ಹುಟ್ಟೂರಿನಲ್ಲಿ ತೋಟ, ಮನೆ ಖರೀದಿಸಿದ ಯಶ್, ರೈತ ಮಿತ್ರನಾಗುವತ್ತ!
Recommended Video

ಹಾಸನ, ಫೆಬ್ರವರಿ 05: ಸೆಲೆಬ್ರಿಟಿಗಳು ಕಾರು, ಮನೆ, ಬಂಗಲೆ ಖರೀದಿಸುವುದು ದೊಡ್ಡ ವಿಷಯವಲ್ಲ. ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುವ ಯಶ್ ಅವರು ಎಲ್ಲಿ ಬಂಡವಾಳ ಹೂಡಲಿದ್ದಾರೆ ಎಂಬ ಕುತೂಹಲ ಅನೇಕರಲ್ಲಿತ್ತು. ಯಶ್ ಅವರು ತಮ್ಮ ತಾಯಿಯ ಆಸೆಯಂತೆ ಹಾಸನ ಜಿಲ್ಲೆಯಲ್ಲಿರುವ ತಾಯಿ ತವರೂರು ಹಾಗೂ ತಮ್ಮ ಹುಟ್ಟೂರಿನಲ್ಲಿ ಒಂದಷ್ಟು ಆಸ್ತಿ ಖರೀದಿಸಿದ್ದಾರೆ. ಆದರೆ, ಇದರಲ್ಲಿ ವಿಶೇಷವೆಂದರೆ, ಯಶ್ ಅವರು ತಮ್ಮ ಹುಟ್ಟೂರಿನ ಅಕ್ಕಪಕ್ಕದ ಗ್ರಾಮಸ್ಥರಿಗೆ, ರೈತಾಪಿ ವರ್ಗಕ್ಕೆ ನೆರವಾಗಲು ಮುಂದಾಗಿರುವುದು ಮಾದರಿ ಎನಿಸಿಕೊಂಡಿದೆ.
ಯಶ್ ಅವರು ತಮ್ಮ ಹುಟ್ಟೂರಾದ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ತೋಟ ಮನೆ ಖರೀದಿಸಿದ್ದಾರೆ. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡುವುದಷ್ಟೇ ಅಲ್ಲದೆ, ಅಲ್ಲಿನ ರೈತರಿಗೆ ಈ ಬಗ್ಗೆ ಅರಿವು ಮೂಡಿಸುವ ಯತ್ನದಲ್ಲಿದ್ದಾರೆ. ಯಶ್ ಅವರ ಸರ್ಕಾರೇತರ ಸಂಸ್ಥೆ ಯಶೋಮಾರ್ಗದಿಂದ ಇದಕ್ಕೆ ಅಗತ್ಯ ನೆರವು ಸಿಗಲಿದೆ. ಹಾಸನ ಜಿಲ್ಲೆಯಲ್ಲಿ ಹೇಮಾವತಿ, ಕಾವೇರಿ, ಯಗಚಿ ನದಿ ನೀರಿನ ಆಸರೆ ಇದ್ದರೂ, ಉತ್ತಮ ಮಳೆ ಕಾಣದಂತಾಗಿದೆ. ಯಶ್ ಅವರ ಯಶೋಮಾರ್ಗ ಮೂಲಕ ಕೆರಗಳು ನೀರು ಕಾಣುವಂತಾದರೆ, ಅದಕ್ಕಿಂತ ಸೌಭಯ ಮತ್ತೊಂದಿಲ್ಲ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಯಶ್ ತಮ್ಮ ತಾಯಿ ಅವರ ಹುಟ್ಟೂರು ಹಾಸನದ ದೊಡ್ಡಕೊಂಡಗೊಳ ಗ್ರಾಮದಲ್ಲೂ ಕೃಷಿ ಭೂಮಿ ಹೊಂದಿದ್ದಾರೆ. ಇಲ್ಲಿ ಕೂಡಾ ರೈತರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ವಿದ್ಯಾನಗರದಲ್ಲಿ ಯಶ್ ಮನೆ ಖರೀದಿಸಿದ್ದರೂ ಹುಟ್ಟೂರಿನಲ್ಲಿ ತೋಟ, ಜಮೀನು ಖರೀದಿಸಿ ಕೃಷಿ ಮಾಡುವುದು ಯಶ್ ಅವರ ತಾಯಿ ಪುಷ್ಪಾ ಅವರ ಕನಸಾಗಿತ್ತು.ಈಗ ಕನಸು ಈಡೇರಿದೆ.
ಹಾಸನ ಜಿಲ್ಪಾಸ್ಪತ್ರೆಯಲ್ಲಿ ಹುಟ್ಟಿದ ಯಶ್ ಅವರು ಬೆಳೆದಿದ್ದು ಮೈಸೂರಿನಲ್ಲಿ. ಬೆಂಗಳೂರಿನ ಈಗ ವಾಸ, ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ವಿಶ್ವದೆಲ್ಲೆಡೆ ಅವರಿಗೆ ಅಭಿಮಾನ ಬಳಗ ಹುಟ್ಟಿಕೊಂಡಿದೆ.












Click it and Unblock the Notifications