ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮರು ವಿನ್ಯಾಸ: ರೈತರು ಎಷ್ಟು ಪಾವತಿಸಬೇಕು?
ಮಡಿಕೇರಿ, ಜುಲೈ 18: ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ 2024-25 ವಿವರ ಪ್ರಕಟಿಸಲಾಗಿದೆ. ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಬೆಳೆ ವಿಮೆ ಯೋಜನೆಯನ್ನು ಕೊಡಗು ಜಿಲ್ಲೆಯ ಎಲ್ಲಾ 3 ತಾಲೂಕುಗಳಲ್ಲಿ ಜಿಲ್ಲೆಯ ಮುಖ್ಯ ಬಹುವಾರ್ಷಿಕ ಬೆಳೆಗಳಾದ ಕಾಳು ಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
ಹವಾಮಾನ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಆರ್ದತೆ ಮತ್ತಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ. ಈ ಯೋಜನೆಯ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ.

2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಹಾಗೂ ಕಂತಿನ ವಿವರಗಳನ್ನು ಪ್ರಕಟಿಸಲಾಗಿದೆ. ರೈತರು ಎಷ್ಟು ಪಾವತಿಸಬೇಕು? ಎಂದು ಮಾಹಿತಿ ನೀಡಲಾಗಿದೆ.
ಕಾಳು ಮೆಣಸು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 47,000, ಪ್ರತಿ ಹೆಕ್ಟೇರ್‌ಗೆ ವಿಮಾ ಕಂತು (ಶೇ.30) ರೂ.14,100 ಮತ್ತು ರೈತರು ಪಾವತಿಸಬೇಕಾಗಿರುವ ಕಂತು (ಶೇ.5) ರೂ.2,350 ಆಗಿದೆ.
ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ (ರೂ.ಗಳಲ್ಲಿ) ರೂ.1,28,000, ಪ್ರತಿ ಹೆಕ್ಟೇರ್‌ಗೆ ವಿಮಾ ಕಂತು (ಶೇ.30) ರೂ. 38,400 ಮತ್ತು ರೈತರು ಪಾವತಿಸಬೇಕಾಗಿರುವ ಕಂತು (ಶೇ.5) ರೂ. 6,400 ಆಗಿರುತ್ತದೆ.
ಹೆಚ್ಚಿನ ಮಾಹಿತಿಗೆ ರೈತರು ಕೂಡಲೇ ಸಮೀಪದ ಬ್ಯಾಂಕ್ ಶಾಖೆ ಅಥವಾ ಕ್ಷೇಮಾ ಜನರಲ್ ಇನ್ಸೂರೆನ್ಸ್ ಕಂಪನಿ (7760076574, 8970456510) ಅಥವಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೇರೆ ಬೇರೆ ಜಿಲ್ಲೆಗೆ ಬೇರೆ ಬೇರೆ ಕಂಪನಿಗಳನ್ನು ನಿಯೋಜನೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಬೆಳೆಗಳ ಆಧಾರದ ಮೇಲೆ ವಿಮಾ ಮೊತ್ತ ಸೇರಿ ಉಳಿದ ವಿವರಗಳು ಬದಲಾಗುತ್ತವೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆ ಸಮೀಕ್ಷೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ರೈತರು ತಮ್ಮ ಮೊಬೈಲ್‍ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಬೇಕು.
ಕ್ರಾಪ್ ಸರ್ವೇ ಖಾರಿಫ್ 2024 (Crop Survey Kharif 2024) ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕು.
ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ಧಪಡಿಸಲು, ಬೆಳೆ ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಉಪಯೋಗಿಸಲಾಗುತ್ತದೆ.












Click it and Unblock the Notifications