Bengaluru Weather: ಬೆಂಗಳೂರಿನಲ್ಲಿ ಈ ವಾರವಿಡೀ ಸುಡುವ ಬಿಸಿಲು; ತಾಪಮಾನ ಸಾಮಾನ್ಯಕ್ಕಿಂತ 3 ಡಿಗ್ರಿ ಏರಿಕೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದಾರೆ. ಮಂಗಳವಾರ ನಗರದಲ್ಲಿ ಗರಿಷ್ಠ ತಾಪಮಾನ 36.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2.3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಬಿಸಿಲಿನಿಂದ ತಕ್ಷಣಕ್ಕೆ ಮುಕ್ತಿ ಸಿಗುವ ಸಾಧ್ಯತೆ ಕಡಿಮೆ ಇದ್ದು, ಮಳೆಯ ನಿರೀಕ್ಷೆಯಲ್ಲಿರುವ ಜನತೆ ಇನ್ನೂ ಒಂದು ವಾರ ಕಾಯಬೇಕಿದೆ.
ತಾಪಮಾನದಲ್ಲಿ ಏರಿಕೆ
ನಗರದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 36.8 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದ ಕೇಂದ್ರದಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ಋತುವಿನ ಸರಾಸರಿಗಿಂತ ಸುಮಾರು 2ರಿಂದ 3 ಡಿಗ್ರಿಗಳಷ್ಟು ಅಧಿಕವಾಗಿದೆ. ಮುಂಬರುವ ದಿನಗಳಲ್ಲಿ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬಿಸಿಗಾಳಿಯ ಪ್ರಭಾವ
ಕೇವಲ ಬೆಂಗಳೂರು ಮಾತ್ರವಲ್ಲದೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲು ಅಟ್ಟಹಾಸ ಮೆರೆಯುತ್ತಿದೆ. ಕಲಬುರಗಿಯಲ್ಲಿ ರಾಜ್ಯದ ಅತ್ಯಂತ ಗರಿಷ್ಠ ತಾಪಮಾನ 41.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬೀದರ್ ಮತ್ತು ರಾಯಚೂರಿನಲ್ಲಿಯೂ ತಾಪಮಾನ 41 ಡಿಗ್ರಿ ದಾಟಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮುಂದಿನ ಐದು ದಿನಗಳ ಕಾಲ ಗಾಳಿಯಲ್ಲಿ ತೇವಾಂಶ ಹೆಚ್ಚಿರಲಿದ್ದು, ಬಿಸಿಲಿನ ವಾತಾವರಣ ಇರಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಮಧ್ಯ ಭಾರತದ ಮೇಲೆ ಉಂಟಾಗಿರುವ ಬಲವಾದ ಆಂಟಿ-ಸೈಕ್ಲೋನಿಕ್ ಪರಿಚಲನೆಯಿಂದಾಗಿ ಹಗಲು ಮಾತ್ರವಲ್ಲದೆ ರಾತ್ರಿಯ ತಾಪಮಾನವೂ ಏರಿಕೆಯಾಗುತ್ತಿದೆ. ರಾಜ್ಯದ ಕೆಲವು ಭಾಗಗಳಾದ ಧಾರವಾಡ ಮತ್ತು ಶಿವಮೊಗ್ಗದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದರೂ, ಕಳೆದೆರಡು ವರ್ಷಗಳ 39.4 ಡಿಗ್ರಿ ಸೆಲ್ಸಿಯಸ್ ದಾಖಲೆಯನ್ನು ಈ ಬಾರಿ ಬೆಂಗಳೂರು ಮೀರಿಸುವ ಆತಂಕವಿದೆ. ಒಟ್ಟಾರೆಯಾಗಿ, ರಾಜ್ಯಾದ್ಯಂತ ಬಿಸಿಗಾಳಿಯ ಪ್ರಭಾವ ಮುಂದುವರಿಯಲಿದ್ದು, ಸಾರ್ವಜನಿಕರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಬಿಸಿಲಿಗೆ ಆರೋಗ್ಯ ಸಲಹೆಗಳು
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಏರುತ್ತಿರುವುದರಿಂದ, ನಿಮ್ಮ ಆರೋಗ್ಯ ರಕ್ಷಣೆಗಾಗಿ ಆದ್ಯತೆ ನೀಡಿ. ಬಾಯಾರಿಕೆ ಆಗದಿದ್ದರೂ ದಿನವಿಡೀ ನಿಯಮಿತವಾಗಿ ನೀರು ಕುಡಿಯುವುದನ್ನು ಮರೆಯಬೇಡಿ. ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯುವುದು ಉತ್ತಮ. ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ರಸ ಅಥವಾ ಹಣ್ಣಿನ ರಸಗಳನ್ನು ಸೇವಿಸಿ. ಇವು ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಒದಗಿಸುತ್ತವೆ. ಸುಸ್ತಾದಾಗ ಒಂದು ಲೀಟರ್ ನೀರಿಗೆ ಸ್ವಲ್ಪ ಸಕ್ಕರೆ ಮತ್ತು ಚಿಟಿಕೆ ಉಪ್ಪುಬೆರೆಸಿ ಕುಡಿಯಿರಿ.

ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ಅತಿಯಾದ ಎಣ್ಣೆ ಪದಾರ್ಥ, ಮಸಾಲೆ ಮತ್ತು ಜಂಕ್ ಫುಡ್‌ಗಳನ್ನು ತಪ್ಪಿಸಿ. ನೀರಿನಾಂಶವಿರುವ ಕಲ್ಲಂಗಡಿ, ಕರ್ಬೂಜ, ಸೌತೆಕಾಯಿ, ಕಿತ್ತಳೆ ಮತ್ತು ದ್ರಾಕ್ಷಿಗಳಂತಹ ಹಣ್ಣುಗಳನ್ನು ಹೆಚ್ಚಾಗಿ ಬಳಸಿ. ಅತಿಯಾದ ಕಾಫಿ, ಟೀ ಅಥವಾ ತಂಪು ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸಬಹುದು, ಆದ್ದರಿಂದ ಇವುಗಳ ಬಳಕೆ ಮಿತವಾಗಿರಲಿ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಸಿಲು ಅತೀ ಹೆಚ್ಚಿರುತ್ತದೆ. ಈ ಸಮಯದಲ್ಲಿ ಅನಿವಾರ್ಯವಲ್ಲದಿದ್ದರೆ ಹೊರಗೆ ಹೋಗುವುದನ್ನು ತಪ್ಪಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಅಥವಾ ಸನ್‌ಗ್ಲಾಸ್‌ಗಳನ್ನು ಬಳಸಿ. ಸನ್‌ಸ್ಕ್ರೀನ್ ಹಚ್ಚುವುದು ಕೂಡ ಚರ್ಮದ ರಕ್ಷಣೆಗೆ ಉತ್ತಮ.












Click it and Unblock the Notifications