ಸೀತಾ ನವಮಿ ಯಾವತ್ತು? ಈ ದಿನದ ಮಹತ್ವದ ಪೂಜಾ ವಿಧಿ ವಿಧಾನಗಳ ವಿವರ ಇಲ್ಲಿದೆ
ಈ ವರ್ಷ ಸೀತಾ ನವಮಿಯನ್ನು ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಸೀತಾ ಜಯಂತಿ ಬರುತ್ತದೆ. ರಾಮ ನವಮಿಯ ಸುಮಾರು ಒಂದು ತಿಂಗಳ ನಂತರ ಸೀತಾ ನವಮಿ ಬರುತ್ತದೆ. ಭಾರತದ ಅನೇಕ ಕಡೆಗಳಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಉಪವಾಸ ವೃತ, ಪೂಜೆ, ಪ್ರಾರ್ಥನೆ, ಧಾರ್ಮಿಕ ಸಭೆಗಳನ್ನು ನಡೆಸುವ ಮೂಲಕ ಸೀತಾ ನವಮಿ ಅಥವಾ ಸೀತಾ ಜಯಂತಿಯನ್ನು ಆಚರಿಸಲಾಗುತ್ತದೆ.
ಸೀತಾ ನವಮಿಯ ಹಿಂದಿನ ಕತೆ:
ಸೀತೆ ತಾಯಿಯ ಗರ್ಭ ಸಂಜಾತೆ ಅಲ್ಲ. ಅಂದರೆ ತಾಯಿ ಗರ್ಭದಿಂದ ಜನಿಸಿದವಳಲ್ಲ. ಬದಲಾಗಿ ಭೂಮಿಯಿಂದ ಹೊರಹೊಮ್ಮಿದವಳು. ಮಿಥಿಲೆಯ ಜನಕ ಮಹಾರಾಜ ಉಳುಮೆ ಮಾಡುವ ಸಂದರ್ಭದಲ್ಲಿ ಭೂಗರ್ಭದಿಂದ ಹೊರ ಬಂದ ಮಗುವೇ ಸೀತೆ. ನಂತರ ಜನಕ ಮಹಾರಾಜನು ಆ ಮಗುವನ್ನು ದತ್ತು ಪಡೆದು, ಆಕೆಗೆ ಸೀತೆ ಎಂದು ಹೆಸರಿಡುತ್ತಾನೆ. ಮಗಳಂತೆ ಸೀತೆಯನ್ನು ಸಲಹುತ್ತಾನೆ. ಜನಕನ ಮಗಳಾದ ಕಾರಣಕ್ಕೆ, ಸೀತೆಯನ್ನು ಜಾನಕಿ ಎಂದೂ ಕರೆಯುತ್ತಾರೆ. ಹಾಗಾಗಿ ಸೀತಾ ನವಮಿಯನ್ನು ಜಾನಕಿ ನವಮಿ ಎಂದು ಕೂಡಾ ಕರೆಯುತ್ತಾರೆ.

ಸೀತಾ ನವಮಿಯ ಮಹತ್ವ:
ಭಾರತೀಯ ಸಂಪ್ರದಾಯಗಳ ಪ್ರಕಾರ ಸೀತಾ ನವಮಿಗೆ ಮಹತ್ವದ ಸ್ಥಾನವಿದೆ. ಈ ಹಬ್ಬವು ಕೇವಲ ಆಚರಣೆ ಮಾತ್ರವಲ್ಲ, ಸೀತೆಯ ಜೀವನಕ್ಕೆ ಸಂಬಂಧಿಸಿದ ಮೌಲ್ಯಗಳ ಪ್ರತಿಬಿಂಬವೂ ಆಗಿದೆ.
ಸೀತೆಯನ್ನು ಲಕ್ಷ್ಮಿ ದೇವಿಯ ಅವತಾರವೆಂದು ಭಾವಿಸಲಾಗುತ್ತದೆ.ಸೀತೆ ಯೌವನಾವಸ್ಥೆಗೆ ಬರುತ್ತಿರುವಂತೆಯೇ, ಜನಕರಾಜ, ಆಕೆಯ ಸ್ವಯಂವರ ಆಯೋಜಿಸುತ್ತಾನೆ. ಈ ಸ್ವಯಂವರದಲ್ಲಿ ಇಟ್ಟಿದ್ದ ಶಿವಧನಸ್ಸು ಮುರಿಯುವ ಮೂಲಕ ಭಗವಾನ್ ಶ್ರೀರಾಮ, ಸೀತಾ ಮಾತೆಯನ್ನು ವರಿಸುತ್ತಾರೆ. ಸೀತೆ ಪತಿ ಭಕ್ತಿ ಮತ್ತು ಸಹಿಷ್ಣುತೆಗೆ ಹೆಸರಾದವಳು. ಹಾಗಾಗಿ ಯಾರು ಸೀತಾ ನವಮಿಯನ್ನು ಆಚರಿಸುತ್ತಾರೆಯೋ ಅವರ ದಾಂಪತ್ಯ ಅತ್ಯಂತ ಸಂತೋಷ ಮತ್ತು ಯಶಸ್ವಿಯಾಗುತ್ತದೆ ಎನ್ನಲಾಗಿದೆ. ಜೀವನದ ಅತ್ಯಂತ ಕಷ್ಟದ ಸಮಯದಲ್ಲಿಯೂ, ತನ್ನ ಪತಿಯ ನೆರಳಾಗಿದ್ದವಳು ಸೀತಾ ದೇವಿ. ಕಷ್ಟವೇ ಇರಲಿ ಸುಖವೇ ಬರಲಿ ಬದುಕಿದರೆ ಪತಿಯ ಜೊತೆಗೇ ಬದುಕಬೇಕು ಎನ್ನುವ ಉದ್ದೇಶದಿಂದ ರಾಜಕುಮಾರಿಯಾಗಿ ಬೆಳೆದ ಹುಡುಗಿ 14 ವರ್ಷಗಳ ಕಾಲ ವನವಾಸ ಅನುಭವಿಸುತ್ತಾಳೆ. ಅಲ್ಲಿ ರಾವಣ ಸೀತೆಯನ್ನು ಅಪಹರಿಸುತ್ತಾನೆ. ರಾವಣನ ಸಂಹರಿಸಿ, ಶ್ರೀರಾಮ ಚಂದ್ರ, ಸೀತಾ ಮಾತೆಯನ್ನು ಬಿಡಿಸಿಕೊಂಡು ಬರುತ್ತಾರೆ. ಅಯೋಧ್ಯೆಗೆ ಮರಳಿ ಬಂದಾಗ ಸೀತಾದೇವಿಯ ನೈತಿಕತೆ ಮತ್ತು ಶೀಲವನ್ನೇ ಈ ಸಮಾಜ ಪ್ರಶ್ನಿಸುವಂತಾಗುತ್ತದೆ. ನಿಷ್ಕಳಂಕ ಸೀತಾದೇವಿಗೆ ಅಗ್ನಿಪರೀಕ್ಷೆ ಎದುರಾಗುತ್ತೆ. ತಾನು ಪತಿವೃತೆ ಎನ್ನುವುದನ್ನು ನಿರೂಪಿಸುವುದಕ್ಕಾಗಿಯೇ ಸೀತಾಮಾತೆ ಅಗ್ನಿ ಪ್ರವೇಶ ಮಾಡುತ್ತಾರೆ. ಪರಿಶುದ್ಧ ಸೀತಾ ದೇವಿಯನ್ನು ಅಗ್ನಿ ಮುಟ್ಟುವುದಿಲ್ಲ. ಇಲ್ಲೂ ಸೀತಾ ಮಾತೆ ಜಯಿಸಿ ಬರುತ್ತಾಳೆ.
ಈ ದಿನ ವಿವಾಹಿತ ಮಹಿಳೆಯರು ಉಪವಾಸ ವೃತವನ್ನು ಕೈಗೊಳ್ಳುತ್ತಾರೆ. ಪತಿಯ ಆರೋಗ್ಯ ವೃದ್ಧಿ, ಯೋಗ ಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ. ಈ ದಿನ ಮಾಡುವ ಪೂಜೆ, ಉಪವಾಸ ಅವರ ದಾಂಪತ್ಯ ಜೀವನದ ಸುಖ ಸಂತೋಷವನ್ನು ವೃದ್ಧಿಯಾಗಿಸುತ್ತದೆ ಎನ್ನುವುದು ನಂಬಿಕೆ.
ಸೀತಾ ನವಮಿಯ ಆಚರಣೆ:
ಸೀತಾ ನವಮಿಯ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಈ ದಿನ ಸುಂದರವಾದ ಪೂಜಾ ಮಂಟಪವನ್ನು ಸ್ಥಾಪಿಸಿ ಅದನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ. ರಾಮ, ಸೀತೆ, ಲಕ್ಷ್ಮಣ, ರಾಜ ಜನಕ ಮತ್ತು ಮಾತಾ ಸುನೈನರ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ. ಈ ದಿನ, ರಾಜ ಜನಕನಿಗೆ ಸೀತಾ ಮಾತೆ ಭೂ ಗರ್ಭದಲ್ಲಿ ಸಿಕ್ಕಿರುವ ಕಾರಣ ಭೂದೇವಿಯನ್ನು ಕೂಡಾ ಪೂಜಿಸಲಾಗುತ್ತದೆ. ಭೂಮಿಗೆ ಎಳ್ಳು, ಅಕ್ಕಿ ಅಥವಾ ಹಣ್ಣುಗಳು ಸೇರಿದಂತೆ ವಿವಿಧ ರೀತಿಯ ನೈವೇದ್ಯಗಳನ್ನು ಅರ್ಪಿಸುತ್ತಾರೆ. ಈ ಸಂದರ್ಭಕ್ಕಾಗಿ ವಿಶೇಷ ಭೋಜನವನ್ನು ನೈವೇದ್ಯ ರೂಪದಲ್ಲಿ ತಯಾರಿಸಲಾಗುತ್ತದೆ. ಸೀತಾ ನವಮಿ ಪೂಜೆಯಲ್ಲಿ ಭಾಗವಹಿಸುವ ಮಹಿಳೆಯರು ಪೂಜೆ ಮುಗಿಯುವವರೆಗೆ ಏನನ್ನೂ ತಿನ್ನುವಂತಿಲ್ಲ.
ದೇಶಾದ್ಯಂತದ ರಾಮ ಮತ್ತು ಸೀತಾ ದೇವಿಯ ದೇವಾಲಯಗಳಲ್ಲಿ ಸೀತಾ ನವಮಿಯಂದು ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಈ ದೇವಾಲಯಗಳಲ್ಲಿ ಭಜನೆಗಳು ಮತ್ತು ಕೀರ್ತನೆಗಳೊಂದಿಗೆ ರಾಮಾಯಣ ಪಠಣಗಳನ್ನು ಸಹ ಆಯೋಜಿಸಲಾಗುತ್ತದೆ.
ಕರ್ನಾಟಕದಲ್ಲಿರುವ ರಾಮ ಮಂದಿರಗಳು:
ಶ್ರೀರಾಮನ ಇತಿಹಾಸಕ್ಕೂ ಕರ್ನಾಟಕವು ಆಳವಾದ ಸಂಬಂಧವಿದೆ. ಕರ್ನಾಟಕದಲ್ಲಿಯೂ ರಾಮಾಯಣದ ಕುರುಹುಗಳನ್ನು ಹೊಂದಿರುವ ಅನೇಕ ಮಂದಿರಗಳಿವೆ.
ಹಂಪಿ ಕೋದಂಡರಾಮ ದೇವಾಲಯ: ರಾಮಾಯಣದ ಕಿಷ್ಕಿಂದೆಯೇ ಈಗಿನ ಹಂಪಿ ಎಂಬ ನಂಬಿಕೆ ಇದೆ. ಇಲ್ಲಿನ ಕೋದಂಡರಾಮ ದೇವಾಲಯ ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಹಂಪಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಶ್ರೀರಾಮನು ಸುಗ್ರೀವನಿಗೆ ಅಭಯ ನೀಡಿದ ಸ್ಥಳ ಇದು ಎನ್ನುವುದು ಪ್ರತೀತಿ.
ರಘುನಾಥ ದೇವಾಲಯ (ಹಂಪಿ): ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ರಾಮ ಮತ್ತು ಲಕ್ಷ್ಮಣರು ಮಳೆಗಾಲದಲ್ಲಿ ಇಲ್ಲಿ ತಂಗಿದ್ದರು ಎನ್ನಲಾಗಿದೆ. ಈ ದೇವಾಲಯ ಹಂಪಿಯ ಮಾಲ್ಯವಂತ ಬೆಟ್ಟದ ಮೇಲಿದೆ. ಇಲ್ಲಿ ನಿರಂತರವಾಗಿ ರಾಮನಿಗೆ ಭಜನೆ ನಡೆಯುತ್ತಿರುತ್ತದೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೆಂದರೆ ಇಲ್ಲಿನ ವಾಸ್ತುಶಿಲ್ಪ.
ಚುಂಚನಕಟ್ಟೆ ಶ್ರೀ ಕೋದಂಡರಾಮ ದೇವಾಲಯ: ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿದೆ ಈ ದೇವಾಲಯ. ಇದು ಕಾವೇರಿ ತೀರದಲ್ಲಿರುವ ಮಂದಿರ. ರಾಮನು ವನವಾಸದ ಸಮಯದಲ್ಲಿ ಇಲ್ಲಿ ತಂಗಿದ್ದನೆಂಬುದು ಪ್ರತೀತಿ. ಸೀತಾ ದೇವಿಯು ಈ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಿದ್ದಳು ಎಂದು ಹೇಳಲಾಗುತ್ತದೆ. ಆ ಪ್ರದೇಶದಲ್ಲಿನ ನೀರಿನ ಬಣ್ಣವು ಪೂಜೆಗೆ ಬಳಸುವ ಅರಿಶಿನ ಮತ್ತು ಇತರ ಪವಿತ್ರ ಪುಡಿಗಳೊಂದಿಗೆ ಬೆರೆಸಿದಂತೆ ಕಾಣುತ್ತದೆಯಂತೆ.
ರಾಮದೇವರ ಬೆಟ್ಟ (ರಾಮನಗರ): ಬೆಂಗಳೂರಿನ ಸಮೀಪವಿರುವ ಈ ಬೆಟ್ಟದ ಮೇಲಿರುವ ದೇವಾಲಯಕ್ಕೂ ರಾಮಾಯಣಕ್ಕೂ ನಂಟಿದೆ. ಈ ದೇವಾಲಯವನ್ನು ದಕ್ಷಿಣದ ಅಯೋಧ್ಯೆ ಎಂದೂ ಕರೆಯುತ್ತಾರೆ. ರಾಮನಗರದ ರಾಮದೇವರ ಬೆಟ್ಟ ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ. ರಾಮನಗರದಿಂದ ಕೇವಲ 3 ಕಿ.ಮೀ ಮುಂದೆ ಹೋದರೆ ಈ ಪವಿತ್ರ ತಾಣ ಸಿಗುತ್ತದೆ.
ಹಿರೇಮಗಳೂರು ಕೋದಂಡರಾಮ ದೇವಾಲಯ (ಚಿಕ್ಕಮಗಳೂರು): ಚಿಕ್ಕಮಗಳೂರು ಸಮೀಪವಿರುವ ಈ ದೇವಾಲಯದ ವೈಶಿಷ್ಟ್ಯವೇ ಇಲ್ಲಿನ ರಾಮನ ವಿಗ್ರಹ. ಇಲ್ಲಿಯ ರಾಮನ ವಿಗ್ರಹ ಧನುಸ್ಸನ್ನು ಹಿಡಿದುಕೊಂಡಿರುವ ಭಂಗಿಯಲ್ಲಿದೆ. ಸ್ಥಳಪುರಾಣದ ಪ್ರಕಾರ, ಇದೊಂದು ಸಿದ್ಧಕ್ಷೇತ್ರವಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನು ಪರಶುರಾಮನ ಭೇಟಿ ಮಾಡಿದ ಪ್ರಸಂಗವನ್ನು ಕಾಣಬಹುದು. ಶ್ರೀ ರಾಮನಿಗೆ ಶರಣಾದ ಪರಶುರಾಮನು ಅವನಿಗೆ ರಾಮನ ಮದುವೆಯ ದೃಶ್ಯವನ್ನು ತೋರಿಸುವಂತೆ ಬೇಡಿಕೊಂಡನಂತೆ. ಆಗ ಶ್ರೀರಾಮನು ಸೀತೆ, ಲಕ್ಷ್ಮಣರೊಂದಿಗೆ ನಿಂತನಂತೆ. ಆಗ ಸೀತೆಯನ್ನು ತನ್ನ ಬಲಕ್ಕೂ ಲಕ್ಷ್ಮಣನನ್ನು ತನ್ನ ಎಡಕ್ಕೂ ಇರಿಸಿಕೊಂಡು ನಿಂತ ಭಂಗಿಯಲ್ಲಿಯೇ ದೇವಾಲಯದ ವಿಗ್ರಹಗಳಿವೆಯೆಂದು ಹೇಳುತ್ತಾರೆ. ಸಾಮಾನ್ಯವಾಗಿ ಬೇರೆಲ್ಲ ಕಡೆ, ಸೀತೆ ರಾಮನ ಎಡಕ್ಕಿರುತ್ತಾಳೆ. ಈ ಮಂದಿರದಲ್ಲಿ ಮಾತ್ರ ಸೀತೆ ರಾಮನ ಬಲಕ್ಕಿರುವುದು.
ಕನ್ಯಾಡಿ ರಾಮಕ್ಷೇತ್ರ (ದಕ್ಷಿಣ ಕನ್ನಡ): ಧರ್ಮಸ್ಥಳದ ಸಮೀಪವಿರುವ ಕನ್ಯಾಡಿಯಲ್ಲಿದೆ ಈ ರಾಮ ಮಂದಿರ. ಇದೊಂದು ಅತ್ಯಂತ ಸುಂದರ ಕ್ಷೇತ್ರವಾಗಿದ್ದು, ಭಕ್ತರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿರುವ ಈ ಮಂದಿರ ಧರ್ಮಸ್ಥಳದಿಂದ ಕೇವಲ ನಾಲ್ಕು ಕಿ.ಮೀ ಹಾಗೂ ಮಂಗಳೂರಿನಿಂದ 67 ಕಿ.ಮೀ ಗಳಷ್ಟು ದೂರದಲ್ಲಿದೆ. ಪವಿತ್ರ ನೇತ್ರಾವತಿ ನದಿ ತೀರಾ ಸಮೀಪದಲ್ಲಿರುವುದು ಇದರ ಮತ್ತೊಂದು ವಿಶೇಷ.
ವಿಜಯಪುರದ ರಾಮ ಮಂದಿರ: ವಿಜಯಪುರ ನಗರದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ರಾಮ ಮಂದಿರವಿದೆ. ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆಯ ಅಪರೂಪದ ವಿಗ್ರಹಗಳಿವೆ. ಇಲ್ಲಿನ ದೇವಸ್ಥಾನದ ಗರ್ಭಗುಡಿಯಲ್ಲಿ ಮೂರು ಮೂರ್ತಿಗಳಿವೆ. ಅವುಗಳೆಂದರೆ ಮೊದಲನೆಯದ್ದು ರಾಮ, ಎರಡನೆಯದ್ದು ಲಕ್ಷ್ಮಣ ಹಾಗೂ ಮೂರನೆಯದ್ದು ಸೀತಾಮಾತೆ. ದೇವಾಲಯದ ಪ್ರಾಂಗಣದಲ್ಲಿ ರಾಮ ಭಂಟ ಆಂಜನೇಯ, ಮತ್ತು ಗಣೇಶ ವಿಗ್ರಹವೂ ಇದೆ. ದೇವಸ್ಥಾನದ ಪ್ರಾಂಗಣದಲ್ಲಿ ಒಂದು ದೊಡ್ಡ ಹಣತೆಯಿದ್ದು ಇದು ನಿರಂತರವಾಗಿ ಉರಿಯುತ್ತಿದೆ. ಈ ದೀಪಕ್ಕೆ ಭಕ್ತರು ಎಣ್ಣೆ ಹಾಕುವ ಮೂಲಕ ಈ ಜ್ಯೋತಿ ನಿರಂತರವಾಗಿ ಬೆಳಗುತ್ತಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications