• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶನಿರಾಜನ ಬೆಳ್ಳಿಪಾದದಿಂದ ಬದುಕು ಬಂಗಾರ

By ನಾಗನೂರಮಠ ಎಸ್.ಎಸ್.
|

Expect good and bad both in Sade Sati
ಕೆಟ್ಟವರಿಗೆ ಬರೀ ಕೆಟ್ಟದ್ದೇ ಕಾಣುತ್ತದೆ. ಮತ್ತೊಬ್ಬರು ಹಾಳಾಗಿ ಹೋಗಲಿ ಅದು ನಿಮಗೆ ಬೇಕಾಗಿಲ್ಲ. ನಿಮ್ಮ ಎಡೆಯಲ್ಲಿ ಕತ್ತೆ ಬಿದ್ದಿರುತ್ತದೆ ಅದನ್ನು ನೋಡುವುದನ್ನು ಬಿಟ್ಟು, ಮತ್ತೊಬ್ಬರ ಎಡೆಯಲ್ಲಿನ ನೊಣ ಹೊಡೆಯಾಕೆ ಯಾಕೆ ಹೋಗ್ತೀರಾ? ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೇನೆ ಗೊತ್ತು. ಹೀಗಾಗಿ ಬೇರೆಯವರ ಬಗ್ಗೆ ನೀವೇನೂ ಚಿಂತಿಸಬೇಕಾಗಿಲ್ಲ. ಅವರ ಲೆವೆಲ್‌ಗೆ ಅವರವರು ಅನುಭವಿಸುತ್ತಾರೆ. ಇಂತಹದ್ದನ್ನೇ ನೋಡಿಕೊಳ್ಳಲೆಂದು ಇದ್ದಾನೆ ಶನಿಮಹಾತ್ಮ.

ಮತ್ತೊಬ್ಬರ ಸುದ್ದಿ ಮಾತನಾಡುವ ಗುಣ ನಿಮ್ಮಲ್ಲಿದ್ದರೆ "ಹಚ್ಚಗಿದ್ದಲ್ಲಿ ಮೇಯ್ದು, ಬೆಚ್ಚಗಿದ್ದಲ್ಲಿ ಮಲಗೋರು" ಅಂತಾರೆ ಜನ ನಿಮ್ಮನ್ನ. ಯಾಕೆಂದರೆ ಇಂಥ ಗುಣ ನಿಮ್ಮಲ್ಲಿದ್ದರೆ "ಕಷ್ಟಕ್ಕೆ ಕರೀಬೇಡಿ, ಊಟಕ್ಕೆ ಮರೀಬೇಡಿ" ಎನ್ನುವವರು ನೀವು ಎಂದು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ. ಅರ್ಥ ಮಾಡಿಕೊಳ್ಳದಿದ್ದರೆ "ದಂಡಂ ದಶಗುಣಂ" ಎಂಬಂತೆ ಮತ್ತೊಬ್ಬರ ಬಗ್ಗೆ ಮಾತಾಡಿ ಹೊಡೆತ ಬಿದ್ದಾಗ ಗೊತ್ತಾಗುತ್ತದೆ ಮಾಡುತ್ತಿದ್ದ ತಪ್ಪು. ಹೊಡೆತ ಬಿದ್ದ ಮೇಲೆ ತೆಪ್ಪಗಿರಬೇಕಾಗುತ್ತದೆ. ಅದಕ್ಕೆ ಹಿರಿಯರೊಂದು ಮಾತು ಹೇಳಿದ್ದರು "ನಮ್ಮ ಬೆನ್ನು ನಮಗೇನೆ ಕಾಣುವುದಿಲ್ಲ" ಎಂದು.

ಬೆಳ್ಳಿಪಾದ : ಸಾಡೇಸಾತಿ ನಡೆಯುತ್ತಿರುವ ಸಂದರ್ಭದಲ್ಲಿ ಮಹಾತ್ಮನು ಬೆಳ್ಳಿಪಾದದಿಂದ ಬಂದರೆ ಬದುಕು ಬಂಗಾರವಾಗಿಸಿಕೊಳ್ಳುವ ಸಮಯವೆಂದು ತಿಳಿದುಕೊಳ್ಳಬೇಕು. ಬೆಳ್ಳಿಪಾದ ಎಲ್ಲಿಂದ ಎಲ್ಲಿಯವರೆಗೆ ಇರುತ್ತದೆ ಎಂಬುದನ್ನು ಮೊದಲೇ ಜಾತಕದ ಮೂಲಕ ಗುರ್ತಿಸಿಟ್ಟುಕೊಳ್ಳುವುದು ಒಳ್ಳೆಯದು ಸಾಡೇಸಾತಿ ನಡೆಯುತ್ತಿರುವ ರಾಶಿಗಳವರು.

ಬೆಳ್ಳಿಪಾದ ನಡೆಯುತ್ತಿರುವ ಸಂದರ್ಭದಲ್ಲಿ ತುಂಬಾನೇ ಒಳ್ಳೆಯದಾಗುತ್ತೆ ಎನ್ನಬಹುದು. ಈ ಸಮಯದಲ್ಲಿ ಮಾಡುವ ಎಲ್ಲ ಕೆಲಸಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಯಾವುದೋ ಮೂಲದಿಂದ ಹಣಕಾಸಿನ ಸಹಾಯ ಸಿಗುತ್ತದೆ. ಹೀಗಾಗಿ ಹಣದ ಉಳಿತಾಯವನ್ನು ಮಾಡುವಂತಾಗಿ ಗಳಿಕೆ ಹೆಚ್ಚುತ್ತದೆ. ಈ ಸುಸಂದರ್ಭವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುವಂತಹ ಬುದ್ಧಿವಂತಿಕೆ ತೋರಿಸಬೇಕು. ಮಾನಸಿಕವಾಗಿ ಹೆಚ್ಚಿನ ಉತ್ಸಾಹ ಹಾಗೂ ಮನಸ್ಸು ಕೂಡ ಉಲ್ಲಸಿತವಾಗಿರುವದರಿಂದ ದೇಹವೂ ಕೂಡ ಚೈತನ್ಯವಾಗಿರುತ್ತದೆ ಈ ಸಮಯದಲ್ಲಿ. ಅದಕ್ಕೆಂದೇ ಹೇಳುವುದು ಸಾಡೇಸಾತಿಯಲ್ಲಿ ಬರೀ ಕಷ್ಟಗಳೇ ಬರುವುದಿಲ್ಲ ಎಂದು.

ತುಲಾ ರಾಶಿಯವರ ಸಾಡೇಸಾತಿ 3ನೇ ಹಂತ ಹೀಗಿರುತ್ತೆ : ಶನಿದೇವನು ತನ್ನ ಶತ್ರು ರಾಶಿ ವೃಶ್ಚಿಕವನ್ನು ಪ್ರವೇಶಿಸಿದಾಗ ತುಲಾ ರಾಶಿಯವರಿಗೆ 3ನೇ ಹಂತದ ಸಾಡೇಸಾತಿ ಶುರುವಾಗುತ್ತದೆ. ಅಂದರೆ ನಡದಿಂದ ಕಾಲಿನವರೆಗೆ. ಇದಕ್ಕೇನೆ ಸಾಡೇಸಾತಿ ಇಳಿಯುತ್ತಿದೆ ಎನ್ನುವುದು.

ಸಾಡೇಸಾತಿ 2 ಹಂತ ಕಷ್ಟಪಟ್ಟು ದಾಟಿ 3ನೇ ಹಂತ ಬಂದ ತಕ್ಷಣ ತುಲಾ ರಾಶಿಯವರು ಕಠೋರವಾಗಿ ಬಿಡುತ್ತಾರೆ. ಸಿಕ್ಕಾಪಟ್ಟೆ ಸಿಟ್ಟು, ಸಿಟ್ಟಿನಿಂದ ದುರಹಂಕಾರ ಹೆಚ್ಚುತ್ತದೆ. ಇತರರನ್ನು ಮೋಸ ಮಾಡಲು ಹಿಂಜರಿಯುವುದಿಲ್ಲ. ಮಾತಿಗೆ ತಕ್ಕಂತೆ ನಡೆದುಕೊಳ್ಳುವುದಿಲ್ಲ. ಕೆಲವೊಬ್ಬರಂತೂ ಹೊಡೆದಾಟಕ್ಕೂ ಇಳಿದು ರಕ್ತಪಾತ ಮಾಡಿಕೊಂಡು ಶಿಕ್ಷೆ ಅನುಭವಿಸುವಂತಾಗುತ್ತದೆ. ಕಾಲಿಗೆ ಗಾಯಗಳಾಗುವ ಸಂಭವವಿರುವುದರಿಂದ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ವಿರೋಧಿಗಳು ಇವರನ್ನು ಮುಗಿಸಲು ಹೊಂಚು ಹಾಕಿ ಯಶಸ್ವಿಯಾಗಲು ತವಕಿಸುತ್ತಾರೆ. ಹಣವನ್ನು ನೀರಿನಂತೆ ಖರ್ಚು ಮಾಡುತ್ತ ಏತಕ್ಕಾಗಿ ಖರ್ಚು ಮಾಡುತ್ತಿದೇನೆ ಎನ್ನುವ ಜ್ಞಾನವೇ ಇರುವುದಿಲ್ಲ ತುಲಾ ರಾಶಿಯವರಿಗೆ ಸಾಡೇಸಾತಿಯ 3ನೇ ಹಂತದಲ್ಲಿ.

ಸಾಡೇಸಾತಿಯಲ್ಲಿನ ರಾಶಿಗಳವರು ತಮ್ಮ ತಲೆಯಿಂದ ಪಾದದವರೆಗಿನ ಆರೋಗ್ಯದ ತೊಂದರೆಗಳನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ಪಟ್ಟಿಗಳಲ್ಲಿ ಅತೀ ಮುಖ್ಯ ಆರೋಗ್ಯ ತೊಂದರೆಗಳನ್ನು ಆರಿಸಿಕೊಂಡು ಒಂದೊಂದನ್ನಾಗಿ ನಿವಾರಿಸಿಕೊಳ್ಳಲು ಆರಂಭಿಸಬೇಕು. ಇಲ್ಲವಾದರೆ ದೇಹದ ತೊಂದರೆಗಳು ಹೆಚ್ಚಾಗಿ ನೋವಿನ ಅನುಭವ ಪಡೆಯಬೇಕಾಗುತ್ತದೆ. ಇನ್ನು ಹಳೆಯ ಗಾಯ, ನೋವುಗಳನ್ನೂ ಕೂಡ ಮರೆಯದೇ ಟಿಪ್ಪಣಿಯಲ್ಲಿ ಸೇರಿಸಿಕೊಂಡು ಅವುಗಳನ್ನೂ ಪರೀಕ್ಷಿಸಿಕೊಳ್ಳಬೇಕು. ಚೆನ್ನಾಗಿ ಬಾಳಿ ಬದುಕಬೇಕೆಂದರೆ ಈ ರೀತಿ ಮಾಡಬೇಕು.

ಕರ್ಮಫಲ ಪಟ್ಟಿ ತಯಾರಿಸಿ : ಹೀಗೇಯೇ ಹಲವಾರು ವರ್ಷಗಳಿಂದ ನೀವ್ಯಾರಿಗೆ ಏನೇನು ಅನ್ಯಾಯ ಮಾಡಿದ್ದೀರಿ, ಅಸತ್ಯವನ್ನಾಡಿದ್ದೀರಿ, ಎಷ್ಟು ಜನರಿಗೆ ಮೋಸ ಮಾಡಿದ್ದೀರಿ ಇನ್ನೇನು ಕೆಟ್ಟ ಕೆಲಸ ಮಾಡಿದ್ದೀರಿ ಎಂಬುದನ್ನೂ ಪಟ್ಟಿ ಮಾಡಿಟ್ಟುಕೊಳ್ಳಿ. ಯಾಕೆಂದರೆ ನೀವು ಮಾಡಿದ್ದೆಲ್ಲವೂ ಚಕ್ರಬಡ್ಡಿ ಸಮೇತ ನಿಮಗೆ ಮರಳಿ ಬರುತ್ತವೆ ಸಾಡೇಸಾತಿಯಲ್ಲಿ. ಎಷ್ಟು ಜನರಿಗೆ ಒಳ್ಳೆಯದನ್ನು ಮಾಡಿದ್ದೀರಿ ಎಂಬುದನ್ನು ಕೂಡ ಪಟ್ಟಿ ಮಾಡಿಟ್ಟುಕೊಳ್ಳಿ. ಶನಿದೇವನು ನೀವೆಷ್ಟು ಒಳ್ಳೆಯದನ್ನು ಮಾಡಿದ್ದೀರೋ ಅದರ ನೂರು ಪಟ್ಟು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ ಸಾಡೇಸಾತಿಯಲ್ಲಿ. ಶನಿದೇವನು ನೀಡುವ ಕರ್ಮಫಲಗಳನ್ನು ಯಾವ ದೇವರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡರೆ ಮಹಾತ್ಮನ ಶಕ್ತಿ ಗೊತ್ತಾಗುತ್ತದೆ.

ನಿಮ್ಮ ಕರ್ಮಫಲಗಳ ಪಟ್ಟಿಯನ್ನೊಮ್ಮೆ ನೋಡಿಕೊಳ್ಳಿ. ನೀವೆಷ್ಟು ಒಳ್ಳೆಯದನ್ನು ಮಾಡಿದ್ದೀರಿ ಎಷ್ಟು ಕೆಟ್ಟದ್ದನ್ನು ಮಾಡಿದ್ದೀರಿ ಎಂಬುದನ್ನು ಅರಿತುಕೊಂಡು ಸುಖ, ದುಃಖ ಅನುಭವಿಸುವ ಧೈರ್ಯ ಬೆಳೆಸಿಕೊಳ್ಳಿ ಸಾಡೇಸಾತಿಯ ಸಮಯದಲ್ಲಿ. ಇನ್ನು ಸಾಡೇಸಾತಿಯಲ್ಲಿ ಪರಿಹಾರಗಳನ್ನು ಮಾಡಿಕೊಂಡರೆ ಆಗಿರುವ ನೋವುಗಳನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ. ಹಾಗೆಯೇ ಬರುವ ಸಂಕಷ್ಟಗಳು ಸ್ವಲ್ಪ ಕಮ್ಮಿ ನೋವು ಕೊಡುತ್ತವೆ.

ನಿಮಗೆ ಗೊತ್ತಿರಬಹುದು ಬಿದಿರಿನ ಸಣ್ಣ ಕೋಲನ್ನು ತಪ್ಪು ಮಾಡಿದವರಿಗೆ ಹೊಡೆಯಲೂ ಬಳಸಬಹುದು. ಅದೇ ಕೋಲನ್ನು ಸ್ವಲ್ಪ ಮಾರ್ಪಾಟು ಮಾಡಿ ಕೊಳಲನ್ನಾಗಿ ಮಾಡಿಕೊಂಡು ಇಂಪಾದ ಸಂಗೀತ ಕೇಳಬಹುದು. ಇದೇ ರೀತಿ ಶನಿದೇವನ ಪ್ರಭಾವವನ್ನು ತಿಳಿದುಕೊಳ್ಳಬೇಕು. ಬಿದಿರಿನ ಕೋಲಿನಿಂದ ಹೊಡೆತ ತಿನ್ನಬೇಕೋ ಅಥವಾ ಬಿದಿರಿನಿಂದಲೇ ಮಾಡಿದ ಕೊಳಲಿನಿಂದ ಸುಮಧುರ ಸಂಗೀತ ಕೇಳಿ ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳಬೇಕಾ ಎಂಬುದನ್ನು ನಿಮ್ಮ ಆತ್ಮಕ್ಕೊಮ್ಮೆ ಕೇಳಿಕೊಳ್ಳಿ.

ಕೊಟ್ಟ ಮಾತನ್ನು ಉಳಿಸಿಕೊಳ್ಳಿ : "ನಡಕೊಂಡ ಪಡಕೋಬೇಕಂತ" ಎಂಬ ಮಾತನ್ನು ಸ್ವಲ್ಪ ನೆನಸಿಕೊಳ್ಳಿ. ನಿಮ್ಮ ಪರಿಚಯದವರನ್ನು ನೀವು ದೂರದಿಂದ ನೋಡಿದಾಗ ಅವರ ಗುಣ ನೆನಸುತ್ತೀರಿ ಹೊರತು ಅವರ ಹೆಸರನ್ನ ಆಮೇಲೆ. ಒಳ್ಳೆಯ ಗುಣದವರಿದ್ದರೆ ಅವರ ಹೆಸರು ಹೇಳುತ್ತಾ ತುಂಬಾ ಒಳ್ಳೆಯವರು ಅನ್ನುತ್ತೀರಾ. ಆದರೆ ಅವರೇನೂ ಹೇಳಿರುವುದಿಲ್ಲ ನಿಮಗೆ, ನನಗೆ ಒಳ್ಳೆಯವನು ಅನ್ನಿ ಅಂತ. ಅದೇ ರೀತಿ ನಿಮ್ಮನ್ನೂ ಒಳ್ಳೆಯವರು ಅಂತ ಬೇರೆಯವರು ಹೇಳುವ ಹಾಗೆ ನಿಮ್ಮನ್ನು ನೀವು ರೂಪಿಸಿಕೊಳ್ಳಿ.

ಕನ್ಯಾ, ವೃಶ್ಚಿಕ ಮತ್ತು ತುಲಾ ರಾಶಿಯವರು ಸಾಡೇಸಾತಿಯಲ್ಲಿನ ಹೊಸ ಹೊಸ ಅನುಭವಗಳನ್ನು ಈ ಕೆಳಗಿನ ಅಭಿಪ್ರಾಯ ವಿಭಾಗದಲ್ಲಿ ಬರೆಯಿರಿ. ಇತರ ರಾಶಿಯವರಿಗೂ ಗೊತ್ತಾಗಲಿ ಸಾಡೇಸಾತಿಯ ಪ್ರಭಾವ.

ವೃಶ್ಚಿಕ ರಾಶಿಗೆ ಸಾಡೇಸಾತಿ 3ನೇ ಹಂತ ಹೇಗಿರುತ್ತೆ ಮತ್ತು ಶನಿದೇವನ ಬಂಗಾರ ಪಾದದ ಮಹತ್ವ ಏನು? ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ಶನಿದೇವನ ಕೃಪೆಗೆ : ಈ ಶ್ರಾವಣದಲ್ಲಿ ರುದ್ರನಿಗೆ ರುದ್ರಾಭಿಷೇಕ ಮಾಡಿಸಿ. (ಲೇಖಕರ ಮೊಬೈಲ್ : 94815 22011)

English summary
Sade Sati series 20 : Impact of Sade Sati on zodiac signs. Don't always expect bad things during sade sati, good things also happen. This can be identified seeing the horoscope. Let's see how Librans behave during testing time when they are affected by Sade Sati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X