• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಗಗಳಂತೆ ವ್ಯಕ್ತಿತ್ವವಿರುವ ಆಶ್ಲೇಷಾ ನಕ್ಷತ್ರದವರು

By ನಾಗನೂರಮಠ ಎಸ್.ಎಸ್.
|

ಮನಃಕಾರಕ ಚಂದ್ರನು ಅಧಿಪತಿಯಾಗಿರುವ ಆಶ್ಲೇಷ ನಕ್ಷತ್ರದ ನಾಲ್ಕೂ ಚರಣಗಳಲ್ಲಿ ಜನಿಸಿದವರದು ಕರ್ಕ ರಾಶಿಯಾಗುತ್ತದೆ. ನಮಗೆಲ್ಲರಿಗೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಾ ಗಾಂಧೀಜಿ ಅವರದು ಕೂಡ ಇದೇ ನಕ್ಷತ್ರ.

ಈ ನಕ್ಷತ್ರದ ಪಾದಗಳಿಗನುಗುಣವಾಗಿ ಡಿ, ಡೂ, ಡೇ, ಡೋ ಎಂಬುದಾಗಿ ಜನ್ಮನಾಮ ಇಡಬಹುದು. ಇದನ್ನು ದೋಷ ನಕ್ಷತ್ರವೆಂದು ಕರೆದರೂ ಕೂಡ ಸೂಕ್ತವಾದ ಪರಿಹಾರ ಮಾಡಿಕೊಂಡರೆ ಒಳ್ಳೆಯದು. ಏಕೆಂದರೆ ಒಂದನೇ ಚರಣದಲ್ಲಿ ಜನಿಸಿದ್ದರೆ ತಂದೆ-ತಾಯಿಗೆ ಶುಭವಾದರೆ, ಎರಡನೇ ಚರಣದಲ್ಲಿ ಇಬ್ಬರಿಗೂ ಹಾನಿಯಾಗಬಹುದು ಎನ್ನಲಾಗುತ್ತದೆ. ಮೂರನೇ ಚರಣದಲ್ಲಿ ತಾಯಿಗೆ ತೊಂದರೆಯಾದರೆ, ನಾಲ್ಕನೇ ಚರಣದಲ್ಲಿ ಜನಿಸಿದ ಮಗುವಿನ ತಂದೆಗೆ ಮಹಾರಿಷ್ಟವೆನ್ನಲಾಗುತ್ತದೆ. ಯಾವುದಕ್ಕೂ ಇಂತಹದರಲ್ಲಿ ನಂಬಿಕೆಯಿದ್ದವರು ಈ ಬಗ್ಗೆ ಸೂಕ್ತವಾಗಿ ಗಮನ ವಹಿಸಿಕೊಳ್ಳುವುದು ಉತ್ತಮ.

ಪ್ರವಾಸಪ್ರಿಯರಾದ ಇವರು ಮಾತಿನಲ್ಲಿಯೇ ಮರುಳು ಮಾಡುವಂತಹ ದಿಗ್ಗಜರು. ಮನದಲ್ಲಿಯೇ ಮನೆ ಕಟ್ಟುವಂತಹ ಮಹಾತ್ವಕಾಂಕ್ಷಿಗಳಿವರು. ಆದರೆ ಇವರು ಯಾವಾಗ ತಮ್ಮ ನಿರ್ಧಾರ ಬದಲಿಸುತ್ತಾರೋ ಆ ದೇವನಿಗೆ ಗೊತ್ತೆನ್ನಬೇಕಾಗುತ್ತದೆ. ಹಲವಾರು ಭಾಷೆ ಕಲಿಯುವ ಟ್ಯಾಲೆಂಟ್ ಇವರಲ್ಲಿರುವುದರಿಂದ ಎಲ್ಲ ವಾತಾವರಣಗಳಲ್ಲಿ ಹೊಂದಿಕೊಂಡು ಹೋಗುತ್ತಾರೆ. ಸಮಯಕ್ಕೆ ತಕ್ಕಂತೆ ತಾವೂ ಕೂಡ ಬದಲಾಗಿ ಸೋಗು ಮಾಡುವ ಸೊಗಸುಗಾರರಿವರು. [ಪುಷ್ಯ ನಕ್ಷತ್ರದವರ ಲಕ್ಷಣಗಳು]

ತಿನ್ನೋದರಲ್ಲಿ ಎತ್ತಿದ ಕೈ ಇವರದು. ಹದವಾದ ಊಟವಿರಬೇಕು ಇವರಿಗೆ. "ಕಷ್ಟಕ್ಕೆ ಕರೀಬೇಡಿ ಊಟಕ್ಕೆ ಮರೀಬೇಡಿ" ಎನ್ನುತ್ತಾರೆ ಕೆಲವರು. ಒಟ್ಟಿನಲ್ಲಿ ಬಗೆ ಬಗೆಯ ಸ್ವಾದ ಸವಿಯುತ್ತ ನಾಲಿಗೆ ರುಚಿ ಹತ್ತಿಸಿಕೊಂಡಿರುತ್ತಾರೆ. ಯಾವುದಕ್ಕೂ ಹೆದರುವುದೇ ಇಲ್ಲ. ಇವರ ಸುದ್ದಿಗೆ ಹೋಗಿ ಗೊತ್ತಾಗುತ್ತದೆ ಇವರಿಂದ ಬೀಳುವ ಪೆಟ್ಟಿನ ನೋವಿನ ಅನುಭವ! ಸಹಾಯ ಪಡೆದಿದ್ದರೆ ಮರಳಿ ಸಹಾಯ ಮಾಡುವ ಗುಣ ಇವರಿಗಿರಲ್ಲ.

ಏಕೆಂದರೆ, ವಿಷಪೂರಿತ ನಾಗಗಳ ಮಹತ್ವ ಈ ನಕ್ಷತ್ರಕ್ಕೆ ಹೆಚ್ಚಿರುತ್ತದೆ. ಆಶ್ಲೇಷ ಎಂಬಕ್ಷರದಲ್ಲಿಯೇ "ಶೇಷ"ವೆಂಬ ಅಕ್ಷರವಡಗಿದೆ. ಇಷ್ಟೇ ಸಾಕು ಮತ್ತೇನನ್ನೂ ಹೇಳುವ ಅವಶ್ಯಕತೆಯಿಲ್ಲ ಇವರ ಬಗ್ಗೆ. ಈ ನಕ್ಷತ್ರದ ಕೆಲವರಲ್ಲಿ ಸಂದರ್ಭ ಬಂದರೆ ಮನ ಮತ್ತು ದೇಹವನ್ನೆಲ್ಲ ವಿಷಪೂರಿತವಾಗಿಸಿಕೊಂಡು ವಿಷ ಕಾರುತ್ತಾರೆ. ಒಳಗಿಂದೊಳಗೆ ಅತೀವ ಕಾಮವಿದ್ದರೂ ಕೂಡ ತೋರಿಸಿಕೊಡಲ್ಲ ಇವರು.

ಇವರಿಗೆ ಹಿಂದಿನ ಜನ್ಮ, ಮರುಜನ್ಮ ಮತ್ತು ದೇವರ ಬಗೆಗಿನ ಪವಾಡ ಹಾಗೂ ಮಹಿಮೆ ಇನ್ನಿತರ ವಿಷಯಗಳ ಬಗ್ಗೆ ತುಂಬಾ ಆಸಕ್ತಿಯಿರುತ್ತದೆ. ಇವರ ಕುಟುಂಬಕ್ಕೆ ಅಥವಾ ಇವರಿಗೆ ಯಾರಾದರೂ ಕೆಟ್ಟದ್ದನ್ನು ಮಾಡಿದ್ದರೆ, ಇವರಿಟ್ಟ ಸೇಡಿಗೆ ಅವರ ಕಥೆ ಮುಗಿದಂತೆಯೇ ಸರಿ. "ಹಾವಿನ ದ್ವೇಷ ಹನ್ನೆರಡು ವರುಷ" ಎಂಬ ಮಾತಿನಂತೆ ಇವರ ನಡವಳಿಕೆ ಇರುತ್ತದೆ. [ಪುನರ್ವಸು ನಕ್ಷತ್ರದವರು ಸಕಲಕಲಾವಲ್ಲಭರು]

ಸರ್ಪರಾಜನಂತೆ ಸಿಟ್ಟು ಇವರ ಮೂಗಿನ ಮೇಲೆಯೇ ಇರುತ್ತದೆ. ಇನ್ನು ಇವರಿಗೆ ಹಸಿವಾದರೆ ಮುಗೀತು. ಯಾರನ್ನಾದರೂ ಹರಕೊಂಡು ತಿನ್ನೋವಷ್ಟು ಅವಸರ ಇವರಿಗೆ. ಇವರಿಗೆ ಹಸಿವು ಹೊಟ್ಟೆಯದಾದರೂ ಇರಬಹುದು ಅಥವಾ "ಮೈ"ದಾದರೂ ಇರಬಹುದು. ಒಟ್ಟಿನಲ್ಲಿ ಇವರಿಗೆ ಬೇಕೆಂದಾಗ ಬೇಕು ಅಷ್ಟೇ. ಸಿಕ್ಕಿಲ್ಲಾ ಅಂದರೆ ತಿಳಿದಿದ್ದನ್ನು ಮಾಡಲೂ ಹಿಂಜರಿಯುವುದಿಲ್ಲ ಅಷ್ಟೊಂದು ಭಂಡರು ಇವರು.

ಸಂಶೋಧನೆ ಮಾಡುವುದರಲ್ಲಿ ಇವರಲ್ಲಿ ಕೆಲವರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಥವಾ ಇತಿಹಾಸ ಕೆದಕಿ ಬರೆಯುವವರಾಗಿರುತ್ತಾರೆ. ಮನರಂಜಿಸುವಲ್ಲಿ ಇವರು ಎಲ್ಲರಿಗಿಂತ ಮುಂದೆ ಎನ್ನಬಹುದು. ಪಾತಾಳಲೋಕದಲ್ಲಿನ ನಾಗಗಳಂತೆ ಇವರ ವ್ಯಕ್ತಿತ್ವವಿರುತ್ತದೆ. ಒಳಗೊಂದು ಹೊರಗೊಂದು. ಬುಧನು ಈ ನಕ್ಷತ್ರಕ್ಕೆ ಅಧಿಪತಿಯಾಗುವುದರಿಂದ ಲೆಕ್ಕಾಚಾರದಿಂದ ಜೀವನ ಸಾಗಿಸುತ್ತಾರೆ. ಮಹಾವಿಷ್ಣುವಿನ ಆರಾಧನೆ ಮಾಡಿದರೆ ಸಾಕು ಬೇಕಿದ್ದೆಲ್ಲವೂ ಇವರಿಗೆ ಸಿಗುತ್ತದೆ.

ಏಕೆಂದರೆ ಮಹಾವಿಷ್ಣುವು ಶೇಷಶಯನವಾಗಿದ್ದಾನೆ. ವಿಷ್ಣುವಿನ ವಾಹನ ಗರುಡ. (ನಾವಿರುವ ಪ್ರಕೃತಿಯ ಜೈವಿಕ ಕ್ರಿಯೆಯಲ್ಲಿ ಗರುಡನ ಆಹಾರ ಹಾವು!). ಇಲ್ಲೊಂದು ಮಜವಾದ ವಿಷಯವೆಂದರೆ ವಿಷ್ಣು ತನ್ನ ಮೇಲಿರುವಾಗ ಗರುಡಕ್ಕೆ ಅದೇನು ಮಾಡ್ತೀಯೋ ಬಾರೋ ಎಂದು ಗರುಡಕ್ಕೇನೆ ಚಾಲೆಂಜ್ ಮಾಡಿರುವ ನಾಗನಂತೆ ಗುಣವಿರುತ್ತದೆ ಈ ನಕ್ಷತ್ರದವರಿಗೆ! ವಿಷ್ಣುವಿನ ಕೃಪಾಕಟಾಕ್ಷವಿರುವುದರಿಂದಲೋ ಏನೋ ಎಂಥವರನ್ನಾದರೂ ಎದುರು ಹಾಕಿಕೊಳ್ಳುವಷ್ಟು ಧೈರ್ಯ ಇವರಿಗಿರುತ್ತದೆ. ಆದರೆ ಇವರ ಸುದ್ದಿಗೆ ಬರಲು ಎಲ್ಲರೂ ಬೆವರುತ್ತಾರೆ. ಜನ್ಮ ನಕ್ಷತ್ರದ ಪ್ರಕಾರ ಇವರದು ರಾಕ್ಷಸಗಣವಾದ್ದರಿಂದ ಕೆಲವೊಮ್ಮೆ ಯಾವುದೇ ವಿಷಯಕ್ಕೂ ಅಂಜುವುದೇ ಇಲ್ಲ.

ಇವರಿಗೆ ತಮ್ಮ ಮನಸಿನ ಮೇಲಿನ ಭಾರಿ ಹಿಡಿತವಿರುತ್ತದೆ. ಹೀಗಾಗಿ ಇವರನ್ನು ಇವರಿಷ್ಟಕ್ಕೆ ಬಿಡಬೇಕು. ತಮ್ಮ ತೀಕ್ಷ್ಣ ಬುದ್ಧಿವಂತಿಕೆಯಿಂದ (ಹಾವು ಹೆಜ್ಜೆ ಸಪ್ಪಳದಿಂದಲೇ ಎಲ್ಲವನ್ನೂ ತಿಳಿದುಕೊಳ್ಳುವಂತೆ) ಒಳಿತಾವುದು, ಕೆಡುಕಾವುದು ಎಂದು ಯೋಚಿಸಿಕೊಂಡೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾರಿವರು. ಮಾಡುವ ಕೆಲಸದಲ್ಲೂ ಕೂಡ ಸಂತಸ ಪಡುತ್ತ ಆ ಕೆಲಸವನ್ನು ಹಗುರವಾಗಿಸಿಕೊಂಡೇ ಮಾಡುತ್ತಾರೆ. ಏಕಕಾಲದಲ್ಲಿ ಐದಾರು ಕೆಲಸಗಳನ್ನು ನಿರ್ವಹಿಸುವಷ್ಟು ಏಕಾಗ್ರತೆ ಕೂಡ ಇವರು ಹೊಂದಬಲ್ಲರು. ಹೀಗಾಗಿ ಶಿಸ್ತಿನಿಂದ ಅಚ್ಚುಕಟ್ಟಾಗಿಯೇ ಕೆಲಸ ಮಾಡುವುದರಿಂದ ಇವರಿಗೆ ಗೆಲುವು ಸುಲಭವಾಗಿಯೇ ಸಿಗುತ್ತದೆ.

ಕೆಲವೊಮ್ಮೆ ಗೊಂದಲಕ್ಕೊಳಗಾಗಿ ಹುಷಾರಿದ್ದರೂ ಕೂಡ ಹಾಸಿಗೆ ಹಿಡಿದುಕೊಂಡು ಮಲಗುತ್ತಾರೆ. ಇದು ಇವರಲ್ಲಿರುವ ಏಕೈಕ ನ್ಯೂನತೆ ಎನ್ನಬಹುದು. ಕೆಲವರು "ಹೋಗ್ಲಿ ಬಿಡಪಾ, ಆ ಬಿಪಿ ಏರಿಸಿಕೊಂಡಿರೋನ ಹತ್ರ ಯಾಕ್ ಹೋಗೋದು" ಎಂದುಕೊಂಡು ಇವರ ಸ್ನೇಹಿತರು ಇವರನ್ನು ಒಂಟಿಯಾಗಿಸುತ್ತಾರೆ. ಇವರನ್ಯಾರಾದರೂ ಪ್ರೀತಿಸಿದ್ದರೆ ಇವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿಯೇ ಅರ್ಧ ವಯಸ್ಸು ದಾಟಿರುತ್ತದೆ. ಆ ತರಹ ಸೀಕ್ರೆಟ್ ಮೆಂಟೇನ್ ಮಾಡೋ ಮೆಂಟಾಲಿಟಿ ಇವರದು. ಇವರು ಯಾವಾಗ ಹುರುಪಾಗಿರ‍್ತಾರೋ, ಯಾವಾಗ ಸೋಮಾರಿಯಾಗಿರ‍್ತಾರೋ ಇವರಿಗೇನೇ ಗೊತ್ತಾಗಲ್ಲ! ಹಸಿವಾದಾಗ ಸಿಕ್ಕಾಪಟ್ಟೆ ತಿನ್ನುತ್ತಾರೆ. ಊಟವಾದ ಮೇಲೆ ಹೆಬ್ಬಾವಿನಂಗೆ ಸೋಮಾರಿಗಳಾಗ್ತಾರೆ.

ತಪ್ಪು ಮಾಡಿ ಇವರ ಬಲೆಯಲ್ಲಿ ಯಾರಾದರೂ ಸಿಕ್ಕರೆ ಇವರ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೆಬ್ಬಾವಿನಂತೆ ಪ್ಲಾನ್ ಮಾಡಿ ಉಸಿರುಗಟ್ಟುವಷ್ಟು ಗಟ್ಟಿಯಾಗಿ ಹಿಡಿದಂತಹ ಪರಿಸ್ಥಿತಿಗೆ ತಪ್ಪು ಮಾಡಿದವರನ್ನು ಸಿಲುಕಿಸುತ್ತಾರೆ. ವಿಷದ ಹಲ್ಲಿನಿಂದ ಕಚ್ಚಿ ಕ್ಷಣಾರ್ಧದಲ್ಲಿ ಸಾಯುವಂತೆ ಮಾಡುವುದೂ ಕೂಡ ಇವರಿಗೆ ಗೊತ್ತು, ಬಿಗಿಹಿಡಿತದಿಂದ ಉಸಿರುಗಟ್ಟಿಸಿ ಚಿತ್ರಹಿಂಸೆ ನೀಡಿ ಸಾಯಿಸುವುದು ಗೊತ್ತಿವರಿಗೆ. ಇಂತಹ ಮಹಾನ್ ಗುಣಗಳಿರುವ ಇವರಿಗೆ ಮಕ್ಕಳ ಭಾಗ್ಯದ ಸ್ವಲ್ಪ ಕೊರತೆ ಇರುತ್ತದೆ ಎನ್ನಲಾಗುತ್ತದೆ.

ಈ ನಕ್ಷತ್ರದಲ್ಲಿ ಜನಿಸಿದವರು ಸೈನ್ಸ್ ಓದಿಕೊಂಡು ರಸಾಯನಶಾಸ್ತ್ರದಲ್ಲಿ ಪ್ರವೀಣರಾಗಬಹುದು. ಪ್ರಾಧ್ಯಾಪಕರಾಗಬಹುದು, ಅಥವಾ ವಿಜ್ಞಾನಿಗಳಾಗಬಹುದು. ತೈಲ ಕಂಪನಿಗಳಲ್ಲಿ ಕೆಲಸ ಮಾಡಬಹುದು. ಔಷಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಹಾವಿಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ಇವರು ಎಲ್ಲರಿಗಿಂತ ಧೈರ್ಯದಿಂದಿರುತ್ತಾರೆ. ಯೋಗ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲು ಇಷ್ಟಪಡುವ ಇವರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಎಲ್ಲವನ್ನು ಅರಿತುಕೊಂಡಿರುತ್ತಾರೆ. ಹೀಗಾಗಿ ಎಲ್ಲರೆದುರಿಗೆ ಮಲಗಿದ ಸರ್ಪದಂತೆಯೇ ಕಾಣುತ್ತಿರುತ್ತಾರೆ. ಆದರೆ ಮಲಗಿದ ಸರ್ಪವನ್ನು ತಡುವಿದರೆ ಮುಗೀತು ಏನಾಗಬಹುದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಕಾಲಿನಿಂದ ಸುತ್ತಿಕೊಂಡು ಕೊರಳನ್ನು ನುಂಗುವಂತಹ ಮಹಾನ್ ಶಕ್ತಿಶಾಲಿಗಳಿವರು.

ಆದರೆ ಇವರ ಈ ಸಾಮರ್ಥ್ಯ ಸದುಪಯೋಗವಾಗಬೇಕು. ಇವರೇನಾದರೂ ನಾಸ್ತಿಕರಾದರೆ ದೊಡ್ಡ ರೌಡಿಯಾಗಬಹುದು. ಅಥವಾ ಯಾರೂ ಮಾಡದಂತಹ ಅಪರಾಧ ಮಾಡಲು ಆರಂಭಿಸಬಹುದು. ಇವರನ್ನು ಹಿಡಿಯುವುದೇ ಒಂದು ದೊಡ್ಡ ಸಾಹಸವಾಗಬಹುದು. ಆದ್ದರಿಂದ ಈ ನಕ್ಷತ್ರದವರು ಮೊದಲು ತಮ್ಮಲ್ಲಿರುವ ಬುದ್ಧಿ ಮತ್ತು ಶಕ್ತಿ ಸಾಮರ್ಥ್ಯ ಸದುಪಯೋಗವಾಗುತ್ತಿದೆಯಾ ಅಥವಾ ದುರುಪಯೋಗವಾಗುತ್ತಿದೆಯಾ ಎಂದು ಕಂಡುಕೊಳ್ಳಬೇಕು. ಪಾಲಕರೂ ಕೂಡ ತಮ್ಮ ಮಕ್ಕಳೇನಾದರೂ ಈ ನಕ್ಷತ್ರದವರಿದ್ದರೆ ಅವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿರಬೇಕು. ಇಲ್ಲವಾದರೆ ಹಾವಿಗೆ ಹಾಲೆರೆಯುತ್ತಿದ್ದೇವೆ ಎಂದುಕೊಳ್ಳಬೇಕಷ್ಟೆ. ಏಕೆಂದರೆ ಇವರಿಗೆ ಸಂಸ್ಕಾರ ನೀಡದಿದ್ದರೆ ಮುಂದೊಂದು ದಿನ ಏನಾದರೂ ಬುದ್ಧಿ ಮಾತು ಹೇಳಲು ಹೋದರೆ ಐದೆಡೆ ಸರ್ಪದಂತೆ ಭುಸುಗುಟ್ಟುತ್ತಾರಿವರು.

ಈ ನಕ್ಷತ್ರದವರು ಕೆಟ್ಟವರಲ್ಲದಿದ್ದರೂ ಕೆಟ್ಟವರ ಸಹವಾಸ ದೋಷದಿಂದ ಕೆಟ್ಟತನ ಇವರಲ್ಲಿ ಶುರುವಾದರೆ ನಮ್ಮ ಸಮಾಜಕ್ಕೇನೆ ತೊಂದರೆಯಾಗಬಹುದು. ಪುರುಷರಾದರೆ ಹುಡುಗಿಯರ ಬಗ್ಗೆ ಮಹಿಳೆಯಾದರೆ ಬಾಯ್ಸ್ ಬಗ್ಗೆ ಕೊಂಚ ಕುಡಿನೋಟ ಬೀರುವ ರಸಿಕತೆ ಇವರಲ್ಲಿ ಅಲ್ಪಸ್ವಲ್ಪವಿರುತ್ತದೆ. ಈ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಲೇಖನಗಳನ್ನು ಬರೆಯಲು ಸಾಕಷ್ಟು ಶ್ರಮ ಪಡುತ್ತಿರುತ್ತಾರೆ. ಎಲ್ಲೆಡೆ ಓಡಾಡಿ ತಾವು ಬರೆದಿರುವುದನ್ನು ತೋರಿಸುವ ಗುಣವಿರುತ್ತದೆ ಇವರಿಗೆ. ಎರಡನೇ ಚರಣದಲ್ಲಿ ಜನಿಸಿದವರು ಅಂದುಕೊಂಡಿದ್ದನ್ನು ಸಾಧಿಸಲು ಹಗಲು-ಇರುಳೆನ್ನದೆ ಪ್ರಯತ್ನಿಸುತ್ತಾರೆ. ಅದರಲ್ಲೂ ಯಶಸ್ಸೂ ಕೂಡ ಹೊಂದಿ ತಮ್ಮಷ್ಟಕ್ಕೆ ತಾವೇ ಖುಷಿಯಾಗುತ್ತಾರೆ. ಮೂರನೇ ಚರಣದಲ್ಲಿ ಜನಿಸಿದವರು ಕುಟುಂಬದವರ ಬಗ್ಗೆ ಮತ್ತು ತಮಗೆ ಹತ್ತಿರದವರ ಕಷ್ಟ, ಸುಖಗಳನ್ನು ಪರಿಹರಿಸಲು ಮುಂದಾಗುತ್ತಾರೆ. ಎಂಥದೇ ಸಂಕಷ್ಟಗಳಿದ್ದರೂ ಸರಿ ತಾವೇ ಮುಂದೆ ನಿಂತು ಪರಿಹರಿಸಲು ಸೆಟೆದು ನಿಲ್ಲುತ್ತಾರೆ. ನಾಲ್ಕನೇ ಚರಣದಲ್ಲಿ ಜನಿಸಿದವರು ಊರು ಬಿಟ್ಟರೆ ಉದ್ಧಾರವಾಗುತ್ತಾರೆ. ಏಕೆಂದರೆ ತಮಗೆ ಬೇಕಾದಂತಹ ಜೀವನ ಮಾಡಲು ಇವರಿಗೆ ಇದ್ದೂರಲ್ಲಿ ಸಾಧ್ಯವಾಗುವುದಿಲ್ಲ. ಹೀಗಾಗಿ ಉದ್ಯೋಗ ಹುಡುಕಿಕೊಂಡು ಪರ ಊರಿಗೆ ಹೋಗಿ ಸ್ವಂತ ಮನೆ ಕೂಡ ಕಟ್ಟಿಸಿಕೊಳ್ಳುವಷ್ಟು ಪ್ರತಿಭೆ ಇವರಲ್ಲಿರುತ್ತದೆ.

ಈ ನಕ್ಷತ್ರದವರು ಬಡವರಿಗೆ ಹಾಲು ದಾನ ನೀಡುವುದು ತುಂಬಾ ಸೂಕ್ತ. ಯಾವುದಕ್ಕೂ ಈ ನಕ್ಷತ್ರದವರು ತಮ್ಮ ಜನ್ಮಜಾತಕವನ್ನೊಮ್ಮೆ ಪರಿಶೀಲಿಸಿಕೊಂಡು ತಮ್ಮ ಇತರ ಗುಣಾವಶೇಷಗಳನ್ನು ತಿಳಿದುಕೊಳ್ಳಬೇಕು. ಏಕೆಂದರೆ ಬುದ್ಧಿ ಹೇಳಿದರೂ ಕೂಡ ನಮ್ಮ ಮೇಲೆಯೇ ಎಗರುವ ಇವರಿಗೆ ತಮ್ಮಲ್ಲಿರುವ ಸಾತ್ವಿಕತೆಯ ಮಹತ್ವ ಗೊತ್ತಿರುವುದಿಲ್ಲ.

"ಮಘಾ ನಕ್ಷತ್ರ ವಿಶೇಷ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಈ ನಕ್ಷತ್ರದ ಗಂಡಸರು ಹೆಂಡದ ಸಹವಾಸ ಬಿಡಬೇಕು.

ದೈವಕೃಪೆಗೆ : ಆಸ್ತಿಕರನ್ನು ದೂರುವ ನಾಸ್ತಿಕರಿಗೆ ಯಾವುದೇ ರೀತಿಯಲ್ಲೂ ಬೆಂಬಲಿಸಬೇಡಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Ashlesha nakshatra people (Cancer zodiac signs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more