ಜನಗಣತಿ 2027 ಕಾರ್ಯಕ್ಕೆ ಸ್ವಯಂಸೇವಕರ ಆಹ್ವಾನ: ಏ.24ಕ್ಕೆ ನೇರ ಸಂದರ್ಶನ, ಗೌರವ ಧನ ಸೌಲಭ್ಯ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ಪೂರ್ವ ನಗರ ಪಾಲಿಕೆ ಅಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ-2027 (National Census 2027) ಕಾರ್ಯ ಯಾರು ಬೇಕಾದರೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ. ಗಣತಿ ಮಾಡಲು ಯಾರೆಲ್ಲ ಆಸಕ್ತರಿದ್ದೀತಿ ನೀವು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬಹುದಾಗಿದೆ. ಭಾಗವಹಿಸುವವರಿಗೆ ಗೌರವ ಧನ, ಇನ್ನಿತರ ಸೌಲಭ್ಯ ಸಿಗಲಿದೆ. ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲನೇ ಹಂತದ ಗಣತಿ ನಡೆಯುತ್ತಿದೆ. ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಹಾಗೂ ಫೆಬ್ರವರಿ 2027ರಲ್ಲಿನ 2ನೇ ಹಂತದ ಜನಗಣತಿ ಕಾರ್ಯ ನಡೆಸುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿಯಾದ ಡಿ.ಎಸ್.ರಮೇಶ್ ತಿಳಿಸಿದ್ದಾರೆ.

ರಾಷ್ಟ್ರೀಯ ಮಹತ್ವದ ಈ ಕಾರ್ಯ ನಿರ್ವಹಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸುವ ಸಲುವಾಗಿ ಗಣತಿ ಕಾರ್ಯ ನಿರ್ವಹಿಸಲು ಆಸಕ್ತ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಪುರುಷರು ಹಾಗೂ ಮಹಿಳೆಯರು ನೇರ ಸಂದರ್ಶನಕ್ಕೆ ಹಾಜರಾಗಬಹುದೆಂದು ಆಯುಕ್ತರು ವಿನಂತಿಸಿಕೊಂಡಿದ್ದಾರೆ. ಆಯ್ಕೆಗೆ ಪರಿಗಣಿಸಲಿರುವ ಗಣತಿದಾರರ ಸಂಖ್ಯೆ, ವಿದ್ಯಾರ್ಹತೆ, ಗೌರವ ಧನ, ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಂದರ್ಶನ/ಗಣತಿಯಲ್ಲಿ ಪಾಲ್ಗೊಳ್ಳುವವರೇ ಗಮನಿಸಿ
* ವಿದ್ಯಾರ್ಹತೆ: ನೀವೆನಾದರೂ ಸ್ವಯಂ ಪ್ರೇರಿತವಾಗಿ ಈ ಗಣತಿಯಲ್ಲಿ ಪಾಲ್ಗೊಳ್ಳಬೇಕಾದರೆ ದ್ವಿತೀಯ ಪಿ.ಯು.ಸಿ. ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು.
* ಆಂಡ್ರಾಯ್ಡ್ 12.0 ತಂತ್ರಾಂಶದೊಂದಿಗೆ 4 ಜಿಬಿ ರ್ಯಾಮ್ ಸಾಮರ್ಥ್ಯದ ಸ್ವಂತ ಮೊಬೈಲ್ ಹೊಂದಿರಬೇಕು.
* ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮಹದೇವಪುರ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೆ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
* ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು 15-05-2026 ವರೆಗೆ ನಡೆಯಲಿದ್ದು, ಅಲ್ಲಿಯವರೆಗೆ ರಜಾ ದಿನವೂ ಸೇರಿದಂತೆ ನಿರಂತರವಾಗಿ ಕಾರ್ಯ ನಿರ್ವಹಿಸಲು ಬದ್ಧರಾಗಿರಬೇಕು.
* ಭಾರತದ ಜನಗಣತಿ-2027ರ ಜನಗಣತಿ ಮಾರ್ಗಸೂಚಿ ಅನ್ವಯ 15-05-2026 ವರೆಗಿನ ಮೊದಲ ಹಂತದ ಗಣತಿ ಕಾರ್ಯಕ್ಕೆ ರೂ.9,000/- (ರೂ. ಒಂಭತ್ತು ಸಾವಿರ ಮಾತ್ರ) ಗೌರವಧನ ನೀಡಲಾಗುವುದು (ಕನಿಷ್ಠ 150-200 ಮನೆಗಳಿಗೆ)
* ಭಾರತದ ಜನಗಣತಿ-2027ರ 2ನೇ ಹಂತದ ಕಾರ್ಯವು ಫೆಬ್ರವರಿ-2027 ರ ಮಾಹೆಯಲ್ಲಿ ನಡೆಯಲಿದ್ದು, ಸದರಿ ಕಾರ್ಯಕ್ಕೆ ರೂ.16,000/- (ರೂ. ಹದಿನಾರು ಸಾವಿರ ಮಾತ್ರ) ಗೌರವಧನ ನೀಡಲಾಗುವುದು.(150-200 ಮನೆಗಳಿಗೆ ಅಥವಾ 750 ರಿಂದ 800 ಜನಸಂಖ್ಯೆಗೆ)
* ಈ ಆಯ್ಕೆಯು ಭಾರತದ ಜನಗಣತಿ-2027ರ ಗಣತಿ ಕಾರ್ಯ ನಿರ್ವಹಣೆಗೆ ಮಾತ್ರ ಸೀಮಿತವಾಗಿರುತ್ತದೆ.
* ಆಯ್ಕೆಯಾದವರಿಗೆ ಕಾರ್ಯ ನಿರ್ವಹಣೆ ಅನುಕೂಲವಾಗಲು ಜನಗಣತಿ ಮೊಬೈಲ್ ಅಪ್ಲಿಕೇಷನ್ ನಲ್ಲಿ ಮಾಹಿತಿ ಪಡೆಯುವ ಹಾಗೂ ಗಣತಿ ಕಾರ್ಯನಿರ್ವಹಣೆ ಬಗ್ಗೆ ಮಾಸ್ಟರ್ ಟೈನರ್ ಗಳಿಂದ ಅಗತ್ಯ ತರಬೇತಿ ನೀಡಲಾಗುವುದು.
* ಆಯ್ಕೆ ಮಾಡಿಕೊಳ್ಳುವ ಗಣತಿದಾರರ ಸಂಖ್ಯೆ: 1,000 ಗಣತಿದಾರರು.
* ನೇಮಕಾತಿ ಮಾಡಿಕೊಳ್ಳುವುದು ಪೂರ್ವ ನಗರ ಪಾಲಿಕೆ ಮಾನ್ಯ ಆಯುಕ್ತರ ವಿವೇಚನೆಗೆ ಒಳಪಟ್ಟಿರುತ್ತದೆ.
ನೇರ ಸಂದರ್ಶನ ದಿನಾಂಕ, ಸಮಯ ಮತ್ತು ಸ್ಥಳ
* ಸಂದರ್ಶನ ದಿನಾಂಕ: 24-04-2026 ರಂದು (ಶುಕ್ರವಾರ)
* ಸಮಯ: ಬೆಳಗ್ಗೆ 10.00 ಗಂಟೆ
* ಸ್ಥಳ: ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಹೊರವರ್ತುಲ ರಸ್ತೆ, ಮಾರತಹಳ್ಳಿ ಹತ್ತಿರ, ಕಾಡುಬೀಸನಹಳ್ಳಿ ಬೆಂಗಳೂರು-560103
* ಮ್ಯಾಪ್ ಲೊಕೇಶನ್ ಲಿಂಕ್: https://maps.app.goo.gl/qEUBkfYeWu7iAFaF6?g_st=ac
ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಲು ಜನಗಣತಿ ಅಂಕಿಅಂಶಗಳು ಅತಿಮುಖ್ಯವಾದದ್ದಾಗಿದ್ದು, ಆಸಕ್ತರಾದರು ರಾಷ್ಟ್ರೀಯ ಜನಗಣತಿ 2027ರ ಗಣತಿ ಕಾರ್ಯದಲ್ಲಿ ಗಣತಿದಾರರಾಗಿ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರ ಸೇವೆಗೆ ಕೈ ಜೋಡಿಸುವಂತೆ ಆಯುಕ್ತರು ಪ್ರಕಟಣೆ ಮೂಲಕ ಕರೆ ನೀಡಿದರು.














Click it and Unblock the Notifications