ತಮಿಳುನಾಡಿನಲ್ಲಿ ವಿಜಯ್ ಸುನಾಮಿ- CM ಗಾದಿಗೆ ದಳಪತಿ ಹತ್ತಿರ; ಪವನ್ ಕಲ್ಯಾಣ್ ರಾಜಕೀಯಕ್ಕೆ ಹೋಲಿಕೆ
ಇಷ್ಟು ದಿನ ನಟ ಎಂದು ಗುರುತಿಸಿಕೊಂಡಿದ್ದ ವಿಜಯ್ ದಳಪತಿ, ಇನ್ನು ಮುಂದೆ ತಮಿಳುನಾಡಿ ಸಿಎಂ ಎಂದು ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ. ತಾವು ಅಖಾಡ ಪ್ರವೇಶಿಸಿದ ಮೊದಲ ಚುನಾವಣೆಯಲ್ಲಿ ಘಟಾನುಘಟಿ ಪಕ್ಷಗಳನ್ನು ಮಣ್ಣುಮುಕ್ಕಿಸಿದ ವಿಜಯ್, ತಮಿಳುನಾಡು ಸಿಎಂ ಖುರ್ಚಿಗೆ ತುಂಬ ಹತ್ತಿರದಲ್ಲಿ ಬಂದು ನಿಂತಿದ್ದಾರೆ. ಅಂದಹಾಗೆ ವಿಜಯ್ ನಡೆದು ಬಂದ ದಾರಿ ಕಲ್ಲು ಮುಳ್ಳುಗಳಿಂದ ಕೂಡಿತ್ತು.
ಕಳೆದ 5 ದಶಕಗಳ ಕಾಲ ತಮಿಳುನಾಡು ರಾಜಕೀಯವನ್ನು ಆಳುತ್ತಿದ್ದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಅಧಿಕಾರದ ಆಸೆಗೆ ವಿಜಯ್ ಕೊಡಲಿ ಏಟು ನೀಡಿದ್ದಾರೆ. ವಿಜಯ್ ಸುನಾಮಿಯ ಮುಂದೆ ಘಟಾನುಘಟಿ ಪಕ್ಷಗಳು ಸಹ ಅಧಿಕಾರ ವಂಚಿತವಾಗಿವೆ. ವಿಜಯ್ ಚುನಾವಣಾ ಕಣಕ್ಕೆ ಇಳಿದಾಗಲೇ ದ್ರಾವಿಡ ಪಕ್ಷಗಳಿಗೆ ನಡುಕ ಶುರುವಾಗಿತ್ತು. ಈಗ ಇದು ಮತಗಳಾಗಿ ಬದಲಾಗಿದೆ.

ರಾಜಕೀಯದ ಯಾವುದೇ ಹಿನ್ನೆಲೆ ಇಲ್ಲದೆ ಚುನಾವಣೆಗೆ ಧುಮ್ಮುಕ್ಕಿದ ವಿಜಯ್ ಅವರಿಗೆ ಅಭಿಮಾನಿಗಳ ಮೇಲೆ ಅಪಾರ ನಂಬಿಕೆ ಇತ್ತು. ಈಗ ವಿಜಯ್ ಅಭಿಮಾನ ಮತಗಳಾಗಿ ಕನ್ವರ್ಟ್ ಆಗಿದೆ. 2 ವರ್ಷದ ಹಿಂದೆ ಪಕ್ಷವನ್ನು ಕಟ್ಟಿದಾಗ ಅದೆಷ್ಟೋ ಜನ ಟೀಕೆ ಮಾಡಿದ್ದರು. ಹತ್ತರಲ್ಲಿ ಹನ್ನೊಂದು ಎಂಬಂತೆ ಮಾತನಾಡಿದ್ದರು. ಆದರೆ ವಿಜಯ್ ಭರ್ಜರಿ ಗ್ರೌಂಡ್ ವರ್ಕ್ ಮಾಡಿ ಸ್ಟಾರ್ ಗಿರಿಯನ್ನೇ ಅಸ್ತ್ರವಾಗಿ ಬಳಸಿಕೊಂಡು ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಈಗ ವಿಜಯ್ ಅವರ ರಾಜಕೀಯ ಯಶಸ್ಸನ್ನು ಪಕ್ಕದ ರಾಜ್ಯದ ಪವನ್‌ಕಲ್ಯಾಣ್ ಅವರ ರಾಜಕೀಯ ಹಾದಿಯೊಂದಿಗೆ ತಳಕು ಹಾಕಲಾಗುತ್ತಿದೆ.
ಪವನ್ ಕಲ್ಯಾಣ್ ಸಹ ವಿಜಯ್ ಅವರಂತೆ ಜನಸೇನಾ ಪಕ್ಷ (ಜೆಎಸ್‌ಪಿ) ಕಟ್ಟಿದರು. ಈ ಪಕ್ಷವನ್ನು ಇಟ್ಟು ಕೊಂಡು ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದು ನಿಂತರು. ಇವರು ಅಧಿಕಾರಕ್ಕೆ ಏರಲು ದಶಕಗಳ ಕಾಲ ಬೀದಿಗಿಳಿದು ಹೋರಾಟ ನಡೆಸಬೇಕಾಯಿತು.ಕಠಿಣ ಪರಿಶ್ರಮದ ಬಳಿಕ ಪವನ್ 2024ರಲ್ಲಿ ಯಶಸ್ಸಿನ ಕುದುರೆಯನ್ನು ಏರಿದರು. ಇವರ ಮುಂದಾಳತ್ವದ ಪಕ್ಷ ಬಿಜೆಪಿಯ ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಂಡಿತು.
ವಿಜಯ್‌ಗೆ ಯಶಸ್ಸು ಸಿಕ್ಕಿದ್ದು ಹೇಗೆ?
ವಿಜಯ್ ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿದ್ದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಪವನ್ ಕಲ್ಯಾಣ್ ಆರಂಭದಲ್ಲಿ ಎದುರಿಸಿದ ಹಿನ್ನಡೆಗಿಂತ ವಿಜಯ್ ಸವಾಲುಗಳು ಭಿನ್ನವಾಗಿವೆ. ಆಂಧ್ರದಲ್ಲಿ ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ರಾಜಕಾರಣ ಪವನ್ ಅವರಿಗೆ ಸವಾಲಾಗಿದ್ದರೆ, ತಮಿಳುನಾಡಿನಲ್ಲಿ ವಿಜಯ್ ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿ ಬಳಸಿಕೊಂಡಿದ್ದಾರೆ.












Click it and Unblock the Notifications