ನಿರುದ್ಯೋಗದ ನಿಟ್ಟುಸಿರು, ಸಾಲದ ಹೊರೆಯ ಬಿಸಿ: ಕೇರಳ ಫಲಿತಾಂಶದ ದಿಕ್ಕು ಬದಲಿಸಿದ 5 ಪ್ರಮುಖ ಅಂಶಗಳಿವು

ತಿರುವನಂತಪುರಂ: ಏಪ್ರಿಲ್ 9ರಂದು ನಡೆದಿದ್ದ ಕೇರಳ ವಿಧಾನಸಭಾ ಚುನಾವಣೆ 2026 ತೀವ್ರ ಪೈಪೋಟಿಯಿಂದ ಕೂಡಿದ್ದು, ಮೂರು ಪ್ರಮುಖ ಮೈತ್ರಿಕೂಟಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಸಿಪಿಐ(ಎಂ) ಒಳಗೊಂಡ ಎಲ್‌ಡಿಎಫ್ ಸತತ ಮೂರನೇ ಬಾರಿಗೆ ಐತಿಹಾಸಿಕ ಗೆಲುವು ದಾಖಲಿಸುವ ತವಕದಲ್ಲಿದ್ದರೆ, ಕಳೆದ ಒಂದು ದಶಕದಿಂದ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತೆ ಅಧಿಕಾರದ ಗದ್ದುಗೆ ಏರುವ ಹಂಬಲದಲ್ಲಿದೆ. ಇದರ ಜೊತೆಗೆ, ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ತೀವ್ರ ಕಸರತ್ತು ನಡೆಸಿದೆ.

ಮತದಾನ ಮುಕ್ತಾಯಗೊಂಡು ಫಲಿತಾಂಶ ಲೆಕ್ಕಾಚಾರಗಳು ಕೊನೆಯ ಹಂತದಲ್ಲಿರುವ ಈ ಹೊತ್ತಿನಲ್ಲಿ, ಕೇರಳದ ಮತದಾರರ ಒಲವನ್ನು ನಿರ್ಧರಿಸಿರುವ ಪ್ರಮುಖ ವಿಚಾರಗಳತ್ತ ಒಮ್ಮೆ ಕಣ್ಣಾಡಿಸಬೇಕಿದೆ. ಆರ್ಥಿಕ ಕಳವಳಗಳು, ಆಡಳಿತಾತ್ಮಕ ಪ್ರಶ್ನೆಗಳು ಮತ್ತು ಅಸ್ಮಿತೆಯ ವಿಚಾರಗಳು ಈ ಬಾರಿಯ ಚುನಾವಣೆಯ ದಿಕ್ಕನ್ನು ಬದಲಿಸಿವೆ.

Kerala Election

ನಿರುದ್ಯೋಗ ಮತ್ತು ವಲಸೆ ಸಮಸ್ಯೆ: ಕೇರಳವು ಸಾಕ್ಷರತೆ ಮತ್ತು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದರೂ, ಪದವೀಧರರಲ್ಲಿನ ನಿರುದ್ಯೋಗ ಸಮಸ್ಯೆ ಮತ್ತು ಉದ್ಯೋಗ ಸೃಷ್ಟಿಯ ಕೊರತೆ ಈ ಚುನಾವಣೆಯ ದಿಕ್ಕನ್ನು ಬದಲಿದೆ ಎನ್ನಬಹುದು. ಸೂಕ್ತ ಅವಕಾಶಗಳು ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಯುವಕರು ಮತ್ತು ವೃತ್ತಿಪರರು ಗಲ್ಫ್ ರಾಷ್ಟ್ರಗಳು ಸೇರಿದಂತೆ ಹೊರದೇಶಗಳಿಗೆ ವಲಸೆ ಹೋಗುವುದು ಮುಂದುವರಿದಿದೆ. ಇದು ಯುವ ಮತದಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಎಲ್ಲಾ ಮೂರು ಪ್ರಮುಖ ಮೈತ್ರಿಕೂಟಗಳು ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರೂ, ಅವುಗಳ ದೀರ್ಘಕಾಲೀನ ಅನುಷ್ಠಾನದ ಬಗ್ಗೆ ಜನರಲ್ಲಿ ಅನುಮಾನಗಳು ಹಾಗೆಯೇ ಉಳಿದಿವೆ.

ಸಾಲದ ಹೊರೆ ಮತ್ತು ಕಲ್ಯಾಣ ಯೋಜನೆಗಳ ಚರ್ಚೆ: ಕೇರಳದ ಸಾರ್ವಜನಿಕ ಸಾಲದ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, 2024-25ರ ಅಂದಾಜಿನ ಪ್ರಕಾರ ಇದು ಬರೋಬ್ಬರಿ 3.1 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಲದ ಅನುಪಾತವು 2023-24ರಲ್ಲಿದ್ದ ಶೇ. 23.60 ರಿಂದ ಶೇ. 24.83ಕ್ಕೆ ಏರಿಕೆಯಾಗಿದ್ದು, ಇದು ಪ್ರಮುಖ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಪಿಂಚಣಿ ಮತ್ತು ಬಡತನ ನಿರ್ಮೂಲನೆ ಸೇರಿದಂತೆ ತನ್ನ ವಿಸ್ತೃತ ಕಲ್ಯಾಣ ಯೋಜನೆಗಳನ್ನು ಎಲ್‌ಡಿಎಫ್ ಸಮರ್ಥಿಸಿಕೊಂಡಿದೆ. ಆದರೆ, ಸರ್ಕಾರದ ಈ ಸಾಲ ಮಾಡುವ ಪ್ರವೃತ್ತಿಯನ್ನು ಟೀಕಿಸಿರುವ ಯುಡಿಎಫ್ ಮತ್ತು ಎನ್‌ಡಿಎ, ರಾಜ್ಯವು 'ಸಾಲದ ಸುಳಿ'ಯಲ್ಲಿ ಸಿಲುಕುವ ಅಪಾಯವಿದೆ ಎಂದು ಎಚ್ಚರಿಸಿವೆ.

ಆಡಳಿತ ವಿರೋಧಿ ಅಲೆ: ಸತತ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ನಂತರ, ಎಲ್‌ಡಿಎಫ್ ಸಹಜವಾಗಿಯೇ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಆಡಳಿತ ಯಂತ್ರದ ನಿಷ್ಕ್ರಿಯತೆ, ಕಲ್ಯಾಣ ಯೋಜನೆಗಳ ವಿತರಣೆಯಲ್ಲಿನ ವಿಳಂಬ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ವಿರೋಧ ಪಕ್ಷಗಳು ಪ್ರಬಲವಾಗಿ ಮುಂದಿಟ್ಟಿವೆ. ಪುನರ್ವಸತಿ ಕಾರ್ಯಗಳಲ್ಲಿನ ವಿವಾದಗಳು ಮತ್ತು ರಾಜಕೀಯ ಒಳಜಗಳಗಳು ಪ್ರಚಾರದ ವೇಳೆ ಮುನ್ನೆಲೆಗೆ ಬಂದಿದ್ದವು. ಆದರೆ, ಆಡಳಿತಾರೂಢ ಎಲ್‌ಡಿಎಫ್ ತನ್ನ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಮುಂದಿಟ್ಟು, ಆಡಳಿತದ ಮುಂದುವರಿಕೆಯ ಅಗತ್ಯವನ್ನು ಪ್ರತಿಪಾದಿಸಿದೆ.

ಶಬರಿಮಲೆ ಮತ್ತು ಅಸ್ಮಿತೆಯ ರಾಜಕಾರಣ: ರಾಜಕೀಯ ಚರ್ಚೆಗಳ ಕೇಂದ್ರಬಿಂದುವಾಗಿರುವ ಶಬರಿಮಲೆ ವಿವಾದವು ಧರ್ಮ, ಲಿಂಗ ಸಮಾನತೆ ಮತ್ತು ರಾಜಕೀಯ ತಂತ್ರಗಾರಿಕೆಯ ವಿಚಾರಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಇದು ಬಿಜೆಪಿ ನೇತೃತ್ವದ ಎನ್‌ಡಿಎಗೆ ತನ್ನ ಅಸ್ಮಿತೆ ಆಧಾರಿತ ರಾಜಕಾರಣವನ್ನು ತಳಮಟ್ಟಕ್ಕೆ ಕೊಂಡೊಯ್ಯಲು ಪ್ರಮುಖ ಅಸ್ತ್ರವಾಗಿ ಪರಿಣಮಿಸಿದೆ.

ಜಾಗತಿಕ ವಿದ್ಯಮಾನಗಳು: ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಸಂಘರ್ಷಗಳು ಮತ್ತು ಉದ್ವಿಗ್ನತೆಯ ಪ್ರಭಾವ ಕೇರಳದ ಮೇಲೂ ದಟ್ಟವಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು ಕೇರಳಿಗರು ನೆಲೆಸಿದ್ದು, ಅವರಿಂದ ಬರುವ ಹಣವನ್ನೇ ನಂಬಿರುವ ಕುಟುಂಬಗಳು ಜಾಗತಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಈ ಆರ್ಥಿಕ ಪರಿಣಾಮಗಳು ಮತ್ತು ಅನಿವಾಸಿ ಭಾರತೀಯ ಸಮುದಾಯದ ಭಾವನೆಗಳು ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮತದಾನದ ಮೇಲೆ ನೇರ ಪ್ರಭಾವ ಬೀರಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಈ ಎಲ್ಲಾ ಅಂಶಗಳು ಕೇರಳ ಚುನಾವಣೆಯ ಅಂತಿಮ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+