ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಉಗ್ರ ಶಾರೀಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್‌ನನ್ನು ದೋಷಿ ಎಂದು ಘೋಷಿಸಿರುವ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು, ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹94,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಆತಂಕಕಾರಿ ಘಟನೆ ನಡೆದಿತ್ತು. ಅಂದು ಸಂಜೆ ಸುಮಾರು 4:40ಕ್ಕೆ ಶಾರೀಕ್ ತನ್ನ ಬಳಿಯಿದ್ದ ಐಇಡಿ ಅಳವಡಿಸಿದ ಕುಕ್ಕರ್ ಬಾಂಬ್ ಅನ್ನು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದಾಗ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು. ಈ ರಭಸಕ್ಕೆ ಆರೋಪಿ ಶಾರೀಕ್ ಮತ್ತು ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಬಾಂಬ್ ಜನನಿಬಿಡ ಪ್ರದೇಶಕ್ಕೆ ತಲುಪುವ ಮೊದಲೇ ಸ್ಫೋಟಿಸಿದ್ದರಿಂದ ಭಾರಿ ಪ್ರಮಾಣದ ಪ್ರಾಣಾಪಾಯ ತಪ್ಪಿತ್ತು.

ತಪ್ಪೊಪ್ಪಿಕೊಂಡಿದ್ದ ಆರೋಪಿ
ದೇಶದ ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. ಪ್ರಕರಣದ ಗಾಂಭೀರ್ಯತೆಯನ್ನು ಅರಿತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ನಡುವೆ ಶಾರೀಕ್ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿಯನ್ನು ಸಲ್ಲಿಸಿದ್ದನು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು, ಇದೀಗ ಅಂತಿಮ ತೀರ್ಪು ಪ್ರಕಟಿಸಿದೆ.
ನ್ಯಾಯಾಲಯವು ಶಾರೀಕ್ ವಿರುದ್ಧ ಹಲವು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಇದರಲ್ಲಿ ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಸಂಚು (IPC 121A), ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಂಗ್ರಹಣೆ (IPC 122), ಮಾರಕ ಆಯುಧಗಳಿಂದ ಗಂಭೀರ ಗಾಯಗೊಳಿಸುವುದು (IPC 326) ಹಾಗೂ ಭಯೋತ್ಪಾದನಾ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಶಿಕ್ಷೆಗಳನ್ನು ವಿಧಿಸಲಾಗಿದೆ.
ಈ ತೀರ್ಪು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುವವರಿಗೆ ಕಠಿಣ ಸಂದೇಶ ರವಾನಿಸಿದೆ. ಎನ್‌ಐಎ ನಡೆಸಿದ ಸುದೀರ್ಘ ವಿಚಾರಣೆ ಮತ್ತು ಸಂಗ್ರಹಿಸಿದ ಪೂರಕ ಸಾಕ್ಷ್ಯಗಳು ಆರೋಪಿಗೆ ಶಿಕ್ಷೆ ಸಿಗುವಂತರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸದ್ಯ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ನೀಡಿದ ಈ ತೀರ್ಪು ಮಂಗಳೂರು ಸೇರಿದಂತೆ ಇಡೀ ರಾಜ್ಯದ ಜನರ ಗಮನ ಸೆಳೆದಿದೆ.
ಕೋರ್ಟ್ ನಿರ್ಧಾರ ಸ್ವಾಗತಾರ್ಹ: ಸಿ.ಟಿ.ರವಿ
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಯೋಜಿಸಿದ್ದ ಭಯೋತ್ಪಾದಕ ಮೊಹಮ್ಮದ್ ಶಾರಿಕ್‌ಗೆ ಎನ್ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಬಾಂಬ್ ಸ್ಫೋಟಕ್ಕೆ ಯೋಜನೆ ರೂಪಿಸಿ, ಅಮಾಯಕರ ಪ್ರಾಣ ಹರಣಕ್ಕೆ ಸಿದ್ಧನಾಗಿದ್ದ ಭಯೋತ್ಪಾದಕನಿಗೆ ಹತ್ತು ವರ್ಷಗಳ ಶಿಕ್ಷೆ ಸಾಲದು. ಇನ್ನು ಮುಂದೆ ಯಾವ ಉಗ್ರನಿಗೂ ಇಂತಹ ದುಷ್ಕೃತ್ಯ ಯೋಜಿಸಲು ಧೈರ್ಯ ಬರದಂತಹ ಕಠಿಣಾತಿ ಕಠಿಣ ಶಿಕ್ಷೆಯನ್ನು ಆತನಿಗೆ ನೀಡಬೇಕಿತ್ತು. ಇಷ್ಟಾದರೂ ಉಗ್ರರನ್ನು, ಉಗ್ರರ ಕುರಿತು ಸಹಾನುಭೂತಿ ಹೊಂದಿರುವವರನ್ನು ತಮ್ಮ 'ಬ್ರದರ್ಸ್' ಎನ್ನುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇಂತಹ ಕೃತ್ಯಗಳು ಮರಳಿ ನಡೆಯದ ರೀತಿಯಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications