ಯಾವ ರಾಶಿಯವರು ಕಾರು ಖರೀದಿಸಬಹುದು? ಅದೃಷ್ಟದ ಬಣ್ಣ ಯಾವುದು?
ಅದೇನೋ ಸೀಸನ್ನೋ ಅಥವಾ ಹೊಸ ವರ್ಷ ಬರಲಿ ಎಂದು ಕಾಯುತ್ತಿದ್ದರೋ ನನಗೆ ಇತ್ತೀಚೆಗೆ ಬರುವ ಇ ಮೇಲ್ ಗಳಲ್ಲಿ ಕಾರು ಅಥವಾ ಬೈಕ್-ಸ್ಕೂಟರ್ ಖರೀದಿ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳು ಇರುತ್ತವೆ. ಈಗ ಕಾರು/ಬೈಕ್/ಸ್ಕೂಟರ್ ಖರೀದಿಸಬಹುದೇ? ಸಾಲ ಮಾಡಿ ತೆಗೆದುಕೊಂಡರೆ ಸುಲಭವಾಗಿ ತೀರಬಹುದಾ? ಅಥವಾ ಇನ್ನೂ ಸ್ವಲ್ಪ ದಿನ ಕಾಯಲಾ ಎಂಬ ಪ್ರಶ್ನೆಗಳು ಒಂದು ಕಡೆಗೆ.
ಇನ್ನೂ ಕೆಲವರದು ನನಗೆ ಆಗಿಬರುವ ಬಣ್ಣ ಯಾವುದು ಅನ್ನೋದರಿಂದ ಆರಂಭವಾಗುತ್ತದೆ. ಅಂಥವರ ಬಳಿ ಕಾರು ಅಥವಾ ಬೈಕ್/ಸ್ಕೂಟರ್ ಖರೀದಿಗೆ ಹಣವಿರುತ್ತದೆ. ಇಲ್ಲದಿದ್ದರೆ ಖರೀದಿಗೆ ಸಾಲ ಮಾಡಿದರೆ ತೀರಿಸಬಹುದು ಎಂಬ ನಂಬಿಕೆ ಇರುತ್ತದೆ. ಆದ್ದರಿಂದ ನೇರವಾಗಿ ಯಾವ ಬಣ್ಣ ಆಗಿಬರುತ್ತದೆ ಅಂತಲೇ ಪ್ರಶ್ನೆ ಆರಂಭಿಸುತ್ತಾರೆ.
ಅದು ಇನ್ನೂ ಮುಂದುವರಿದು ಯಾವ ಸಂಖ್ಯೆಯದಾದರೆ ನನಗೆ ಅದೃಷ್ಟ ಹೇಳಿ ಅಂತ ಕೇಳುತ್ತಾರೆ. ನಮ್ಮ ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು ಸಂಖ್ಯೆ ಇಷ್ಟು ಬರಲಿ ಎಂದಷ್ಟೇ ಇದೆ. ಆದರೆ ಇತ್ತೀಚೆಗೆ ಸಂಖ್ಯಾಶಾಸ್ತ್ರ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಜತೆಗೆ ಅವರು ಹೇಳುವ ಸಂಖ್ಯೆಗಳ ಬಗೆಗಿನ ಭವಿಷ್ಯದ ರೀತಿ ಬೇರೆಯಾದ್ದರಿಂದ ಅದೃಷ್ಟದ ಬಣ್ಣ ಮಾತ್ರ ಹೇಳುತ್ತಿದ್ದೇನೆ.
ಈ ದಿನದ ಲೇಖನದಲ್ಲಿ ಹನ್ನೆರಡು ರಾಶಿಗಳವರ ಪೈಕಿ ಯಾರು ವಾಹನ ಖರೀದಿಸಬಹುದು, ಯಾವುದು ಅದೃಷ್ಟ ಬಣ್ಣ ಅಂತ ತಿಳಿಸಲಾಗಿದೆ. ನಿಮಗೆ ಇದರಿಂದ ಉಪಯೋಗ ಆಗಬಹುದು.

ಮೇಷ
ವಾಹನ ಖರೀದಿ ಮಾಡುವುದಕ್ಕೆ ಅಡ್ಡಿ ಇಲ್ಲ. ಈ ವರ್ಷದ ಅಕ್ಟೋಬರ್ ತನಕ ಗುರು ಬಲ ಇರುವುದರಿಂದ ಕಾರು ಖರೀದಿಸಬಹುದು. ಇನ್ನು ಬಣ್ಣ ಕೆಂಪು ಅಥವಾ ಬಿಳಿ ಆಗಿಬರುತ್ತದೆ. ಜಾತಕದಲ್ಲಿ ಕುಜ ನೀಚ ಇದ್ದರಷ್ಟೇ ಕೆಂಪು ಬಣ್ಣ ಆಗಿಬರುವುದಿಲ್ಲ. ಆದರೆ ವಾಹನ ಖರೀದಿ ಮಾಡಲು ಅಡ್ಡಿ ಇಲ್ಲ.

ವೃಷಭ
ಅನಿವಾರ್ಯ ಅಂತ ಇಲ್ಲದಿದ್ದಲ್ಲಿ ವಾಹನ ಖರೀದಿ ಮಾಡಬೇಡಿ. ಆರ್ಥಿಕ ಚೈತನ್ಯ ಇದೆ ಅನ್ನೋದಾದರೆ ಡ್ರೈವರ್ ನ ನೇಮಿಸಿಕೊಳ್ಳಿ. ನೀವು ಚಾಲನೆ ಮಾಡಬೇಡಿ. ಇನ್ನು ಸಾಲ ಮಾಡಿ ಕಂತಿನ ಆಧಾರದಲ್ಲಿ ತೆಗೆದುಕೊಳ್ಳದಿದ್ದರೆ ಒಳಿತು. ಹಾಗೂ ತೆಗೆದುಕೊಳ್ಳಲೇ ಬೇಕು ಎಂದರೆ ದುಡ್ಡಿನ ಲೆಕ್ಕಾಚಾರ ಬಹಳ ಮುಖ್ಯ. ಇನ್ನು ನಿಮಗೆ ಆಗಿಬರುವ ಬಣ್ಣ ಬಿಳಿ.

ಮಿಥುನ
ಮಿಥುನ ರಾಶಿಯವರು ವಾಹನ ಖರೀದಿ ಮಾಡಬಹುದು. ದ್ವಿಚಕ್ರ ವಾಹನ ಖರೀದಿ ಸಾಧ್ಯತೆ ಹೆಚ್ಚಿದೆ. ಕಾರು ತೆಗೆದುಕೊಳ್ಳಬಾರದು ಅಂತಿಲ್ಲ. ಆದರೆ ದ್ವಿಚಕ್ರ ವಾಹನ ಖರೀದಿ ಅವಕಾಶ ಹೆಚ್ಚಿದೆ. ಬಿಳಿ, ಕೆಂಪು ಹೀಗೆ ಯಾವ ಬಣ್ಣವಾದರೂ ಆಗಿಬರುತ್ತದೆ. ನಿಮ್ಮ ರಾಶಿಯವರು ಬಣ್ಣದ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.

ಕರ್ಕಾಟಕ
ನೀವು ಇನ್ನೂ ಮೂರ್ನಾಲ್ಕು ತಿಂಗಳು ನಿರ್ಧಾರ ಮುಂದಕ್ಕೆ ಹಾಕಿ. ಅನಿವಾರ್ಯ ಇಲ್ಲದಿದ್ದರೆ ಸ್ವಲ್ಪ ಸಮಯ ಕಾದರೆ ಒಳಿತು ನೀಲಿ, ಕಪ್ಪು ಬಣ್ಣದ ವಾಹನ ಬೇಡ. ಕೆಂಪು ಬಣ್ಣದ ವಾಹನ ತೆಗೆದುಕೊಳ್ಳಬಹುದು.

ಸಿಂಹ
ನಿಮಗೆ ಸದ್ಯಕ್ಕೆ ಗುರು- ಶನಿ ಚೆನ್ನಾಗಿಲ್ಲ. ಇಎಂಐನಲ್ಲಿ ವಾಹನ ತೆಗೆದುಕೊಳ್ಳಬೇಡಿ. ಶನಿವಾರಗಳಂದು ಅನಿವಾರ್ಯ ಇಲ್ಲದಿದ್ದಲ್ಲಿ ವಾಹನ ಚಲಾಯಿಸಲೇ ಬೇಡಿ. ಹಳದಿ ಬಣ್ಣ ಬರುತ್ತದೆ ಅಂದರೆ ಅದು ತೆಗೆದುಕೊಳ್ಳಬಹುದು. ಬಿಳಿ ಬಣ್ಣ ಮಧ್ಯಮ.

ಕನ್ಯಾ
ನೀವು ವಾಹನ ಖರೀದಿ ಮಾಡಬಹುದು. ನಿಮ್ಮ ಬಳಿ ಹಣವಿಲ್ಲ ಎಂದರೆ ಅದಕ್ಕಾಗಿ ಪ್ರಯತ್ನಿಸಿದರೆ ಹಣಕಾಸಿನ ಅನುಕೂಲ ಕೂಡಿಬರುತ್ತದೆ. ಆದ್ದರಿಂದ ವಾಹನ ಖರೀದಿ ಮಾಡಬಹುದು. ಇನ್ನು ಕೆಂಪು ಬಣ್ಣ ಬೇಡವೇ ಬೇಡ. ಬಿಳಿ, ನೀಲಿ ಹಾಗೂ ಸಿಲ್ವರ್ ಬಾಳಿಕೆ ಬರುತ್ತದೆ.

ತುಲಾ
ವಾಹನ ಅನಿವಾರ್ಯ ಅಲ್ಲ ಅನ್ನೋದಾದರೆ ಇನ್ನಾರು ತಿಂಗಳು ಈ ಬಗ್ಗೆ ಯೋಚನೆ ಮಾಡಲೇಬೇಡಿ. ಒಂದು ಪಕ್ಷ ತೆಗೆದುಕೊಂಡರೂ ಬಹಳ ಎಚ್ಚರ ಅಗತ್ಯ. ಈಗ ವಾಹನ ತೆಗೆದುಕೊಂಡು ಓಡಿಸ್ತಿದೀನಿ ಅಂದರೆ ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೆಂಪು ಹಾಗೂ ಬಿಳಿ ಮಧ್ಯಮ, ನೀಲಿ ಉತ್ತಮವಾಗಿ ಕೂಡಿ ಬರುತ್ತದೆ.

ವೃಶ್ಚಿಕ
ವಾಹನ ಖರೀದಿ ಸದ್ಯಕ್ಕೆ ಬೇಡ. ಸ್ವಲ್ಪ ಮುಂದಕ್ಕೆ ಹಾಕಿ. ಅನಿವಾರ್ಯ ಎಂದಾದಲ್ಲಿ ಮೂರ್ನಾಲ್ಕು ತಿಂಗಳ ನಂತರ ಖರೀದಿಸಿ. ಬಿಳಿ ಮಧ್ಯಮ, ಕೆಂಪು ಉತ್ತಮ, ನೀಲಿ ಹಾಗೂ ಕಪ್ಪು ಬಣ್ಣ ಬೇಡವೇ ಬೇಡ.

ಧನುಸ್ಸು
ವಾಹನ ಅನಿವಾರ್ಯ ಆದರೆ ಖರೀದಿಸಿ. ಅವಕಾಶ ಇದೆ, ಬೇರೆ ಯಾರೋ ಖರೀದಿಸಿದರು ಅಂತ ತೆಗೆದುಕೊಳ್ಳಬೇಡಿ. ಬಿಳಿ, ನೀಲಿ ಹಾಗೂ ಕಪ್ಪು ಮಧ್ಯಮ, ಕೆಂಪು ಬಣ್ಣ ಉತ್ತಮ.

ಮಕರ
ವಾಹನ ಖರೀದಿಸಬಹುದು. ಪೂರ್ತಿ ಹಣ ಕೊಟ್ಟು ಖರೀದಿಸುವಂಥ ಆರ್ಥಿಕ ಸ್ಥಿತಿ ನಿಮಗೆ ಇರುವುದಿಲ್ಲ. ಇಎಂಐನಲ್ಲಿ ತೆಗೆದುಕೊಳ್ಳಬಹುದಾ ಎಂಬ ಯೋಚನೆ ಇದ್ದರೆ ತೆಗೆದುಕೊಳ್ಳಿ, ಪರವಾಗಿಲ್ಲ. ಇನ್ನು ಬಿಳಿ ಅಥವಾ ನೀಲಿ ಬಣ್ಣದ್ದನ್ನು ಖರೀದಿಸಬಹುದು.

ಕುಂಭ
ನಿಮಗೆ ವಾಹನ ಖರೀದಿಗೆ ಸ್ನೇಹಿತರು ಅಥವಾ ಪೋಷಕರ ನೆರವು ಸಿಗುತ್ತದೆ. ಕೈನಲ್ಲಿ ಹಣ ಇಲ್ಲದಿದ್ದರೂ ಹೇಗೋ ಅನುಕೂಲ ಒದಗಿಬರುತ್ತದೆ. ಬಿಳಿ ಬಣ್ಣ ಉತ್ತಮ, ನೀಲಿ ಹಾಗೂ ಕಪ್ಪು ಬಣ್ಣ ಚೆನ್ನಾಗಿ ಒದಗಿ ಬರುತ್ತದೆ.

ಮೀನ
ನೀವು ಇನ್ನು ಆರು ತಿಂಗಳು ವಾಹನ ಖರೀದಿ ಮಾಡದಿದ್ದರೆ ಉತ್ತಮ. ಒಂದು ವೇಳೆ ಹಟಕ್ಕೆ ಬಿದ್ದು ತೆಗೆದುಕೊಂಡರೂ ವಾಹನ ಚಾಲನೆ ಯೋಗವಿಲ್ಲ. ಅಥವಾ ಇಎಂಐನಲ್ಲಿ ಖರೀದಿಸಿದರೆ ಹಣ ಕಟ್ಟುವುದಕ್ಕೆ ಪರದಾಡುವಂತಾಗುತ್ತದೆ. ನೀವು ವಾಹನ ಖರೀದಿಸಿ ಮತ್ತ್ಯಾರೋ ಓಡಿಸುವಂತಿದ್ದರೆ ಯಾಕೆ ಹಟ? ಬಿಳಿ ಮಧ್ಯಮ. ಕೆಂಪು ಮಧ್ಯಮ. ನಿಮಗೆ ಅದ್ಭುತ ಎಂಬಂಥ ಬಣ್ಣ ಯಾವುದೂ ಇಲ್ಲ. ಎಲ್ಲವೂ ಮಧ್ಯಮ ಆಗಿರುತ್ತದೆ.












Click it and Unblock the Notifications