ಬೆಂಗಳೂರು, ಸೆಪ್ಟೆಂಬರ್ 6: ಕೊರೊನಾ ಎರಡನೇ ಅಲೆಗೆ ಹೋಲಿಸಿದರೆ ಈ ಬಾರಿ, ಅಂದರೆ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಏಳು ಪಟ್ಟು ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಬೆಂಗಳೂರಿನ ಖ್ಯಾತ ವೈದ್ಯರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಕೊರೊನಾ ಮೂರನೇ ಅಲೆಯ ಪರಿಣಾಮವನ್ನು ತಗ್ಗಿಸಬಹುದು. ಕೊರೊನಾ ನಿಯಮಗಳನ್ನು ಕಠಿಣವಾಗಿ ಪಾಲನೆ ಮಾಡಿದರೆ ಮೂರನೇ ಅಲೆ ಪರಿಣಾಮವನ್ನು ತಗ್ಗಿಸಲು ಸಾಧ್ಯ ಎಂದು ಹೇಳಿದ್ದಾರೆ.
"ಡೆಕ್ಕನ್ ಹೆರಾಲ್ಡ್" ಪತ್ರಿಕೆಯೊಂದಿಗೆ ಈ ಕುರಿತು ಮಾತನಾಡಿರುವ ಪ್ರೊಫೆಸರ್ ಡಾ. ಗಿರಿಧರ್ ಬಾಬು, ಕೊರೊನಾ ಮೂರನೇ ಅಲೆ ಸಂಬಂಧ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಏಳು ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಈ ಅಧ್ಯಯನ ಜನರನ್ನು ಭೀತಿಗೊಳಿಸುವ ಉದ್ದೇಶ ಹೊಂದಿಲ್ಲ. ಆದರೆ ಜಾಗ್ರತೆಯಿಂದಿರುವಂತೆ ಸೂಚಿಸುತ್ತದೆ. ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೂ ಹೆಚ್ಚಿನ ಮಕ್ಕಳು ಆಸ್ಪತ್ರೆ ಸೇರುವ ಪ್ರಮೇಯ ಬರುವುದಿಲ್ಲ ಎಂಬ ಸಮಾಧಾನಕರ ಸಂಗತಿಯನ್ನು ತಿಳಿಸಿದ್ದಾರೆ.
ಸೋಂಕಿತ ಮಕ್ಕಳಿಗಾಗಿಯೇ ಚಿಕಿತ್ಸೆಗೆ ವಿಶೇಷ ಸೌಲಭ್ಯಗಳೊಂದಿಗೆ ಸಿದ್ಧವಾಗಿರಬೇಕು. ಐಸಿಯು ಬೆಡ್‌ಗಳನ್ನು ಹಾಗೂ ಸೋಂಕಿನಿಂದ ಉಂಟಾಗುವ ಎಂಐಎಸ್‌ಸಿ ಸಮಸ್ಯೆಗೆ ಸೂಕ್ತ ಚಿಕಿತ್ಸೆಯನ್ನು ಸರ್ಕಾರ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಭಾನುವಾರವಷ್ಟೇ ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಈ ಕುರಿತು ಮಾತನಾಡಿದ್ದರು. ತಜ್ಞರ ಸಲಹೆಯಂತೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
Advertisement
ತಜ್ಞರು ವರದಿಯನ್ನು ನೀಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ತಾಜ್ಯದಲ್ಲಿ ಸೋಂಕು ನಿರ್ವಹಣೆ ಸಂಬಂಧ ಸೂಕ್ತ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಎಲ್ಲಾ ಆರೋಗ್ಯ ತಜ್ಞರು ಹಾಗೂ ಖಾಸಗಿ ನರ್ಸಿಂಗ್ ಹೋಂಗಳು ಸಂಭಾವ್ಯ ಕೊರೊನಾ ಮೂರನೇ ಅಲೆ ನಿರ್ವಹಣೆ ಸಂಬಂಧ ಸಮಿತಿ ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
'ನಾವು ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವುದನ್ನು ತಡೆಯಲೇಬೇಕಿದೆ' ಎಂದು ಕರೆ ನೀಡಿದರು.
ಇದೇ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕದಲ್ಲಿ ಸುಮಾರು 800 ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಮಾಹಿತಿ ನೀಡಿದರು. ಹದಿಮೂರು ಕಾಲೇಜುಗಳಲ್ಲಿ 17 ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರಿನಲ್ಲಿ ಕಂಟೇನ್ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚಳ: ಹಬ್ಬಗಳಿಗೆ ಬೆಂಗಳೂರು ಸಜ್ಜಾಗುತ್ತಿದ್ದಂತೆ, ಇಳಿಕೆ ಕಂಡಿದ್ದ ಮೈಕ್ರೋ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯೂ ಮತ್ತೊಮ್ಮೆ ಏರಿಕೆಯಾಗಲು ಆರಂಭಿಸಿದೆ. ಭಾನುವಾರದರೆಗೆ ಬಿಬಿಎಂಪಿ ನಗರದಲ್ಲಿ ಸುಮಾರು ನೂರು ಮೈಕ್ರೋ ಕಂಟೇನ್ಮೆಂಟ್‌ಗಳನ್ನು ಘೋಷಣೆ ಮಾಡಿದೆ. ಜನರು ಕೊರೊನಾ ನಿಯಮಗಳ ಪಾಲನೆಯನ್ನು ಮರೆಯುತ್ತಿದ್ದು, ಮತ್ತೆ ಪ್ರಕರಣಗಳ ಸಂಖ್ಯೆ ಏರುವ ಸೂಚನೆ ತೋರುತ್ತಿದೆ ಎಂದು ಬಿಬಿಎಂಪಿ ಆತಂಕ ವ್ಯಕ್ತಪಡಿಸಿದೆ. ಕ್ರಮೇಣ ಮಹದೇವುರ ಹಾಗೂ ಪೂರ್ವ ವಲಯದಲ್ಲಿ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ಈ ವಲಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತರರಾಜ್ಯ ಪ್ರಯಾಣ ಮಹದೇವಪುರದಲ್ಲಿ ಹೊಸ ಕೊರೊನಾ ಪ್ರಕರಣಗಳ ಪತ್ತೆಗೆ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದೆ.
ಭಾರತೀಯ ಸೈನಿಕರು ಉಪಯೋಗಿಸಿದ ಯೂನಿಫಾರ್ಮ್ ಹೇಗೆ ಮರುಬಳಕೆಯಾಗುತ್ತೆ? | Oneindia Kannada