ಐಪಿಎಲ್ ಕ್ರಿಕೆಟ್ ಅಲ್ಲ, ಅದೊಂದು ದೊಡ್ಡ ವ್ಯವಹಾರ: ಎಸ್‌ಆರ್‌ಎಚ್ ಕೋಚ್ ಮುತ್ತಯ್ಯ ಮುರಳೀಧರನ್ ಹೀಗೆ ಹೇಳಿದ್ಯಾಕೆ?
Muttiah Muralitharan: ಮೊದಲೆಲ್ಲ ಐಪಿಎಲ್‌ನಲ್ಲಿ ರನ್‌ಗಳು 200 ಗಡಿ ದಾಟಿದರೆ ಅದೇ ಬೃಹತ್ ಮೊತ್ತವಾಗಿರುತ್ತಿತ್ತು. ಈ ಗುರಿ ಬೆನ್ನಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಈಗ ಇದು ಬದಲಾಗಿದ್ದು, 260 ರನ್‌ಗಳ ಬೆಟ್ಟದಂತಹ ಗುರಿಯನ್ನು ಸಹ ಬಿಡುತ್ತಿಲ್ಲ, ಅಷ್ಟರ ಮಟ್ಟಿಗೆ ಯುವ ಆಟಗಾರರ ಆರ್ಭಟ ಜೋರಾಗಿದೆ. ಈ ನಡುವೆಯೇ ಮುತ್ತಯ್ಯ ಮುರಳೀಧರನ್ ಐಪಿಎಲ್ ಬಗ್ಗೆ ಸ್ಫೋಟಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.
ಐಪಿಎಲ್ 2026ರಲ್ಲಿ ಬೃಹತ್ ಮೊತ್ತದ ಗುರಿಗಳನ್ನು ಅತ್ಯಂತ ಸುಲಭವಾಗಿ ಬೆನ್ನಟ್ಟಲಾಗುತ್ತಿದೆ. ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 265 ರನ್‌ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಏಪ್ರಿಲ್ 29ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್‌ಆರ್‌ಎಚ್ 244 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು. ಈ ಪಂದ್ಯದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ಅವರು ಮಾತನಾಡಿ, "ಐಪಿಎಲ್ ಕೇವಲ ಒಂದು ಬಿಸಿನೆಸ್ ಎಂದು ಕರೆದು ಗಮನ ಸೆಳೆದಿದ್ದಾರೆ.

ಬಿಗ್ ಸ್ಕೋರ್ ಬಗ್ಗೆ ಮುರಳೀಧರನ್ ಮಹತ್ವದ ಮಾಹಿತಿ
"ಐಪಿಎಲ್‌ನಲ್ಲಿ ಮನರಂಜನೆ ಇರುತ್ತದೆ ಮತ್ತು ಇದನ್ನು ಕ್ರಿಕೆಟ್‌ನ ಬೆಳವಣಿಗೆಗಿಂತ ಹೆಚ್ಚಾಗಿ ವ್ಯವಹಾರ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಐಪಿಎಲ್‌ನಲ್ಲಿ ಇಷ್ಟೊಂದು ದೊಡ್ಡ ಮೊತ್ತದ ರನ್‌ಗಳು ದಾಖಲಾಗಲು ಮತ್ತು ಅಷ್ಟೇ ಸುಲಭವಾಗಿ ಬೆನ್ನಟ್ಟಲು ಪ್ರಮುಖ ಕಾರಣವೇ ಇಂಪ್ಯಾಕ್ಟ್ ಪ್ಲೇಯರ್ ನಿಯಮ," ಎಂದು ಮತ್ತಯ್ಯ ಮುರಳೀಧರನ್ ಅವರು ಹೇಳಿದ್ದಾರೆ. "ಈಗಿನ ಪ್ರೇಕ್ಷಕರು ಕೇವಲ ಮನರಂಜನೆಯನ್ನು ಬಯಸುತ್ತಾರೆ. ಒಂದು ವೇಳೆ ನಾವು ಬೌಲರ್‌ಗಳಿಗೆ ಪೂರಕವಾದ ಪಿಚ್ ಸಿದ್ಧಪಡಿಸಿದರೆ, ಪ್ರೇಕ್ಷಕರು ಅಂತಹ ಪಂದ್ಯಗಳನ್ನು ಬೋರಿಂಗ್ ಎಂದು ಕರೆಯುತ್ತಾರೆ," ಎಂದು ಹೇಳಿದ್ದಾರೆ.
ಬೃಹತ್ ಮೊತ್ತ ದಾಖಲಾಗಲು ಪ್ರಮುಖ ಕಾರಣವೇನು?
ಮುಂಬೈ ಮತ್ತು ಹೈದರಾಬಾದ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುರಳೀಧರನ್ ಅವರು, "ನನ್ನ ಪ್ರಕಾರ ಇಷ್ಟೊಂದು ದೊಡ್ಡ ಮೊತ್ತದ ರನ್‌ಗಳು ದಾಖಲಾಗಲು ಇಲ್ಲಿನ ಪಿಚ್ ಕಾರಣ. ಮೈದಾನದ ಬೌಂಡರಿಗಳ ಗಾತ್ರ ಕೂಡ ತುಂಬಾ ಚಿಕ್ಕದಾಗಿದೆ. ಇದರಿಂದಾಗಿ ಬೌಲರ್‌ಗಳಿಗೆ ಬೌಲಿಂಗ್ ಮಾಡುವುದು ಬಹಳ ಕಷ್ಟವಾಗುತ್ತಿದೆ. ನಾವು ಬೌಲರ್‌ಗಳಿಗೆ ಪೂರಕವಾದ ಉತ್ತಮ ಪಿಚ್‌ಗಳನ್ನು ನೀಡಬಹುದು. ಆದರೆ ಆಗ ಪ್ರೇಕ್ಷಕರು ಇದು ಬೋರಿಂಗ್ ಮ್ಯಾಚ್ ಎಂದು ಹೇಳಲು ಶುರು ಮಾಡುತ್ತಾರೆ. ಅಲ್ಲದೆ ಪಂದ್ಯವನ್ನು ಯಾರೂ ನೋಡುವುದಕ್ಕೆ ಇಷ್ಟಪಡುವಿಲ್ಲ," ಎಂದು ಹೇಳಿದ್ದಾರೆ.
ಬೌಲರ್‌ಗಳಿಗೆ ಹಿನ್ನಡೆ ಎಂದ ಮುರಳೀಧರನ್
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದರಿಂದ ಬ್ಯಾಟರ್‌ಗಳು ಈಗ ಆರಂಭದಲ್ಲಿ ಎಚ್ಚರಿಕೆಯಿಂದ ಆಡುವ ಬದಲಿಗೆ ಹೆಚ್ಚು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ನಿಯಮವು ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ಹೆಚ್ಚಿನ ಬಲವನ್ನು ನೀಡಿದೆ. ಒಂದು ವೇಳೆ ತಂಡದ ಆರಂಭ ಕಳಪೆಯಾಗಿದ್ದರೂ ಸಹ, ಬ್ಯಾಟರ್‌ಗಳು ಸ್ಫೋಟಕ ಬ್ಯಾಟಿಂಗ್ ಮುಂದುವರಿಸುತ್ತಾರೆ. ಏಕೆಂದರೆ ಇನ್ನೊಬ್ಬ ಹೆಚ್ಚುವರಿ ಬ್ಯಾಟರ್ ಲಭ್ಯವಿರುತ್ತಾರೆ ಎಂಬ ಧೈರ್ಯ ಅವರಲ್ಲಿ ಇರುತ್ತದೆ. ಇದು ಬೌಲರ್‌ಗಳಿಗೆ ಮತ್ತಷ್ಟು ಹಿನ್ನಡೆಯಾಗಿ ಪರಿಣಮಿಸಿದೆ," ಎಂದು ಮತ್ತಯ್ಯ ಮುರಳೀಧರನ್ ಅವರು ಹೇಳಿದರು.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮಾಡಲು ಕಾರಣವೇನು?
ಅದರಲ್ಲೂ "ಈಗನ ಕಾಲದಲ್ಲಿ ಪ್ರೇಕ್ಷಕರು ಮನರಂಜನೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡಲು ಬಯಸುತ್ತಾರೆ. ಇದೇ ಕಾರಣಕ್ಕಾಗಿ ಈ ಟೂರ್ನಮೆಂಟ್ ಅನ್ನು ಈ ರೀತಿಯಾಗಿ ವಿನ್ಯಾಸಗೊಳಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ಹೆಚ್ಚುವರಿ ಬ್ಯಾಟರ್‌ಗಳಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತಿದೆ ಮತ್ತು ತಂಡಗಳು ಕಡಿಮೆ ಮೊತ್ತಕ್ಕೆ ಔಟ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ಐಪಿಎಲ್ ಕ್ರಿಕೆಟ್ ಅಲ್ಲ, ಬದಲಿಗೆ ಈ ಕಾಲದ ಮನರಂಜನೆ ಹಾಗೂ ಅತಿದೊಡ್ಡ ಬಿಸಿನೆಸ್," ಎಂದು ಕರೆಯಬಹುದು ಎಂದು ಹೇಳಿದ್ದಾರೆ.












Click it and Unblock the Notifications