ಅಪ್ರಾಪ್ತ ವಯಸ್ಕರಿಗಾಗಿ ಮೆಟಾದಿಂದ ಹೊಸ AI ಸುರಕ್ಷತಾ ಕ್ರಮ, ಏನದು?
ಮೆಟಾ ತನ್ನ ಕೃತಕ ಬುದ್ಧಿಮತ್ತೆ (ಎಐ) ಉತ್ಪನ್ನಗಳಲ್ಲಿ ಹದಿಹರೆಯದವರಿಗಾಗಿ ಹೊಸ ಸುರಕ್ಷತಾ ಕ್ರಮಗಳನ್ನು ಸೇರ್ಪಡೆ ಮಾಡುತ್ತಿದೆ. ಎಐ ಬಳಸುವಾಗ ಅಪ್ರಾಪ್ತ ವಯಸ್ಕರು ಫ್ಲರ್ಟ್ (ಪ್ರೀತಿಯ ಮಾತುಕತೆ) ಅಥವಾ ಆತ್ಮಹತ್ಯೆ, ಹಾನಿಕಾರಕ ಚರ್ಚೆಗಳನ್ನು ತಪ್ಪಿಸುವಂತೆ ಎಐ ಮಾದರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಆತ್ಮಹತ್ಯೆಯ ಬಗ್ಗೆ ಸಂಭಾಷಣೆಗಳು ಮತ್ತು ಚರ್ಚೆಗಳನ್ನು ತಪ್ಪಿಸಲು ತರಬೇತಿ ವ್ಯವಸ್ಥೆಗಳ ಮೂಲಕ ತಡೆ ಹಾಕುವ ಕೆಲಸ ಮಾಡಲು ಮುಂದಾಗಿದೆ.
ವಿಶೇಷವಾಗಿ ಹುಡುಗ-ಹುಡುಗಿಯರ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವೊಂದು ಎಐ ಕ್ಯಾರೆಕ್ಟರ್‌ಗಳಿಗೆ ತಾತ್ಕಾಲಿಕವಾಗಿ ಬಳಕೆ ನಿರ್ಬಂಧಿಸುತ್ತದೆ. ಹದಿಹರೆಯದವರಿಗೆ ಸುರಕ್ಷಿತ ಹಾಗೂ ವಯಸ್ಸಿಗೆ ಸೂಕ್ತವಾದ ಎಐ ಅನುಭವಗಳನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳಲು ದೀರ್ಘಾವಧಿಯ ಕ್ರಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೆಟಾ ಈ ತಾತ್ಕಾಲಿಕ ಕ್ರಮಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಮೆಟಾ ವಕ್ತಾರ ಆಂಡಿ ಸ್ಟೋನ್ ತಿಳಿಸಿದ್ದಾರೆ.

ಸುರಕ್ಷತಾ ಕ್ರಮಗಳನ್ನು ಈಗಾಗಲೇ ಜಾರಿಗೆ ತರಲಾಗುತ್ತಿದ್ದು, ಕಂಪನಿಯು ತನ್ನ ವ್ಯವಸ್ಥೆಗಳನ್ನು ಪರಿಷ್ಕರಿಸುತ್ತಿದ್ದಂತೆ ಕಾಲಾನಂತರದಲ್ಲಿ ಸರಿಹೊಂದಿಸಲಾಗುವುದು ಎಂದು ಸ್ಟೋನ್ ಹೇಳಿದ್ದಾರೆ. ರಾಯಿಟರ್ಸ್ ವರದಿಯ ನಂತರ ಮೆಟಾದ ಎಐ ನೀತಿಗಳು ತೀವ್ರ ಪರಿಶೀಲನೆ ಮತ್ತು ಟೀಕೆಗೆ ಒಳಗಾದವು. ಈ ತಿಂಗಳ ಆರಂಭದಲ್ಲಿ ಫೇಸ್‌ಬುಕ್‌ನ ಎಐ ನೀತಿಗಳ ಬಗ್ಗೆ ಯುಎಸ್ ಸೆನೆಟರ್ ತನಿಖೆ ಆರಂಭಿಸಿದ್ದರು. ಚಾಟ್‌ಬಾಟ್‌ಗಳು ಅಪ್ರಾಪ್ತ ವಯಸ್ಕರೊಂದಿಗೆ ಅನುಚಿತವಾಗಿ ಸಂವಹನ ನಡೆಸಲು ಅವಕಾಶ ನೀಡುವ ನಿಯಮಗಳ ಕುರಿತು ದಾಖಲೆಗಳನ್ನು ಕೋರಿದ್ದರು.
ಮೆಟಾ ದಾಖಲೆಗಳನ್ನು ದೃಢಪಡಿಸಿತ್ತು. ಚಾಟ್‌ಬಾಟ್‌ಗಳು ಮಕ್ಕಳೊಂದಿಗೆ ಫ್ಲರ್ಟ್ ಮಾಡಲು ಮತ್ತು ಪ್ರಣಯ ಪಾತ್ರದಲ್ಲಿ ತೊಡಗಿಸಿಕೊಳ್ಳಲು ಅನುಮತಿ ಇದೆ ಎಂದು ಹೇಳುವ ಭಾಗಗಳನ್ನು ಕಂಪನಿಯು ತೆಗೆದುಹಾಕಿದೆ ಎಂದು ಹೇಳಿದೆ. ನಮ್ಮ ನೀತಿಗಳಿಗೆ ವಿರುದ್ಧವಾಗಿದ್ದ ಹಾಗೂ ಅಸಮಂಜಸವಾಗಿದ್ದವನ್ನು ತೆಗೆದುಹಾಕಲಾಗಿದೆ ಎಂದು ಹೇಳಿತ್ತು.

ಈ ಮೂಲಕ ಮೆಟಾ ತನ್ನ ಎಐ ಚಾಟ್‌ಬಾಟ್‌ಗಳು ಹುಡುಗ-ಹುಡುಗಿಯರೊಂದಿಗೆ ಸಂವೇದನಾತ್ಮಕ ಹಾಗೂ ಪ್ರೀತಿಯನುಡಿಗಳಲ್ಲಿ ಸಂವಹನ ನಡೆಸುವುದನ್ನು ತಡೆಯಲು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತಾತ್ಕಾಲಿಕ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ ಮತ್ತು ಕಂಪನಿ ಮುಂದೆ ಹೆಚ್ಚಿನ ಸುಧಾರಿತ ಕ್ರಮವನ್ನು ರೂಪಿಸುವುದಾಗಿ ತಿಳಿಸಿದೆ. ಮಕ್ಕಳಿಗೆ ಸೂಕ್ತ ಎಐ ಅನುಭವವನ್ನು ನೀಡಲು ಮುಂದಿನ ದಿನಗಳಲ್ಲಿ ಹೆಚ್ಚು ನಿಯಂತ್ರಣಗಳು ಜಾರಿಯಾಗಲಿವೆ ಎಂದು ಹೇಳಿದೆ.
ಹೃದಯ ಸ್ಥಿತಿ ಪತ್ತೆಹಚ್ಚುವ ಎಐ ಸ್ಟೆತೊಸ್ಕೋಪ್
ವೈದ್ಯರು ಕೃತಕ ಬುದ್ಧಿಮತ್ತೆಯ ಸ್ಟೆತೊಸ್ಕೋಪ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಇದು 15 ಸೆಕೆಂಡುಗಳಲ್ಲಿ ಮೂರು ಹೃದಯ ಸ್ಥಿತಿಗಳನ್ನು ಪತ್ತೆ ಮಾಡುತ್ತದೆ. ಈ ಹಿಂದೆ 1816ರಲ್ಲಿ ಆವಿಷ್ಕರಿಸಲ್ಪಟ್ಟ ಈಗಿನ ಸಾಂಪ್ರದಾಯಿಕ ಸ್ಟೆತೊಸ್ಕೋಪ್ ದೇಹದೊಳಗಿನ ಶಬ್ದಗಳನ್ನು ಕೇಳಲು ಬಳಸಲಾಗುತ್ತಿದೆ. ಇದು ಎರಡು ಶತಮಾನಗಳಿಗೂ ಹೆಚ್ಚು ಕಾಲ ಪ್ರತಿಯೊಬ್ಬ ವೈದ್ಯರ ಟೂಲ್‌ಕಿಟ್‌ನ ಪ್ರಮುಖ ಭಾಗವಾಗಿದೆ. ಈಗ ಒಂದು ತಂಡವು ಹೃದಯ ವೈಫಲ್ಯ, ಹೃದಯ ಕವಾಟ ಕಾಯಿಲೆ ಮತ್ತು ಅಸಹಜ ಹೃದಯ ಲಯಗಳನ್ನು ತಕ್ಷಣವೇ ಪತ್ತೆಹಚ್ಚುವ ಎಐ ಹೈಟೆಕ್ ಅಪ್‌ಗ್ರೇಡ್ ಅನ್ನು ವಿನ್ಯಾಸಗೊಳಿಸಿದೆ.
ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ಇಂಪೀರಿಯಲ್ ಕಾಲೇಜ್ ಹೆಲ್ತ್‌ಕೇರ್ ಎನ್‌ಎಚ್‌ಎಸ್ ಟ್ರಸ್ಟ್‌ನ ಸಂಶೋಧಕರು ಈ ಹೊಸ ಸ್ಟೆತೊಸ್ಕೋಪ್ ಅಭಿವೃದ್ಧಿಪಡಿಸಿದ್ದು, ಹೃದಯ ಬಡಿತ ಮತ್ತು ಮಾನವನ ಕಿವಿಗೆ ಪತ್ತೆಹಚ್ಚಲಾಗದ ರಕ್ತದ ಹರಿವಿನಲ್ಲಿನ ಸಣ್ಣ ವ್ಯತ್ಯಾಸಗಳನ್ನು ಸಹ ವಿಶ್ಲೇಷಿಸುತ್ತದೆ. ಅದೇ ಸಮಯದಲ್ಲಿ ಇಸಿಜಿಯನ್ನು ಕೂಡ ತೆಗೆದುಕೊಳ್ಳುತ್ತದೆ. ಇದು ವೈದ್ಯಲೋಕದಲ್ಲಿ ಕ್ರಾಂತಿ ಎಂದು ಹೇಳಲಾಗುತ್ತಿದೆ.












Click it and Unblock the Notifications