RCB: ಆರ್‌ಸಿಬಿ ನಾಯಕನ ವಿಕೆಟ್ ಪತನಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಅನಿಲ್ ಚೌಧರಿ, ರೊಚ್ಚಿಗೆದ್ದ ವಿರಾಟ್ ಕೊಹ್ಲಿ
RCB IPL 2026: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 30) ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿದತು. ಆದರೆ ಈ ಪಂದ್ಯದಲ್ಲಿ ನಡೆದ ಹೈ-ಡ್ರಾಮಾ ಇದೀಗ ಭಾರಿ ಚರ್ಚಗೆ ಕಾರಣವಾಗಿದೆ. ಜೇಸನ್ ಹೋಲ್ಡರ್ ಹಿಡಿದ ರಜತ್ ಪಾಡಿದಾರ್ ಕ್ಯಾಚ್ ವಿಚಾರದಲ್ಲಿ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಸಿಟ್ಟಿಗೆದ್ದ ಘಟನೆ ನಡೆಯಿತು. ಮತ್ತೊಂದೆಡೆ ಇದೀಗ ಅನಿಲ್ ಚೌಧರಿ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಆರ್‌ಸಿಬಿ 19.2 ತನ್ನೆಲ್ಲಾ ವಿಕೆಟ್ ಕಳೆದುಕೊಂಡು 155 ರನ್‌ಗಳನ್ನು ಪೇರಿಸಿತು. ಈ ಗುರಿಯನ್ನ ಗುಜರಾತ್ 15.5 ಓವರ್‌ಗಳಲ್ಲಿ ಮುಟ್ಟುವ ಮೂಲಕ ಗೆಲುವು ಸಾಧಿಸಿತು. ಆದರೆ ಇದೀಗ ಜೇಸನ್ ಹೋಲ್ಡರ್ ಹಿಡಿದ ರಜತ್ ಪಾಡಿದಾರ್ ಕ್ಯಾಚ್ ಸಾಮಾಜಿಕ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕೋಪಕೊಂಡ ವಿರಾಟ್ ಕೊಹ್ಲಿ
ಗುಜರಾತ್ ಟೈಟಾನ್ಸ್ ತಂಡದ ಜೇಸನ್ ಹೋಲ್ಡರ್ ಅವರು ಪಾಟಿದಾರ್ ಅವರ ಕ್ಯಾಚ್ ಪಡೆದಾಗ ಅದು ನೆಲಕ್ಕೆ ತಗುಲಿದೆ ಎಂದು ಕೊಹ್ಲಿ ಭಾವಿಸಿದ್ದರು. ಆದರೆ ಥರ್ಡ್ ಅಂಪೈರ್ ಇದನ್ನು ಔಟ್ ಎಂದು ತೀರ್ಪು ನೀಡಿದ್ದು ಕೊಹ್ಲಿ ಕೋಪಕ್ಕೆ ಕಾರಣವಾಯಿತು. ಥರ್ಡ್ ಅಂಪೈರ್ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡ ಅವರು, ಮೈದಾನದ ಹೊರಗಿದ್ದ ನಾಲ್ಕನೇ ಅಂಪೈರ್ ಬಳಿ ಹೋಗಿ ಬಹಳ ಆವೇಶದಿಂದ ಪ್ರಶ್ನಿಸುತ್ತಿರುವುದು ಕಂಡುಬಂದಿತು.
ವಿರಾಟ್ ಕೊಹ್ಲಿ ಅವರ ಈ ಆಕ್ರೋಶ ಅಥವಾ ವಾದವು ಅಂಪೈರ್ ತೀರ್ಪನ್ನಾಗಲಿ ಅಥವಾ ಪಂದ್ಯದ ಫಲಿತಾಂಶವನ್ನಾಗಲಿ ಬದಲಿಸಲಿಲ್ಲ. ಇನ್ನು ಈ ಘಟನೆಯ ಬಗ್ಗೆ ಮಾಜಿ ಅಂಪೈರ್ ಅನಿಲ್ ಚೌಧರಿ ಅವರು ನೀಡಿರುವ ಹೇಳಿಕೆಯು ಈಗ ಹೊಸ ಚರ್ಚೆಯನ್ನು ಹುಟ್ಟುಹಾಲಿದೆ. ಪಂದ್ಯದ ಸೋಲಿನ ನಡುವೆಯೂ ವಿರಾಟ್ ಕೊಹ್ಲಿ ಅವರ ಈ ವರ್ತನೆ ಮತ್ತು ಅಂಪೈರಿಂಗ್ ಗುಣಮಟ್ಟದ ಕುರಿತಾದ ಚರ್ಚೆ ಐಪಿಎಲ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಂಚಲನ ಸೃಷ್ಟಿಸಿದ ಅನಿಲ್ ಚೌಧರಿ ಹೇಳಿಕೆ
ಕಳೆದ ವರ್ಷ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಾಜಿ ಅಂಪೈರ್ ಅನಿಲ್ ಚೌಧರಿ ಅವರು, ಇಂತಹ ಕ್ಯಾಚ್‌ಗಳ ಬಗ್ಗೆ ತೀರ್ಪು ಕೊಡುವ ಮೊದಲು ಅಂಪೈರ್‌ಗಳು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ವಿವರಿಸಿದ್ದಾರೆ. ಆ ವಿವಾದಾತ್ಮಕ ಸಂದರ್ಭದಲ್ಲಿ ರಜತ್ ಪಾಟಿದಾರ್ ಅವರಿಗೆ ನಾಟ್ ಔಟ್ ನೀಡಬೇಕಾಗಿತ್ತು. ಕ್ಯಾಚ್ ಪಡೆಯುವಾಗ ಚೆಂಡು ಸಂಪೂರ್ಣವಾಗಿ ನಿಯಂತ್ರಣದಲ್ಲಿರಲಿಲ್ಲ, ನೆಲಕ್ಕೆ ತಗುಲಿತ್ತು ಎಂದು ಹೇಳಿದ್ದಾರೆ. ಈ ಹೇಳಿಕೆಯು ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಟಿವಿ ಅಂಪೈರ್ ವಿರುದ್ಧ ಅಸಮಾಧಾನ
"ಇಲ್ಲಿ ಎರಡು ಪ್ರಮುಖ ಅಂಶಗಳನ್ನು ಗಮನಿಸಬೇಕು. ಮೊದಲನೆಯದು ಕ್ಯಾಚ್ ಮೇಲಿನ ನಿಯಂತ್ರಣ ಮತ್ತು ಎರಡನೆಯದು ದೇಹದ ಚಲನೆ. ಹೋಲ್ಡರ್ ತನ್ನ ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಮೊದಲೇ ಅವರ ಹಸ್ತವು ಕೆಳಮುಖವಾಗಿತ್ತು. ಈ ವೇಳೆ ಚೆಂಡು ನೆಲಕ್ಕೆ ತಗುಲಿತ್ತು. ನನ್ನ ಪ್ರಕಾರ ಅದು ನಾಟ್ ಔಟ್ ಆಗಿತ್ತು. ಟಿವಿ ಅಂಪೈರ್ ಅಲ್ಲಿ ಏನನ್ನು ಗಮನಿಸಿದರೋ ನನಗಂತೂ ತಿಳಿಯುತ್ತಿಲ್ಲ," ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪಂದ್ಯದ 8ನೇ ಓವರ್‌ನಲ್ಲಿ 19 ರನ್ ಗಳಿಸಿದ್ದ ರಜತ್ ಪಾಟಿದಾರ್ ರನ್ ವೇಗ ಹೆಚ್ಚಿಸಲು ಪುಲ್ ಶಾಟ್‌ಗೆ ಪ್ರಯತ್ನಿಸಿದರು. ಈ ವೇಳೆ ಜೇಸನ್ ಹೋಲ್ಡರ್ ಕ್ಯಾಚ್ ಹಿಡಿದರು. ಇದೇ ವೇಳೆ ಕಗಿಸೊ ರಬಾಡ ಕೂಡ ಕ್ಯಾಚ್‌ಗಾಗಿ ಓಡಿ ಬಂದಿದ್ದರಿಂದ ಇಬ್ಬರು ಆಟಗಾರರು ಪರಸ್ಪರ ಡಿಕ್ಕಿಯಾಗುವ ಸಾಧ್ಯತೆಯೂ ಇತ್ತು. ಟಿವಿ ರೀಪ್ಲೇಗಳಲ್ಲಿ ಚೆಂಡು ನೆಲಕ್ಕೆ ತಗುಲಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೂ ಸುದೀರ್ಘ ಪರಿಶೀಲನೆಯ ನಂತರ ಥರ್ಡ್ ಅಂಪೈರ್ ಇದನ್ನು ಕ್ಲೀನ್ ಕ್ಯಾಚ್ ಎಂದು ಪರಿಗಣಿಸಿ ಪಾಟಿದಾರ್ ಅವರಿಗೆ ಔಟ್ ನೀಡಿದರು.
ಪಂದ್ಯದ ಆರಂಭದಲ್ಲಿ ಕೇವಲ 13 ಎಸೆತಗಳಲ್ಲಿ 28 ರನ್ ಚಚ್ಚಿದ್ದ ವಿರಾಟ್ ಕೊಹ್ಲಿ ಈ ತೀರ್ಪಿನಿಂದ ಅಸಮಾಧಾನಗೊಂಡಿದ್ದು ಕಂಡುಬಂದಿತು. ಬೌಂಡರಿ ಲೈನ್ ಬಳಿ ನಿಂತು ನಾಲ್ಕನೇ ಅಂಪೈರ್ ಜೊತೆ ಅವರು ದೀರ್ಘಕಾಲದವರೆಗೆ ಚರ್ಚೆ ನಡೆಸಿದರು. ರೀಪ್ಲೇನಲ್ಲಿ ಸ್ಪಷ್ಟ ಸಾಕ್ಷ್ಯ ಇಲ್ಲದಿದ್ದರೂ ಔಟ್ ನೀಡಿದ್ದರ ಬಗ್ಗೆ ಅವರು ಸ್ಪಷ್ಟನೆ ಕೇಳುತ್ತಿರುವುದು ಅವರ ಹಾವಭಾವದಿಂದ ತಿಳಿಯುತ್ತಿತ್ತು.
ರಜತ್ ಪಾಟಿದಾರ್ ಅವರ ವಿಕೆಟ್ ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಫಾರ್ಮ್‌ನಲ್ಲಿದ್ದ ನಾಯಕನ ನಿರ್ಗಮನದ ಬೆನ್ನಲ್ಲೇ ಆರ್‌ಸಿಬಿ ಮುಂದಿನ 4 ಓವರ್‌ಗಳಲ್ಲಿ ಇನ್ನೂ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅರ್ಷದ್ ಖಾನ್ ಅವರ ಉತ್ತಮ ಬೌಲಿಂಗ್ ದಾಳಿ ಮೂಲಕ 3 ವಿಕೆಟ್ ಕಬಳಿಸಿದರು. ಆರ್‌ಸಿಬಿ ತಂಡ ಅಂತಿಮವಾಗಿ 19.2 ಓವರ್‌ಗಳಲ್ಲಿ ಕೇವಲ 155 ರನ್‌ಗಳಿಗೆ ಆಲೌಟ್ ಆಯಿತು. ಒಟ್ಟಿನಲ್ಲಿ ರಜತ್ ಪಾಟಿದಾರ್ ಅವರ ಕ್ಯಾಚ್ ಔಟ್ ತೀರ್ಪು ಇದೀಗ ಭಾರಿ ಚರ್ಚೆ ಹುಟ್ಟುಹಾಕಿರುವುದು ನಿಜ.












Click it and Unblock the Notifications