Vastu Tips For Pooja Room: ಪೂಜಾ ಕೋಣೆಗೆ ಬಾಗಿಲು ಇರಬೇಕಾ? ವಾಸ್ತು ಶಾಸ್ತ್ರ ಏನು ಹೇಳುತ್ತದೆ
ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷವಾದ ಸ್ಥಾನಮಾನವಿದೆ. ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆ ಮನೆಯ ಅತ್ಯಂತ ಪವಿತ್ರ ಸ್ಥಳ ಮತ್ತು ಸಕಾರಾತ್ಮಕ ಶಕ್ತಿ ತುಂಬಿರುವ ಸ್ಥಳವೆಂದು ವಾಸ್ತು ತಜ್ಞರು ಪರಿಗಣಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ವಿನ್ಯಾಸದ ಮನೆಗಳಲ್ಲಿ ಪೂಜಾ ಕೋಣೆಗೆ ಬಾಗಿಲು ಹಾಕದೆ ಕಮಾನು ಆಕಾರದ ಮಾದರಿಯಲ್ಲಿ ನಿರ್ಮಿಸುವ ಪದ್ಧತಿ ಹೆಚ್ಚಾಗಿದೆ. ಆದರೆ ವಾಸ್ತು ಪ್ರಕಾರ ಪೂಜಾ ಕೋಣೆಗೆ ಬಾಗಿಲು ಇರುವುದು ಅತ್ಯಂತ ಮುಖ್ಯ ಎಂದು ತಜ್ಞರು ಹೇಳುತ್ತಾರೆ.
ಪೂಜಾ ಕೋಣೆಯಲ್ಲಿ ನಾವು ದೇವರ ಆರಾಧನೆ ಮತ್ತು ಧ್ಯಾನ ಮಾಡುವುದರಿಂದ ದೈವಿಕ ಶಕ್ತಿಯು ಕೇಂದ್ರೀಕೃತವಾಗಿರುತ್ತದೆ ಎಂಬ ನಂಬಿಕೆ ಇದೆ. ಪೂಜಾ ಕೋಣೆಗೆ ಬಾಗಿಲು ಇದ್ದರೆ ಆ ಶಕ್ತಿ ಕೋಣೆಯೊಳಗೆ ಉಳಿದು ನಂತರ ಮನೆ ಪೂರ್ತಿ ಸಕಾರಾತ್ಮಕ ವಾತಾವರಣ ಹರಡುತ್ತದೆ ಎಂದು ಹೇಳಲಾಗುತ್ತದೆ. ಪೂಜೆಯ ಸಮಯದಲ್ಲಿ ಬಾಗಿಲು ಮುಚ್ಚಿದರೆ ಹೊರಗಿನ ಶಬ್ದ, ಮನೆಯವರ ಓಡಾಟದಿಂದ ವ್ಯತ್ಯಯ ಉಂಟಾಗುವುದಿಲ್ಲ. ಇದರಿಂದ ಮನಸ್ಸು ಏಕಾಗ್ರವಾಗಿರಲು ಸಹಾಯವಾಗುತ್ತದೆ.

ಹಿಂದೂ ಸಂಪ್ರದಾಯದ ಪ್ರಕಾರ ರಾತ್ರಿ ಸಮಯದಲ್ಲಿ ದೇವರಿಗೂ ವಿಶ್ರಾಂತಿ ಅಗತ್ಯವೆಂದು ನಂಬಲಾಗುತ್ತದೆ. ಆದ್ದರಿಂದ ರಾತ್ರಿ ಪೂಜೆ ಮುಗಿದ ಬಳಿಕ ಪೂಜಾ ಕೋಣೆಯ ಬಾಗಿಲು ಮುಚ್ಚುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ. ಪೂಜಾ ಕೋಣೆಗೆ ಬಾಗಿಲು ಇಲ್ಲದಿದ್ದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯ ವಾತಾವರಣ, ಕಲಹ ಅಥವಾ ಅಶುದ್ಧತೆಯ ಪ್ರಭಾವ ದೇವರ ಮೂರ್ತಿ ಮತ್ತು ಫೋಟೋಗಳ ಮೇಲೆ ಬೀಳಬಹುದು ಎಂದು ವಾಸ್ತು ನಂಬಿಕೆ ಹೇಳುತ್ತದೆ.
ಪೂಜಾ ಕೋಣೆ ಬಾಗಿಲು ಯಾವಾಗಲೂ ತೆರೆದಿದ್ದರೆ ಮನೆಗೆ ಬರುವ ಪ್ರತಿಯೊಬ್ಬರ ದೃಷ್ಟಿ ನೇರವಾಗಿ ದೇವರ ಮೇಲೆ ಬೀಳುತ್ತದೆ. ವಾಸ್ತು ದೃಷ್ಟಿಯಿಂದ ಇದು ಅಷ್ಟಾಗಿ ಒಳ್ಳೆಯದಾಗಿಲ್ಲ ಎಂದು ಹೇಳಲಾಗುತ್ತದೆ. ದೈವಿಕ ಶಕ್ತಿ ಕಡಿಮೆಯಾಗುವುದರಿಂದ ಮನೆಯಲ್ಲಿ ಅನಗತ್ಯವಾದ ಖರ್ಚು, ಮಾನಸಿಕ ಅಶಾಂತಿ ಮತ್ತು ಒತ್ತಡ ಹೆಚ್ಚಾಗಬಹುದು ಎಂದು ಕೆಲ ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.
ವಾಸ್ತು ಪ್ರಕಾರ ಪೂಜಾ ಕೋಣೆಗೆ ಒಂದೇ ಬಾಗಿಲಿಗಿಂತ ಎರಡು ಮರದ ಬಾಗಿಲು ಇರುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಬಾಗಿಲು ಒಳಭಾಗಕ್ಕೆ ತೆರೆಯುವಂತೆ ಇರಬೇಕು. ಲ್ಯಾಮಿನೇಟ್, ಪ್ಲಾಸ್ಟಿಕ್ ಅಥವಾ ಕಬ್ಬಿಣದ ಬಾಗಿಲಿಗಿಂತ ಸಾಗುವಾನಿ ಮರದ ಅಥವಾ ಗಟ್ಟಿಯಾದ ಮರದಿಂದ ಮಾಡಿದ ಬಾಗಿಲು ಬಳಸುವುದು ಮಂಗಳಕರ ಎಂದು ಹೇಳಲಾಗುತ್ತದೆ. ಬಾಗಿಲಿನ ಮೇಲೆ ಓಂ, ಸ್ವಸ್ತಿಕ್, ಕಲಶ ಅಥವಾ ಗಜಲಕ್ಷ್ಮಿ ಚಿಹ್ನೆಗಳ ವಿನ್ಯಾಸ ಮಾಡಿಸಿದರೆ ಇನ್ನಷ್ಟು ಉತ್ತಮ ಎಂದು ಹೇಳಲಾಗುತ್ತದೆ.
ಪೂಜಾ ಕೋಣೆಯಲ್ಲಿ ಗಾಳಿ ಸರಿಯಾಗಿ ಹರಿಯಲು ಬಾಗಿಲಿನಲ್ಲಿ ಸಣ್ಣ ಜಾಲರಿ ವಿನ್ಯಾಸ ಇರಬೇಕು. ಇದರಿಂದ ದೀಪ ಹಚ್ಚಿದಾಗ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ. ಮನೆಯಲ್ಲಿ ಜಾಗದ ಕೊರತೆ ಇದ್ದರೆ ಪೂಜಾ ಸ್ಥಳಕ್ಕೆ ಕೆಂಪು, ಹಳದಿ ಅಥವಾ ಮರೂನ್ ಬಣ್ಣದ ಕಾಟನ್ ಅಥವಾ ಸಿಲ್ಕ್ ಪರದೆ ಬಳಸಬಹುದು. ರಾತ್ರಿ ಸಮಯದಲ್ಲಿ ಅಥವಾ ಪೂಜೆ ಮಾಡದ ವೇಳೆ ಪರದೆ ಮುಚ್ಚಿ ಇಡುವುದರಿಂದ ವಾಸ್ತು ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.














Click it and Unblock the Notifications