್ನೆಲೆಯಿಂದ ಪ್ರಭಾವ ಬೆಳೆಸಿಕೊಂಡವರಷ್ಟೇ ಇಲ್ಲಿ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ಹೀಗಾಗಿ ರೌಡಿ ಹಿನ್ನೆಲೆಯುಳ್ಳವರನ್ನೇ ಹುಡುಕಿ ರಾಜಕೀಯ ಪಕ್ಷಗಳು ಕಣಕ್ಕೆ ಇಳಿಸುವ ಸಂಪ್ರದಾಯ ಮುಂದುವರೆಸಿವೆ. ಅಪರಾಧ ಹಿನ್ನೆಲೆ ಹೊರತು ಪಡಿಸಿದ ಭಕ್ಷಿಗಾರ್ಡನ್‌ ರಾಜಕೀಯ ಊಹಿಸಿಕೊಳ್ಳಲು ಅಸಾಧ್ಯ ! ವಿಪರ್ಯಾಸವೆಂದರೆ ಮೊದಲಿನಿಂದಲೂ ಇದೊಂದು ಬೆಂಗಳೂರಿನ ಅಪರಾಧ ಲೋಕವಾಗಿಯೇ ಉಳಿದುಕೊಂಡಿದೆ. ಇಲ್ಲಿನ ಅಪರಾಧ ಚಟುವಟಿಕೆ ನಿಗ್ರಹ ಮಾಡುವಲ್ಲಿ ಪೊಲೀಸ್ ಕೂಡ ವಿಫಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

English summary
Rekha kadiresh murder mystery: The story of Baksi Garden political murders know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X