ಅಂಧರ ಬಾಳಿಗೆ ಬೆಳಕಾದ ಸಂತೋಷ್ ಲಾಡ್ ಫೌಂಡೇಶನ್, ಎಐ ಕನ್ನಡಕ ಉಡುಗೊರೆ!
ಧಾರವಾಡ: ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸಾಮಾಜ ಸೇವೆ ಮುಂದುವರಿದಿದ್ದು, ಈಗಾಗಲೇ ಸಾಕಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿ ಕಷ್ಟದಲ್ಲಿ ಇದ್ದವರ ಬಾಳಿಗೆಲ್ಲಾ ಬೆಳಕಾಗಿರುವ ಸಂತೋಷ್ ಲಾಡ್ ಫೌಂಡೇಶನ್ ಈಗ ಅಂಧರ ಬಾಳಿಗೆ ಬೆಳಕಾಗಿದೆ. ಕಾರ್ಮಿಕ & ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಂತೋಷ್ ಲಾಡ್ ಅವರ ಮಾರ್ಗದರ್ಶನದಲ್ಲಿ ಫೌಂಡೇಶನ್ ಹಲವು ಮಾನವೀಯ ಕಾರ್ಯಗಳನ್ನು ಮುಂದುವರಿಸಿದೆ.
ನೆರವು ಅರಸಿ ಬರುವವರು, ಸಹಾಯ ಕೋರಿ ಬರುವವರು, ಸೌಲಭ್ಯ ಬಯಸಿದ ಬಡವರಿಗೆ ಯಾವ ಕಾರಣಕ್ಕೂ ನಿರಾಸೆ ಮಾಡದೆ & ಬರಿಗೈಲಿ ಕಳಿಸದೇ ಸಹಾಯ ಮಾಡುತ್ತಾ ಬಂದಿದೆ ಸಂತೋಷ್ ಲಾಡ್ ಫೌಂಡೇಶನ್. ಧಾರವಾಡ ಜಿಲ್ಲೆಗೆ ಮಾತ್ರ ಮೀಸಲಾಗದೆ ಕರ್ನಾಟಕದ ಮೂಲೆ ಮೂಲೆಗೆ ಕೂಡ ಸಹಾಯ ಮಾಡುತ್ತಾ ಬಂದಿರುವ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಇದೀಗ, ಅಂಧರಿಗೆ ಎಐ ಆಧಾರಿತ ಕನ್ನಡಕ ವಿತರಣೆ ಮಾಡಿದೆ. ಹಾಗಾದರೆ ಇದರ ವಿಶೇಷತೆಗಳು ಏನು? ಈ ಕನ್ನಡಕವು ದೃಷ್ಟಿ ಇಲ್ಲದವರಿಗೆ ಹೇಗೆ ನೆರವಾಗಲಿದೆ? ಬನ್ನಿ ತಿಳಿಯೋಣ.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕನ್ನಡ
ಸ್ಮಾರ್ಟ್ ವಿಷನ್ ಗ್ಲಾಸ್ ಎಂದು ಕರೆಯುವ ಹಾಗೂ ಅಮೆರಿಕದ ತಂತ್ರಜ್ಞಾನ ಆಧರಿಸಿ ತಯಾರಿಸಿದ 38 ಕನ್ನಡಕಗಳನ್ನು ಇದೀಗ ವಿತರಣೆ ಮಾಡಲಾಗಿದೆ. ಸ್ಮಾರ್ಟ್ ವಿಷನ್ ಗ್ಲಾಸ್ ಅರ್ಥಾತ್ ಈ ಎಐ ಕನ್ನಡಕ ಹಲವು ವಿಶೇಷತೆ ಹೊಂದಿದೆ. ಇದರಲ್ಲಿ ಸೆನ್ಸಾರ್ ಇದ್ದು, ವಾಯ್ಸ್ ಕಮಾಂಡಿಂಗ್ ಮತ್ತು ಒಂದು ಲೆನ್ಸ್ ಕೂಡ ಇರುತ್ತದೆ. ಜೊತೆಗೆ ಕನ್ನಡಕ ಅಪ್ಲಿಕೇಷನ್ ಸಹಿತವಾಗಿದ್ದು, ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡ ನಂತರ, ತಾನೇ ವಾಯ್ಸ್ ಕಮಾಂಡ್‌ನಲ್ಲಿ ಅಂಧರಿಗೆ ತಮ್ಮ ಎದುರಿಗೆ ಬಂದವರ ಮಾಹಿತಿ ಜೊತೆಗೆ ಹಲವು ವಿಶೇಷ ವಿಚಾರಗಳನ್ನೂ ಹಂಚಿಕೊಳ್ಳುತ್ತದೆ. ಆಂಡ್ರಾಯ್ಡ್ ಮೊಬೈಲ್ ಮೂಲಕ ಕನ್ನಡಕ ಸಂಪರ್ಕಿಸಲು ವ್ಯವಸ್ಥೆ ಕಲ್ಪಿಸಿರುತ್ತಾರೆ. ಈ ಸಾಧನ ಬ್ಲೂಟೂತ್ ಮೂಲಕ ಬಳಕೆಗೆ ಸಹಾಯ ಮಾಡುತ್ತದೆ.
ದೃಷ್ಟಿ ಇಲ್ಲದವರಿಗೆ ಹಣ ಎಣಿಸಲು ಸಹಾಯ
ಪ್ರಮುಖವಾಗಿ ಅಂಧರ ಸಮಸ್ಯೆಗಳಲ್ಲಿ ಹಣ ಎಣಿಸುವುದು ಕೂಡ ಒಂದಾಗಿದೆ. ಅವರಿಗೆ ನೋಟು ಕಾಣದ ಕಾರಣ ವ್ಯವಹಾರದ ವೇಳೆ ತೊಂದರೆ ಎದುರಾಗುತ್ತೆ. ಇದು ಯಾವ ನೋಟು? ಎಂಬುದನ್ನ ನಿಖರವಾಗಿ ಗುರುತಿಸಲು ಕಷ್ಟವಾಗುತ್ತದೆ. ಆದರೆ ಈ ಎಐ ಕನ್ನಡಕ ನೋಟಿನ ಪಕ್ಕಾ ಮಾಹಿತಿ ನೀಡುವ ಮೂಲಕ ಎಷ್ಟರ ನೋಟು ಕೊಟ್ಟೆ, ವ್ಯಾಪಾರದ ನಂತರ ವ್ಯಾಪಾರಿಗಳು ಎಷ್ಟು ಚಿಲ್ಲರೆ ನೀಡಿದರು ಎಂಬುದನ್ನು ಸರಿಯಾಗಿ ತಿಳಿಸುತ್ತದೆ.
ಬೋರ್ಡ್ ಓದಲು ಕೂಡ ಸಹಾಯಕ
ಕನ್ನಡಕ ಧರಿಸಿದರೆ ಎದುರು ಇರುವ ಸೂಚನಾ ಫಲಕ ಓದಿ ತಿಳಿಸುತ್ತದೆ. ಪುಸ್ತಕ ಹಿಡಿದುಕೊಂಡರೆ ಓದಿ ಹೇಳುತ್ತದೆ. ಬೇರೆ ಭಾಷೆಯಲ್ಲಿನ ಸೂಚನಾ ಫಲಕಗಳನ್ನು ಸ್ಥಳೀಯ ಭಾಷೆಯಲ್ಲಿ ತಿಳಿಸುತ್ತದೆ. ಒಮ್ಮೆ ಪರಿಚಯವಾದ ವ್ಯಕ್ತಿ ಮತ್ತೆ ಎದುರಾದರೆ, ಅವರನ್ನು ಗುರುತಿಸುತ್ತದೆ. ಎಟಿಎಂನಲ್ಲಿ ಹಣ ಪಡೆಯಲು ಸಹಾಯ ಕೂಡ ಮಾಡುತ್ತದೆ ಈ ಕನ್ನಡಕ.
ಈ ಅತ್ಯುತ್ತಮ ಆಲೋಚನೆ ಬಂದಿದ್ದು ಹೇಗೆ?
ಎಐ ಕನ್ನಡಕ ಆಲೋಚನೆ ಬಂದಿರುವುದು ಸಹ ವಿಭಿನ್ನವಾಗಿದ್ದು, ಇಂತಹ ಒಂದು ಕನ್ನಡಕವನ್ನು ಸಿದ್ಧಪಡಿಸಿ ಅಂಧರಿಗೆ ನೀಡಬಹುದೆಂದು ಬೆಂಗಳೂರಿನ ವ್ಯಕ್ತಿಯೊಬ್ಬರು ಸಚಿವರಾದ ಸಂತೋಷ್ ಲಾಡ್ ಅವರ ಫೌಂಡೇಶನ್ ಗಮನಕ್ಕೆ ತಂದಿದ್ದರು. ಆ ನಂತರ ಈ ಕನ್ನಡಕ ರೂಪಿಸಿ ಅಂಧರಿಗೆ ವಿತರಣೆ ಮಾಡಲಾಗಿದೆ.
ಮಾಮೂಲು ಕನ್ನಡಕದ ರೀತಿಯಲ್ಲೇ ಇರುತ್ತದೆ
ಎಐ ಕನ್ನಡಕವು ದೃಷ್ಟಿ ದೋಷ ಇರುವ ಸಾಮಾನ್ಯರು ಧರಿಸುವ ಕನ್ನಡಕದ ರೀತಿಯೇ ಇದೆ. ಇದರ ತೂಕ ಸಹ ಹೆಚ್ಚು ಇಲ್ಲ, ಆದರೆ ಇದನ್ನ ಮೊಬೈಲ್‌ನಂತೆಯೇ ಚಾರ್ಜ್ ಮಾಡಿಕೊಳ್ಳಬೇಕು. ಬ್ಲೂ ಟೂತ್ ಸಂಪರ್ಕ ಮಾಡಿರಬೇಕು. ಬಳಕೆಯಲ್ಲಿ ಇಲ್ಲದೇ ಇರುವಾಗ ಆಫ್ ಮಾಡಿ ಇಡಬೇಕು. ಕೃತಕ ಕಣ್ಣುಗಳ ರೀತಿ ಇದು ಕೆಲಸ ಮಾಡುತ್ತದೆ. ಈ ಎಐ ಕನ್ನಡಕ ಯಾರಿಗೆ ನೋಂದಣಿಯಾಗಿರುತ್ತದೋ ಅವರೇ ಬಳಕೆ ಮಾಡಬೇಕು ಮತ್ತು ಇತರರಿಗೆ ವರ್ಗಾವಣೆ ಮಾಡುವಂತಿಲ್ಲ.












Click it and Unblock the Notifications