ರೈತರಿಂದ ಕಬ್ಬು ಖರೀದಿ: ಬೆಲೆ ನಿಗದಿ ಮಾಡಿದ ಜಿಲ್ಲಾಡಳಿತ, ಕಾರ್ಖನೆಗಳಿಗೆ ಸೂಚನೆ
ಕಾರವಾರ, ನವೆಂಬರ್ 12: ಈ ವರ್ಷದ ಕಬ್ಬು ಅರೆಯುವ ಹಂಗಾಮು ಪ್ರಾರಂಭ ಮಾಡುವುದಕ್ಕೂ ಮೊದಲು ಉತ್ತರ ಕನ್ನಡ ಜಿಲ್ಲಾಡಳಿತ ರೈತರಿಗೆ ಸಿಹಿಸುದ್ದಿ ನೀಡಿದೆ. ರೈತರಿಂದ ಕಬ್ಬು ಖರೀದಿ ಬೆಲೆ ನಿರ್ಧರಣೆ ಮಾಡುವ ಬಗ್ಗೆ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಕಬ್ಬು ಖರೀದಿ ದರವನ್ನು ನಿಗದಿ ಮಾಡಲಾಗಿದೆ. ಅಲ್ಲದೇ ಕಾರ್ಖನೆ ಮಾಲೀಕರಿಗೆ ಸೂಚನೆಗಳನ್ನು ಸಹ ನೀಡಲಾಗಿದೆ.
ಹಳಿಯಾಳ ತಹಶೀಲ್ದಾರ್ ಕಛೇರಿಯ ಸಭಾ ಭವನದಲ್ಲಿ ಈ ವರ್ಷದ ಕಬ್ಬು ಅರೆಯುವ ಹಂಗಾಮು ಪ್ರಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಬೆಲೆ ನಿರ್ಧರಣೆ ಮಾಡುವ ಬಗ್ಗೆ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳು ಸಭೆಯನ್ನು ನಡೆಸಿದರು.

ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಿದ ಬಳಿಕ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಕಬ್ಬು ಖರೀದಿ ಬೆಲೆಯನ್ನು ನಿಗದಿ ಮಾಡಿದ್ದಾರೆ. ನಿಯಮದಂತೆ ಕಬ್ಬು ಕಟಾವು ಮಾಡದೇ ರೈತರಲ್ಲಿ ಗೊಂದಲ ಉಂಟು ಮಾಡಿದರೆ ಕಾರ್ಖನೆಯ ಫೀಲ್ಡ್ ಆಫೀಸರ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಸಭೆಯ ನಡಾವಳಿ ವಿವರಗಳು
* 2023-24ನೇ ಸಾಲಿನಲ್ಲಿ ಸರ್ಕಾರವು ನಿಗದಿ ಪಡಿಸಿದ ಎಫ್ಆರ್‌ಪಿ ದರವು ಪ್ರತಿ ಟನ್ ಕಬ್ಬಿಗೆ 3678 ರೂ.ಗಳಿದ್ದು ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಳೆದು 2826 ರೂ.ಗಳನ್ನು ರೈತರಿಗೆ ಪಾವತಿಸುತ್ತಿದ್ದರು. ಈ ವರ್ಷಕ್ಕೆ ದರ ನಿಗದಿ ಮಾಡುವ ಬಗ್ಗೆ ರೈತರು ಮನವಿ ಮಾಡಿರುವಂತೆ ಜಿಲ್ಲಾಧಿಕಾರಿಗಳು ದಿನಾಂಕ 30-10-2024ರಂದು ಪ್ರಾಥಮಿಕ ಹಂತದ ಸಭೆ ನಡೆಸಿದ್ದು ನಂತರ ದಿನಾಂಕ 9-11-2024ರಂದು ಜಿಲ್ಲಾಡಳಿತವು ಹಳಿಯಾಳದಲ್ಲಿ ರೈತರು ಮತ್ತು ಪ್ಯಾರಿ ಕಾರ್ಖಾನೆಯವರೊಂದಿಗೆ ಅಂತಿಮ ಸಭೆ ನಡೆಸಿ ಈ ವರ್ಷಕ್ಕೆ ಸರ್ಕಾರವು ನಿಗದಿ ಪಡಿಸಿರುವ ದರ ಪ್ರತಿ ಟನ್ ಕಬ್ಬಿಗೆ 3685 ರೂ.ಗಳಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಡಿತಗೊಳಿಸಿ ಪ್ರತಿ ಟನ್ ಕಬ್ಬಿಗೆ 2975 ರೂ. ಗಳನ್ನು ರೈತರಿಗೆ ಪಾವತಿಸಲು ಪ್ಯಾರಿ ಕಾರ್ಖಾನೆಯವರು ಒಪ್ಪಿರುತ್ತಾರೆ.
* ಪ್ಯಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಟಾವಣೆ ಮಾಡಿದ ಕಬ್ಬಿನ ತೂಕ ಮಾಡಲು ಮತ್ತು ಸಕ್ಕರೆ ಇಳುವರಿಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ, ಕಾರವಾರ ರವರು ತಹಶೀಲ್ದಾರ್ ಹಳಿಯಾಳ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿರುತ್ತಾರೆ. ಈ ಸಮಿತಿಯು ಕಾಲಕಾಲಕ್ಕೆ ಕಾರ್ಖಾನೆಗೆ ಭೇಟಿ ನೀಡಿ ಕಬ್ಬಿನ ತೂಕ ಮತ್ತು ಕಬ್ಬಿನ ಇಳುವರಿಯ ಬಗ್ಗೆ ಪರಿಶೀಲನೆ ನಡೆಸಲಿದೆ.
* ಪ್ಯಾರಿ ಕಾರ್ಖಾನೆಯವರು ಕಾರ್ಯಾಲಯದಲ್ಲಿ ನಡೆಸಿದ ಸಭೆಯಲ್ಲಿ ಒಪ್ಪಿರುವಂತೆ ಆದ್ಯತೆಯನುಸಾರ ಕಬ್ಬು ಕಟಾವಣೆ ಮಾಡಲು ಗ್ರಾಮವಾರು ಪಟ್ಟಿಯನ್ನು ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಿರುತ್ತಾರೆ. ಈ ಪಟ್ಟಿಯನ್ನು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪ್ರಚುರಪಡಿಸಬೇಕು ಹಾಗೂ ಸಂಬಂಧಿಸಿದ ಗ್ರಾಮಗಳಲ್ಲಿರುವ ರೈತ ಮುಖಂಡರಿಗೆ ನೀಡಬೇಕು.
* ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಕಬ್ಬು ಕಟಾವು ಮಾಡುವ ಆದ್ಯತಾ ಪಟ್ಟಿಯ ಪ್ರತಿಯನ್ನು ಜಿಲ್ಲಾಧಿಕಾರಿಗಳು ಧಾರವಾಡ ಅವರ ಕಚೇರಿಗೆ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಆದ್ಯತಾ ಪಟ್ಟಿಯನುಸಾರ ಕಬ್ಬು ಕಟಾವು ಮಾಡುವ ಪ್ರಕ್ರಿಯೆಯನ್ನು ಪ್ಯಾರಿ ಕಾರ್ಖಾನೆಯವರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
* ಪ್ಯಾರಿ ಕಾರ್ಖಾನೆಯವರು ಪ್ರಕಟಿಸಿರುವಂತೆ ಗ್ರಾಮವಾರು ಆದ್ಯತಾ ಪಟ್ಟಿಯನುಸಾರ ಕಬ್ಬು ಕಟಾವಣೆ ಮಾಡದೇ ಲಾಗಣಿ/ ಭಕ್ಷಿಸು ಪಡೆದು ರೈತರಿಗೆ ಗೊಂದಲ ಉಂಟುಮಾಡಿ ಕಬ್ಬು ಕಟಾವಣೆ ಮಾಡುವಂತಹ ಕಟಾವಣೆ ತಂಡಗಳು, ರೈತರು ಹಾಗೂ ಇದಕ್ಕೆ ಕಾರಣರಾಗುವ ಕಾರ್ಖಾನೆಯ ಫೀಲ್ಡ್ ಆಫೀಸರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
* ರೈತರ ಕಬ್ಬನ್ನು ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸ್ಥಾಪಿಸಿರುವ ತೂಕದ ಯಂತ್ರದಲ್ಲಿ ಅಳತೆ ಮಾಡಿದ ವಿವರಗಳನ್ನು ತಕ್ಷಣವೇ ರೈತರಿಗೆ SMS ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಕಾರ್ಖಾನೆಯವರು ಮಾಡಬೇಕು ಹಾಗೂ ಈ ಬಗ್ಗೆ ರೈತರಿಗೆ ರಶೀದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications