ಒಣಗುತ್ತಿದೆ ಭತ್ತದ ಬೆಳೆ; ರೈತರಿಗೆ ಕೆಲವು ವೈಜ್ಞಾನಿಕ ಸಲಹೆಗಳು
ಉಡುಪಿ, ಸೆಪ್ಟೆಂಬರ್ 05; ನೈಋತ್ಯ ಮುಂಗಾರು ಮಳೆ ಈ ಬಾರಿ ಕೈ ಕೊಟ್ಟಿದೆ. ಜೂನ್ ತಿಂಗಳಿನಲ್ಲಿ ನಾಟಿಯಾಗಬೇಕಿದ್ದ ಭತ್ತದ ಬೆಳೆ ಆಗಸ್ಟ್‌ನಲ್ಲಿ ನಾಟಿಯಾಗಿದೆ. ಆದರೆ ನಾಟಿ ಮಾಡಿದ ಬೆಳೆ ಈಗ ನೀರಿನ ಕೊರತೆ ಕಾರಣ ಒಣಗುತ್ತಿದೆ. ಈ ಹಿನ್ನಲೆಯಲ್ಲಿ ರೈತರು ಕಂಗಾಲಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ವ್ಯಾಪ್ತಿಯಲ್ಲಿ ಭತ್ತದ ಸಸಿಗಳ ಒಣಗುವಿಕೆಯ ಕುರಿತು ವರದಿಯಾದ ಹಿನ್ನೆಲೆಯಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕ್ಷೇತ್ರ ಭೇಟಿಯನ್ನು ಕೈಗೊಂಡರು, ಬೆಳೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತಡವಾಗಿ ಪ್ರಾರಂಭವಾದ ಮಳೆ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದೇ ಇರುವುದರಿಂದ ಪ್ರಮುಖವಾಗಿ ಭತ್ತದ ಬೆಳೆ ಸೋತು ಸೊರಗುತ್ತಿರುತ್ತದೆ. ಗದ್ದೆಗಳಲ್ಲಿ ನೀರಿಲ್ಲದ ಕಾರಣ ಕಳೆಗಳು ಹಾಗೂ ನೀರಿನ ಸಮಸ್ಯೆಯಿಂದಾಗಿ ಮೇಲು ಗೊಬ್ಬರ ಕೊಡಲು ಸಾಧ್ಯವಾಗದೇ ಇದ್ದುದರಿಂದ ಪೋಷಕಾಂಶಗಳ ಕೊರತೆ ಕಾಣುತ್ತಿದೆ ಎಂದು ಅಂದಾಜಿಸಿದರು.
ಭತ್ತದ ಬೆಳೆಯ ಸಮಸ್ಯೆಗಳು; ಮುಖ್ಯವಾಗಿ ಪೋಟಾಷ್ ಕೊರತೆಯಿಂದಾಗಿ ಭತ್ತದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಹೆಚ್ಚು ತೆಂಡೆಗಳು ಒಡೆಯದೇ ಒಣಗುವ ಸ್ಥಿತಿಯಲ್ಲಿರುತ್ತದೆ. ಹಡಿಲು ಭೂಮಿಯಲ್ಲಿರುವ ಸಹ್ಯಾದ್ರಿ ಬ್ರಹ್ಮ ತಳಿಯಲ್ಲಿ ಭತ್ತದ ಎಲೆಗಳು ಕೆಂಪಾಗುತ್ತಿರುವುದು ಹೆಚ್ಚಾಗಿ ಕಂಡುಬಂದಿದ್ದು, ಯಾವುದೇ ಕೀಟ ರೋಗದ ಭಾದೆ ಇರುವುದಿಲ್ಲ ಎಂಬ ಅಂಶಗಳನ್ನು ಅಧಿಕಾರಿಗಳ ಜಂಟಿ ತಂಡ ಗಮನಿಸಿದೆ.
ನೀರೊದಗಿಸುವ ಸಾಧ್ಯತೆಯಿರುವ ಕಡೆ ಮಳೆಗಾಗಿ ಕಾಯದೇ ಕೂಡಲೇ ನೀರು ಒದಗಿಸಬೇಕು ಎಂದು ಸಲಹೆ ನೀಡಲಾಗಿದೆ. ಭೂಮಿಯ ಫಲವತ್ತತೆ ಪರೀಕ್ಷೆ ಪ್ರತಿ ಮೂರು ವರ್ಷಕ್ಕೊಮ್ಮೆಯಾದರು ಮಾಡಿಸಬೇಕು ಎಂದು ರೈತರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ನೀರು ಒದಗಿಸಿದ ಗದ್ದೆಗಳಿಗೆ ಯುರಿಯಾ 30 ಕೆ.ಜಿ ಹಾಗೂ ಎಂ.ಒ.ಪಿ 15 ಕಿ.ಗ್ರಾಂ ಪ್ರತಿ ಎಕರೆಗೆ ಮೇಲು ಗೊಬ್ಬರವಾಗಿ ನೀಡುವುದು ಹಾಗೂ ಗದ್ದೆಗಳಲ್ಲಿ ಕಳೆ ನಿಯಂತ್ರಣ ಮಾಡುವ ಮೂಲಕ ವೈಜ್ಷಾನಿಕ ಸಲಹೆಗಳನ್ನು ಅನುಸರಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್‌ನಲ್ಲಿ ಬೆಳೆ ಸಮೀಕ್ಷೆ; ಮುಂಗಾರು ಮಳೆಯ ಕೊರತೆಯ ನಡುವೆಯೂ ಕೃಷಿ ಇಲಾಖೆಯ ವತಿಯಿಂದ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆಗಸ್ಟ್‌ನಲ್ಲಿ ನಡೆಸಲಾಗಿದೆ. ಈ ಬಾರಿಯೂ ಸಹ ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಲಾಗಿತ್ತು.
ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ 'ಮುಂಗಾರು ರೈತರ ಬೆಳೆ ಸಮೀಕ್ಷೆ 2023' ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ, ಆಧಾರ್ ಸಂಖ್ಯೆಯನ್ನು ದಾಖಲಿಸಬೇಕಿತ್ತು.
ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ದಾಖಲಿಸಿದಾಗ, ರೈತರ ಎಫ್.ಐ.ಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್‌ಲೋಡ್ ಆಗುತ್ತದೆ. ಎಫ್.ಐ.ಡಿ ಸಂಖ್ಯೆಗೆ ಯಾವುದಾದರೂ ಸರ್ವೆ ನಂಬರ್‌ಗಳು ಜೋಡಣೆಯಾಗದಿದ್ದಲ್ಲಿ ಸೇರಿಸಿಕೊಳ್ಳಲು ಸಹ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ರೈತರು ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು, ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ, ಸರ್ವೆ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಿದ್ದರು. ಬೆಳೆ ಸಮೀಕ್ಷೆ ಮಾಹಿತಿಯನ್ನು ಪೃಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುತ್ತದೆ.












Click it and Unblock the Notifications