Virat Kohli: ಫ್ಯಾಷನ್‌ನಲ್ಲೂ ಇವರೇ ಕಿಂಗ್: ಮುಂಬೈನಲ್ಲಿನ 2BHK ಫ್ಲ್ಯಾಟ್ ಮೌಲ್ಯದ ವಾಚ್ ಹೊಂದಿದ್ದಾರೆ ವಿರಾಟ್ ಕೊಹ್ಲಿ
Virat Kohli Watch: ಟೀಂ ಇಂಡಿಯಾ ದಿಗ್ಗಜ, ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಬರಿ ಮೈದಾನದಲ್ಲಿ ಅಷ್ಟೇ ಅಲ್ಲದೆ, ಮೈದಾನದ ಹೊರಗೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ದುಬಾರಿ ವಾಚ್ ಸಂಗ್ರಹದಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್‌ನಲ್ಲಿದ್ದಾರೆ. ಹಾಗಾದ್ರೆ ಇವರ ಬಳಿ ಯಾವಾಲ್ಲಾ ಬ್ರ್ಯಾಂಡ್‌ಗಳ ಕೈಗಡಿಯಾರಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಸ್ಟೈಲೀಶ್ ಮೂಲಕ ತಾವು ಮೈದಾನದ ಹೊರಗೂ ಕಿಂಗ್ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಇವರು ಅತ್ಯಂತ ಸರಳ ಹಾಗೂ ಆಕರ್ಷಕ ಉಡುಪಿನಲ್ಲಿ ಮಿಂಚಿದರು. ಆದರೆ ಅಲ್ಲಿ ಎಲ್ಲರ ಗಮನ ಸೆಳೆದದ್ದು ಮಾತ್ರ ಅವರು ಧರಿಸಿದ್ದ ಐಷಾರಾಮಿ ಕೈಗಡಿಯಾರ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ದುಬಾರಿ ಬೆಲೆ ವಾಚ್ ಧರಿಸಿದ ಕೊಹ್ಲಿ
ಈ ವಿಡಿಯೋವನ್ನು insanelyluxuriousindians ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ವಿರಾಟ್ ಕೊಹ್ಲಿ ಕಪ್ಪು ಬಣ್ಣದ ಟಿ-ಶರ್ಟ್ ಮತ್ತು ನೀಲ್ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿ ಸರಳವಾಗಿದ್ದರೂ ಗೇಟಪ್‌ನಲ್ಲಿ ಗತ್ತಿನಿಂದ ಕಂಡರು. ಆದರೆ ಅವರು ದುಬಾರಿ ಬೆಲೆಯ ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ (Rolex Cosmograph Daytona) ಕಂಪನಿಯ ವಾಚ್ ಧರಿಸಿ ಗಮನ ಸೆಳದರು.
ಪಾಂಡಾ ವಾಚ್‌ನ ಬೆಲೆ
ಇದನ್ನು ಪಾಂಡಾ (Panda) ಎಂದು ಕರೆಯಲಾಗುತ್ತದೆ. ಇದರ ಅಂದಾಜು ಮೌಲ್ಯ 35,00,000 ರೂಪಾಯಿ ಎನ್ನಲಾಗುತ್ತಿದೆ. ಬಿಳಿ ಬಣ್ಣದ ಡಯಲ್ ಮತ್ತು ಕಪ್ಪು ಬಣ್ಣದ ಸಬ್-ಡಯಲ್‌ಗಳ ವಿಶಿಷ್ಟ ವಿನ್ಯಾಸವನ್ನು ಹೊಂದಿರುವ ಈ ವಾಚ್ ವಿಶ್ವದ ಅತ್ಯಂತ ಬೇಡಿಕೆಯ ಸ್ಟೀಲ್ ಕ್ರೊನೊಗ್ರಾಫ್‌ಗಳಲ್ಲಿ ಒಂದಾಗಿದೆ.
ಇದು ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ಪಾಂಡಾ (Ref. 116500LN) ವಾಚ್ ಆಗಿದೆ. ಬಿಳಿ ಮತ್ತು ಕಪ್ಪು ಬಣ್ಣದಿಂದ ಮಿಶ್ರಿತವಾಗಿರುವ ಇದನ್ನು ಪಾಂಡಾ ಎಂದು ಕರೆಯಲಾಗುತ್ತದೆ. ಇದರ ಅಧಿಕೃತ ಬೆಲೆಗಿಂತ ಮಾರುಕಟ್ಟೆಯಲ್ಲಿನ ಬೇಡಿಕೆ ಹೆಚ್ಚಿರುವುದರಿಂದ ಸೆಕೆಂಡ್ ಹ್ಯಾಂಡ್ ಅಥವಾ ಮರುಮಾರಾಟ ಮಾರುಕಟ್ಟೆಯಲ್ಲಿ ಇದರ ಬೆಲೆ ₹35 ಲಕ್ಷದಿಂದ ₹40 ಲಕ್ಷಕ್ಕೂ ಹೆಚ್ಚಿರುತ್ತದೆ.
ವಿರಾಟ್ ಕೊಹ್ಲಿ ಬಳಿಯಿರುವ ಐಷಾರಾಮಿ ವಾಚ್‌ಗಳು
ವಿರಾಟ್ ಕೊಹ್ಲಿ ಅವರ ಸಂಗ್ರಹದಲ್ಲಿ ಕೇವಲ ಇದೊಂದೇ ಅಲ್ಲ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಅನೇಕ ಐಷಾರಾಮಿ ವಾಚ್‌ಗಳಿವೆ ಎಂಬುದು ಗಮನಾರ್ಹ ವಿಷಯವಾಗಿದೆ. ಮೂಲತಃ ರೇಸಿಂಗ್ ಡ್ರೈವರ್‌ಗಳಿಗಾಗಿಯೇ ವಿನ್ಯಾಸಗೊಳಿಸಲಾದ ಡೇಟೋನಾ ವಾಚ್‌ಗಳು ನಿಖರತೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರಾಗಿವೆ. ಈ ಗುಣಗಳು ಕ್ರಿಕೆಟ್ ಮೈದಾನದಲ್ಲಿ ಕೊಹ್ಲಿ ತೋರುವ ಶಿಸ್ತು ಹಾಗೂ ಅದ್ಭುತ ಪ್ರದರ್ಶನಕ್ಕೆ ಪೂರಕವಾಗಿವೆ.
ಡೇಟೋನಾ ವಾಚ್‌ಗಳನ್ನು ವೇಗ ಮತ್ತು ಸಮಯದ ನಿಖರತೆಯನ್ನು ಅಳೆಯಲು ರೇಸಿಂಗ್ ಕ್ರೀಡಾಪಟುಗಳಿಗಾಗಿ ವಿಶೇಷವಾಗಿ ತಯಾರಿಸಲಾಗುತ್ತದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಎಷ್ಟು ಪರ್ಫೆಕ್ಟ್ ಆಗಿರುತ್ತದೋ, ಈ ವಾಚ್‌ನ ತಂತ್ರಜ್ಞಾನವೂ ಅಷ್ಟೇ ನಿಖರವಾಗಿರುತ್ತದೆ ಎಂಬುದು ಇಲ್ಲಿನ ಹೋಲಿಕೆ. ಕೊಹ್ಲಿಯವರ ವ್ಯಕ್ತಿತ್ವಕ್ಕೆ ಈ ಐಷಾರಾಮಿ ವಾಚ್ ಮತ್ತಷ್ಟು ಮೆರುಗು ನೀಡುತ್ತದೆ. ಅವರ ಮೈದಾನದ ಪ್ರದರ್ಶನ ಮತ್ತು ಜೀವನಶೈಲಿ ಎರಡೂ ಒಂದೇ ರೀತಿಯ ಹೈ-ಇಂಟೆನ್ಸಿಟಿ ಹೊಂದಿವೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
₹1.5 ಕೋಟಿ ಮೌಲ್ಯದ ವಾಚ್
ಈ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊಹ್ಲಿ ತಮ್ಮ ಐಷಾರಾಮಿ ವಾಚ್ ಸಂಗ್ರಹಕ್ಕಾಗಿ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ ಕೊಹ್ಲಿ ಅನುಷ್ಕಾ ಶರ್ಮಾ ಅವರೊಂದಿಗೆ ವೃಂದಾವನಕ್ಕೆ ಪ್ರಯಾಣಿಸುವಾಗ ಸುಮಾರು ₹1.5 ಕೋಟಿ ಮೌಲ್ಯದ ಅಲ್ಟ್ರಾ-ಪ್ರೀಮಿಯಂ ವಾಚ್ ಧರಿಸಿ ಕಾಣಿಸಿಕೊಂಡಿದ್ದರು. ಈ ವಾಚ್‌ನ ಬೆಲೆಯು ಮುಂಬೈನ ಕೆಲವು ಭಾಗಗಳಲ್ಲಿನ 2BHK ಫ್ಲ್ಯಾಟ್‌ನ ಬೆಲೆಗೆ ಸಮಾನವಾಗಿದೆ ಎಂಬುದು ವಿಶೇಷ.
ಇತ್ತೀಚೆಗಷ್ಟೇ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರದ ಬಿಡುವಿನ ವೇಳೆಯಲ್ಲಿ ಕೊಹ್ಲಿ ದಂಪತಿ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ಧರಿಸಿದ್ದ ವಾಚ್ ಅಂದಾಜು ₹1.5 ಕೋಟಿ ಬೆಲೆಬಾಳುವ Patek Philippe ಬ್ರ್ಯಾಂಡ್‌ನದ್ದಾಗಿತ್ತು ಎಂದು ವರದಿಯಾಗಿದೆ. ಈ ಒಂದು ವಾಚ್‌ನ ಬೆಲೆಗೆ ಮುಂಬೈನಂತಹ ನಗರದಲ್ಲಿ ಸುಸಜ್ಜಿತವಾದ ಒಂದು ಮನೆಯನ್ನೇ ಖರೀದಿಸಬಹುದು ಎಂಬ ಹೋಲಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
₹1.4 ಕೋಟಿ ಮೌಲ್ಯದ ಐಷಾರಾಮಿ ವಾಚ್‌ನ ವಿಶೇಷತೆ
ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಕೊಹ್ಲಿ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಅವರು ಸುಮಾರು ₹1.4 ಕೋಟಿ ಮೌಲ್ಯದ ಐಷಾರಾಮಿ 'ಪಾಟೆಕ್ ಫಿಲಿಪ್ ಅಕ್ವಾನಾಟ್ 5164G' (Patek Philippe Aquanaut 5164G) ವಾಚ್ ಧರಿಸುವ ಮೂಲಕ ಗಮನ ಸೆಳೆದಿದ್ದರು.
₹1.4 ಕೋಟಿ ಮೌಲ್ಯದ Patek Philippe Aquanaut (5164G) ವಾಚ್ 18 ಕ್ಯಾರೆಟ್ ವೈಟ್ ಗೋಲ್ಡ್‌ನಿಂದ ಮಾಡಲ್ಪಟ್ಟಿದ್ದು, ಇದು ವಿಶ್ವದಾದ್ಯಂತ ಓಡಾಡುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಡ್ಯುಯಲ್ ಟೈಮ್ ಫೀಚರ್ ಹೊಂದಿದೆ. ಈ ಮೂಲಕ ವಿರಾಟ್ ಕೊಹ್ಲಿ ಕೇವಲ ರನ್ ಗಳಿಸುವುದರಲ್ಲಿ ಮಾತ್ರವಲ್ಲದೆ ಫ್ಯಾಷನ್ ವಿಚಾರದಲ್ಲೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿದ್ದಾರೆ.
ರೋಲೆಕ್ಸ್‌ನಿಂದ ಪಾಟೆಕ್ ಫಿಲಿಪ್‌ವರೆಗೆ ವಾಚ್ ಸಂಗ್ರಹ
ರೋಲೆಕ್ಸ್‌ನಿಂದ ಪಾಟೆಕ್ ಫಿಲಿಪ್‌ವರೆಗೆ ವಿರಾಟ್ ಕೊಹ್ಲಿ ಅವರ ವಾಚ್ ಸಂಗ್ರಹವು ಎಲ್ಲರನ್ನೂ ಬೆರಗುಗೊಳಿಸಿದೆ. ಇದು ಅವರು ಕೇವಲ ಕ್ರಿಕೆಟ್ ಲೋಕದ ದಿಗ್ಗಜ ಮಾತ್ರವಲ್ಲದೆ, ಫ್ಯಾಷನ್ ಜಗತ್ತಿನಲ್ಲೂ ಕಿಂಗ್ ಆಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕೊಹ್ಲಿ ಅವರ ಬಳಿ ರೋಲೆಕ್ಸ್, ಪಾಟೆಕ್ ಫಿಲಿಪ್ (Patek Philippe), ಮತ್ತು ಆಡೆಮರ್ ಪಿಗುಯೆಟ್ (Audemars Piguet) ನಂತಹ ವಿಶ್ವವಿಖ್ಯಾತ ಬ್ರ್ಯಾಂಡ್‌ಗಳ ವಾಚ್‌ಗಳಿವೆ. ಈ ಮೂಲಕ ಮೈದಾನದಲ್ಲಿ ಅವರ ಆಟ ಹೇಗೆ ಯುವಕರಿಗೆ ಸ್ಪೂರ್ತಿಯೋ, ಅವರ ಸ್ಟೈಲ್ ಮತ್ತು ಫ್ಯಾಷನ್ ಆಯ್ಕೆಗಳು ಕೂಡ ಅಷ್ಟೇ ಪ್ರಭಾವಶಾಲಿಯಾಗಿವೆ ಅಂದರೆ ತಪ್ಪಾಗಲಾರದು.












Click it and Unblock the Notifications