Tungabhadra Dam: ರಾಜ್ಯವೇ ಖುಷಿ ಪಡುವ ಸುದ್ದಿ, ತುಂಗಭದ್ರಾ ಡ್ಯಾಂ ಮತ್ತೆ ಭರ್ತಿ
ಬಳ್ಳಾರಿ, ಸೆಪ್ಟೆಂಬರ್ 04: ಇದು ಮೂರು ರಾಜ್ಯಗಳ ಜನರು, ರೈತರು ಖುಷಿ ಪಡುವ ಸುದ್ದಿ. ಕೊಪ್ಪಳದ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾಗಿದೆ. 19ನೇ ಕ್ರೆಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಹೋಗಿ ಸುಮಾರು 30 ಟಿಎಂಸಿ ನೀರು ನದಿಗೆ ವ್ಯರ್ಥವಾಗಿ ಹರಿದು ಹೋಗಿ, ಡ್ಯಾಂ ಖಾಲಿ ಆಗಿತ್ತು. ಇದು ರೈತರಲ್ಲಿ ಆತಂಕವನ್ನು ಉಂಟು ಮಾಡಿತ್ತು.
ಜುಲೈ ಅಂತ್ಯಕ್ಕೆ ತುಂಗಭದ್ರಾ ಡ್ಯಾಂ ಭರ್ತಿಯಾಗಿತ್ತು. 75 ಸಾವಿರಕ್ಕೂ ಅಧಿಕ ಕ್ಯುಸೆಕ್ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಆದರೆ ಆಗಸ್ಟ್ 10ರಂದು 19ನೇ ಕ್ರೆಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಹೋಗಿತ್ತು. ಇದರಿಂದಾಗಿ ನೀರು ವ್ಯರ್ಥವಾಗಿ ನದಿ ಪಾಲಾಗಿತ್ತು. ಒಂದು ಗೇಟ್‌ನಿಂದಲೇ 35 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ಸುಮಾರು 1 ವಾರಗಳ ಕಾಲ ಹರಿದು ಹೋಗುತ್ತಿತ್ತು.

ಸುಮಾರು ಒಂದು ವಾರದ ಕಾರ್ಯಾಚರಣೆ ಬಳಿಕ ಸ್ಟಾಪ್ ಲಾಗ್ ಗೇಟ್ ಅನ್ನು ಯಶಸ್ವಿಯಾಗಿ ಕೂರಿಸಿ ಹೊಸ ಹರಿವು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಕನ್ನಯ್ಯ ನಾಯ್ಡು ನಿವೃತ್ತ ಅಧಿಕಾರಿಗಳು ತುಂಗಭದ್ರಾ ಸ್ಟೀಲ್ ಪ್ಲಾಂಟ್ಸ್ ಹೊಸಪೇಟೆ ಇವರ ನಿರ್ದೇಶನದಲ್ಲಿ ಕಡಿಮೆ ಅವಧಿಯಲ್ಲಿ ಈ ಕಾರ್ಯಾಚರಣೆ ಮುಗಿಸಿ, 30 ಟಿಎಂಸಿಗೂ ಹೆಚ್ಚು ನೀರನ್ನು ಉಳಿಸಲಾಗಿತ್ತು.
ಡ್ಯಾಂ ಭರ್ತಿಯಾಗುವ ಸೂಚನೆ ಸಿಕ್ಕಿತ್ತು: ಕ್ರಸ್ಟ್ ಗೇಟ್ ದುರಸ್ತಿ ಕಾರ್ಯದ ಬಳಿಕ ಸುಮಾರು 30 ಟಿಎಂಸಿ ನೀರು ಉಳಿಸಿದ್ದಲ್ಲದೇ, ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದರೆ ಡ್ಯಾಂ ಮತ್ತೆ ಭರ್ತಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ನಿರೀಕ್ಷೆ ಹುಸಿಯಾಗಿಲ್ಲ, ತುಂಗಭದ್ರಾ ಡ್ಯಾಂ ಮತ್ತೆ ಭರ್ತಿಯಾಗಿದೆ. ಇದರಿಂದಾಗ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದಾರೆ.
ಬುಧವಾರ ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿ ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದೆ. ಡ್ಯಾಂ ನೀರಿನ ಮಟ್ಟ, ನದಿಗೆ ನೀರು ಹರಿಸುವ ಕುರಿತು ಮಾಹಿತಿಯನ್ನು ಕೊಟ್ಟಿದೆ.
ಪೋಸ್ಟ್‌ನಲ್ಲಿ, 'ಎಲ್ಲರ ಪ್ರಾರ್ಥನೆಯಂತೆ, ವರುಣನ ಕೃಪೆಯಿಂದ ಮತ್ತೊಮ್ಮೆ ತುಂಗಭದ್ರಾ ಡ್ಯಾಮ್ ತುಂಬಿದೆ. ಹೆಚ್ಚುವರಿ ನೀರನ್ನು ನದಿಗೆ ಕ್ರೆಸ್ಟ್ ಗೇಟ್ ಮುಖಾಂತರ ಬಿಡಲಾಗುವುದು' ಎಂದು ಜಿಲ್ಲಾಧಿಕಾರಿಗಳ ಕಛೇರಿ ತಿಳಿಸಿದೆ.
ಡ್ಯಾಂ ನೀರಿನ ಮಟ್ಟ
ದಿನಾಂಕ:04-09-2024
ಡ್ಯಾಂ ಎತ್ತರ: 1633.00 ಅಡಿ
ಇಂದಿನ ನೀರಿನ ಮಟ್ಟ: 1631.92 ಅಡಿ
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ : 105.788 ಟಿಎಂಸಿ
ಇಂದಿನ ನೀರಿನ ಸಂಗ್ರಹ: 101.461 ಟಿಎಂಸಿ
ಕಳೆದ 24 ಗಂಟೆಯ ಒಳಹರಿವು ಸರಾಸರಿ : 39945 ಕ್ಯುಸೆಕ್
ಕಳೆದ 24 ಗಂಟೆಯ ಹೊರ ಹರಿವು : 15235 ಕ್ಯುಸೆಕ್
ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾದಾಗಲೇ ಡ್ಯಾಂ ಭರ್ತಿಯಾಗುವ ಭರವಸೆ ಮೂಡಿತ್ತು. ಜಲಾಶಯದ ಮುರಿದ 19ನೇ ಕ್ರಸ್ಟಗೇಟ್ ದುರಸ್ತಿ ಕಾರ್ಯ ನಡೆಯುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ಜಲಾಶಯ ಭರ್ತಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಡ್ಯಾಂ ಮತ್ತೆ ಭರ್ತಿಯಾದರೆ ಬಾಗಿನ ಅರ್ಪಣೆ ಮಾಡುತ್ತೇನೆ ಎಂದು ತಿಳಿಸಿದ್ದರು.
ಆಗಸ್ಟ್ 21ರಂದು ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್‌ಗೇಟ್ ಅಳವಡಿಕೆಯನ್ನು ಮೂರ್ನಾಲ್ಕು ದಿನಗಳ ಒಳಗಾಗಿ ಪೂರ್ಣಗೊಳಿಸಲಾಗಿದೆ. ದುರಸ್ತಿಯ ಅವಧಿಯಲ್ಲಿ 35 ಟಿಎಂಸಿ ನೀರು ಮಾತ್ರ ಪೋಲಾಗಿದೆ. ಇಂದಿಗೂ ಜಲಾಶಯದಲ್ಲಿ ಸುಮಾರು 78 ಟಿಎಂಸಿ ನೀರಿದೆ. ಇನ್ನೂ 20 ಟಿಎಂಸಿ ನೀರು ಹರಿದುಬಂದರೆ, ಜಲಾಶಯ ಶೇ 95ರಷ್ಟು ಭರ್ತಿಯಾಗುತ್ತದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಮೊದಲ ಬೆಳೆಗೆ ನೀರು ಬಿಡಲಾಗಿದೆ. ಆದ್ದರಿಂದ ರೈತರಿಗೆ ಯಾವುದೇ ಆತಂಕ ಬೇಡ" ಎಂದು ಹೇಳಿದ್ದರು.











Click it and Unblock the Notifications