ಬೆಂಗಳೂರಿನ ಗೂಗಲ್ ಆಫೀಸ್ ಟೂರ್ ಮಾಡಿದ ಯುವತಿ: Viral Video ವಿಡಿಯೋ ನೋಡಿ ದಂಗಾದ ನೆಟ್ಟಿಗರು
ಬೆಂಗಳೂರು: ಐಟಿ ಹಬ್ ಬೆಂಗಳೂರಿನಲ್ಲಿರುವ ಗೂಗಲ್‌ನ 'ಅನಂತ' (Google Ananta office)\ ಕಚೇರಿಯ ವಿಡಿಯೋ ಟೂರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಕಚೇರಿಯ ವಿಡಿಯೋ ನೋಡಿ ನೆಟ್ಟಿಗರು ಅಕ್ಷರಶಃ ದಂಗಾಗಿದ್ದು, ಅಲ್ಲಿನ ಊಟದ ವ್ಯವಸ್ಥೆ, ಆಟದ ಮೈದಾನ, ವಿಶ್ರಾಂತಿ ಕೊಠಡಿ ಸೇರಿದಂತೆ ಪಂಚತಾರಾ ಹೋಟೆಲ್ ಅನ್ನು ಮೀರಿಸುವಂತಹ ಸೌಲಭ್ಯಗಳಿಗೆ ಮಾರುಹೋಗಿದ್ದಾರೆ.
ಅರ್ಪಿತಾ ದಾಶ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಕ್ಷಕರಿಗೆ ಗೂಗಲ್ ಕಚೇರಿಯ ಅದ್ಭುತ ಒಳನೋಟವನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ಬಗೆಬಗೆಯ ಕಾಫಿ ಕಾರ್ನರ್‌ಗಳು, ಆಟದ ಜಾಗ, ವೈವಿಧ್ಯಮಯ ಆಹಾರ ಮಳಿಗೆಗಳಂತಹ ಹತ್ತಾರು ಐಷಾರಾಮಿ ಸೌಲಭ್ಯಗಳು ಕಚೇರಿಯೊಳಗೆ ಲಭ್ಯವಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ವಿಡಿಯೋದ ಆರಂಭದಲ್ಲಿ ಮಾತನಾಡುವ ಅರ್ಪಿತಾ ದಾಶ್, "ಹಲೋ ಸ್ನೇಹಿತರೇ, ನನ್ನೊಂದಿಗೆ ಗೂಗಲ್ ಆಫೀಸ್‌ಗೆ ಬನ್ನಿ. ಇಲ್ಲಿನ ಪ್ರತಿಯೊಂದು ವಿಚಾರವನ್ನು ನಾನು ನಿಮಗೆ ತೋರಿಸಲಿದ್ದೇನೆ. ನಿಜ ಹೇಳಬೇಕೆಂದರೆ, ಇಲ್ಲಿಂದ ಹೊರಹೋಗಲು ನನಗೆ ಇಷ್ಟವೇ ಆಗುತ್ತಿಲ್ಲ" ಎಂದು ಹೇಳಿದ್ದಾರೆ.

ವಿಡಿಯೋವನ್ನು ಕಾಫಿ ಕಾರ್ನರ್‌ಗಳಿಂದ ಆರಂಭಿಸುವ ಅವರು, "ಮೊದಲ ನಿಲ್ದಾಣ ಕಾಫಿ ಕಾರ್ನರ್‌ಗಳು. ಇಲ್ಲಿ ನಿಮ್ಮ ಇಚ್ಛೆಯಂತೆ ತಾಜಾ ಕಾಫಿ ಮತ್ತು ಚಹಾವನ್ನು ಒದಗಿಸುವ ಅನೇಕ ಸ್ಥಳಗಳಿವೆ" ಎಂದು ವಿವರಿಸಿದ್ದಾರೆ. ತದನಂತರ ಅವರು ಮನರಂಜನಾ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿ ಮಿನಿ ಗಾಲ್ಫ್ ಆಡುವುದನ್ನು ಕೂಡ ಕಾಣಬಹುದು. "ಮುಂದಿನ ನಿಲ್ದಾಣ ಮಿನಿ ಗಾಲ್ಫ್. ಮೀಟಿಂಗ್‌ಗಳು ಕಾಯಬಹುದು, ಆದರೆ ಇದಲ್ಲ! ಇದು ತುಂಬಾ ಕ್ಯೂಟ್ ಆಗಿದೆ. ನನಗೆ ಆಡಲು ಅಷ್ಟಾಗಿ ಬರುತ್ತಿಲ್ಲ, ಆದರೆ ಬಹಳ ಮಜಾವಾಗಿದೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಆಟದ ನಂತರ, ವೀಕ್ಷಕರನ್ನು ಊಟದ ವಿಭಾಗಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಅನೇಕ ರೀತಿಯ ಖಾದ್ಯಗಳು ಮತ್ತು ಫುಡ್ ಕೌಂಟರ್‌ಗಳು ಇರುವುದನ್ನು ನೋಡಬಹುದು. "ಇಷ್ಟೆಲ್ಲಾ ಆಡಿ ಸುಸ್ತಾದೆವು, ಬನ್ನಿ ಊಟ ಮಾಡೋಣ. ಇಲ್ಲಿ ಆಯ್ಕೆಗಳಿಗೆ ಕೊನೆಯೇ ಇಲ್ಲ. ಸ್ಟ್ರೀಟ್ ಫುಡ್, ಇಂಡಿಯನ್, ಥಾಯ್, ಚೈನೀಸ್, ಪ್ಯಾನ್-ಏಷ್ಯನ್, ಸಲಾಡ್ಸ್, ಬ್ರೆಡ್ಸ್, ಅಕ್ಷರಶಃ ಎಲ್ಲವೂ ಇಲ್ಲಿದೆ!" ಎಂದು ಅವರು ಹೇಳಿದ್ದಾರೆ. ಡೆಸರ್ಟ್ಸ್ (ಸಿಹಿ ತಿನಿಸುಗಳು) ಬಗ್ಗೆಯೂ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದು, "ಏನು ತಿನ್ನಬೇಕು ಎಂದು ನನಗೆ ನಿಜಕ್ಕೂ ಗೊಂದಲವಾಯಿತು. ಇಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ತಿನ್ನುವುದರಲ್ಲೇ ಬ್ಯುಸಿಯಾಗಿರುತ್ತೇನೆ" ಎಂದು ತಮಾಷೆ ಮಾಡಿದ್ದಾರೆ. ಇದಲ್ಲದೆ ಊಟದ ನಂತರ ವಿಶ್ರಾಂತಿ ಪಡೆಯಲು ಕಚೇರಿಯಲ್ಲಿರುವ ಮಸಾಜ್ ಚೇರ್‌ಗಳನ್ನು ಸಹ ವಿಡಿಯೋದಲ್ಲಿ ತೋರಿಸಲಾಗಿದೆ. "ನಾನು ತಮಾಷೆ ಮಾಡುತ್ತಿಲ್ಲ, ನಾನು ಇಲ್ಲೇ ವಾಸಿಸಬಲ್ಲೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ನೆಟ್ಟಿಗರ ಪ್ರತಿಕ್ರಿಯೆಗಳು ಹೇಗಿವೆ?
ಈ ವಿಡಿಯೋಗೆ ಇನ್‌ಸ್ಟಾಗ್ರಾಮ್ ಬಳಕೆದಾರರಿಂದ ಅದ್ಭುತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅನೇಕರು ಕಚೇರಿಯ ಪರಿಸರವನ್ನು ಕಂಡು ಅಚ್ಚರಿಗೊಂಡಿದ್ದಾರೆ. ಒಬ್ಬ ಬಳಕೆದಾರರು, "ಇದು ಕಚೇರಿಯಂತೆ ಕಾಣುತ್ತಿಲ್ಲ, ಐಷಾರಾಮಿ ಕ್ಯಾಂಪಸ್‌ನಂತಿದೆ" ಎಂದು ಬರೆದಿದ್ದಾರೆ.
ಮತ್ತೊಬ್ಬರು, "ಅಲ್ಲಿರುವ ಊಟದ ಆಯ್ಕೆಗಳೇ ಅಲ್ಲಿ ಕೆಲಸ ಮಾಡಲು ಸಾಕಷ್ಟು ಪ್ರೇರಣೆ ನೀಡುತ್ತವೆ" ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, "ಊಟದ ನಂತರದ ಮಸಾಜ್ ಚೇರ್ ನಿಜವಾದ ಉದ್ಯೋಗಿ ಸೌಲಭ್ಯ" ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ "ವರ್ಕ್ ಫ್ರಮ್ ಆಫೀಸ್ (ಕಚೇರಿಯಿಂದ ಕೆಲಸ) ಎನ್ನುವುದಕ್ಕೆ ಈಗ ನಿಜವಾದ ಅರ್ಥ ಸಿಕ್ಕಿದೆ" ಎಂದು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮಾಷೆ ಮಾಡುತ್ತಿದ್ದಾರೆ.












Click it and Unblock the Notifications