CSK Vs MI IPL 2026: ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇಆಫ್ ರೇಸ್‌ನಿಂದ ಹೊರತಳ್ಳಿದ ಸಿಎಸ್‌ಕೆ ₹14 ಕೋಟಿ ಯುವ ಆಟಗಾರ
CSK Vs MI IPL 2026: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ (ಮೇ 2) ನಡೆದ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 160 ರನ್‌ಗಳ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆಯೇ ತಲುಪಿ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಡೆಲ್ಲಿಯನ್ನು ಕೆಳಗಿಟ್ಟು ಆರನೇ ಸ್ಥಾನಕ್ಕೇರಿದೆ. ಈ ಗೆಲುವಿಗೆ ₹14 ಕೋಟಿ ಯುವ ಆಟಗಾರ ಕಾರ್ತಿಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕ ಪ್ರಮುಖ ಪಾತ್ರವಹಿಸಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳು ಮಧ್ಯದ ಮತ್ತು ಡೆತ್ ಓವರ್‌ಗಳಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಮುಂಬೈ ತಂಡವನ್ನು 20 ಓವರ್‌ಗಳಲ್ಲಿ 159/7 ರನ್‌ಗಳಿಗೆ ನಿಯಂತ್ರಿಸಿದರು.

ಸಿಎಸ್‌ಕೆ ಬೌಲಿಂಗ್ ದಾಳಿಗೆ ತತ್ತರಿಸಿ ಎಂಐ
ಸಿಎಸ್‌ಕೆ ಪರ ಅಂಶುಲ್ ಕಾಂಬೋಜ್ 3 ವಿಕೆಟ್ ಪಡೆದರೆ, ನೂರ್ ಅಹ್ಮದ್ 2 ವಿಕೆಟ್ ಕಬಳಿಸಿ ಮಿಂಚಿದರು. ಮತ್ತೊಂದೆಡೆ ಚೆನ್ನೈ ಪರ ಪದಾರ್ಪಣೆ ಮಾಡಿದ ಯುವ ಆಟಗಾರ ರಾಮಕೃಷ್ಣ ಘೋಷ್ ಅವರು ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಕಿತ್ತ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ಜೇಮಿ ಓವರ್‌ಟನ್ ಒಂದು ವಿಕೆಟ್ ಪಡೆದರು.
ಸಿಎಸ್‌ಕೆ ಪರ ಮಿಂಚಿದ ಗಾಯಕ್ವಾಡ್, ಕಾರ್ತಿಕ್
ಸಿಎಸ್‌ಕೆ ಪರ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಕಾರ್ತಿಕ್ ಶರ್ಮಾ ಇಬ್ಬರೂ ಪಂದ್ಯದ ಕೊನೆವರೆಗೂ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭರ್ಜರಿ ಅರ್ಧ ಶತಕಗಳನ್ನು ಸಿಡಿಸಿ ಮುಂಬೈ ಬೌಲರ್‌ಗಳ ಬೆವರಿಳಿಸಿದರು. ಗಾಯಕ್ವಾಡ್ 48 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಅಂಜೇಯ 67 ರನ್ ಸಿಡಿಸಿದರೆ, ಮತ್ತೊಂದೆಡೆ 14.20 ಕೋಟಿ ರೂಪಾಯಿಯ ದುಬಾರಿ ಆಟಗಾರ ಯುವ ಪ್ರತಿಭೆ ಕಾರ್ತಿಕ್ 40 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸ್ ಸಹಿತ ಅಜೇಯ 54 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಮುಂಬೈ
ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಆಸೆ ಜೀವಂತವಾಗಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಹಂತಕ್ಕೇರುವ ಅವಕಾಶಗಳು ಬಹುತೇಕ ಅಂತ್ಯಗೊಂಡಿವೆ. ಸಿಎಸ್‌ಕೆ ಇದೀಗ ಅಂಕಪಟ್ಟಿಯಲ್ಲೆ ಆರನೇ ಸ್ಥಾನಕ್ಕೇರಿದ್ದು, ಇದೀಗ ನಾಲ್ಕನೇ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಇದು ಸಾಧ್ಯವಾಗಲಿದೆ.
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೈಫಲ್ಯ
ಈ ನಿರ್ಣಾಯಕ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್‌ಗಳಿಗೆ ಕಟ್ಟಿಹಾಕಿತು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವೈಯಕ್ತಿಕ ಫಾರ್ಮ್ ಮತ್ತು ತಂಡದ ಬ್ಯಾಟಿಂಗ್ ವೈಫಲ್ಯ ಎರಡೂ ಕೂಡ ಇಂದೂ ಮುಂದುವರಿದವು.
ನಮನ್ ಧೀರ್ 57(37), ರಯಾನ್ ರಿಕೆಲ್ಟನ್ 37(24), ಸೂರ್ಯಕುಮಾರ್ ಯಾದವ್ 21(12), ನಾಯಕ ಹಾರ್ದಿಕ್ ಪಾಂಡ್ಯ 18(23) ರನ್ ಸಿಡಿಸಿದ್ದು ಬಿಟ್ಟರೆ, ಉಳಿದವರು ಒಂದಂಕಿಯನ್ನು ಕೂಡ ದಾಟಲಿಲ್ಲ. ಇದೇ ಎಂಐ ಕಡಿಮೆ ಸ್ಕೋರ್ ಮಾಡಲು ಪ್ರಮುಖ ಕಾರಣವಾಯಿತು. ಮುಂಬೈ ಇಂಡಿಯನ್ಸ್ ಪರ ಗಮನ ಸೆಳೆದಿದ್ದು ಮಾತ್ರ ನಮನ್ ಧೀರ್ ಬಾರಿಸಿದ ಅರ್ಧಶತಕ. ಒಟ್ಟಿನಲ್ಲಿ ಎಂಐ ಸೋಲಿಗೆ ಪ್ರಮುಖ ಕಾರಣವೇ ಬ್ಯಾಟಿಂಗ್ ವೈಫಲ್ಯ ಅಂದ್ರೆ ತಪ್ಪಾಗಲಾರದು.












Click it and Unblock the Notifications