ಎತ್ತಿನಹೊಳೆ ನೀರು ವಾಣಿ ವಿಲಾಸ ಸಾಗರ ಡ್ಯಾಂಗೆ ಯಾವಾಗ ತಲುಪಲಿದೆ?-ಸಚಿವರು ಹೇಳಿದ್ದೇನು?
ಹಿರಿಯೂರು, ಸೆಪ್ಟೆಂಬರ್, 21: ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ನಮಗೆ ಸರಿಯಾದ ಉತ್ತಮ ಮಳೆಯಾಗಿಲ್ಲ. 2018ರಿಂದ 2023ರ ವರೆಗೆ ಆಗಬೇಕಾದ ಅಪ್ಪರ್ ಭದ್ರಾ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಆದ್ದರಿಂದ ಕೆರೆಗಳಿಗೆ ನೀರು ಹರಿಸಿ ಎಂದು ಈ ಭಾಗದ ರೈತರು ಅಧಿಕಾರಿಗಳಿಗೆ ಮನವಿ ಮಾಡುವುದಲ್ಲದೇ, ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಬಂದ ಮೇಲೆ ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಸರ್ಕಾರ ಆಧ್ಯತೆ ನೀಡುತ್ತಿದ್ದು, ತಾಲೂಕಿನ ರೈತರ ಹಿತ ಕಾಯುವ ನಿರ್ಧಾರ ಮಾಡಲಾಗಿದೆ. ಬರೀ ನಾಲ್ಕೈದು ಹಳ್ಳಿಗಳ ಕೆರೆಗಳೇ ಅಲ್ಲ, ತಾಲೂಕಿನ ಎಲ್ಲಾ ಹಳ್ಳಿಗಳ ಕೆರೆಗಳನ್ನು ತುಂಬಿಸುವ ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.

ತಾಲೂಕಿನ ವಾಣಿ ವಿಲಾಸ ಪುರದಿಂದ ತಾಲೂಕು ಕಛೇರಿಯವರೆಗೆ ರೈತರು ನಡೆಸಿದ ಪ್ರತಿಭಟನಾ ಪಾದಯಾತ್ರೆಯಲ್ಲಿ ಅಧಿಕಾರಿಗಳ ಜೊತೆ ಭಾಗವಹಿಸಿ, ರೈತರಿಂದ ಮನವಿ ಸ್ವೀಕರಿಸಿ ಸಚಿವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಇದೆ. ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ರೈತರ ಮುಖಂಡರ ಜೊತೆ ಸಭೆ ಕೂಡ ನಡೆಸಲಾಗಿದೆ ಎಂದರು.
ತಾಲ್ಲೂಕಿನ ಎಲ್ಲಾ ಭಾಗವನ್ನು ತಲೆಯಲ್ಲಿಟ್ಟುಕೊಂಡು, ಕ್ಷೇತ್ರದ ಸಂಪೂರ್ಣ ಕೆರೆಗಳಿಗೆ ಹಂತ-ಹಂತವಾಗಿ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಪೂರಕವಾದ ನಿರ್ಧಾರವನ್ನು ಮಾಡಲಾಗಿದೆ. ಕೆಲವು ಕೆರೆಗಳು ನೀರು ಹರಿಯುವ ಮಟ್ಟದಿಂದ 60-70 ಅಡಿ ಎತ್ತರದಲ್ಲಿವೆ. ಆದ್ದರಿಂದ ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕಾಗುತ್ತದೆ. ಜನವರಿ ವೇಳೆಗೆ ಕೆರೆಗಳಿಗೆ ನೀರು ಹರಿಸುತ್ತೇವೆಂದು ನಾನು ಹೇಳುವುದಿಲ್ಲ. ಆದರೆ ಸ್ವಲ್ಪ ಸಮಯ ಹಿಡಿದರೂ ಸರಿ ಕೆರೆಗಳಿಗೆ ನೀರು ಹರಿಸುವ ಸಂಕಲ್ಪ ನನ್ನದು ಎಂದು ಭರವಸೆ ನೀಡಿದರು.
ಅಲ್ಲದೆ, ತಾಲೂಕಿನ ರೈತರ ಬೆಂಬಲಕ್ಕೆ ನಿಂತಿದ್ದೇನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನನ್ನ ಜಿಲ್ಲೆಯ ರೈತರ ಹಿತ ಕಾಯುವ ಕಾರ್ಯ ನನ್ನದಾಗಿದೆ. ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸಲಾಗಿದ್ದು, ಪ್ರತಿದಿನ 1,500 ಕ್ಯೂಸೆಕ್ ನೀರು ವಿವಿ ಸಾಗರ ಡ್ಯಾಂಗೆ ಬರಲಿದೆ. ಈ ನೀರು ಸೋಮವಾರದಿಂದ ವಾಣಿ ವಿಲಾಸ ಜಲಾಶಯ ಸೇರಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಕಾರ್ತೀಕ್, ತಹಶೀಲ್ದಾರ್ ಸಿ.ರಾಜೇಶ್ ಕುಮಾರ್, ಗುರುಪ್ರಸಾದ್, ವಿಶ್ವೇಶ್ವರಯ್ಯ ಜಲ ಮಂಡಳಿ ನಿಗಮ ನಿಯಮಿತದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆ ಪರುಶುರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮುಖಂಡ ಕಂದಿಕೆರೆ ಜಗದೀಶ್, ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ನಗರಸಭೆ ಸದಸ್ಯೆ ಶಿವರಂಜನಿ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications