ನಕ್ಷತ್ರ ಸರಣಿ : ಪಾರದರ್ಶಕ ವ್ಯಕ್ತಿತ್ವದ ಚಿತ್ರಾ ನಕ್ಷತ್ರದವರು

Posted By: ನಾಗನೂರಮಠ ಎಸ್.ಎಸ್.
Subscribe to Oneindia Kannada

ಚಿತ್ರಾ ನಕ್ಷತ್ರದ ಮೊದಲ 2 ಚರಣಗಳಲ್ಲಿ ಜನಿಸಿದವರು ಕನ್ಯಾ ರಾಶಿಯವರಾದರೆ, ಕೊನೆಯ 2 ಚರಣಗಳಲ್ಲಿ ಜನಿಸಿದ್ದರೆ ತುಲಾ ರಾಶಿಯವರಾಗುತ್ತಾರೆ. 1ನೇ ಚರಣದವರಿಗೆ ಪೇ ಎಂಬ ಜನ್ಮನಾಮ ಬಂದರೆ, 2ನೇಯವರಿಗೆ ಪೋ, 3ನೇಯವರಿಗೆ ರಾ, 4ನೇ ಚರಣದಲ್ಲಿ ಜನಿಸಿದವರಿಗೆ ರಿ ಎಂಬ ಜನ್ಮನಾಮ ಬರುತ್ತದೆ.

"ಒಂದೇ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಬೇರೆ ಬೇರೆ ಗುಣಾವಗುಣಗಳನ್ನು ಹೊಂದಿರುತ್ತಾರೆ?" ಎಂಬ ಮಾತಿಗೆ ಚಿತ್ರಾ ನಕ್ಷತದಲ್ಲಿ ಜನಿಸಿದವರು ಸಾಕ್ಷಿಯಾಗುತ್ತಾರೆ. ಹೇಗೆಂದರೆ ಈ ನಕ್ಷತ್ರದ ಮೊದಲೆರಡು ಚರಣದವರು ಕನ್ಯಾ ರಾಶಿಗೆ ಸಂಬಂಧಪಡುತ್ತಾರೆ. ಕೊನೆಯ ಎರಡು ಚರಣದವರು ತುಲಾ ರಾಶಿಗೆ ಅನ್ವಯಿಸುತ್ತಾರೆ.

ಹೀಗಾಗಿಯೇ ಜಾತಕ ರೂಪಿಸುವಾಗ ನಿಗದಿತ ಜನ್ಮಸಮಯ ಬೇಕೆಂದು ನಾವು ಹೇಳುವುದು. ಜನ್ಮವೇಳೆಯು ಸ್ವಲ್ಪನಾದರೂ ಹೆಚ್ಚು ಕಮ್ಮಿಯಾದರೂ ಸಹ ವ್ಯಕ್ತಿಯ ರಾಶಿ ಬದಲಾಗುತ್ತದೆ. ಜೊತೆಗೆ ದಶಾ ಭುಕ್ತಿ ಕೂಡ ಬದಲಾವಣೆಯಾಗುತ್ತದೆ. ಆಗ ನಿಖರವಾಗಿ ಜಾತಕ ರೂಪಿಸುವುದು ಸ್ವಲ್ಪ ಗೋಜಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಪ್ರಶ್ನಾಫಲಕ್ಕೆ ನಾವು ಶರಣಾಗಬೇಕಾಗುತ್ತದೆ.

ಇವರು ಕಣ್ಣಿಗೆ ಗ್ಲಾಸ್ ಹಾಕುವುದನ್ನು ಪ್ಯಾಷನ್ ಎಂದುಕೊಂಡಿರುತ್ತಾರೆ. ಕ್ರಮೇಣ ಜೀವನಪರ್ಯಂತ ಗ್ಲಾಸ್ ಹಾಕಿಕೊಳ್ಳುವ ಸಂದರ್ಭ ಬರುತ್ತದೆ ಇವರ ಈ ಕೆಟ್ಟ ಅಭ್ಯಾಸದಿಂದ.

Birth star series : Chitra nakshatra characteristics

ತಮಗಾಗದವರನ್ನು ಯಾವಾಗ ಗೋಳು ಹೊಯ್ದುಕೊಳ್ಳುತ್ತಾರೆ ಎಂಬುದು ಆ ದೇವರಿಗೆ ಗೊತ್ತು. ಆ ತರಹದ ಪ್ಲಾನರ್ಸ್ ಇವರು. ಇವರನ್ನು ಹಲವರು ಹೀರೋ ತರಹ ನೋಡುತ್ತಿರುತ್ತಾರೆ. ತಮ್ಮ ವ್ಯಕ್ತಿತ್ವವನ್ನಂತೂ ಇವರು ಕನ್ನಡಿ ಹಾಗೆ ಇಟ್ಟುಕೊಂಡಿರುತ್ತಾರೆ. ಎಲ್ಲವೂ ಪಾರದರ್ಶಕವಾಗಿರುತ್ತದೆ ಇವರ ಜೀವನ.

ಇನ್ನು, ರಾಕ್ಷಸ ಗಣದವರಾದ ಇವರಿಗೆ ದೇವರೆಂದರೆ ಅಷ್ಟಕ್ಕಷ್ಟೇ. ಹಿತೈಷಿಗಳು ಇವರಿಗೆ ಒತ್ತಾಯ ಮಾಡಬೇಕು "ದೇವರಿದ್ದಾನೆ ಮಾರಾಯ್ತಿ, ಕಷ್ಟ ಬಂದಾಗ ದೇವರೇ ಕಾಪಾಡೋದು ಗೊತ್ತುಂಟಾ" ಎಂದು. "ದೇವ್ರಾ ಎಂಥಾ ಉಂಟು?" ಎಂದು ಮರಳಿ ಅವರನ್ನೇ ಪ್ರಶ್ನಿಸುತ್ತಾರೆ ಇವರು. ಅಷ್ಟೊಂದು ಅಸಡ್ಡೆ ಇವರಿಗೆ ದೈವಾಚರಣೆ ಬಗ್ಗೆ.

ಮೊದಲೇ ಈ ನಕ್ಷತ್ರಕ್ಕೆ ಮಂಗಳ ಅಧಿಪತಿ. ಸಾಲದೆಂಬಂತೆ ಬುಧ ಬೇರೆ ಈ ನಕ್ಷತ್ರಕ್ಕೆ ಸ್ವಾಮಿ. ಹೀಗಾಗಿ ಇವರಿಗೆ ಇರುವ ಧೈರ್ಯ ಮತ್ತು ಲೆಕ್ಕಾಚಾರದ ಬುದ್ಧಿಯಿಂದ ಕೆಲವರು ಇವರನ್ನು ಕಂಡರೆ ದಿಗಿಲುಗೊಳ್ಳುತ್ತಿರುತ್ತಾರೆ. ಏಕೆಂದರೆ, ಇವರ ಸ್ವಭಾವನೇ ಎಲ್ಲರಲ್ಲೂ ಹೆದರಿಕೆ ಹುಟ್ಟಿಸಿರುತ್ತದೆ. ಸುಮ್ಮನೇ ನಗು ನಗುತ್ತಾ ಇದ್ದವರು ಒಮ್ಮೆಲೆ ಮೈಮೇಲೆ ಭೂತ ಬಂದವರ ತರಹ ಆಡಲಾರಂಭಿಸುತ್ತಾರೆ ಕೆಲವೊಮ್ಮೆ. ಇವರ ಈ ಮುಖ ನೋಡಿ ಉಳಿದವರು "ಈ ಬಡ್ಡೆತೈದ ಸಹವಾಸ ಯಾಕ್ಲಾ ಮಗಾ ನಂಗೆ" ಎಂದು ಓಡಲಾರಂಭಿಸುತ್ತಾರೆ.

ಆದರೆ, ಇವರ ನಗುಮುಖ ಮಾತ್ರ ಹೊಸಬರನ್ನು ಮೋಡಿ ಮಾಡುತ್ತದೆ. ಆ ಹೊಸಬರಿಗೆ ಇವರ ಗುಣ ಮತ್ತು ಸ್ವಭಾವ ಗೊತ್ತಾದ ಮೇಲೆ "ನೋಡಾಕ ಹೀಂಗ್ ಅದಾನ್ಲೇಪಾ ಇಂವಾ, ಒಳಗಿಂದೊಳಗ್ ಗುಮ್ಮನಗುಸುಗು ನನ್ ಮಗಾ ಇಂವಾ" ಎಂದು ಎಲ್ಲರಿಗೆ ಹೇಳಲಾರಂಭಿಸುತ್ತಾರೆ. ಈ ಸುದ್ದಿ ಇವರ ಕಿವಿಗೆ ಬಿದ್ದರೂ ಇವರೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಕಸ್ಮಾತ್ ತಲೆ ಕೆಡಿಸಿಕೊಂಡರೆ ಅವರನ್ನು ಗೋಳು ಹೊಯ್ದುಕೊಳ್ಳದೇ ಬಿಡುವುದಿಲ್ಲ "ಅವರ್ನ ಗಟ್ಟಿಗಚ್ಚೇ ಹೊಟ್ಟೆ ತುಂಬ ಊಟ ಮಾಡುತ್ತೇನೆ" ಎನ್ನುವ ಸ್ವಭಾವ ಇವರದು. ಹೀಗಾಗಿ ಇವರಿಗೆ ವಿರೋಧಿಗಳು ಹುಟ್ಟುತ್ತಲೇ ಇರುತ್ತಾರೆ. ಹಳಬರು ಇವರಿಗೆದರಿ ಓಡಿ ಹೋಗುತ್ತಲೇ ಇರುತ್ತಾರೆ.

ಇವರು ಏನೂ ಬಯಸದೇ ಇತರರಿಗೆ ಸಹಾಯ ಮಾಡಬೇಕು ಎನ್ನುತ್ತಿರುತ್ತಾರೆ. ಆದರೆ ಸಹಾಯನೂ ಮಾಡಿರುತ್ತಾರೆ. ಇದು ಕೆಲವರಿಗೆ ಗೊತ್ತಾಗೋದಿಲ್ಲ ಅಷ್ಟೇ. ಏಕೆಂದರೆ "ಸಿಂಪಲ್ ಲೈಫ್" ಇಷ್ಟ ಪಡುವ ಇವರು, ಸ್ಥಿರವಾದ ಜೀವನಶೈಲಿಯನ್ನು ಅಳವಡಿಸಿಕೊಂಡಿರುವುದಿಲ್ಲ. ಸೈಕಲ್ ತುಳಿದವರು ಕಾರಿನಲ್ಲಿ ಸುತ್ತಾಡುವ ಯೋಗ ಬಂದರೂ, ಅದನ್ನು ಉಳಿಸಿಕೊಳ್ಳದೇ ಮತ್ತೆ ಸೈಕಲ್ ತುಳಿಯುವ ಜೀವನಕ್ಕೆ ಮರಳುತ್ತಾರೆ. ಇದೇ ಇವರ ಬಹುದೊಡ್ಡ ಅವಗುಣ. ಕೈಲಿದ್ದಾಗ ಉಳಿಸಿಕೊಳ್ಳದೇ, ಕೈ ಖಾಲಿಯಾದ ಮೇಲೆ ಕೈ ಕೈ ಹಿಸುಕಿಕೊಳ್ಳುತ್ತಾರೆ.

ಇವರ ಮಾನಸಿಕ ಸ್ಥಿತಿಯೂ ಹೀಗೆಯೇ. ಕಾರಿನಲ್ಲಿ ಓಡಾಡುವಾಗ ಒಂದು ತರಹದ ಸ್ವಭಾವವಿದ್ದರೆ, ನಡೆದಾಡುವಾಗ ಮತ್ತೊಂದು ರೀತಿಯ ಮನಃಸ್ಥಿತಿ ಹೊಂದಿರುತ್ತಾರೆ. ನಿರಂತರವಾಗಿ ಶ್ರಮಪಟ್ಟು ದುಡಿಯಲು ಇವರು ಅಳುಕುತ್ತಾರೆ. ನಿಷ್ಠೆ ಮತ್ತು ಶ್ರದ್ಧೆಯಿಂದ ಕೈಹಿಡಿದ ಕೆಲಸ ಮಾಡಿದರೆ ಇವರಷ್ಟು ಒಳ್ಳೆಯವರು ಬೇರೆಲ್ಲಿಯೂ ಇಲ್ಲ ಎನ್ನಬಹುದು. ಆದರೆ ಇವರಿಗಿದು ರುಚಿಸಲ್ಲ.

ಈ ನಕ್ಷತ್ರದ ತುಲಾ ರಾಶಿಯವರು ಗಂಡಾದರೆ ಹೆಣ್ಣಿಗೆ ಆಕರ್ಷಣೀಯವಾಗಿ ಕಾಣುತ್ತಾರೆ. ಹೆಣ್ಣಾದರೆ ಸಹಜವಾಗಿ ಎಲ್ಲರ ಕಣ್ಣಿಗೆ ಆಹಾರವಾಗುತ್ತಾರೆ. ಇವರಿಗೆ ಸೌಂದರ್ಯಾರಾಧನೆಯೆಂದರೆ ಇಷ್ಟ. ಹೀಗಾಗಿ ಸುಂದರವಾಗಿ ಕಾಣಲು ಕಲಾತ್ಮಕವಾಗಿ ಯೋಚಿಸುತ್ತಿರುತ್ತಾರೆ. ಇನ್ನಷ್ಟು ಚೆನ್ನಾಗಿ ಕಾಣಲು ಏನು ಮಾಡಬೇಕು ಎಂದು ಅವರಿವರಲ್ಲಿ ಕೇಳಿ ತಿಳಿದುಕೊಳ್ಳುತ್ತಿರುತ್ತಾರೆ.

ತುಂಬಾ ಆಕರ್ಷಣೀಯವಾಗಿ ಕಾಣುವ ಇವರು ಮಹಾನ್ ಬುದ್ಧಿವಂತರು. ನೂತನ ಯೋಜನೆಗಳನ್ನು ಮಾಡಲು ಯಾವಾಗಲೂ ತಯಾರಾಗೇ ಇರುತ್ತಾರೆ. ಈ ನಕ್ಷತ್ರದ ದೇವತೆಯು ವಿಶ್ವವನ್ನು ರೂಪಿಸಿದ ವಿಶ್ವಕರ್ಮ. ಹೀಗಾಗಿ ಇವರು ಹೊಸಸೃಷ್ಟಿಯನ್ನು ಮಾಡಿ ಶ್ರೇಷ್ಠರಾಗುವವರು.

ಎಲ್ಲರೊಂದಿಗೆ ಹೊಂದಿಕೊಂಡು, ಯಾರನ್ನೂ ಅವಲಂಬಿಸದೇ ಸ್ವಸಾಮರ್ಥ್ಯದಿಂದ ದುಡಿದು ಗಳಿಸುವ ಸುರಸುಂದರಾಗರಿವರು. ಪ್ರತಿಯೊಂದು ವಿಷಯದಲ್ಲೂ ಸಂಪೂರ್ಣ ಮಾಹಿತಿ ಬೇಕಿವರಿಗೆ. ಅದಕ್ಕಾಗಿ ಮಾನಸಿಕವಾಗಿ ಸದೃಢರಾಗಿಯೇ ಸಿದ್ಧಗೊಂಡಿರುತ್ತಾರೆ. ಕೆಲವೊಮ್ಮೆ ಇವರ ಮನಸ್ಸಿನಲ್ಲಿರುವ ಸಂಗತಿಗಳನ್ನು ಇವರ ಹಾವಭಾವಗಳಿಂದಲೇ ಗುರುತಿಸಬಹುದು.

ಅಹಂಕಾರದಿಂದ ವಾದ ಮಾಡಿ, ಸೆಡ್ಡು ಹೊಡೆದು ಬಾಜಿ ಕಟ್ಟಿ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಇವರಿಗೆ ಜನ್ಮಗತ. ಇದರಿಂದುಂಟಾದ ಸೋಲಿನಿಂದ ತಮ್ಮಷ್ಟಕ್ಕೇ ತಾವೇ ಬೇಸರಪಟ್ಟುಕೊಳ್ಳುತ್ತಿರುತ್ತಾರೆ. ತಮ್ಮ ಹಳೆಯ ಹಳಸಿದ ಪ್ರೀತಿ ಮತ್ತು ಸ್ನೇಹವನ್ನು ಹುಡುಕಿ ಹುಚ್ಚರಾಗುವುದು ಇವರ ದೌರ್ಬಲ್ಯ.

ಸೌಂದರ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತ ಕೆಲಸ ಕಾರ್ಯಗಳಲ್ಲಿ ಇವರು ತಮ್ಮ ಹೊಟ್ಟೆಪಾಡು ಕಂಡುಕೊಂಡಿರುತ್ತಾರೆ. ತುಂಬಾ ಚೆಂದವಾದ ಡಿಸೈನ್ ಮಾಡುವದು ಇವರೊಬ್ಬರಿಗೆ ಮಾತ್ರ ಸಾಧ್ಯ. ಕಥೆ ಬರೆಯುವುದು, ಸಂಗೀತ ವಾದ್ಯಗಳನ್ನು ನುಡಿಸುವುದು, ನಟನೆ ಮುಂತಾದವುಗಳು ಇವರ ಹವ್ಯಾಸವಾಗಿರುತ್ತದೆ. ಒಟ್ಟಿನಲ್ಲಿ ಜನ್ಮದಿಂದಲೇ ಕಲಾವಂತರಿರವರು.

ಇವರು, ಸಣ್ಣ ಸಣ್ಣ ವಿಷಯಗಳಿಗೂ ಸುಮ್ಕೇನೆ ನಗುವುದನ್ನು ಬಿಡಬೇಕು. ಜಡೆಯೊಡತಿಯನ್ನು ನೋಡಿದೊಡನೆ ಜೊಲ್ಲು ಸುರಿಸುವುದನ್ನು ತರುಣರು ಹಾಗೂ ಹುರಿಮೀಸೆ ನೋಡಿದೊಡನೆ ಮೈಬಿಸಿ ಏರುವುದನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ತರುಣಿಯರು.

ಈ ನಕ್ಷತ್ರದ ಒಂದನೇ ಚರಣದವರು ಸಾಮಾನ್ಯವಾಗಿ ದೊಡ್ಡ ಹುದ್ದೆ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದರಲ್ಲಿ ಯಶಸ್ವಿಯಾಗಿರುವುದರಿಂದ ಇವರೇ ನಮಗೆ ಬಾಸ್ ಆಗಿರಲಿ ಎಂದು ಎಲ್ಲರೂ ಇವರ ಗುಣಗಾನ ಮಾಡುತ್ತಿರುತ್ತಾರೆ. ಆದರಿವರ ಚಪಲತೆಗೆ ಎಲ್ಲರೂ ಮುಖ ಸಿಂಡರಿಸಿಕೊಳ್ಳುತ್ತಿರುತ್ತಾರೆ.

ಎರಡನೇ ಚರಣದವರು, ಉದ್ಯೋಗ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರು ಮಾಡಿಕೊಂಡಿರುತ್ತಾರೆ. ಇವರಂತೆ ಬೇರೆ ಯಾರೂ ಕೆಲಸ ಮಾಡಲು ಸಾಧ್ಯವೇ ಇರುವುದಿಲ್ಲ. ಆ ರೀತಿ ತಮ್ಮ ಹೆಸರನ್ನು ಪ್ರಸಿದ್ಧಿಗೊಳಿಸಿಕೊಂಡಿರುತ್ತಾರೆ. ಇವರ ಮಾತು ಕೂಡ ಕಟ್ಟುನಿಟ್ಟಾಗಿ ಕಡ್ಡಿಮುರಿದಂಗೆ. ಕಟುವಾಗಿ ಮಾತನಾಡಿದರೂ ಕೂಡ ಇತರರಿಗೆ ಗೊತ್ತಾಗುವುದಿಲ್ಲ ಅಷ್ಟೊಂದು ನಯವಾಗಿ ಮೊನಚಾದ ಮಾತಿನಲ್ಲೇ ಚುಚ್ಚಿರುತ್ತಾರೆ.

ಮೂರನೇ ಚರಣದವರು ಕಲಾ ಕ್ಷೇತ್ರದಲ್ಲಿ ಮಿಂಚುತ್ತಿರುತ್ತಾರೆ. ಇವರಲ್ಲಿ ಹುಟ್ಟುವ ಹೊಸ ಹೊಸ ಯೋಚನೆಗಳು ಮತ್ತು ಭಾವನೆಗಳು ಇತರರನ್ನು ಮೂಕವಿಸ್ಮಿತಗೊಳಿಸುತ್ತವೆ. ಅಷ್ಟೊಂದು ಭಾವಜೀವಿಗಳು ಇವರು. ಹೀಗಾಗಿ ಸುಂದರ ಕವಿತೆಗಳು ಇವರ ಹೃದಯಾಳದಿಂದ ಬರುತ್ತವೆ. ಮಾತೂ ಕೂಡ ಮನಸ್ಸಿಗೆ ಮುದ ನೀಡುತ್ತಿರುತ್ತವೆ. ಇವರಲ್ಲಿರುವ ಅದ್ಭುತ ವಿದ್ಯೆಗಳಿಂದ ಇತರರು ಇವರನ್ನು ರಣಧೀರನೆಂದು ಕರೆಯುತ್ತಿರುತ್ತಾರೆ.

ನಾಲ್ಕನೇ ಚರಣದವರು ಕಾಮ, ಕ್ರೋಧ, ಮದ, ಲೋಭ ಎಲ್ಲವನ್ನೂ ಮೈಗೂಡಿಸಿಕೊಂಡಿರುತ್ತಾರೆ. ಇವರಿಗೆ ಲೈಫ್ ಅಂದರೆ ಎಂಜಾಯ್ ಮಾಡುವುದು, ಕೊನೆಗೊಮ್ಮೆ ಹಣ್ಣಾಗಿ ಮಣ್ಣಾಗುವುದು. ಅಪರಿಮಿತ ಧೈರ್ಯತನ ಇವರಲ್ಲಿರುವುದರಿಂದ ಇವರ ಪರಾಕ್ರಮದ ಮುಂದೆ ಯಾರೂ ನಿಲ್ಲಲ್ಲ. ಅತೀ ಹೆಚ್ಚಿನ ದುಡ್ಡು ಖರ್ಚು ಮಾಡಿ ದುಬಾರಿ ಚಟಗಳನ್ನು ಮಾಡುತ್ತಿರುತ್ತಾರೆ. ಇವಿಷ್ಟು ಈ ನಕ್ಷತ್ರದ ನಾಲ್ಕು ಚರಣಗಳಲ್ಲಿ ಜನಿಸಿದವರ ವಿಶೇಷ ಸದ್ಗುಣಗಳು.

ಈ ನಕ್ಷತ್ರದವರು ಪ್ರತಿ ವರ್ಷದ ತಮ್ಮ ಜನ್ಮದಿನದಂದು ಅನ್ನದಾಸೋಹ ನಡೆಯುವ ದೇವಾಲಯಗಳಲ್ಲಿ ಅಕ್ಕಿ, ಬೆಲ್ಲ, ಹೆಸರುಕಾಳು ಹಾಗೂ ಅವರೆಕಾಳು ನೀಡಬೇಕು ತಮ್ಮ ಕೈಲಾದಷ್ಟು.

ನಕ್ಷತ್ರ ಟಿಪ್ಸ್ : "ರಾಮೇಶ್ವರಕ್ಕೆ ಹೋದರೂ ಶನೈಶ್ಚರ ಬಿಡಲ್ಲ" ಎಂಬ ಮಾತು ನೆನಪಿಟ್ಟುಕೊಂಡು ಸಾಡೇಸಾತಿಗೆ ಇವರು ಪರಿಹಾರ ಮಾಡಿಸಿಕೊಳ್ಳಬೇಕು.

ಸ್ವಾತಿ ನಕ್ಷತ್ರ ವಿಶೇಷ ಎಂಬುದು ಮುಂದಿನ ಲೇಖನದಲ್ಲಿ (ಒನ್‌ಇಂಡಿಯಾ ಕನ್ನಡ)

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Chitra nakshatra people (Virgo and Libra zodiac signs).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ