Vijay: ಎಂಜಿಆರ್ ದಾಖಲೆ ಸರಿಗಟ್ಟಿದ ದಳಪತಿ ವಿಜಯ್: ಜೆನ್‌ಜೀ ಅಬ್ಬರಕ್ಕೆ ಹಳೆ ಪಕ್ಷಗಳು ಉಡೀಸ್..!
Vijay: ಎಂಜಿಆರ್ ದಾಖಲೆ ಸರಿಗಟ್ಟಿದ ವಿಜಯ್ - ಚಿರು, ವಿಜಯ್‌ಕಾಂತ್, ಕಮಲ್, ಪವನ್ ಗಿಂತಲೂ ಅತ್ಯಧಿಕ ವೋಟ್ ಪಡೆದ ದಳಪತಿ..! ಜೆನ್‌ಜೀ ಅಬ್ಬರಕ್ಕೆ ಹಳೆ ಪಕ್ಷಗಳು ಉಡೀಸ್: ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ಅವರ ಬರಹ ಇಲ್ಲಿದೆ.
ತಮಿಳುನಾಡಿನಲ್ಲಿ ಗೆಲುವಿನ ಸುನಾಮಿ ಎಬ್ಬಿಸಿದ ಟಿವಿಕೆ ಪಾರ್ಟಿ ಅಧ್ಯಕ್ಷ, ನಟ ವಿಜಯ್, ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ. ವಿಜಯ್ ಸಿನಿಮಾಗಳು ಯಾವಾಗಲೂ ಬಾಕ್ಸ್ ಆಫೀಸ್ ಚಿಂದಿ ಮಾಡುತ್ತಿದ್ವು. ಕೆಲ ಚಿತ್ರಗಳು ಮಕಾಡೆ ಮಲಗಿದ್ರೂ, ಮಿನಿಮಮ್ ಗ್ಯಾರಂಟಿ, ನಿರ್ಮಾಪಕನಿಗೆ ಮೋಸ ಇಲ್ಲ ಅನ್ನೋ ಮಾತು ಟಾಲಿವುಡ್ ನಲ್ಲಿತ್ತು. ಈಗ ರಾಜಕೀಯದಲ್ಲೂ, ಮೊದಲ ಎಲೆಕ್ಷನ್‌ನಲ್ಲೂ ವೋಟಿಂಗ್ ಬಾಕ್ಸ್‌ನಲ್ಲೂ ಚಿಂದಿ ಮಾಡಿದ್ದಾರೆ ವಿಜಯ್.

ಮೊದಲ ಚುನಾವಣೆಯಲ್ಲೇ ಅತಿಹೆಚ್ಚು ಶೇಕಡಾವಾರು ಮತ ಪಡೆದ ನಟ ಅನ್ನೋ ಹೆಗ್ಗಳಿಕೆ ವಿಜಯ್‌ಗೆ ಸಿಕ್ಕಿದೆ. ಅದರಲ್ಲೂ, ಚುನಾವಣಾ ರಾಜಕೀಯ ಪ್ರವೇಶಿಸಿದ ತೆಲುಗು- ತಮಿಳು ನಟ ಸಾಲಿನಲ್ಲಿ ಎನ್‌ಟಿ ರಾಮರಾವ್ ಬಿಟ್ಟರೆ, ತಮಿಳುನಾಡು ಸಿಎಂ ಆಗಿದ್ದ ಎಂಜಿಆರ್ ಮೊದಲ ಎಲೆಕ್ಷನ್‌ನಲ್ಲೇ ದಾಖಲೆಯ ಮತ ಪಡೆದಿದ್ರು. ಆದ್ರೆ, ವಿಜಯ್, ಎಂಜಿಆರ್ ದಾಖಲೆಯನ್ನೂ ಮುಗಿದು ಮುನ್ನುಗಿದ್ದಾರೆ.
ಅಂಕಿ- ಅಂಶಗಳ ಪ್ರಕಾರ, 1983ರಲ್ಲಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ಆಂಧ್ರದ ಎನ್.ಟಿ.ರಾಮರಾವ್, ಮೊದಲ ಚುನಾವಣೆಯಲ್ಲೇ ಶೇ.46.30ಮತ ಗಳಿಸಿ ಜಯಭೇರಿ ಬಾರಿಸಿದ್ರು. ನಂತರ, 1977ರಲ್ಲಿ ಎಂಜಿ ರಾಮಚಂದ್ರನ್, ತಮಿಳುನಾಡು ಎಲೆಕ್ಷನ್‌ನಲ್ಲಿ ಶೇ. 30.4 ವೋಟ್ ಶೇರ್ ಪಡೆದಿದ್ರು. 2006ರಲ್ಲಿ ತಮಿಳುನಟ ವಿಜಯ್‌ಕಾಂತ್ ಅವರ ಪಕ್ಷ ಶೇ.8.4 ಮತ ಗಳಿಸಿದ್ರೆ, 2009ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಶೇ.16.32 ರಷ್ಟು ಮತ ಪಡೆದಿದ್ರು.
ಇನ್ನು ಚಿರಂಜೀವಿ ಸಹೋದರ, ಜನಶಕ್ತಿ ಪಕ್ಷದ ನಾಯಕ ಪವನ್ ಕಲ್ಯಾಣ್, 2019ರಲ್ಲಿ ಪಡೆದಿದ್ದು ಕೇವಲ 5.53 ವೋಟ್. 2021ರಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀತಿ ಮಯ್ಯಂ ಪಾರ್ಟಿಗೆ ಸಿಕ್ಕಿದ್ದು, ಕೇವಲ 2.62 ಪರ್ಸೆಂಟ್ ವೋಟ್. ಆದ್ರೆ, ದಳಪತಿ ವಿಜಯ್, ಮೊದಲ ಅಗ್ನಿಪರೀಕ್ಷೆಯಲ್ಲೇ ಭಾರೀ ಮತಗಳನ್ನು ಪಡೆಯುವ ಮೂಲಕ ದಿಗ್ವಿಜಯ ಸಾಧಿಸಿಬಿಟ್ಟರು. ಈ ಎಲೆಕ್ಷನ್‌ನಲ್ಲಿ ವಿಜಯ್‌ಗೆ ಸಿಕ್ಕಿದ್ದು ದಾಖಲೆಯ ಶೇ.35 ಮತಗಳು. ಇದು ಎಂಜಿಆರ್ ಅವರ ದಾಖಲೆಯನ್ನೂ ಮುರಿದಿದ್ದಲ್ಲದೇ, ಕೇವಲ ಎರಡು ವರ್ಷದ ಹಿಂದೆ ಸ್ಥಾಪನೆಯಾದ ಪಕ್ಷ ಮತ್ತು ಅದರ ನಾಯಕನ ವೈಯಕ್ತಿಕ ದಾಖಲೆ ಅನ್ನೋ ಅಗ್ಗಳಿಕೆಯೂ ಸಿಕ್ಕಿದೆ.
ವಿಜಯ್ ಮುಡಿಗೇರಿದ ಮತ್ತೊಂದು ದಾಖಲೆ ಅಂದ್ರೆ, 60ವರ್ಷಗಳ ನಂತರ, ಹೊಸ ಪಕ್ಷವೊಂದು, ಮೊದಲ ಚುನಾವಣೆಯಲ್ಲೇ 100ಕ್ಕೂ ಹೆಚ್ಚು ಸೀಟ್ ಗೆದ್ದಿದ್ದೂ ಅಪ್ರತಿಮ ಸಾಧನೆಯೇ ಸರಿ.
ಎಂಜಿಆರ್ ಅವರ ಎಐಎಡಿಎಂಕೆ ಗೆದ್ದಿದ್ದು 130 ಸೀಟ್, ಅದರ ನಂತರ ವಿಜಯ್‌ಕಾಂತ್ ಪಕ್ಷ ಜಸ್ಟ್ 1 ಸೀಟ್ ಗೆದ್ದಿದ್ದೇ ಸಾಧನೆ. ಇನ್ನು ಕಮಲ್ ಹಾಸನ್ ಪಕ್ಷ ಒಂದೂ ಸೀಟ್ ಗೆಲ್ಲದೇ ನಿರಾಸೆ ಮೂಡಿಸಿತು. ಮತ್ತೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ, ದಳಪತಿ ವಿಜಯ್‌ಗೆ ಪರ ನಿಂತಿದ್ದು ಜೆನ್‌ಜೀ. ಇಡೀ ತಮಿಳುನಾಡು ಎಲೆಕ್ಷನ್‌ನಲ್ಲಿ ಜೆನ್‌ಜೀ ಕ್ರಾಂತಿ ಮಾಡಿಬಿಟ್ಟಿದೆ.
ವಿಜಯ್ ಕೈ ಹಿಡಿದಿದ್ದೇ 18 ರಿಂದ 19 ವರ್ಷದ ಯುವ ಮತದಾರರೇ. ಈ ವಯಸ್ಸಿನವರ ಶೇ. 68 ರಷ್ಟು ವೋಟ್ ವಿಜಯ್‌ಗೆ ಪರ ಬಿದ್ದಿದೆ. 20-29 ವಯೋ ಮಾನದವರು ಶೇ. 59, 30-39 ವಯಸ್ಸಿನವರು ಶೇ.45, 40-49 ವಯಸ್ಸಿನವರು ಶೇ.32, ಉಳಿದಂತೆ 50 ರಿಂದ 59 ವಯೋಮಾನದವರ ಶೇ.20 ರಷ್ಟು ವೋಟ್ ವಿಜಯ್‌ಗೆ ಸಿಕ್ಕಿದೆ. 50 ರಿಂದ 59 ವರ್ಷದವರು, ತಮ್ಮ ಸಾಂಪ್ರದಾಯಿಕ ಪಾರ್ಟಿಗಳಿಗೆ ಆದ್ಯತೆ ನೀಡಿದ್ದಾರೆ. ಆದ್ರೆ, 18 ರಿಂದ 39 ವರ್ಷದೊಳಗಿನವರ ವೋಟ್ ಎಲ್ಲ ವಿಜಯ್ ಪಕ್ಷದ ಪಾಲಾಗಿದೆ.
ವಿಜಯ್ ಗೆಲುವು, ತಮಿಳುನಾಡಿನವರ ಸಿನಿಮಾ ಹುಚ್ಚು ಇಡೀ ದೇಶವನ್ನೇ ಅಚ್ಚರಿಗೆ ದೂಡಿದೆ. ಎಂಜಿಆರ್, ಜಯಲಲಿತಾ ಬಳಿಕ, ತಮಿಳರ ಮನಗೆದ್ದು ರಾಜಕೀಯದಲ್ಲೂ ಗೆದ್ದು ಬೀಗಿದವರ ಸಾಲಿಗೆ ವಿಜಯ್ ಸೇರಿದ್ದಾರೆ. ವಿಜಯ್‌ಕಾಂತ್, ಕಮಲ್ ಹಾಸನ್ ಸಿನಿ ಪ್ರಿಯರ ಮನಗೆದ್ದರೂ, ಅದು ವೋಟ್ ಆಗಿ ಪರಿವರ್ತನೆಯಾಗಲಿಲ್ಲ. ಆದರೆ, ವಿಜಯ್, ತಮ್ಮ ಸಿನಿಮಾಗಳಲ್ಲೂ ಟಾರ್ಗೆಟ್ ಮಾಡಿದ್ದು ಯುವ ಮತ್ತು ಮಧ್ಯ ವಯಸ್ಕರನ್ನು. ವಿಜಯ್ ಪ್ರತಿ ಚಿತ್ರದಲ್ಲೂ ಪ್ರೇಮ, ಪ್ರೀತಿ, ತಿಳಿ ಹಾಸ್ಯದ ಜತೆಗೆ ರೆಬೆಲ್ ಗುಣದ ಹೀರೋ ಆಗಿ ವಿಜೃಂಭಿಸಿದವರೇ.
ವ್ಯವಸ್ಥೆಗೆ ಧಿಕ್ಕರಿಸಿ ಹೋರಾಡುವ, ರಾಜಕಾರಣಿಗಳು, ಅವರ ನೀತಿಗಳನ್ನು ಪ್ರಶ್ನಿಸುವ ಆಂಗ್ರಿ ಯಂಗ್ ಮ್ಯಾನ್ ಆಗಿ ಅಪಾರ ಅಭಿಮಾನಿಗಳನ್ನು ಸೆಳೆದವರು. ಈ ಅಭಿಮಾನಿಗಳ ಅಭಿಮಾನವೇ, ಇಂದು ವಿಜಯ್ ರಾಜಕೀಯ ಸಕ್ಸಸ್‌ಗೆ ಕಾರಣವಾಗಿದೆ. ತೆರೆಯ ಮೇಲೆ ವ್ಯವಸ್ಥೆ ವಿರುದ್ಧ ಅಬ್ಬರಿಸಿ, ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ ವಿಜಯ್, ಇಂದು ಅದೇ ನಂಬಿಕೆಯೊಂದಿಗೆ ಲಕ್ಷಾಂತರ ಅಭಿಮಾನಿಗಳ ವೋಟ್ ಪಡೆದಿದ್ದಾರೆ. ಅವರ ನಂಬಿಕೆ ಹುಸಿಯಾಗದಂತೆ ಆಡಳಿತ ನಡೆಸುವ ಸವಾಲು ವಿಜಯ್ ಎದುರಿಗಿದೆ.
ಬರಹ: ಶೋಭಾ ಮಳವಳ್ಳಿ, ಹಿರಿಯ ಪತ್ರಕರ್ತೆ












Click it and Unblock the Notifications