ಸಂಖ್ಯಾಶಾಸ್ತ್ರದ ಪ್ರಕಾರ ಯಡಿಯೂರಪ್ಪಗೆ ಕಷ್ಟ ಕಷ್ಟ ಕಷ್ಟ!
ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವ ಯಡಿಯೂರಪ್ಪನವರು ಮೇ 19ರಂದು ಶನಿವಾರ ವಿಶ್ವಾಸಮತ ಯಾಚಿಸಲಿದ್ದು, ಗೆದ್ದು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಕೆಲ ಲಿಂಗಾಯತ ಶಾಸಕರ ಬೆಂಬಲ ಸಿಗುತ್ತೋ ಇಲ್ಲವೋ ಗೊತ್ತಿಲ್ಲ.
ಯಡಿಯೂರಪ್ಪನವರ ಜಾತಕ ಮತ್ತು ಗ್ರಹಗತಿಗಳ ಪ್ರಕಾರ ಮುಂದೆ ಏನಾಗಲಿದೆ ಎಂಬ ವಿಶ್ಲೇಷಣೆಯನ್ನೂ ಖ್ಯಾತ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಮಾಡಿದ್ದಾರೆ. ಈಗ, ಸಂಖ್ಯಾಶಾಸ್ತ್ರಜ್ಞರೊಬ್ಬರು ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಘಳಿಗೆಯ ವಿಶ್ಲೇಷಣೆ ಮಾಡಿದ್ದಾರೆ.
ನಾಗರಾಜ್ ಎನ್ ಪಾಟೀಲ ಎಂಬ ಖ್ಯಾತ ಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಯಡಿಯೂರಪ್ಪನವರು ಪ್ರಮಾಣ ಸ್ವೀಕರಿಸುವಾಗಲೇ ಎಡವಿದ್ದಾರೆ. ಅಂದರೆ, ತಪ್ಪು ದಿನಾಂಕದಂದು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ ತಪ್ಪು ಮಾಡಿದ್ದಾರೆ. ನಾಗರಾಜ್ ಅವರ ವಿವರಣೆ ಮುಂದಿನಂತೆ ಇದೆ.

ಯಡಿಯೂರಪ್ಪನವರು ಹುಟ್ಟಿದ್ದು 27ನೇ ತಾರೀಖಿನಂದು (27ನೇ ಫೆಬ್ರವರಿ 1943). ಎರಡೂ ಸಂಖ್ಯೆ ಸೇರಿದರೆ 9 ಆಗುತ್ತದೆ. ಆದರೆ, ಅವರು ಪ್ರಮಾಣ ವಚನ ಸ್ವೀಕರಿಸಿದ್ದು 17ರಂದು. ಎರಡೂ ಸಂಖ್ಯೆಯನ್ನು ಕೂಡಿದರೆ ಬರುವುದು 8. ಇದು 9ನೇ ಸಂಖ್ಯೆಗೆ ತದ್ವಿರುದ್ಧ.
* ಸಂಖ್ಯಾಶಾಸ್ತ್ರದ ಪ್ರಕಾರ 9 ಮತ್ತು 8 ಸಂಖ್ಯೆಗಳಿಗೆ ಆಗಿಬರುವುದಿಲ್ಲ. ಎರಡೂ ತದ್ವಿರುದ್ಧ. ಗ್ರಹಗಳು ಕೂಡ ಇದನ್ನೇ ಸೂಚಿಸುತ್ತವೆ. 9ನೇ ಸಂಖ್ಯೆಯನ್ನು ಮಂಗಳ ಪ್ರತಿನಿಧಿಸುತ್ತಿದ್ದರೆ, 8ನೇ ಸಂಖ್ಯೆಯನ್ನು ಶನಿ ಪ್ರತಿನಿಧಿಸುತ್ತದೆ.
* ಇನ್ನು, 17ನೇ ಮೇ, 2018ನ್ನು ಒಟ್ಟಾರೆಯಾಗಿ ಕೂಡಿಸಿದರೆ ಬರುವ ಸಂಖ್ಯೆ 15. ಇದು ಅತೀವ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ಇದು ಭವಿಷ್ಯದಲ್ಲಿ ಆಂತರಿಕ ಮತ್ತು ಬಾಹ್ಯ ರಾಜಕೀಯ ವೈರಿಗಳನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗುತ್ತದೆ. ವೈರಿಗಳು ಪ್ರತಿಸ್ಪರ್ಧಿಗಳಿಂದಲೂ ಹುಟ್ಟಬಹುದು ಅಥವಾ ಮಹಿಳಾ ನಾಯಕಿಯರಿಂದಲೂ ಹುಟ್ಟಬಹುದು.
* ಒಂದು ವೇಳೆ ವಿಶ್ವಾಸಮತ ಗೆದ್ದಮೇಲೆ ಕೂಡ ಸರಕಾರ ರಚಿಸಿದ ನಂತರ ಭವಿಷ್ಯದಲ್ಲಿ ಹಲವಾರು ಗಂಭೀರ ಪರಿಸ್ಥಿತಿಗಳನ್ನು ಎದುರಿಸುವಂತಾಗಬಹುದು.

* ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಹಲವಾರು ಅಡೆತಡೆಗಳನ್ನು ಅವರು ಎದುರಿಸಲಿದ್ದಾರೆ. ಇದೆಲ್ಲದರಿಂದಾಗಿ ಅವರ ವೈಯಕ್ತಿಕ ಇಮೇಜಿಗೆ ಭಾರೀ ಹೊಡೆತ ಬೀಳುತ್ತದೆ. ಇಷ್ಟು ಮಾತ್ರವಲ್ಲ ಅವರ ಆರೋಗ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ.












Click it and Unblock the Notifications